ಮಾಲ್ಡೀವ್ಸ್ನಲ್ಲಿ ಭಾರತದ ಅತಿದೊಡ್ಡ ಮೂಲಸೌಕರ್ಯ ಯೋಜನೆ
ಜೈಶಂಕರ್
ಹೊಸದಿಲ್ಲಿ: ಉತ್ತಮ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಮಾಲ್ಡೀವ್ಸ್ನಲ್ಲಿ 500 ದಶಲಕ್ಷ ಡಾಲರ್ ವೆಚ್ಚದ ಗ್ರೇಟರ್ಮಾಲೆ ಕನೆಕ್ಟಿವಿಟಿ ಪ್ರಾಜೆಕ್ಟ್ (ಜಿಎಂಸಿಪಿ) ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಭಾರತ ಪ್ರಕಟಿಸಿದೆ. ಜಿಎಂಸಿಪಿ ದೇಶದ ಅತಿದೊಡ್ಡ ಮೂಲಸೌಕರ್ಯ ಯೋಜನೆ ಎನಿಸಿಕೊಳ್ಳಲಿದೆ.
ಮಾಲ್ಡೀವ್ಸ್ ವಿದೇಶಾಂಗ ವ್ಯವಹಾರಗಳ ಸಚಿವ ಅಬ್ದುಲ್ಲಾ ಶಹೀದ್ ಜತೆ ನಡೆದ ಸುಧೀರ್ಘ ಸಭೆ ಬಳಿಕ ಈ ವಿಷಯವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಪ್ರಕಟಿಸಿದರು. ಉಭಯ ದೇಶಗಳ ಜನತೆ ಉದ್ಯೋಗ, ಪ್ರವಾಸೋದ್ಯಮ ಹಾಗೂ ವೈದ್ಯಕೀಯ ತುರ್ತು ಅಗತ್ಯತೆಗಳಿಗಾಗಿ ಒಂದೆಡೆಯಿಂದ ಇನ್ನೊಂದು ಕಡೆಗೆ ಓಡಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದು ಅವರು ವಿವರಿಸಿದರು.
ಮಾಲ್ಡೀವ್ಸ್ನಲ್ಲಿ ಜಿಎಂಸಿಪಿ ಅನುಷ್ಠಾನಕ್ಕೆ ಭಾರತ ನೆರವು ನೀಡಲಿದೆ. 100 ದಶಲಕ್ಷ ಡಾಲರ್ ಅನುದಾನ ಹಾಗೂ 400 ದಶಲಕ್ಷ ಡಾಲರ್ ಸಾಲ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದು ಮಾಲ್ಡೀವ್ಸ್ನ ಅತಿದೊಡ್ಡ ನಾಗರಿಕ ಮೂಲಸೌಕರ್ಯ ಯೋಜನೆಯಾಗಿದ್ದು, ಮಾಲೆ ಹಾಗೂ ಸುತ್ತಮುತ್ತಲಿನ ವಿಲಿಂಗಿಲ್ಲಿ, ಗುಹೈಫಹು ಮತ್ತು ತೈಲಫುಶಿ ದ್ವೀಪಗಳನ್ನು ಸಂಪರ್ಕಿಸಲಿದೆ. ಈ ಯೋಜನೆಯಡಿ 6.7 ಕಿಲೋಮೀಟರ್ ಉದ್ದದ ಸೇತುವೆ ಹಾಗೂ ಪೂರಕ ರಸ್ತೆ ನಿರ್ಮಾಣವಾಗಲಿದೆ.
ಈ ಯೋಜನೆ ಪೂರ್ಣಗೊಂಡಾಗ ನಾಲ್ಕು ದ್ವೀಪಗಳ ನಡುವೆ ಸುಲಭ ಸಂಪರ್ಕ ಸಾಧ್ಯವಾಗಲಿದೆ. ಈ ಮೂಲಕ ಆರ್ಥಿಕ ಚಟುವಟಿಕೆಗಳು ಹೆಚ್ಚಲಿದ್ದು, ಉದ್ಯೋಗ ಸೃಷ್ಟಿಯ ಜತೆಗೆ ಸಮಗ್ರ ನಗರ ಅಭಿವೃದ್ಧಿಗೆ ಉತ್ತೇಜನ ದೊರಕಲಿದೆ ಎಂದು ಸರ್ಕಾರ ಹೇಳಿದೆ.