varthabharthi


ಕರಾವಳಿ

ಮಂಗಳೂರು : ಅಲ್ಪಸಂಖ್ಯಾತ ಭವನಕ್ಕೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ; ದೂರು

ವಾರ್ತಾ ಭಾರತಿ : 14 Aug, 2020

ಮಂಗಳೂರು, ಆ.14: ನಗರದ ಹೃದಯಭಾಗ ಪಾಂಡೇಶ್ವರದಲ್ಲಿರುವ ಮೌಲಾನ ಆಝಾದ್ ಅಲ್ಪಸಂಖ್ಯಾತರ ಭವನಕ್ಕೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಅಲ್ಪಸಂಖ್ಯಾತರ ಭವನದ ಮೊದಲ ಮಹಡಿಯ ಕಿಟಕಿ ಗಾಜುಗಳನ್ನು ದುಷ್ಕರ್ಮಿಗಳು ಪುಡಿಗಟ್ಟಿದ್ದಾರೆ. ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಇಲಾಖೆಯ ಸಿಬ್ಬಂದಿ ಕಚೇರಿಗೆ ಆಗಮಿಸಿದಾಗ ಕಲ್ಲೆಸೆದಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಟ್ಟಡದ ಮೂರು ಕಿಟಕಿಗಳ ಗಾಜುಗಳಿಗೆ ಹಾನಿಯಾಗಿದ್ದು, 6,000 ರೂ. ನಷ್ಟ ಸಂಭವಿಸಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಲ್ಪಸಂಖ್ಯಾತರ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಮುಹಮ್ಮದ್ ಫಾರೂಕ್ ನೀಡಿದ ದೂರಿನಂತೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸ ಲಾಗಿದೆ. ಅಲ್ಪಸಂಖ್ಯಾತರ ಕಟ್ಟಡದಲ್ಲಿನ ಸಿಸಿಟಿವಿ ಕ್ಯಾಮೆರಾಗಳ ಫೂಟೇಜ್‌ಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಬಳಿಕ ರಾಜ್ಯ ಪೊಲೀಸ್ ಇಲಾಖೆಯು ಕಟ್ಟೆಚ್ಚರ ವಹಿಸಿದ್ದು, ಸೂಕ್ಷ್ಮಾತೀಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಿ ಹೆಚ್ಚುವರಿ ತುಕಡಿಗಳನ್ನು ನಿಯೋಜಿಸಿತ್ತು. ಮಂಗಳೂರಿನಲ್ಲೂ ಗುರುವಾರದಿಂದ ಕ್ಷಿಪ್ರ ಕಾರ್ಯಪಡೆ ಸಹಿತ ಮಂಗಳೂರು ಪೊಲೀಸರು ಜಂಟಿಯಾಗಿ ಪಥಸಂಚಲನ ನಡೆಸಿದ್ದರು.

ಗುರುವಾರ ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ‌ಕುಮಾರ್ ಅವರೂ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿ ದಂತೆ ಭಾವನೆಗಳಿಗೆ ಧಕ್ಕೆಯಾಗುವ ಯಾವುದೇ ಪೋಸ್ಟ್ ಹಂಚಿಕೊಳ್ಳುವುದು, ಬರೆಯುವುದು, ಅಭಿಪ್ರಾಯ ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಿದ್ದರು. ಆಯುಕ್ತರ ಎಚ್ಚರಿಕೆಯ ಸಂದೇಶ ರವಾನಿಸಿದ ಮರುದಿನವೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಟ್ಟಡಕ್ಕೆ ದುಷ್ಕರ್ಮಿಗಳು ಕಲ್ಲೆಸೆತ ಘಟನೆ ನಡೆದಿದೆ. ದುಷ್ಕರ್ಮಿಗಳು ಕೋಮುಗಲಭೆ ಸೃಷ್ಟಿಸಲು ಹುನ್ನಾರ ನಡೆಸಿದ್ದಾರೆ ಎನ್ನುವ ಶಂಕೆ ಸ್ಥಳೀಯರಲ್ಲಿ ವ್ಯಕ್ತವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)