varthabharthi


ಕರ್ನಾಟಕ

ಗಲಭೆ ಮಾಡಿದ್ದು ಮುಸ್ಲಿಂ ಮತಾಂಧರು ಎಂದು ಹೇಳಲು ಸಿದ್ದರಾಮಯ್ಯಗೆ ಧಮ್ ಇಲ್ಲ: ಸಚಿವ ಈಶ್ವರಪ್ಪ

ವಾರ್ತಾ ಭಾರತಿ : 14 Aug, 2020

ಫೈಲ್ ಚಿತ್ರ

ಶಿವಮೊಗ್ಗ, ಆ.14: ಬೆಂಗಳೂರಿನ ಗಲಭೆ ಯಾರು ಮಾಡಿದ್ದಾರೆಂದು ಸಿದ್ದರಾಮಯ್ಯಗೆ ಸಹ ತಿಳಿದಿದೆ. ಅದರೆ ಮುಸ್ಲಿಂ ಮತಾಂಧರು ಎಂದು ನೇರವಾಗಿ ಹೇಳಲು ಅವರಿಗೆ ಧಮ್ ಇಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂಧ ಮುಸಲ್ಮಾನರೇ ಕಾಂಗ್ರೆಸ್ ಪಕ್ಷದ ಆಸ್ತಿ. ಹಿಂದೂ ಸಂಘಟನೆ ಅಥವಾ ಕಾರ್ಯಕರ್ತರು ಈ ರೀತಿ ಮಾಡಿದ್ದರೆ ನೀವು ಸುಮ್ಮನೆ ಇರುತ್ತಿದ್ದರೇ? ಸಿದ್ದರಾಮಯ್ಯನವರೇ ರಾಜಕಾರಣದಲ್ಲಿ ನೀವು ಯಾರಿಗೆ ಮಾರಿಕೊಂಡಿದ್ದೀರಿ ? ರಾಜಕಾರಣ ಎಂದು ಈ ರೀತಿಯಲ್ಲಿ ಮಾಡುವುದು ನ್ಯಾಯವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ಸಿಗರು ಕುರ್ಚಿಗೋಸ್ಕರ ಪ್ರಾಣ ಬಿಡುತ್ತಾರೆ. ಅದಕ್ಕೆ ಮತಾಂಧರಿಗೆ ಬೆಂಬಲ ನೀಡ್ತಾರೆ. ಈ ಎಲ್ಲ ಆಟವನ್ನು ಕಾಂಗ್ರೆಸ್ ರಾಷ್ಟ್ರ ನಾಯಕರು ಹಲವು ವರ್ಷದಿಂದ ಮಾಡಿದ್ದಾರೆ. ಮತಾಂಧರಿಗೆ ಬೆಂಬಲ, ಮಠ ಮಾನ್ಯಗಳಿಗೆ ಅನ್ಯಾಯ ಮಾಡಿದ್ದಕ್ಕೆ ಕಾಂಗ್ರೆಸ್ ಈ ಸ್ಥಿತಿಗೆ ಬಂದಿದೆ. ದೇಶದಲ್ಲಿ ಭೂತಗನ್ನಡಿ ಹಾಕಿ ಕಾಂಗ್ರೆಸ್ ಅನ್ನು ಹುಡುಕುವಂತಾಗಿದ್ದು, ರಾಜ್ಯದಲ್ಲಿಯೂ ಕುಂಟುತ್ತಿದೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಡೆದುಕೊಳ್ಳುವ ರೀತಿ ನೋವು ತರುತ್ತಿದೆ. ಶಂಕರಾಚಾರ್ಯರ ಪ್ರತಿಮೆ ಮೇಲೆ ಅನ್ಯಧರ್ಮದ ಬಾವುಟವನ್ನು ಹಾಕಲಾಗಿದೆ. ಅದರ ಬಗ್ಗೆ ಇದುವರೆಗೂ ಕಾಂಗ್ರೆಸ್ಸಿಗರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬೆಂಗಳೂರಲ್ಲಿ ಮಾಧ್ಯಮದವರ ಮೇಲೆ ಹಲ್ಲೆಯಾದರೂ ಕಾಂಗ್ರೆಸ್ ಸುಮ್ಮನೆ ಕುಳಿತಿದೆ. ಪೊಲೀಸ್ ಠಾಣೆ ಹಾಗೂ ವಾಹನಗಳನ್ನು ಸುಡಲಾಗಿದೆ. ಶಾಸಕ ಶ್ರೀನಿವಾಸ್ ಅವರ ಮನೆಯಲ್ಲಿ ದಾಂಧಲೆ ನಡೆಸಿ, ಸುಟ್ಟು ಹಾಕಲಾಗಿದೆ. ಆದರೆ ಇದುವರೆಗೂ ಕಾಂಗ್ರೆಸ್ ನಾಯಕರು ಅವರ ಮನೆಗೆ ಭೇಟಿ ನೀಡಿಲ್ಲ. ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರ ಕೆಟ್ಟ ರಾಜಕಾರಣ ನೋವು ತರಿಸಿದೆ ಎಂದರು.

ಡಿ.ಕೆ.ಶಿವಕುಮಾರ್ ಅವರು ನವೀನ್ ಒಬ್ಬ ಬಿಜೆಪಿ ಕಾರ್ಯಕರ್ತ ಎಂದಿದ್ದಾರೆ. ನವೀನ್ ಯಾವ ಪಕ್ಷದ ಕಾರ್ಯಕರ್ತ ಎಂದು ಫೇಸ್‌ಬುಕ್ ಪೋಸ್ಟ್ ನಲ್ಲೇ ಗೊತ್ತಾಗುತ್ತಿದೆ ಎಂದ ಸಚಿವರು ನವೀನ್ ಫೇಸ್‌ಬುಕ್ ಪೋಸ್ಟ್ ಗಳನ್ನು ಮಾಧ್ಯಮದವರ ಮುಂದೆ ಪ್ರದರ್ಶಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)