varthabharthi


ನಿಮ್ಮ ಅಂಕಣ

ದೀನರ ದಾನ

ವಾರ್ತಾ ಭಾರತಿ : 15 Aug, 2020
ರಬೀಂದ್ರನಾಥ ಟಾಗೋರ್ | ಕನ್ನಡಕ್ಕೆ: ಹಾಜಿರಾ ಪುತ್ತಿಗೆ

‘‘ಆ ಮಂದಿರದಲ್ಲಿ ಯಾವ ದೇವರೂ ಇಲ್ಲ’’ ಎಂದ ಸಂತ.

ಕ್ರುದ್ಧನಾದ ರಾಜ ಹೀಗಂದ:

‘‘ಯಾವ ದೇವರೂ ಇಲ್ಲವೇ ಅಲ್ಲಿ? ಹೇ, ಸಂತ!

ನಿನ್ನ ಮಾತು ನಾಸ್ತಿಕರ ಮಾತಿನಂತಿದೆಯಲ್ಲಾ?

ಅದೋ ಅಲ್ಲಿ, ಅತ್ಯಮೂಲ್ಯ ರತ್ನ ರಂಜಿತ ಸಿಂಹಾಸನದಲ್ಲಿ

ಕಂಗೊಳಿಸುತ್ತಿದೆ, ಚಿನ್ನದ ವಿಗ್ರಹ

ಇಷ್ಟಿದ್ದೂ ನೀನು, ಅವನಿಲ್ಲ ಅಲ್ಲಿ ಎನ್ನುತಿರುವೆಯಲ್ಲಾ!’’

‘‘ಮಂದಿರ ಖಾಲಿಯೇನಿಲ್ಲ, ನಿಜ. ಆದರೆ ಅದರಲ್ಲಿ

ತುಂಬಿರುವುದು ರಾಜನ ಜಂಭ ಮಾತ್ರ.

ನೀನು ಅಲ್ಲಿ ಬೆಳಗಿರುವುದು ನಿನ್ನ ಕೀರ್ತಿಯನ್ನಷ್ಟೇ, ಓ ದೊರೆಯೇ,

ವಿಶ್ವದೊಡೆಯನ ನಾಮವನ್ನಲ್ಲ,’’ ಎಂದು ಬಿಟ್ಟ ಸಂತ.

ಸಿಡಿದೆದ್ದ ರಾಜ, ಹೀಗಂದ:

‘‘ಇಪ್ಪತ್ತು ಲಕ್ಷ ಚಿನ್ನದ ನಾಣ್ಯಗಳನ್ನು ಸುರಿದು ಕಟ್ಟಿರುವೆನು ನಾನು,

ಆ ವಿಗ್ರಹದ ಮೇಲಿನ ಗಗನ ಚುಂಬಿ ಕಟ್ಟಡವನ್ನು ಮತ್ತು

ಸಕಲ ಶಾಸ್ತ್ರಗಳನ್ನೂ ಸಂಪೂರ್ಣಗೊಳಿಸಿ,

ದೇವತೆಗಳಿಗೆ ಅರ್ಪಿಸಿರುವೆನು. ಇಷ್ಟಿದ್ದೂ,

ಭಗವಂತನೇ ಇಲ್ಲ ಈ ವಿರಾಟ್ ಮಂದಿರದಲ್ಲಿ, ಎನ್ನುವೆಯಲ್ಲ!

ನಿನ್ನದು ಇದೆಂತಹ ಮೊಂಡುತನ?’’

ಶಾಂತಚಿತ್ತದಿಂದ, ಸಂತ ಹೇಳಿದ:

‘‘ಅದೇ ವರ್ಷ, ತೀರಾ ಸಂತ್ರಸ್ತರಾಗಿದ್ದರು, ನಿನ್ನದೇ ನಾಡಿನ

ಎರಡು ಕೋಟಿ ಪ್ರಜೆಗಳು, ಭಯಾನಕ ಬರಗಾಲದಿಂದ.

ಹೊಟ್ಟೆಗೆ ಅನ್ನವಾಗಲಿ, ತಲೆಮೇಲೆ ಸೂರಾಗಲಿ ಇಲ್ಲದೆ ನರಳಿದ್ದರು.

ಆಶ್ರಯ ಕೋರಿ ಬಂದಿದ್ದರು ಅವರು, ನಿನ್ನ ಬಾಗಿಲ ಬಳಿಗೆ,

ಎಲ್ಲೆಲ್ಲೂ ಹೊರದಬ್ಬಲ್ಪಟ್ಟಿದ್ದರು ಅವರು, ನಿರ್ಬಂಧಿತರಾಗಿದ್ದರು,

ಸೂರು ಅರಸುತ್ತಾ ಅಲೆದಾಡಲು, ಕಾಡು ಮೇಡುಗಳಲ್ಲಿ,

ಬೀದಿಬದಿಯಲ್ಲಿ, ಮರಗಳ ನೆರಳಲ್ಲಿ, ಪಾಳುಬಿದ್ದ ಗುಡಿಗಳಲ್ಲಿ.

ಮತ್ತೆ ಅದೇ ವರ್ಷ, ಸುರಿದು ಇಪ್ಪತ್ತು ಲಕ್ಷ ಚಿನ್ನದ ನಾಣ್ಯಗಳನ್ನು,

ಕಟ್ಟಿದೆ ನೀನು, ಈ ನಿನ್ನ ಭವ್ಯ ಮಂದಿರವನ್ನು.

ಅದೇ ದಿನ ಹೇಳಿದ್ದ ಭಗವಂತ, ಹೀಗೆಂದು:

ನನ್ನ ಮನೆಯಂತೂ ಸದಾ ಕಂಗೊಳಿಸುತ್ತಲೇ ಇರುತ್ತದೆ

ನೀಲ ಗಗನದ ಮಧ್ಯೆ, ಪ್ರಜ್ವಲ ದೀಪಗಳಿಂದ,

ನಿರ್ಮಿತವಾಗಿದೆ ನನ್ನ ಮನೆ, ಸತ್ಯ, ಶಾಂತಿ, ಕರುಣೆ ಮತ್ತು

ಪ್ರೇಮವೆಂಬ ಮೌಲ್ಯಗಳ ಮೇಲೆ.

ಸ್ವತಃ ತನ್ನ ಪ್ರಜೆಗಳಿಗೆ ಆಶ್ರಯ ಒದಗಿಸಲಾಗದ ನಿರ್ಧನ, ನಿರ್ಬಲ,

ಜಿಪುಣ ದೊರೆಗೆ, ನನ್ನ ಮನೆ ಕಟ್ಟಲು ಹೇಗೆ ತಾನೇ ಸಾಧ್ಯ?

ಅದೇ ದಿನ ತೊರೆದು ಬಿಟ್ಟನು ದೇವರು ಆ ನಿನ್ನ ಮಂದಿರವನ್ನು

ಮತ್ತು ಸೇರಿಕೊಂಡನು ಅವನು, ಬೀದಿ ಬದಿಯ, ಮರಗಳ ಕೆಳಗಿನ

ನಿರಾಶ್ರಿತ ಬಡಜನರನ್ನು.

ವಿಶಾಲ ಸಮುದ್ರದ ಅಲೆಗಳ ಮೇಲಿನ ಟೊಳ್ಳು ಗುಳ್ಳೆಗಳಂತೆ

ಖಾಲಿಯಾಗಿದೆ ನಿನ್ನ ಮಂದಿರ,

ಧನ ಮತ್ತು ಜಂಭ ಮಾತ್ರ ತುಂಬಿರುವ ನಿನ್ನ ಮಂದಿರ.’’

ಕೆರಳಿದ ರಾಜ ಗುಡುಗಿದ:

‘‘ಓ ನೀಚ, ವಂಚಕ, ಮಾನವ,

ತೊಲಗಿ ಬಿಡು, ಈಗಿಂದೀಗಲೇ ನನ್ನ ಸಾಮ್ರಾಜ್ಯದಿಂದ.’’

ಶಾಂತ ಚಿತ್ತದಿಂದ ಸಂತ ಹೇಳಿದ:

‘‘ದೇವರನ್ನು ಎಲ್ಲಿಂದ ನೀನು ಒಕ್ಕಲೆಬ್ಬಿಸಿರುಮೋ

ಅಲ್ಲಿಗೇ ಕಳಿಸಿ ಬಿಡು ಅವನ ಈ ಭಕ್ತನನ್ನು.’’

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)