varthabharthi


ಬೆಂಗಳೂರು

ಕೆಂಪುಕೋಟೆಯ ಮೇಲೆ ಮತ್ತೆ ಕಾಂಗ್ರೆಸ್ ಪ್ರಧಾನಿ ತ್ರಿವರ್ಣ ಧ್ವಜ ಹಾರಿಸುತ್ತಾರೆ: ಡಿ.ಕೆ.ಶಿವಕುಮಾರ್

ವಾರ್ತಾ ಭಾರತಿ : 15 Aug, 2020

ಬೆಂಗಳೂರು, ಆ.15: ಪ್ರಸಕ್ತ ಪರಿಸ್ಥಿತಿಯಲ್ಲಿ ದೇಶಕ್ಕೆ ಕಾಂಗ್ರೆಸ್ ಪಕ್ಷ ಅನಿವಾರ್ಯವಾಗಿದ್ದು, ಕಾಂಗ್ರೆಸ್ ಪ್ರಧಾನಿ ಮತ್ತೆ ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಶನಿವಾರ ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ 74ನೇ ಸ್ವಾತಂತ್ರೋತ್ಸವ ಅಂಗವಾಗಿ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.

ಪ್ರಸಕ್ತ ಪರಿಸ್ಥಿತಿಯಲ್ಲಿ ದೇಶಕ್ಕೆ ಕಾಂಗ್ರೆಸ್ ಪಕ್ಷ ಅನಿವಾರ್ಯವಾಗಿದೆ. ಕಾಂಗ್ರೆಸ್ ಪಕ್ಷ ಮಾತ್ರ ಇಡೀ ದೇಶವನ್ನು ಒಟ್ಟಾಗಿ ಮುಂದೆ ಕರೆದೊಯ್ಯಲು ಸಾಧ್ಯ. ದೇಶದ ಸಂವಿಧಾನಕ್ಕೆ ಧಕ್ಕೆಯಾಗಿ, ಅಶಾಂತಿ ಉಂಟಾಗಿದೆ. ದೇಶದ ಸಮಗ್ರತೆ ಹಾಗೂ ಐಕ್ಯತೆಗಾಗಿ ಹೋರಾಟ ಮಾಡಲಾಗುತ್ತಿದೆ ಎಂದು ನುಡಿದರು.

ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿ ಇಂದು ಜನ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಮುಂದಿನ ಚುನಾವಣೆ ನಂತರ ಕಾಂಗ್ರೆಸಿಗರು ಹೊಸದಿಲ್ಲಿಯ ಕೆಂಪುಕೋಟೆ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲಿದ್ದಾರೆ ಎಂಬ ನಂಬಿಕೆ ನನಗಿದೆ ಎಂದು ಅವರು ತಿಳಿಸಿದರು.

ಪ್ರಜಾಪ್ರಭುತ್ವದ ಸೌಧ ನಿರ್ಮಿಸಲು, ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಟ್ಟ ಸಂವಿಧಾನಕ್ಕೆ ಇಂದು ಅಪಚಾರವಾಗುತ್ತಿದೆ. ಸಂವಿಧಾನ, ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ಅಧಿಕಾರದ ಮೇಲಾಟ ನಡೆಯುತ್ತಿದೆ. ಇದು ದುರಂತ ಭಾರತದ ಮೊದಲ ಅಧ್ಯಾಯವಾಗಲಿದೆ. ಇದನ್ನು ಉಳಿಸಿ, ರಕ್ಷಿಸುವ ಹೊಣೆ ನಮ್ಮೆಲ್ಲರದಾಗಿದೆ ಎಂದು ಹೇಳಿದರು.

ದಲಿತ ಸಮುದಾಯದಲ್ಲಿ ಹುಟ್ಟಿ ಸಮಾಜದಲ್ಲಿ ಎಲ್ಲ ಶೋಷಣೆಗಳನ್ನು ಮಟ್ಟಿನಿಂತು ಸಂವಿಧಾನ ಶಿಲ್ಪಿಯಾಗಿ ಬೆಳೆದು ನಿಂತ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗೆಗೂ ಈ ಬಿಜೆಪಿಯವರಿಗೆ ಕನಿಷ್ಟ ಗೌರವವಿಲ್ಲ. ಅಂಬೇಡ್ಕರ್ ಅವರ ಸಂವಿಧಾನವನ್ನು ನಾವ್ಯಾಕೆ ಒಪ್ಪಬೇಕು ಎಂಬ ಅಹಂಭಾವದಿಂದ ಈಗ ಸಂವಿಧಾನವನ್ನೇ ಬದಲಾಯಿಸಲು ಹೊರಟಿದ್ದಾರೆ ಎಂದು ಆಪಾದಿಸಿದರು.

ದೇಶಕ್ಕೆ ಕೋಮುವಾದಿಗಳಿಂದ, ಮತಾಂಧರಿಂದ ಸ್ವಾತಂತ್ರ್ಯ ಸಿಗಬೇಕಿದೆ. ಜನರಲ್ಲಿ ಕೋಮುದ್ವೇಷ ಭಿತ್ತಿ, ಅದರ ಜ್ವಾಲೆಯಲ್ಲೇ ಮೈ ಕಾಯಿಸಿಕೊಳ್ಳುತ್ತಿರುವ ದುಷ್ಟಶಕ್ತಿಗಳಿಂದ ಸ್ವಾತಂತ್ರ್ಯ ಸಿಗಬೇಕಿದೆ ಎಂದ ಅವರ, ಇಂದು ಜಾತಿ, ಧರ್ಮವನ್ನು ಮುಂದಿಟ್ಟು ದೇಶವನ್ನು ತುಂಡು ತುಂಡು ಮಾಡುವ ಹುನ್ನಾರ ನಡೆಯುತ್ತಿದೆ. ಹಾಗಾಗಿ, ದೇಶವನ್ನು ರಕ್ಷಿಸಲು ಮತ್ತೊಂದು ಸುತ್ತಿನ ಹೋರಾಟಕ್ಕೆ ಕಾಂಗ್ರೆಸ್‍ನ ಎಲ್ಲರು ಸಜ್ಜಾಗಬೇಕಾಗಿದೆ ಎಂದು ಶಿವಕುಮಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್,  ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಪ್ರಮುಖರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)