varthabharthi


ರಾಷ್ಟ್ರೀಯ

‘ವಾಲ್ ಸ್ಟ್ರೀಟ್ ಜರ್ನಲ್’ ವರದಿ

‘ಬಿಜೆಪಿ ಶಾಸಕನ ದ್ವೇಷದ ಪೋಸ್ಟ್ ತೆಗೆದು ಹಾಕುವುದನ್ನು ವಿರೋಧಿಸಿದ್ದ ಫೇಸ್ ಬುಕ್ ನ ಹಿರಿಯ ಅಧಿಕಾರಿ'

ವಾರ್ತಾ ಭಾರತಿ : 15 Aug, 2020

ಹೊಸದಿಲ್ಲಿ:  ಫೇಸ್ ಬುಕ್‍ ನ  ದ್ವೇಷದ ಭಾಷಣ ಕುರಿತಾದ ನಿಯಮಗಳನ್ನು  ಕನಿಷ್ಠ ಒಬ್ಬ ಬಿಜೆಪಿ ರಾಜಕಾರಣಿ ಹಾಗೂ ಇತರ ‘ಹಿಂದು ರಾಷ್ಟ್ರವಾದಿ ವ್ಯಕ್ತಿಗಳು ಮತ್ತು ಗುಂಪುಗಳಿಗೆ’ ಅನ್ವಯಿಸುವುದಕ್ಕೆ  ಭಾರತದಲ್ಲಿನ ಫೇಸ್ ಬುಕ್‍ ನ ಉನ್ನತ ಅಧಿಕಾರಿಯೊಬ್ಬರು ವಿರೋಧ ವ್ಯಕ್ತಪಡಿಸಿದ್ದರೆಂದು  The Wall Street Journal‍ನಲ್ಲಿ ಪ್ರಕಟವಾದ ವರದಿಯೊಂದರಲ್ಲಿ ಹೇಳಲಾಗಿದೆ.

ಹಿಂಸೆಯನ್ನು ಉತ್ತೇಜಿಸುತ್ತದೆ ಎಂಬುದಕ್ಕಾಗಿ ಈ ವ್ಯಕ್ತಿ ಹಾಗೂ ಗುಂಪುಗಳ ಪೋಸ್ಟ್‍ ಗಳಿಗೆ ಆಂತರಿಕವಾಗಿ ವಿರೋಧ ವ್ಯಕ್ತವಾಗಿರುವ ಹೊರತಾಗಿಯೂ ಈ ಅಧಿಕಾರಿ ಮೇಲಿನ ಧೋರಣೆ ಹೊಂದಿದ್ದರು ಎಂದು ವರದಿಯಲ್ಲಿ ಆರೋಪಿಸಲಾಗಿದೆ.

ಭಾರತದಲ್ಲಿ ಫೇಸ್ ಬುಕ್‍ ನ ಉನ್ನತ ಪಬ್ಲಿಕ್ ಪಾಲಿಸಿ ಎಕ್ಸಿಕ್ಯೂಟಿವ್ ಆಗಿರುವ ಅಂಖಿ ದಾಸ್ ಎಂಬವರು ಬಿಜೆಪಿಯ ಟಿ ರಾಜಾ  ಸಿಂಗ್ ಅವರಿಗೆ ಫೇಸ್ ಬುಕ್ ನ ದ್ವೇಷದ ಭಾಷಣ ಕುರಿತಾದ ನಿಯಮಗಳನ್ನು ಅನ್ವಯಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಆಡಳಿತ ಪಕ್ಷದೊಂದಿಗೆ ಕಂಪೆನಿಯ ಬಾಂಧವ್ಯ ಕೆಡಬಹುದೆಂಬ ಉದ್ದೇಶದಿಂದ ಅವರು ವಿರೋಧ ವ್ಯಕ್ತಪಡಿಸುತ್ತಿದಾರೆ ಎಂದು ಹೇಳಲಾಗಿದೆ.

ತೆಲಂಗಾಣ ವಿಧಾನಸಭೆಯಲ್ಲಿ ಬಿಜೆಪಿಯ ಏಕೈಕ ಶಾಸಕರಾಗಿರುವ  ಟಿ ರಾಜಾ ಸಿಂಗ್ ಅವರು ತಮ್ಮ ಕೋಮು ಪ್ರಚೋದಕ ಭಾಷಣಗಳಿಗೆ ಕುಖ್ಯಾತಿ ಪಡೆದವರಾಗಿದ್ದಾರೆ.

“ಫೇಸ್ ಬುಕ್ ಪರವಾಗಿ ಭಾರತ ಸರಕಾರದಲ್ಲಿ ಲಾಬಿ ನಡೆಸುವ ಕರ್ತವ್ಯವನ್ನೂ ಅಂಖಿ ದಾಸ್ ಅವರ ಹುದ್ದೆ ಹೊಂದಿದೆ  ಹಾಗೂ ಮೋದಿಯ ಪಕ್ಷದ ರಾಜಕಾರಣಿಗಳು ನಡೆಸುವ ಉಲ್ಲಂಘನೆಗಳಿಗೆ ಶಿಕ್ಷೆ ನೀಡಿದರೆ ಅದು ದೇಶದಲ್ಲಿ ಕಂಪೆನಿಯ ಮುನ್ನಡೆಗೆ ಅಡ್ಡಿಯಾಗಬಹುದು ಎಂದು ದಾಸ್ ತಮ್ಮ ಸಿಬ್ಬಂದಿಗೆ ಹೇಳಿದ್ದಾರೆ'' ಎಂದು The Wall Street Journal ವರದಿಯಲ್ಲಿ ಬರೆಯಲಾಗಿದೆ.

“ಮೋದಿಯ ಬಿಜೆಪಿ ಹಾಗೂ ಕಟ್ಟಾ ಹಿಂದುವಾದಿಗಳಿಗೆ ಪರವಾದ ಧೋರಣೆ ಹೊಂದುವ ಫೇಸ್ ಬುಕ್ ನಿಲುವಿನಿಂದಾಗಿ ದಾಸ್ ಅವರು  ಸಿಂಗ್ ವಿರುದ್ಧ ಕ್ರಮಕ್ಕೆ ವಿರೋಧಿಸುತ್ತಿದ್ದಾರೆಂದು ಫೇಸ್ ಬುಕ್‍ನ ಹಾಲಿ ಮತ್ತು ಮಾಜಿ ಉದ್ಯೋಗಿಗಳು ಹೇಳಿದ್ದಾರೆ'' ಎಂದು ವರದಿ ತಿಳಿಸಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಫೇಸ್ ಬುಕ್ ವಕ್ತಾರರು, ರಾಜಾ ಸಿಂಗ್ ಅವರನ್ನು ಫೇಸ್ ಬುಕ್‍ ನಿಂದ ನಿಷೇಧಿಸಬೇಕೇ ಎಂಬುದರ ಕುರಿತಂತೆ ಸಂಸ್ಥೆ ಈಗಲೂ ಪರಾಮರ್ಶಿಸುತ್ತಿದೆ ಎಂದಿದ್ದಾರೆ.

ಫೇಸ್‌ಬುಕ್‌ನ ಪರವಾಗಿ ಸರಕಾರದ ಜೊತೆ ಲಾಬಿ ಮಾಡುವುದೂ ಶ್ರೀಮತಿ ದಾಸ್ ಅವರ ಕಾರ್ಯವಾಗಿದೆ. ನರೇಂದ್ರ ಮೋದಿ ನೇತೃತ್ವದ ಪಕ್ಷದ ಸದಸ್ಯರು ಮಾಡುವ ನಿಯಮ ಉಲ್ಲಂಘನೆಗೆ ಶಿಕ್ಷೆ ನೀಡಿದರೆ ಮುಂದಿನ ದಿನಗಳಲ್ಲಿ ಸಂಸ್ಥೆಯ ವ್ಯವಹಾರಕ್ಕೆ ಸಮಸ್ಯೆಯಾಗಬಹುದು ಎಂದು ಸಿಬಂದಿಗಳಿಗೆ ಸೂಚಿಸಿದ್ದರು ಎಂದು ಹೆಸರು ಹೇಳಲಿಚ್ಚಿಸದ ಸಿಬ್ಬಂದಿಯೋರ್ವರು ಮಾಹಿತಿ ನೀಡಿದ್ದಾರೆ. ರಾಜಾಸಿಂಗ್ ಪರವಾಗಿ ಶ್ರೀಮತಿ ದಾಸ್ ಅವರ ನಿಲುವು ಬಿಜೆಪಿ ಮತ್ತು ಹಿಂದೂ ತೀವ್ರವಾದಿಗಳ ಬಗ್ಗೆ ಫೇಸ್‌ಬುಕ್ ತೋರುವ ಒಲವಿನ ಒಂದು ಭಾಗವಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಮುಸ್ಲಿಮರು ಉದ್ದೇಶಪೂರ್ವಕವಾಗಿ ಕೊರೋನ ವೈರಸ್ ಹರಡುತ್ತಿದ್ದಾರೆ, ದೇಶದ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ, ಲವ್ ಜಿಹಾದ್‌ನಲ್ಲಿ ತೊಡಗಿದ್ದಾರೆ ಮುಂತಾಗಿ ಆರೋಪಿಸುವ ಪೋಸ್ಟ್‌ಗಳನ್ನು ಬಿಜೆಪಿ ರಾಜಕಾರಣಿಗಳು ಹಾಕುತ್ತಿದ್ದರೂ ದಾಸ್ ಮತ್ತವರ ತಂಡ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಜೊತೆಗೆ ಚುನಾವಣೆಗೆ ಸಂಬಂಧಿಸಿದ ವಿಷಯಗಳಲ್ಲಿ ದಾಸ್ ಮತ್ತವರ ತಂಡ ಬಿಜೆಪಿಗೆ ಅನುಕೂಲಕರವಾಗಿ ನಡೆದುಕೊಂಡಿದ್ದರು ಎಂದು ಫೇಸ್‌ಬುಕ್‌ನ ಸಿಬ್ಬಂದಿಗಳು ಮಾಹಿತಿ ನೀಡಿರುವುದಾಗಿ ಪತ್ರಿಕೆ ಹೇಳಿದೆ.

ಪಾಕಿಸ್ತಾನದ ಸೇನೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ಕೆಲವು ವಿಶ್ವಾಸಾರ್ಹವಲ್ಲದ ಸುದ್ದಿಗಳನ್ನು ತೆಗೆದು ಹಾಕಿರುವುದಾಗಿ 2019ರ ಎಪ್ರಿಲ್‌ನಲ್ಲಿ (ಭಾರತದ ಸಾರ್ವತ್ರಿಕ ಚುನಾವಣೆಯ ಮತದಾನ ನಡೆಯುವುದಕ್ಕಿಂತ ಕೆಲ ದಿನಗಳ ಮೊದಲು) ಫೇಸ್‌ಬುಕ್ ಘೋಷಿಸಿತ್ತು. ಆದರೆ ದಾಸ್ ಮಧ್ಯಪ್ರವೇಶಿಸಿದ್ದರಿಂದ ಬಿಜೆಪಿಗೆ ಸಂಬಂಧಿಸಿದ ಸುಳ್ಳು ಸುದ್ದಿಗಳು ರದ್ದಾದ ಬಗ್ಗೆ ಘೋಷಣೆ ಹೊರಬೀಳಲಿಲ್ಲ.

ಮುಸ್ಲಿಂ ವಿರೋಧಿ ಹೇಳಿಕೆಗಾಗಿ ಬಿಜೆಪಿಯ ಸಂಸದ ಅನಂತ್‌ಕುಮಾರ್ ಹೆಗ್ಡೆಯ ಖಾತೆಯನ್ನು ಟ್ವಿಟರ್ ಅಮಾನತುಗೊಳಿಸಿದ್ದರೂ , ಹೆಗ್ಡೆಯ ಕೊರೋನ ಜಿಹಾದ್ ಹೇಳಿಕೆಯ ಬಗ್ಗೆ ಪತ್ರಿಕೆ ಫೇಸ್‌ಬುಕ್‌ನ ಗಮನ ಸೆಳೆಯುವವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಗುರುವಾರ ಕೆಲವು ಹೇಳಿಕೆಗಳನ್ನು ಫೇಸ್‌ಬುಕ್ ತೆಗೆದುಹಾಕಿದೆ ಎಂದು ‘ದಿ ವಾಲ್‌ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

ಅನಂತಕುಮಾರ್ ಹೆಗಡೆ, ಸಿಂಗ್ ಹೇಳಿಕೆ ಡಿಲೀಟ್ ಮಾಡಲು ಹಿಂದೇಟು

ಮುಸ್ಲಿಂ ವಿರೋಧಿ ಹೇಳಿಕೆ ನೀಡುವ ಮೂಲಕ ವಾಕ್ಚಾತುರ್ಯ ಪ್ರದರ್ಶಿಸುತ್ತಿರುವ ಬಿಜೆಪಿ ಮುಖಂಡರಾದ ಅನಂತಕುಮಾರ್ ಹೆಗಡೆ ಮತ್ತು ರಾಜಾ ಸಿಂಗ್ ಹೇಳಿಕೆಯ ವಿರುದ್ಧ ದೂರುಗಳು ಕೇಳಿ ಬಂದರೂ ಫೇಸ್‌ಬುಕ್ ನಿರ್ಲಕ್ಷ ವಹಿಸಿತ್ತು. ಬಳಿಕ ಈ ಕುರಿತು ತನ್ನ ವರದಿಗಾರರು ಫೇಸ್‌ಬುಕ್‌ನ ಗಮನಕ್ಕೆ ತಂದ ಬಳಿಕ ಡಿಲೀಟ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ‘ವಾಲ್‌ಸ್ಟ್ರೀಟ್ ಜರ್ನಲ್’ ಹೇಳಿದೆ.

 ರಾಜಾ ಸಿಂಗ್ ಆಕ್ಷೇಪಾರ್ಹ ಹೇಳಿಕೆಯ ಬಗ್ಗೆ ತಾನು ಪ್ರಶ್ನಿಸಿದಾಗ ಇದರ ವಿರುದ್ಧ ಕ್ರಮ ಕೈಗೊಂಡಿದ್ದು ನೀಲಿ ಗುರುತು ಹೊಂದಿರುವ ಅಧಿಕೃತ , ಪರಿಶೀಲಿಸಿದ ಖಾತೆಯನ್ನು ಹೊಂದಲು ಇನ್ನು ಮುಂದೆ ಸಿಂಗ್‌ಗೆ ಅವಕಾಶವಿಲ್ಲವೆಂದು ಫೇಸ್‌ಬುಕ್ ಮಾಹಿತಿ ನೀಡಿದೆ ಎಂದು ಪತ್ರಿಕೆ ವರದಿ ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)