varthabharthi


ಕ್ರೀಡೆ

ಭಾರತದ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಆರೋಗ್ಯ ಸ್ಥಿತಿ ಗಂಭೀರ

ವಾರ್ತಾ ಭಾರತಿ : 15 Aug, 2020

ಫೋಟೊ ಕೃಪೆ:twitter.com/

ಹೊಸದಿಲ್ಲಿ, ಆ.15: ಕಳೆದ ತಿಂಗಳು ಕೋವಿಡ್-19 ಸೋಂಕಿಗೆ ಒಳಗಾಗಿರುವ ಭಾರತದ ಮಾಜಿ ಆರಂಭಿಕ ಆಟಗಾರ ಚೇತನ್ ಚೌಹಾಣ್ ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇದೀಗ ಅವರು ಗುರುಗಾಂವ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಉತ್ತರಪ್ರದೇಶ ಸರಕಾರದಲ್ಲಿ ಸಂಪುಟ ದರ್ಜೆಯ ಸಚಿವರೂ ಆಗಿರುವ 73ರ ಹರೆಯದ ಚೌಹಾಣ್ ಜುಲೈ 12ರಂದು ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದ ಬಳಿಕ ಲಕ್ನೊದ ಸಂಜಯ ಗಾಂಧಿ ಪಿಜಿಐ ಆಸ್ಪತ್ರೆಗೆ ದಾಖಲಾಗಿದ್ದರು.

ಅವರ ಆರೋಗ್ಯ ಸ್ಥಿತಿ ಸುಧಾರಣೆಯಾಗಿರಲಿಲ್ಲ. ಇತರ ಸಮಸ್ಯೆಗಳು ಹೆಚ್ಚಾದಾಗ ಅವರನ್ನು ಗುರುಗಾಂವ್‌ನಲ್ಲಿರುವ ಮೆದಾಂತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

‘‘ಇಂದು ಬೆಳಗ್ಗಿನ ಜಾವ ಚೇತನ್‌ರಿಗೆ ಕಿಡ್ನಿ ವೈಫಲ್ಯವಾಗಿದ್ದು, ತರುವಾಯ ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾದರು. ಅವರು ಪ್ರಸ್ತುತ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿದ್ದಾರೆ. ಅವರು ಈ ಯುದ್ಧದಲ್ಲಿ ಜಯಶಾಲಿಯಾಗಲಿ ಎಂದು ನಾವೆಲ್ಲರೂ ಪ್ರಾರ್ಥಿಸುತ್ತಿದ್ದೇವೆ’’ ಎಂದು ಚೇತನ್ ಆರೋಗ್ಯದ ಮಾಹಿತಿ ಪಡೆದಿರುವ ಡಿಡಿಸಿಎ ಅಧಿಕಾರಿಯೊಬ್ಬರು ಶನಿವಾರ ಪಿಟಿಐಗೆ ತಿಳಿಸಿದ್ದಾರೆ.

ಚೌಹಾಣ್ ಅವರು ಭಾರತದ ಪರ 40 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ಲೆಜೆಂಡರಿ ಸುನೀಲ್ ಗವಾಸ್ಕರ್ ಅವರೊಂದಿಗೆ ಆರಂಭಿಕ ಆಟಗಾರನಾಗಿ ದೀರ್ಘ ಸಮಯ ಆಡಿದ್ದರು.

ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ಮುಖ್ಯ ಆಯ್ಕೆಗಾರ-ಹೀಗೆ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಆಸ್ಟ್ರೇಲಿಯ ಕ್ರಿಕೆಟ್ ಪ್ರವಾಸವೊಂದರಲ್ಲಿ ಟೀಮ್ ಇಂಡಿಯಾದ ಮ್ಯಾನೇಜರ್ ಕೂಡ ಆಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)