varthabharthi


ರಾಷ್ಟ್ರೀಯ

‘ರಿಪಬ್ಲಿಕ್ ಟಿವಿಯಲ್ಲಿ ಪತ್ರಿಕೋದ್ಯಮ ಸತ್ತಿದೆ’: ಅರ್ನಬ್ ನೇತೃತ್ವದ ಚಾನೆಲ್ ತೊರೆದ ಮತ್ತೊಬ್ಬ ಪತ್ರಕರ್ತೆ

ವಾರ್ತಾ ಭಾರತಿ : 9 Sep, 2020

ಹೊಸದಿಲ್ಲಿ: ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿಗೆ ರಾಜೀನಾಮೆ ನೀಡುವುದಾಗಿ ಸರಣಿ ಟ್ವೀಟ್‍ಗಳ ಮುಖಾಂತರ ಪತ್ರಕರ್ತೆ ಶಾಂತಶ್ರೀ ಸರ್ಕಾರ್ ತಿಳಿಸಿದ್ದಾರೆ.

‘ನೈತಿಕ’ ಕಾರಣಗಳಿಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದವರು ಹೇಳಿದ್ದಾರೆ. ಸದ್ಯ ನೋಟಿಸ್ ಅವಧಿಯಲ್ಲಿ ಸೇವೆ ಸಲ್ಲಿಸುತ್ತಿರುವ ಆಕೆ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಕುರಿತಂತೆ ರಿಪಬ್ಲಿಕ್ ಟಿವಿಯಲ್ಲಿ ರಿಯಾ ಚಕ್ರವರ್ತಿಯ ಬಹಿರಂಗ ದೂಷಣೆಯ ಕುರಿತಂತೆ ತಮ್ಮ ಅಸಮಾಧಾನ ಹೊರಗೆಡಹಿದ್ದಾರೆ.

“ಸತ್ಯವನ್ನು ಬಯಲಿಗೆಳೆಯುವುದಕ್ಕಾಗಿ ನನಗೆ ಪತ್ರಿಕೋದ್ಯಮ ಕಲಿಸಲಾಗಿದೆ. ಆದರೆ ಸುಶಾಂತ್ ಪ್ರಕರಣದಲ್ಲಿ ಸತ್ಯವೊಂದನ್ನು ಬಿಟ್ಟು ಎಲ್ಲಾ ಮಾಹಿತಿಗಳನ್ನೂ ಹೊರಗೆಳೆಯಲು ನನಗೆ ಹೇಳಲಾಯಿತು. ನಾನು ಕೂಲಂಕುಷವಾಗಿ ವಿಚಾರಿಸಿದಾಗ ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದಾರೆಂದು ಎರಡೂ ಕುಟುಂಬಗಳಿಗೆ ಹತ್ತಿರದ ಮೂಲಗಳು ತಿಳಿಸಿದ್ದವು. ಆದರೆ ಇದು ರಿಪಬ್ಲಿಕ್ ಅಜೆಂಡಾಗೆ ಹೊಂದಿಕೆಯಾಗಿಲ್ಲ'' ಎಂದು ಅವರು ಬರೆದಿದ್ದಾರೆ.

“ಪ್ರಕರಣವನ್ನು ಆರ್ಥಿಕ ಕೋನದಿಂದ ಪರಿಶೀಲಿಸಲು ಹಾಗೂ ರಿಯಾ ತಂದೆಯ ಖಾತೆ ಕುರಿತ ಮಾಹಿತಿ ಕಲೆ ಹಾಕಲು ನಂತರ ನನಗೆ ಹೇಳಲಾಯಿತು” ಎಂದು ಇನ್ನೊಂದು ಟ್ವೀಟ್‍ ನಲ್ಲಿ ಬರೆದಿರುವ ಆಕೆ, “ತಾರತಮ್ಯಕಾರಿ ವರದಿಗಳನ್ನು ಹೊರತರದೇ ಇರುವುದಕ್ಕಾಗಿ ನನ್ನನ್ನು ದಿನದ 24 ಗಂಟೆಯೂ ದುಡಿಸಿ ಶಿಕ್ಷಿಸಲಾಯಿತು. ಯಾವುದೇ ವಿಶ್ರಾಂತಿಯಿಲ್ಲದೆ ನಾನು ಸತತ 72 ಗಂಟೆ ಕೆಲಸ ಮಾಡಿದ್ದೆ” ಎಂದು ಆಕೆ ಬರೆದಿದ್ದಾರೆ.

‘ಪತ್ರಿಕೋದ್ಯಮವು ರಿಪಬ್ಲಿಕ್ ಟಿವಿಯಲ್ಲಿ ಸತ್ತಿದೆ ಎಂದು ಅವರು ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)