varthabharthi


ರಾಷ್ಟ್ರೀಯ

ಆರ್ಯ ಸಮಾಜದ ನಾಯಕ, ಹಿರಿಯ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಇನ್ನಿಲ್ಲ

ವಾರ್ತಾ ಭಾರತಿ : 11 Sep, 2020

 ಹೊಸದಿಲ್ಲಿ, ಸೆ. 11: ಆರ್ಯಸಮಾಜದ ಮುಖಂಡ, ಕೋಮುವಾದ ವಿರೋಧಿ ಹೋರಾಟಗಾರ, ಜೀತದಾಳುಗಳ ವಿಮುಕ್ತಿಗಾಗಿ ಚಳವಳಿ ನಡೆಸಿದ ಸಾಮಾಜಿಕ ಚಿಂತಕ ಸ್ವಾಮಿ ಅಗ್ನಿವೇಶ್(80) ಶುಕ್ರವಾರ ನಿಧನರಾದರು.

ಬಹು ಅಂಗಾಂಗ ವೈಫಲ್ಯದ ಹಿನ್ನೆಲೆಯಲ್ಲಿ ಸ್ವಾಮಿ ಅಗ್ನಿವೇಶ್ ಅವರನ್ನು ಮಂಗಳವಾರ ಹೊಸದಿಲ್ಲಿಯ ಇನ್‌ಸ್ಟಿಟ್ಯೂಟ್ ಆಫ್ ಲಿವರ್ ಆ್ಯಂಡ್ ಬಿಲಿಯರಿ ಸಯನ್ಸಸ್‌ನಲ್ಲಿ ದಾಖಲಿಸಲಾಗಿತ್ತು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ವೆಂಟಿಲೇಟರ್‌ನಲ್ಲೇ ಇರಿಸಲಾಗಿತ್ತು. ಸ್ವಾಮಿ ಅಗ್ನಿವೇಶ್ ಅವರು ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ಬ್ರಾಹ್ಮಣ ಕುಟುಂಬವೊಂದರಲ್ಲಿ 1939 ಸೆಪ್ಟಂಬರ್ 21ರಂದು ಜನಿಸಿದರು. ಆಗ ಅವರಿಗೆ ವೇಪ ಶ್ಯಾಮ ರಾವ್ ಎಂದು ಹೆಸರು ಇರಿಸಲಾಗಿತ್ತು. ನಾಲ್ಕು ವರ್ಷದ ಬಾಲಕನಾಗಿರುವಾಗಲೇ ಅವರ ತಂದೆ ತೀರಿಕೊಂಡಿದ್ದರು. ಆನಂತರ ಅವರನ್ನು ಆಗ ಶಕ್ತಿ ರಾಜಸಂಸ್ಥಾನ (ಈಗ ಛತ್ತೀಸ್‌ಗಡ)ದ ದಿವಾನರಾಗಿದ್ದ ಅಜ್ಜ (ತಾಯಿಯ ತಂದೆ) ಸಾಕಿ, ಸಲಹಿದ್ದರು. ಕಾನೂನು ಹಾಗೂ ವಾಣಿಜ್ಯದಲ್ಲಿ ಪದವಿ ಪಡೆದ ಸ್ವಾಮಿ ಅಗ್ನಿವೇಶ್ ಅವರು ಕೋಲ್ಕೊತಾದ ಪ್ರತಿಷ್ಠಿತ ಸಂತ ಕ್ಸೇವಿಯರ್ ಕಾಲೇಜಿನಲ್ಲಿ ಮ್ಯಾನೇಜ್‌ಮೆಂಟ್ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಆನಂತರ ಸವ್ಯಸಾಚಿ ಮುಖರ್ಜಿ (ಸವ್ಯಸಾಚಿ ಮುಖರ್ಜಿ ಆನಂತರ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು) ಅವರಲ್ಲಿ ಕಾನೂನು ಅಭ್ಯಾಸ ಮಾಡಿದ್ದರು. 1968ರಲ್ಲಿ ಅಗ್ನಿವೇಶ್ ಅವರು ಹರ್ಯಾಣಕ್ಕೆ ತೆರಳಿ ಆರ್ಯ ಸಮಾಜಕ್ಕೆ ಸೇರಿದ್ದರು. ಆನಂತರ 1970 ಮಾರ್ಚ್ 25ರಂದು ಸನ್ಯಾಸ ಸ್ವೀಕರಿಸಿದ್ದರು. 1970ರಲ್ಲಿ ಅಗ್ನಿವೇಶ್ ಆರ್ಯ ಸಮಾಜದ ಸಿದ್ಧಾಂತ ಆಧಾರವಾಗಿ ಇರುವ ರಾಜಕೀಯ ಪಕ್ಷ ‘ಆರ್ಯ ಸಭಾ’ ಸ್ಥಾಪಿಸಿದರು. 1875ರಲ್ಲಿ ದಯಾನಂದ ಸರಸ್ವತಿ ಅವರು ಸ್ಥಾಪಿಸಿದ ಆರ್ಯ ಸಮಾಜದ ಅಂತರ್‌ರಾಷ್ಟ್ರೀಯ ಮಂಡಳಿಯ ಅಧ್ಯಕ್ಷ (2004-2014)ರಾಗಿ ಕೂಡ ಅವರು ಕಾರ್ಯನಿರ್ವಹಿಸಿದ್ದರು. ಜೀತಾದಾಳುಗಳ ವಿಮೋಚನೆಗೆ ಹೋರಾಡಲು ಅವರು 1981ರಲ್ಲಿ ಬಂಧು ಮುಕ್ತಿ ಮೋರ್ಚಾ (ಬಾಂಡೆಡ್ ಲೇಬರ್ ಲಿಬರೇಶನ್ ಫ್ರಂಟ್) ಅನ್ನು ಕೂಡ ಸ್ಥಾಪಿಸಿದ್ದರು. 1977ರಲ್ಲಿ ಅವರು ಹರ್ಯಾಣ ವಿಧಾನಸಭೆಯ ಶಾಸಕರಾಗಿದ್ದರು. ಆನಂತರ 1979ರಲ್ಲಿ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಜೀತದಾಳುಗಳ ವಿರುದ್ಧ ಪ್ರತಿಭಟನೆ ನಡೆಸಿದ ಕಾರ್ಮಿಕರ ವಿರುದ್ಧ ಪೊಲೀಸರು ಗುಂಡು ಹಾರಿಸಿದ ಪ್ರಕರಣದಲ್ಲಿ ಹರ್ಯಾಣ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆನಂತರ ವಿಧ್ವಂಸಕ ಚಟುವಟಿಕೆ ಹಾಗೂ ಹತ್ಯೆ ಆರೋಪದಲ್ಲಿ ಅವರನ್ನು ಎರಡು ಬಾರಿ ಬಂಧಿಸಲಾಗಿತ್ತು. ಬಳಿಕ ಬಿಡುಗಡೆಗೊಳಿಸಲಾಗಿತ್ತು. 2005ರಲ್ಲಿ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ದೇಶಾದ್ಯಂತ ಎರಡು ವಾರಗಳ ಕಾಲ ಪ್ರಯಾಣಿಸಿ ಅಭಿಯಾನ ನಡೆಸಿದ್ದರು. ಅಲ್ಲದೆ ಮಹಿಳೆಯರ ವಿಮೋಚನೆಗೆ ಹಾಗೂ ರೈತರು ಹಾಗೂ ಬುಡಕಟ್ಟು ಜನರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)