varthabharthi


ನಿಮ್ಮ ಅಂಕಣ

ದೇಶದ ಬಡವರ ಪಾಲಿನ ಅನ್ನದಾತ 'ನರೇಗಾ'ದ ಶಿಲ್ಪಿ ರಘುವಂಶ ಪ್ರಸಾದ್ ಸಿಂಗ್

ವಾರ್ತಾ ಭಾರತಿ : 14 Sep, 2020

ಕೇಂದ್ರದ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ರಘುವಂಶ ಪ್ರಸಾದ್ ಸಿಂಗ್, ಸಂಸತ್ ಭವನ ಸಂಕೀರ್ಣಕ್ಕೆ ತೆರಳುವ ಮಾರ್ಗಮಧ್ಯದಲ್ಲಿ ಕಾರು ನಿಲ್ಲಿಸಿ ಪತ್ರಕರ್ತರ ಜತೆ ಹರಟುತ್ತಿದ್ದಾಗಲೆಲ್ಲ ಅವರ ಅಧಿಕಾರಿಗಳಿಗೆ ಅದು ಕಾತುರದಿಂದ ಕಾಯುವ ಕ್ಷಣಗಳಾಗಿದ್ದವು. ಇದಕ್ಕೆ ಕಾರಣವೆಂದರೆ ಪತ್ರಕರ್ತರ ಜತೆಗಿನ ಅವರ ಸಂವಾದಗಳು, ಅವರ ಕಚೇರಿಯಲ್ಲಿ ಮಹತ್ವದ ಸಭೆಗಳ ವಿಳಂಬಕ್ಕೆ ಕಾರಣವಾಗುತ್ತಿತ್ತು. ಕನಿಷ್ಠ ಮೂರು ಬಾರಿ ಅವರು ಪಾಟ್ನಾಗೆ ತೆರಳುವ ವಿಮಾನ ತಪ್ಪಿಸಿಕೊಂಡಿದ್ದರು.

ಇಂದು ನಿಧನರಾದ ರಘುವಂಶ ಪ್ರಸಾದ್ ಸಿಂಗ್ ಭಾರತದ ಅತಿದೊಡ್ಡ ಕಲ್ಯಾಣ ಯೋಜನೆ ಎನಿಸಿದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ಎಂ-ನರೇಗಾ)ದ ಶಿಲ್ಪಿ. ಕೇಂದ್ರದಲ್ಲಿ ಆಡಳಿತಗಳು ಬದಲಾದರೂ ಈ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ತನ್ನ ಅದ್ಭುತ ಪರಿಣಾಮದ ಕಾರಣದಿಂದಾಗಿ ಇಂದಿನವರೆಗೂ ಮುಂದುವರಿಯುತ್ತಲೇ ಬಂದಿದೆ. ಮಾತ್ರವಲ್ಲ ಪ್ರಸಕ್ತ ಹಣಕಾಸು ವರ್ಷದಲ್ಲಿ ದಾಖಲೆಯ ಒಂದು ಲಕ್ಷ ಕೋಟಿ ರೂಪಾಯಿ ಅನುದಾನವನ್ನು ಆಕರ್ಷಿಸಿದ್ದು, ಕೋವಿಡ್-19 ಸಾಂಕ್ರಾಮಿಕದಿಂದ ಜರ್ಜರಿತವಾದ ಭಾರತದ ಆರ್ಥಿಕತೆಯಲ್ಲಿ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರಿಗೆ ಜೀವನಾಧಾರವಾಗಿ ಪರಿಣಮಿಸಿದೆ.
ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿ (ಎನ್‌ಎಸಿ) ಈ ಯೋಜನೆಯ ಕರಡು ಸಿದ್ಧಪಡಿಸಿದ ಬಳಿಕ ಸಿಂಗ್ ಇದಕ್ಕೆ ಪ್ರಮುಖ ಒತ್ತು ನೀಡಿದರು. ಕಾಂಗ್ರೆಸ್‌ನ ಕನಿಷ್ಠ ಮೂರು ಹಿರಿಯ ತಲೆಗಳಿಗೆ ಯೋಜನೆಯ ಪ್ರಯೋಜನ ಒಪ್ಪಿತವಾಗದ ಕಾರಣದಿಂದ ಮತ್ತು ಇದು ಸಾರ್ವಜನಿಕ ಹಣ ಸೋರಿಕೆಯಾಗಲು ಕಾರಣವಾಗುತ್ತದೆ ಎಂಬ ಅಭಿಪ್ರಾಯ ಹೊಂದಿದ ಕಾರಣ ಯೋಜನೆ ಅಸಾಧಾರಣ ವಿಳಂಬ ಕಂಡಿತ್ತು.

ಒಂದು ದಿನ ಮಧ್ಯಾಹ್ನ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸಂಸತ್ ಭವನದ ಸೆಂಟ್ರಲ್ ಹಾಲ್ ಬಳಿ ಹಾದು ಹೋಗುತ್ತಿದ್ದಾಗ, ಹತಾಶರಾಗಿ ಸಿಂಗ್, ಅವರ ಬಳಿ ತೆರಳಿ ಯೋಜನೆ ರೂಪಿಸುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಮಾಹಿತಿ ನೀಡಿದರು.

ಕೆಲವೇ ನಿಮಿಷಗಳಲ್ಲಿ ಗಾಂಧಿ, ಅಂದಿನ ರಕ್ಷಣಾ ಸಚಿವ ಹಾಗೂ ನರೇಗಾ ಕುರಿತ ಸಚಿವರ ಗುಂಪಿನ ಮುಖ್ಯಸ್ಥರಾಗಿದ್ದ ಪ್ರಣವ್ ಮುಖರ್ಜಿಯವರನ್ನು ಕರೆದು ಯೋಜನೆಗೆ ವೇಗ ನೀಡಲು ಸೂಚಿಸಿದರು. ಮರುದಿನದಿಂದಲೇ ಕಡತಗಳು ವೇಗವಾಗಿ ಹರಿದಾಡಿದವು ಹಾಗೂ ಭಾರತದ ಮೊಟ್ಟಮೊದಲ ಉದ್ಯೋಗ ಖಾತರಿ ಯೋಜನೆ 2006ರ ಫೆಬ್ರವರಿಯಲ್ಲಿ ಅಂದರೆ ಯುಪಿಎ ಸರಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳ ಬಳಿಕ 200 ಜಿಲ್ಲೆಗಳಲ್ಲಿ ಜಾರಿಗೆ ಬಂತು.

ರಘುವಂಶ ಪ್ರಸಾದ್ ಸಿಂಗ್ ಅವರಿಗೆ ಪ್ರಮುಖ ಸಾಮಾಜಿಕ ವಲಯದ ಸಚಿವಾಲಯದ ಹೊಣೆ ವಹಿಸಲಾಯಿತು ಹಾಗೂ ಅವರು ರೂಪಿಸಿದ ಹಲವಾರು ಕಲ್ಯಾಣ ಯೋಜನೆಗಳು ಮಾದರಿ ಯೋಜನೆಗಳಾದವು ಹಾಗೂ ಯುಪಿಎ ಆಡಳಿತದ ಮೈಲುಗಲ್ಲುಗಳೆನಿಸಿಕೊಂಡವು. ಗ್ರಾಮೀಣ ಕಲ್ಯಾಣ ಯೋಜನೆಗಳು ರಾಜಕೀಯವಾಗಿಯೂ ಮಹತ್ವ ಪಡೆದು, ಪ್ರಭಾವಿ ಎನ್‌ಎಸಿ ಕೂಡಾ ಈ ವಲಯಕ್ಕೆ ಹೆಚ್ಚಿನ ಒತ್ತು ನೀಡಿತು.

ರಘುವಂಶ ಪ್ರಸಾದ್ ಸಿಂಗ್ ಒಮ್ಮೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದು, ಅಗ್ರ ಶ್ರೇಣಿಯ ಸಂಪುಟ ದರ್ಜೆ ಸಚಿವರೊಬ್ಬರು ಬಡವರ ವಿರೋಧಿ ಎಂದು ಕೆಂಡ ಕಾರಿದ್ದರು. ಅಂದಿನ ಯೋಜನಾ ಆಯೋಗದ ಅಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಈ ಸಂದರ್ಭದಲ್ಲಿ ಮಧ್ಯಸ್ಥಿಕೆಗೆ ಪ್ರಯತ್ನಿಸಿದರು. ಈ ಪತ್ರದಿಂದ ಹಿರಿಯ ಸಚಿವರಿಗೆ ನೋವಾಗಿದೆ ಎಂದು ಸಿಂಗ್ ಅವರಿಗೆ ಹೇಳಿದ ಅಹ್ಲುವಾಲಿಯಾ, ಗ್ರಾಮೀಣ ಯೋಜನೆಗಳಿಂದ ಪ್ರಗತಿ ಹೊಂದಿದ ಕೆಲ ಗ್ರಾಮಗಳಿಗೆ ಅವರನ್ನು ಕರೆದೊಯ್ಯುವಂತೆ ಸಲಹೆ ಮಾಡಿದರು. ಇದಕ್ಕೆ ಖಡಕ್ಕಾಗಿ ರಘುವಂಶ ಪ್ರಸಾದ್ ಸಿಂಗ್ ''ಇಲ್ಲ'' ಎಂದು ಪ್ರತಿಕ್ರಿಯಿಸಿದರು. ''ಅವರು ನನ್ನೊಂದಿಗೆ ಉತ್ತರ ಬಿಹಾರಕ್ಕೆ ಕಡುಬೇಸಿಗೆಯಲ್ಲಿ ಬಂದು ವಿದ್ಯುತ್ ಸಂಪರ್ಕ ಇಲ್ಲದ ಗ್ರಾಮದಲ್ಲಿ ಕನಿಷ್ಠ ಮೂರು ರಾತ್ರಿ ಕಳೆಯಲಿ. ಆಗ ಮಾತ್ರ ಭಾರತದ ಹಳ್ಳಿಗಳ ಬದುಕು ಹೇಗಿರುತ್ತದೆ ಎನ್ನುವುದು ಅವರಿಗೆ ಅರ್ಥವಾಗುತ್ತದೆ'' ಎಂದು ತೀಕ್ಷ್ಣವಾಗಿ ಹೇಳಿದರು.

ಸಂಪುಟ ಸಭೆಯಲ್ಲಿ ಸಿಂಗ್ ಅವರು ನರೇಗಾ ನಿಧಿ ಅಗತ್ಯತೆ ಕುರಿತ ಸಂಕೀರ್ಣ ಲೆಕ್ಕಾಚಾರಗಳನ್ನು ಮೌಖಿಕವಾಗಿ ಮಂಡಿಸಿದಾಗ ಎಲ್ಲ ಸಹೋದ್ಯೋಗಿ ಸಚಿವರು ಮೂಕವಿಸ್ಮಿತರಾದರು. ಗಣಿತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಸಿಂಗ್, ರಾಜಕೀಯ ಪ್ರವೇಶಿಸುವ ಮುನ್ನ ಗಣಿತ ಬೋಧಿಸುತ್ತಿದ್ದರು ಎಂಬ ಅರಿವು ಇಲ್ಲದ ಸಚಿವರೊಬ್ಬರು, ''ನೀವು ಇಷ್ಟು ಒಳ್ಳೆಯ ಗಣಿತ ಯಾವಾಗ ಕಲಿತಿರಿ'' ''ಎಂದು ಪ್ರಶ್ನಿಸಿದರು. ಇದಕ್ಕೆ ಸಿಂಗ್'' ನೀವು ಹುಟ್ಟುವ ಮುನ್ನವೇ ನಾನು ಗಣಿತ ಕಲಿತಿದ್ದೆ! ಎಂದಿದ್ದರು.

ಅಂಗವಿಕಲರಿಗೆ ಮತ್ತು ವಿಧವೆಯರಿಗೆ ಪಿಂಚಣಿ ಯೋಜನೆ ಆರಂಭಿಸುವಲ್ಲಿ ಹಾಗೂ ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆ (ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ-1985) ಯನ್ನು ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೆ ವಿಸ್ತರಿಸುವಲ್ಲಿ ಕೂಡಾ ರಘುವಂಶ ಪ್ರಸಾದ್ ಪ್ರಮುಖ ಪಾತ್ರ ವಹಿಸಿದ್ದರು. ಇದು ಕೆಲಸ ಮಾಡುವ ಸಾಮರ್ಥ್ಯ ಇಲ್ಲದ ಗ್ರಾಮೀಣ ಬಡವರ ಪಾಲಿಗೆ ಸರಕಾರದ ಪ್ರಮುಖ ಯೋಜನೆಯಾಗಿದ್ದು, ಇಂದಿಗೂ ಮುಂದುವರಿದಿದೆ.

ಸಂಸದರಾಗಿದ್ದ ಸಂದರ್ಭದಲ್ಲಿ ರಘುವಂಶ ಪ್ರಸಾದ್ ಪ್ರತಿ ಶುಕ್ರವಾರ ತನ್ನ ಕ್ಷೇತ್ರದ ಬೇರೆ ಬೇರೆ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದರು. ಬಿಹಾರದ ವೈಶಾಲಿ ಕ್ಷೇತ್ರದಿಂದ ಐದು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದ ಅವರು, ಹಿಂದುಳಿದ ವರ್ಗಗಳ ರಾಜಕೀಯದ ಮೂಲಕ ಅಸ್ತಿತ್ವ ಹೊಂದಿದ ಪಕ್ಷದ ಮೇಲುಜಾತಿಯ ಆಸ್ತಿ ಎಂಬ ಮನ್ನಣೆ ಪಡೆದಿದ್ದರು. 1980ರ ದಶಕದಿಂದ ಪಕ್ಷದಲ್ಲಿದ್ದ ಸಿಂಗ್, ದಿಲ್ಲಿ ಎಐಐಎಂಎಸ್ ಆಸ್ಪತ್ರೆಯ ಹಾಸಿಗೆಯಿಂದ ಸೆಪ್ಟಂಬರ್ 11ರಂದು ಕೈಬರಹದ ರಾಜೀನಾಮೆ ಪತ್ರವನ್ನು ಕಳುಹಿಸುವವರೆಗೂ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಅವರ ನಿಷ್ಠಾವಂತ ಲೆಫ್ಟಿನೆಂಟ್ ಎನಿಸಿಕೊಂಡಿದ್ದರು.

ಕೃಪೆ: hindustantimes.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)