varthabharthi


ನಿಮ್ಮ ಅಂಕಣ

ಬ್ಯಾರಿ ಲಿಪಿ-ಒಂದು ಅನಿಸಿಕೆ

ವಾರ್ತಾ ಭಾರತಿ : 14 Sep, 2020
ಉಮರ್ ಟೀಕೆ, ಬೆಂಗಳೂರು

ಬ್ಯಾರಿ ಅಕಾಡಮಿಯ ವತಿಯಿಂದ ಬ್ಯಾರಿ ಭಾಷೆಯ ಲಿಪಿ ಲೋಕಾರ್ಪಣೆಗೊಂಡ ಹಿಂದಿನಿಂದಲೇ, ಪರ-ವಿರೋಧ ಚರ್ಚೆಗಳೂ ಪ್ರಾರಂಭವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಹತ್ತು ಹಲವಾರು ವಿಭಿನ್ನ ಅಭಿಪ್ರಾಯಗಳು ಹರಿದಾಡುತ್ತಿವೆ. ‘ವಾರ್ತಾಭಾರತಿ’ಯೂ ತನ್ನ ಯೂ-ಟ್ಯೂಬ್ ಚಾನಲ್‌ನಲ್ಲಿ, ‘ಬ್ಯಾರಿ ಲಿಪಿ ಬೇಕೇ? ಬೇಡವೇ?’ ಅನ್ನುವ ಒಂದು ಪರ-ವಿರೋಧ ಅಭಿಪ್ರಾಯಗಳ ಕಾರ್ಯಕ್ರಮವನ್ನು ಅದಾಗಲೇ ನಡೆಸಿಕೊಟ್ಟಿದೆ. ಈ ಎಲ್ಲಾ ಚರ್ಚೆಗಳ ಪ್ರತಿಪಾದನೆ ಯಾವ ಕಡೆಗಿದ್ದರೂ ಪರವಾಗಿಲ್ಲ. ಇನ್ನು ಶೈಶವಾವಸ್ಥೆಯಲ್ಲಿರುವ ಬ್ಯಾರಿ ಸಾಹಿತ್ಯದ ಹಿತದೃಷ್ಟಿಯಿಂದ ಮತ್ತು ಅದರ ಬೆಳವಣಿಗೆಗೆ, ಇಂತಹ ಚರ್ಚೆಗಳು ಬಹಳ ಅಗತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಬಗ್ಗೆ ನಾನು ಅತ್ತ ವಿರೋಧವೂ ಅಲ್ಲದ, ಇತ್ತ ಪರವೂ ಎನ್ನಲಾಗದ ನನ್ನ ಒಂದೆರಡು ಅಭಿಪ್ರಾಯಗಳನ್ನು ಇಲ್ಲಿ ಹೇಳುತ್ತಿದ್ದೇನೆ.

ಯಾವುದೇ ಒಂದು ಭಾಷೆ ಬೆಳೆಯಬೇಕಿದ್ದರೆ ಅದು ನಿಂತ ನೀರಾಗಬಾರದು. ಅದರಲ್ಲಿ ಅಪಾರವಾದ ಕೃಷಿ, ಅಧ್ಯಯನ, ಸಂಶೋಧನೆಗಳು ಆಗುತ್ತಾ ಇದ್ದು, ಅದು ನಿರಂತರವಾಗಿ ಹರಿಯುತ್ತಿರಬೇಕು. ಈ ದೃಷ್ಟಿಕೋನದಿಂದ ನೋಡಿದರೆ, ಬ್ಯಾರಿ ಲಿಪಿಯ ಸಂಶೋಧನಾತ್ಮಕವಾದಂತಹ ರಚನೆ ಮತ್ತು ಅನುಷ್ಠಾನದ ಈ ಒಂದು ಬೆಳವಣಿಗೆ ನಿಜವಾಗಿಯೂ ಸ್ವಾಗತಾರ್ಹ. ಆದರೆ ಈ ಚರ್ಚೆಯ ಮೂಲ ಪ್ರಶ್ನೆ ಅಲ್ಲೇ ಉಳಿದುಕೊಳ್ಳುತ್ತದೆ-‘ಸಂಶೋಧನೆ, ಅಧ್ಯಯನ ಎಲ್ಲಾ ಸರಿ. ಆದರೆ ಸಾರ್ವತ್ರಿಕವಾಗಿ ಏನೇನೂ ಅಗತ್ಯವಿಲ್ಲದ ಈ ಲಿಪಿಯ ರಚನೆ ಯಾವ ಪುರುಷಾರ್ಥಕ್ಕೆ?’ ಎಂಬುದು.

 ನಾವು ಈ ಒಂದು ಬೆಳವಣಿಗೆಯನ್ನು ಎರಡು ಆಯಾಮಗಳ ಮೂಲಕ ಪರಾಂಬರಿಸಬೇಕು. ಒಂದನೇಯದು, ‘ಜನ ಸಾಮಾನ್ಯರಿಗೆ ಈ ಲಿಪಿ ತಲುಪುವುದು ಎಂದು? ತಲುಪಿದರೂ ಏನು ಪ್ರಯೋಜನ?’ ಎಂಬುದು. ಜೊತೆಗೆ ಇದರಿಂದಾಗುವಂತಹ ಲಾಭ, ನಷ್ಟಗಳ ತುಲನೆ. ಈ ದೃಷ್ಟಿಕೋನದಿಂದ ನೋಡಿದರೆ, ಈ ಬೆಳವಣಿಗೆ ಒಂದು ಸಕಾರಾತ್ಮಕ ಬೆಳವಣಿಗೆ ಅಂತ ಅನಿಸುವುದಿಲ್ಲ. ಇದರ ಇನ್ನೊಂದು ಆಯಾಮ- ಸಂಶೋಧನೆ ಮತ್ತು ಅಧ್ಯಯನ. ಈ ದೃಷ್ಟಿಕೋನದಿಂದ ನಾವು ನೋಡಿದರೆ, ಭಾಷೆಯ ಬೆಳವಣಿಗೆಯ ದಿಕ್ಕಿನಲ್ಲಿ, ಬ್ಯಾರಿ ಲಿಪಿ ಒಂದು ಮಹತ್ವದ ಹೆಜ್ಜೆ ಅಂತ ಪರಿಗಣಿಸುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಇಲ್ಲಿ ನಾವು ಗಮನಿಸಬೇಕಾದ ಒಂದು ವಿಷಯ ಎಂದರೆ, ಭಾಷೆಯ ಹಿತದೃಷ್ಟಿಯಿಂದ ಕೈಗೆತ್ತಿಕೊಳ್ಳುವ ಎಲ್ಲಾ ಯೋಜನೆಗಳನ್ನೂ ನಾವು ತಕ್ಷಣದ ಲಾಭ-ನಷ್ಟಗಳ ದೃಷ್ಟಿಕೋನ ಒಂದರಿಂದಲೇ ವಿಶ್ಲೇಷಿಸುವುದು ಸರಿಯಾಗುವುದಿಲ್ಲ. ಆ ರೀತಿ ನೋಡಿದರೆ, ಉದಾಹರಣೆಗೆ, ಕನ್ನಡದಲ್ಲಿ ಹಳೆಗನ್ನಡದ ಕಲಿಕೆಗೆ, ಅಧ್ಯಯನಕ್ಕೆ ಮಹತ್ವವೇ ಇರುತ್ತಿರಲಿಲ್ಲ. ಆದರೆ ಒಂದು ಭಾಷೆಯ ಸರ್ವತೋಮುಖವಾದ ಪುಷ್ಟೀಕರಣಕ್ಕೆ ಇಂತಹ ತಕ್ಷಣಕ್ಕೆ ಲಾಭ ನಷ್ಟಗಳ ಅಂದಾಜಿಗೆ ನಿಲುಕದ, ಅಮೂರ್ತವಾದಂತಹ ಅಧ್ಯಯನಗಳು, ಸಂಶೋಧನೆಗಳು ಅದೆಷ್ಟು ಅಗತ್ಯ ಎಂದು ನಾವು ಅನುಭವದಿಂದ ಕಂಡುಕೊಂಡಿದ್ದೇವೆ.

ಈ ಸಂದರ್ಭದಲ್ಲಿ ನಾವು ಗಮನದಲ್ಲಿಡಬೇಕಾದಂತಹ ಕೆಲವು ವಿಷಯಗಳಿವೆ.
1) ‘ಬ್ಯಾರಿ ಭಾಷೆಗೆ ಲಿಪಿಯಿಲ್ಲ. ಆದ್ದರಿಂದ ಇದರ ಬೆಳವಣಿಗೆ ಕುಂಠಿತವಾಗಬಹುದು’ ಎನ್ನುವ ವಾದದಲ್ಲಿ ಹುರುಳಿಲ್ಲ. ಪ್ರಪಂಚದ ಪ್ರಬಲ ಭಾಷೆಗಳಾದ ಇಂಗ್ಲಿಷ್, ಫ್ರೆಂಚ್, ಜರ್ಮನ್ ಇನ್ನ್ನೂ ರೋಮನ್‌ನಿಂದ ಎರವಲು ಪಡೆದ ಲಿಪಿಗಳ ಮೂಲಕವೇ ಬೆಳೆದು ವಿಶ್ವವ್ಯಾಪಿಯಾಗಿರುವುದು.

2) ಬ್ಯಾರಿ ಬರವಣಿಗೆಗೆ ಇಂದು ನಾವು ವ್ಯಾಪಕವಾಗಿ ಬಳಸುತ್ತಿರುವುದು ಕನ್ನಡ ಲಿಪಿಯನ್ನೇ. ಈ ರೀತಿ ಬರೆಯುವಾಗ, ಬ್ಯಾರಿ ಮತ್ತು ಕನ್ನಡದ ಉಚ್ಚಾರಣೆಯಲ್ಲಿರುವ ಕೆಲವೊಂದು ಸೂಕ್ಷ್ಮವಾದ ವ್ಯತ್ಯಾಸಗಳಿಂದಾಗಿ, ಒಂದಷ್ಟು ಇತಿಮಿತಿಗಳನ್ನು ಎದುರಿಸ ಬೇಕಾಗುತ್ತದೆ. ಉದಾಹರಣೆಗೆ, ಕನ್ನಡ ಮತ್ತು ಬ್ಯಾರಿ ಭಾಷೆಯಲ್ಲಿ ‘ನ’ ಅಕ್ಷರದ ಉಚ್ಚಾರಣೆಯಲ್ಲಿರುವ ವ್ಯತ್ಯಾಸ. ಅಥವಾ, ಪ್ರಶ್ನೆ ಮತ್ತು ಉತ್ತರ ರೂಪದಲ್ಲಿ ಬರುವಾಗ ಬ್ಯಾರಿ ಭಾಷೆಯಲ್ಲಿ ‘ಎ’ ಸ್ವರ ಉಚ್ಚಾರಣೆಯಲ್ಲಿ ಅನುಸರಿಸಬೇಕಾದ ಭಿನ್ನತೆ. ಆದರೆ ಇಂತಹ ವ್ಯತ್ಯಾಸಗಳಿರುವುದು ಬೆರಳೆಣಿಕೆಯಷ್ಟು ಮಾತ್ರ. ಅದಕ್ಕಾಗಿ ನಮ್ಮದೇ ಒಂದು ಲಿಪಿಯ ಅಗತ್ಯವಿದೆ ಅಂತ ವಾದ ಮಾಡುವುದು ತೀರಾ ಬಾಲಿಶ. ಈ ಸಮಸ್ಯೆಗಿರುವ ಕ್ಷಿಪ್ರ ಮತ್ತು ಸುಲಭ ಪರಿಹಾರ ಎಂದರೆ, ಕನ್ನಡದ ಲಿಪಿಗಳಲ್ಲೇ ಒಂದೆರಡು ಸಣ್ಣಪುಟ್ಟ ಪರಿಷ್ಕರಣೆಗಳನ್ನು ತರುವುದು ಮತ್ತು ಈ ಪರಿಷ್ಕರಣೆಗಳು ಈಗಿರುವ ಮುದ್ರಣ ಸೌಕರ್ಯಗಳ ಇತಿಮಿತಿಯ ಒಳಗೇ ಇರುವಂತೆ ನೋಡಿಕೊಳ್ಳುವುದು. ಈ ನಿಟ್ಟಿನಲ್ಲಿ ಬ್ಯಾರಿ ಅಕಾಡಮಿಯು ಕಾರ್ಯಪ್ರವೃತ್ತವಾದರೆ ಅದು ತಕ್ಷಣವೇ ಪ್ರಯೋಜನಕ್ಕೆ ಬರುವಂತಹ ಒಂದು ಯೋಜನೆ ಯಾಗಬಹುದು.

3) ಇಂದು ಕನ್ನಡ ಲಿಪಿಯ ಸಾಧಾರಣ ಪರಿಚಯವಿರುವ ಬ್ಯಾರಿಗಳು, ವಿಶೇಷವಾಗಿ ಮಕ್ಕಳು ಬ್ಯಾರಿ ಲೇಖನಗಳನ್ನು ಕನ್ನಡ ಲಿಪಿಯ ಮೂಲಕವೇ ಅನಿವಾರ್ಯವಾಗಿ ಓದಬೇಕಾಗಿರುವುದರಿಂದ ಕನ್ನಡ ಲಿಪಿಯ ಜೊತೆಗಿರುವ ಅವರ ಪರಿಚಯ ಸದೃಢವಾಗುತ್ತಿದೆ. ಮುಂದೆ ಬ್ಯಾರಿ ಲಿಪಿ ಪ್ರಚಲಿತಕ್ಕೆ ಬಂದರೆ, ಅಥವಾ ಬ್ಯಾರಿ ಲಿಪಿಯನ್ನು ಹೇರುವ ಹಠಾತ್ ಪ್ರಯತ್ನ ನಡೆದರೆ, ಇದರಿಂದಾಗಿ ಬ್ಯಾರಿಗಳು ಕನ್ನಡದ ಜೊತೆಗಿನ ಕನಿಷ್ಠ ಸಂಬಂಧವನ್ನು ಕಳಕೊಳ್ಳುವಂತಹ ಹಾಗೆಯೇ ಬ್ಯಾರಿ ಸಾಹಿತ್ಯದ ಬೆಳವಣಿಗೆಯಲ್ಲಿಯೂ ವ್ಯತ್ಯಯವಾಗುವಂತಹ ಅಪಾಯವಿದೆ. ಆದರೆ ಹಾಯೇ ಆಗುವಂತಹ ಸಂಭವ ತೀರಾ ಕಡಿಮೆ ಅಂತಲೇ ಹೇಳಬಹುದು. ಆದ್ದರಿಂದ ಈ ಬಗ್ಗೆ ಚಿಂತಿಸಿ, ವಿರೋಧ ವ್ಯಕ್ತ ಪಡಿಸುವ ಅಗತ್ಯವಿಲ್ಲ. ಆದರೆ ಒಂದು ವಿಚಾರ; ಇಲ್ಲಿ ಮತ್ತೆ ಅದೇ ಪ್ರಶ್ನೆ ತಲೆಎತ್ತುತ್ತದೆ- ‘ಹಾಗಾದರೆ ಈ ಲಿಪಿ ನಮಗೆ ಏಕೆ ಬೇಕು?’ ಎನ್ನುವುದು.

4) ಹಾಗೆಯೇ ಬ್ಯಾರಿ ಲಿಪಿಯ ಆಕಾರ, ರೂಪ, ಶೈಲಿಯ ಬಗ್ಗೆಯೂ ಟೀಕೆಗಳು ಕೇಳಿ ಬರುತ್ತಿವೆ. ರೋಮನ್ ಲಿಪಿಯ ಸರಳ ರೇಖೆ ಮತ್ತು ವೃತ್ತಗಳನ್ನೊಳಗೊಂಡ ಜ್ಯಾಮಿತಿಯ ಆಕಾರಕ್ಕೆ ಹೊಂದುವಂತಹ ಲಿಪಿಯಾಗಿದ್ದು, ಇದರ ಕಲಿಕೆ ಬಹಳ ಸುಲಭ. ಆದರೆ ಭಾರತದಲ್ಲಿ ದ್ರಾವಿಡ ಮೂಲದ ಲಿಪಿಗಳು ಇರಲಿ, ಅಥವಾ ದೇವನಾಗರಿ ಲಿಪಿಗಳಿರಲಿ, ಪ್ರತಿಯೊಂದು ಅಕ್ಷರವೂ ಬೇರೆ ಬೇರೆ ಅನಿರ್ದಿಷ್ಟ ಆಕಾರಗಳನ್ನು ಹೊಂದಿದೆ. ಚೈನೀಸ್ ಲಿಪಿ ಅಂತೂ ಇನ್ನ್ನೂ ಕ್ಲಿಷ್ಟಕರ. ಆದರೆ ಕಲಿಯಬೇಕಾದ ಅನಿವಾರ್ಯತೆ ಬಂದಾಗ, ಎಲ್ಲವೂ ಸಾಧ್ಯ. ಇಲ್ಲಿ ‘ಲಿಪಿ ಬೇಕೇ, ಬೇಡವೇ’ ಎನ್ನುವ ಮೂಲಭೂತವಾದಂತಹ ಚರ್ಚೆಯ ಮಧ್ಯೆ, ಲಿಪಿಯ ರೂಪ, ಶೈಲಿಯ ಬಗೆಗಿನ ಚರ್ಚೆ ಅಪ್ರಸ್ತುತ ಅಂತ ನನ್ನ ಭಾವನೆ.

5) ನಾನು ಮುಂಚೆಯೇ ಹೇಳಿದಂತೆ, ತಕ್ಷಣದ ಸಾರ್ವತ್ರಿಕ ಉಪಯೋಗಕ್ಕೆ ಅಲ್ಲದಿದ್ದರೂ, ಸಂಶೋಧನೆ ಹಾಗೂ ಅಧ್ಯಯನದ ದೃಷ್ಟಿಯಿಂದ ಇದೊಂದು ಸಕಾರಾತ್ಮಕವಾದ ಬೆಳವಣಿಗೆ. ಇದನ್ನು ಹಠಾತ್ ಆಗಿ ಹೇರುವ ಪ್ರಯತ್ನವಾಗಬಾರದು ನಿಜ. ಹಾಗಂತ ಇದರ ಅನುಷ್ಠಾನದ ಕಡೆಗೆ ತೀರಾ ಗಮನ ಕೊಡದೆ, ಇದೊಂದು ಪುಸ್ತಕದ ರೂಪದಲ್ಲಿ ಅಕಾಡಮಿಯ ಬೀರುವಿನಲ್ಲಿ ಕೊಳೆಯುವಂತೆಯೂ ಆಗಬಾರದು. ಇಷ್ಟೊಂದು ದೊಡ್ಡ ಪ್ರಯತ್ನದ ಫಲವಾಗಿ ಹುಟ್ಟಿದ ಬ್ಯಾರಿ ಲಿಪಿಯನ್ನು ಜತನದಿಂದ ಕಾಪಿಡುವಂತಹ ಜವಾಬ್ದಾರಿ ಅಕಾಡಮಿ ಮತ್ತು ನಮ್ಮೆಲ್ಲರ ಮೇಲಿದೆ. ಶಾಲೆಗಳಲ್ಲಿ ಬ್ಯಾರಿ ಒಂದು ಭಾಷೆಯಾಗಿ ಗುರುತಿಸಲ್ಪಟ್ಟು, ಅದರಲ್ಲಿ ಪಠ್ಯ ಪುಸ್ತಕಗಳು ಈಗಾಗಲೇ ಪ್ರಕಟವಾಗುತ್ತಿವೆ. ಬ್ಯಾರಿ ಲಿಪಿಯನ್ನು ಅಲ್ಲಿ ಒಂದು ಅಧ್ಯಾಯದ ರೂಪದಲ್ಲಿ ಪ್ರಕಟಿಸಿ ಪರಿಚಯಿಸಬಹುದು. ಹಾಗೆಯೇ ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದಲ್ಲೂ ಇದನ್ನು ದಾಖಲಿಸಿ, ಮುಂದಿನ ಅಧ್ಯಯನಕ್ಕೆ ಅನುವು ಮಾಡಿ ಕೊಡಬಹುದು. ಹಾಗೆ ಮಾಡಿದರೆ ಮಾತ್ರ, ಇಷ್ಟು ವರ್ಷಗಳ ಈ ಪ್ರಯತ್ನ ವ್ಯರ್ಥವಾಗದೆ, ತಕ್ಕಮಟ್ಟಿಗಾದರೂ ಈ ಲಿಪಿಯು ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು, ಮುಂದಿನ ಪೀಳಿಗೆಗೆ ಹಸ್ತಾಂತರಗೊಳ್ಳಬಹುದು.

ಇಷ್ಟೆಲ್ಲಾ ಹೇಳಿದ ಮೇಲೂ ಉಳಿದುಕೊಳ್ಳುವ ಪ್ರಶ್ನೆ- ‘‘ಇದರಿಂದ ಯಾರಿಗೆ, ಏನು ಲಾಭ?’’ ಎಂಬುದು. ಈ ಬಗ್ಗೆ ಅದೆಷ್ಟೋ ಚರ್ಚಿಸಬಹುದು ಮತ್ತು ಚರ್ಚಿಸಲೇಬೇಕು. ಇದು ಭಾಷೆಯ ಬೆಳವಣಿಗೆಗೆ ಅಗತ್ಯ ಕೂಡ.

ಬಹುಶಃ ಈ ಒಂದು ಪ್ರಯತ್ನಕ್ಕೆ ಕೈಹಾಕುವ ಮುಂಚೆ ನನ್ನ ಅಭಿಪ್ರಾಯವನ್ನು ಕೇಳಿದ್ದರೆ, ನಾನು ಅದನ್ನು ವಿರೋಧಿಸುತ್ತಿದ್ದೆನೋ ಏನೋ. ಆದರೆ ಇಂದು ಇಷ್ಟೊಂದು ಅನುಭವಿಗಳ ಸತತ ಪ್ರಯತ್ನದ ಫಲವಾಗಿ, ಬ್ಯಾರಿ ಭಾಷೆಗೆ ತನ್ನದೇ ಆದಂತಹ ಒಂದು ಲಿಪಿಯನ್ನು ನಾವು ಹುಟ್ಟು ಹಾಕುವುದರಲ್ಲಿ ಯಶಸ್ವಿಯಾಗಿರುವಾಗ, ಇದನ್ನು ನಾವೆಲ್ಲರೂ ಅಭಿಪ್ರಾಯ ಭೇದ ಮರೆತು ಮುಕ್ತ ಹೃದಯದಿಂದ ಸ್ವಾಗತಿಸಬೇಕು ಎಂದು ನನ್ನ ಕೇಳಿಕೆ.

‘‘ಭಾಷೆ ಎನ್ನುವುದು ಒಂದು ಸಂವಹನದ ಸಾಧನ ಮಾತ್ರ’’ ಎಂದು ಕೆಲವರ ಪ್ರತಿಪಾದನೆ. ‘‘ಇಲ್ಲ, ಭಾಷೆ ಎನ್ನುವುದು ನಮ್ಮ ಗುರುತು, ಅದು ನಮ್ಮನ್ನು ನಮ್ಮ ನೆಲದೊಂದಿಗೆ, ಸಂಸ್ಕೃತಿಯೊಂದಿಗೆ ಬೆಸೆಯುವ ಒಂದು ಕೊಂಡಿ. ಇದು ಯಾವುದೇ ಒಂದು ಸಮಾಜದ, ಸಮುದಾಯದ, ನೆಲದ ಸಾಮೂಹಿಕ ಅಭಿವೃದ್ಧಿಗೆ ಅತ್ಯಗತ್ಯ’’ ಎಂದು ಹೇಳುವುದು ತಿಳಿದವರ ಅನುಭವದ ನುಡಿ. ಈ ಎರಡರಲ್ಲಿ ನಮ್ಮ ಒಲವು ಯಾವ ಪ್ರತಿಪಾದನೆಯ ಕಡೆಗೆ ಇರುತ್ತದೋ, ಅದನ್ನು ಹೊಂದಿಕೊಂಡು ಇಂದಿನ ಈ ಚರ್ಚೆಯಲ್ಲಿ ನಮ್ಮ ವಿರೋಧ ಅಥವಾ ಪರದ ಕಡೆಗಿನ ನಿಲುವು ಇರುತ್ತದೆ ಅಂತ ನನ್ನ ಅನಿಸಿಕೆ.

ಕೊನೆಯದಾಗಿ ಒಂದು ಮಾತು. ಪ್ರಪಂಚದಲ್ಲಿ ಇಂದು ನಡೆಯುತ್ತಿರುವಂತಹ ಕ್ಷಿಪ್ರ ಬೆಳವಣಿಗೆಗಳನ್ನು ನೋಡಿದರೆ, ಮುಂದಿನ ದಿನಗಳಲ್ಲಿ ಅದೆಷ್ಟೋ ಭಾಷೆಗಳು, ನಮ್ಮೆಲ್ಲಾ ಪ್ರಯತ್ನಗಳ ಹೊರತಾಗಿಯೂ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿವೆ ಎಂದು ಚಿಂತಕರು ಹೇಳುತ್ತಾ ಇದ್ದಾರೆ. ಹಾಗಿರುವಾಗ, ಇನ್ನೂ ಬಾಲ್ಯಾವಸ್ಥೆಯನ್ನೇ ದಾಟದ ಬ್ಯಾರಿಯಂತಹ ಒಂದು ಭಾಷೆಗೆ, ಬರೆಯಲು ಅನುಕೂಲವಾದಂತಹ ಕನ್ನಡ ಲಿಪಿ ಇರುವಾಗ, ಅದರದೇ ಸ್ವಂತ ಲಿಪಿಯನ್ನು ರಚಿಸುವ, ಅನುಷ್ಠಾನಗೊಳಿಸುವ ಭಗೀರಥ ಪ್ರಯತ್ನದ ಅಗತ್ಯವಿತ್ತೇ? ಎನ್ನುವ ಪ್ರಶ್ನೆ ಏಳುವುದು ಸ್ವಾಭಾವಿಕ. ಆದರೆ ಇದಕ್ಕೆ ಉತ್ತರ ಕಾಲವೇ ಕೊಡಬೇಕು. ಇಂದೇನಿದ್ದರೂ ಈ ಲಿಪಿಯ ರಚನೆ ಆಗಿದೆ. ಇದನ್ನು ಯಾವ ರೀತಿ ಬ್ಯಾರಿ ಭಾಷೆಯ ಬೆಳವಣಿಗೆಗೆ ಪೂರಕವಾಗಿ ನಾವು ಉಪಯೋಗಿಸಬಹುದು ಎಂಬುದರ ಬಗ್ಗೆ ಮುಂದಿನ ಚರ್ಚೆಗಳಾಗಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)