varthabharthi


ಕರ್ನಾಟಕ

ಜೈಲಲ್ಲಿರುವ ಜಯಲಲಿತಾ ಆಪ್ತೆ ಶಶಿಕಲಾ ಬಿಡುಗಡೆ ದಿನಾಂಕ ತಿಳಿಸಿದ ಆರ್‌ಟಿಐ ಅರ್ಜಿ

ವಾರ್ತಾ ಭಾರತಿ : 15 Sep, 2020

ಬೆಂಗಳೂರು, ಸೆ.15: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ನಾಲ್ಕು ವರ್ಷಗಳ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ 2021ರ ಜನವರಿ ಅಂತ್ಯಕ್ಕೆ ಬಿಡುಗಡೆಯಾಗಲಿದ್ದಾರೆ. ಹಾಗೊಂದು ಬಾರಿ ಅವರಿಗೆ ವಿಧಿಸಿರುವ ದಂಡ ಪಾವತಿಸಲು ವಿಫಲವಾದರೆ 2022ರ ಫೆ.27ರವರೆಗೆ ಇನ್ನೂ ಒಂದು ವರ್ಷ ಕಾರಾಗೃಹ ಶಿಕ್ಷೆಗೆ ಒಳಗಾಗಬೇಕಿದೆ.

ಶಶಿಕಲಾ ಅವರ ಬಿಡುಗಡೆ ದಿನಾಂಕದ ಕುರಿತು ಬೆಂಗಳೂರು ಮೂಲದ ಸಾಮಾಜಿಕ ಕಾರ್ಯಕರ್ತ ಟಿ.ನರಸಿಂಹಮೂರ್ತಿ ಅವರು ಆರ್‍ಟಿಐ ಕಾಯ್ದೆ ಅಡಿಯಲ್ಲಿ ಕೇಳಲಾಗಿದ್ದ ಮಾಹಿತಿಗೆ ಬೆಂಗಳೂರು ಪರಪ್ಪನ ಅಗ್ರಹಾರ ಕಾರಾಗೃಹದ ಸಾರ್ವಜನಿಕ ಮಾಹಿತಿ ವಿಭಾಗದ ಅಧೀಕ್ಷಕಿ ಆರ್.ಲತಾ ಈ ಮಾಹಿತಿ ನೀಡಿದ್ದಾರೆ.

ಕಾರಾಗೃಹ ದಾಖಲೆಗಳ ಪ್ರಕಾರ ಖೈದಿ ಸಂಖ್ಯೆ 9234ರ ಶಶಿಕಲಾ ಬಿಡುಗಡೆಯ ಸಂಭವನೀಯ ದಿನಾಂಕ 27, 2021 ಆಗಿದೆ. ಅಲ್ಲದೆ, ಶಶಿಕಲಾ ಪೆರೋಲ್ ಸೌಲಭ್ಯವನ್ನು ಬಳಸಿದರೆ ಬಿಡುಗಡೆಯ ದಿನಾಂಕ ಬದಲಾಗಬಹುದು ಎಂದೂ ಅವರು ಮಾಹಿತಿ ನೀಡಿದ್ದಾರೆ.

2017ರ ಫೆ.15ರಿಂದ ಶಶಿಕಲಾ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಯೇ ಇದ್ದಾರೆ. ಅವರಿಗೆ ಕಾರಾಗೃಹ ಶಿಕ್ಷೆಯ ಜೊತೆಗೆ 10 ಕೋಟಿ ರೂ.ದಂಡವನ್ನೂ ನ್ಯಾ.ಮೈಕಲ್ ಕನ್ನಾ ಅವರು ವಿಧಿಸಿ ತೀರ್ಪು ನೀಡಿದ್ದರು. ಇನ್ನು ಶಶಿಕಲಾ ಅವರ ಸೋದರಳಿಯ ಸುಧಾಕರನ್ ಮತ್ತು ಅವರ ಆಪ್ತ ಜೆ.ಇಳವರಸಿ ಸಹ ಇದೇ ಪ್ರಕರಣದಲ್ಲಿ ಕಾರಾಗೃಹ ಸೇರಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)