varthabharthi


ಕರ್ನಾಟಕ

ಸದಾಶಿವ ವರದಿ ಜಾರಿಗೆ ಮುಂದಾದರೆ ಉಗ್ರ ಹೋರಾಟ: ದಲಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ರಾಮಕೃಷ್ಣಪ್ಪ

ವಾರ್ತಾ ಭಾರತಿ : 15 Sep, 2020

ಬೆಂಗಳೂರು, ಸೆ.15: ಸದಾಶಿವ ವರದಿ ಅವೈಜ್ಞಾನಿಕವಾಗಿದ್ದು, ಈ ವರದಿಯನ್ನು ಜಾರಿ ಮಾಡಲು ಮುಂದಾದರೆ ಸರಕಾರದ ವಿರುದ್ಧ ರಾಜ್ಯದ ಎಲ್ಲಾ ತಾಲೂಕು ಕೇಂದ್ರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ದಲಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎನ್. ರಾಮಕೃಷ್ಣಪ್ಪ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಪರಿಶಿಷ್ಟ ಜಾತಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 101 ಜಾತಿಗಳಿದ್ದು, ಇದುವರೆಗೂ ಅವರೆಲ್ಲರೂ ಅಣ್ಣ ತಮ್ಮಂದಿರಂತೆ ಸಂಘಟನೆಗಳಲ್ಲಿ ತೊಡಗಿಕೊಂಡು ನಾಡಿನ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಎಲ್ಲಾ ಜಾತಿಯ ಬಡವರ ಸುಖ ದುಃಖಗಳಿಗೆ ಸ್ಪಂದಿಸುತ್ತಾ, ಸಮಾಜ ಸೇವೆ ಮಾಡಿಕೊಂಡು ದಲಿತರು ಎಂಬ ಅಜೆಂಡಾ ಇಟ್ಟುಕೊಂಡು ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ.

ಹಲವು ವರ್ಷಗಳಿಂದೀಚೆಗೆ ಸದಾಶಿವ ಆಯೋಗ ವರದಿ ಎನ್ನುವ ಅವೈಜ್ಞಾನಿಕ  ವರದಿಯನ್ನು ಸರ್ಕಾರದ ಮುಖಾಂತರ ತಯಾರಿಸಿ ಈಗಾಗಲೇ ಛಿದ್ರ ಛಿದ್ರವಾಗಿರುವ ದಲಿತರಲ್ಲಿ ಮತ್ತೊಮ್ಮೆ ಒಳಮೀಸಲಾತಿ ಎಂಬ ಹೆಸರಿನಲ್ಲಿ ದಲಿತರನ್ನು ಒಡೆಯುವ ಅಸ್ತ್ರವನ್ನು ಕೆಲವು ಭ್ರಷ್ಟ ರಾಜಕಾರಣಿಗಳು ಮತ್ತು ಕೆಲವು ಜಾತಿ ರಾಜಕಾರಣಿಗಳು ದಲಿತರ ಹೆಸರಿನಲ್ಲಿ ಸದಾಶಿವ ಆಯೋಗವನ್ನು ವರದಿ ಜಾರಿ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದು, ಅದಕ್ಕೆ ನಮ್ಮ ಸಂಘಟನೆ ವಿರೋಧವಿದೆ ಎಂದು ಅವರು ತಿಳಿಸಿದ್ದಾರೆ.

ಸದಾಶಿವ ಆಯೋಗದ ವರದಿಯಲ್ಲಿ ಏನಿದೆ ಎಂದು ಇದುವರೆಗೂ ಬಹಿರಂಗಪಡಿಸದೆ ಸುಳ್ಳು ಅಂಕಿ ಅಂಶಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಆದ್ದರಿಂದ ಮೊದಲು ಸದಾಶಿವ ಆಯೋಗದ ವರದಿಯಲ್ಲಿ ಯಾವ ಯಾವ ಜಾತಿಗೆ ಎಷ್ಟೆಷ್ಟು ಮೀಸಲಾಗಿ ನಿಗದಿ ಪಡಿಸಿದೆ ಎಂದು ಬಹಿರಂಗ ಪಡಿಸಲಿ. ನಂತರ ಚರ್ಚೆಗೆ ಇಟ್ಟು ಎಲ್ಲಾ 101 ಜಾತಿಗಳ ಜನರ ಮುಖಂಡರನ್ನು ಮತ್ತು ಸಂಘಟನೆಗಳ ನಾಯಕರನ್ನು ಗಣನೆಗೆ ತೆಗೆದುಕೊಂಡು ಒಂದು ವೇಳೆ ಒಳ ಮೀಸಲಾತಿ ಮಾಡಲೇಬೇಕು ಎಂಬಂತಹ ಸಂದರ್ಭ ಬಂದಾಗ 101 ಜಾತಿಗೆ ಶೇಕಡಾ 1.5ರಷ್ಟು ಇರುವ ಮೀಸಲಾತಿಯನ್ನು ಸರಕಾರವು ಶೇ.20ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಯಾವುದೇ ಕಾರಣಕ್ಕೂ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಿ ಈಗ ಅಣ್ಣ ತಮ್ಮಂದಿರಂತಿರುವ ಹೊಲೆಯ, ಮಾದಿಗ, ಭೋವಿ, ಲಂಬಾಣಿ, ಕೊರಮ, ಕೊರಚ ಮತ್ತಿತರ ಎಲ್ಲಾ 101 ಜಾತಿಗಳನ್ನು ಛಿದ್ರ, ಛಿದ್ರ ಮಾಡಬಾರದೆಂದು ಸರಕಾರದಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ, ಒಂದು ವೇಳೆ ಸರ್ಕಾರವೇನಾದರೂ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲು ಮುಂದಾದರೆ ಅಂತಹ ಸರ್ಕಾರದ ವಿರುದ್ಧ ಸಂಘಟನೆಯ ವತಿಯಿಂದ ರಾಜ್ಯದ ಎಲ್ಲಾ ತಾಲೂಕು ಕೇಂದ್ರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ದಲಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎನ್. ರಾಮಕೃಷ್ಣಪ್ಪ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)