varthabharthi


ನಿಮ್ಮ ಅಂಕಣ

ಡಿಜಿಟಲ್ ಕಂದಕವನ್ನು ಹೇಗೆ ತುಂಬಬಹುದು?

ವಾರ್ತಾ ಭಾರತಿ : 16 Sep, 2020
ಅನಿಲ್ ಕೆ. ಅಂತೋನಿ

ಕೋವಿಡ್-19 ನಮ್ಮ ಬದುಕಿನ ಮೇಲೆ ತಂತ್ರಜ್ಞಾನದ ಪ್ರಭಾವವನ್ನು ತೀವ್ರವಾಗಿ ಹೆಚ್ಚಿಸಿದೆ. ಪರಿಣಾಮವಾಗಿ ಯಾವುದನ್ನೇ ಆದರೂ ಆನ್‌ಲೈನ್‌ನಲ್ಲಿ ಕೊಂಡುಕೊಳ್ಳುವ ಅಥವಾ ಮಾರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ಆರೋಗ್ಯ ಸೌಕರ್ಯ/ಸವಲತ್ತು, ಸರಕಾರಿ ಸೇವೆಗಳು ಹಾಗೂ ಶಿಕ್ಷಣ ಆನ್‌ಲೈನ್‌ನಲ್ಲೇ ಸಿಗುತ್ತದೆ. ಪೇಮೆಂಟ್ ಗೇಟ್‌ವೇಗಗಳಿಂದಾಗಿ ನಗದುರಹಿತ ಪಾವತಿಗಳು ಸಾಧ್ಯವಾಗಿದೆ. ನಮಗೆ ಬೇಕಾದ ಊಟ ಮನೆಗೇ ಸರಬರಾಜು ಆಗುತ್ತದೆ. ನಮ್ಮ ಮನೆಗಳ ಒಳಗೆ ಆರಾಮವಾಗಿ ಕುಳಿತು ನಾವು ವಿದ್ಯಾರ್ಥಿಗಳಿಗೆ ಪಾಠ ಮಾಡಬಹುದು, ಅಧಿವೇಶನ ಅಥವಾ ಸಭೆಗಳನ್ನು ನಡೆಸಬಹುದು. ತಾಂತ್ರಿಕ ರಂಗದ ದೈತ್ಯರಾಗಿರುವ ಗೂಗಲ್, ಫೇಸ್‌ಬುಕ್ ಮತ್ತು ಟಿಸಿಎಸ್‌ನಂತಹ ಕಂಪೆನಿಗಳು ಅವುಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಮಾಡಿಕೊಟ್ಟಿವೆ. ವೀಡಿಯೊ ಕಾನ್ಫರೆನ್ಸ್‌ನ ವೇದಿಕೆಯಾಗಿರುವ ಝೂಮ್ ಹಣಕಾಸು ವರ್ಷದ ಒಂದು ತ್ರೈಮಾಸಿಕದಲ್ಲಿ ಮುನ್ನೂರು ಮಿಲಿಯ ಡೌನ್‌ಲೋಡ್‌ಗಳನ್ನು ನಿರ್ವಹಿಸಿದೆ.

ಅದೇ ವೇಳೆ ನಗರ ಪ್ರದೇಶಗಳ ಬಡವರು ದೂರದ ಹಳ್ಳಿಗಳಲ್ಲಿರುವ ಹಿರಿಯರು ಹಾಗೂ ಕಿರಿಯರು ಡಿಜಿಟಲ್ ಸ್ಪೇಸ್‌ನ ಅಲಭ್ಯತೆಯಿಂದಾಗಿ ಈ ತಂತ್ರಜ್ಞಾನದ ಸವಲತ್ತುಗಳಿಂದ ಹೊರಗೇ ಉಳಿದಿದ್ದಾರೆ. ಅವರಿಗೆ ಆರೋಗ್ಯ ಹಾಗೂ ಕಲ್ಯಾಣ ಯೋಜನೆಗಳ ಅಲರ್ಟ್‌ಗಳು, ಆಯಕಟ್ಟಿನ ಆರೋಗ್ಯ ಸೇವೆಗಳು ಲಭಿಸುತ್ತಿಲ್ಲ.

ಉದಾಹರಣೆಗೆ, ದ್ವಿತೀಯ ಅತ್ಯಂತ ಗರಿಷ್ಠ ಇಂಟರ್ನೆಟ್ ಸವಲತ್ತು ಹೊಂದಿರುವ ಕೇರಳ ಈ ಶೈಕ್ಷಣಿಕ ವರ್ಷದಲ್ಲಿ ತನ್ನ ಎಲ್ಲ ತರಗತಿಗಳನ್ನು ಆನ್‌ಲೈನ್‌ನಲ್ಲೇ ನಡೆಸಲು ಪ್ರಯತ್ನಿಸುತ್ತಿದೆ. ಆದರೆ ಕೊರೋನ ಸಾಂಕ್ರಾಮಿಕ ದಿಂದಾಗಿ ಬಡ ಗ್ರಾಮೀಣ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳು ಅತ್ಯಂತ ಸಾಕ್ಷರ ರಾಜ್ಯದಲ್ಲಿ ಕಲಿಕೆಯ ಎಲ್ಲ ಹಾದಿಗಳಿಂದ ದಿಢೀರನೆ ವಂಚಿತರಾದರು. ಅಂತಹ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. 2016ರಲ್ಲಿ ವಿಶ್ವಸಂಸ್ಥೆಯ ಮಹಾಸಭೆ ಅಂತರ್ಜಾಲ ಲಭ್ಯತೆ (ಇಂಟರ್ನೆಟ್ ಆ್ಯಕ್ಸೆಸ್) ಒಂದು ಮಾನವ ಹಕ್ಕು ಎಂದು ಘೋಷಿಸಿತು. ಆದರೆ ಇದಿನ್ನೂ ಒಂದು ಸಕಾರಾತ್ಮಕ ಸರಕಾರಿ ಕ್ರಮವಾಗಿ ಕಾರ್ಯಗತಗೊಂಡಿಲ್ಲ. 2011ರಲ್ಲಿ ಭಾರತ ಸರಕಾರ 2,50,000 ಗ್ರಾಮ ಪಂಚಾಯತ್‌ಗಳಿಗೆ ಇಂಟರ್ನೆಟ್ ಕನೆಕ್ಟಿವಿಟಿ ಒದಗಿಸುವುದಕ್ಕಾಗಿ ನ್ಯಾಷನಲ್ ಆಪ್ಟಿಕಲ್ ಫೈಬರ್ ನೆಟ್‌ವರ್ಕ್ (ಎನ್‌ಬಿಎಫ್‌ಎನ್) ಪ್ರಾಜೆಕ್ಟನ್ನು ಆರಂಭಿಸಿತ್ತು. ಆದರೂ ಕೂಡ ಇಂಟರ್ನೆಟ್ ಲಭ್ಯತೆ ಇನ್ನೂ ಕೂಡ ಶೇ. 50 ಮಾತ್ರ ಸಾಧ್ಯವಾಗಿದೆ.

ಹೆಚ್ಚುವರಿ ಆಪ್ಟಿಕಲ್ ಫೈಬರ್ ನಿಯೋಜನೆಯನ್ನು ತೀವ್ರಗೊಳಿಸುವ ಮೂಲಕ ನಮ್ಮ ದೇಶದ ಅತ್ಯಂತ ದೂರದ ಗ್ರಾಮೀಣ ಪ್ರದೇಶಗಳಿಗೆ ಕೂಡ ಇಂಟರ್ನೆಟ್ ಕನೆಕ್ಟಿವಿಟಿ ಲಭಿಸುವಂತೆ ನೋಡಿಕೊಳ್ಳಬೇಕಾಗಿದೆ. ನಿಸ್ತಂತು ತಂತ್ರಜ್ಞಾನ, ಡ್ರೋನ್‌ಗಳು ಹಾಗೂ ಉಪಗ್ರಹಗಳ ನಿಯೋಜನೆಯೂ ಇದರೊಂದಿಗೆ ಆಗಬೇಕಾಗಿದೆ. ಸಮುದಾಯ ಲಭ್ಯತೆ ಪಾಯಿಂಟ್‌ಗಳನ್ನು ದೇಶದ ಮೂಲೆ ಮೂಲೆಯಲ್ಲೂ ಸ್ಥಾಪಿಸುವ ಮೂಲಕ ತಮ್ಮದೇ ಆದ ಮೊಬೈಲ್ ಅಥವಾ ಇತರ ಡಿವೈಸ್ ಇಲ್ಲದವರಿಗೆ ಡಿಜಿಟಲ್ ತಂತ್ರಜ್ಞಾನದ ಸವಲತ್ತು ಸಿಗುವಂತೆ ಖಾತರಿ ಪಡಿಸಿಕೊಳ್ಳಬೇಕು. ಪಂಜಾಬ್ ಸರಕಾರ ತನ್ನ ರಾಜ್ಯದ ವಿದ್ಯಾರ್ಥಿಗಳಿಗೆ 1.75 ಲಕ್ಷ ಸ್ಮಾರ್ಟ್ ಫೋನ್‌ಗಳನ್ನು ವಿತರಿಸಲು ಇದೀಗ ತಾನೇ ಆರಂಭಿಸಿದೆ. ನಮ್ಮ ದೇಶದಲ್ಲಿ ಈಗ ಇರುವ ಡಿಜಿಟಲ್ ಕಂದಕವನ್ನು ತುಂಬಲು ಕಡಿಮೆ ಆದಾಯ ವರ್ಗದ ಜನರಿಗೆ ಕಡಿಮೆ ವೆಚ್ಚದ ಡಾಟಾ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಇದಕ್ಕಾಗಿ ಸಬ್ಸಿಡಿ ದರದಲ್ಲಿ ಸ್ಮಾರ್ಟ್‌ಫೋನ್‌ಗಳ ವಿತರಣೆಯ ಇನ್ನಷ್ಟು ಕಾರ್ಯಕ್ರಮಗಳು ಕಾರ್ಯಗತಗೊಳ್ಳಬೇಕು. 2020ರ ರಾಷ್ಟ್ರೀಯ ಶಿಕ್ಷಣ ನೀತಿ ತಂತ್ರಜ್ಞಾನಗಳ ಲಾಭ ದೇಶದ ಎಲ್ಲರಿಗೂ ಸಿಗುವಂತೆ ಮಾಡಬೇಕು ಎನ್ನುತ್ತದೆ.

ಆದರೆ ನಮ್ಮ ವಿಶ್ವವಿದ್ಯಾನಿಲಯಗಳ ವಿವಿಧ ಹಂತಗಳಲ್ಲಿ ಕಲಿಯುತ್ತಿರುವ ದೇಶದ ವಿವಿಧ ಜನಸಂಖ್ಯೆಯ ಘಟಕಗಳಿಗೆ ಹಲವು ರೀತಿಯ ನೈಪುಣ್ಯ ಹಂತಗಳಲ್ಲಿ ಇಂಟರ್ನೆಟ್ ಆಧಾರಿತ ಕಲಿಕೆ ಹಾಗೂ ತರಬೇತಿ ನೀಡುವ ನಿಟ್ಟಿನಲ್ಲಿ ಭಾರತದ ಬಳಿ ಸ್ಪಷ್ಟವಾದ ರೋಡ್ ಮ್ಯಾಪ್ ಇಲ್ಲ. ಈ ದಿಕ್ಕಿನಲ್ಲಿ ದೇಶ ಇನ್ನೂ ಬಹಳ ದೂರ ಸಾಗಲಿಕ್ಕಿದೆ. ಈ ಕೊರೋನ ಸಾಂಕ್ರಾಮಿಕ ವನ್ನು ಎದುರಿಸಿ ಉಳಿಯಲು ಆನ್‌ಲೈನ್ ಮೂಲಕ ಎಲ್ಲಾ ರೀತಿಗಳಲ್ಲೂ ಸಂಪರ್ಕ ಹೊಂದಿರುವುದು ಒಂದು ಅವಶ್ಯಕತೆಯಾಗಿದೆ. ಕೊರೋನ ಜಗತ್ತು ಎಂದಿಗಿಂತಲೂ ಹೆಚ್ಚು ಡಿಜಿಟಲೀಕರಣಗೊಂಡಿರುವ ಜಗತ್ತು ಆಗಿರುತ್ತದೆ. ಡಿಜಿಟಲ್ ಜಗತ್ತಿನಲ್ಲಿ ಮುಂದಕ್ಕೆ ಸಾಗಬಲ್ಲ ಸಾಮರ್ಥ್ಯ ಮತ್ತು ಅವಕಾಶ ವುಳ್ಳವರು ಈ ಅವಕಾಶ ಇಲ್ಲದವರಿಗಿಂತ ಹೆಚ್ಚು ಅಧಿಕ ಸವಲತ್ತುಗಳನ್ನು, ಅವಕಾಶಗಳನ್ನು ಪಡೆಯುತ್ತಾರೆ. ಜೊತೆಗೆ ಸಾಮಾಜಿಕ ಸಂಚಾರದ, ಮೊಬಿಲಿಟಿಯ ಹೆಚ್ಚು ಹಾದಿಗಳು ಕೂಡ ಅವರಿಗೆ ತೆರೆದುಕೊಳ್ಳುತ್ತದೆ. ಆದ್ದರಿಂದ ಪ್ರತಿಯೊಬ್ಬ ಭಾರತೀಯನಿಗೂ ಮೂಲ (ಬೇಸಿಕ್) ಡಿಜಿಟಲ್ ಸಾಕ್ಷರತೆ ಹಾಗೂ ಅಂತರ್ಜಾಲ ಸಂಪರ್ಕ ಸಿಗುವಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕಿದೆ.

ಕೃಪೆ: thehindu

(ಲೇಖಕರು ಎಐಸಿಸಿಯ ಸೋಷಿಯಲ್ ಮೀಡಿಯಾ ಆ್ಯಂಡ್ ಡಿಜಿಟಲ್ ಕಮ್ಯುನಿಕೇಷನ್ ವಿಭಾಗದ ಸಮನ್ವಯಾಧಿಕಾರಿಯಾಗಿದ್ದಾರೆ.)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)