varthabharthi


ಕ್ರೀಡೆ

ಗುಡ್‌ಬೈ ಇಂಡಿಯಾ, ಹಲೋ ಐಪಿಎಲ್: ಯುಎಇಯಲ್ಲಿ ಧೋನಿ ಸಿದ್ಧ

ವಾರ್ತಾ ಭಾರತಿ : 16 Sep, 2020

ಹೊಸದಿಲ್ಲಿ: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಲು ತಯಾರಿ ನಡೆಸಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 10 ಆವೃತ್ತಿಗಳಲ್ಲಿ ನಾಯಕರಾಗಿ ಮೂರು ಬಾರಿ ಪ್ರಶಸ್ತಿಗಳನ್ನು ತಂದು ಕೊಟ್ಟಿದ್ದರು. ಐದು ಬಾರಿ ರನ್ನರ್ ಅಪ್ ಸ್ಥಾನಗಳಿಗೆ ಮುನ್ನಡೆಸಿದ ಧೋನಿ ಅವರು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಶನಿವಾರ ನಡೆಯಲಿರುವ ಆರಂಭಿಕ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

   2019ರ ವಿಶ್ವಕಪ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ 39 ಹರೆಯದ ಧೋನಿ ಕೊನೆಯ ಬಾರಿಗೆ ಭಾರತ ಪರ ಆಡಿದ್ದರು. ಆ ನಂತರ ಅವರು ಒಂದೂ ಪಂದ್ಯವನ್ನು ಭಾರತದ ಪರ ಆಡದೆ ಇತ್ತೀಚೆಗೆ ತನ್ನ 16 ವರ್ಷಗಳ ಅಂತರ್‌ರಾಷ್ಟ್ರೀಯ ವೃತ್ತಿಬದುಕಿಗೆ ವಿದಾಯ ಪ್ರಕಟಿಸಿದ್ದರು.

 ರಾಷ್ಟ್ರೀಯ ತಂಡದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಉತ್ತಮವಾಗಿ ಆಡಬೇಕೆಂಬ ಒತ್ತಡವಿಲ್ಲದೆ ಧೋನಿ ಯುಎಇಯಲ್ಲಿ ಮಿಂಚುವ ನಿರೀಕ್ಷೆಯಿದೆ. ಕೊರೋನ ವೈರಸ್ ಸೋಂಕು ಭಾರತದಲ್ಲಿ ಇನ್ನೂ ಹತೋಟಿಗೆ ಬಾರದ ಕಾರಣಕ್ಕಾಗಿ ಐಪಿಎಲ್‌ನ ಹದಿಮೂರನೇ ಆವೃತ್ತಿಯ ಎಲ್ಲ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಲಾಗಿದೆ.

  ‘‘ಧೋನಿ ಫಿಟ್ ಆಗಿದ್ದಾರೆ ಮತ್ತು ಅದಕ್ಕಾಗಿ ಅವರು ತುಂಬಾ ಶ್ರಮಿಸುತ್ತಿದ್ದಾರೆ ಎಂದು ನಾನು ನಂಬುತ್ತೇನೆ. ಜೊತೆಗೆ ಅವರು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಆಡುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿ ಅವರಿಗೆ ಹೆಚ್ಚು ಒತ್ತಡವಿಲ್ಲ’’ ಎಂದು ಭಾರತದ ಮಾಜಿ ವಿಕೆಟ್ ಕೀಪರ್ ಸಾಬಾ ಕರೀಮ್ ತಿಳಿಸಿದ್ದಾರೆ.

‘‘ಜಾಗತಿಕ ಕ್ರಿಕೆಟ್ ಮುಂದುವರಿಯಲು ಧೋನಿ ಅವರಂತಹ ಐಕಾನ್‌ಗಳ ಅಗತ್ಯವಿದೆ’’ ಎಂದು ಕರೀಮ್ ಅಭಿಪ್ರಾಯಪಟ್ಟಿದ್ದಾರೆ.

 ಧೋನಿ ನಾಯಕತ್ವವು 2007ರಲ್ಲಿ ಉದ್ಘಾಟನಾ ಟ್ವೆಂಟಿ-20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವುದರೊಂದಿಗೆ ಪ್ರಾರಂಭವಾಯಿತು. ಇದರ ಯಶಸ್ಸು ಒಂದು ವರ್ಷದ ನಂತರ ವಿಶ್ವದ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಕ್ರಿಕೆಟ್ ಲೀಗ್ ಆಗಿದ್ದ ಐಪಿಎಲ್ ಹುಟ್ಟಿಗೆ ಕಾರಣವಾಯಿತು.

 ಧೋನಿ ಐಪಿಎಲ್‌ನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಕರೀಮ್ ಹೇಳಿದರು.

ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಿನಿಶರ್ ಎಂದು ಪ್ರಶಂಸಿಸಲ್ಪಟ್ಟ ಧೋನಿ 190 ಐಪಿಎಲ್ ಪಂದ್ಯಗಳನ್ನು ಆಡಿದ್ದು, 23 ಅರ್ಧಶತಕಗಳನ್ನು ಒಳಗೊಂಡಂತೆ 4,432 ರನ್ ಗಳಿಸಿದ್ದಾರೆ.

 ಅತ್ಯುತ್ತಮ ವಿಕೆಟ್ ಕೀಪರ್ ಅನುಕರಣೀಯ ನಾಯಕ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದಾಗಿ ರೂಪಿಸಿದ್ದಾರೆ. ಚೆನ್ನೈಸೂಪರ್ ಕಿಂಗ್ಸ್ ತಂಡಕ್ಕೆ ಸುಮಾರು 2,00,000 ಅಭಿಮಾನಿಗಳಿದ್ದಾರೆ.

  ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಶಿ ವಿಶ್ವನಾಥನ್ ಅವರು ಧೋನಿ ತಂಡದ ಯೋಜನೆಗಳಲ್ಲಿ ಪ್ರಮುಖರಾಗಿದ್ದಾರೆ ಮತ್ತು ಅವರು 2022ರ ಆವೃತ್ತಿಯವರೆಗೆ ತಂಡದಲ್ಲಿ ಇರುತ್ತಾರೆಂದು ನಿರೀಕ್ಷಿಸಿದ್ದಾರೆ.

ಕಳೆದ ತಿಂಗಳು ಯುಎಇಗೆ ಆಗಮಿಸಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇಬ್ಬರು ಆಟಗಾರರಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ.

 ಹಿರಿಯ ಬ್ಯಾಟ್ಸ್‌ಮನ್ ಸುರೇಶ್ ರೈನಾ ಮತ್ತು ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಈ ಬಾರಿ ಕಣದಿಂದ ದೂರ ಸರಿದಿದ್ದಾರೆ.

  ಧೋನಿ ತಂಡದ ಅತಿದೊಡ್ಡ ಶಕ್ತಿ ಮತ್ತು ಇಡೀ ಫ್ರಾಂಚೈಸಿ ಅವರನ್ನು ಅವಲಂಭಿಸಿದೆ ಎಂದು ಮಾಜಿ ಕ್ರಿಕೆಟಿಗ-ವೀಕ್ಷಕ ವಿವರಣೆಕಾರ ಆಕಾಶ್ ಚೋಪ್ರಾ ಹೇಳಿದ್ದಾರೆ.

‘‘ಧೋನಿ ಚೆನ್ನೈ ಸೂಪರ್ ಕಿಂಗ್ಸ್‌ನ ಆತ್ಮ. ಅವರು ಇರುವವರೆಗೂ ಸಿಎಸ್‌ಕೆ ಬಲಿಷ್ಠ ತಂಡವಾಗಿರುತ್ತದೆ. ಆಟಗಾರನಾಗಿ ಮತ್ತು ನಾಯಕನಾಗಿ ಎಂ.ಎಸ್. ಧೋನಿ ತಂಡದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಾರೆ ’’ ಎಂದು ಚೋಪ್ರಾ ತನ್ನ ಯೂಟ್ಯೂಬ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

 ಧೋನಿ ತಂಡದಲ್ಲಿ ಆಸ್ಟ್ರೇಲಿಯದ ಶೇನ್ ವ್ಯಾಟ್ಸನ್ ಮತ್ತು ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ ಸೇರಿದಂತೆ 35 ವರ್ಷ ಮೇಲ್ಪಟ್ಟ ಅನೇಕ ಹಿರಿಯ ಆಟಗಾರರು ಇದ್ದಾರೆ.

     ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಎರಡು ವರ್ಷಗಳ ತನಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಿಷೇಧ ವಿಧಿಸಲಾಗಿತ್ತು. 2016 ಮತ್ತು 2017ನೇ ಆವೃತ್ತಿಗಳಲ್ಲಿ ಚೆನ್ನೈ ತಂಡ ಐಪಿಎಲ್‌ನಲ್ಲಿ ಇರಲಿಲ್ಲ. ಮಾಧ್ಯಮಗಳಿಂದ ‘ಡ್ಯಾಡ್ ಆರ್ಮಿ’ (ಅಪ್ಪನ ಸೈನ್ಯ) ಎಂದು ಲೇಬಲ್ ಅಂಟಿಸಿಕೊಂಡಿರುವ ಚೆನ್ನೈ 2018ರಲ್ಲಿ ಮತ್ತೆ ಐಪಿಎಲ್‌ನಲ್ಲಿ ಕಾಣಿಸಿಕೊಂಡು ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು. ಆದರೆ 2019ರಲ್ಲಿ 1 ರನ್ ಅಂತರದಲ್ಲಿ ಸೋತು 4ನೇ ಬಾರಿ ಐಪಿಎಲ್ ಟ್ರೋಫಿಯನ್ನು ಎತ್ತುವ ಅವಕಾಶವನ್ನು ಕಳೆದುಕೊಂಡಿತ್ತು. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಸ್ಥಿರವಾದ ತಂಡಗಳಲ್ಲಿ ಚೆನ್ನೈ ಒಂದಾಗಿದೆ.

  ‘‘ಧೋನಿ ಅಂದರೆ ಚೆನ್ನೈ, ಚೆನ್ನೈ ಅಂದರೆ ಧೋನಿ. ಧೋನಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಚೆನ್ನೈ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ’’ ಎಂದು ಖ್ಯಾತ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಅಭಿಪ್ರಾಯಪಟ್ಟಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)