varthabharthi


ರಾಷ್ಟ್ರೀಯ

ಭಾರತದಲ್ಲಿ 50 ಲಕ್ಷದ ಗಡಿ ದಾಟಿದ ಕೊರೋನ ಪ್ರಕರಣ

ವಾರ್ತಾ ಭಾರತಿ : 16 Sep, 2020

ಹೊಸದಿಲ್ಲಿ: ವಿಶ್ವದಲ್ಲಿ ಅಮೆರಿಕ ಹೊರತುಪಡಿಸಿದರೆ ಐವತ್ತು ಲಕ್ಷ ಕೊರೋನ ವೈರಸ್ ಪ್ರಕರಣಗಳು ವರದಿಯಾದ ಏಕೈಕ ದೇಶವಾಗಿ ಭಾರತ ಹೊರಹೊಮ್ಮಿದೆ. ಕಳೆದ 11 ದಿನಗಳಲ್ಲಿ ದೇಶದಲ್ಲಿ 10 ಲಕ್ಷ ಹೊಸ ಪ್ರಕರಣಗಳು ಸೇರ್ಪಡೆಯಾಗಿರುವುದು ದೇಶದಲ್ಲಿ ಮಾರಕ ಸಾಂಕ್ರಾಮಿಕದ ತೀವ್ರತೆಗೆ ಸಾಕ್ಷಿಯಾಗಿದೆ.

ಮಂಗಳವಾರ ದೇಶದಲ್ಲಿ 90 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಒಂದೇ ದಿನ 1275 ಮಂದಿ ಬಲಿಯಾಗಿದ್ದಾರೆ. ಇದುವರೆಗೆ ಒಂದೇ ದಿನ ಸೋಂಕಿನಿಂದ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮೃತಪಟ್ಟಿರುವುದು ಇದೇ ಮೊದಲು.

ಭಾರತದಲ್ಲಿ ಮೊದಲ 10 ಲಕ್ಷ ಪ್ರಕರಣಗಳು ದಾಖಲಾಗಲು 167 ದಿನ ತೆಗೆದುಕೊಂಡಿತ್ತು. ವಿಶ್ವದ ಯಾವುದೇ ದೇಶದಲ್ಲಿ ಸೋಂಕು ಅತ್ಯಂತ ನಿಧಾನವಾಗಿ ಹರಡಿದ ನಿದರ್ಶನ ಇದಾಗಿತ್ತು. ಆದರೆ ಮುಂದಿನ 40 ಲಕ್ಷ ಪ್ರಕರಣಗಳು ಕೇವಲ 61 ದಿನಗಳಲ್ಲಿ ವರದಿಯಾಗಿದ್ದು, ಇದು ವಿಶ್ವದಲ್ಲೇ ಅತಿವೇಗದ ಪ್ರಗತಿಯಾಗಿದೆ. 67 ಲಕ್ಷ ಪ್ರಕರಣಗಳು ವರದಿಯಾದ ಅಮೆರಿಕ ಮಾತ್ರ ಭಾರತಕ್ಕಿಂತ ಹೆಚ್ಚು ಪ್ರಕರಣ ಕಂಡಿದೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡಾ ಮಂಗಳವಾರ 10 ಲಕ್ಷ ದಾಟಿದೆ. ಅಮೆರಿಕದಲ್ಲಿ ಪ್ರಸ್ತುತ ಇರುವ 25 ಲಕ್ಷ ಪ್ರಕರಣಗಳನ್ನು ಹೊರತುಪಡಿಸಿದರೆ, ವಿಶ್ವದಲ್ಲೇ ಎರಡನೇ ಗರಿಷ್ಠ ಸಕ್ರಿಯ ಪ್ರಕರಣಗಳು ದಾಖಲಾಗಿರುವುದು ಕೂಡಾ ಭಾರತದಲ್ಲಿ.

ಮಂಗಳವಾರ 90,789 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 50,14,395ಕ್ಕೇರಿದೆ. ಸೆಪ್ಟೆಂಬರ್ ತಿಂಗಳ ಮೊದಲ 15 ದಿನಗಳಲ್ಲೇ 13 ಲಕ್ಷಕ್ಕೂ ಅಧಿಕ ಪ್ರಕರಣಗಳು ಅಂದರೆ ಒಟ್ಟು ಪ್ರಕರಣಗಳ ಶೇಕಡ 27ರಷ್ಟು ಪ್ರಕರಣಗಳು ದಾಖಲಾಗಿವೆ.

ದಿನದ ಸಾವಿನ ಸಂಖ್ಯೆ ಕೂಡಾ ದಾಖಲೆ ನಿರ್ಮಿಸಿದ್ದು, ಮಹಾರಾಷ್ಟ್ರದಲ್ಲಿ ಒಂದೇ ದಿನ 515 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶ (113), ಕರ್ನಾಟಕ (97), ಪಂಜಾಬ್ (90), ಆಂಧ್ರಪ್ರದೇಶ (69), ತಮಿಳುನಾಡು (68) ಮತ್ತು ಬಂಗಾಳ (59) ಅತಿಹೆಚ್ಚು ಸಾವನ್ನು ಕಂಡಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)