ಐಪಿಎಲ್: ಕೆಕೆಆರ್ ವಿರುದ್ಧ ಮುಂಬೈ ಗೆಲುವಿನ ಕೇಕೆ
ರೋಹಿತ್ ಶರ್ಮಾ ಅರ್ಧ ಶತಕ
ಅಬುಧಾಬಿ, ಸೆ.23:ನಾಯಕ ಹಾಗೂ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರ ಆಕರ್ಷಕ ಅರ್ಧಶತಕ ಹಾಗೂ ಬೌಲರ್ ಗಳ ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಬುಧವಾರ ನಡೆದ ಐಪಿಎಲ್ ಟೂರ್ನಿಯ 5ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 49 ರನ್ ಗಳಿಂದ ಜಯ ಸಾಧಿಸಿದೆ..
ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಮುಂಬೈ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕೆಕೆಆರ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು.
ಕೆಕೆಆರ್ ಪರ ಕಮಿನ್ಸ್ 12 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 33 ರನ್ ಗಳಿಸಿದರು. ದಿನೇಶ್ ಕಾರ್ತಿಕ್ 23 ಎಸೆತಗಳಲ್ಲಿ 30 ರನ್ ಗಳಿಸಿದರು. ಮುಂಬೈ ಪರವಾಗಿ ಬೌಲ್ಟ್(2-30), ಚಹಾರ್ 2-26 ಹಾಗೂ ಬುಮ್ರಾ (2-32) ತಲಾ ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ರೋಹಿತ್ 54 ಎಸೆತಗಳಲ್ಲಿ 3 ಬೌಂಡರಿ ಹಾಗೂ 6 ಸಿಕ್ಸರ್ ಗಳ ಸಹಿತ 80 ರನ್ ಗಳಿಸಿ ತಂಡದ ಪರ ಸರ್ವಾಧಿಕ ರನ್ ಗಳಿಸಿದರು. ಕ್ವಿಂಟನ್ ಡಿಕಾಕ್ ತಂಡ 8 ರನ್ ತಲುಪಿದಾಗ ಔಟಾದರು. ಆಗ 2ನೇ ವಿಕೆಟ್ ಜೊತೆಯಾಟದಲ್ಲಿ 90 ರನ್ ಜೊತೆಯಾಟ ನಡೆಸಿರುವ ಸೂರ್ಯ ಕುಮಾರ್ ಯಾದವ್(47, 28 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ರೋಹಿತ್ ತಂಡವನ್ನು ಆಧರಿಸಿದರು.ಆಲ್್ರೌಂಡರ್ ಶಿವಂ ಮಾವಿ 32 ರನ್ ಗೆ 2 ವಿಕೆಟ್ ಪಡೆದರು.