varthabharthi

ರಾಹುಲ್‌ -ಪ್ರಿಯಾಂಕಾ ಹೀಗೊಂದು ಆತ್ಮೀಯ ಮುಖಾಮುಖಿ

ಲೋಕಸಭಾ ಚುನಾವಣೆಗಾಗಿ ಉತ್ತರಪ್ರದೇಶದಲ್ಲಿ ಬಿರುಸಿನ ಪ್ರಚಾರಕಾರ್ಯ ಕೈಗೊಂಡಿ ರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಕಾನ್ಪುರ ವಿಮಾನನಿಲ್ದಾಣದಲ್ಲಿ ಶನಿವಾರ ಪರಸ್ಪರ ಭೇಟಿಯಾದರು ಹಾಗೂ ತುಸು ಹೊತ್ತು ಲಘು ಮಾತುಕತೆ ನಡೆಸಿದರು. ತಮ್ಮಿಬ್ಬರ ಭೇಟಿಯ ವೀಡಿಯೊವನ್ನು ರಾಹುಲ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ‘‘ಕಾನ್ಪುರ ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಾರನ್ನು ಭೇಟಿಯಾದೆ. ನಾವಿಬ್ಬರೂ ಉತ್ತರಪ್ರದೇಶದಲ್ಲಿ ಬೇರೆಬೇರೆ ಸಭೆಗಳಿಗೆ ತೆರಳುವವರಿದ್ದೆವು’’ ಎಂಬ ಸಂದೇಶವನ್ನು ಕೂಡಾ ಅವರು ಪೋಸ್ಟ್ ಮಾಡಿದ್ದಾರೆ. ‘‘ಒಳ್ಳೆಯ ಸಹೋದರನಾಗಿರುವುದು ಹೇಗೆಂದು ನಾನು ನಿಮಗೆ ಹೇಳುತ್ತೇನೆ. ತುಂಬಾ ದೂರದ ವಿಮಾನ ಪ್ರಯಾಣಗಳನ್ನು ಕೈಗೊಳ್ಳುತ್ತೇನೆ ಹಾಗೂ ನಾನು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವುದು ಕಡಿಮೆ. ಆದರೆ ಆಕೆ ಅಲ್ಪದೂರದ ಹಾರಾಟ ನಡೆಸುತ್ತಾಳೆ ಹಾಗೂ ದೊಡ್ಡ ಹೆಲಿಕಾಪ್ಟರ್‌ನಲ್ಲಿ ಸಂಚರಿಸುತ್ತಾಳೆ’’ಎಂದವರು ವೀಡಿಯೊದಲ್ಲಿ ಹೇಳಿದ್ದಾರೆ.ಅದಕ್ಕೆ ಪ್ರಿಯಾಂಕಾ ಗಾಂಧಿ ನಗುತ್ತಾ, ‘‘ಅದು ಸತ್ಯವಲ್ಲ’’ ಎಂದು ಹೇಳುತ್ತಿರುವುದನ್ನು ವೀಡಿಯೊದಲ್ಲಿ ಪ್ರದರ್ಶಿಸಲಾಗಿದೆ. ಇವರಿಬ್ಬರೂ ಪೈಲಟ್‌ಗಳು ಹಾಗೂ ವಿಮಾನನಿಲ್ದಾಣದ ಸಿಬ್ಬಂದಿ ಜೊತೆ ಛಾಯಾಚಿತ್ರಗಳಿಗಾಗಿ ಪೋಸ್ ನೀಡಿರುವಛಾಯಾಚಿತ್ರಗಳನ್ನು ಕೂಡಾ ರಾಹುಲ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಶನಿವಾರ ರಾಯ್‌ಬರೇಲಿ ಹಾಗೂ ಅಮೇಠಿಯಲ್ಲಿ ರಾಹುಲ್ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದರೆ, ಪ್ರಿಯಾಂಕಾಗಾಂಧಿ ಉನ್ನಾವೊ ಹಾಗೂ ಬರಾಬಂಕಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡರು.

Comments (Click here to Expand)