varthabharthi

ಮಂಗಳೂರು: ತಪ್ಪಿದ ಭಾರೀ ದುರಂತ

ದುಬೈಯಿಂದ ಆಗಮಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ರವಿವಾರ ಮಂಗಳೂರಿನ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ವೇ (ರನ್‌ವೇಯನ್ನು ವಿಮಾನ ನಿಲ್ದಾಣದ ಟರ್ಮಿನಲ್‌ನೊಂದಿಗೆ ಸಂಪರ್ಕಿಸುವ ದಾರಿ) ಯಿಂದ ಜಾರಿದ್ದು, ಸಂಭಾವ್ಯ ಭಾರೀ ದುರಂತ ಅದೃಷ್ಟವಶಾತ್ ತಪ್ಪಿದೆ. ದುಬೈನಿಂದ ರವಿವಾರ ಸಂಜೆ 5:40ರ ಸುಮಾರಿಗೆ ಆರು ಸಿಬ್ಬಂದಿ ಸಹಿತ 189 ಮಂದಿ ಪ್ರಯಾಣಿಕರಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್(ಐಎಕ್ಸ್ 384) ವಿಮಾನ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ವಿಮಾನ ಲ್ಯಾಂಡಿಂಗ್ ವೇಳೆ ಟ್ಯಾಕ್ಸಿವೇನಲ್ಲಿ ಸಾಗುತ್ತಿದ್ದಾಗ ಆಕಸ್ಮಿಕವಾಗಿ ಜಾರಿತ್ತು. ಇದರಿಂದಾಗಿ ವಿಮಾನ ಪೂರ್ತಿ ಟ್ಯಾಕ್ಸಿ ವೇ ಬಿಟ್ಟು ಮಣ್ಣಿನ ಇಳಿಜಾರು ಪ್ರದೇಶಕ್ಕೆ ಇಳಿದಿದೆ. ವಿಮಾನದ ಚಕ್ರಗಳು ಮಣ್ಣಿನಲ್ಲಿ ಪೂರ್ತಿ ಹೂತುಹೋಗಿ, ಅಲ್ಲಿಯೇ ನಿಂತಿದ್ದರಿಂದ ಸಂಭಾವ್ಯ ಭಾರೀ ದುರಂತ ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Comments (Click here to Expand)