varthabharthi

ಸುಶ್ಮಾ ಸ್ವರಾಜ್‌ಗೆ ಅಂತಿಮ ವಿದಾಯ

ಮಂಗಳವಾರ ರಾತ್ರಿ ನಿಧನರಾದ ವಿದೇಶಾಂಗ ವ್ಯವಹಾರಗಳ ಮಾಜಿ ಸಚಿವೆ ಹಾಗೂ ಬಿಜೆಪಿ ಹಿರಿಯ ನಾಯಕಿ ಸುಶ್ಮಾ ಸ್ವರಾಜ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಲೋಧಿ ರಸ್ತೆಯ ಚಿತಾಗಾರದಲ್ಲಿ ಬುಧವಾರ ಅಪರಾಹ್ನ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ಉಪಸ್ಥಿತಿಯಲ್ಲಿ ಸರಕಾರಿ ಗೌರವಗಳೊಂದಿಗೆ ನಡೆಯಿತು. ಅಂತ್ಯಕ್ರಿಯೆಗೆ ಮೊದಲು ಅವರ ಪಾರ್ಥಿವ ಶರೀರವನ್ನು ದಿಲ್ಲಿಯ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ರಾಜಕೀಯ ನಾಯಕರು ಹಾಗೂ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದ ಬಳಿಕ ಪಾರ್ಥಿವ ಶರೀರವನ್ನು ಲೋಧಿಯಲ್ಲಿರುವ ಸ್ಮಶಾನಕ್ಕೆ ಕೊಂಡೊಯ್ಯಲಾಯಿತು. ಅಂತಿಮ ಯಾತ್ರೆ ಆರಂಭಗೊಳ್ಳುವ ಕೆಲವೇ ನಿಮಿಷಗಳ ಮುನ್ನ ಸರಕಾರಿ ಗೌರವಗಳು ಸಲ್ಲಿಕೆಯಾಗುತ್ತಿದ್ದಾಗ ಪತಿ ಸ್ವರಾಜ್ ಕೌಶಲ್ ಮತ್ತು ಪುತ್ರಿ ಬಾನ್ಸುರಿ ಸ್ವರಾಜ್ ಅವರು ಸೆಲ್ಯೂಟ್ ಹೊಡೆದು ತಮ್ಮನ್ನಗಲಿದ ಪ್ರೀತಿಯ ಜೀವಕ್ಕೆ ಅಂತಿಮ ನಮನವನ್ನು ಸಲ್ಲಿಸಿದರು. ಸಂಪ್ರದಾಯದಂತೆ ಸುಶ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಅಂತಿಮ ವಿಧಿವಿಧಾನ ನೆರವೇರಿಸಿದರು.

Comments (Click here to Expand)