ಬಾರ್ಸಿಲೋನ ಓಪನ್ : ಕಾಸ್ಪರ್ ರೂಡ್ ಚಾಂಪಿಯನ್
ಕಾಸ್ಪರ್ ರೂಡ್ | PC : indiatoday.in
ಬಾರ್ಸಿಲೋನ : ಸ್ಟೆಫನೊಸ್ ಸಿಟ್ಸಿಪಾಸ್ ವಿರುದ್ಧ ಬಾರ್ಸಿಲೋನ ಓಪನ್ ಟೆನಿಸ್ ಟೂರ್ನಿಯ ಫೈನಲ್ ನಲ್ಲಿ ಜಯಶಾಲಿಯಾಗಿರುವ ಕಾಸ್ಪರ್ ರೂಡ್ ವೃತ್ತಿಬದುಕಿನಲ್ಲಿ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ.
ವಾರದ ಹಿಂದೆ ಮೊಂಟೆ ಕಾರ್ಲೊ ಮಾಸ್ಟರ್ಸ್ ಫೈನಲ್ನಲ್ಲಿ ಗ್ರೀಕ್ ಆಟಗಾರ ಸಿಟ್ಸಿಪಾಸ್ ಕೈಯಲ್ಲಿ ಸೋತಿದ್ದ ನಾರ್ವೆಯ ಆಟಗಾರ ರೂಡ್ ಇದೀಗ ತಕ್ಕ ಸೇಡು ತೀರಿಸಿಕೊಂಡಿದ್ದಾರೆ.
ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ರೂಡ್ಎದುರಾಳಿ ಸಿಟ್ಸಿಪಾಸ್ರನ್ನು 7-5, 6-3 ನೇರ ಸೆಟ್ ಗಳ ಅಂತರದಿಂದ ಮಣಿಸಿದರು. ಈ ಸೋಲಿನ ಮೂಲಕ ಆವೆಮಣ್ಣಿನಲ್ಲಿ ಸಿಟ್ಸಿಪಾಸ್ ಅವರ ಸತತ 10 ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಂತಾಗಿದೆ.
ಈ ಹಿಂದೆ ಮೂರು ಫೈನಲ್ ಪಂದ್ಯಗಳಲ್ಲಿ ಸೋತಿದ್ದ ರೂಡ್ ಈ ವರ್ಷ ಮೊದಲ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ.
2022ರಲ್ಲಿ ರನ್ನರ್ಸ್ ಅಪ್ ಆಗಿದ್ದ ಮುಂಬರುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಗಿಂತ ಮೊದಲು ಬಾರ್ಸಿಲೋನ ಓಪನ್ ಟ್ರೋಫಿಯ ಗೆಲುವು ರೂಡ್ಗೆ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ.
25ರ ಹರೆಯದ ರೂಡ್ ಇದೀಗ 11ಪ್ರಶಸ್ತಿಗಳನ್ನು ಜಯಿಸಿದ್ದು, 10 ಟ್ರೋಫಿಗಳನ್ನು ಆವೆಮಣ್ಣಿನ ಅಂಗಳದಲ್ಲಿ ಗೆದ್ದುಕೊಂಡಿದ್ದಾರೆ.
ಸಿಟ್ಸಿಪಾಸ್ ಬಾರ್ಸಿಲೋನ ಓಪನ್ ಫೈನಲ್ನಲ್ಲಿ ಸತತ ಮೂರನೇ ಬಾರಿ ಸೋತಿದ್ದಾರೆ. ಈ ಹಿಂದೆ 2018 ಹಾಗೂ 2021ರಲ್ಲಿ ಸೋತಿದ್ದರು. ಈ ವರ್ಷ ಆವೆಮಣ್ಣಿನ ಅಂಗಣದಲ್ಲಿ 10 ಪಂದ್ಯಗಳನ್ನು ಜಯಿಸಿ ಅಜೇಯ ಗೆಲುವಿನ ದಾಖಲೆ ಹೊಂದಿದ್ದರೂ ರೂಡ್ ಅವರನ್ನು ಹಿಮ್ಮೆಟ್ಟಿಸಿ ವೃತ್ತಿಜೀವನದ 12ನೇ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾದರು.