ನೆಸ್ಲೆಯ ಶಿಶು ಆಹಾರಗಳಲ್ಲಿ ಹೆಚ್ಚುವರಿ ಸಕ್ಕರೆ ಆರೋಪ ಕುರಿತು ತನಿಖೆ ನಡೆಸುವಂತೆ ಎಫ್ಎಸ್ಎಸ್ಎಐಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಸೂಚನೆ
ನೆಸ್ಲೆ
ಹೊಸದಿಲ್ಲಿ: ಸ್ವಿಸ್ ಆಹಾರ ಸಂಸ್ಕರಣಾ ಸಂಸ್ಥೆ ನೆಸ್ಲೆ ಭಾರತದಲ್ಲಿ ಮಾರಾಟ ಮಾಡುತ್ತಿರುವ ಶಿಶು ಆಹಾರಗಳು ಹೆಚ್ಚುವರಿ ಸಕ್ಕರೆಯನ್ನು ಒಳಗೊಂಡಿವೆ ಎಂಬ ಆರೋಪಗಳ ಕುರಿತು ತನಿಖೆ ನಡೆಸುವಂತೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ)ವು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ)ಕ್ಕೆ ಸೂಚಿಸಿದೆ.
ನೆಸ್ಲೆ ಭಾರತ ಸೇರಿದಂತೆ ಕಡಿಮೆ ಆದಾಯದ ದೇಶಗಳಲ್ಲಿ ಮಾರಾಟಗೊಳ್ಳುವ ತನ್ನ ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆಯನ್ನು ಸೇರಿಸುತ್ತದೆ, ಆದರೆ ಯುರೋಪ್ ಅಥವಾ ಬ್ರಿಟನ್ಗಳಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಅದರ ಇಂತಹ ಉತ್ಪನ್ನಗಳು ಹೆಚ್ಚುವರಿ ಸಕ್ಕರೆ ಮುಕ್ತವಾಗಿರುತ್ತವೆ ಎಂದು ಸ್ವಿಸ್ ತನಿಖಾ ಸಂಸ್ಥೆ ಪಬ್ಲಿಕ್ ಐ ಮತ್ತು ಇಂಟರ್ನ್ಯಾಷನಲ್ ಬೇಬಿ ಫುಡ್ ಆ್ಯಕ್ಶನ್ ನೆಟ್ವರ್ಕ್ (ಐಬಿಎಫ್ಎಎನ್) ನಡೆಸಿದ ಜಂಟಿ ಅಧ್ಯಯನವು ಬಹಿರಂಗಗೊಳಿಸಿರುವ ಹಿನ್ನೆಲೆಯಲ್ಲಿ ಸಿಸಿಪಿಎಯ ಈ ಸೂಚನೆ ಹೊರಬಿದ್ದಿದೆ. ಸಕ್ಕರೆ ಅನಗತ್ಯ ಮತ್ತು ಶೈಶವದಲ್ಲಿಯೇ ಸಕ್ಕರೆಯ ಸೇವನೆ ಮಕ್ಕಳಲ್ಲಿ ಸಕ್ಕರೆಯ ಚಟಕ್ಕೆ ಕಾರಣವಾಗುತ್ತದೆ,ಇದರಿಂದ ಮಕ್ಕಳು ಮುಂದೆ ಬೊಜ್ಜು ಮತ್ತು ಇತರ ಕಾಯಿಲೆಗಳಿಗೆ ತುತ್ತಾಗುತ್ತಾರೆ ಎಂದು ತಜ್ಞರು ಪ್ರತಿಪಾದಿಸಿದ್ದಾರೆ.
ಪಬ್ಲಿಕ್ ಐ ವರದಿಗೆ ಪ್ರತಿಕ್ರಿಯಿಸಿದ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಹಾಗೂ ಸಿಸಿಪಿಎ ಮುಖ್ಯಸ್ಥೆ ನಿಧಿ ಖರೆ ಅವರು,ನೆಸ್ಲೆಯ ಶಿಶು ಉತ್ಪನ್ನಗಳ ಕುರಿತು ವರದಿಯನ್ನು ಗಮನಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿ ತಾನು ಎಫ್ಎಸ್ಎಸ್ಎಐಗೆ ಪತ್ರವನ್ನು ಬರೆದಿರುವುದಾಗಿ ಸುದ್ದಿಸಂಸ್ಥೆಗೆ ತಿಳಿಸಿದರು.
ನೆಸ್ಲೆ ಭಾರತದಲ್ಲಿ ಮಾರಾಟ ಮಾಡುತ್ತಿರುವ ಎಲ್ಲ 15 ಸೆರಿಲ್ಯಾಕ್ ಶಿಶು ಆಹಾರಗಳು ಪ್ರತಿ ಸರ್ವ್ಗೆ ಹೆಚ್ಚುವರಿಯಾಗಿ ಮೂರು ಗ್ರಾಮ್ ಸಕ್ಕರೆಯನ್ನು ಒಳಗೊಂಡಿವೆ. ದಕ್ಷಿಣ ಆಫ್ರಿಕಾ ಮತ್ತು ಕಡಿಮೆ ಆದಾಯದ ಇತರ ದೇಶಗಳಲ್ಲಿ ನೆಸ್ಲೆಯ ಶಿಶು ಆಹಾರಗಳು ಇದಕ್ಕೂ ಅಧಿಕ ಹೆಚ್ಚುವರಿ ಸಕ್ಕರೆಯನ್ನು ಒಳಗೊಂಡಿವೆ. ಆದರೆ ಯುರೋಪ್ನಲ್ಲಿ ಮಾರಾಟಗೊಳ್ಳುವ ನೆಸ್ಲೆ ಉತ್ಪನ್ನಗಳಲ್ಲಿ ಹೆಚ್ಚುವರಿ ಸಕ್ಕರೆ ಇರುವುದಿಲ್ಲ ಎಂದು ಪಬ್ಲಿಕ್ ಐ ತನ್ನ ವರದಿಯಲ್ಲಿ ಹೇಳಿದೆ.