ಲೈಂಗಿಕ ಕಿರುಕುಳ ಆರೋಪ: ಚೆನ್ನೈ ಅಕಾಡೆಮಿ ಮಾಜಿ ಪ್ರೊಫೆಸರ್ ಬಂಧನ
Photo: ndtv.com
ಚೆನ್ನೈ: ಚೆನ್ನೈ ಕಲಾಕ್ಷೇತ್ರ ಫೌಂಡೇಷನ್ನ ಮಾಜಿ ಪ್ರೊಫೆಸರ್ ಶೀಜಿತ್ ಕೃಷ್ಣ ಅವರನ್ನು ಮಾಜಿ ವಿದ್ಯಾರ್ಥಿ ಮಾಡಿದ ಲೈಂಗಿಕ ಕಿರುಕುಳ ಆರೋಪದಲ್ಲಿ ಮಂಗಳವಾರ ಬಂಧಿಸಲಾಗಿದೆ. ಖ್ಯಾತ ನೃತ್ಯಗಾರರಾದ ಕೃಷ್ಣ ತಮ್ಮದೇ ಕಲಾಕ್ಷೇತ್ರಕ್ಕೆ ರಾಜೀನಾಮೆ ನೀಡಿ, ನೃತ್ಯ ಅಕಾಡೆಮಿಯನ್ನು ಆರಂಭಿಸಿದ್ದರು. ಶೀಜಿತ್ ಕೃಷ್ಣ ಅವರ ತಂಡ ಈ ಆರೋಪದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದೀಗ ವಿದೇಶದಲ್ಲಿ ವಾಸವಿರುವ ಮಾಜಿ ವಿದ್ಯಾರ್ಥಿಗಳು ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ಕೃಷ್ಣ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. 1996ರಿಂದ 2001ರ ಅವಧಿಯಲ್ಲಿ ಕ್ಯಾಂಪಸ್ನಲ್ಲಿದ್ದ ಅವಧಿಯಲ್ಲಿ ಲೈಂಗಿಕ ಕಿರುಕುಳ ನೀಡಿದ ನೀಡಿದ ಆರೋಪ ಹೊರಿಸಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್, ಚೆನ್ನೈ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿತ್ತು. ಬಂಧನವನ್ನು ದೃಢಪಡಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, "ಶೀಜಿತ್ ತಮ್ಮನ್ನು ಬಳಸಿಕೊಂಡಿದ್ದಾಗಿ ಎಂದು ಮಾಜಿ ವಿದ್ಯಾರ್ಥಿಗಳು ಆಪಾದಿಸಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷ ಹರಿ ಪದ್ಮನ್ ಎಂಬ ಪ್ರೊಫೆಸರ್ ವಿರುದ್ಧ ಇಂಥದ್ದೇ ಆರೋಪ ಬಂದಾಗ ವಿಚಾರಣೆ ನಡೆಸಿ, ಅವರನ್ನು ತಪ್ಪಿತಸ್ಥರು ಎಂದು ತನಿಖಾ ಸಮಿತಿ ನಿರ್ಧರಿಸಿದ ಹಿನ್ನೆಲೆಯಲ್ಲಿ ಕಲಾಕ್ಷೇತ್ರ ಫೌಂಡೇಷನ್ ಅವರನ್ನು ವಜಾ ಮಾಡಿತ್ತು. ಅವರನ್ನೂ ಬಂಧಿಸಲಾಗಿತ್ತು.
ಬೋಧಕ ಸಿಬ್ಬಂದಿಯ ಲೈಂಗಿಕ ಕಿರುಕುಳ ವಿರುದ್ಧ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಆಡಳಿತ ವರ್ಗ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದನ್ನು ಕಲಾವಿದರು ಖಂಡಿಸಿ, ನ್ಯಾಯಕ್ಕೆ ಮೊರೆ ಹೋಗಿದ್ದರು.