varthabharthi


Social Media

ದೇಶಭಕ್ತರ ಸರಕಾರದ ತೆರೆಮರೆಯ ಕಳ್ಳಾಟಗಳ ಪುಟ್ಟ ಸ್ಯಾಂಪಲ್

ಗೋಪ್ರೇಮ ಹೇಳೋಕೆ, ಕಸಾಯಿಖಾನೆ ಡೆವಲಪ್ ಮಾಡೋಕೆ

ವಾರ್ತಾ ಭಾರತಿ : 11 Jul, 2016
ಟಿ.ಕೆ. ದಯಾನಂದ

ಇದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಕೇಂದ್ರದ ಬಿಜೆಪಿ ಸರಕಾರ ಇಡೀ ದೇಶವನ್ನೇ ಜಾನುವಾರುಗಳನ್ನು ಕೊಲ್ಲುವ ಕಸಾಯಿಖಾನೆಗಳಿಂದ ತುಂಬಿಸಲು ಹೊರಟಿದೆ. ಕಳೆದ ಡಿಸೆಂಬರ್‌ನಲ್ಲಿ ಇಂಥದೊಂದು ‘ ಸರಕಾರಿ ಕಸಾಯಿಖಾನೆ ಅಭಿವೃದ್ಧಿ ಯೋಜನೆ‘ಗೆ ಕೇಂದ್ರದ ಫುಡ್ ಪ್ರೊಸೆಸಿಂಗ್ ಇಂಡಸ್ಟ್ರಿ ಇಲಾಖೆಯ ರಾಜ್ಯಮಂತ್ರಿ ಸಾಧ್ವಿ ನಿರಂಜನ ಜ್ಯೋತಿ 783 ಕೋಟಿ ರೂ.ಗಳನ್ನು ಸುರಿಯಲು ಹೊರಟಿದ್ದಾರೆ.

ಬಂಗಾಳ, ಉತ್ತರಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಸಿಕ್ಕಿಂ, ರಾಜಸ್ಥಾನ್, ಪಂಜಾಬ್, ಕೇರಳ, ನಾಗಾಲ್ಯಾಂಡ್, ಮಿಜೋರಾಂ, ಮಹಾರಾಷ್ಟ್ರ, ಜಾರ್ಖಂಡ್, ಜಮ್ಮುಕಾಶ್ಮೀರ, ಹಿಮಾಚಲಪ್ರದೇಶ, ಹರಿಯಾಣ, ಗೋವಾ, ಛತ್ತೀಸ್ ಗಡ, ಅರುಣಾಚಲಪ್ರದೇಶ ಮತ್ತು ಕರ್ನಾಟಕದ ಮೈಸೂರು, ಹೊಸಪೇಟೆ, ಚಾಮರಾಜನಗರ, ಚಿತ್ರದುರ್ಗಗಳಲ್ಲಿ ಮುನಿಸಿಪಲ್ ಅಡ್ಮಿನಿಸ್ಟ್ರೇಷನ್/ಸಿಟಿ ಕಾರ್ಪೊರೇಷನ್ ಕಡೆಯಿಂದ ನಿರ್ಮಾಣಗೊಂಡ ಸರ್ಕಾರಿ ಕಸಾಯಿಖಾನೆಗಳನ್ನು ಅಭಿವೃದ್ಧಿಪಡಿಸುವುದು, ಹೊಸದಾಗಿ ಅಲ್ಟ್ರಾಮಾಡನರ್ ಯಂತ್ರೋಪಕರಣದಿಂದ ಪ್ರಾಣಿವಧೆ, ಜಾನುವಾರು ಹತ್ಯೆಗಳನ್ನು ಎಸಗಲು ಪ್ರೋತ್ಸಾಹಿಸುವುದು ಫುಡ್ ಪ್ರೊಸೆಸಿಂಗ್ ಇಂಡಸ್ಟ್ರಿ ಸಚಿವೆಯ ಸದ್ಯದ ಮಹದೋದ್ದೇಶ.

ಇವಿಷ್ಟು ರಾಜ್ಯಗಳ ಮಹಾನಗರಗಳಲ್ಲಿ ಕಸಾಯಿಖಾನೆಗಳನ್ನು ಅಭಿವೃದ್ಧಿಪಡಿಸಲು ಹೊರಟಿರುವ ಸರಕಾರ ಮತ್ತದರ ಸಾಧ್ವಿ ಸಚಿವೆ ಆ ಕಸಾಯಿಖಾನೆಗಳಲ್ಲಿ ದಿನಕ್ಕೆ ಎಷ್ಟು ಪ್ರಾಣಿಗಳನ್ನು ಹತ್ಯೆ ಮಾಡಲಾಗುತ್ತದೆಂಬ ಲೆಕ್ಕವನ್ನೂ ಕೊಟ್ಟಿದ್ದಾರೆ. ಎಲ್ಲಿಯೂ ಜಾನುವಾರುಗಳ ಉಲ್ಲೇಖವಿಲ್ಲ. ಜಾಣತನದಿಂದ ‘ಲಾರ್ಜ್ ಅನಿಮಲ್ಸ್ ಎಂದು ತೇಲಿಸಲಾಗಿದೆ. ‘ಲಾರ್ಜ್ ಅನಿಮಲ್ಸ್‘ ಅಂದರೆ ಜಿರಾಫೆ ಒಂಟೆಗಳಲ್ಲ, ಡೈನೋಸಾರುಗಳೂ ಅಲ್ಲ, ಅವು ಎತ್ತು, ದನ, ಹಸುಗಳೆಂದರ್ಥ.

ಸರಕಾರಗಳು ನಡೆಸೋ ಈ ಕಸಾಯಿಖಾನೆಗಳಲ್ಲಿ ಎಮ್ಮೆ, ಕೋಣಗಳನ್ನಷ್ಟೇ ಹತ್ಯೆಗೈಯಲಾಗುತ್ತದೆ, ಹಸು, ಕರುಗಳನ್ನ ಕೊಲ್ಲುವುದಿಲ್ಲ ಎನ್ನುವುದು ನಿಮ್ಮ ಅನಿಸಿಕೆಯಾಗಿದ್ದರೆ ಕ್ಷಮಿಸಿ, ನಿಮ್ಮ ಎಣಿಕೆ ತಪ್ಪು. ಲೆಕ್ಕದಲ್ಲಿ ಎಮ್ಮೆ, ಕೋಣಗಳನ್ನು ತೋರಿಸುವ ಕಸಾಯಿಖಾನೆಗಳಲ್ಲಿ ಕೊಲ್ಲುವುದು ಹಸು, ದನಗಳನ್ನೇ. ಹೀಗಂತ ‘ಧರ್ಮ ಜನಜಾಗೃತಿ ಸಮಿತಿ‘ಯ ಲೇಖನವೊಂದು ಹೇಳುತ್ತದೆ. ಕಸಾಯಿಖಾನೆಗಳ ಕುರಿತಾದ ಫ್ಯಾಕ್ಟ್ ಫೈಂಡಿಂಗ್ ರಿಪೋರ್ಟುಗಳೂ ಹೇಳುತ್ತವೆ.

ಸದ್ಯಕ್ಕೆ ಪಶು ಜಾನುವಾರುಗಳನ್ನು ಕತ್ತಿಯಿಂದ ಕಡಿಯುವುದು ಬೇಡ, ಅಲ್ಟ್ರಾ ಮಾಡರ್ನ್ ಯಂತ್ರೋಪಕರಣಗಳಿಂದ ವೈಜ್ಞಾನಿಕವಾಗಿ ಕೊಲ್ಲಿ ಅಂತ ಕೇಂದ್ರ ಸರಕಾರ ಮತ್ತು ಸಾಧ್ವಿ ನಿರಂಜನರ ಮಹದಾಸೆ. ಸಾಧ್ವಿ ಸನ್ಯಾಸಿಯಾಗಿದ್ದುಕೊಂಡು ಪ್ರಾಣಿವಧೆ, ಜಾನುವಾರು ಹತ್ಯೆಯನ್ನು ಅಭಿವೃದ್ಧಿಪಡಿಸಲು ಹೊರಟಿರುವ ಕೇಂದ್ರಮಂತ್ರಿಯ ಧೈರ್ಯ ಮೆಚ್ಚಬೇಕಾದ್ದೇ. ಬಹಳಷ್ಟು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧಗೊಂಡಿದ್ದರೂ, ಅಂಥ ರಾಜ್ಯಗಳಲ್ಲಿ ವಯಸ್ಸಾದ, ದುರ್ಬಲಗೊಂಡ ಹಸು, ದನಗಳನ್ನು ಸಿಟಿ ಕಾರ್ಪೊರೇಷನ್ಗಳಿಂದ ‘ಫಿಟ್ ಫಾರ್ ಸ್ಲಾಟರ್‘ ಸರ್ಟಿಫಿಕೇಟ್ ಪಡೆದು ಸರಕಾರಿ ಕಸಾಯಿಖಾನೆಗಳಲ್ಲಿ ಕೊಲ್ಲುವ ಸಡಲಿಕೆಯನ್ನೂ ಸರಕಾರ ದಯಪಾಲಿಸಿರುವುದು ದುರಂತ. ಗೋ ಪ್ರೇಮ ಹೇಳೋಕೆ, ಕಸಾಯಿಖಾನೆ ಡೆವಲಪ್ ಮಾಡೋಕೆ. ಇದು ದೇಶಭಕ್ತರ ಸರಕಾರದ ತೆರೆಮರೆಯ ಕಳ್ಳಾಟಗಳ ಪುಟ್ಟ ಸ್ಯಾಂಪಲ್.

ಪೂರಕ ಲಿಂಕ್ ಗಳು 
Press Information Bureau Government of india
http://pib.nic.in/newsite/PrintRelease.aspx?relid=133994

State Wise Details of Abattoirs Project Assisted by MoFPI
http://www.mofpi.nic.in/H_Dwld.aspx…

ANNUAL REPORT 2014-2015 - PAGE 66
http://www.mofpi.nic.in/H_Dwld.aspx…

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)