varthabharthi


ಕಾಡಂಕಲ್ಲ್ ಮನೆ

ಕಾದಂಬರಿ

ವಾರ್ತಾ ಭಾರತಿ : 6 Aug, 2016
ಮುಹಮ್ಮದ್ ಕುಳಾಯಿ

--ಅಜ್ಜನ ಒಂದು ವಾಕ್ಯದ ಆ ತೀರ್ಪು!--
ಬ್ಯಾರ್ದಿ, ನಿಮ್ಮ ಬ್ಯಾರಿ ಎಂದರೆ ತ್ಯಾಂಪಣ್ಣನ ಜೀವ
ನಿಮ್ಮ ಬ್ಯಾರಿಗೂ ತ್ಯಾಂಪಣ್ಣ ಎಂದರೆ ಜೀವ

ಅವರು ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿಲ್ಲ ಆದರೆ ಒಂದೇ ತಾಯಿಯ ಮಕ್ಕಳಂತೆ ಮಾಡಿಕೊಟ್ಟಿದ್ದೇನೆ
ಸೂರ್ಯ-ಚಂದ್ರ ಇರುವ ತನಕ ಕಾಯುವೆ.
ಕೆಲವು ಪೋಲಿಗಳು ತ್ಯಾಂಪಣ್ಣನ-ಬ್ಯಾರಿಯ
ಸಂಬಂಧಕ್ಕೆ ಹುಳಿ ಹಿಂಡಲು ನೋಡುತ್ತಿದ್ದಾರೆ
ಅವರನ್ನು ನಾನು ನೋಡಿಕೊಳ್ಳುತ್ತೇನೆ.
ಈ ಮಣ್ಣಿನ ಮಹಾಶಕ್ತಿ ನಾನು.

ಈ ಕಾಲದಿಂದ ಮುಂದಿನ ಕಾಲದವರೆಗೆ ಅವರಲ್ಲಿ ಒಡಕು ಬಾರದಂತೆ ಕಾಯುವ ಭಾರ ನನ್ನದು
ನಿಮ್ಮ ಸಹಾಯಕ್ಕೆ ನಾನಿದ್ದೇನೆ
ಅರೆದವನನ್ನು ಕುಡಿಸುವೆ
ಕಲಸಿದವನನ್ನು ಮುಕ್ಕಿಸುವೆ
ಸೊಕ್ಕಿದವನನ್ನು ಮಟ್ಟ ಹಾಕುವೆ
ಅವರನ್ನು ಒಳ್ಳೆಯ ರೀತಿಯಲ್ಲಿ ಬಾಳಿಸುವೆ
ಸೂರ್ಯ-ಚಂದ್ರಾದಿ ಕಾಲದವರೆಗೆ ಒಳ್ಳೆಯದು ಹೇಳಿಸುವೆ
ಮಾನಕ್ಕೆ ಊನ ಬಾರದಂತೆ ಕಾಯುತ್ತಾ ರಕ್ಷಣೆ ನೀಡುವೆ
ಹೇಳಿದ ಈ ಮಾತನ್ನು ನಡೆಸಿಕೊಡುವೆ
ಬಿತ್ತಿದ ಬೀಜವನ್ನು ಮೊಳಕೆಯೊಡೆಸುವೆ
ತಲೆ ಎತ್ತಿ ನಡೆಸುವೆ
ನಿಮ್ಮ ಸಂಬಂಧವನ್ನು ಹಾಲು ಉಕ್ಕಿಸಿದಂತೆ ಉಕ್ಕಿಸುವೆ
................
‘‘ಈಗ ಅರ್ಥ ಆಯಿತಾ!’’
‘‘ಹೂಂ...’’
‘‘ಒಂದು ದಿನ ಏನಾಯಿತು ಗೊತ್ತಾ...!’’
ವಟ ವಟಾಂತ ಒಂದೇ ಸವನೆ ಮಾತನಾಡುತ್ತಿದ್ದ ಅಜ್ಜಿ ಇದ್ದಕ್ಕಿದ್ದಂತೆ ಕಲ್ಲು ಬಂಡೆಯಂತೆ ಮೌನವಾಗಿ ಬಿಟ್ಟರು. ಅವರ ಕಣ್ಣುಗಳು ಮುಚ್ಚಿತ್ತು. ಹಣೆ ತುಂಬಾ ಬೆವರ ಹನಿಗಳು.
‘‘ಅಜ್ಜೀ...’’
‘‘................’’
ತಾಹಿರಾ ಅಜ್ಜಿಯ ಹೆಗಲು ಹಿಡಿದು ಕುಲುಕಿದಳು. ಅಜ್ಜಿ ಕಣ್ಣುಬಿಟ್ಟು ಅವಳನ್ನೇ ಅಪರಿಚಿತರನ್ನು ನೋಡುವಂತೆ ದುರುಗುಟ್ಟಿದರು.
‘‘ಯಾಕಜ್ಜೀ... ಆಯಾಸ ಆಗ್ತಿದೆಯಾ?’’
‘‘................’’
‘‘ನೀರು ಬೇಕಾ?’’
ಅಜ್ಜಿ ‘‘ಬೇಕು’’ ಎಂಬಂತೆ ತಲೆಯಾಡಿಸಿದರು. ತಾಹಿರಾ ನೀರಿನ ಲೋಟವನ್ನೆತ್ತಿ ಅವರ ಬಾಯಿಗೆ ಹಿಡಿದಳು. ಅವರು ಗಟಗಟನೆ ಕುಡಿದರು.
‘‘ಆಯಾಸ ಆಗುವುದಾದರೆ ಸ್ವಲ್ಪಹೊತ್ತು ಮಲಗಿ ಅಜ್ಜಿ’’
‘‘ನಾನು ಎಂತ ಹೇಳಿದ್ದು?’’ ಅಜ್ಜಿ ಮತ್ತೆ ಯಥಾಸ್ಥಿತಿಗೆ ಬಂದರು.
‘‘ಒಂದು ದಿನ ಏನೋ ಆಯಿತು ಎಂದಿರಿ’’
‘‘ಹೌದು ಒಂದು ದಿನ ಏನಾಯಿತು ಗೊತ್ತಾ?’’
ಒಂದು ತುಂಡು ಭೂಮಿಯ ಮಧ್ಯೆ ಇರುವ ದಾರಿಯ ವಿಷಯದಲ್ಲಿ ಹಿಂದೂಗಳಿಗೂ, ಬ್ಯಾರಿಗಳಿಗೂ ವಿವಾದ ಉಂಟಾಯಿತು. ವಿವಾದದ ಬಗ್ಗೆ ಎರಡೂ ಕಡೆಯವರು ಗುಂಪು ಕೂಡಿದರು. ಮಾತಿಗೆ ಮಾತು ಬೆಳೆಯಿತು. ಗಲಾಟೆಯೇ ಆಗಿ ಹೋಯಿತು. ಆಗ ಅಲ್ಲಿಗೆ ಹೋದ ತ್ಯಾಂಪಣ್ಣ ಎರಡೂ ಕಡೆಯವರನ್ನು ಸಮಾಧಾನಪಡಿಸಿದ. ಬ್ಯಾರಿಗಳು ತ್ಯಾಂಪಣ್ಣನ ಮಾತಿಗೆ ಒಪ್ಪಿದರು. ಆದರೆ ಹಿಂದೂಗಳು ಒಪ್ಪಲಿಲ್ಲ. ಆಗ ಎಲ್ಲ ಹಿಂದೂಗಳನ್ನು ತನ್ನ ಮನೆಗೆ ಕರೆದುಕೊಂಡು ಹೋದ ತ್ಯಾಂಪಣ್ಣ ಪಂಚಾಯಿತಿ ಮಾಡಿಸಿ ಇದನ್ನು ಮುಗಿಸುವ. ಸುಮ್ಮನೆ ಗಲಾಟೆ ಯಾಕೆ. ನ್ಯಾಯ ನಿಮ್ಮ ಪರವಾಗಿ ಬರುವಂತೆ ವ್ಯವಸ್ಥೆ ಮಾಡುತ್ತೇನೆ ಎಂದು ಎಲ್ಲರನ್ನೂ ಒಪ್ಪಿಸಿದ್ದರು.
ಆತ ಅಂದು ಅಲ್ಲಿಂದ ಸೀದಾ ಬಂದದ್ದು ಈ ಮನೆಗೆ. ಅಜ್ಜನನ್ನು ಪಂಚಾಯಿತಿ ಮಾಡಲು ಕರೆಯಲು. ನಿನ್ನ ಅಜ್ಜ ಬಿಲ್‌ಕುಲ್ ಒಪ್ಪಲಿಲ್ಲ. ‘‘ಇದು ಎರಡು ಜಾತಿಗಳ ನಡುವಿನ ಜಗಳ. ಎಷ್ಟು ನ್ಯಾಯ ಪಾಲಿಸಿದರೂ ಒಂದು ಕಡೆಯವರ ದ್ವೇಷ ಕಟ್ಟಿಕೊಳ್ಳಬೇಕಾಗುತ್ತದೆ. ಆದ್ದರಿಂದ ನಾನು ಇದರಲ್ಲಿ ಕೈ ಹಾಕುವುದಿಲ್ಲ’’ ಎಂದುಬಿಟ್ಟರು ನಿನ್ನ ಅಜ್ಜ.
ಆನಂತರ ಅಜ್ಜನನ್ನು ಕೋಣೆಯೊಳಗೆ ಕರೆದು ಕೊಂಡು ಹೋಗಿ ಬಾಗಿಲು ಮುಚ್ಚಿದ ತ್ಯಾಂಪಣ್ಣ, ಅದು ಹೇಗೆ ಅವರನ್ನು ಒಪ್ಪಿಸಿದರೋ ಗೊತ್ತಿಲ್ಲ. ಮರುದಿನ ಬೆಳಗ್ಗೆ ಊರಿನ ಗ್ರಾಮ ಸಂಘದಲ್ಲಿ ನಿನ್ನಜ್ಜನ ನೇತೃತ್ವದಲ್ಲಿ ಪಂಚಾಯಿತಿಗೆ ಸಮಯ ನಿಗದಿಯಾಗಿತ್ತು.
ಆ ಪಂಚಾಯಿತಿ ಅವರ ಜೀವನದಲ್ಲಿ ಆ ತನಕ ನಡೆಸಿದ ಪಂಚಾಯಿತಿಯಂತಲ್ಲ. ಅದು ಇಡೀ ಊರಿನ ಸೌಹಾರ್ದತೆ, ಅನ್ಯೋನ್ಯತೆಯ ಪ್ರಶ್ನೆಯಾಗಿತ್ತು. ನಿನ್ನಜ್ಜ ಒಂದು ಸ್ವಲ್ಪತಪ್ಪಿದರೂ ಇಡೀ ಊರಿಗೆ ಬೆಂಕಿ ಬೀಳುವ ಸಾಧ್ಯತೆ ಇತ್ತು. ನಿನ್ನ ಅಜ್ಜ ಅಂದು ರಾತ್ರಿ ಇಡೀ ಕಣ್ಣೇ ಮುಚ್ಚಲಿಲ್ಲ.
‘‘ಯಾಕೆ ನಿದ್ದೆ ಬರ್ತಾ ಇಲ್ಲವಾ?’’ ಕೇಳಿದ್ದೆ ನಿನ್ನ ಅಜ್ಜನಲ್ಲಿ
‘‘ಇಲ್ಲ’’
‘‘ಮತ್ತೇಕೆ ಪಂಚಾಯಿತಿಗೆ ಒಪ್ಪಿಕೊಂಡಿರಿ?’’
‘‘ಒಪ್ಪಿಕೊಳ್ಳದಿದ್ದರೆ ಕೋಮುಗಲಭೆ ನಡೆಯಬಹುದು. ಇಡೀ ಊರು ಹೊತ್ತಿ ಉರಿಯಬಹುದು. ಕೊಲೆಗಳೂ ನಡೆಯಬಹುದು’’
‘‘ಹಾಗಾದರೆ ನಾಳೆ ಏನು ಮಾಡ್ತೀರಾ?’’
‘‘ಏನು ಮಾಡಬೇಕು ನೀನೇ ಹೇಳು, ನನಗೆ ದಾರಿಯೇ ತೋಚುತ್ತಿಲ್ಲ’’
‘‘ನ್ಯಾಯ ತಪ್ಪಿಹೋಗಬೇಡಿ. ಇಷ್ಟರ ತನಕ ನೀವು ನ್ಯಾಯ ತಪ್ಪಿಹೋದವರಲ್ಲ. ಇಡೀ ಊರಿಗೆ ನಿಮ್ಮ ಬಗ್ಗೆ ಹೆಮ್ಮೆಯಿದೆ. ಅದನ್ನು ಹಾಳು ಮಾಡಿಕೊಳ್ಳಬೇಡಿ’’
ಅಜ್ಜ ಮಾತನಾಡಲಿಲ್ಲ. ಏನೋ ಯೋಚಿಸುತ್ತಾ ಹಾಸಿಗೆಯಿಂದ ಎದ್ದು ಕುಳಿತು, ನೀರು ಕುಡಿದರು. ಅವರ ಮುಖದ ತುಂಬಾ ಚಿಂತೆ ಎದ್ದು ಕಾಣುತ್ತಿತ್ತು. ಹಣೆ ಬೆವರುತ್ತಿತ್ತು.
‘‘ಇಲ್ಲ ನಾನು ನ್ಯಾಯ ತಪ್ಪಿ ಹೋಗುವುದಿಲ್ಲ. ನನ್ನನ್ನು ಅಲ್ಲೇ ಕೊಂದು ಹಾಕಿದರೂ ಸರಿ, ನ್ಯಾಯದ ಹೊರತು ನನ್ನ ಬಾಯಿಯಿಂದ ಬೇರೆ ಒಂದು ಶಬ್ದವೂ ಹೊರಬೀಳುವುದಿಲ್ಲ’’ ಅಜ್ಜನ ಮಾತಿನಲ್ಲಿ ನಿರ್ಧಾರವಿತ್ತು.
‘‘ಯಾಕೆ ಹಾಗೆಲ್ಲ ಮಾತನಾಡುತ್ತೀರಿ. ನೀವು ಪಂಚಾಯಿತಿಗೇ ಹೋಗಬೇಡಿ, ಆಯಿತಲ್ಲ. ಸುಮ್ಮನೆ ದಾರಿಯಲ್ಲಿ ಹೋಗುವ ಮಾರಿಯನ್ನು ಮನೆಯೊಳಗೆ ಏಕೆ ಎಳೆದು ತರುತ್ತೀರಿ’’
‘‘ಇಲ್ಲ ಫಾತಿಮಾ, ನಾನು ಒಪ್ಪಿಯಾಗಿದೆ. ಹೋಗಲೇಬೇಕು. ಮಾತಿಗೆ ತಪ್ಪಬಾರದು. ಅದೂ ನಾನು ಮಾತು ಕೊಟ್ಟಿದ್ದು ತ್ಯಾಂಪಣ್ಣನಿಗೆ. ಹೋಗದಿದ್ದರೆ ಅವನ ಮರ್ಯಾದೆ ಹಾಳಾಗುತ್ತೆ. ದೇವರಿದ್ದಾನೆ. ನಮ್ಮ ಜೊತೆ ದೇವರಿದ್ದಾನೆ. ನೀನು ಪ್ರಾರ್ಥಿಸು’’
ಅಷ್ಟು ಹೇಳಿದವರೇ ನಿನ್ನಜ್ಜ ಮಲಗಿದರು. ಅವರ ಕಣ್ಣುಗಳು ಚಲನೆಯೇ ಇಲ್ಲದೆ ಸೂರನ್ನು ದಿಟ್ಟಿಸುತ್ತಿತ್ತು. ಒಂದೇ ಒಂದು ನಿಮಿಷ, ಮತ್ತೆ ನೋಡುವಾಗ ಅವರು ಗೊರಕೆ ಹೊಡೆಯುತ್ತಿದ್ದರು. ಅದೇ ಮಗುವಿನಂತಹ ಮುಖ, ನಿದ್ದೆಯಲ್ಲೂ ಅದೇ ಮಂದಹಾಸ. ಏನೂ ಆಗಿಯೇ ಇಲ್ಲದಂತಹ ಭಾವ.
ಮರುದಿನ ಗ್ರಾಮ ಸಂಘದಲ್ಲಿ 200ಕ್ಕೂ ಹೆಚ್ಚು ಜನ ಸೇರಿದ್ದರಂತೆ. ಆ ಊರಲ್ಲಿ ಒಂದು ಪಂಚಾಯಿತಿಗೆ ಇಷ್ಟೊಂದು ಜನ ಸೇರಿದ್ದು ಇದೇ ಮೊದಲು. ಎರಡೂ ಕಡೆಯವರು ಎಡ-ಬಲ ಬೇರೆ ಬೇರೆಯಾಗಿ ಕುಳಿತಿದ್ದರು. ಅಬ್ಬು ಕಾಕಾರಿಗೆ ಮಧ್ಯೆ ಕುರ್ಚಿ ಹಾಕಲಾಗಿತ್ತು. ತ್ಯಾಂಪಣ್ಣ ಶೆಟ್ಟಿ ಹಿಂದೂಗಳ ಕಡೆ ಮೊದಲ ಸಾಲಿನಲ್ಲಿ ಕಾಲಮೇಲೆ ಕಾಲು ಹಾಕಿ ಕುಳಿತಿದ್ದರು. ಇಷ್ಟೊಂದು ಜನರ ಸಭೆಯಲ್ಲಿ ಒಂದು ಸೂಜಿ ಬಿದ್ದರೂ ಕೇಳಿಸುವಂತಹ ನಿಶ್ಶಬ್ದ. ಅಬ್ಬು ಕಾಕಾ ಪಂಚಾಯಿತಿ ಪ್ರಾರಂಭಿಸಿದರು. ಎರಡೂ ಕಡೆಯವರ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿದರು. ತ್ಯಾಂಪಣ್ಣ ಮಾತನಾಡಲಿಲ್ಲ. ಮೌನವಾಗಿ ಕುಳಿತಿದ್ದರು. ಅವರ ಮುಖದಲ್ಲಿ ಗೆಲುವಿನ ಮಂದಹಾಸವಿತ್ತು. ಎಲ್ಲರ ಮಾತುಗಳು ಮುಗಿಯಿತು.
‘‘ಏನು ತ್ಯಾಂಪಣ್ಣ ಶೆಟ್ಟರೇ, ನಿಮಗೇನೂ ಹೇಳಲಿಕ್ಕಿಲ್ಲವಾ?’’ ಅಬ್ಬು ಬ್ಯಾರಿ ಕೇಳಿದರು.
‘‘ಎಲ್ಲರೂ ಹೇಳಿದರಲ್ಲ, ನಾನೆಂತ ಹೇಳುವುದು. ನನಗೆ ಹೇಳಲಿಕ್ಕೆ ಏನೂ ಇಲ್ಲ. ನೀವು ತೀರ್ಪು ಹೇಳಿಬಿಡಿ’’ ಎಂದರು ತ್ಯಾಂಪಣ್ಣ ಮುಗುಳುನಗುತ್ತಾ.
ಅಬ್ಬು ಬ್ಯಾರಿ ನೆಲ ನೋಡುತ್ತಾ ಕಲ್ಲಿನಂತೆ ಕುಳಿತುಬಿಟ್ಟರು. ಮತ್ತೆ ನಿಶ್ಶಬ್ದ. ಎಲ್ಲರೂ ಉಸಿರು ಬಿಗಿಹಿಡಿದು ಅಬ್ಬು ಬ್ಯಾರಿಯ ಮುಖವನ್ನೇ ದಿಟ್ಟಿಸುತ್ತಾ ಕುಳಿತುಬಿಟ್ಟಿದ್ದರು. ಅವರ ಬಾಯಿಯಿಂದ ಹೊರಬೀಳುವ ತೀರ್ಪಿಗಾಗಿ ಕಿವಿಯಗಲಿಸಿ ಕುಳಿತಿದ್ದರು. ಅಬ್ಬು ಬ್ಯಾರಿ ಇನ್ನೂ ಹಾಗೆಯೇ ಕುಳಿತಿದ್ದರು. ಅವರಲ್ಲಿ ಚಲನೆಯೇ ಇಲ್ಲ. ಒಂದು ನಿಮಿಷ- ಎರಡು ನಿಮಿಷ- ಐದು ನಿಮಿಷ ಕಳೆಯಿತು. ಅಬ್ಬು ಬ್ಯಾರಿ ತಲೆ ಎತ್ತಿದರು. ಒಮ್ಮೆ ಕೆಮ್ಮಿದರು. ಅವರ ಬಾಯಿಯಿಂದ ಹೊರಬಿದ್ದ ಒಂದು ವಾಕ್ಯದ ತೀರ್ಪು ಅಲ್ಲಿ ನೆರೆದಿದ್ದ ಹಿಂದೂಗಳನ್ನೆಲ್ಲ ರೊಚ್ಚಿಗೆಬ್ಬಿಸಿತ್ತು. ಅವರು ಬ್ಯಾರಿಗಳ ಪರವಾಗಿ ತೀರ್ಪು ನೀಡಿದ್ದರು.
ತ್ಯಾಂಪಣ್ಣನ ಮುಖ ಕಪ್ಪಿಟ್ಟಿತು. ಅವರು ದಡಕ್ಕನೆ ಎದ್ದು ನಿಂತು ತನ್ನ ಹೆಗಲ ಮೇಲಿದ್ದ ಶಾಲನ್ನು ತೆಗೆದು ಒಮ್ಮೆ ಜಾಡಿಸಿ ‘‘ಕೊನೆಗೂ ನೀವು ನಿಮ್ಮ ಬ್ಯಾರಿ ಬುದ್ಧಿ ಬಿಡಲಿಲ್ಲ ಅಬ್ಬು ಬ್ಯಾರಿ ಅಲ್ಲವೇ. ನಿಮ್ಮನ್ನು ನಂಬಿ ಬಂದಿದ್ದಕ್ಕೆ ನನಗೆ ಹೊಡೆಯಬೇಕು ಹಳೆಯದರಲ್ಲಿ. ನಿಮ್ಮನ್ನು ನನಗೆ ಈಗ ಏನೂ ಮಾಡಬಹುದು. ನಾನು ಒಂದು ಬೆರಳು ತೋರಿಸಿದರೂ ಸಾಕು ನನ್ನ ಜನ ನಿಮ್ಮ ತಲೆ ಕಡಿಯಲಿಕ್ಕೂ ತಯಾರಿದ್ದಾರೆ. ಆದರೆ ನಾನು ಅಂತಹ ಹೇಡಿಯಲ್ಲ. ನೋಡಿಕೊಳ್ಳುತ್ತೇನೆ ನಿಮ್ಮನ್ನು. ಪಂಚಾಯಿತಿಯಂತೆ ಪಂಚಾಯಿತಿ... ಥೂ...’’ ಎಂದು ಕ್ಯಾಕರಿಸಿ ಉಗುಳಿದವರೇ ಬುಸುಗುಟ್ಟುತ್ತಾ ಸರಸರನೆ ಅಲ್ಲಿಂದ ಹೋದರು. ಅವರ ಹಿಂದೆಯೇ ಹಿಂದೂಗಳು ಹೆಜ್ಜೆ ಹಾಕಿದರು.
ಅಬ್ಬು ಬ್ಯಾರಿ ಕಂಬದಂತೆ ನಿಂತಿದ್ದರು. ಅವರ ಬಾಯಿಯಿಂದ ಒಂದು ಮಾತೂ ಹೊರಡಲಿಲ್ಲ. ಅಲ್ಲಿದ್ದ ಬ್ಯಾರಿಗಳಿಗೆ ಅವರ ಜೊತೆ ಮಾತನಾಡಲೂ ಧೈರ್ಯ ಉಳಿದಿರಲಿಲ್ಲ.
ಈ ಪಂಚಾಯಿತಿಯ ವಿವರಗಳನ್ನೆಲ್ಲ ನಾನು ಕಳುಹಿಸಿದ್ದ ಬೀಡಿ ಬ್ರಾಂಚ್‌ನ ಹುಸೈನ್ ಮೊದಲೇ ಬಂದು ಅಲ್ಲಿ ನಡೆದದ್ದನ್ನು ಮೇಲಿನಂತೆ ವರದಿ ಒಪ್ಪಿಸಿದ್ದ. ನಾನು ನಡುಗಿ ಹೋಗಿದ್ದೆ. ನಾನು ಜಗಲಿಯಲ್ಲಿ ಕುಳಿತು ಅಜ್ಜನ ದಾರಿ ನೋಡತೊಡಗಿದೆ. ಅಜ್ಜ ಕಾಣಲಿಲ್ಲ. ನನ್ನ ಎದೆ ಜೋರಾಗಿ ಬಡಿದುಕೊಳ್ಳತೊಡಗಿತ್ತು. ಒಂದೊಂದು ಕ್ಷಣವೂ ನನಗೆ ಒಂದೊಂದು ಯುಗದಂತೆ ಭಾಸವಾಗತೊಡಗಿತ್ತು. ನಾನು ಜಗಲಿಯ ಕಂಬಕ್ಕೆ ಒರಗಿ ಚಡಪಡಿಸತೊಡಗಿದೆ...
ಅಷ್ಟರಲ್ಲಿ ದೂರದಲ್ಲಿ ನಿನ್ನಜ್ಜ ಒಬ್ಬರೇ ಕಾಲೆಳೆ ಯುತ್ತಾ ಬರುವುದು ಕಾಣಿಸಿತು. ಅಜ್ಜ ಮನೆಯ ಹತ್ತಿರವಾಗುತ್ತಿದ್ದಂತೆಯೇ ನಾನು ಓಡಿ ಹೋಗಿ ಅವರ ಭುಜ ಹಿಡಿದು ಒಳಗೆ ಕರೆತಂದು ಆರಾಮ ಕುರ್ಚಿಯಲ್ಲಿ ಒರಗಿಸಿದೆ. ಕುಡಿಯಲು ನೀರು ಕೊಟ್ಟೆ. ಮುಖಕ್ಕೆ ತಣ್ಣೀರು ಹಾಕಿ ಒರೆಸಿದೆ. ಅಜ್ಜ ಒಂದು ಮಾತೂ ಆಡಲಿಲ್ಲ. ಹಾಗೆಯೇ ಕುರ್ಚಿಗೆ ಒರಗಿ ಕಣ್ಣು ಮುಚ್ಚಿದರು. ನಾನು ಅವರ ಕಾಲಬುಡದಲ್ಲಿ ಅವರ ತೊಡೆಯ ಮೇಲೆ ತಲೆ ಇಟ್ಟು ಕುಳಿತೆ. ಅವರ ಎದೆಯೊಳಗೆ ಬೀಸುತ್ತಿರುವ ಬಿರುಗಾಳಿ ನನಗೆ ಅರ್ಥವಾಗಿತ್ತು. ಆ ಬಿರುಗಾಳಿ ಶಾಂತವಾಗಲಿ ಎಂದು ಮೌನವಾಗಿ ಕಾಯುತ್ತಾ ಕುಳಿತೆ.
‘‘ಫಾತಿಮಾ’’ ಬಹಳ ಹೊತ್ತಿನ ನಂತರ ಅವರ ಬಾಯಿಯಿಂದ ಮಾತು ಹೊರಬಂತು.
‘‘ಏನು?’’ ನಾನು ದಡಕ್ಕನೆ ಎದ್ದು ನಿಂತು ಅವರ ಮುಖ ನೋಡಿದೆ. ಅವರ ಕಣ್ಣುಗಳು ಮುಚ್ಚಿಯೇ ಇತ್ತು. ತುಟಿ ಒಣಗಿತ್ತು.
‘‘ಏನು? ನೀರು ಬೇಕಾ?’’ ಕೇಳಿದೆ.
ಅಷ್ಟರಲ್ಲಿ ಅವರ ಕಣ್ಣಿಂದ ಕಟ್ಟೆ ಒಡೆದಂತೆ ನೀರು ಹರಿಯತೊಡಗಿತು. ತುಟಿ ಅದುರತೊಡಗಿತು.
‘‘ಕಣ್ಣೀರು ಹಾಕಬೇಡಿ ನೀವು...’’ ಅವರ ಕಣ್ಣಿಗೆ ನನ್ನ ಕೆನ್ನೆ ತಾಗಿಸಿ ಅವರ ಕಣ್ಣೀರನ್ನು ತಡೆಯಲು ಪ್ರಯತ್ನಿಸಿದೆ.
‘‘ಫಾತಿಮಾ... ನನ್ನ ಫಾತಿಮಾ...’’ ಅವರೀಗ ನನ್ನನ್ನು ತಬ್ಬಿ ಹಿಡಿದು ಮಗುವಿನಂತೆ ಬಿಕ್ಕಿ ಬಿಕ್ಕಿ ಅಳತೊಡಗಿದರು. ನನ್ನ ಜೀವನದಲ್ಲಿ ನಿನ್ನ ಅಜ್ಜ ಈ ರೀತಿ ಅತ್ತದ್ದು ನಾನು ಅದೇ ಮೊದಲು ನೋಡಿದ್ದು. ಅವರ ಜೊತೆ ನಾನೂ ಅತ್ತು ಬಿಟ್ಟೆನಮ್ಮಾ... ನನಗೆ ಬೇರೇನು ಮಾಡಲಿಕ್ಕಾಗುತ್ತೆ ಹೇಳು...?’’
ಅಷ್ಟು ಹೇಳಿದವರೇ ಅಜ್ಜಿ, ಇದ್ದಕ್ಕಿದ್ದಂತೆ ಮೌನವಾಗಿ ಬಿಟ್ಟರು. ಏನೋ ನೆನಪಿಸುವವರಂತೆ ಕಣ್ಣು ಪಿಳಿ ಪಿಳಿ ಮಾಡುತ್ತಾ ಕುಳಿತುಬಿಟ್ಟರು.
             (ಗುರುವಾರದ ಸಂಚಿಕೆಗೆ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)