varthabharthi


ಕಲೆ - ಸಾಹಿತ್ಯ

ಕಥೆ: “ ಮಾನ ಮರ್ಯಾದೆಯಿಂದ ಇರೋದನ್ನು ಕಲಿತುಕೊಳ್ಳಿ ಮೊದಲು”

ವಾರ್ತಾ ಭಾರತಿ : 6 Sep, 2016
ಶಬೀನಾ ಬಾನು ವೈ.ಕೆ. ಹತ್ತಿಮತ್ತೂರು, ಹಾವೇರಿ ಜಿಲ್ಲೆ

"ಅಗೆ, ಓಯ್ ಖಡ್‍ಗೆ ಜರಾ... (ಏಯ್ ನಿಲ್ಲೆ ಅಲ್ಲಿ)"

"ಪಲಟ್ ನಾ ಜರಾ ಚಹರಾ ತೋ ದಿಖಾಗೆ"

(ತಿರುಗೆ... ಸ್ವಲ್ಪ ಮುಖಾನಾದ್ರೂ ತೋರಿಸೆ)

ರಿಫಾತ್ ಹೆದರಿಕೆಯಿಂದ ಬ್ಯಾಗು ಗಟ್ಟಿಹಿಡಿದು ಬುರ್ಖಾ ಮೇಲೆತ್ತಿ ಓಟಕ್ಕಿತ್ತಳು. ಅವಳ ಹಿಂದೆ ಪಡ್ಡೆ ಹುಡುಗರ ದಂಡೊಂದು `ಜಿಂಕೆ ಮರಿನಾ... ನೀ ಜಿಂಕೆ ಮರೀನಾ' ಅಂತಾ ಹಾಡುತ್ತಾ ಹಿಂಬಾಲಿಸ ತೊಡಗಿದರು. ಬಸ್ಸ್ ನಿಲ್ದಾಣ ತಲುಪಿದಾಗ ಸಮಾಧಾನವಾಯ್ತಾದರೂ ಆ ಹುಡುಗರ ಕೀಟಲೆ ತಪ್ಪಲಿಲ್ಲ. ಸರಕಾರಿ ಬಸ್ಸು ಬರುವುದೇ 5 ಗಂಟೆಗೆ. ಅದು ತಪ್ಪಿದರೆ 7 ಗಂಟೆಗೆ ಶಾಲೆಯ ದಾರಿಯುದ್ದಕ್ಕೂ ಇರುವ ಈ ಕಾಡಿನಂತಹ ಹಾದಿಯಲ್ಲಿ ಗುಂಡಿಗಳೇ ತುಂಬಿಕೊಂಡಿವೆ. ಹಾಗಿರುವಾಗ ಈ ಹುಡುಗರ ಕಾಟ ಕೂಡಾ ಸಂಕಟಕ್ಕೀಡು ಮಾಡಿತ್ತು. "ಬಸ್ಸ್ ಬಂತು" ಎಂದು ಹತ್ತಿರ ನಿಂತ ಹುಡುಗರು ಬೇಸರದಿಂದ ಲೊಚಗೂಡುತ್ತಿದುದ್ದರಿಂದ ಬೇಗನೆ ಬಸ್ಸ್ ಹತ್ತಿದಳು. ನಿಲ್ಲಲು ಜಾಗವಿಲ್ಲದ ಬಸ್ಸಿನಲ್ಲಿ ಅದ್ಹೇಗೋ ಪಾಸ್ ತೋರಿಸಿ ಊರಿಗಿಳಿದಳು. ಮನೆಗೆ ಮತ್ತೆ ಅರ್ಧ ಕಿಲೋ ಮೀಟರ್ ನಡೆಯಬೇಕಾದುದ್ದರಿಂದ ಬರುವ ಗಲ್ಲಿಯ ಎಲ್ಲ ಹಿರಿಯರ ಛೀಮಾರಿಯನ್ನು ಕೇಳಿಸಿಕೊಳ್ಳಬೇಕಿತ್ತು.

"ಇತ್ತಿ ಬಡಿ ಹುವಿ ಗರ್‍ಮೇ ಬೈಟ್‍ಕೋ ಬೀಡಿ ಬಂದ್‍ನೇ ಕ್ಯಾಹುವೇಗೆ ತುಜೆ? ಕಬಿ ಬಿ 6-7 ಬಜೆ ಗರ್‍ಕು ಆನೆ ಶರಮ್ ನೈ ಆತಿ ಕ್ಯಾ"

(ಇಷ್ಟು ದೊಡ್ಡವಳಾಗಿದ್ದೀಯ. ಮನೆಯಲ್ಲಿ ಕುತ್ತ್ಕೊಂಡು ಬೀಡಿ ಕಟ್ಟೊಕ್ಕೇನೆ ನಿನಗೆ? ಯಾವಾಗ್ಲೂ 6-7 ಗಂಟೆಗೆ ಮನೆಗೆ ಬರೋಕೆ ನಾಚಿಕೆ ಆಗಲ್ವಾ?)

ಹೀಗೆ ಹತ್ತು ಹಲವು ಬೈಗುಳಗಳನ್ನು ತಿಂದು ರಿಫಾತ್ ಮನೆ ತಲುಪಿದಳು.

"ಸಾವಿರ ಬೀಡಿ ಇವತ್ತು ಕಟ್ಟಿಯಾಗ್ಬೇಕು. ಇಲ್ಲಾಂದ್ರೇ ಪಾಸ್‍ಗೆ ಹಣವಿಲ್ಲ" ಅಮ್ಮಾ ನಿಟ್ಟುಸಿರುಬಿಟ್ಟರು. ರಿಫಾತ್ ಬೀಡಿಯ ಸೂಪು ಹಿಡಿದು ತನ್ನ ಸಣ್ಣ ಮನೆಯ ಬಾಗಿಲ ಹಿಂದೆ ಕುಳಿತು ಬೀಡಿ ಕಟ್ಟಲಾರಂಭಿಸಿದಳು.

* * *

ರಿಫಾತ್ ಕಲಿತದ್ದು ಉರ್ದು ಪ್ರಾಥಮಿಕ ಶಾಲೆಯಲ್ಲಿ. ಏಳನೇ ತರಗತಿಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ರಿಫಾತ್‍ಗೆ ಉನ್ನತ ವ್ಯಾಸಂಗ ಮಾಡುವ ಮಹದಾಸೆಯಿತ್ತು. ಮನೆಯಲ್ಲಿ ಬಡತನವಿದ್ದರೂ ಕಟ್ಟುವ ಬೀಡಿಯಲ್ಲಿ ಸಂಪಾದನೆ ಮಾಡಿ ವಿದ್ಯಾಭ್ಯಾಸ ನಡೆಸಲು ತೀರ್ಮಾನಿಸಿದ್ದಳು. ಉರ್ದು ಮೀಡಿಯಂ ಶಾಲೆಯಾದ ಕಾರಣ ಉನ್ನತ ಶಿಕ್ಷಣಕ್ಕೆ 15 ಕಿಲೋ ಮೀಟರ್ ದೂರದಲ್ಲಿರುವ ನಗರಕ್ಕೆ ತೆರಳಬೇಕಿತ್ತು. ಊರಿನಿಂದ ಬೆಳಿಗ್ಗೆ ಏಳುವರೆಗಂಟೆಗೆ ಬಸ್ಸು ಹತ್ತಿದರೆ ಸಂಜೆ ಬರುವ 5 ಗಂಟೆ ಬಸ್ಸಿಗೆ ವಾಪಾಸ್ ಊರಿಗೆಬರಬೇಕು. ಪಾಸ್ ಮಾಡೋದರಿಂದ ಸ್ವಲ್ಪ ಹಣ ಉಳಿತಾಯವಾದರೂ ಇರುವ ಈ ಎರಡು ಬಸ್ಸುಗಳು ಸದಾ ತುಂಬಿ ತುಳುಕುವಾಗ ದಮ್ಮುಗಟ್ಟಿದ ಪರಿಸ್ಥಿತಿಯಲ್ಲಿ ಕೆಲವೊಮ್ಮೆ ಬೇರೆ ದಾರಿ ಕಾಣದೇ ಬಸ್ಸಿನ ಮೇಲೆ ಪ್ರಯಾಣ ಬೆಳೆಸ ಬೇಕಿತ್ತು. ಆದರೂ ರಿಫಾತ್‍ಗೆ ಉರ್ದು, ಅರೆಬಿಕ್ ವ್ಯಾಮೋಹ ತಪ್ಪಲಿಲ್ಲ. ಸದಾ ` ಎಂ ಎ  ಇನ್ ಉರ್ದು', `ಎಂ ಎ   ಇನ್  ಅರೆಬಿಕ್' ಎಂದು ತನ್ನ ಹೆಸರಿನ ಜೊತೆ ಸೇರಿಸಿ ಬರೆಯುವುದು ರೂಢಿಯಾಗಿತ್ತು. ಇಂಗ್ಲಿಷ್, ಕನ್ನಡ ಅಷ್ಟಕ್ಕಷ್ಟೆ. ಇನ್ನು ರಿಫಾತ್ ಎದುರು ಇರುವ ಸಮಸ್ಯೆ ಅಪ್ಪನ ಕುಡಿತ, ಅಪ್ಪ ಕುಡಿದು-ಕುಡಿದು ಅಲ್ಲಲ್ಲಿ ಬಿದ್ದಾಗ ಎಬ್ಬಿಸಿಕೊಂಡು ಬರಲು ರಿಫಾತ್ ಮತ್ತು ಅವಳ ಸಣ್ಣ ತಮ್ಮ ರಾತ್ರಿ ಟಾರ್ಚ್ ಹಿಡಿದು ರಸ್ತೆ ಬದಿಯ ಗಟಾರಗಳಲ್ಲಿ ಅಪ್ಪನಿಗಾಗಿ ಹುಡುಕುತ್ತಾ ಸಾಗಬೇಕಿತ್ತು. ರಿಫಾತ್‍ನ ಮನೆ ಮಳೆ ಬಂದರೆ ಅಲ್ಲಲ್ಲಿ ಸೋರುತ್ತಿತ್ತು. ಆಗಾಗ ಅಮ್ಮ ಅವಳಿಗೆ ಹೇಳುವುದೂ ಇದೆ ಮನೆ ರಿಪೇರಿ ಮಾಡಬೇಕಾದ್ರೆ ಅಷ್ಟು ಹಣ ಬೇಕು ಇಷ್ಟು ಹಣ ಬೇಕು ಎಂದು.

ಇದ್ಯಾವುದು ರಿಫಾತ್‍ಗೆ ತೊಂದರೆಯಾಗಿರಲಿಲ್ಲ. ಆದ್ರೆ ರಿಫಾತ್‍ಗೆ ಈ ಪಡ್ಡೆ ಹುಡುಗರ ಕಾಟ ಸಹಿಸಲಾಗುತ್ತಿರಲಿಲ್ಲ. ಕೆಲವೊಮ್ಮೆ ಒಬ್ಬಂಟಿಯಾಗಿ ಶಾಲೆಗೆ ಹೋಗಲು ಹೆದರಿ ಅಮ್ಮನ ಹರಿದ ಬುರ್ಖಾಧರಿಸಿ ಹೋಗುತ್ತಿದ್ದಳು. ಅಮ್ಮಾ ಬೀಡಿಕೊಟ್ಟು ಬರಲು ತೆರಳಿದರೆ ಮನೆಯಲ್ಲಿ ಅವಳೊಬ್ಬಳೆ ಇದ್ದಾಳೆಂದರಿತರೆ ಸಾಕು ಪಡ್ಡೆ ಹುಡುಗರು ಅಲ್ಲಿ ಹಾಜರ್ ಆಗುತ್ತಿದ್ದರು. ಸದಾ ಅವಳಿಗೆ ಕೀಟಲೆ ಕೊಡುವುದರಲ್ಲೇ ಅವರಿಗೆ ಆನಂದ ಸಿಗುತ್ತಿತ್ತೋ ಏನೋ, ಬಾಗಿಲು ಹಾಕಿದ ರಿಫಾತ್ ಅದನ್ನು ತೆಗೆಯುವುದು ಅಮ್ಮನ ಧ್ವನಿ ಕೇಳಿದಾಗ.

`ಏಯ್ ಮಲಗೆ ಸಾಕು ಎಷ್ಟು ಕಟ್ತೀಯಾ ಇನ್ನು, ಸಾವಿರ ಮೇಲಾಯ್ತು' ಎಂದು ಅಮ್ಮ ಧ್ವನಿಗೂಡಿಸಿದಾಗ ರಿಫಾತ್ ಎದ್ದು ಮುಖ ತೊಳೆದು ನಿದ್ರೆಗೆ ಜಾರಿದಳು. ಸಂಜೆ ಬಂದಾಗಿನಿಂದ ಕುಳಿತಲ್ಲೇ ಬೀಡಿ ಕಟ್ಟುತ್ತಾ ಚಾ ಹೀರಿದ ರಿಫಾತ್ ಮಲಗಿದ್ದು ಹನ್ನೆರಡಕ್ಕೆ. ಮರುದಿನ ಅದೇ ಬಸ್ಸು ಹಿಡಿದು ಶಾಲೆಗೆ ತೆರಳಿದಳು. ಆಫೀಸ್‍ನಿಂದ ಪ್ರಿನ್ಸಿಪಾಲರ ಕರೆ ಬಂತು. ಹೋಗಿ ಹಾಜರಾದಾಗ “ಇದೇನೂ ಧರ್ಮ ಛತ್ರ ಅಂದ್ಕೊಂಡಿದ್ದೀಯಾ? ಫೀಸ್ ಯಾರು ಕಟ್ಟೋದು?" ಪ್ರಿನ್ಸಿಪಾಲ್ ಗುಡುಗಿದರು.

"ಕಟ್ತೇನೆ ಸರ್" ಮೆಲು ಧ್ವನಿಯಲ್ಲಿ ರಿಫಾತ್.

"ಹೋಗು... ಹೋಗಿ ಬೇಗ ಫೀಸ್ ಕಟ್ಟೋಕೆ ಹೇಳು ಮನೆಯಲ್ಲಿ" ಎಂದು ಪ್ರಿನ್ಸಿಪಾಲ್ ಅವಳನ್ನು ಹೋಗಲನುಮತಿಸಿದರು. ಸಂಜೆ ದಾರಿಯಲ್ಲಿ ಮತ್ತೆ ಅದೇ ಪಡ್ಡೆ ಹುಡುಗರ ದಂಡು.

`ತೂ ಚೀಜ್ ಬಡಿ ಹೈ ಮಸ್ತ್ ಮಸ್ತ್' ಎಂದು ಹಾಡುತ್ತಾ ಅವಳನ್ನು ಸುತ್ತುವರಿದರು.  ರಿಫಾತ್ ಓಡಬೇಕೆನ್ನುವಾಗ ಒಬ್ಬ ಹುಡುಗ ಅಡ್ಡಕಾಲಿಟ್ಟು ಬೀಳಿಸಿಬಿಟ್ಟ. ಬಿದ್ದ ಪೆಟ್ಟಿಗೆ ಅವಳ ಹಿಮ್ಮಡಿಯಿಂದ ರಕ್ತ ಹರಿಯಲಾರಂಭಿಸಿತು. ತಲೆಗೆ ಸಣ್ಣ ಗಾಯವಾಯ್ತು. ಆದರೂ ಎದ್ದು ಬಸ್ಸ್ ಸ್ಟಾಪ್ ತಲುಪಿದಳು. ಬಸ್ಸ್ ಬರಲು ಇನ್ನು ಹತ್ತು ನಿಮಿಷವಿತ್ತು. ರಿಫಾತ್‍ಗೆ ಈ ಹುಡುಗರ ಕಾಟ ಸಹಿಸದಾಯ್ತು. ಇನ್ನೇನು ಕೆಲವೇ ನಿಮಿಷಗಳಲ್ಲಿ ಬಸ್ ಬರುತ್ತದೆನ್ನುವಾಗ ಹುಡುಗರಲ್ಲೊಬ್ಬ ಅವಳ ಹೆಗಲ ಮೇಲೆ ಕೈಯಿಟ್ಟ. ತನಗರಿವಿಲ್ಲದೆ ರಿಫಾತ್ ಬೆಚ್ಚಿಬಿದ್ದಳು. ಹಿಂತಿರುಗಿ ಅವನ ಕೆನ್ನೆಗೆ ಛಟಾರನೆ ಬಾರಿಸಿದಳು. ಅಷ್ಟೇ ಅಲ್ಲಿದ್ದವರ ಧ್ವನಿ ಉಡುಗಿಹೋಯ್ತು. ಬಸ್ಸಿನ  ಹಾರ್ನ್ ಕೇಳಿಸುತ್ತಿತ್ತು. "ಮಾನ ಮರ್ಯಾದೆಯಿಂದ ಇರೊದನ್ನು ಕಲಿತ್ಕೊಳ್ಳಿ ಮೊದಲು. ಇದೇ ರೀತಿ ನಿಮ್ಮ ಅಕ್ಕ-ತಂಗಿಗೆ ಮಾಡಿ .... ನನಗಲ್ಲ" ಎಂದು ಅಳುತ್ತಾ ಬಸ್ಸ್ ಹತ್ತಿದಳು.

ಮನೆಗೆ ಬಂದ ಅರಿವೂ ಅವಳಿಗಾಗಲಿಲ್ಲ. ಊರಿಡಿ ಸುದ್ದಿ ಹಬ್ಬಿತ್ತು. "ನಾಲ್ಕೈದು ಹುಡುಗರು ರಿಫಾತ್‍ಗೆ ಹೊಡೆದಿದ್ದಾರೆ" ಎಂದು ಒಂದು ಕಡೆಯ ಸುದ್ದಿ ಆದ್ರೆ, `ಅವಳಿಗೇನೋ ಮಾಡಿದ್ದಾರೆ' ಎಂದು ಇನ್ನೊಂದು ಕಡೆ. ಮತ್ತೆ ಕೆಲವರು `ಅವಳು ಸರಿಯಾಗಿ ಕೊಟ್ಲು ಆ ಹುಡುಗನಿಗೆ' ಎಂದು.

ಈ ಮಧ್ಯ ರಿಫಾತ್‍ನ ತಾಯಿ ಅವಳ ಶಾಲೆ ಮೊಟಕುಗೊಳಿಸಿದರು. ರಿಫಾತ್ ಬೀಡಿಯ ಸೂಪು ಹಿಡಿದು ಬೀಡಿ ಸುತ್ತುತ್ತಿದ್ದಾಳೆ. ಅವಳಿಗೀಗ `ರಿಫಾತ್ ಎಂ ಎ   ಇನ್ ಉರ್ದು, ಎಂ ಎ   ಇನ್ ಅರೆಬಿಕ್' ಎಂಬುದು ಕನಸಿನ ಮಾತಾಗಿದೆ. ನಿರೀಕ್ಷೆ ಬತ್ತಿ ಹೋಗದಿರಲು ಪ್ರತಿಬಾರಿ ಉರ್ದು ಶಾಲೆಯ ಹೊಸ ಪಠ್ಯ ಪುಸ್ತಕಗಳನ್ನು ಇತರರಿಂದ ಕೇಳಿ ಕಲಿಯುತ್ತಾಳೆ, ಓದುತ್ತಾಳೆ. ಬೀಡಿ ಕಟ್ಟುವಾಗ ರಿಫಾತ್ ಮನಸ್ಸು ಬಯಸುತ್ತದೆ. "ನಮ್ಮೂರಿನಲ್ಲೊಂದು ಉರ್ದು ಕಾಲೇಜಿರುತ್ತಿದ್ದೇ? ನಾನು 'ಎಂ.ಎ. ಉರ್ದು' ಆಗುತ್ತಿದ್ದನೇನೋ ಎಂ ಎ  ಇನ್ ಅರೆಬಿಕ್ ಆಗುತ್ತಿದ್ದೆನೇನೋ....!" ಎಂದು.  ಬೀಡಿ ಸುತ್ತಿದ ಕಟ್ಟಿಗೆ ಬೆಂಕಿ ಹೊತ್ತಿಸಿ ಸೇದಿದಂತೆ ಎದೆಯಿಂದ ಭಾರವಾದ ಉಸಿರು ಬಿಡುತ್ತಾ ನಿರೀಕ್ಷಿಸುತ್ತಾ ಉನ್ನತ ವ್ಯಾಸಾಂಗಕ್ಕಾಗಿ ಉರ್ದು ಕಾಲೇಜೊಂದಿರುತ್ತಿದ್ದರೆ...?!! ಎಂಬ ಗಗನ ಕುಸುಮವನ್ನು ಬಯಸುತ್ತಿದ್ದಳೇನೋ ಅನ್ನಿಸುತ್ತೆ.

ಶಬೀನಾ ಬಾನು ವೈ.ಕೆ.  ಹತ್ತಿಮತ್ತೂರು, ಹಾವೇರಿ ಜಿಲ್ಲೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)