varthabharthi


ಕಾಡಂಕಲ್ಲ್ ಮನೆ

ಕಾದಂಬರಿ ಧಾರಾವಾಹಿ-23

ವಾರ್ತಾ ಭಾರತಿ : 7 Sep, 2016
ಮುಹಮ್ಮದ್ ಕುಳಾಯಿ

--ಅಜ್ಜಿ-ಮೊಮ್ಮಗಳ ‘ಪ್ರೇಮ’ ಸಂವಾದ--

‘‘ಬರ್ತಾರೆ... ಬರ್ತಾರೆ... ಈವತ್ತು ಯಾವ ವಾರ?’’
‘‘ಬುಧವಾರ’’
‘‘ನಾಳೆ ಬರ್ತಾರೆ... ನಾಳೆ’’
‘‘ಅದೇನು ನಾಳೆ ಬರುವುದು?’’
‘‘ನಾಳೆ ಒಳ್ಳೆಯ ದಿನ ಅಲ್ಲವಾ?’’
‘‘ನಾಳೆ ಎಂತದು ಒಳ್ಳೆಯ ದಿನ?’’
‘‘ನಾಳೆ ಶುಕ್ರವಾರ ರಾತ್ರಿ ಅಲ್ಲವಾ? ಪೆದ್ದಿ, ನಿನಗೆ ಅಷ್ಟೂ ಗೊತ್ತಿಲ್ಲವಾ?’’ ಅಜ್ಜಿ ಹುಸಿ ಕೋಪ ತೋರಿಸಿದರು.
‘‘ಅದೇನು ಶುಕ್ರವಾರ ರಾತ್ರಿ ಮಾತ್ರ ಬರುವುದು?’’
ನನ್ನನ್ನು ನೋಡಬೇಕೂಂತ ಅನಿಸಿದರೆ ಬರ್ತಾರೆ. ಇನ್ನು ನಾನು ನೋಡಬೇಕು ಎಂದು ಬಯಸಿದಾಗಲೂ ಬರ್ತಾರೆ’’
‘‘ಅಜ್ಜ ಎಲ್ಲಿಗೆ ಹೋಗಿದ್ದಾರೆ ಅಜ್ಜಿ?’’
‘‘ಹೋಗುವುದೆಲ್ಲಿಗೆ, ಇಲ್ಲೇ ಇರ್ತಾರೆ. ಆಚೀಚೆ ಹೋಗ್ತಾ ಇರ್ತಾರೆ. ಕರೆದರೆ ಬರ್ತಾರೆ. ನನ್ನನ್ನು ಬಿಟ್ಟು ಅವರು ಎಲ್ಲಿಗೆ ಹೋಗುವುದು. ಪಾಪ ಅವರಿಗೆ ನನ್ನ ಬಿಟ್ಟು ಬೇರೆ ಯಾರಿದ್ದಾರೆ ಹೇಳು.’’
‘‘ಅಜ್ಜಿ ನಿಮ್ಮದು-ಅಜ್ಜಂದು ಲವ್ ಮ್ಯಾರೇಜಾ?’’
‘‘ಏನು?’’
‘‘ನಿಮ್ಮದು ಲವ್ವಂತ ಕೇಳಿದೆ’’
‘‘ಹಾಗೆಂದರೆ?’’
‘‘ನೀವು ಪ್ರೀತಿಸಿ ಮದುವೆಯಾಗಿದ್ದಾಂತ?’’

ಅಜ್ಜಿ ಒಮ್ಮೆಲೆ ಮೌನವಾಗಿ ಬಿಟ್ಟರು. ಅವರ ಮುಖದಲ್ಲಿ ಬದಲಾಗುತ್ತಿರುವ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ತಾಹಿರಾಳಿಗೆ ಸಾಧ್ಯವಾಗಲಿಲ್ಲ. ‘‘ಅಜ್ಜೀ, ಯಾಕಜ್ಜಿ ಸುಮ್ಮನಾಗಿ ಬಿಟ್ಟಿರಿ?’’

ಅಜ್ಜಿ ಮೊಮ್ಮಗಳ ಮುಖವನ್ನೇ ದಿಟ್ಟಿಸಿದರು. ತುಟಿ ಬಿಚ್ಚಲಿಲ್ಲ. ‘‘ಹೇಳಿ ಅಜ್ಜಿ, ನೀವು- ಅಜ್ಜ ಪ್ರೀತಿಸಿ ಮದುವೆಯಾದದ್ದಾ?’’
‘‘ಹೂಂ...’’ ಅಜ್ಜಿಯ ಮುಖದಲ್ಲಿ ನಾಚಿಕೆ ತುಂಬಿತು. ತುಟಿ ಅರಳಿತು. ಕಣ್ಣು ಕುಣಿಯಿತು.

‘‘ಅಜ್ಜೀ... ತಾಹಿರಾ ಅಜ್ಜಿಯನ್ನು ತಬ್ಬಿ ಹಿಡಿದು ಅವರ ಕೆನ್ನೆಗೆ ಮುತ್ತಿಟ್ಟಳು. ಅವಳಿಗೆ ಖುಷಿಯಾಗಿತ್ತು. ಅಜ್ಜಿಯಂತೂ ನಾಚಿ ನೀರಾಗಿಬಿಟ್ಟಿದ್ದರು. ‘‘ಅಜ್ಜಿ, ಇನ್ನೊಂದು ಪ್ರಶ್ನೆ ಕೇಳುತ್ತೇನೆ’’
‘‘ಏನದು?’’
‘‘ನೀವು ಅಜ್ಜನನ್ನು ಮೊದಲು ಪ್ರೀತಿಸಿದ್ದಾ, ಅಲ್ಲ ಅಜ್ಜ ನಿಮ್ಮನ್ನು ಮೊದಲು ಪ್ರೀತಿಸಿದ್ದಾ’’ ತಾಹಿರಾ ತುಂಟತನದಿಂದ ಕಣ್ಣು ಮಿಟುಕಿಸುತ್ತಾ ಕೇಳಿದಳು.
‘‘ಅದೆಲ್ಲಾ ನಿನಗೇಕೆ?’’
‘‘ಬೇಕು ಅಜ್ಜಿ... ಹೇಳಿ ಅಜ್ಜಿ...’’ ತಾಹಿರಾ ಹಟ ಹಿಡಿದಳು.
‘‘ನನಗೆ ಗೊತ್ತಿಲ್ಲ’’
‘‘ಗೊತ್ತಿಲ್ಲ ಅಂದರೆ?’’
‘‘ಗೊತ್ತಿಲ್ಲ ಅಂದರೆ ಗೊತ್ತಿಲ್ಲ. ಅದು ಹೃದಯಕ್ಕೆ ಸಂಬಂಧಪಟ್ಟದ್ದು. ನಾನು ಎಷ್ಟೋ ಸಲ ನನ್ನ ಹೃದಯದ ಜೊತೆ ಈ ಪ್ರಶ್ನೆಯನ್ನು ಕೇಳಿದ್ದೇನೆ. ಹೃದಯ ನನಗೆ ಉತ್ತರ ಕೊಡಲೇ ಇಲ್ಲ.’’


‘‘ಓ ಅಪ್ಪಾ, ನನ್ನ ಅಜ್ಜಿ ಎಷ್ಟು ಜೋರಿದ್ದಾರೆ. ಎಷ್ಟೊಂದು ರೊಮ್ಯಾಂಟಿಕ್ ಆಗಿ ಮಾತನಾಡುತ್ತಾರೆ’’ ತಾಹಿರಾ ಆಶ್ಚರ್ಯದಿಂದ ಬಾಯಿಗೆ ಕೈ ಹಿಡಿದುಕೊಂಡಳು. ‘‘ನೀವೇ ಅಜ್ಜನನ್ನು ಬುಟ್ಟಿಗೆ ಹಾಕಿಕೊಂಡಿರಬೇಕು ಅಲ್ಲವಾ ಅಜ್ಜಿ’’ ತಾಹಿರಾ ಮತ್ತೆ ಅಜ್ಜಿಯನ್ನು ಅಣಕಿಸಿದಳು. ಅಜ್ಜಿ ಮತ್ತೆ ನಾಚಿದರು. ‘‘ಅಜ್ಜಿ ಇನ್ನೊಂದು ಪ್ರಶ್ನೆ ಕೇಳ್ತೇನೆ.’’

‘‘ಸಾಕು ನಿನ್ನ ಪ್ರಶ್ನೆ, ಎಷ್ಟು ಪ್ರಶ್ನೆ ಕೇಳುವುದು?’’ ಹಾಗೆ ಹೇಳಿದರೂ ಅಜ್ಜನ ಬಗ್ಗೆ ಮತ್ತಷ್ಟು ಕೇಳು ಎಂಬ ಆಸೆ ಅವರ ತುಂಟ ಮಾತಿನಿಂದಲೇ ತಿಳಿಯುತ್ತಿತ್ತು. ‘‘ಒಂದೇ ಒಂದು ಪ್ರಶ್ನೆ ಅಜ್ಜಿ. ಕೊನೆಯ ಪ್ರಶ್ನೆ.’’

‘‘ಏನದು?’’ ಅಜ್ಜಿ ಹುಬ್ಬೇರಿಸಿ ಕೇಳಿದರು. ‘‘ಅಜ್ಜಿ, ನಿಮಗೆ ಅಜ್ಜನನ್ನು ಮದುವೆಯಾಗುವು ದಕ್ಕಿಂತ ಮೊದಲು ಬೇರೊಂದು ಮದುವೆಯಾಗಿತ್ತಂತೆ ಹೌದಾ?’’

ಸಿಡಿಲೊಂದು ಬಂದು ಅಜ್ಜಿಯ ತಲೆಗೆ ಅಪ್ಪಳಿಸಿದಂತಿತ್ತು ಪ್ರಶ್ನೆ. ನೆನಪುಗಳೆಲ್ಲ ಒಮ್ಮೆಲೆ ಉಕ್ಕಿ ಬಂದು ಹೃದಯದಾಳದಲ್ಲಿ ನೋವಿನ ಕಿಡಿಯೊಂದು ಹೊತ್ತಿ ಕೊಂಡಂತಾಗಿ ಅಜ್ಜಿ ಕತ್ತು ಬಗ್ಗಿಸಿ ಕುಳಿತು ಬಿಟ್ಟರು. ‘‘ಅಜ್ಜಿ...’’ ಅಜ್ಜಿಯನ್ನು ನೋಡಿದ ತಾಹಿರಾಳಿಗೆ ಮರುಕ ಹುಟ್ಟಿತು.
‘‘ಯಾಕಜ್ಜೀ, ನಾನು ಈ ಪ್ರಶ್ನೆ ಕೇಳಬಾರದಿತ್ತಾ?’’
‘‘................’’
‘‘ಕ್ಷಮಿಸಿ ಅಜ್ಜಿ, ತಪ್ಪಾಯಿತು.’’

ಅಜ್ಜಿ ಈಗ ಮೊಮ್ಮಗಳ ಕೈಯನ್ನು ತನ್ನ ಕೈಗೆ ತೆಗೆದುಕೊಂಡು ಅವಳ ಮುಖ ನೋಡಿದರು. ಅಜ್ಜಿ ಏನೋ ಹೇಳಲು ತವಕಿಸುತ್ತಿದ್ದಾರೆ ಎಂದೆನಿಸಿತವಳಿಗೆ. ‘‘ಅಜ್ಜಿ, ಬೇಜಾರಾಯಿತಾ?’’

‘‘ಇಲ್ಲ’’ ಎಂಬಂತೆ ಅಜ್ಜಿ ತಲೆಯಾಡಿಸಿದರು. ‘‘ಹಾಗಾದರೆ ಹೇಳ್ತೀರಾ? ನನಗೆ ಈ ಅಜ್ಜಿಯ ಬಗ್ಗೆ ಎಲ್ಲ ತಿಳಿದುಕೊಳ್ಳಬೇಕೂಂತ ಆಸೆ. ಅದಕ್ಕೆ ಕೇಳಿದೆ.’’
‘‘................’’
‘‘ಅಜ್ಜಿ, ಅಜ್ಜನ ಮದುವೆಯಾಗುವುದಕ್ಕಿಂತ ಮೊದಲು ನಿಮಗೆ ಬೇರೊಂದು ಮದುವೆಯಾಗಿತ್ತಂತೆ ಹೌದಾ?’’

ಅಜ್ಜಿ ‘‘ಹೌದು’’ ಎಂಬಂತೆ ತಲೆಯಾಡಿಸಿದವರು ಮೊಮ್ಮಗಳನ್ನು ತಬ್ಬಿಕೊಂಡು ಸುಮ್ಮನೆ ಕುಳಿತು ಬಿಟ್ಟರು. ‘‘ತಾಹಿರಾ...’’ ಐಸು ಕರೆದಂತಾಗಿ ತಾಹಿರಾ ಕಿವಿಯಾಣಿಸಿದಳು. ಕೆಲವೇ ಕ್ಷಣಗಳಲ್ಲಿ ಐಸು ಬಾಗಿಲಲ್ಲಿ ಕಾಣಿಸಿಕೊಂಡಳು. ‘‘ಏನು, ಅಜ್ಜಿ-ಮೊಮ್ಮಗಳು ಇಂದು ಕೋಣೆಯಿಂದ ಹೊರ ಬರಲೇ ಇಲ್ಲ. ಏನಜ್ಜೀ, ಮೊಮ್ಮಗಳು ಬಂದ ಮೇಲೆ ಎಲ್ಲ ಮರೆತೇ ಬಿಟ್ಟಿರಾ? ಊಟದ್ದೂ ನೆನಪಿಲ್ಲ ನಿಮಗೆ, ಗಂಟೆ ಎರಡಾಯಿತು ಮಧ್ಯಾಹ್ನದ ನಮಾಝ್ ಮಾಡಲಿಲ್ಲ.’’ ಐಸು ಬಾಗಿಲಿಗೊರಗಿ ಮುಗುಳು ನಗುತ್ತಿದ್ದಳು. ನಮಾಝ್ ಅಂತ ಹೇಳಿದ್ದೇ ತಡ ಅಜ್ಜಿ ಮಂಚದಿಂದಿಳಿದು ಗೋಡೆ ಹಿಡಿಯುತ್ತಾ ಬಚ್ಚಲಿನತ್ತ ಹೆಜ್ಜೆಯಿಟ್ಟರು. ತಾಹಿರಾ ಮಾಮಿಯ ಕೈಹಿಡಿದು ಅಡುಗೆ ಮನೆಗೆ ನಡೆದಳು. ‘‘ಹೋಗು ಕೈ ತೊಳೆದುಕೊಂಡು ಬಾ, ಊಟ ಬಡಿಸುತ್ತೇನೆ’’
‘‘ಈವತ್ತು ಏನು ಮಾಮಿ ಊಟ?’’
ಯಾವತ್ತೂ ಅಡುಗೆ ಬಗ್ಗೆ ಕೇಳದ ತಾಹಿರಾ ಕೇಳಿದ್ದು ಕಂಡು ಐಸುಗೆ ಆಶ್ಚರ್ಯವಾಗಿತ್ತು.
‘‘ನಿನಗೆ ಏನು ಬೇಕು?’’
‘‘ಹೂಂ..., ನನಗೆ ನೈಚೋರು ಬೇಕು.’’
‘‘ನೈಚೋರು ನಿನ್ನೆಯಲ್ಲವಾ ತಿಂದದ್ದು.’’
‘‘ನನಗೆ ನಿಮ್ಮ ಕೈಯ ನೈಚೋರು ಎಂದರೆ ತುಂಬಾ ಇಷ್ಟ.’’
‘‘ಇಂದು ನೈಚೋರು ಮಾಡಿಲ್ಲ, ನಾಳೆ ಮಾಡಿ ಕೊಡುತ್ತೇನೆ.’’
‘‘ಮತ್ತೆ ಈವತ್ತು ಏನು ಮಾಡಿದ್ದೀರಿ?’’

ತಾಹಿರಾಳ ಪ್ರಶ್ನೆ ಕೇಳಿ ಐಸುಗೆ ನಗು ಬಂತು. ಕೆಲವೇ ದಿನಗಳಲ್ಲಿ ಹೇಗೆ ಈ ಮನೆಗೆ ಹೊಂದಿಕೊಂಡು ಬಿಟ್ಟಳು ಈ ಹುಡುಗಿ. ರಕ್ತ ಸಂಬಂಧ ಎಂದರೆ ಇದುವೇ ಇರಬೇಕು ಎಂದು ಮನಸ್ಸಿನಲ್ಲೆ ಅಂದುಕೊಂಡಳು. ‘‘ಈವತ್ತು ಸಿಗಡಿ ಬಿರಿಯಾನಿ ಮಾಡಿದ್ದೇನೆ, ಅಂಜಲ್ ಹುರಿದಿ ದ್ದೇನೆ. ಹಪ್ಪಳ ಇದೆ. ಕಚ್ಚಂಬರ್ ಇದೆ. ಮಾವಿನ ಹಣ್ಣಿದೆ. ಅಂಬಟೆ ಉಪ್ಪಿನಕಾಯಿ ಇದೆ. ಸಾಕಲ್ಲ.’’
‘‘ನಿಮಗೆ ಬಿರಿಯಾನಿ ಮಾಡಲೂ ಬರುತ್ತಾ?’’
‘‘ಹೂಂ, ನೀನು ಬಿರಿಯಾನಿ ತಿಂದಿದ್ದಿಯಾ?’’
‘‘ಹೊಟೇಲಲ್ಲಿ ತಿಂದಿದ್ದೇನೆ.’’
‘‘ಬಿರಿಯಾನಿ ಇಷ್ಟನಾ?’’
‘‘ಹೂಂ ಇಷ್ಟ. ತುಂಬಾ ಇಷ್ಟ. ಅಲ್ಲ ಮಾಮಿ, ನಾನು ಇಲ್ಲಿಗೆ ಬಂದು ಇಷ್ಟು ದಿನಗಳಾಯಿತು. ಯಾಕೆ ನೀವು ಒಮ್ಮೆಯೂ ಬಿರಿಯಾನಿ ಮಾಡಲೇ ಇಲ್ಲ ಮತ್ತೆ.’’
‘‘ಹೌದು ಮಾಡಿಲ್ಲ.’’
‘‘ಯಾಕೆ?’’
‘‘ಯಾಕೆಂದರೆ ನನಗೆ ಬಿರಿಯಾನಿ ಮಾಡ್ಲಿಕ್ಕೆ ಇಷ್ಟ ಇಲ್ಲ.’’
‘‘ಯಾಕೆ ಇಷ್ಟ ಇಲ್ಲ.’’
‘‘ಯಾಕೆಂದರೆ, ನಾಸರ್‌ನ ತಂದೆಗೆ ಬಿರಿಯಾನಿ ಎಂದರೆ ತುಂಬಾ ಇಷ್ಟ. ಅವರಿರುವಾಗ ವಾರದಲ್ಲಿ 3-4 ದಿನಗಳಾದರೂ ಬಿರಿಯಾನಿ ಮಾಡ್ತಿದ್ದೆ. ಅವರು ಹೊಟ್ಟೆ ತುಂಬ ತಿಂದು ನನ್ನ ಹೊಗಳುತ್ತಿದ್ದರು. ತೊಳೆದ ಕೈಯನ್ನು ನನ್ನ ಸೆರಗಿಗೆ ಒರೆಸಿಕೊಳ್ಳುತ್ತಾ ನನ್ನ ಹಿಂದೆ ಹಿಂದೆ ಬರುತ್ತಿದ್ದರು. ಅವರು ಹೋದ ಮೇಲೆ ಬಿರಿಯಾನಿ ಮಾಡುವುದನ್ನೇ ನಿಲ್ಲಿಸಿದ್ದೇನೆ. ತಿನ್ನುವುದನ್ನೂ ಬಿಟ್ಟಿದ್ದೇನೆ. ಬಿರಿಯಾನಿ ಮಾಡಿದರೆ ಆ ದಿನ ಇಡೀ ನನ್ನ ಮನಸೇ ಸರಿ ಇರುವುದಿಲ್ಲ. ಅವರೇ ಬಂದು ನನ್ನ ಮುಂದೆ ನಿಂತಂತೆ.. ನಕ್ಕಂತೆ... ನನ್ನ ಹೆಸರು ಕೂಗಿ ಕರೆದಂತೆ... ಏನೇನೋ ಯೋಚನೆ ಗಳು.. ನೆನಪುಗಳು... ಆಸೆಗಳು. ಆ ದಿನ ರಾತ್ರಿ ಇಡೀ ನನಗೆ ನಿದ್ದೆ ಬರುವುದಿಲ್ಲ. ಅದಕ್ಕೆ ನಾನು ಬಿರಿಯಾನಿ ಮಾಡುವುದನ್ನೇ ಬಿಟ್ಟು ಬಿಟ್ಟಿದ್ದೇನೆ.’’

ತಾಹಿರಾಳಿಗೆ ಮಾಮಿಯ ಹೃದಯದಲ್ಲಿ ಬೀಸುತ್ತಿ ರುವ ಬಿರುಗಾಳಿ ಅರ್ಥವಾಗಿತ್ತು. ಅವಳು ಮೌನವಾಗಿ ನಿಂತು ಐಸು ಬಡಿಸುವುದನ್ನೇ ನೋಡುತ್ತಿದ್ದಳು. ‘‘ಹೋಗು ಕೈ-ಮುಖ ತೊಳೆದು ಕೊಂಡು ಬಾ, ಅಜ್ಜಿ ಬಂದರೂಂತ ಕಾಣುತ್ತೆ’’.

ಅವಳು ಬಚ್ಚಲಿಗೆ ಹೋಗಿ ಬರುವಾಗ ಮೇಜಿನ ಮೇಲೆ ಊಟ ಸಿದ್ಧವಾಗಿತ್ತು. ಬಿರಿಯಾನಿಯ ಘಮ ಘಮ ಇಡೀ ಮನೆಯನ್ನು ಆವರಿಸಿಕೊಂಡು ಬಿಟ್ಟಿತ್ತು. ‘‘ನೀವೂ ಬನ್ನಿ ಮಾಮಿ ಒಟ್ಟಿಗೆ ಊಟ ಮಾಡೋಣ.’’

‘‘ಬೇಡಮ್ಮಾ, ನೀವು ಮಾಡಿ, ನಾನು ಮತ್ತೆ ಮಾಡ್ತೇನೆ’’ ಎನ್ನುತ್ತಾ ಐಸು ಅಡುಗೆ ಕೋಣೆ ಸೇರಿದಳು. ಅಂದು ರಾತ್ರಿ ಇಡೀ ಐಸು ಕಣ್ಣೇ ಮುಚ್ಚಲಿಲ್ಲ. ಅವಳಿಗೆ ಮಾತು ಬೇಡವಾಗಿತ್ತು. ತಾಹಿರಾಳನ್ನು ತಬ್ಬಿಕೊಂಡು ಕಣ್ಣು ಮುಚ್ಚಿ ನಿದ್ದೆ ಬಂದವಳಂತೆ ಮಲಗಿದ್ದಳು. ‘‘ಮಾಮಿ..’’
‘‘................’’
‘‘ಮಾಮಿ...’’ ಮತ್ತೆ ಜೋರಾಗಿ ಕೂಗಿದಳು ತಾಹಿರಾ.

ಮಾಮಿ ಓಗೊಡಲಿಲ್ಲ. ತಾಹಿರಾ ತಿರುಗಿ ಮಾಮಿಯ ಎದೆಯಲ್ಲಿ ಮುಖ ಹುದುಗಿಸಿ ಮಲಗಿದಳು. ಮಾಮಿಯ ದೇಹದಿಂದ ಹೊರಬರುತ್ತಿರುವ ಬಿಸಿಯುಸಿರು ಬೆಂಕಿಯಂತೆ ಅವಳ ಹಣೆಗೆ ರಾಚುತ್ತಿತ್ತು. ‘‘ಮಾಮಿ, ನೀವು ಬಿರಿಯಾನಿ ತಿಂದಿರಾ?’’ ತಾಹಿರಾ ಮುಲುಗಿದಳು. ‘‘ಇಲ್ಲ’’
‘‘ಯಾಕೆ’’
‘‘ನನಗೆ ಬೇಡ, ನಾನು ತಿನ್ನುವುದಿಲ್ಲ.’’’
‘ತುಂಬಾ ಚೆನ್ನಾಗಿತ್ತು ಮಾಮಿ ಬಿರಿಯಾನಿ’
‘‘ಹೂಂ... ಅವರೂ ಹೇಳುತ್ತಾ ಇದ್ದರು. ಈಗ ಎಲ್ಲಿದ್ದಾರೋ. ಇನ್ನು ಬರುತ್ತಾರೋ ಇಲ್ಲವೋ.’’
ಕ್ಷೀಣವಾಗಿ ಅವರ ಬಾಯಿಯಿಂದ ಹೊರಬರುತ್ತಿ ರುವ ಮಾತುಗಳನ್ನು ತಾಹಿರಾಳಿಗೆ ಮತ್ತೆ ಕೇಳಲಾಗಲಿಲ್ಲ. ಅವಳೂ ಮೌನವಾದಳು. ಇಡೀ ಕೋಣೆ ತುಂಬಾ ಕತ್ತಲೆಯ ಜೊತೆ ನಿಶ್ಶಬ್ದವೂ ಆವರಿಸಿಕೊಂಡಿತು. ಮಾಮಿಯ ಹೃದಯದ ಬಡಿತಕ್ಕೆ ಕಿವಿಯಾಣಿಸುತ್ತಾ ಮಲಗಿದವಳಿಗೆ ನಿದ್ದೆ ಬಂದು ಬಿಟ್ಟಿತ್ತು.
***
‘‘ಇಲ್ಲಿಂದ ಸುಮಾರು ಹತ್ತು ಮೈಲು ದೂರ ನನ್ನೂರು. ಅಲ್ಲಿಗೆ ಹೊನ್ನಕಟ್ಟೆ ಅಂತ ಹೆಸರು.’’

ಮಂಚದಲ್ಲಿ ಕಾಲು ನೀಟಿ ಕುಳಿತ ಅಜ್ಜಿ ಹೇಳ ತೊಡಗಿದರು. ಅಜ್ಜಿಯ ಚದುರಿದ ತಲೆಗೂದಲನ್ನು ತನ್ನ ಮುಷ್ಟಿಯೊಳಗೆ ತೆಗೆದುಕೊಳ್ಳುತ್ತಾ ಬೇಗ ಬೇಗ ಗಂಟು ಹಾಕಿದ ತಾಹಿರಾ, ಅಜ್ಜಿಯ ಮುಂದೆ ಗಲ್ಲಕ್ಕೆ ಕೈಯೂರಿ ಕಿವಿಯಗಲಿಸಿ ಕುಳಿತುಕೊಂಡಳು.
(ರವಿವಾರದ ಸಂಚಿಕೆಗೆ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)