varthabharthi


ಕಾಡಂಕಲ್ಲ್ ಮನೆ

ಕಾದಂಬರಿ ಧಾರಾವಾಹಿ-25

ವಾರ್ತಾ ಭಾರತಿ : 14 Sep, 2016
ಮುಹಮ್ಮದ್ ಕುಳಾಯಿ

--ಅಜ್ಜನ ಮೇರು ವ್ಯಕ್ತಿತ್ವದ ಆ ನೆನಪು...--

‘‘ಅಜ್ಜನ ಹೆಂಡತಿಗೆ ಏನಾಗಿತ್ತು ಅಜ್ಜಿ...’’ ತಾಹಿರಾ ಕಣ್ಣ ರೆಪ್ಪೆಬಡಿಯಲು ಮರೆತವಳಂತೆ ಕುಳಿತು ಕೇಳಿದಳು. ‘‘ನೀನು ಸುಮ್ಮನೆ ಮಧ್ಯದಲ್ಲಿ ಬಾಯಿ ಹಾಕಬಾರದು. ನಾನು ಹೇಳುತ್ತೇನೆ. ನೀನು ಬಾಯಿ ಮುಚ್ಚಿ ಕುಳಿತು ಕೇಳಬೇಕು’’ ತನ್ನ ನೆನಪುಗಳನ್ನು ತುಂಡರಿಸಿದ ಮೊಮ್ಮಗಳ ಮೇಲೆ ಅಜ್ಜಿಗೆ ಕೋಪ ಬಂದಿತ್ತು. ತಾಹಿರಾ ಮತ್ತೆ ಕಣ್ಣು, ಕಿವಿ ಅರಳಿಸಿ ಕುಳಿತಳು. ‘‘ನಾನು ಎಂತ ಹೇಳಿದ್ದು...’’ ಅಜ್ಜಿ ತಾನು ಹೇಳಿದ್ದೆಲ್ಲವನ್ನೂ ಮರೆತವರಂತೆ ಹಣೆ ತಿಕ್ಕುತ್ತಾ ನೆನಪಿಸಿಕೊಳ್ಳತೊಡಗಿದರು. ‘‘ಈ ಮನೆಯಲ್ಲಿ ನೀವು ನಾಲ್ಕೇ ಜನ ಇದ್ದದ್ದು...’’ ತಾಹಿರಾ ನೆನಪಿಸಿದಳು. ಅಜ್ಜನ ಹೆಂಡತಿಗೆ ಏನೋ ದೊಡ್ಡ ರೋಗವಂತೆ. ಚೆನ್ನಾಗಿದ್ದರಂತೆ. ಮನೆ ತುಂಬಾ ಕಳಕಳಾಂತ ಓಡಾಡಿ ಕೊಂಡಿದ್ದರಂತೆ. ಎರಡು ವರ್ಷವಾಗಿತ್ತಂತೆ ಹಾಸಿಗೆ ಹಿಡಿದು. ಅಜ್ಜ ಅದೆಷ್ಟೋ ಮದ್ದು ಮಾಡಿದರಂತೆ. ದೊಡ್ಡ ದೊಡ್ಡ ಡಾಕ್ಟರು, ಪಂಡಿತರಿಗೆಲ್ಲ ತೋರಿಸಿ ದರಂತೆ. ಉಳ್ಳಾಲ ದರ್ಗಾ, ಬಯಲು ದರ್ಗಾ, ಅಡ್ಕ ದರ್ಗಾ ಹೀಗೆ ಹಲವಾರು ದರ್ಗಾಗಳಿಗೆ ಹರಕೆ ಹೇಳಿಕೊಂಡರಂತೆ. ಆದರೆ ರೋಗ ಗುಣವಾಗಲಿಲ್ಲವಂತೆ. ದಿನ ದಿನಕ್ಕೆ ಉಲ್ಬಣಿಸುತ್ತಾ ಹೋಗಿ ನಾನು ಈ ಮನೆಗೆ ಬಂದಾಗ ಮಾತು ಕೂಡಾ ಆಡುತ್ತಿರಲಿಲ್ಲ. ಕರೆದರೆ ಕಣ್ಣು ಮಾತ್ರ ತೆರೆಯುತ್ತಿದ್ದರು ಅಷ್ಟೆ. ಎಲ್ಲವೂ ಹಾಸಿಗೆಯಲ್ಲಿಯೇ. ನಿನ್ನ ಅಜ್ಜ ಮುಂಜಾನೆ ಎದ್ದು ನಮಾಝ್ ಮುಗಿಸಿದ ನಂತರ ಹೆಂಡತಿಯ ಆರೈಕೆಯಲ್ಲಿ ತೊಡಗುತ್ತಿದ್ದರು. ಅವರನ್ನು ಎತ್ತಿ ಕುಳ್ಳಿರಿಸಿ ಹಲ್ಲುಜ್ಜುವುದು, ಮುಖ ತೊಳೆಯುವುದು, ಹೊಟ್ಟೆಗೆ ಕೊಡುವುದು, ಎತ್ತಿಕೊಂಡೇ ಹೋಗಿ ಪಾಯಿಖಾನೆ ಮಾಡಿಸುವುದು, ಸ್ನಾನ ಮಾಡಿಸುವುದು, ಬಟ್ಟೆ ಬದಲಿಸುವುದು - ಅಬ್ಬಾ, ಅದನ್ನು ಮೊದ ಮೊದಲು ನೋಡಿದ ನನಗೆ ಹೃದಯವೇ ಕಿತ್ತು ಬರುವಂತಾಗುತ್ತಿತ್ತು. ಒಮ್ಮಿಮ್ಮೆ ಅವರು ಎಲ್ಲವನ್ನೂ ಹಾಸಿಗೆಯಲ್ಲಿಯೇ ಮಾಡಿ ಬಿಡುತ್ತಿದ್ದರು. ಅದನ್ನೂ ನಿನ್ನ ಅಜ್ಜನೇ ತೆಗೆದು ಶುದ್ಧಗೊಳಿಸುತ್ತಿದ್ದರು. ಬೇರೆ ಯಾರನ್ನೂ ಹತ್ತಿರ ಸುಳಿಯಲು ಬಿಡುತ್ತಿರಲಿಲ್ಲ. ಅದೆಷ್ಟೋ ಸಲ ಅವರು ಹೆಂಡತಿಯ ಆರೈಕೆ ಮಾಡುವಾಗ ಹೆಂಡತಿಯ ಕಣ್ಣಲ್ಲಿ ನೀರು ತೊಟ್ಟಿಕ್ಕುವುದನ್ನು ನಾನು ಕಂಡಿದ್ದೇನೆ. ಆದರೆ ಒಂದು ದಿನವೂ ನಿನ್ನಜ್ಜ ಅತ್ತದ್ದು ನಾನು ಕಂಡಿಲ್ಲ. ಹೆಂಡತಿ ಕಣ್ಣಲ್ಲಿ ನೀರು ಒಸರಿದಾಗಲೆಲ್ಲಾ ಆ ಕಣ್ಣುಗಳನ್ನು ಚುಂಬಿಸುತ್ತಾ ಹೆಂಡತಿಯ ಕಣ್ಣೀರು ಕುಡಿಯುತ್ತಿದ್ದುದನ್ನು ನೋಡಿ ನಾನು ಎಷ್ಟೋ ಸಲ ಅತ್ತಿದ್ದೆ. ನಿನ್ನ ಅಜ್ಜ ಹೆಂಡತಿಗೆ ಉಣಿಸದೆ ತಾನೆಂದೂ ಉಂಡವರಲ್ಲ. ತೋಟಕ್ಕೆ ಹೋಗಲಿ, ಗದ್ದೆಗೆ ಹೋಗಲಿ, ಪೇಟೆಗೆ ಹೋಗಲಿ, ಬೇರೆಲ್ಲಿಗೇ ಹೋಗಲಿ ಹೋಗುವಾಗ ಹೆಂಡತಿಯನ್ನು ಕರೆದು ‘‘ಸಕೀನಾ ನಾನು ಇಂತಲ್ಲಿಗೆ ಹೋಗುತ್ತಿದ್ದೇನೆ. ಬೇಗ ಬರ್ತೇನೆ. ಮಲಗು’’ ಎಂದು ಹೇಳಿ ಹೋಗುತ್ತಿದ್ದರು. ಅದೇ ರೀತಿ ಬಂದವರು ಮೊದಲು ಹೆಂಡತಿಯ ಬಳಿ ಬಂದು ‘‘ಸಕೀನಾ ನಾನು ಬಂದೆ. ಹಸಿವಾಗ್ತದಾ... ಊಟ ಕೊಡಲಾ.. ನೀರು ಬೇಕಾ..’’ ಎಂದು ಪಕ್ಕ ಕುಳಿತು ಅವರ ಮುಖವನ್ನೇ ದಿಟ್ಟಿಸುತ್ತಾ ತಲೆ ಸವರಿ ಕೇಳುತ್ತಿದ್ದರು. ಮನೆಯಿಂದ ಹೊರಟರೆ ಅವಸರವಸರವಾಗಿ ಹೋಗುತ್ತಿದ್ದರು. ಬರುವಾಗ ಓಡುತ್ತಲೇ ಬರುತ್ತಿದ್ದರು. ಅದೆಷ್ಟೋ ಸಲ ಹೆಂಡತಿಯ ಕಾಲೊತ್ತುವುದು, ಕೈ ಒತ್ತುವುದನ್ನು ನಾನು ನೋಡಿದ್ದೇನೆ.

 ಇದನ್ನೆಲ್ಲ ನೋಡಿ ಸಹಿಸಲಾಗದೆ ಒಂದು ದಿನ ನಾನು ನಿನ್ನಜ್ಜನಲ್ಲಿ ಹೇಳಿದೆ. ‘‘ಅಕ್ಕನ ಕೆಲಸಗಳನ್ನೆಲ್ಲ ನಾನು ಮಾಡುತ್ತೇನೆ. ಈಗ ನಾನಿದ್ದೇನಲ್ಲ. ಅದನ್ನೆಲ್ಲ ನನಗೆ ಬಿಟ್ಟುಬಿಡಿ’’ ಎಂದು. ಈ ಮನೆಗೆ ಬಂದ ಮೇಲೆ ನಾನಾಗಿ ಅಜ್ಜನ ಜೊತೆ ಮಾತನಾಡಿದ ಮೊದಲ ಮಾತು ಅದು. ನಿನ್ನ ಅಜ್ಜ ಸ್ವಲ್ಪಹೊತ್ತು ಮಾತನಾಡಲಿಲ್ಲ. ಆಮೇಲೆ ಗೋಡೆಗೆ ತಿರುಗಿ ನಿಂತು ‘‘ಬೇಡ, ಅವಳ ಕೆಲಸಗಳನ್ನೆಲ್ಲ ನಾನೇ ಮಾಡುತ್ತೇನೆ. ಅದು ಕೆಲಸ ಅಲ್ಲ ಆರೈಕೆ. ಅದನ್ನು ನಾನೇ ಮಾಡಬೇಕು. ಯಾಕೆಂದರೆ ಇವಳು ನನ್ನ ಹೆಂಡತಿ. ಒಂದು ವೇಳೆ ಇವಳ ಸ್ಥಿತಿಯಲ್ಲಿ ನಾನಿಂದು ಮಲಗಿದ್ದಿದ್ದರೆ ನಾನೀಗ ನೋಡಿಕೊಳ್ಳುವುದಕ್ಕಿಂತ ಸಾವಿರ ಪಾಲು ಚೆನ್ನಾಗಿ ಇವಳು ನನ್ನನ್ನು ನೋಡಿಕೊಳ್ಳುತ್ತಿದ್ದಳು.’’ ನಿನ್ನ ಅಜ್ಜನ ಬಾಯಿಯಿಂದ ತಡೆದು ತಡೆದು ಮಾತುಗಳು ಹೊರಬರುತ್ತಿದ್ದವು. ನನಗೆ ನಿನ್ನ ಅಜ್ಜ ಅಳುತ್ತಿದ್ದಾರೇನೋ ಅನಿಸಿತ್ತು.

ನನಗೆ ಮತ್ತೆ ಅಲ್ಲಿ ನಿಲ್ಲಲಾಗಲಿಲ್ಲ. ಹೋಗಲು ಅನುವಾದ ನನ್ನನ್ನು ಫಾತಿಮಾ’ ಎಂಬ ಅವರ ಕರೆ ತಡೆದು ನಿಲ್ಲಿಸಿತ್ತು. ಆ ಕರೆಯಲ್ಲಿದ್ದ ವಿನಯ, ಪ್ರೀತಿ, ಅಕ್ಕರೆ ನನ್ನ ದೇಹ ನವಿರೇಳುವಂತೆ ಮಾಡಿತ್ತು. ನಾನು ತಿರುಗಿ ನಿಂತೆ. ಅವರೀಗಲೂ ಗೋಡೆಗೆ ಮುಖ ಮಾಡಿಯೇ ನಿಂತಿದ್ದರು. ‘ಫಾತಿಮಾ, ಸಕೀನಾಳನ್ನು ನಾನು ನೋಡಿಕೊಳ್ಳು ತ್ತೇನೆ. ಅವಳನ್ನು ಮಗುವಿನಂತೆ ನೋಡಿಕೊಳ್ಳುತ್ತೇನೆ. ಇಷ್ಟರ ತನಕ ನಿನ್ನ ಗಂಡನನ್ನು ನಾನೇ ನೋಡಿಕೊಳ್ಳುತ್ತಿದ್ದೆ. ಅವನನ್ನು ಸ್ನಾನ ಮಾಡಿಸುವುದು, ಪಾಯಿಖಾನೆಗೆ ಕರೆದುಕೊಂಡು ಹೋಗುವುದು ಎಲ್ಲವನ್ನೂ ನಾನು ಮಾಡುತ್ತಿದ್ದೆ. ನನಗೆ ಅವನು ತಮ್ಮನಲ್ಲ. ನನ್ನ ಮಗು ಅವನು. ಈ ತನಕ ಅವನಿಗೆ ಯಾವ ಕೊರತೆಯೂ ಆಗದಂತೆ, ಯಾವ ನೋವೂ ಹತ್ತಿರ ಸುಳಿಯದಂತೆ ನೋಡಿಕೊಂಡು ಬಂದಿದ್ದೇನೆ. ಇನ್ನು ಮೇಲೆ ನೀನು ಅವನನ್ನು ನೋಡಿಕೊಳ್ಳಬೇಕು. ಅವನ ಎಲ್ಲ ಬೇಕು-ಬೇಡಗಳನ್ನೂ ಪೂರೈಸಬೇಕು. ಒಳ್ಳೆಯವನು ಅವನು. ಕಾಲು ಊನ ಒಂದು ಬಿಟ್ಟರೆ ಬೇರೆ ಯಾವ ಕೊರತೆಯೂ ಅವನಲಿಲ್ಲ. ನೀನು ಅವನಿಗೆ ಆಧಾರವಾಗಬೇಕು. ಆಸರೆಯಾಗಬೇಕು.’’ ನನಗೆ ಏನು ಹೇಳಬೇಕೆಂದೇ ತಿಳಿಯಲಿಲ್ಲ. ಕೆಲವು ಹೊತ್ತು ಮೌನವಾಗಿ ಹಾಗೆಯೇ ನಿಂತವಳು ನನಗರಿವಿಲ್ಲದಂತೆ ಅವರ ಬಳಿ ನಡೆದಿದ್ದೆ. ‘‘ನನ್ನ ಬದುಕನ್ನು ಈ ಮನೆಯ ಸಂತೋಷಕ್ಕಾಗಿ, ಒಳಿತಿಗಾಗಿ ಮುಡಿಪಾಗಿಡುತ್ತೇನೆ. ನಿಮ್ಮಂತಹ ಒಳ್ಳೆಯ ಮನಸ್ಸಿನ ವ್ಯಕ್ತಿ ಯನ್ನು ನಾನು ಈ ತನಕ ಎಲ್ಲೂ ಕಂಡಿಲ್ಲ. ನಿಮ್ಮ ಮಾತನ್ನು ಖಂಡಿತ ನಡೆಸಿಕೊಡುತ್ತೇನೆ. ನನ್ನ ಮೇಲೆ ನಂಬಿಕೆ ಇಡಿ.’’ ಅಜ್ಜನ ಬೆನ್ನ ಹಿಂದೆ ನಿಂತ ನಾನು ಮೌನವಾಗಿ ಅಳುತ್ತಿದ್ದೆ.

‘‘ಅಳಬಾರದು, ಯಾರದೇ ಆದರೂ ಒಂದು ತೊಟ್ಟು ಕಣ್ಣೀರು ಈ ಮನೆಯ ನೆಲ ಕುಡಿಯಬಾರದು. ಎಲ್ಲರೂ ಸಂತೋಷವಾಗಿರಬೇಕು.’’ ಅಜ್ಜನ ಧ್ವನಿ ಈಗ ಕಂಪಿಸುತ್ತಿತ್ತು. ನನಗೆ ತಡೆಯಲಾಗಲಿಲ್ಲ. ನನ್ನ ದುಃಖದ ಕಟ್ಟೆ ಒಡೆದೇ ಬಿಟ್ಟಿತ್ತು. ನಾನು ಎರಡು ಕೈಗಳಿಂದಲೂ ಮುಖ ಮುಚ್ಚಿಕೊಂಡು ಜೋರಾಗಿ ಅತ್ತು ಬಿಟ್ಟಿದ್ದೆ. ‘‘ಅಳಬಾರದು. ಅಳಬಾರದು ಾತಿಮಾ. ನೀನು ಈ ಮನೆಗೆ ಸೊಸೆಯಾಗಿ ಬಂದವಳು. ಬೆಳಕಾಗಬೇಕು. ಕತ್ತಲೆ ಕವಿದಿರುವ ಈ ಮನೆಗೆ ಬೆಳಕಾಗಬೇಕು. ಈ ಮನೆಗೆ ತಾಯಿಯಾಗಬೇಕು. ಈ ಮನೆಯ ಹಾಡಾಗಬೇಕು. ಎಲ್ಲರನ್ನೂ ಸಂತೋಷವಾಗಿಡಬೇಕು. ಇದು ನನ್ನ ಬೇಡಿಕೆ... ಕೈಬಿಡಬೇಡ’’ ಮತ್ತೆ ನನಗೆ ಅಲ್ಲಿ ನಿಲ್ಲಲಾಗಲಿಲ್ಲ. ಈ ಮನೆ ಸಂತೋಷವಾಗಿರಬೇಕಾದರೆ ಅಜ್ಜನ ಹೆಂಡತಿಯ ರೋಗ ಗುಣವಾಗಬೇಕು. ನನ್ನ ಗಂಡನ ಕಾಲು ಸರಿಯಾಗಬೇಕು... ಇದು ಸಾಧ್ಯವೇ. ನಿನ್ನ ಅಜ್ಜ ಪ್ರತಿ ನಿಮಿಷ, ಪ್ರತಿ ದಿನ ತನ್ನ ಹೆಂಡತಿಗಾಗಿ ತೇಯುತ್ತಿರುವುದನ್ನು, ಕರಗುತ್ತಿರು ವುದನ್ನು ಕಂಡು ನಾನು ಮೂಕಿಯಾಗಿ ಬಿಟ್ಟಿದ್ದೆ. ನಾನಾಗ ಸಂಪೂರ್ಣ ಬದಲಾಗಿ ಬಿಟ್ಟಿದ್ದೆ. ಗುಡಿಸಲಲ್ಲಿ ಕುಳಿತು ಬೀಡಿ ಸುರುಟುತ್ತಿದ್ದ ಮೊದಲಿನ ಾತಿಮಾ ಅಲ್ಲ ಈಗ ನಾನು. ಒಂದು ಸಂಸಾರದ, ಒಂದು ಕುಟುಂಬದ, ಒಂದು ದೊಡ್ಡ ಮನೆತನದ ಒಡತಿಯಾಗಿದ್ದೆ.

ಅಂದು ತನ್ನ ಸೀರೆಯ ಸೆರಗನ್ನು ಸೊಂಟಕ್ಕೆ ಬಿಗಿಯಾಗಿ ಸುತ್ತಿ ಸಿಕ್ಕಿಸಿಕೊಂಡವಳು ಮತ್ತೆಂದೂ ತಿರುಗಿ ನೋಡಲಿಲ್ಲ ನಾನು. ತನ್ನ ಹೆಂಡತಿಯ ಸೇವೆಯೊಂದನ್ನು ಬಿಟ್ಟು ಬೇರೇನನ್ನೂ ಮಾಡಲು ನಿನ್ನಜ್ಜನಿಗೆ ನಾನು ಬಿಡುತ್ತಿರಲಿಲ್ಲ. ಅವರ ಹೆಂಡತಿಯ ಬಟ್ಟೆಗಳನ್ನು ಒಗೆಯುವುದು, ಅದನ್ನೆಲ್ಲ ಒಣಗಿಸಿ, ಮಡಚಿ ಜೋಡಿಸಿಡುವುದು, ಅವರ ಕೋಣೆಯನ್ನು ಶುಚಿಯಾಗಿಡುವುದು, ಅವರ ಸ್ನಾನಕ್ಕೆ ನೀರು ಬಿಸಿ ಮಾಡುವುದು, ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡಿ ಬಡಿಸುವುದು... ಹೀಗೆ ಎಲ್ಲ ಜವಾಬ್ದಾರಿಗಳನ್ನೂ ಅವರ ಕೈಯಿಂದ ಕಸಿದುಕೊಂಡು ಅಸ್ತವ್ಯಸ್ತವಾಗಿದ್ದ ಆ ಮನೆ, ಆ ಸಂಸಾರವನ್ನು ಹಳಿಯ ಮೇಲೆ ತರಲು ಪ್ರಯತ್ನಿಸಿದ್ದೆ. ಆದರೆ ಒಂದು ದಿನವೂ ನಿನ್ನಜ್ಜ ನನ್ನಲ್ಲಿ ಅದು ಯಾಕೆ ಹಾಗೆ, ಅದು ಯಾಕೆ ಹೀಗೆ. ಇದು ಹೀಗೆ ಮಾಡು- ಹಾಗೆ ಮಾಡು ಎಂದು ಹೇಳಿದವರಲ್ಲ. ಅನಗತ್ಯವಾಗಿ ಒಂದು ಮಾತೂ ಆಡಿದವರಲ್ಲ. ಮುಖ ನೋಡಿ ಮಾತನಾಡಿದವರಲ್ಲ. ನಾನು ಅವರ ಕೋಣೆಯಲ್ಲಿ ಏನಾದರೂ ಕೆಲಸದಲ್ಲಿದ್ದರೆ ನಾನು ಹೊರಗೆ ಬರುವ ತನಕ ಅವರು ಹೊರಗೇ ನಿಂತಿರುತ್ತಿದ್ದರು. ನಾನೀಗ ನನ್ನ ತವರನ್ನು ಮರೆತೇ ಬಿಟ್ಟಿದ್ದೆ. ಮದುವೆಯಾದ ಹೊಸತರಲ್ಲಿ ಒಂದು 4-5 ಸಲ ಹೋಗಿದ್ದು ಬಿಟ್ಟರೆ ಮತ್ತೆ ಆ ಕಡೆ ತಿರುಗಿಯೂ ನೋಡಲು ನನಗೆ ಸಮಯವಿರಲಿಲ್ಲ. ನಿನ್ನಜ್ಜ ಎಷ್ಟೋ ಸಲ ಹೇಳಿದ್ದರು. ತಿಂಗಳಿಗೆ ಒಮ್ಮೆಯಾದರೂ ಹೋಗಿ ತಂದೆ-ತಾಯಿ-ತಂಗಿಯನ್ನು ನೋಡಿ ಒಂದೆರಡು ದಿನ ಇದ್ದು ಬಾ ಎಂದು. ಆದರೆ ಹೇಗೆ ಹೋಗುವುದು, ಹೋಗಲಿಕ್ಕೆ ಬಿಡುವು ಸಿಗಬೇಕಲ್ಲ. ಇವರನ್ನೆಲ್ಲ ಹೀಗೆಯೇ ಬಿಟ್ಟು ಹೋಗಲು ಮನಸ್ಸು ಬರಬೇಕಲ್ಲ. ಅನಂತರ ನಿನ್ನ ಅಜ್ಜನೇ ನನ್ನ ತಂದೆ-ತಾಯಿ - ತಂಗಿಯರನ್ನು ತಿಂಗಳಿಗೊಮ್ಮೆ ಬಂದು ಈ ಮನೆಯಲ್ಲಿ ನಾಲ್ಕೆದು ದಿನ ಇದ್ದು ಹೋಗುವಂತಹ ವ್ಯವಸ್ಥೆ ಮಾಡಿದ್ದರು. ‘‘ನನಗೆ ಸ್ವಲ್ಪನೀರು ಕೊಡು’’

ಸುಸ್ತಾದವರಂತೆ ಕಂಡ ಅಜ್ಜಿ ಮಾತು ನಿಲ್ಲಿಸಿ ಗೋಡೆಗೊರಗಿ ಕಾಲು ನೀಟಿ ಕುಳಿತರು. ಹೂಜಿಯಲ್ಲಿದ್ದ ನೀರನ್ನು ಲೋಟಕ್ಕೆ ಬಗ್ಗಿಸಿ ತಂದುಕೊಟ್ಟೆ. ಅದನ್ನು ಒಂದೇ ಗುಟುಕಿಗೆ ಕುಡಿದರು. ‘‘ಅಜ್ಜಿ, ಸುಸ್ತಾಗುತ್ತಿದೆಯಾ? ಆಯಾಸ ಆಗುವು ದಾದರೆ ಇಂದಿಗೆ ಇಷ್ಟು ಸಾಕು. ಬಾಕಿ ನಾಳೆ ಹೇಳಿ’’
‘‘......’’

ಅಜ್ಜಿ ಮೌನವಾಗಿ ಏನೋ ಯೋಚಿಸುತ್ತಿದ್ದರು. ‘‘ನಿನಗೆ ಒಂದು ವಿಷಯ ಗೊತ್ತಾ’’ ಅಜ್ಜಿ ಅವಳ ಉತ್ತರಕ್ಕೂ ಕಾಯದೆ ಮತ್ತೆ ಮಾತು ಮುಂದುವರಿಸಿದರು. ಒಮ್ಮೆ ನನ್ನ ತಂದೆ ಬಂದವರು ಒಂದು ವಿಷಯ ಹೇಳಿದರು. ನನಗೆ ಆ ಮಾತನ್ನು ನಂಬಲಿಕ್ಕೆ ಆಗಲಿಲ್ಲ. ನಿನ್ನ ಅಜ್ಜ ನನ್ನ ತಂದೆಗೆ ಕೆಲಸದವರ ಕೈಯಲ್ಲಿ ಪ್ರತಿ ತಿಂಗಳೂ ದುಡ್ಡು ಕಳುಹಿಸಿ ಕೊಡುತ್ತಿದ್ದರಂತೆ. ಅದೂ ಸ್ವಲ್ಪದುಡ್ಡಲ್ಲ ಇಡೀ ಕುಟುಂಬ ತಿಂಗಳಿಡೀ ತಿಂದರೂ ಉಳಿಯುವಷ್ಟು ದುಡ್ಡು!
 ‘‘ಅದನ್ನು ತೆಗೆದುಕೊಳ್ಳಲಿಕ್ಕೆ ನನಗೆ ತುಂಬಾ ಮುಜುಗರ ಆಗುತ್ತೆ. ಬೇಡ ಹೇಳಿದರೆ ಅವನಿಗೆಲ್ಲಿ ಬೇಸರ ಆಗುತ್ತಾಂತ ತೆಗೆದುಕೊಳ್ಳುತ್ತಾ ಇದ್ದೇನೆ. ಹೀಗೆ ದುಡ್ಡು ಕಳುಹಿಸುವುದು ಬೇಡ ಎಂದು ನೀನು ಅವನಿಗೆ ಹೇಳಬೇಕು. ನಮಗೀಗ ತಿನ್ನಲು - ಉಣ್ಣಲು ಏನೂ ಕಷ್ಟ ಇಲ್ಲ. ಬೇಕಾದರೆ ನಾನೇ ಕೇಳ್ತೇನೆ’’ ಎಂದು ತಂದೆ ನನ್ನಲ್ಲಿ ಹೇಳಿದರು. ನನಗೆ ಆಶ್ಚರ್ಯವಾಗಿತ್ತು. ಏನು ಹೇಳಬೇಕೆಂದೇ ತೋಚಲಿಲ್ಲ. ಈ ವಿಷಯ ತಪ್ಪಿಯೂ ನಿನ್ನಜ್ಜ ನನ್ನಲ್ಲಿ ಹೇಳಿರಲಿಲ್ಲ.

‘‘ಇಲ್ಲಪ್ಪ, ಅವರಲ್ಲಿ ನಾನೇನೂ ಹೇಳುವುದಿಲ್ಲ. ಹೇಳಲಾರೆ. ಆ ದೊಡ್ಡವ್ಯಕ್ತಿಯ ಮುಂದೆ ನಿಂತು ಮಾತನಾಡುವ ಶಕ್ತಿ, ಧೈರ್ಯ ನನಗಿಲ್ಲ. ಕೊಟ್ಟದ್ದನ್ನು ತೆಗೆದುಕೊಳ್ಳಿ. ಬೇಡ ಎಂದರೆ ಅವರಿಗೆ ಬೇಸರವಾಗಬಹುದು. ನಿಮಗೆ ಬೇಡ ಎಂದರೆ ಖರ್ಚು ಮಾಡಬೇಡಿ. ಹಾಗೆಯೇ ತೆಗೆದಿಡಿ. ತಂಗಿಯ ಮದುವೆಗೆ ಆಗಬಹುದು’’ ಎಂದಿದ್ದೆ ನಾನು. ನಿನ್ನ ಅಜ್ಜ ಒಬ್ಬ ಸಾಮಾನ್ಯ ಮನುಷ್ಯ ಅಲ್ಲಮ್ಮ. ನಮ್ಮ ಲೆಕ್ಕಕ್ಕೆ ಸಿಗದ, ಊಹೆಗೂ ನಿಲುಕದ ಮನಸ್ಸು, ವ್ಯಕ್ತಿತ್ವ ಅವರದು. ‘‘ಮತ್ತೊಮ್ಮೆ ಏನಾಯಿತು ಗೊತ್ತಾ?’’ ಅಜ್ಜಿಯ ನೆನಪಿನ ಬುತ್ತಿ ಬಿಚ್ಚಿಕೊಳ್ಳುತ್ತಿರುವುದನ್ನೂ, ಅವರು ಅದನ್ನು ಹೇಳಲು ತವಕಿಸುತ್ತಿರುವುದನ್ನೂ ತಾಹಿರಾ ಕುತೂಹಲದಿಂದ ಗಮನಿಸುತ್ತಿದ್ದಳು. (ರವಿವಾರದ ಸಂಚಿಕೆಗೆ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)