Social Media
ಈ ದೀಪಾವಳಿಗೆ ಪಟಾಕಿ ಖರೀದಿಸುವ ಮುನ್ನ ಇದನ್ನೊಮ್ಮೆ ಓದಿ

ಅದೊಂದು ದಿನ ನಾನು ನಮ್ಮ ಕರ್ನಾಟಕದ ಕಾಶ್ಮೀರ ಎಂದು ಕರೆಯುವ ಬೀದರಿನ ಪ್ರಮುಖ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ತೆರಳುವ ಬಸ್ಗಾಗಿ ಕಾಯುತ್ತಾ ಕುಳಿತಿದ್ದೆ. ಪಕ್ಕದಲ್ಲೇ ನನ್ನ ಹಾಗೇ ಒಂದು ಕುಟುಂಬ ಬಸ್ಗಾಗಿ ಕಾಯುತ್ತಾ ಕುಳಿತಿತ್ತು. ಒಂದು 10 ವರ್ಷ ಪ್ರಾಯದ ಹುಡುಗ ಅವನ ಅಪ್ಪ, ಅಮ್ಮ ಮತ್ತು ಅಜ್ಜಿ. ಹುಡುಗ ಏನೋ ಕೇಳಿ ಅಳುತ್ತಿದ್ದ. ಹತ್ತಿರ ಹೋದಾಗ ಗೊತ್ತಾಯಿತು ಹುಡುಗ ಅಳುತ್ತಿರುವುದು ಚಾಕಲೇಟ್ಗಾಗಿ ಎಂದು. ಅಪ್ಪ ಆಮೇಲೆ ಕೊಡಿಸ್ತೇನೆ ಎಂದು ಸಮಾಧಾನಪಡಿಸುತ್ತಿದ್ದ ಪಾಪ. ಆ ಮಗು ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್ ಹಾಗೂ ಕಣ್ಣಿಗೆ ಕಪ್ಪುಕನ್ನಡಕ ಹಾಕಿತ್ತು.
ಮಗುವಿನ ಅಳು ಜೋರಾದಾಗ ನಾನು ಎರಡು ಚಾಕಲೇಟ್ ತೆಗೆದುಕೊಂಡು ಹೋಗಿ ಆ ಮಗುವಿಗೆ ತೋರಿಸಿದೆ. ಆದರೂ ಆ ಮಗು ನನ್ನನ್ನು ಗಮನಿಸಲೇ ಇಲ್ಲ. ಕೊನೆಗೆ ಅಜ್ಜಿ ಹೇಳಿದಳು, ತಗೋ ಮಗು, ಅವರು ಚಾಕಲೇಟ್ ತೋರಿಸ್ತಾ ಇದ್ದಾರಲ್ವಾ ಅಂತ. ಆ ಮಗು ನನ್ನ ಮುಂದೆ ಕೈ ಚಾಚಿ ಪರದಾಡುವುದನ್ನು ನೋಡಿ ಮನಸ್ಸಿಗೆ ಏನೋ ತೋಚಿತು. ಕೊನೆಗೆ ಅ ಮಗುವಿನ ತಂದೆ ನನ್ನಿಂದ ಚಾಕಲೇಟ್ ಪಡೆದು ಆ ಮಗುವಿನ ಕೈಗೆ ಕೊಟ್ಟರು. ಮಗು ಸಂತೋಷ ಗೊಂಡದ್ದು ನೋಡಿ ನನಗೂ ಬಹಳ ಖುಶಿ ಆಯಿತು. ಆದರೆ ಒಂದು ತಲೆಗೆ ಹೋಗಲೇ ಇಲ್ಲ. ಆ ಮಗು ನಾನು ಚಾಕಲೇಟ್ ಕೊಡುವಾಗ ಅಷ್ಟು ಮುಂದೆ ನಿಂತರೂ ಯಾಕೆ ಗಮನಿಸಲಿಲ್ಲ.
ಕೊನೆಗೆ ಆ ಮಗುವಿನ ಅಜ್ಜಿಯೇ ಮಾತಿಗಿಳಿದರು. ಮೊನ್ನೆ ನಡೆದ ದೀಪಾವಳಿ ಹಬ್ಬದ ಮರುದಿನ ಈ ಹುಡುಗ ಸಿಡಿಯದೆ ಹಾಳಾಗಿರುವ ಪಟಾಕಿಯ ಒಳಗಿರುವ ಮದ್ದನ್ನೆಲ್ಲ ಒಂದು ಪೇಪರ್ನಲ್ಲಿ ರಾಶಿ ಹಾಕಿ ಅದಕ್ಕೆ ಬೆಂಕಿ ಕೊಟ್ಟು ಅದು ಒಮ್ಮೆಲೆ ಉರಿದು ಬೆಂಕಿಯ ಜ್ವಾಲೆಯೆದ್ದು ತನ್ನ ಎರಡು ಕಣ್ಣುಗಳನ್ನೇ ಕಳೆದು ಕೊಂಡು ಈಗ ಬೆಂಗಳೂರಿನ ದೊಡ್ಡ ಆಸ್ಪತ್ರೆಗೆ ಚಿಕಿತ್ಸೆಗೆ ಮೂರನೆ ಸಲ ಹೋಗುವುದು ಎಂದು ಹೇಳುವಾಗ ನನ್ನ ಕಣ್ಣೀರು ನನ್ನ ಅಂಗಿಗೆ ಬಿದ್ದು ನನ್ನನ್ನು ಮತ್ತೆ ವಾಸ್ತವ ಲೋಕಕ್ಕೆ ಬರೋ ಹಾಗೆ ಮಾಡಿತು.
ಮಕ್ಕಳಿಗೆ ದಯವಿಟ್ಟು ಪಟಾಕಿ ಕೊಟ್ಟು ಅರಳಬೇಕಾದ ನಮ್ಮ ಮಕ್ಕಳನ್ನು ಕತ್ತಲಲ್ಲಿ ಕಳೆಯೋ ಹಾಗೆ ಮಾಡಬೇಡಿ ಸಹೋದರರೆ. ನಾನು ಆ ನಂತರ ಆ ಮಗುವನ್ನು ನೋಡಲೇ ಇಲ್ಲ. ಆದರೂ ಈಗಲೂ ಅ ಮಗು ನನ್ನ ಪ್ರಾರ್ಥನೆಯ ಒಂದು ಭಾಗ. ಇಲ್ಲಿ ನನಗೆ ಜಾತಿ, ಮತ, ಹೊಟ್ಟೆ ಕಿಚ್ಚು, ಮತ್ಸರ ಮತ್ತು ರಾಜಕೀಯ ಯಾವುದು ಕಾಣಲಿಲ್ಲ. ಆ ಕುಟುಂಬದಲ್ಲಿ ಯಾಕೆಂದರೆ ಅವರಲ್ಲಿ ಕಷ್ಟ ಇತ್ತು ನೋವಿತ್ತು ಹಾಗೆ.
ಮುಂದಿನ ನಮ್ಮ ಹಬ್ಬ ಆಚರಿಸುವಾಗ ನಮ್ಮ ಅರಳುವ ಕುಡಿಗಳಿಂದ ಪಟಾಕಿಯನ್ನು ದೂರ ಇಡೋಣ. ಹಾನಿಕರವಲ್ಲದ ಪಟಾಕಿಗಳನ್ನು ಮಾತ್ರ ಬಳಸುವ ಬಂಧುಗಳೇ.(ಇದು ಕಥೆಯಲ್ಲ ಘಟನೆ)
ಇತೀ ನಿಮ್ಮ Abdul Jabbar Ponnodi
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ