varthabharthi


ಕಾಡಂಕಲ್ಲ್ ಮನೆ

ಕಾದಂಬರಿ ಧಾರಾವಾಹಿ-32

ವಾರ್ತಾ ಭಾರತಿ : 8 Oct, 2016
ಮುಹಮ್ಮದ್ ಕುಳಾಯಿ

-- ಮತ್ತೆ ಮದುಮಗಳ ಅಲಂಕಾರದಲ್ಲಿ...--
‘‘ನಾನು ಬರ್ತೇನೆ. ಬೆಳಗ್ಗೆ ಹೊರಡುತ್ತೇನೆ. ನೀವು ಒಳ್ಳೆಯವರು. ನಿಮಗೆ ಒಳ್ಳೆಯ ಮನಸ್ಸಿದೆ. ದೇವರು ನಿಮಗೆ ಒಳ್ಳೆಯದನ್ನೇ ಮಾಡುತ್ತಾನೆ. ಇದು ನನ್ನ ಹಾರೈಕೆ. ಎಲ್ಲಿದ್ದರೂ, ಯಾವ ಸ್ಥಿತಿಯಲ್ಲಿದ್ದರೂ ನಾನು ನಿಮಗಾಗಿ ಪ್ರಾರ್ಥಿಸುತ್ತೇನೆ’’ ನಾನು ಹೆಜ್ಜೆ ಮುಂದಿಟ್ಟೆ. ‘‘ಫಾತಿಮಾ...’’ ಮತ್ತೆ ಅವರ ಕರೆ ನನ್ನ ನಿಲ್ಲಿಸಿತು.

‘‘................’’

‘‘ಫಾತಿಮಾ, ನಾನೊಂದು ಮಾತು ಹೇಳುತ್ತೇನೆ. ಅದನ್ನು ನೀನು ನೆರವೇರಿಸಿ ಕೊಡುತ್ತಿಯಾ ಫಾತಿಮಾ’’ ಅಜ್ಜನ ಧ್ವನಿ ಈಗ ನಡುಗುತ್ತಿತ್ತು. ‘‘ಒಂದೇನು, ನೂರು ಹೇಳಿ. ನಿಮ್ಮ ಪಾದ ತೊಳೆದು ನೀರು ಕುಡಿಯಲಿಕ್ಕೂ ನಾನು ಸಿದ್ಧ.’’
‘‘ಫಾತಿಮಾ, ನಾನು ನಿನ್ನನ್ನು ಮದುವೆಯಾಗು ವುದಾದರೆ ನೀನು ಒಪ್ಪುತ್ತಿಯಾ ಫಾತಿಮಾ.’’

ಸಾವಿರ ಸಿಡಿಲುಗಳು ಒಮ್ಮೆಲೆ ಬಂದು ಅಪ್ಪಳಿಸಿದಂತೆ ನಾನು ನಡುಗತೊಡಗಿದ್ದೆ. ‘‘ಏನಿದು ನಿನ್ನ ಹುಡುಗಾಟ... ಏನು ಹೇಳುತ್ತಾ ಇದ್ದಿಯಾ ನೀನು...’’ ನಿನ್ನ ಅಜ್ಜನ ಅಕ್ಕ ಅದೆಲ್ಲಿದ್ದರೋ ಪ್ರತ್ಯಕ್ಷವಾಗಿ ನಿನ್ನಜ್ಜನ ಎದುರು ನಿಂತು ಗದರಿಸತೊಡಗಿದರು. ‘‘ಹೌದಕ್ಕಾ, ಅವಳು ಒಪ್ಪಿದರೆ ನಾನವಳನ್ನು ಮದುವೆಯಾಗ್ತೇನೆ.’’

‘‘ಹುಚ್ಚು ಹಿಡಿದಿದೆಯಾ ನಿನಗೆ?’’ ಅಕ್ಕ ಕೋಪದಿಂದ ಅಬ್ಬರಿಸತೊಡಗಿದರು. ‘‘ಹುಚ್ಚಲ್ಲ, ಈ ಮನೆಯ ದೀಪ ಅವಳು... ಈ ಮನೆಯ ಬೆಳಕು ಅವಳು. ಅವಳ ಮನಸ್ಸು ನಿಮಗ್ಯಾರಿಗೂ ಅರ್ಥ ಆಗುವುದಿಲ್ಲಕ್ಕಾ. ಅದು ನನಗೆ ಮಾತ್ರ ಅರ್ಥ ಆಗುವುದು.’’
‘‘ಜನ ಏನಂದಾರು, ಅಷ್ಟೂ ಜ್ಞಾನ ಬೇಡವೇ ನಿನಗೆ’’
‘‘................’’
‘‘ಈ ಮನೆಯ ಮಾನ ಮೂರು ಕಾಸಾಗುತ್ತೆ.’’

ಅಕ್ಕನ ಆರ್ಭಟ ಕೇಳಿ ಅಪ್ಪ, ಅಮ್ಮ, ತಂಗಿ ಧಾವಿಸಿ ಬಂದರು. ‘‘ಮನೆ...! ಮನೆಯ ಪಂಚಾಂಗವೇ ಕುಸಿದರೆ ಮನೆಯೆಲ್ಲಿ ಉಳಿಯುತ್ತದೆ ಅಕ್ಕ.’’


‘‘ನೋಡಿ, ನಿಮ್ಮ ಮಗಳನ್ನು ಇವನು ಮದುವೆಯಾಗ್ತಾನಂತೆ’’ ಎಂದು ತಂದೆಯ ಜೊತೆ ಕಿರುಚಿದ ಅಕ್ಕ ಬಿರುಗಾಳಿಯಂತೆ ಅಲ್ಲಿಂದ ಹೊರಟು ಹೋದರು. ಕನಸು ಮನಸ್ಸಿನಲ್ಲೂ ಎನಿಸದ ನಿನ್ನಜ್ಜನ ಮಾತನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ನಾನು ತತ್ತರಿಸಿ ಹೋಗಿದ್ದೆ. ಅಪ್ಪ, ಅಮ್ಮ ನನ್ನ ಕೈ ಹಿಡಿದು ಎಳೆಯುತ್ತಾ ಹೊಸಿಲು ದಾಟುವಾಗ ‘‘ಮಾವಾ...’’ ನಿನ್ನಜ್ಜನ ಕರೆ ಕೇಳಿ ಮತ್ತೆ ನಿಂತೆವು.
‘‘ಮಾವಾ... ಫಾತಿಮಾಳ ಒಪ್ಪಿಗೆಯಿದ್ದರೆ ನಾನವಳನ್ನು ಮದುವೆಯಾಗುತ್ತೇನೆ. ಅವಳ ಒಪ್ಪಿಗೆ ಇಲ್ಲಾಂತಾದರೆ ನೀವು ಬೆಳಗ್ಗೆ ಹೋಗಬಹುದು.’’

ನಿನ್ನಜ್ಜ ನನ್ನ ಎದೆಗೆ ಗುರಿಯಿಟ್ಟು ಆ ಬಾಣವನ್ನು ಹೊಡೆದು ಬಿಟ್ಟಿದ್ದರು. ಅದು ನನ್ನ ಹೃದಯದ ಆಳಕ್ಕೆ ನಾಟಿ ಇರಿದು ಬಿಟ್ಟಿತ್ತು. ಅದರ ನೋವಿಗೆ ನಾನು ವಿಲ ವಿಲನೆ ಒದ್ದಾಡುತ್ತಾ ಕೋಣೆಯ ಹೊರಗೆ ಬಂದಿದ್ದೆ. ಅಪ್ಪ, ಅಮ್ಮ ಬೆಳಗ್ಗೆ ಹೊರಡುವ ಎಲ್ಲ ತಯಾರಿ ಮಾಡಿ ಮಲಗಿ ಬಿಟ್ಟಿದ್ದರು. ನಿನ್ನಜ್ಜನ ಮಾತು ಅಂದು ರಾತ್ರಿಯಿಡೀ ನನ್ನನ್ನು ಕಣ್ಣುಮುಚ್ಚಲು ಬಿಡಲಿಲ್ಲ. ಮುಂಜಾನೆಯ ಬಾಂಗ್ ಕಿವಿಗಪ್ಪಳಿಸಿದರೂ ನನಗೆ ಚಾಪೆಯಿಂದೇಳುವ ಮನಸಾಗಲಿಲ್ಲ. ಹಾಗೆಯೇ ಬಿದ್ದುಕೊಂಡವಳಿಗೆ ಬಾಗಿಲು ತಟ್ಟಿದ ಸದ್ದು ಕೇಳಿಸಿತು. ಎದ್ದು ಬಾಗಿಲು ತೆರೆದು ನೋಡಿದರೆ ಅಲ್ಲಿ ನಿನ್ನಜ್ಜ ನಿಂತಿದ್ದರು. ಕೆಂಪಡರಿದ ಅವರ ಕಣ್ಣುಗಳು ನನ್ನನ್ನೇ ನೋಡುತ್ತಿದ್ದವು. ‘‘ಏನು ನಿರ್ಧಾರ ಮಾಡಿದೆ ಫಾತಿಮಾ...’’ ಅಜ್ಜ ತೊದಲಿದರು. ನಾನು ಅವರ ಮುಖವನ್ನೇ ನೋಡುತ್ತಾ ಕಂಬದಂತೆ ನಿಂತು ಬಿಟ್ಟಿದ್ದೆ. ‘‘ಹೋಗುವುದೂಂತಲೇ ತೀರ್ಮಾನ ಮಾಡಿದಿ ಅಲ್ಲವಾ..., ಆಯಿತು ಹೋಗು.. ದೇವರು ನಿನಗೆ ಒಳ್ಳೆಯದು ಮಾಡಲಿ. ನಾನು ನಿನಗಾಗಿ ಯಾವತ್ತೂ ದುಆ ಮಾಡುತ್ತೇನೆ. ನನ್ನಿಂದೇನಾದರೂ ತಪ್ಪಾಗಿದ್ದರೆ ಕ್ಷಮಿಸು...’’ ಅಷ್ಟು ಹೇಳಿದ ನಿನ್ನಜ್ಜ ಹೊರಡಲು ತಿರುಗಿ ನಿಂತರು.
 

ನನಗೆ ತಡೆಯಲಾಗಲಿಲ್ಲ. ನನ್ನ ಹೃದಯವೇ ಒಡೆದು ಬಾಯಿಗೆ ಬಂದಂತಾಗಿ ಬಿಟ್ಟಿತ್ತು. ನನ್ನ ದೇಹದ ರಕ್ತ ಚಲನೆಯೆಲ್ಲ ನಿಂತಂತಾಗಿ ನಡುಗುತ್ತಾ ನಾನು ಕುಸಿದು ಅವರ ಕಾಲುಗಳನ್ನು ಗಟ್ಟಿಯಾಗಿ ಹಿಡಿದು ಬಿಟ್ಟಿದ್ದೆ. ಅದೆಷ್ಟೋ ಹೊತ್ತು ನಾನು ಹಾಗೆಯೇ ಕುಳಿತಿದ್ದೆ. ನನ್ನ ಕಣ್ಣೀರು ಅವರ ಪಾದಗಳನ್ನು ತೊಳೆಯುತ್ತಿತ್ತು. ನಮ್ಮ ಹೃದಯಗಳು ಮೌನ ಸಂಭಾಷಣೆಯಲ್ಲಿ ತೊಡಗಿದ್ದವು. ಅದಾಗಲೇ ಅವರ ಅಕ್ಕ, ನನ್ನ ತಂದೆ, ತಾಯಿ, ತಂಗಿ ಎಲ್ಲ ಬಂದು ನಮ್ಮ ಸುತ್ತ ನಿಂತು ಬಿಟ್ಟಿದ್ದರು. ಇದಾಗಿ ನಾಲ್ಕು ದಿನಗಳಲ್ಲಿ ನಿನ್ನಜ್ಜ ಮಸೀದಿಯ ಮೌಲವಿಯವರನ್ನು ಮನೆಗೆ ಕರೆತಂದಿದ್ದರು. ಅವರ ಜೊತೆ ಒಂದು ಹತ್ತು ಗೆಳೆಯರೂ ಇದ್ದರು. ತ್ಯಾಂಪಣ್ಣ ಶೆಟ್ಟಿ ಎಲ್ಲರಿಗಿಂತಲೂ ಮೊದಲೇ ಬಂದು ಅಂಗಳದಲ್ಲಿ ನಿಂತು ಎಲ್ಲರನ್ನೂ ಸ್ವಾಗತಿಸಿದರು. ಅವರೆಲ್ಲರಿಗೂ ಕುಡಿಯಲು ಶರ್ಬತ್ ಕೊಟ್ಟರು. ಕೋಣೆಯ ಒಳಗೆ ಮದುಮಗಳಾಗಿ ಅಲಂಕರಿಸಿ ಕುಳಿತ ನನಗೆ ಮೌಲವಿಯವರು ವರಾಂಡದಲ್ಲಿ ನಿನ್ನಜ್ಜ ಮತ್ತು ನನ್ನ ತಂದೆಗೆ ನಿಖಾಹ್ ಹೇಳಿ ಕೊಡುತ್ತಿರುವುದು ಕೇಳಿಸಿತು. ಮೊದಲು ತಂದೆಗೆ ಹೇಳಿಕೊಟ್ಟರು
    ಎಂಡೆ ಮಗಳ್(ನನ್ನ ಮಗಳು)
    ಫಾತಿಮಾ ಎನ್ನವಳೆ(ಫಾತಿಮಾ ಎಂಬವಳನ್ನು)
    ಒನ್ನೇಕಾಲ್ ಉರ್ಪೆ (ಒಂದೂಕಾಲು
ರೂಪಾಯಿ)
    ಮಹರ್‌ಂಡೆ ಪಗರಂ(ವಧು ದಕ್ಷಿಣೆಗೆ ಬದಲಾಗಿ)
    ಞಾನ್ ನಿನಕ್ಕ್ (ನಾನು ನಿನಗೆ)
    ನಿಖಾಹ್ ಆಕಿತನ್ನು(ನಿಖಾಹ್ ಮಾಡಿಕೊಟ್ಟೆ)
    ಇಣಯಾಕಿ ತನ್ನು(ಜೋಡಿ ಮಾಡಿ ಕೊಟ್ಟೆ)
ಕೂಟಿ ಚೇರ್ತು ತನ್ನು
(ಜೊತೆ ಮಾಡಿಕೊಟ್ಟೆ)
ಮೌಲವಿ ಹೇಳಿ ಕೊಟ್ಟಂತೆ ತಂದೆ ಹೇಳಿದರು
ಈಗ ಮೌಲವಿ ನಿನ್ನಜ್ಜನಿಗೆ ಹೇಳಿಕೊಟ್ಟರು
    ನಿಂಙಲುಡೆ ಮಗಳ್(ನಿಮ್ಮ ಮಗಳು)
    ಫಾತಿಮಾ ಎನ್ನವಳೆ(ಫಾತಿಮಾ ಎಂಬವಳನ್ನು)
    ಒನ್ನೇಕಾಲ್ ಉರ್ಪೆ (ಒಂದೂಕಾಲು
ರೂಪಾಯಿ)
    ಮಹರ್‌ಂಡೆ ಪಗರಂ(ವಧು ದಕ್ಷಿಣೆಗೆ ಬದಲಾಗಿ)
    ನಿಙಲ್ ಎನಿಕ್ಕ್(ನೀವು ನನಗೆ)
    ನಿಖಾಹ್ ಆಕಿ ತನ್ನದ್‌ನೆ(ನಿಖಾಹ್
ಮಾಡಿಕೊಟ್ಟದ್ದನ್ನು)
      ಇಣಯಾಕಿ ತನ್ನದ್‌ನೆ (ಜೋಡಿ
ಮಾಡಿಕೊಟ್ಟದ್ದನ್ನು)
    ಕೂಟಿ ಚೇರ್ತ್ ತನ್ನದ್‌ನೆ(ಜೊತೆ
ಮಾಡಿಕೊಟ್ಟದ್ದನ್ನು)
    ಞಾನ್ ಸ್ವೀಗರಿಚ್ಚು(ನಾನು ಸ್ವೀಕರಿಸಿದೆ)
    ಪೊರ್ತ ಪೆಟ್ಟು(ಸಮ್ಮತಿಸಿದೆ)

ಆ ವಾಕ್ಯಗಳು ಕೇಳುತ್ತಿದ್ದಂತೆಯೇ ನನ್ನ ದೇಹದ ರಕ್ತದ ಕಣಕಣಗಳೂ ‘ಆಮೀನ್.. ಆಮೀನ್...’ ಎಂದು ದೇವನಿಗೆ ಮೊರೆಯಿಡುತ್ತಿದ್ದವು. ಆಗ ನಾನು ನನ್ನ ದೇವನಿಗೆ ಕಣ್ಣೀರ ಅಭಿಷೇಕ ಮಾಡಿಬಿಟ್ಟಿದ್ದೆ. ಅಜ್ಜಿ ಮಾತು ನಿಲ್ಲಿಸಿ ಎತ್ತಲೋ ದಿಟ್ಟಿಸಿ ನೋಡುತ್ತಾ ಕಲ್ಲಿಂತೆ ಕುಳಿತುಬಿಟ್ಟರು. ಸ್ವಲ್ಪ ಹೊತ್ತು... ಮತ್ತೆ ಕನವರಿಸುವವರಂತೆ ಏನೇನೋ ಹೇಳತೊಡಗಿದರು.

ಅಂದು ನಮ್ಮ ಮೊದಲ ರಾತ್ರಿ. ನಾನು ತಿಳಿನೀಳಿ ಅಂಚಿನ ಬಿಳಿ ಸೀರೆಯುಟ್ಟು ಮೈತುಂಬಾ ಆಭರಣ, ಮುಡಿ ತುಂಬಾ ಮಲ್ಲಿಗೆ ಮುಡಿದು ಒಂದು ತಂಬಿಗೆ ಹಾಲು ಹಿಡಿದುಕೊಂಡು ನಿನ್ನಜ್ಜನ ಕೋಣೆಗೆ ಹೋಗಿದ್ದೆ. ಹಾಸಿಗೆಯಲ್ಲಿ ಮದುಮಗನಾಗಿ ಕುಳಿತಿದ್ದ ಅವರ ಮುಖ ತುಂಬಾ ಮಂದಹಾಸವಿತ್ತು. ಕಣ್ಣು ತುಂಬಾ ಪ್ರೀತಿಯಿತ್ತು. ಎರಡು ಕೈಗಳನ್ನೂ ಉದ್ದಕ್ಕೆ ನೀಟಿ ಕರೆದು ಅವರು ನನ್ನನ್ನು ತಬ್ಬಿಕೊಂಡಿದ್ದರು. ಮೊದಲೊಂದು ಮದುವೆಯಾಗಿದ್ದರೂ ಎಂದೂ ಮೊದಲ ರಾತ್ರಿಯ ಆ ಸುಖವನ್ನು ಕಾಣದ ನನ್ನ ದೇಹದ ಕಾಮನೆಗಳೆಲ್ಲ ಆ ಕ್ಷಣ ಗರಿಗೆದರಿ ನಿಂತಿದ್ದವು. ಮದುವೆಯಾಗಿಯೂ ರೋಗಿ ಹೆಂಡತಿಯಿಂದ ಯಾವುದೇ ಸುಖವನ್ನು ಅನುಭವಿಸದ ನಿನ್ನಜ್ಜನ ದೇಹವೂ ಬಿಸಿಯಾಗಿ ಕಾದ ಬಾಣಲೆಯಂತಾಗಿತ್ತು. ಅವರ ಆ ಪ್ರೀತಿಯ ಅಪ್ಪುಗೆಯಲ್ಲಿ ನಾನು ಕರಗಿ ಹೋಗಿದ್ದೆ. ಅಂದು ರಾತ್ರಿ ಇಡೀ ನಾವು ಪ್ರೀತಿಯ ಸರೋವರದಲ್ಲಿ ಈಜುತ್ತಾ.. ವಿರಮಿಸುತ್ತಾ, ಈಜುತ್ತಾ... ವಿರಮಿಸುತ್ತಾ ಬೆಳಗಾಗುವವರೆಗೂ ಸುಖಿಸಿದೆವು. ಹಿಂದೆಂದೂ ಅನುಭವಿಸದ ಸುಖದ ಹೊಳೆಯನ್ನೇ ನಿನ್ನಜ್ಜ ನನ್ನ ದೇಹದಲ್ಲಿ ಹರಿಸಿ ಬಿಟ್ಟಿದ್ದರು. ಆನಂತರ ಐದು ಮಕ್ಕಳನ್ನು ನಾನು ನಿನ್ನಜ್ಜನಿಗೆ ಹಡೆದುಕೊಟ್ಟೆ. ಐದೂ ಹೆಣ್ಣೇ. ನಿನ್ನ ಅಜ್ಜನಿಗೆ ಒಂದು ಗಂಡು ಬೇಕು ಎಂದು ತುಂಬಾ ಆಸೆಯಿತ್ತು. ಅದಕ್ಕಾಗಿ ಅವರು ಅದೆಷ್ಟೋ ಹರಕೆ ಹೊತ್ತುಕೊಂಡರು. ದೇವರು ಕರುಣಿಸಲಿಲ್ಲ. ನಿನ್ನಜ್ಜನ ಆ ಒಂದು ಆಸೆ ಉಳಿದೇ ಹೋಯಿತು... ಉಳಿದೇ ಹೋಯಿತು. ಅಜ್ಜಿಯ ಮಾತು ಕ್ಷೀಣಿಸುತ್ತಾ ಬಂತು. ‘‘ಅಜ್ಜಿ...’’ ತಾಹಿರಾ ಕೂಗಿದಳು. ಅಜ್ಜಿಗೆ ತಾನೆಲ್ಲಿದ್ದೇನೆ ಎಂಬ ಪ್ರಜ್ಞೆಯೇ ಇರಲಿಲ್ಲ. ಏನು ಮಾತನಾಡುತ್ತಿದ್ದೇನೆ. ಯಾರ ಜೊತೆ ಮಾತನಾಡುತ್ತಿದ್ದೇನೆ ಎಂಬ ಜ್ಞಾನವೇ ಇಲ್ಲದೆ ಬಡ ಬಡಿಸುತ್ತಲೇ ಇದ್ದರು. ಈಗ ಅವರ ಮಾತು ಅರ್ಥವಾಗುತ್ತಿರಲಿಲ್ಲ. ತಾಹಿರಾ ಅವರನ್ನು ಮಲಗಿಸಿದಳು. ಮುಖಕ್ಕೆ ಸ್ವಲ್ಪತಣ್ಣೀರು ಹಾಕಿ ಒರೆಸಿದಳು. ಅಜ್ಜಿಗೆ ಎಚ್ಚರವಾ ಗಲಿಲ್ಲ. ಅವರು ಬಾಯಿ ಅಗಲಿಸಿ, ಕಣ್ಣು ಮುಚ್ಚಿ ನಿದ್ದೆಗೆ ಜಾರಿದರು. ಭಾಗ - 4
ಚುಮುಚುಮು ಚಳಿಗೆ ಮುಖದ ತುಂಬಾ ರಗ್ಗು ಹೊದ್ದು ಮಲಗಿದ್ದ ತಾಹಿರಾಳಿಗೆ ಸೂರ್ಯ ಉದಯಿಸಿ ಬಹಳಷ್ಟು ಮೇಲೆ ಬಂದಿದ್ದರೂ ಏಳುವ ಮನಸ್ಸಾಗಲಿಲ್ಲ. ಮತ್ತೆ ಹೊಟ್ಟೆ ಚುರುಗುಟ್ಟಿದ್ದಾಗ ಮೈಮುರಿದು ಎದ್ದು ಅಡಿಗೆ ಮನೆಗೆ ಬಂದರೆ ಅಲ್ಲಿ ಐಸು ಕಾಣಲಿಲ್ಲ. ಅಲ್ಲಿಂದ ಅಜ್ಜಿಯ ಕೋಣೆಯ ಹೊಸ್ತಿಲಿಗೆ ಬಂದವಳಿಗೆ ಅಲ್ಲಿ ಅಜ್ಜಿ, ಐಸು, ಮತ್ತೊಬ್ಬ ಗಂಡಸು ಮಾತನಾಡುತ್ತಿರುವುದು ಕಂಡು ಅಲ್ಲೇ ನಿಂತಳು.

‘‘ಯಾಕೆ ನಿಂತೆ, ಒಳಗೆ ಬಾ, ನಾಸರ್ ಬಂದಿದ್ದಾನೆ’’ ಐಸು ಅವಳನ್ನು ಒಳಗೆ ಕರೆದಳು. ‘‘ನಾಸರ್!’’ ಅವಳ ಕಾಲು ಒಂದು ಹೆಜ್ಜೆ ಹಿಂದೆ ಸರಿಯಿತು. ನಾಸರ್ ತಿರುಗಿ ನೋಡಿದ. ಅವನ ಮುಖದ ತುಂಬಾ ನಗು. ರಾತ್ರಿಯುಡುಗೆಯಲ್ಲಿದ್ದ ಅವಳಿಗೆ ಮುಜುಗರವಾಯಿತು. ‘‘ಬಾ ತಾಹಿರಾ, ನಾನು ನಿನ್ನನ್ನು ಮಾತನಾಡಿಸ ಬೇಕೂಂತ ಎರಡು ಸಲ ನಿನ್ನ ಕೋಣೆಗೆ ಬಂದೆ. ನೀನು ಮಲಗಿದ್ದೆ. ಸುಮ್ಮನೆ ಯಾಕೆ ಎಬ್ಬಿಸುವುದೂಂತ ಹಿಂದೆ ಬಂದೆ’’ ಅವನ ಮಾತಿನ ತುಂಬಾ ಸ್ನೇಹವಿತ್ತು. ಅವಳು ಗೋಡೆಗೆ ಒರಗಿ ಮುದುಡಿ ನಿಂತಳು. ಐಸು ಎದ್ದು ಹೋಗಿ ಅವಳ ಕೈ ಹಿಡಿದು ಕರೆತಂದು ಭುಜ ಹಿಡಿದು ಪಕ್ಕ ಕುಳ್ಳಿರಿಸಿಕೊಂಡಳು. ನಾಸರ್ ನುಂಗುವಂತೆ ಅವಳನ್ನೇ ನೋಡುತ್ತಿದ್ದ. ಅವನ ಕಣ್ಣುಗಳಲ್ಲಿ ಸಾವಿರ ಪ್ರಶ್ನೆಗಳಿದ್ದವು. ‘‘ಏನಮ್ಮ ಇದು. ಮೊನ್ನೆ ನೋಡಿದಾಗ ಅಜ್ಜಿಯ ಕೋಲಿನಂತಿದ್ದವಳು ಈಗ ಒಳ್ಳೆಯ ಡ್ರಮ್‌ತರ ಆಗಿದ್ದಾಳಲ್ಲ. ಏನು ತಿನ್ನಿಸಿದೆ ಇವಳಿಗೆ.’’


‘‘ಸುಮ್ಮನಿರೋ, ದೃಷ್ಟಿ ಬಿದ್ದೀತು ನನ್ನ ಮಗಳಿಗೆ’’ ಐಸು ಅವಳ ತಲೆ ಸವರಿ ಭುಜಕ್ಕೊರಗಿಸಿಕೊಂಡಳು. ‘‘ಮಾಮಿ, ನಾನು ಮುಖ ತೊಳೆದು ಬರ್ತೇನೆ.’’ ತಾಹಿರಾ ಐಸುಳ ಕಿವಿಯಲ್ಲಿ ಮೆಲ್ಲ ಉಸುರಿದಳು. ಅವಳಿಗೆ ಅವನ ನೋಟದಿಂದ ತಪ್ಪಿಸಿಕೊಳ್ಳಬೇಕಿತ್ತು. ‘‘ಬೇಗ ಬಾ, ಅಜ್ಜಿಯೂ ತಿಂಡಿ ತಿಂದಿಲ್ಲ. ನೀನು ಏಳುವುದನ್ನೇ ಕಾಯುತ್ತಾ ಇದ್ದರು.’’


‘‘ಓ, ಅಜ್ಜಿಗೆ ಈಗ ಮೊಮ್ಮಗಳ ಜೊತೆಗೇ ಊಟ, ತಿಂಡಿ ಎಲ್ಲಾ ಆಗಬೇಕೂಂತ ಕಾಣುತ್ತೆ ಅಲ್ಲವಾ?’’ ನಾಸರ್ ಚುಡಾಯಿಸುವವನಂತೆ ಅಜ್ಜಿಯ ಮುಖ ನೋಡಿದ. ಅಜ್ಜಿಯ ಮುಖ ಅರಳಿತು. ಅವರಿಗೆ ಅವನ ಆ ಮಾತು ಇಷ್ಟವಾಗಿತ್ತು. ‘‘ನೀನು ಹೋಗಮ್ಮ, ಅವನು ಹಾಗೆಯೇ ಮಾತನಾಡುವುದು’’ ಐಸು ತಾಹಿರಾಳನ್ನು ಎಬ್ಬಿಸಿದಳು. ಅವಳು ಬಳುಕುತ್ತಾ ಕೋಣೆಯ ಹೊರಗೆ ಬಂದವಳು ನಿಟ್ಟುಸಿರು ಬಿಟ್ಟು ಬಚ್ಚಲಿನತ್ತ ಹೆಜ್ಜೆ ಹಾಕಿದಳು. ನಾಸರ್ ಅವಳ ಹೆಜ್ಜೆಯನ್ನೇ ನೋಡುತ್ತಿದ್ದ.
(ಗುರುವಾರದ ಸಂಚಿಕೆಗೆ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)