varthabharthi


ಕಾಡಂಕಲ್ಲ್ ಮನೆ

ಪ್ರೀತಿಯಲ್ಲಿ ತೋಯಿಸಿದ ಸಂಬಂಧಗಳು

ವಾರ್ತಾ ಭಾರತಿ : 22 Oct, 2016

ಧಾರಾವಾಹಿ-36

‘‘ಮಾಮಿ ಯಾರೋ ಬಂದರು!’’
‘‘ನಿನ್ನ ದೊಡ್ಡಮ್ಮ, ಅವರ ಮಕ್ಕಳಿರಬೇಕು.’’
ತಾಹಿರಾ ಮುಜುಗರಕ್ಕೊಳಗಾದವಳಂತೆ ಮಾಮಿಯ ಹಿಂದೆ ಸರಿದಳು. ಅವರೆಲ್ಲ ತನ್ನನ್ನು ಯಾವ ರೀತಿ ಸ್ವೀಕರಿಸಬಹುದು. ಅವರನ್ನು ಹೇಗೆ ಎದುರಿಸುವುದು ಎಂದು ತಾಹಿರಾ ಗೊಂದಲಕ್ಕೊಳಗಾಗಿದ್ದಳು. ಅವಳ ಮುಖ ಬಿಳುಚಿಕೊಂಡಿತ್ತು.
‘‘ನೀನೇನು ಇಲ್ಲಿ ಅವಿತುಕೊಂಡಿದ್ದು, ತಗೋ ಈ ಚೀಲಗಳನ್ನೆಲ್ಲ ಒಳಗಿಡು’’ ನಾಸರ್ ಎರಡು ಚೀಲ ಗಳನ್ನು ತಂದು ಅಡುಗೆ ಮನೆಯ ಬಾಗಿಲಲ್ಲಿ ಇಟ್ಟು ಹೋದ. ಆತ ಕಾರಿನಿಂದ ಎರಡೆರಡೇ ಚೀಲಗಳನ್ನು ತಂದು ಒಳಗಿಡುತ್ತಿದ್ದ.
‘‘ನೀನಿಡಬೇಡ. ಅಲ್ಲಿರಲಿ. ನಾನು ಮತ್ತೆ ಇಡುತ್ತೇನೆ’’ ಐಸು ಹೇಳಿದಳು.
ಎಲ್ಲ ಹೆಂಗಸರು ಒಳಗೆ ಬಂದರು. ಅವರೆಲ್ಲರ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಅವರು ಬುರ್ಖಾ ಕಳಚಿಟ್ಟು ಹುಡುಕುತ್ತಾ ಹುಡುಕುತ್ತಾ ಎಲ್ಲಿಯೂ ಕಾಣದಿದ್ದಾಗ ಅಡುಗೆ ಮನೆಗೆ ಬಂದರು. ಅಲ್ಲಿ ತಾಹಿರಾ ಐಸುಳ ಬೆನ್ನ ಹಿಂದೆ ಮುದುಡಿ ನಿಂತಿದ್ದಳು.
ಐಸು ತಾಹಿರಾಳ ಭುಜ ಹಿಡಿದಳು.
‘‘ನೋಡು ಇದು ನಿನ್ನ ದೊಡ್ಡಮ್ಮ. ಇದು ದೊಡ್ಡಮ್ಮನ ಮಗಳು - ನಿನ್ನ ಅಕ್ಕ, ಇವಳು ನಿನ್ನ ಇನ್ನೊಬ್ಬಳು ಅಕ್ಕ. ಇವಳು ನಿನ್ನ ತಂಗಿ. ಇವನು ನಿನ್ನ ದೊಡ್ಡಮ್ಮನ ಪುಟ್ಟ ಮೊಮ್ಮಗ. ನಿನ್ನ ಮಗ...’’ ಐಸು ಹೇಳುತ್ತಲೇ ಇದ್ದಳು. ಅವರೆಲ್ಲ ಕಣ್ಣ ರೆಪ್ಪೆ ಬಡಿಯುವುದನ್ನೂ ಮರೆತು ಮೌನವಾಗಿ ಅವಳನ್ನೇ ನೋಡುತ್ತಿದ್ದರು. ಅವರೆಲ್ಲರ ಮುಖದ ತುಂಬಾ ಖುಷಿ, ಆಶ್ಚರ್ಯ, ಮಂದಹಾಸ.
ಒಬ್ಬೊಬ್ಬರೇ ಅವಳ ಕೈಹಿಡಿದರು, ಕೆನ್ನೆ ಚಿವುಟಿದರು, ಗಲ್ಲ ಸವರಿದರು, ಮುತ್ತಿಕ್ಕಿದರು, ತಬ್ಬಿಕೊಂಡರು.
ನನ್ನ ಅಕ್ಕ, ನನ್ನ ತಂಗಿ, ನನ್ನ ದೊಡ್ಡಮ್ಮ ಎಂತಹ ಸುಂದರ ಸಂಬಂಧಗಳು. ಎಂತಹ ಸೆಳೆತ.. ಎಷ್ಟೊಂದು ಪ್ರೀತಿ... ಭಾವನೆಗಳೆಲ್ಲ ಒಮ್ಮೆಲೆ ಹೃದಯಕ್ಕೆ ನುಗ್ಗಿ ಬಂದಂತಾಗಿ ಅವಳ ಕಣ್ಣು ತುಂಬಿತು. ಅಕ್ಕತಂಗಿಯರೆಲ್ಲ ಅವಳ ಸುತ್ತ ಸುತ್ತಿಕೊಂಡರು. ದೊಡ್ಡಮ್ಮ ಐಸು ನಿಂತು ನಗುತ್ತಿದ್ದರು. ತಾಹಿರಾ ಬಾಗಿಲ ಬಳಿ ನೋಡಿದಳು. ನಾಸರ್ ಅಜ್ಜಿಯನ್ನು ತಬ್ಬಿ ಹಿಡಿದು ನಿಂತಿದ್ದ. ಅವರ ಮುಖಗಳಲ್ಲೂ ನಗುವಿನ ಮಿಂಚು.
ಕೆಲವೇ ಹೊತ್ತಿನಲ್ಲಿ ಅಜ್ಜಿಯ ಎಲ್ಲ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳೆಲ್ಲ ಬಂದು ಮನೆ ತುಂಬಿ ಬಿಟ್ಟಿದ್ದರು. ಏನು ಮಾತು, ಏನು ನಗು, ಏನು ಖುಷಿ - ಅಜ್ಜಿಯೂ ಕೆಲವೇ ಗಂಟೆಗಳಲ್ಲಿ ಗೆಲುವಾಗಿ ಬಿಟ್ಟಿದ್ದರು. ಅವರು ಕೋಲೂರಿ ಮನೆಯ ತುಂಬೆಲ್ಲಾ ನಡೆಯುತ್ತಾ ಎಲ್ಲರನ್ನೂ ನೋಡುತ್ತಾ, ಮಾತನಾಡುತ್ತಾ ಖುಷಿ ಪಡುತ್ತಿದ್ದರು. ನಾಸರ್‌ನ ಕಣ್ಣುಗಳು ತಾಹಿರಾಳನ್ನೇ ದಿಟ್ಟಿಸುತ್ತಿದ್ದವು. ಕೆಲವೇ ಕ್ಷಣಗಳಲ್ಲಿ ಆ ಮನೆ ಸ್ವರ್ಗವಾಗಿ ಬದಲಾಗಿ ಬಿಟ್ಟಿತ್ತು. ಆ ಸ್ವರ್ಗದಲ್ಲಿ ತಾಹಿರಾ ಎಲ್ಲರ ಕಣ್ಮಣಿಯಾಗಿ, ರಾಣಿಯಾಗಿ ಮೆರೆಯತೊಡಗಿದ್ದಳು.
ರಾತ್ರಿಯಾಗುತ್ತಲೇ ಅಜ್ಜಿಯ ಅಳಿಯಂದಿರು, ಗಂಡು ಮೊಮ್ಮಕ್ಕಳು ಎಲ್ಲರೂ ಬಂದರು. ಎಲ್ಲರ ಕಣ್ಣುಗಳೂ ತಾಹಿರಾಳ ಮೇಲೆ.
‘‘ಇವರೆಲ್ಲ ನಿನ್ನ ದೊಡ್ಡಪ್ಪಂದಿರು’’ ಐಸು ಹೇಳಿದಳು.
ದೊಡ್ಡಪ್ಪಂದಿರ ಕಣ್ಣು ತುಂಬಾ ಪ್ರೀತಿ. ಅವರು ಹತ್ತಿರ ಬಂದರು. ಅವಳ ತಲೆ ಸವರಿದರು. ಹೆಸರು ಕೇಳಿದರು. ಓದು ಕೇಳಿದರು. ‘‘ಚೆನ್ನಾಗಿರಮ್ಮಾ’’ ಎಂದು ಹರಸಿದರು. ಮಮತೆ ತುಂಬಿದ ಅವರ ಹಾರೈಕೆಗಳು. ತಾಹಿರಾ ಮೂಕಿಯಾಗಿ ಬಿಟ್ಟಿದ್ದಳು. ಅವಳು ಅವರ ಮುಖವನ್ನೇ ನೋಡುತ್ತಾ ನಿಂತು ಬಿಟ್ಟಿದ್ದಳು.
‘‘ಇವರು ನಿನ್ನ ಅಣ್ಣಂದಿರು’’ ಐಸು ಎಲ್ಲರನ್ನೂ ಪರಿಚಯಿಸಿದಳು.
ಅಣ್ಣಂದಿರೆಲ್ಲ ಅವಳ ಸುತ್ತ ನೆರೆದರು. ಒಬ್ಬ ಅಣ್ಣ ಅವಳ ಕೈಹಿಡಿದ. ಇನ್ನೊಬ್ಬ ಅವಳ ಭುಜ ಹಿಡಿದ. ಮತ್ತೊಬ್ಬ ಅವಳನ್ನು ತಬ್ಬಿಕೊಂಡು ಕೆನ್ನೆಗೆ ಕೆನ್ನೆ ತಾಗಿಸಿ ಮುತ್ತಿಕ್ಕಿದ... ಎಲ್ಲರಿಗೂ ಏನೋ ನಿಧಿ ಸಿಕ್ಕಿದಂತಹ ಸಂಭ್ರಮ.
ಯಾರೂ ಇಲ್ಲದ ನನಗೆ, ಒಂಟಿ ಹಕ್ಕಿಯಂತೆ ಬದುಕುತ್ತಿದ್ದ ನನಗೆ ಎಷ್ಟೊಂದು ಅಣ್ಣಂದಿರು, ಎಷ್ಟೊಂದು ಅಕ್ಕಂದಿರು, ತಂಗಿಯರು. ಬಂಧುಗಳು. ಅವರ ನಿರ್ಮಲ ಮನಸ್ಸು. ಮಮತೆ ತುಂಬಿದ ಮಾತುಗಳು... ತಾಹಿರಾಳ ಗಂಟಲು ಉಬ್ಬಿ ಬಂದು ಅವರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸಲಾಗದೆ ಒದ್ದಾಡತೊಡಗಿದಳು.
ಅಂದು ಆ ಮನೆಯಲ್ಲಿ ಬೆಳಗಿನ ಜಾವದವರೆಗೂ ಯಾರೂ ನಿದ್ರಿಸಲಿಲ್ಲ. ಎಲ್ಲರಿಗೂ ಮೆಹೆಂದಿ ಇಡುವ ಸಂಭ್ರಮ. ಅಕ್ಕಂದಿರೆಲ್ಲ ತಾಹಿರಾಳನ್ನು ಮಧ್ಯೆ ಕೂರಿಸಿ ಮೆಹೆಂದಿ ಇಟ್ಟರು. ಒಬ್ಬಳು ಬಲಕೈಗೆ ಇಟ್ಟರೆ, ಮತ್ತೊಬ್ಬಳು ಎಡ ಕೈಗೆ ಇಟ್ಟಳು. ಒಬ್ಬಳು ಎಡಕಾಲಿಗೆ ಇಟ್ಟರೆ ಮತ್ತೊಬ್ಬಳು ಬಲಕಾಲಿಗೆ ಇಟ್ಟಳು. ಒಬ್ಬೊಬ್ಬರು ಒಂದೊಂದು ಹಾಡು ಹೇಳತೊಡಗಿದರು. ಒಬ್ಬಳು ಮೊಲಾಂಜಿ ಹಾಡು ಹಾಡಿದರೆ, ಮತ್ತೊಬ್ಬಳು ತಾನು ಮದ್ರಸದಲ್ಲಿ ಕಲಿತ ಹಾಡು ಹಾಡಿದಳು, ಇನ್ನೊಬ್ಬಳು ಸಿನೆಮಾ ಹಾಡು ಹಾಡಿದಳು. ಎಲ್ಲರೂ ಹಾಡಿಗೆ ಕೈ ತಟ್ಟಿ ಧ್ವನಿಗೂಡಿಸುತ್ತಿದ್ದರೆ ಅಜ್ಜಿ ಮಧ್ಯೆ ಕುಳಿತು ಅವರ ಹಾಡಿಗೆ ತಲೆದೂಗುತ್ತಿದ್ದರು. ತಾಹಿರಾ ಅವರ ಮಧ್ಯೆ ಪುಟ್ಟ ಮಗುವಿನಂತಾಗಿ ಬಿಟ್ಟಿದ್ದಳು. ನಾಸರ್ ದೂರ ನಿಂತು ಅವಳನ್ನೇ ನೋಡುತ್ತಿದ್ದ. ಇಬ್ಬರ ಕಣ್ಣುಗಳೂ ಸಂಭ್ರಮಿಸುತ್ತಾ ಮಾತನಾಡಿಕೊಳ್ಳುತ್ತಿದ್ದವು.

ಎಲ್ಲರೂ ಹಾಡಿದ ಮೇಲೆ ಉಳಿದದ್ದು ಐಸು ಮತ್ತು ಅಜ್ಜಿ. ಎಲ್ಲರೂ ಸೇರಿ ಐಸುಳನ್ನು ಹಾಡಲು ಒತ್ತಾಯಿಸಿದರು. ಐಸು ಮೊದಲು ಹಾಡಲು ಒಪ್ಪಲಿಲ್ಲ. ಆದರೆ ಅವರೆಲ್ಲ ಬಿಡಬೇಕಲ್ಲ. ‘‘ಆಯಿತು, ನಾನು ಹಾಡುತ್ತೇನೆ. ನಾನು ಹಾಡಿದಂತೆಯೇ ನೀವೂ ಹಾಡಬೇಕು’’ ಎಂದಳು ಐಸು.
ಎಲ್ಲರೂ ಒಪ್ಪಿದರು.
ಐಸು ಒಂದೊಂದೇ ಚರಣವನ್ನೂ ಹಾಡತೊಡಗಿದಳು
ಏ ಮೋಳೆ ಸಾರಮ್ಮಾ ಮಾಲಿಗೆ ಪತ್ತಂಡ (ಓ ಮಗಳೇ ಸಾರಮ್ಮಾ ಮಾಳಿಗೆ ಹತ್ತಬೇಡ)
ಮಾಲಿಗೆ ಪತ್ತಿಯೆಂಗ್ ಕಾಲ್ ಜಾರಿ ಬೂಲುವೆ (ಮಾಲಿಗೆ ಹತ್ತಿದರೆ ಕಾಲು ಜಾರಿ ಬೀಳುವೆ)
ಕಾಲ್ ಜಾರಿ ಬೂನೆಂಗ್ ಕೈಕಾಲ್‌ಗೆಲ್ಲ ಅಡಿಯಾವು (ಕಾಲು ಜಾರಿ ಬಿದ್ದರೆ ಕೈಕಾಲುಗಳಿಗೆಲ್ಲ ಪೆಟ್ಟಾದೀತು)
ಕೈಕಾಲ್‌ಗೆಲ್ಲ ಅಡಿಯಾಯೆಂಗ್ ಬಿರ್‌ಂದಾರೆಲ್ಲ ಬರುವಾರ್ (ಕೈ-ಕಾಲುಗಳಿಗೆಲ್ಲ ಪೆಟ್ಟಾದರೆ ನೆಂಟರೆಲ್ಲ ಬರಬಹುದು)
ಬಿರಂದಾರೆಲ್ಲ ಬನ್ನೆಂಗ್ ಶರ್ಬತ್ತಾಕಿ ಕೊಡುಕೋನು (ನೆಂಟರೆಲ್ಲ ಬಂದರೆ ಶರ್ಬತ್ ಮಾಡಿ ಕೊಡಬೇಕು)
ಶರ್ಬತ್ತಾಕಿ ಕೊಡ್ತೆಂಗ್ ಪಂತಾರೆಲ್ಲ ಕಾಲಿಯಾವು. (ಶರ್ಬತ್ ಮಾಡಿ ಕೊಟ್ಟರೆ ಸಕ್ಕರೆ ಎಲ್ಲ ಮುಗಿದೀತು)
ಪಂತಾರೆಲ್ಲ ಕಾಲಿಯಾಯೆಂಗ್ ಮಾಮಿ ನಿಕ್ಕ್ ಪರೆಯು (ಸಕ್ಕರೆ ಎಲ್ಲ ಮುಗಿದರೆ ಅತ್ತೆ ನಿನಗೆ ಬೈದಾರು)
ಐಸು ಹಾಡಿದಂತೆ ಒಂದೊಂದೇ ಚರಣವನ್ನು ಹಾಡಿದ ಎಲ್ಲರೂ ಐಸು ಹಾಡು ನಿಲ್ಲಿಸಿದಾಗ ಮುಖ ಮುಖ ನೋಡಿಕೊಂಡರು.
‘‘ನನಗೆ ಇಷ್ಟೇ ಬರುವುದು ಮುಂದೆ ಬರುವುದಿಲ್ಲ’’ ಎಂದಳು.
ಎಲ್ಲರೂ ಕೈ ತಟ್ಟಿ ಸಂಭ್ರಮಿಸಿದರು.
‘‘ಈಗ ಅಜ್ಜಿ. ಅಜ್ಜಿ ಒಂದು ಹಾಡು ಹೇಳಬೇಕು’’ ಎಲ್ಲರೂ ಒತ್ತಾಯಿಸಿದರು.
ಅಜ್ಜಿ ಮಾತನಾಡಲಿಲ್ಲ. ತನ್ನ ಕರುಳ ಬಳ್ಳಿಗಳ ಸಂಭ್ರಮ. ಸಂತೋಷವನ್ನು ಎದೆಯೊಳಗೆ ತುಂಬಿಸಿ ಕೊಳ್ಳುತ್ತಾ ಕುಳಿತು ಬಿಟ್ಟಿದ್ದರು.
‘‘ಅಜ್ಜೀ, ಈಗ ನೀವೊಂದು ಹಾಡು ಹೇಳಬೇಕು.’’
ಅಜ್ಜಿ ಮಾತನಾಡಲಿಲ್ಲ.
‘‘ಹಾಡು ಬೇಡ. ಕಥೆ ಹೇಳಿ, ಅಜ್ಜಿ ಒಳ್ಳೆಯ ಕಥೆ ಹೇಳುತ್ತಾರೆ’’ ಐಸು ಹೇಳಿದಳು.
‘‘ಅಜ್ಜೀ, ಒಂದು ಕಥೆ ಹೇಳಿ’’ ಎಲ್ಲರೂ ಒತ್ತಾಯಿಸಿದರು.
‘‘ಕಥೆಯಾ?’’ ಅಜ್ಜಿ ಕೆಲವು ಕ್ಷಣ ನೆನಪಿಸುವವರಂತೆ ಮೌನವಾಗಿ ಕುಳಿತರು. ಆಮೇಲೆ ಸಡಿಲವಾಗಿದ್ದ ತನ್ನ ತಲೆಯ ರುಮಾಲನ್ನು ಬಿಚ್ಚಿ, ತಲೆ ಕೂದಲನ್ನು ಸರಿಯಾಗಿ ಗಂಟು ಹಾಕಿ, ಅದರ ಮೇಲೆ ರುಮಾಲನ್ನು ಬಿಗಿಯಾಗಿ ಕಟ್ಟಿಕೊಂಡರು.
‘‘ಹೂಂ, ಕಥೆಯಲ್ಲವಾ ಹೇಳುತ್ತೇನೆ ಕೇಳಿ.’’
ಎಲ್ಲರೂ ಅಜ್ಜಿಯ ಮುಖವನ್ನೇ ನೋಡುತ್ತಾ ಕುಳಿತು ಬಿಟ್ಟರು.
ಒಂದಾನೊಂದು ಕಾಲದಲ್ಲಿ, ಒಂದಾನೊಂದು ಊರಿನಲ್ಲಿ ಒಬ್ಬ ವ್ಯಾಪಾರಿ ಇದ್ದ. ಅವನ ಹೆಸರು ಶೇಖ್. ಅವನದ್ದು ದನದ ವ್ಯಾಪಾರ. ದನಗಳನ್ನೆಲ್ಲ ನೋಡಿಕೊಳ್ಳಲು ಆತ ಒಬ್ಬ ಗೋಪಾಲಕನನ್ನು ನೇಮಿಸಿಕೊಂಡಿದ್ದ. ಅವನಿಗೆ ಮದುವೆಯಾಗಿ ಅದೆಷ್ಟೋ ವರ್ಷಗಳು ಕಳೆದರೂ ಮಕ್ಕಳಾಗಿರಲಿಲ್ಲ. ಅದಕ್ಕಾಗಿ ಅವನು ಇನ್ನೊಂದು ಮದುವೆ ಮಾಡಿ ಕೊಂಡ. ಆ ಹೆಂಡತಿಯಿಂದ ಅವನಿಗೊಂದು ಗಂಡು ಮಗು ಹುಟ್ಟಿತು. ಮಗು, ಹೆಂಡತಿಯರ ಜೊತೆ ಅವನು ಸುಖವಾಗಿ ಬದುಕತೊಡಗಿದ. ಹೀಗೆ ಮಗು ದೊಡ್ಡದಾಗಿ ಹುಡುಗನಾಯಿತು.
ಒಮ್ಮೆ ಏನಾಯಿತು ಗೊತ್ತಾ...
ಶೇಖ್ ವ್ಯಾಪಾರಕ್ಕೆಂದು ಬೇರೆ ಊರಿಗೆ ಹೋದ. ತುಂಬ ದಿನಗಳು ಕಳೆದು ಅವನು ಮನೆಗೆ ಹಿಂದಿರುಗಿದಾಗ, ಮನೆಯಲ್ಲಿ ಅವನ ಎರಡನೆ ಹೆಂಡತಿ ಮತ್ತು ಮಗ ಇರಲಿಲ್ಲ. ಶೇಖ್ ತನ್ನ ಮೊದಲನೆ ಹೆಂಡತಿಯಲ್ಲಿ ಎರಡನೆ ಹೆಂಡತಿ ಮತ್ತು ಮಗ ಎಲ್ಲಿ ಎಂದು ಕೇಳಿದ. ಅದಕ್ಕೆ ಅವಳು, ನಿನ್ನ ಎರಡನೆ ಹೆಂಡತಿ ಸತ್ತು ಹೋದಳು. ಅದೇ ದುಃಖದಲ್ಲಿ ಮಗ ಊರು ಬಿಟ್ಟು ಹೋದ ಎಂದಳು. ಶೇಖ್ ಅವಳ ಮಾತನ್ನು ನಂಬಿದ. ಹೀಗೆ ಒಂದು ವರ್ಷ ಅವನು ಅವರಿಬ್ಬರನ್ನು ನೆನೆದು ಕಣ್ಣೀರು ಸುರಿಸುತ್ತಾ ಕಳೆದ.
ಹೀಗಿರುವಾಗ ಆ ವರ್ಷದ ಬಕ್ರೀದ್ ಹಬ್ಬ ಬಂತು. ಶೇಖ್ ಗೋಪಾಲಕನಲ್ಲಿ ಬಕ್ರೀದ್‌ಗೆ ಕುರ್ಬಾನಿ ಕೊಡಲಿಕ್ಕೆ ಒಂದು ದಪ್ಪನೆಯ ಕಡಸನ್ನು ತರಲು ಹೇಳಿದ. ಅವನು ತಂದ. ಅದು ಕಡಸಿನ ರೂಪದಲ್ಲಿರುವ ಅವನ ಎರಡನೆಯ ಹೆಂಡತಿ ಎಂದು ಶೇಖ್‌ಗೆ ತಿಳಿದಿರಲಿಲ್ಲ. ಅವನು ಮನೆಯೊಳಗೆ ಹೋಗಿ ತನ್ನ ಅಂಗಿಯನ್ನು ಕಳಚಿಟ್ಟು ಹರಿತವಾದ ಚೂರಿಯೊಂದನ್ನು ತಂದ. ಚೂರಿಯಿಂದ ಕಡಸಿನ ಕತ್ತು ಕುಯ್ಯಬೇಕು ಎನ್ನುವಷ್ಟರಲ್ಲಿ ಅದು ‘ಅಂಬಾ’ ಎಂದು ಕರುಳು ಚುಚ್ಚುವಂತೆ ಕೂಗುತ್ತಾ ಕಣ್ಣೀರು ಹಾಕಿತು. ಅದರ ಕೂಗು ಕೇಳಿ ಅವನಿಗೆ ಅದನ್ನು ಕುಯ್ಯಲು ಮನಸ್ಸು ಬರಲಿಲ್ಲ. ಅವನು ಗೋಪಾಲಕನನ್ನು ಕರೆದು ‘ಈ ಕಡಸು ಬೇಡ. ಬೇರೆ ಕಡಸು ತಾ’ ಎಂದ.
ಆಗ ಅಲ್ಲಿಗೆ ಬಂದ ಅವನ ಮೊದಲ ಹೆಂಡತಿ ‘ಇದೇ ಕಡಸನ್ನು ಕುಯ್ಯಿರಿ, ನಿಮಗೆ ಕುರ್ಬಾನಿ ಕೊಡಲು ಇದಕ್ಕಿಂತ ಆರೋಗ್ಯವಂತ, ದಷ್ಟಪುಷ್ಟ ಕಡಸು ಬೇರೆ ಸಿಗದು’ ಎಂದಳು. ಅವಳ ಮಾತು ಕೇಳಿ ಮತ್ತೆ ಶೇಖ್ ಕಡಸಿನ ಬಳಿ ಬಂದ. ಆಗಲೂ ಅದು ಕರುಳು ಕಿತ್ತು ಬರುವಂತೆ ಕೂಗತೊಡಗಿತು. ಆಗಲೂ ಅವನಿಗೆ ಅದನ್ನು ಕುಯ್ಯಲು ಮನಸ್ಸು ಬರಲಿಲ್ಲ. ಅವನು ಗೋಪಾಲಕನಲ್ಲಿ ‘ನೀನೇ ಇದನ್ನು ಕುಯ್ದು, ಚರ್ಮ ಸುಳಿದು, ಮಾಂಸ ಮಾಡಿ ತಾ’ ಎಂದ.
ಹಾಗೆ ಆ ಗೋಪಾಲಕ ಅದನ್ನು ಕುಯ್ದು ಚರ್ಮ ಸುಳಿಯತೊಡಗಿದಾಗ ಅವನಿಗೆ ಆಶ್ಚರ್ಯವಾಗಿತ್ತು. ಆ ಕಡಸಿನ ದೇಹದಲ್ಲಿ ಬರೀ ಎಲುಬು ಮಾತ್ರ ಇತ್ತು. ಮಾಂಸ ಇರಲಿಲ್ಲ. ಈ ವಿಷಯವನ್ನು ಗೋಪಾಲಕ ಬಂದು ಹೇಳಿದಾಗ ಶೇಖ್‌ನಿಗೆ ಬೇಸರವಾಯಿತು. ಅವನು ಗೋಪಾಲಕನಲ್ಲಿ ಇನ್ನೊಂದು ಕರುವನ್ನು ತರಲು ಹೇಳಿದ. ಅವನು ಇನ್ನೊಂದು ಕರುವನ್ನು ತಂದ. ಶೇಖ್‌ನಿಗೆ ಅದು ಕರುವಿನ ರೂಪದಲ್ಲಿರುವ ಅವನ ಮುದ್ದಿನ ಮಗ ಎಂದು ತಿಳಿದಿರಲಿಲ್ಲ. ಶೇಖ್‌ನನ್ನು ನೋಡಿದ್ದೇ ಆ ಕರು ಗೋಪಾಲಕನ ಕೈಯಿಂದ ತಪ್ಪಿಸಿಕೊಂಡು ಬಂದು ಶೇಖ್‌ನ ಹತ್ತಿರ ನಿಂತು ಕಣ್ಣೀರು ಹಾಕತೊಡಗಿತು. ಆ ಕರುವಿನ ದೈನ್ಯ ಭಾವ ನೋಡಿ ಶೇಖ್‌ನ ಮನಸ್ಸು ಕರಗಿತು. ಅವನು ಈ ಕರು ಬೇಡ ಬೇರೊಂದು ತಾ ಎಂದ. ಅಷ್ಟರಲ್ಲಿ ಪುನಃ ನಡುವೆ ಬಂದ ಅವನ ಹೆಂಡತಿ ‘ಇಂದು ಹಬ್ಬದ ದಿನ. ನೀನು ಈ ದಷ್ಟಪುಷ್ಟವಾದ ಕರುವನ್ನು ಕುಯ್ಯಲೇ ಬೇಕು’ ಎಂದಳು. ಆತ ಅವಳ ಮಾತನ್ನು ತಿರಸ್ಕರಿಸಿದ. ಆಗ ಅವಳು ಕೋಪದಿಂದ ‘ನೀನೀವತ್ತು ಈ ಕರುವನ್ನು ಕುಯ್ಯದಿದ್ದರೆ ನೀನು ನನ್ನ ಗಂಡನೂ ಅಲ್ಲ, ನಾನು ನಿನ್ನ ಹೆಂಡತಿಯೂ ಅಲ್ಲ’ ಎಂದು ಕಿರುಚಿದಳು. ಅವಳ ಕೋಪ ಕಂಡ ಶೇಖ್ ಮತ್ತೆ ಚೂರಿ ಹಿಡಿದು ಕರುವಿನ ಬಳಿ ನಡೆದ. ಅವನು ಹತ್ತಿರ ಹೋಗುತ್ತಿದ್ದಂತೆ ಕರು ಮತ್ತೆ ಅಳತೊಡಗಿತು. ಅದರ ಕಣ್ಣೀರು ಕಂಡ ಅವನು ಅದನ್ನು ಕುಯ್ಯಲಾಗದೆ ‘ಈ ಕರುವನ್ನು ನನ್ನ ಮಂದೆಗೆ ಸೇರಿಸು’ ಎಂದು ಗೋಪಾಲಕನ ವಶಕ್ಕೆ ಕೊಟ್ಟ.
ಮರುದಿನ ಶೇಖ್ ಮನೆಯಲ್ಲಿ ಕುಳಿತಿದ್ದ. ಅಷ್ಟರಲ್ಲೇ ಆ ಗೋಪಾಲಕ ಓಡೋಡಿ ಬಂದು ಶೇಖ್‌ನ ಮುಂದೆ ನಿಂತ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)