varthabharthi


ಕಾಡಂಕಲ್ಲ್ ಮನೆ

ಆತನಿಗೆ ಎದುರಾದ ಆ ದಿಟ್ಟ ಹೆಣ್ಣು

ವಾರ್ತಾ ಭಾರತಿ : 19 Nov, 2016

ಧಾರಾವಾಹಿ-43

ಅಜ್ಜಿ ಒಪ್ಪಿದ್ದು ತಾಯಿ ಮಗ ಇಬ್ಬರಿಗೂ ಖುಷಿಯಾಗಿತ್ತು.
ನಾಸರ್ ಮತ್ತೆ ನಾಲ್ಕು ದಿನ ತಾಹಿರಾಳಿಗಾಗಿ ಕಾದ. ಅವಳು ಬರಲಿಲ್ಲ. ಅವನಿಗೆ ಹೋಗಲೇಬೇಕಾಗಿತ್ತು. ಹೊರಟು ಬಿಟ್ಟಿದ್ದ.
ಮತ್ತೆ 15 ದಿನ ಕಳೆದ ನಂತರ ಒಂದು ದಿನ ತಾಹಿರಾ ಪ್ರತ್ಯಕ್ಷಳಾಗಿದ್ದಳು. ಅಜ್ಜಿಗೆ ಐಸುಗೆ ಖುಷಿಯೇ ಖುಷಿ. ಆ ಮನೆಗೆ ಮತ್ತೆ ಜೀವಕಳೆ ಬಂದಿತ್ತು.
‘‘ಎಷ್ಟು ದಿನ ಇರ್ತೀಯಾ’’ ಬಂದ ಕೂಡಲೇ ಐಸು ಅವಳನ್ನು ಪಕ್ಕ ಕೂರಿಸಿ ಕೇಳಿದಳು.
ಒಂದೇ ವಾರ ಮಾಮಿ. ಅಮ್ಮನಿಗೆ ಸುಳ್ಳು ಹೇಳಿ ಬಂದಿದ್ದೇನೆ. ನಾನು ಇಲ್ಲಿಗೆ ಬಂದದ್ದು ಅವರಿಗೆ ಗೊತ್ತಿಲ್ಲ.
‘‘ಯಾಕೆ ಸುಳ್ಳು ಹೇಳಿದ್ದು?’’
ಮೊನ್ನೆ ಅಲ್ಲವಾ ಒಂದು ತಿಂಗಳು ಇಲ್ಲಿದ್ದು ಹೋಗಿದ್ದು. ಮತ್ತೆ ಕೇಳಿದರೆ ಬಿಡ್ತಾರಾ ಇಲ್ಲವಾ ಅಂತ ಭಯವಾಯ್ತು. ಅದಕ್ಕೆ ಸುಳ್ಳು ಹೇಳಿದೆ.
‘‘ಎಲ್ಲಿಗೆ ಹೋಗುವುದೂಂತ ಹೇಳಿದೆ.’’
‘‘ಗೆಳತಿ ಮನೆಗೇಂತ ಹೇಳಿದೆ.’’
‘‘ಬಿಟ್ಟಳಾ?’’
‘‘ಹೂಂ.. ಮಾಮಿ, ಅಮ್ಮ ನನಗೆ ಕೆಲಸ ಹುಡುಕು ತ್ತಿದ್ದಾರೆ.’’
‘‘ಕೆಲಸನಾ? ಯಾಕೆ ನಿನಗೆ ಮದುವೆ ಮಾಡುವು ದಿಲ್ಲವಾ?’’
‘‘ಗೊತ್ತಿಲ್ಲ’’
‘‘ನಿನಗೆ ಕೆಲಸಕ್ಕೆ ಹೋಗಲಿಕ್ಕೆ ಇಷ್ಟನಾ?’’
‘‘ಇಲ್ಲ’’
‘‘ಮತ್ತೆ ಮದುವೆಯಾಗಲಿಕ್ಕೆ ಇಷ್ಟನಾ?’’
‘‘ಹೋಗಿ ಮಾಮಿ ನೀವು’’ ತಾಹಿರಾ ನಾಚಿ ನೀರಾದಳು.
ಐಸು ತಾಹಿರಾಳನ್ನು ತಬ್ಬಿಕೊಂಡೇ ಅಜ್ಜಿ ಕೋಣೆಗೆ ಬಂದಳು. ಅಜ್ಜಿ ಹಾಸಿಗೆಯಲ್ಲಿ ಕಾಲು ನೀಟಿ ಕುಳಿತು ಮೊಣಕಾಲಿಗೆ ಎಣ್ಣೆ ತಿಕ್ಕುತ್ತಿದ್ದರು.
‘‘ಅಜ್ಜೀ, ತಾಹಿರಾ ಬಂದಿದ್ದಾಳೆ.’’
ಅಜ್ಜಿ ತಲೆ ಎತ್ತಿ ಮೊಮ್ಮಗಳನ್ನು ನೋಡಿದರು. ಅವರ ಮುಖ ಬಿರಿಯಿತು. ಕಣ್ಣ ರೆಪ್ಪೆಗಳು ಖುಷಿಯಿಂದ ಹೊಡೆದುಕೊಂಡವು.
ತಾಹಿರಾ ಅಜ್ಜಿಯ ಪಕ್ಕ ಕುಳಿತು ತಬ್ಬಿಕೊಂಡಳು.
ಮತ್ತೆ ಒಂದು ವಾರ ಆ ಮನೆಯಲ್ಲಿ ಸಂಭ್ರಮ ನೆಲೆಸಿತ್ತು.
‘‘ನಿನ್ನಲ್ಲಿ ನಾಸರ್ ಏನಾದರೂ ಕೇಳಿದ್ದಾನಾ?’’ ಒಂದು ದಿನ ಅಜ್ಜಿ ಅವಳನ್ನು ಪಕ್ಕ ಕುಳ್ಳಿರಿಸಿ ಕೇಳಿದರು. ಐಸು ಜೊತೆಗಿದ್ದಳು.
‘‘ಇಲ್ಲ.’’
‘‘ಏನೂ ಕೇಳಲಿಲ್ಲವಾ?’’
‘‘ಎಂತದು ಕೇಳುವುದು?’’
‘‘ನಿನ್ನಲ್ಲಿ ಮದುವೆಯಾಗ್ತಿಯಾಂತ ಕೇಳಿದನಾ?’’
ತಾಹಿರಾ ಕತ್ತು ಬಗ್ಗಿಸಿ ‘‘ಹೌದು’’ ಎಂಬಂತೆ ತಲೆಯಾಡಿಸಿದಳು.
‘‘ನೀನೇನು ಹೇಳಿದೆ?’’
ತಾಹಿರಾ ಮಾತನಾಡಲಿಲ್ಲ. ನಾಚಿಕೆಯಿಂದ ಅವಳ ಮುಖ ಕೆಂಪೇರತೊಡಗಿತ್ತು.
‘‘ನಿನಗೆ ಇಷ್ಟನಾ?’’
‘‘ಎಂತದು?’’
‘‘ಎಂತದಂತೆ ಎಂತದು. ನಿನಗೆ ಈ ಮದುವೆ ಇಷ್ಟನಾ?’’ ಅಜ್ಜಿಗೆ ಕೋಪ ಬಂದಿತ್ತು. ಅವರು ಅವಳ ಉತ್ತರಕ್ಕಾಗಿ ಚಾತಕ ಪಕ್ಷಿಯಂತೆ ಕುಳಿತಿದ್ದರು.
‘‘................’’
‘‘ಯಾಕೆ ನೀನು ಮಾತಾಡ್ತಾ ಇಲ್ಲ.’’
ಅವಳು ಅಜ್ಜಿಯ ಭುಜದ ಮೇಲೆ ತಲೆ ಇಟ್ಟಳು. ಅವಳ ಮುಖ ಈಗ ಗಂಭೀರವಾಗಿತ್ತು.
‘‘ಇಷ್ಟ ಇಲ್ಲವಾ? ಇಲ್ಲಾಂದ್ರೆ ಹೇಳು’’ ಅಜ್ಜಿ ಏರಿದ ಧ್ವನಿಯಲ್ಲಿ ಮಾತನಾಡತೊಡಗಿದರು.
‘‘ಇಷ್ಟ ಅಜ್ಜಿ. ತುಂಬಾ ಇಷ್ಟ’’ ಅವಳು ಅಜ್ಜಿಯ ಕಿವಿಯಲ್ಲಿ ಪಿಸುಗುಟ್ಟಿದಳು.
‘‘ಕಳ್ಳಿ ಇಷ್ಟೊಂದು ಆಸೆಯನ್ನು ಮನಸ್ಸಿನಲ್ಲಿಟ್ಟು ಕೊಂಡು ಆಟ ಆಡಿಸ್ತಿಯಾ’’ ಅಜ್ಜಿ ಅವಳ ಕೆನ್ನೆ ಚಿವುಟಿದರು.
ತಾಹಿರಾಳ ಉತ್ತರಕ್ಕಾಗಿ ಕುತೂಹಲದಿಂದ ಕಣ್ಣು ಬಾಯಿ ಬಿಟ್ಟು ಕುಳಿತಿದ್ದ ಐಸುಳ ಮುಖ ಅರಳಿತು. ಅವಳು ತಾಹಿರಾಳ ಕೆನ್ನೆಗೆ ಮುತ್ತಿಕ್ಕಿ ನಗುತ್ತಾ ಅಡಿಗೆ ಮನೆಗೆ ನಡೆದಳು. ಆ ಖುಷಿಯ ಮಧ್ಯೆಯೂ ಅವಳ ಹೃದಯದಲ್ಲಿ ಸಂಶಯದ ಕಿಡಿಯೊಂದು ಚುಚ್ಚ ತೊಡಗಿತು. ತಾಹಿರಾಳ ತಾಯಿ ಈ ಮದುವೆಗೆ ಒಪ್ಪದಿದ್ದರೆ-ಅವಳ ಮುಖ ಮತ್ತೆ ಬಾಡಿತು. ಅವಳಿಗೆ ಆಗ ಅಜ್ಜಿ ಹೇಳಿದ ಮಾತು ನೆನಪಾಯಿತು. ಆಗುವುದಿದ್ದರೆ ಯಾರು ತಡೆದರೂ ಆಗಿಯೇ ಆಗುತ್ತೆ. ಅವಳು ಎಲ್ಲ ಭಾರವನ್ನೂ ದೇವರ ಮೇಲೆ ಹಾಕಿ ತನ್ನ ಕೆಲಸದಲ್ಲಿ ತೊಡಗಿದಳು.
ತಾಹಿರಾ ಒಂದು ವಾರ ಅಲ್ಲಿದ್ದು ಹೊರಟು ಹೋಗಿದ್ದಳು.
***
ಅದೊಂದು ದಿನ-ಅಂದು ಭಾನುವಾರ.
ಬೆಳ್ಳಂ ಬೆಳಗ್ಗೆ ನಾಸರ್ ವಿಳಾಸ ಹುಡುಕಿಕೊಂಡು ಬೆಂಗಳೂರಿಗೆ ಬಂದು ತಾಹಿರಾಳ ಮನೆಯ ಮುಂದೆ ನಿಂತು ಕರೆಗಂಟೆ ಒತ್ತಿದ. ಕೆಲವೇ ಕ್ಷಣಗಳಲ್ಲಿ ಬಾಗಿಲು ತೆರೆದುಕೊಂಡಿತು. ಅಲ್ಲಿ ಹೆಂಗಸೊಬ್ಬರು ನಿಂತಿದ್ದರು. ನಾಸರ್ ಅವರನ್ನೇ ಎವೆಯಿಕ್ಕದೆ ನೋಡಿದ. ಅಜ್ಜಿ ಯದೇ ಮುಖ ಅದೇ ಕಣ್ಣು. ಅದೇ ಮೂಗು...
‘‘ಯಾರು ನೀವು?’’
ಅವರ ಮಾತು ನಾಸರ್‌ಗೆ ಕೇಳಿಸಲಿಲ್ಲ. ಅವನಿನ್ನೂ ಆ ಹೆಂಗಸನ್ನು ಬೆರಗಾಗಿ ನೋಡುತ್ತಲೇ ಇದ್ದ.
‘‘ಯಾರು ಬೇಕು ನಿಮಗೆ?’’ ತನ್ನನ್ನೇ ದುರುಗುಟ್ಟಿ ನೋಡುತ್ತಾ ನಿಂತಿದ್ದ ಯುವಕನನ್ನು ನೋಡಿ ಅವರಿಗೆ ಕೋಪ ಬಂದಿತ್ತು.
‘‘ನಾನು ನಾಸರ್ ಅಂತ. ಕಾಡಂಕಲ್‌ಲ್ ಮನೆಯಿಂದ ಬಂದಿದ್ದೇನೆ.’’
ಅವರು ಸ್ವಲ್ಪಹೊತ್ತು ಯೋಚಿಸುತ್ತಾ ನಿಂತವರು
‘‘ಏನಾಗ್ಬೇಕು?’’ ಕೇಳಿದರು. ಆ ಮಾತು ಒರಟಾಗಿತ್ತು.
‘‘ನೀವು ತಾಹಿರಾಳ ತಾಯಿ ಅಲ್ವೆ.’’
‘‘ಹೌದು. ನಿಮಗೇನಾಗ್ಬೇಕು?’’
‘‘ನನಗೆ, ನಿಮ್ಮ ಹತ್ತಿರ ಸ್ವಲ್ಪಮಾತನಾಡಬೇಕು.’’
‘‘ಮಾತಾಡಿ’’
ನಾಸರ್ ಒಳಗೆ ಕರೆಯಬಹುದೂಂತ ಒಂದು ಕ್ಷಣ ಕಾದ. ಆ ಸೌಜನ್ಯ ಕೂಡಾ ಅವರಲ್ಲಿ ಕಾಣಲಿಲ್ಲ.
‘‘ನಾನು ಒಳಗೆ ಬರಬಹುದಾ?’’ ಮತ್ತೆ ಅವನೇ ಕೇಳಿದ.
ಅವರು ನಡೆದರು. ಅವನು ಅವರ ಹಿಂದೆಯೇ ನಡೆದ. ಅವರು ಹೇಳುವುದಕ್ಕೂ ಕಾಯದೆ ಸೋಫಾ ದಲ್ಲಿ ಕುಳಿತ.
ಭವ್ಯವಾದ ಸುಸಜ್ಜಿತ ಮನೆ. ಮನೆ ತುಂಬಾ ಬೆಲೆಬಾಳುವ ಸಾಮಗ್ರಿಗಳು.
‘‘ಏನು ವಿಷಯ’’ ಅವನೆದುರು ದೊರೆಸಾನಿಯಂತೆ ಕುಳಿತ ಅವರು ಕೇಳಿದರು.
‘‘ತಾಹಿರಾ ಇಲ್ಲವಾ?’’
‘‘ಇದ್ದಾಳೆ. ಒಳಗಿದ್ದಾಳೆ. ಅವಳದು ಹೇಗೆ ಪರಿಚಯ ನಿಮಗೆ?’’
‘‘ಅವಳು ಮೊನ್ನೆ ಕಾಡಂಕಲ್‌ಲ್ ಮನೆಗೆ ಬಂದಿ ದ್ದಳಲ್ಲ-ಒಂದು ತಿಂಗಳು ಇದ್ದಳಲ್ಲ - ಆಗ ಪರಿಚಯವಾಗಿದ್ದು.’’
‘‘ನೀವು ಯಾರೂಂತ ಹೇಳಿದ್ದು?’’
ನಾನು ನಿಮ್ಮ ಕಾಡಂಕಲ್‌ಲ್ ಮನೆಯಲ್ಲಿ ಸುಪ್ರ ತೆಗೆಯುವವರ ಮಗಳು ಐಸೂಂತ ಇದ್ದಾರಲ್ಲ ಅವರ ಮಗ. ನಾಸರ್ ಅಂತ ಹೆಸರು.
ಅವರು ಸ್ವಲ್ಪಹೊತ್ತು ಏನೋ ಯೋಚಿಸುವಂತೆ ಕುಳಿತರು.
‘‘ಏನು ವಿಷಯ ಹೇಳು’’ ಇದ್ದಕ್ಕಿ ದ್ದಂತೆ ಅವರ ಮಾತು ಏಕವಚನಕ್ಕೆ ತಿರುಗಿತ್ತು.
‘‘ತಾಹಿರಾಳ ತಂದೆ ಇಲ್ಲವಾ?’’
‘‘ಇದ್ದಾರೆ. ಒಳಗಿದ್ದಾರೆ. ವಿಷಯ ಏನೂಂತ ಹೇಳು’’ ಆ ಮಾತಿನಲ್ಲಿ ಅಸಹನೆ ತುಂಬಿತ್ತು.
‘‘ನಾನು ತಾಹಿರಾಳನ್ನು ತುಂಬಾ ಇಷ್ಟ ಪಟ್ಟಿದ್ದೇನೆ. ಮದುವೆಯಾಗ ಬೇಕೂಂತ ಆಸೆ. ಇದಕ್ಕೆ ತಾಹಿರಾಳೂ ಒಪ್ಪಿದ್ದಾಳೆ. ಅದೇ ವಿಷಯ ನಿಮ್ಮ ಹತ್ತಿರ ಮಾತನಾಡಬೇಕೂಂತ ಬಂದದ್ದು.’’
ಅವರು ಸ್ವಲ್ಪ ಹೊತ್ತು ಮೌನವಾಗಿ ಕುಳಿತರು.
ನಾಸರ್ ಅವರ ಮುಖ ನೋಡಿದ. ಅದು ಕುಲುಮೆಯಂತೆ ಬೆಂಕಿ ಉಗುಳುತ್ತಿತ್ತು.
‘‘ಏನು ಓದಿದ್ದಿ ನೀನು?’’
ಬಿ.ಇ. ಇಂಜಿನಿಯರಿಂಗ್-ಸಾಫ್ಟ್‌ವೇರ್.
ಎಲ್ಲಿ ಕೆಲಸ ಮಾಡ್ತಾ ಇದ್ದಿ?’’
‘‘ಮೈಸೂರಿನಲ್ಲಿ’’
‘‘ಎಷ್ಟು ಸಂಬಳ ಇದೆ.’’
‘‘70 ಸಾವಿರ’’
‘‘ಮನೆ ಎಲ್ಲಿ?’’
‘‘ನಾನು, ತಾಯಿ ಕಾಡಂಕಲ್‌ಲ್ ಮನೆಯಲ್ಲಿಯೇ ಇರುವುದು. ಬೇರೆ ಮನೆ ಇಲ್ಲ.’’
ಮತ್ತೆ ಮೌನವಾದ ಅವರು, ಸ್ವಲ್ಪಹೊತ್ತು ಕಳೆದು
‘‘ನಿನ್ನ ಒಂದು ಬಯೋಡಾಟ ಕೊಟ್ಟು ಹೋಗು. ಆಮೇಲೆ ತಿಳಿಸ್ತೀನಿ’’ ಎಂದರು.
‘‘ಬಯೋಡಾಟ! ನಾನು ಬಯೋಡಾಟ ತಂದಿಲ್ಲ’’ ನಾಸರ್ ಒಳಗೊಳಗೆ ಕುದಿಯತೊಡಗಿದ.
 ಅವರು ಎದ್ದು ಹೋಗಿ ಒಂದು ಬಿಳಿ ಹಾಳೆ ತಂದು ‘‘ಇದರಲ್ಲಿ ನಿನ್ನ ಬಯೋಡಾಟ ಬರೆ’’ ಎಂದು ಮತ್ತೆ ಕುಳಿತರು.
ಆತ ಬರೆದು ಅವರ ಕೈಗಿತ್ತ.
ಅವರು ಅದರ ಮೇಲೆ ಕಣ್ಣು ಕೂಡಾ ಹಾಯಿಸದೆ ನೋಡೋಣ, ಮತ್ತೆ ತಿಳಿಸುತ್ತೇನೆ’’ ಎಂದು ಹೇಳಿ ಎದ್ದು ನಿಂತರು.
ಆ ಮಾತಿನಲ್ಲಿ ‘‘ನೀನಿನ್ನು ಹೋಗಬಹುದು’’ ಎಂಬಂತಹ ದರ್ಪವಿತ್ತು.
ಆತ ಎದ್ದು ನಿಂತ.
ಅವನ ಕಣ್ಣುಗಳು ತಾಹಿರಾಳಿಗಾಗಿ ಇಡೀ ಮನೆ ಹುಡುಕಾಡಿತು. ಅವಳು ಕಾಣಲಿಲ್ಲ.
ಅವರು ಬಾಗಿಲ ಬಳಿ ನಡೆದು ‘‘ನೀನೊಮ್ಮೆ ಇಲ್ಲಿಂದ ಹೋಗು’’ ಎಂಬಂತೆ ಬಾಗಿಲು ತೆರೆದರು.
‘‘ನಾನು ಯಾವಾಗ ಬರಬೇಕು’’ ಆತ ಮತ್ತೆ ಕೇಳಿದ.
‘‘ನಾನು ತಿಳಿಸುತ್ತೇನೆ.’’
‘‘ಯಾವಾಗ’’
‘‘ಒಂದು ತಿಂಗಳೊಳಗೆ ತಿಳಿಸುತ್ತೇನೆ’’ ಅವರು ಒಂದು ಕೈಯಲ್ಲಿ ಬಾಗಿಲು ಹಿಡಿದು ಹಾಕಲು ಕಾಯು ತ್ತಿದ್ದರು. ನಾನು ಹೊರಗೆ ಹೋಗಿದ್ದೇ ದಢಾರಂತ ಬಾಗಿಲು ಮುಚ್ಚಿಕೊಂಡಿತು.
ನಾಸರ್‌ಗೆ ನಿರಾಶೆಯಾಗಿತ್ತು. ಹೃದಯ ಭಾರವಾ ಗಿತ್ತು. ಎಂತಹ ಅಹಂಕಾರ, ಎಂತಹ ದರ್ಪ. ಮುಖಕ್ಕೆ ಹೊಡೆದಂತೆ ಕಹಿಯಾದ, ವ್ಯಾವಹಾರಿಕ ಮಾತುಗಳು. ಇವರಿಗೆ ಮದುವೆಯೂ ಒಂದು ವ್ಯವಹಾರ. ಕುಡಿ ಯಲು ಒಂದು ಲೋಟ ನೀರು ಕೊಡುವಷ್ಟು ಸೌಜನ್ಯವಿಲ್ಲದ ಜಾತಿ. ಪ್ರೀತಿ, ಸಂಬಂಧ, ಮನುಷ್ಯತ್ವವೇ ಇಲ್ಲದ ಈ ಜೀವಿ ಅಜ್ಜಿಯ ಹೊಟ್ಟೆಯಲ್ಲಿ ಹೇಗೆ ಹುಟ್ಟಿತು. ಈ ಯಂತ್ರದ ಹೊಟ್ಟೆಯಲ್ಲಿ ತಾಹಿರಾ ಹೇಗೆ ಹುಟ್ಟಿದಳು. ಹೆತ್ತ ತಾಯಿ ಬಗ್ಗೆ ಒಂದಕ್ಷರವೂ ವಿಚಾರಿಸದ ಇವರೊಂದು ಹೆಣ್ಣಾ? ಯೋಚಿಸುತ್ತಾ ಅವನಿಗೆ ಆ ಹೆಂಗಸಿನ ಬಗ್ಗೆ ಹೇಸಿಗೆ ಹುಟ್ಟಿತು. ಅವನು ಅವನ ಬದುಕಿನಲ್ಲಿ ಮನೆಗೆ ಬಂದವರನ್ನು ಈ ರೀತಿ ಹೊರದಬ್ಬುವಂತಹ ಒರಟು ಹೆಂಗಸನ್ನು ಕಂಡಿರಲಿಲ್ಲ. ಅವರ ವರ್ತನೆ ಕಂಡ ಮೇಲೆ ಹೇಗಾದರೂ ಸರಿ ತಾಹಿರಾಳನ್ನು ಮದುವೆಯಾಗಲೇ ಬೇಕೆಂಬ ಛಲ ಅವನಲ್ಲಿ ಮೂಡಿತು.
ಮತ್ತೆ ತಿಂಗಳು - ಎರಡು ತಿಂಗಳು ಕಳೆಯಿತು. ಆ ಹೆಂಗಸಿನಿಂದ ಯಾವುದೇ ಸುದ್ದಿ ಇಲ್ಲ. ತಾಹಿರಾ ಳಿಂದಲೂ ಫೋನ್ ಇಲ್ಲ. ಆತ ಫೋನ್ ಮಾಡಿದರೆ ತಾಹಿರಾ ಎತ್ತುತ್ತಿರಲಿಲ್ಲ. ಆತ ಈ ಮಧ್ಯೆ ಒಮ್ಮೆ ಮನೆಗೆ ಹೋಗಿ ಬಂದಿದ್ದ. ತಾಹಿರಾ ಮನೆಗೂ ಬಂದಿರಲಿಲ್ಲ. ಅವನು ವಿಷಯವೆಲ್ಲ ಅಮ್ಮನಿಗೆ ತಿಳಿಸಿದ್ದ. ಐಸು ಮಾತನಾಡಲಿಲ್ಲ. ಅವಳಿಗೆ ಈ ಸಂಬಂಧ ಸರಿಯಾ ಗಲಿಕ್ಕಿಲ್ಲ ಅನಿಸಿತು. ಆದರೆ ಅದನ್ನು ಮಗನಲ್ಲಿ ಹೇಳಲು ಇಷ್ಟವಾಗಲಿಲ್ಲ. ಅವಳು ‘‘ನೋಡೋಣ, ಅವಳನ್ನೇ ನೀನು ಮದುವೆಯಾಗುವುದು ಎಂದು ದೇವರು ಬರೆದಿ ದ್ದರೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’’ ಎಂದು ಹೇಳಿ ಆ ವಿಷಯವನ್ನು ಅಲ್ಲಿಗೆ ಮುಗಿಸಲು ಯತ್ನಿಸಿದಳು. ಅಜ್ಜಿಯಲ್ಲಿಯೂ ಅವನು ಈ ವಿಷಯ ಪ್ರಸ್ತಾಪಿಸಲಿಲ್ಲ. ಅಜ್ಜಿಯೂ ಕೇಳಲಿಲ್ಲ. ಆದರೆ ತಾನು ತಾಹಿರಾಳ ಮನೆಗೆ ಹೋದ ವಿಷಯ. ಅಲ್ಲಿ ನಡೆದ ಮಾತುಕತೆ ಯಾವುದೂ ಅಜ್ಜಿಗೆ ಹೇಳುವುದು ಬೇಡ ಎಂದು ಆತ ಅಮ್ಮನಿಗೆ ಹೇಳಿದ್ದ.
ಇನ್ನು ಕಾಯಲು ಸಾಧ್ಯವಿಲ್ಲ ಎಂದಾದಾಗ ಆತ ಒಂದು ಭಾನುವಾರ ಮತ್ತೆ ತಾಹಿರಾಳ ಮನೆ ಮುಂದೆ ನಿಂತು ಕರೆಗಂಟೆ ಒತ್ತಿದ್ದ.
(ಗುರುವಾರದ ಸಂಚಿಕೆಗೆ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)