varthabharthi


ಯುದ್ಧ

ಧಾರಾವಾಹಿ-1

ಹೀಗೊಂದು ಪ್ರೇಮಪತ್ರ

ವಾರ್ತಾ ಭಾರತಿ : 22 Jan, 2017
ಬಿ. ಎಂ. ಬಶೀರ್

‘‘ಪ್ರೀತಿಯ ಜಾನು,

ನಿನ್ನ ಬಯಕೆಯಂತೆ ನಾನು ಸೇನೆ ಸೇರಲು ಹೋಗುತ್ತಿದ್ದೇನೆ...

ನನಗೆ ಈ ದೇಶ ಮತ್ತು ನೀನು ಬೇರೆ ಬೇರೆಯಲ್ಲ.

ಈ ದೇಶಕ್ಕಾಗಿ ಪ್ರಾಣವರ್ಪಿಸುವುದು, ನಿನ್ನ ಪ್ರೀತಿಗಾಗಿ ಪ್ರಾಣವರ್ಪಿಸುವುದಕ್ಕೆ ಸಮವೆಂದು ಭಾವಿಸಿದ್ದೇನೆ.

ಮರಳಿ ಬರುವವರೆಗೆ ನನಗಾಗಿ ಕಾಯುವೆಯಾ?

ಇಂತಿ ನಿನ್ನ ಪ್ರೀತಿಯ

ಪಪ್ಪು’’

ಐದು ಸಾಲುಗಳಲ್ಲಿ ಮುಗಿದ ಒಂದು ಪ್ರೇಮಪತ್ರ ಅದು. ಆ ಐದು ಸಾಲುಗಳನ್ನು ಬರೆದು ಮುಗಿಸಲು ಮುಕ್ಕಾಲು ರಾತ್ರಿಯನ್ನು ಮುಗಿಸಿದ್ದ. ಪತ್ರವನ್ನು ಭದ್ರವಾಗಿ ಅನಕೃ ಅವರ ‘ರಣ ವಿಕ್ರಮ’ ಕಾದಂಬರಿಯ ಪುಟದ ನಡುವೆಯಿಟ್ಟು ಗುರೂಜಿಯ ಮನೆಯ ಅಂಗಳವನ್ನು ತುಳಿದಿದ್ದ ಪ್ರತಾಪ ಸಿಂಹ. ಆದರೆ ಜಾನಕಿಗೆ ಅದನ್ನು ದಾಟಿಸುವ ಎದೆಗಾರಿಕೆ ಅವನಲ್ಲಿ ಇನ್ನೂ ಮೈಗೂಡಿರಲಿಲ್ಲ. ಮನೆಯಿಂದ ಹೊರಡುವಾಗ ‘‘ಗುರೂಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬರುವೆ’’ ಎಂದು ಹೇಳಿ ಬಂದಿದ್ದ. ಆದರೆ ಅವನ ಭೇಟಿಯ ಮುಖ್ಯ ಗುರಿ ಗುರೂಜಿ ಆಗಿರಲೇ ಇಲ್ಲ. ಕೊನೆಯ ಬಾರಿ ಜಾನಕಿಯನ್ನು ಕಣ್ತುಂಬ ನೋಡಬೇಕು, ಅವಳ ಜೊತೆಗೆ ಬಾಯಿ ತುಂಬಾ ಮಾತನಾಡಬೇಕು, ಮುತ್ತಿನ ಮಣಿಗಳಂತೆ ಗಾಳಿಯಲ್ಲಿ ಅನುರಣಿಸುವ ಆಕೆಯ ಮಾತುಗಳನ್ನು ಕಿವಿ ತುಂಬಿಸಿಕೊಳ್ಳಬೇಕು ಎಂಬ ಹಂಬಲಿಕೆಯಲ್ಲಿ ಬಂದಿದ್ದ. ಗುರೂಜಿ ದೇವರ ಕೋಣೆಯಲ್ಲಿದ್ದರು. ಜಾನಕಿ ಅಲ್ಲೆಲ್ಲೂ ಕಾಣುತ್ತಿರಲಿಲ್ಲ. ಅವನಿಗೆ ಮಾತನಾಡಲು ಸಿಕ್ಕಿದ್ದು ಜಾನಕಿಯ ತಾಯಿ ಪದ್ಮಮ್ಮ.

‘‘ಅಮ್ಮ, ಜಾನಕಿಯೆಲ್ಲಿ?’’ ಎಂದು ಕೇಳಿದ್ದ ಪ್ರತಾಪ.

‘‘ಅಯ್ಯೋ, ಅವಳು ನಿನ್ನನ್ನು ಕಾದು ಕಾದು ಹೋಗಿಯೇಬಿಟ್ಟಳು. ಇಂದು ಬೆಳಗ್ಗೆ ಪುತ್ತೂರು ತಲುಪಬೇಕಾಗಿತ್ತು..ಬಹಳ ಬೇಜಾರಿನಿಂದ ಹೊರಟಳು...ಇಡೀ ರಾತ್ರಿ ನಿನ್ನದೇ ಮಾತು...’’ ಅವರು ಒಳಗಿನಿಂದಲೇ ಉತ್ತರಿಸಿದ್ದರು.

 ತಾನು ಸೇನೆ ಸೇರುತ್ತಿರುವುದು ಜಾನಕಿಗೂ ಗೊತ್ತು. ಅದು ಅವನು ಮತ್ತು ಜಾನಕಿ ಎಷ್ಟೋ ವರ್ಷಗಳ ಹಿಂದೆ ಜೊತೆ ಸೇರಿ ತೆಗೆದುಕೊಂಡ ನಿರ್ಧಾರ. ಜಾನಕಿ ತನ್ನನ್ನು ಭೇಟಿ ಮಾಡುವುದರಿಂದ ಉದ್ದೇಶಪೂರ್ವಕವಾಗಿಯೇ ತಪ್ಪಿಸಿಕೊಂಡಿದ್ದಾಳೆ ಎನ್ನುವುದು ಅವನಿಗೆ ಗೊತ್ತಾಯಿತು. ನಮ್ಮ ಸ್ನೇಹವೇ ಅಂತಹದು. ಆಕೆಯಿಂದ ಏನೆಲ್ಲ ಕಲಿತೆ ಎನ್ನುವುದನ್ನು ಯೋಚಿಸುತ್ತಾ ಪ್ರತಾಪ ಆಗಾಗ ರೋಮಾಂಚನಗೊಳ್ಳುವುದಿದೆ. ದೇಶದ ಕುರಿತಂತೆ ಎಷ್ಟೊಂದು ವಿವರಗಳು ಆಕೆಗೆ ಗೊತ್ತು. ಇತಿಹಾಸದ ಬಗ್ಗೆ ಅದೆಷ್ಟು ತಿಳಿದುಕೊಂಡಿದ್ದಾಳೆ ಆಕೆ. ಸೇನೆಯ ದಾರಿ ಆತನಿಗಾಗಿ ತೆರೆದದ್ದೇ ಜಾನಕಿಯಿಂದಾಗಿ. ಅನಕೃ, ತರಾಸು ಕಾದಂಬರಿಗಳನ್ನು ಓದುವ ಹುಚ್ಚು ಹಚ್ಚಿಸಿದ್ದೂ ಆಕೆಯೇ. ಆದುದರಿಂದಲೇ ಜಾನಕಿಗೆಂದು ತಾನು ಬರೆದ ಮೊದಲ ಪ್ರೇಮ ಪತ್ರವನ್ನು ಅನಕೃ ಕಾದಂಬರಿಯ ಪುಟದ ಮಧ್ಯದಲ್ಲಿ ಇಟ್ಟು ತಂದಿದ್ದ. ಬರೀ ಪತ್ರವನ್ನು ಕೊಡುವುದಕ್ಕೆ ಆತನಿಗೆ ಧೈರ್ಯವಿರಲಿಲ್ಲ. ಇಡೀ ಕಾದಂಬರಿಯನ್ನೇ ಅವಳ ಕೈಗೆ ಕೊಟ್ಟು ಅಲ್ಲಿಂದ ಹೊರಟು ಬಿಡಬೇಕು ಎಂದು ನಿರ್ಧರಿಸಿದ್ದ.ಈಗ ನೋಡಿದರೆ ಅವಳೇ ಮುಖ ತಪ್ಪಿಸಿಕೊಂಡು, ವಿದಾಯದ ನೋವಿನಿಂದ ತನ್ನನ್ನು ರಕ್ಷಿಸಿದ್ದಾಳೆ.

ಮರಳಿ ಮನೆಗೆ ಬಂದಾಗ ಲಕ್ಷ್ಮಮ್ಮ ಮಗನ ಬಟ್ಟೆಬರೆಗಳನ್ನು ಜೋಡಿಸುತ್ತಿದ್ದರು. ಅಂಗಳದಲ್ಲಿದ್ದ ಅನಂತಭಟ್ಟರು ಮಗನನ್ನು ಕಂಡದ್ದೇ ಪತ್ನಿಗೆ ಕೂಗಿ ಹೇಳಿದರು ‘‘ಲೇ ಪಪ್ಪು ಬಂದ ಕಣೇ....’’

ಪಪ್ಪು ಅಂಗಳಕ್ಕೆ ಹೆಜ್ಜೆಯಿಟ್ಟ. ಮಗನ ವೌನವನ್ನು ಅನಂತಭಟ್ಟರೇ ಮುರಿದರು ‘‘ಗುರೂಜಿ ಸಿಕ್ಕಿದರೇನೋ...?’’

‘‘ಸಿಕ್ಕಿದರು ಅಪ್ಪಾಜಿ. ಅವರ ಆಶೀರ್ವಾದ ಪಡೆದು ಬಂದೆ...’’

‘‘ಒಳ್ಳೆಯ ಕೆಲಸ ಮಾಡಿದೆ....ನಿನಗೆ ಗೊತ್ತಲ್ಲ...ಈ ಪ್ರತಾಪ ಸಿಂಹ ಎಂಬ ಹೆಸರನ್ನು ನಿನಗಿಟ್ಟವರೇ ಗುರೂಜಿ...ಸೇನೆಗೆ ಸೇರುವ ಮೂಲಕ ಅವರ ಹೆಸರಿನ ಋಣವನ್ನು ತೀರಿಸಿಬಿಟ್ಟೆ ಬಿಡು...’’

ಅಪ್ಪ ಈ ಥರ ಮಾತನಾಡುವಾಗ ಪಪ್ಪುವಿಗೆ ಅದೇನೋ ರೋಮಾಂಚನ. ಗುರೂಜಿ ಇಟ್ಟ ಹೆಸರೇ ಇಂದು ತನ್ನನ್ನು ಸೇನೆಯ ಕಡೆಗೆ ಹೆಜ್ಜೆಯಿಡುವಂತೆ ಮಾಡಿದೆ ಎಂದು ಅವನೂ ಬಲವಾಗಿ ನಂಬಿದ್ದ. ತನ್ನೊಳಗಿನ ವ್ಯಕ್ತಿತ್ವವೆಲ್ಲವೂ ಗುರೂಜಿ ಕಟ್ಟಿ ನಿಲ್ಲಿಸಿದ್ದು ಎನ್ನುವುದು ಅನಂತಭಟ್ಟರ ಅಭಿಪ್ರಾಯ ಮಾತ್ರವಲ್ಲ, ಅವನದು ಕೂಡ.

ಒಳಗೆ ಲಕ್ಷ್ಮಮ್ಮ ಮಾತ್ರ ತಂದೆ-ಮಗನ ಮಾತುಗಳ ಕಡೆಗೆ ಗಮನ ನೀಡಿದಂತಿಲ್ಲ. ಆಕೆ ಪಪ್ಪುವಿನ ಬಟ್ಟೆಗಳನ್ನೆಲ್ಲ ಕೈಯಲ್ಲಿ ಸವರುತ್ತಾ ಒಪ್ಪ ಓರಣ ಗೊಳಿಸುತ್ತಿದ್ದರು. ಎಲ್ಲಿ ಬಟ್ಟೆಗಳು ನೋಯುತ್ತವೆಯೋ ಎಂದು ಮೃದುವಾಗಿ ಅದನ್ನು ಎತ್ತಿಕೊಳ್ಳುತ್ತಿದ್ದರು. ಆಗಾಗ ಏನೋ ತನಗೆ ತಾನೇ ಗೊಣಗುತ್ತಿದ್ದರು. ತನ್ನ ಒಬ್ಬನೇ ಮಗನನ್ನು ಅದೆಲ್ಲೋ ಕಾಣದ ಊರಿಗೆ ಕಳುಹಿಸಿಕೊಡುವ ತಾಯಿಯ ಸಂಕಟ ಏನು ಎನ್ನುವುದು ಲೆಕ್ಕದ ಮೇಷ್ಟ್ರು ಎಂದೇ ಆಸುಪಾಸಿನಲ್ಲಿ ಗುರುತಿಸಿಕೊಂಡಿರುವ ಅನಂತಭಟ್ಟರಿಗೆ ಚೆನ್ನಾಗಿಯೇ ಗೊತ್ತು. ಆದುದರಿಂದಲೇ ಆಕೆಯನ್ನು ಅನಗತ್ಯವಾಗಿ ಮಾತನಾಡಿಸುವ ತಪ್ಪನ್ನು ಮಾಡಿರಲಿಲ್ಲ. ಪಪ್ಪು ತನ್ನ ಕೋಣೆ ಸೇರಿ ಮಂಚಕ್ಕೆ ಒರಗಿದ. ಕೈಯಲ್ಲಿದ್ದ ಅನಕೃ ಕಾದಂಬರಿಯನ್ನು ಎದೆಗೆ ಒತ್ತಿ ಹಿಡಿದ.

***

ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನ ದಕ್ಷಿಣ ಕಾಶಿಯೆಂದೇ ಹೆಸರು ಪಡೆದಿದೆ. ನೇತ್ರಾವತಿ-ಕುಮಾರಧಾರಾ ನದಿಗಳ ಸಂಗಮ ಸ್ಥಳದಲ್ಲಿ ಈ ದೇವಸ್ಥಾನ ತಲೆಯೆತ್ತಿದೆ. ಇಲ್ಲಿ ವರ್ಷದಲ್ಲಿ ಮೂರು ಬಾರಿ ಮಖೆ ಜಾತ್ರೆ ನಡೆಯುತ್ತದೆ. ಈ ಮೂರೂ ಮಖೆಜಾತ್ರೆಗಳಿಗೆ ಇಡೀ ಉಪ್ಪಿನಂಗಡಿ ಆಸುಪಾಸಿನ ಜನರು ಜಾತಿ ಭೇದವಿಲ್ಲದೆ ನೆರೆಯುತ್ತಾರೆ. ಯಕ್ಷಗಾನ, ಕಂಬಳಗಳಿಂದಾಗಿಯೇ ಮಂಗಳೂರಿನ ಜನರನ್ನೂ ಕೈ ಬೀಸಿ ಕರೆಯುತ್ತದೆ. ತುಳುವಿನಲ್ಲಿ ಉಬರ್, ಉಬಾರ್ ಎಂದೆಲ್ಲ ಕರೆಯಲ್ಪಡುವ ಉಪ್ಪಿನಂಗಡಿ ಎನ್ನುವ ಪುಟ್ಟ ಪಟ್ಟಣದಿಂದ 6 ಕಿಲೋ ಮೀಟರ್ ದೂರದಲ್ಲಿರುವ ಬಜತ್ತೂರಿನಲ್ಲಿ ಅನಂತಭಟ್ಟರ ಮನೆಯಿರುವುದು. ಹೆದ್ದಾರಿಯಲ್ಲಿ ಇಳಿದರೆ ಎಡ ಭಾಗದಲ್ಲಿ ನಿಮ್ಮನ್ನು ಮಣ್ಣಿನ ಕಚ್ಚಾದಾರಿಯೊಂದು ಬಾಯಿ ತೆರೆದು ಸ್ವಾಗತಿಸುತ್ತದೆ.

ಅದರಲ್ಲಿ ಒಂದೈವತ್ತು ಹೆಜ್ಜೆಯಿಟ್ಟರೆ ಎಂಜಿರಡ್ಕ ಎಂಬ ಹೆಸರಿನ ವೃತ್ತ ಸಿಗುತ್ತದೆ. ಅಲ್ಲಿಂದ ಮೂರು ದಾರಿಗಳು ಕವಲೊಡೆಯುತ್ತವೆ. ಬಲಭಾಗದ ಕಾಲುದಾರಿಯಲ್ಲಿ ಮುನ್ನಡೆದರೆ ಆರೆಸ್ಸೆಸ್‌ನ ಸಂಚಾಲಕ, ಗುರೂಜಿ ಎಂದೇ ಪುತ್ತೂರು ತಾಲೂಕಿನಾದ್ಯಂತ ಖ್ಯಾತರಾಗಿರುವ ಶ್ಯಾಮಭಟ್ಟರ ಮನೆಯನ್ನು ಮುಟ್ಟಬಹುದು. ನೇರ ಮುಂದಕ್ಕೆ ಹೋದರೆ ಬಜತ್ತೂರಿನ ಪ್ರೌಢ ಶಾಲೆಯಲ್ಲಿ ಕನ್ನಡ ಬೋಧಿಸುವ ಸುಬ್ಬಣ್ಣ ಭಟ್ಟರ ಮನೆಯ ಅಂಗಳದಲ್ಲಿ ನಿಲ್ಲಬಹುದು. ಎಂಜಿರಡ್ಕ ಸರ್ಕಲ್‌ನಿಂದ ಎಡಭಾಗಕ್ಕೆ ತಿರುಗಿ ನೇರ ನಡೆದು ಹೋದರೆ, ಮುಂದೆ ನಿಮಗೆ ವಿಶಾಲವಾಗಿ ಹರಡಿ ನಿಂತ ಹಸಿರುಗದ್ದೆ ಎದುರಾಗುವುದು. ಅದರ ಬದುವಿನಲ್ಲಿ ನಡೆದು, ಬಳಿಕ ಸಣ್ಣದೊಂದು ಕೈಸಂಕ ದಾಟಿದರೆ ನಿಮಗೆ ಎದುರಾಗುವುದು ಅನಂತಭಟ್ಟರ ಮನೆ.

 ಇಪ್ಪತ್ತು ಸೆಂಟ್ಸ್ ಜಾಗಕ್ಕೆ ಬೇಲಿ ಹಾಕಿ ಗಟ್ಟಿ ಮಾಡಿಕೊಂಡಿದ್ದಾರೆ ಅನಂತಭಟ್ಟರು. ಎರಡು ಕೋಣೆಗಳಿರುವ ಪುಟ್ಟ ಹಂಚಿನ ಮನೆ. ಅದರ ಮುಂದೆ ಹರಡಿಕೊಂಡಂತೆ ಪುಟ್ಟದೊಂದು ಅಂಗಳ. ಆಸುಪಾಸಿನಲ್ಲಿ ಬೇರೆ ಮನೆಯಿಲ್ಲ. ಅರ್ಧ ಫರ್ಲಾಂಗು ನಡೆದರೆ ಮೋಂಟನ ದಟ್ಟಿಗೆ ಸಿಗುತ್ತದೆ. ಏನಾದರೂ ಅಗತ್ಯವಿದ್ದರೆ ಭಟ್ಟರೇ ಆ ದಟ್ಟಿಗೆಯ ಕಡೆಗೆ ಹೆಜ್ಜೆ ಇಡುತ್ತಾರೆ. ಅಥವಾ ಮೋಂಟನೇ ಹಿತ್ತಲಿನಲ್ಲಿ ನಿಂತು ಲಕ್ಷ್ಮಮ್ಮನನ್ನು ಕೂಗುತ್ತಾನೆ. ಮೋಂಟನ ಹೆಂಡತಿಯೂ ಆಗಾಗ ಬಂದು ಲಕ್ಷ್ಮಮ್ಮನ ಕೆಲಸಗಳಿಗೆ ನೆರವು ನೀಡುತ್ತಿರುತ್ತಾಳೆ. ಅನಂತಭಟ್ಟರು ತನ್ನ ಪಾಠ, ಪ್ರವಚನ ಎಂದು ಊರಿಡೀ ಸುತ್ತಾಡುವವರಾದುದರಿಂದ ಈ ಮೋಂಟ, ಅವನ ಹೆಂಡತಿ ತೌಡು ಲಕ್ಷ್ಮಮ್ಮನಿಗೆ ಒಂದು ಜೊತೆ ಇದ್ದಂತೆ. ಮನೆಯಲ್ಲಿ ಅಳಿದುಳಿದುದನ್ನು ಕೊಡುವ ನೆಪದಲ್ಲಿ ಆಗಾಗ ಮೋಂಟನಿಗೆ ಲಕ್ಷ್ಮಮ್ಮ ಕರೆ ಕಳುಹಿಸುತ್ತಿರುತ್ತಾರೆ. ಮೋಂಟನಿಗೂ ವಯಸ್ಸಾಗಿದೆ. ಮೋಂಟನ ಮಕ್ಕಳೆಲ್ಲ ಈಗ ಉಪ್ಪಿನಂಗಡಿಯ ಕಡೆಗೆ ತಲೆ ಹಾಕಿರುವುದರಿಂದ, ಯಾವುದೇ ಕೆಲಸಕ್ಕೂ ಮೋಂಟನೇ ಓಡಿ ಬರಬೇಕು.

ಜನರ ನಾಲಗೆಯಲ್ಲಿ ಅನಂತಯ್ಯ, ಲೆಕ್ಕದ ಮೇಷ್ಟ್ರು, ಲೆಕ್ಕದ ಭಟ್ರು ಎಂಬಿತ್ಯಾದಿಯಾಗಿ ನಲಿದಾಡುವ ಅನಂತ ಭಟ್ಟರ ಹೆಸರು ಬಜತ್ತೂರು, ಉಪ್ಪಿನಂಗಡಿ ಆಸುಪಾಸಿನಲ್ಲೆಲ್ಲ ಚಿರಪರಿಚಿತ. ಉಪ್ಪಿನಂಗಡಿ ಸಮೀಪದ ಸಂತ ಫಿಲೋಮಿನಾ ಪ್ರಾಥಮಿಕ ಶಾಲೆಯೊಂದರಲ್ಲಿ ಲೆಕ್ಕದ ಮೇಷ್ಟ್ರು ಅವರು. ‘ವೇದ ಗಣಿತ ಅಥವಾ ಭಾರತೀಯ ಗಣಿತ’ ಎಂಬ ಪುಟ್ಟ ಕೈಪಿಡಿಯಂತಹ ಪುಸ್ತಕವನ್ನೂ ಅವರು ಬರೆದಿದ್ದಾರೆ. ಲೆಕ್ಕವೆನ್ನುವುದು ಅವರಿಗೆ ಕಾವ್ಯದಷ್ಟೇ ಇಷ್ಟ. ಹಾಗೆ ನೋಡಿದರೆ ಕಾವ್ಯಗಳಲ್ಲಿರುವ ಲಘು, ಗುರು, ಲೆಕ್ಕಗಳಿಂದಾಗಿಯೇ ಅವರು ಕಾವ್ಯವನ್ನು ಇಷ್ಟಪಡುತ್ತಾರೆ. ಸೃಷ್ಟಿಕ್ರಿಯೆಯೇ ಲೆಕ್ಕದ ತಳಹದಿಯ ಮೇಲೆ ನಿಂತಿದೆ ಎಂದು ಅವರು ನಂಬಿದ್ದಾರೆ. ಲೆಕ್ಕ ತನ್ನೊಳಗೊಂದು ಅನಂತವನ್ನು ಬಚ್ಚಿಟ್ಟುಕೊಂಡಿದೆ. ಲೆಕ್ಕವನ್ನು ಬಿಡಿಸುತ್ತಾ ಹೋದ ಹಾಗೆಯೇ ಆ ಅನಂತ ತೆರೆದುಕೊಳ್ಳುತ್ತಾ ಹೋಗುತ್ತದೆ ಎಂದು ಅವರು ಭಾವಿಸಿದ್ದಾರೆ. ತನ್ನ ವಾದಕ್ಕೆ ಅವರು ಆಧುನಿಕ ವಿಜ್ಞಾನವನ್ನು, ಖಗೋಳವನ್ನು ಉದಾಹರಣೆಯಾಗಿ ನೀಡುತ್ತಾರೆ.

ರಜಾವಧಿಯಲ್ಲೂ ಅವರು ಸುಮ್ಮನಿರುವುದೆಂದಿಲ್ಲ. ಬೇರೆ ಬೇರೆ ಶಾಲೆಗಳಿಗೆ ತೆರಳಿ ವೇದಕಾಲದ ಗಣಿತದ ಕುರಿತಂತೆ ವಿಶೇಷ ತರಗತಿಯನ್ನು ತೆಗೆದುಕೊಳ್ಳುತ್ತಾರೆ. ಜಾಣ ಗಣಿತವನ್ನು ಹೇಳಿಕೊಟ್ಟು ವಿದ್ಯಾರ್ಥಿಗಳಲ್ಲಿ ಲೆಕ್ಕದ ಕುರಿತಂತೆ ಆಸಕ್ತಿ ಹುಟ್ಟಿಸಲು ಪ್ರಯತ್ನಿಸುತ್ತಾರೆ. ಬಳಿಕ ತನ್ನ ಹತ್ತು ರೂ. ಮುಖಬೆಲೆಯ ‘ಭಾರತೀಯ ಗಣಿತ’ ಪುಸ್ತಕವನ್ನು 5 ರೂಪಾಯಿ ರಿಯಾಯಿತಿ ದರದಲ್ಲಿ ಮಾರುತ್ತಾರೆ. ಆದುದರಿಂದ ಅನಂತಭಟ್ಟರು ತಾನು ಪಾಠ ಮಾಡುವ ಉಪ್ಪಿನಂಗಡಿಯ ಕ್ರೈಸ್ತ ಶಾಲೆಗಷ್ಟೇ ಸೀಮಿತರಾದವರಲ್ಲ. ಆಸುಪಾಸಿನ ಶಾಲೆಗಳ ಮಕ್ಕಳಿಗೂ ಅವರು ‘ಲೆಕ್ಕದ ಮಾಷ್ಟ್ರು’ ಎಂದು ಪರಿಚಿತರು.

1989ನೇ ಇಸವಿ. ಅಡ್ವಾಣಿಯವರ ರಾಮರಥ ಉಪ್ಪಿನಂಗಡಿಗೆ ಬರುವುದಕ್ಕೆ ಒಂದು ದಿನ ಮೊದಲು ಪ್ರತಾಪಸಿಂಹ ಹುಟ್ಟಿದ್ದು. ತೀರಾ ತಡವಾಗಿ ಹುಟ್ಟಿದ ಮಗು. ಬೆಣ್ಣೆಯ ಮುದ್ದೆಯಂತಿತ್ತು. ಮಗುವನ್ನು ಮೊದಲ ಬಾರಿ ಕಣ್ತುಂಬಿಕೊಂಡಾಗ ತಾಯಿಗೆ ತಕ್ಷಣ ನೆನಪಾದದ್ದು ತನ್ನ ತಾತ ‘ಮುಕುಂದ ರಾಯರು’. ಪುತ್ತೂರಿನ ಸ್ವಾತಂತ್ರ ಹೋರಾಟಗಾರರ ಪಟ್ಟಿಯಲ್ಲಿ ಈ ಮುಕುಂದರಾಯರ ಹೆಸರೂ ಇದೆ. ಸಜ್ಜನರೆಂದೂ, ಸಂಭಾವಿತರೆಂದೂ ಊರೆಲ್ಲ ಹೆಸರಾದವರು. ತನ್ನ ಸಮಾಜಸೇವೆಗಾಗಿ ತೋಟ, ಆಸ್ತಿಯನ್ನು ತೆತ್ತುಕೊಂಡವರು. ಮುಕುಂದರಾಯರು ಒಳ್ಳೆಯ ಸಂಗೀತ ವಿದ್ವಾಂಸರೆಂದೂ ಗುರುತಿಸಿಕೊಂಡಿದ್ದರಂತೆ. ಸ್ವಾತಂತ್ರ ಹೋರಾಟಗಾರರ ಮೊಮ್ಮಗಳು ಎಂದು ಹೆಮ್ಮೆಯಿಂದ ಅನಂತಭಟ್ಟರು ಲಕ್ಷ್ಮಮ್ಮನನ್ನು ವರಿಸಿದ್ದರು. ಮಗನಿಗೆ ಇಟ್ಟರೆ ‘ಮುಕುಂದ’ ಎಂಬ ಹೆಸರಿಡಬೇಕು ಎಂದು ಲಕ್ಷ್ಮಮ್ಮ ಮನದಲ್ಲೇ ನಿರ್ಧರಿಸಿಯಾಗಿತ್ತು.

ಮಗು ಹುಟ್ಟಿದ ಎರಡನೆಯ ದಿನ ಉಪ್ಪಿನಂಗಡಿಯಲ್ಲಿ ಅಡ್ವಾಣಿಯ ರಾಮರಥದ ಆಗಮನ. ಅಲ್ಲಿ ಗುರೂಜಿ ಶ್ಯಾಮಭಟ್ಟರ ಭಾರೀ ಭಾಷಣವಿತ್ತು. ಸಮಾರಂಭ ಮುಗಿದದ್ದೇ ಗುರೂಜಿಯವರು ಸೀದಾ ಅನಂತಭಟ್ಟರ ಮನೆಗೆ ಕಾಲಿಟ್ಟಿದ್ದರು. ಅವರ ಜೊತೆಗೆ ಕನ್ನಡ ಪಂಡಿತ ಸುಬ್ಬಣ್ಣ ಭಟ್ಟರೂ ಇದ್ದರು. ಮನೆ ತಲುಪಿದ್ದರಾದರೂ, ಮನ ಮಾತ್ರ ಇನ್ನೂ ಸಮಾವೇಶದ ಆವೇಗದಲ್ಲೇ ಸಿಕ್ಕು ಹಾಕಿಕೊಂಡಿತ್ತು. ಗುರೂಜಿಯ ಆವೇಶಪೂರ್ಣ ಭಾಷಣ ಇಡೀ ಉಪ್ಪಿನಂಗಡಿ ಆಸುಪಾಸನ್ನು ಜಾಗೃತಗೊಳಿಸಿದೆ ಎನ್ನುವುದು ಸುಬ್ಬಣ್ಣ ಭಟ್ಟರ ಅಭಿಪ್ರಾಯ.

(ಗುರುವಾರದ ಸಂಚಿಕೆಗೆ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)