varthabharthi


ಯುದ್ಧ

ಧಾರಾವಾಹಿ-2

ನಮಾಝ್ ಮಾಡುವ ಪಾರಿವಾಳ!

ವಾರ್ತಾ ಭಾರತಿ : 25 Jan, 2017

ಕಾದಂಬರಿ

‘‘ಬಹಳ ಸಮಯದ ಬಳಿಕ ಉಪ್ಪಿನಂಗಡಿಯಲ್ಲಿ ಮತ್ತೆ ಸಂಗಮ ಆಯಿತು ನೋಡಿ...’’ ಎಂದರು ಸುಬ್ಬಣ್ಣ ಭಟ್ಟರು.

ಉಪ್ಪಿನಂಗಡಿಯ ನೇತ್ರಾವತಿ-ಕುಮಾರಧಾರಾ ಸಂಗಮಕ್ಕೆ ಒಂದು ಅಧ್ಯಾತ್ಮದ ನೆಲೆಯೂ ಇದೆ. ಜೋರಾಗಿ ಮಳೆ-ನೆರೆ ಅಬ್ಬರಿಸತೊಡಗಿದರೆ ಎಲ್ಲರೂ ‘‘ಈ ಬಾರಿ ಸಂಗಮ ಆಗಿಯೇ ಬಿಡುತ್ತದೆ ನೋಡಿ’’ ಎನ್ನುತ್ತಾರೆ. ನದಿ ಉಕ್ಕೇರಿ ಇಕ್ಕೆಡೆಗಳಿಂದ ನದಿಯ ನೀರು ಸಹಸ್ರಲಿಂಗೇಶ್ವರ ದೇವಸ್ಥಾನವನ್ನು ಸುತ್ತುವರಿದರೆ ‘ಸಂಗಮ’ ಆಗಿ ನಾಲ್ಕು ಊರುಗಳಿಗೂ ಸುದ್ದಿಯಾಗುತ್ತದೆ. ಒಂದೆಡೆ ಕುಮಾರಧಾರಾ ನದಿಯ ತೋಳು, ಇನ್ನೊಂದೆಡೆಯಿಂದ ನೇತ್ರಾವತಿಯ ತೋಳು ಚಾಚಿ ಜೊತೆಯಾಗಿ ಬೆಸೆದರೆ ಅದುವೇ ಸಂಗಮ. ಆಗ ದೇವಸ್ಥಾನವಿರುವ ಜಾಗ ದ್ವೀಪವಾಗುತ್ತದೆ. ಅಂದು ವಿಶೇಷ ಪೂಜೆ ನಡೆಯುತ್ತದೆ. ಉಪ್ಪಿನಂಗಡಿಯಲ್ಲಿ ನಡೆದ ರಥಯಾತ್ರೆಯ ಸಮಾವೇಶವನ್ನು ‘ಸಂಗಮ’ಕ್ಕೆ ಹೋಲಿಸಿದ್ದು ಗುರೂಜಿಗೆ ತುಂಬಾ ಇಷ್ಟವಾಯಿತು. ಅನಂತ ಭಟ್ಟರ ಮನೆಯೊಳಗೆ ಕುಳಿತು ಸಮಾರಂಭದ ವೈಭವದ ಕುರಿತಂತೆಯೇ ಮಾತು-ಕತೆ. ಅಷ್ಟರಲ್ಲಿ ಅನಂತಭಟ್ಟರು ಒಳಹೋಗಿ ಬೆಣ್ಣೆ ಮುದ್ದೆಯನ್ನು ತಂದು ಗುರೂಜಿಯ ಕೈಯಲ್ಲಿಟ್ಟರು. ಪೂರ್ಣ ಚಂದಿರನಂತೆ ಹೊಳೆಯುವ ಮಗು.

‘‘ಆಹಾ...ಶಿವಾಜಿಯಂತೆ ಪ್ರಜ್ವಲಿಸುವ ಮಗು...ಮಾಷ್ಟ್ರೆ...ಈ ಮಗುವನ್ನು ನನಗೆ ಕೊಡಿ...ದೇಶಸೇವೆಗೆ ಬಳಸಿಕೊಳ್ಳುವೆ....’’ ಗುರೂಜಿ ಕೇಳಿಯೇಬಿಟ್ಟರು.

ಅನಂತಭಟ್ಟರೋ ಕಕ್ಕಾಬಿಕ್ಕಿ. ಗುರೂಜಿ ಗಂಭೀರವಾಗಿ ದ್ದಾರೋ, ತಮಾಷೆಯಾಗಿ ಕೇಳುತ್ತಿದ್ದಾರೋ ಗೊತ್ತಿಲ್ಲದೆ ತಡವರಿಸಿದರು.

‘‘ಹೇಗೆ ಮಾಷ್ಟ್ರೆ....ಕೊಡುತ್ತೀರಾ...? ಲೆಕ್ಕ ಹಾಕಿ ಬೇಗ ಹೇಳಿ....ಲೆಕ್ಕದ ಮಾಷ್ಟ್ರೇ...’’ ಎಂದು ನಕ್ಕರು.

‘‘ನೀವು ಕೇಳಿದರೆ ಇಲ್ಲ ಅನ್ನುವುದು ಹೇಗೆ? ದೇಶಕ್ಕೆ ತಾನೆ...ತೆಗೆದುಕೊಳ್ಳಿ...’’ ಅನಂತಭಟ್ಟರೂ ತಮಾಷೆಯಾಗಿ ನಕ್ಕು ಹೇಳಿದರು.

‘‘ಮಗುವಿಗೆ ಹೆಸರಿಟ್ಟಿರೋ...?’’ ಗುರೂಜಿ ಕೇಳಿದರು.

‘‘ಇಲ್ಲ...ನೀವೇ ಒಂದು ಹೆಸರಿಡಿ...’’ ಅನಂತಭಟ್ಟರು ಹೇಳಿಯೇ ಬಿಟ್ಟರು. ಅಷ್ಟೇ...

‘‘ಸಿಂಹ...ಪ್ರತಾಪ ಸಿಂಹ’’ ಗುರೂಜಿ ಮಗುವಿನ ಕಿವಿಯಲ್ಲಿ ಪಿಸುಗುಟ್ಟಿದರು. ಅನಂತಭಟ್ಟರಿಗೋ ಸಂಭ್ರಮ. ಒಳ ಹೋದವರೇ ‘‘ಲೇ, ಮಗುವಿಗೆ ಗುರೂಜಿ ಹೆಸರಿಟ್ಟುಬಿಟ್ಟರು. ಪ್ರತಾಪ ಸಿಂಹ...’’

ಸುಸ್ತಾಗಿ ಮಲಗಿದ್ದ ಲಕ್ಷ್ಮಮ್ಮಳ ಪ್ರತಿಕ್ರಿಯೆಗೆ ಅವಕಾಶವೇ ಇರಲಿಲ್ಲ. ‘‘ಮುಕುಂದ...’’ ಎಂದು ಏನೋ ಹೇಳಲು ತವಕಿಸಿದರು. ಆದರೆ ಅವರ ಮಾತು ಕೇಳುವುದಕ್ಕೆ ಪತಿ ಅಲ್ಲಿರಲಿಲ್ಲ. ಚಾವಡಿಯಲ್ಲಿ ಗುರೂಜಿಯವರ ಅಬ್ಬರದ ನಗು. ‘‘ಪ್ರತಾ...ಪ...’’

ಲಕ್ಷ್ಮಮ್ಮನಿಗೆ ಇದೆಂತಹ ಹೆಸರು ಎನಿಸಿತು? ನಮಗೆ ಒಲ್ಲದ ಹೆಸರಿದು. ‘‘ಮುಕುಂದ ಎಂದರೆ ಕರೆಯುವುದಕ್ಕೆ ಅದೆಷ್ಟು ಸೊಗಸಿತ್ತು....’’ ಮಲಗಿದಲ್ಲೇ ನಿಟ್ಟುಸಿರಿಟ್ಟಿದ್ದರು ಲಕ್ಷ್ಮಮ್ಮ.

***

ಲಕ್ಷ್ಮಮ್ಮ ಮಗ ಪ್ರತಾಪಸಿಂಹನನ್ನು ಪಪ್ಪು ಎಂದೇ ಕರೆಯುತ್ತಿದ್ದರು. ಮುಂದೆ ಊರಿನಲ್ಲೂ ಆತ ಪಪ್ಪುವೆಂದೇ ಗುರುತಿಸಲ್ಪಟ್ಟ. ಬಜತ್ತೂರಿನ ಸರಕಾರಿ ಶಾಲೆಯಲ್ಲಿ ಸುಬ್ಬಣ ಭಟ್ಟರಿಗೂ ಆತ ಪಪ್ಪುವೇ ಆದ. ಆತ ಹೆಸರಿಗೆ ತಕ್ಕಂತೆ ಮುದ್ದಾಗಿಯೂ ಮೊದ್ದಾಗಿಯೂ ಬೆಳೆದ. ತಂದೆ ಕಲಿಸಿಕೊಟ್ಟ ಗಾಯತ್ರಿ ಮಂತ್ರವನ್ನು ಸೊಗಸಾಗಿ ಉರು ಹೊಡೆದಿದ್ದ. ತಾಯಿಯ ಜೊತೆಗೆ ಮುಸ್ಸಂಜೆ ಭಜನೆಗೆ ಕುಳಿತುಕೊಳ್ಳುತ್ತಿದ್ದ. ತಾಯಿ ಹಾಡುತ್ತಿದ್ದರೆ ಈತನೂ ಧ್ವನಿ ಸೇರಿಸುತ್ತಿದ್ದ. ತನ್ನ ತಾತನಂತೆ ಸಂಗೀತ ವಿದ್ವಾಂಸನಾಗಬೇಕು ಎಂಬ ಆಸೆಯಿಂದ ತನಗೆ ಗೊತ್ತಿದ್ದ ಭಜನೆಗಳನ್ನೆಲ್ಲ ಪಪ್ಪುವಿಗೆ ಹಚ್ಚಿಕೊಡುತ್ತಿದ್ದರು. ರಾಗವಾಗಿ ಅಲ್ಲದಿದ್ದರೂ ಪಪ್ಪುವೂ ಸುಮಾರಾಗಿ ಹಾಡುತ್ತಿದ್ದ. ಪಪ್ಪು ನಾಲ್ಕನೆ ತರಗತಿ ತಲುಪಿದಾಗ ಊರಿನ ಖ್ಯಾತ ವಿದ್ವಾನ್ ನರಸಿಂಹಯ್ಯ ಅವರನ್ನು ಗಂಡನ ಜೊತೆಗೆ ಹೇಳಿ ಮನೆಗೆ ಕರೆಸಿದ್ದರು. ನರಸಿಂಹಯ್ಯ ಅವರು ತನ್ನ ಪುಟ್ಟ ಮಗಳ ಜೊತೆಗೇ ಆಗಮಿಸಿದರು.

 ಅವರಿಗೆ ಚಹಾ ಕೊಟ್ಟು ‘‘ತನ್ನ ಮಗನಿಗೆ ಸಂಗೀತ ಹೇಳಿಕೊಡಿ ಪಂಡಿತರೇ’’ ಎಂದು ಸ್ವತಃ ಲಕ್ಷ್ಮಮ್ಮ ಮನವಿ ಮಾಡಿಕೊಂಡರು.

‘‘ಹೌದು, ನರಸಿಂಹಯ್ಯ. ಇವಳಿಗೆ ಮಗ ತನ್ನ ತಾತನ ಹಾಗೆ ದೊಡ್ಡ ಸಂಗೀತ ವಿದ್ವಾಂಸ ಆಗಬೇಕು ಎನ್ನುವ ಆಸೆ....ಆಗುವುದಾದರೆ ಆಗಲಿ’’ ಎಂದು ಅನಂತಭಟ್ಟರು ಶಿಫಾರಸು ಮಾಡಿದ್ದರು.

ಪಪ್ಪುವನ್ನು ಹತ್ತಿರ ಎಳೆದುಕೊಂಡ ನರಸಿಂಹಯ್ಯ ‘‘ತಾತನ ಎಲ್ಲ ಲಕ್ಷಣಗಳೂ ಇವೆ. ಪ್ರಯತ್ನ ಪಟ್ಟರೆ, ಶ್ರದ್ಧೆ ಇಟ್ಟರೆ ಖಂಡಿತ ಈತ ಸಂಗೀತ ಪ್ರವೀಣನಾಗುತ್ತಾನೆ....ಏನೋ ಪಪ್ಪು, ಸಂಗೀತ ವಿದ್ವಾನ್ ಆಗುತ್ತಿಯೇನೋ?’’ ಎಂದು ಕೇಳಿದರು.

ಪಪ್ಪು ಬರಿದೇ ನಕ್ಕ.

‘‘ನೋಡು...ಇವಳು ನನ್ನ ಮಗಳು ರಂಜಿನಿ. ಶಿವರಂಜಿನಿ ಅಂತ ಪೂರ್ತಿ ಹೆಸರು. ನೀನೇನಾದರೂ ಶ್ರದ್ಧೆಯಿಟ್ಟು ಸಂಗೀತ ಕಲಿತದ್ದೇ ಆದರೆ ಇವಳನ್ನು ನಿನಗೆ ಕೊಟ್ಟು ಮದುವೆ ಮಾಡುತ್ತೇನೆ...’’ ಎಂದರು.

ಎಲ್ಲರೂ ಜೋರಾಗಿ ನಕ್ಕರು. ಪಪ್ಪು ನಾಚಿ ನೀರಾಗಿ, ಕೈ ಬಿಡಿಸಿಕೊಂಡು ಒಳ ಹೋದ. ಆದರೆ ಪಪ್ಪುವಿಗೆ ಸಂಗೀತದ ಮೇಲೆ ಅಷ್ಟೇನೂ ಒಲವಿದ್ದಿರಲಿಲ್ಲ. ತಾಯಿಯ ಒತ್ತಾಯಕ್ಕಷ್ಟೇ ಹೋಗುತ್ತಿದ್ದ. ಹೋದರೂ ಅಲ್ಲಿ ಶಿವರಂಜಿನಿಯನ್ನು ನೋಡಿ ನಾಚಿಕೊಳ್ಳುತ್ತಿದ್ದ. ಕೆಲವೊಮ್ಮೆ ಸಂಗೀತ ತರಗತಿಗೆ ಹೋಗುತ್ತೇನೆ ಎಂದು ಹೇಳಿ ಆತನ ಹೊಸ ಗೆಳೆಯ ಕಬೀರನ ಜೊತೆಗೆ ಅಲೆದಾಡುತ್ತಿದ್ದ. ಈ ಕಬೀರ ಹತ್ತಿರವಾದುದೂ ಒಂದು ಆಕಸ್ಮಿಕ.

ಸ್ವಭಾವತಃ ಸಂಕೋಚದವನಾಗಿದ್ದ ಪಪ್ಪು ಒಂಟಿಯಾಗಿರಲು ಹೆಚ್ಚು ಇಷ್ಟಪಡುತ್ತಿದ್ದ. ಆದುದರಿಂದಲೇ ಆತನಿಗೆ ಶಾಲೆಯಲ್ಲಿ ವಿಶೇಷ ಸ್ನೇಹಿತರೇನೂ ಇದ್ದಿರಲಿಲ್ಲ. ಅದೊಂದು ದಿನ ಮಧ್ಯಾಹ್ನ ಬುತ್ತಿಯೂಟ ಮುಗಿಸಿ, ಅದನ್ನು ನಳ್ಳಿ ನೀರಿನಲ್ಲಿ ತೊಳೆದು ಬರುವಾಗ, ಶಾಲೆಯ ಹಿಂಬದಿಯಲ್ಲಿ ಯಾರೋ ಒಬ್ಬ ಹುಡುಗ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ನೋಡಿಬಿಟ್ಟ. ನೋಡಿದರೆ ಕಬೀರ. ಶಾಲೆಯ ಹಿಂಬದಿಯಲ್ಲಿ ಏನು ಮಾಡುತ್ತಿದ್ದಾನೆ ಇವನು ಎಂದು ಅವನೆಡೆಗೆ ಹೊರಟ. ಪಪ್ಪುವನ್ನು ಕಂಡದ್ದೇ ಕಬೀರ್ ‘ಶ್!’ ಎಂದು ಬಾಯಿಗೆ ಬೆರಳಿಟ್ಟು ಸದ್ದು ಮಾಡಬೇಡ ಎಂದು ಸನ್ನೆ ಮಾಡಿ ಹೇಳಿದ. ಪಪ್ಪುವಿಗೆ ತುಸು ದಿಗಿಲಾಯಿತು.

‘ಇಲ್ಲಿ ಬಾ...’ ಕಬೀರ್ ಕರೆದ ಪಪ್ಪು ಅತ್ತ ನಡೆದ. ಕಬೀರ್ ಕಿಟಕಿಯ ಮೇಲೆ ಕಾಲಿಟ್ಟು ಶಾಲೆಯ ಗೋಡೆ ಏರಿದ. ಪಪ್ಪುವೂ ಹಾಗೆಯೇ ಮಾಡಿದ. ಪಕ್ಕಾಸಿನ ಮೂಲೆಯ ಕಡೆಗೆ ಕಬೀರ್ ಕೈ ತೋರಿಸಿದ. ನೋಡಿದರೆ ಹಕ್ಕಿ ಗೂಡು. ಅದರಲ್ಲಿ ಮೊಟ್ಟೆಗಳಿದ್ದವು. ‘ಪಾರಿವಾಳದ ಮೊಟ್ಟೆ’ ಕಬೀರ ಮೆಲ್ಲಗೆ ಪಿಸುಗುಟ್ಟಿದ. ಪಪ್ಪು ಅಚ್ಚರಿಯಿಂದ ನೋಡಿದ. ಪಾರಿವಾಳದ ಗೂಡು ಮತ್ತು ಅದರ ಮೊಟ್ಟೆಗಳನ್ನು ಅವನು ಅದೇ ಮೊದಲ ಬಾರಿ ನೋಡುತ್ತಿರುವುದು.

ಬಳಿಕ ಇಬ್ಬರೂ ಇಳಿದರು.

‘‘ಇನ್ನು ಸ್ವಲ್ಪ ದಿನದಲ್ಲಿ ಆ ಮೊಟ್ಟೆಯೊಳಗಿಂದ ಪಾರಿವಾಳದ ಮರಿಗಳು ಹೊರಬರುತ್ತವೆ’’ ಕಬೀರ್ ಹೇಳಿದ ‘‘ನಿನಗೆ ಹೇಗೆ ಗೊತ್ತು?’’ ಪಪ್ಪು ಅಚ್ಚರಿಯಿಂದ ಕೇಳಿದ. ‘‘ತುಂಬಾ ಸಲ ನೋಡಿದ್ದೇನೆ....ಪಾರಿವಾಳ ಮರಿ ಮಾಡುವುದನ್ನು...’’

‘‘ಹೌದಾ...ಯಾವಾಗ ಮರಿಯಾಗುತ್ತೆ?’’

‘‘ಇನ್ನು ಕೆಲವೇ ಕೆಲವು ದಿನಗಳಲ್ಲಿ....’’

‘‘ನನಗೂ ಅದನ್ನು ನೋಡಬೇಕು...ತೋರಿಸ್ತೀಯಲ್ಲ..?’’ ಪಪ್ಪು ಆಸೆಯಿಂದ ಕೇಳಿದ.

‘‘ತೋರಿಸೋಣವಂತೆ. ಆದರೆ ಒಂದು ಶರ್ತು ಉಂಟು...’’

‘‘ಏನು...?’’

‘‘ಮರಿಗಳನ್ನು ಮುಟ್ಟಬಾರದು...’’

‘‘ಮುಟ್ಟಿದರೆ ಏನಾಗುತ್ತದೆ?’’

‘‘ಮನುಷ್ಯರು ಪಕ್ಷಿಗಳ ಮರಿಗಳನ್ನು ಮುಟ್ಟಿದರೆ ಅದರ ಜಾತಿ ಕೆಡುತ್ತದೆ...ತಾಯಿ ಪಾರಿವಾಳ ಆ ಮರಿಗಳನ್ನು ಕೊಕ್ಕಿನಿಂದ ಕುಕ್ಕಿ ಗೂಡಿನಿಂದ ಹೊರಹಾಕುತ್ತದೆ’’

‘‘ಹೌದಾ...ಇದು ನಿನಗೆ ಹೇಗೆ ಗೊತ್ತು?’’ ಪಪ್ಪು ಅಚ್ಚರಿಯಿಂದ ಕೇಳಿದ. ‘‘ನನ್ನ ಚಿಕ್ಕಪ್ಪನ ಮನೆಯ ಮಾಡಿನಲ್ಲಿ ಗುಬ್ಬಚ್ಚಿ ಗೂಡುಗಳಿದ್ದವು. ಆ ಗೂಡಿನ ಅಂಚಿನಲ್ಲಿದ್ದ ಒಂದು ಮರಿಯನ್ನು ನಾನು ಎತ್ತಿ ಗೂಡಿನೊಳಗೆ ಹಾಕಿ ಬಿಟ್ಟೆ...ಮರು ದಿನ ನೋಡಿದರೆ ಆ ಗುಬ್ಬಚ್ಚಿ ಮರಿ ಗೂಡಿನ ಹೊರಗೆ ಸತ್ತು ಬಿದ್ದಿತ್ತು...ಚಿಕ್ಕಪ್ಪ ನನಗೆ ಚೆನ್ನಾಗಿ ಬೈದರು. ಮನುಷ್ಯರು ಮುಟ್ಟಿದ ಗುಬ್ಬಚ್ಚಿಗಳನ್ನು ತಮ್ಮ ಗೂಡಿಗೆ ಸೇರಿಸುವುದಿಲ್ಲವಂತೆ...ಮನುಷ್ಯರು ಮುಟ್ಟಿದರೆ ಅವುಗಳ ಜಾತಿ ಕೆಡುತ್ತದೆಯಂತೆ...’’ ‘‘ಓಹ್...’’ ಬಾಯಗಲಿಸಿದ.

‘‘ಹೂಂ...ಇಲ್ಲಿ ಒಟ್ಟು ಆರು ಪಾರಿವಾಳಗಳಿವೆ. ಅದರಲ್ಲಿ ಎರಡು ಹೆಣ್ಣು, ನಾಲ್ಕು ಗಂಡು...ಗಂಡು ಪಾರಿವಾಳಗಳಲ್ಲಿ ಒಂದು ಪಾರಿವಾಳ ಮುಸ್ಲಿಮ್ ಗೊತ್ತಾ?’’

ಪಪ್ಪು ದಂಗಾದ !

‘ಪಾರಿವಾಳಗಳಲ್ಲಿ ಹಿಂದೂ ಪಾರಿವಾಳ, ಮುಸ್ಲಿಮ್ ಪಾರಿವಾಳ ಇದೆಯೇ? ಈ ಬಗ್ಗೆ ತಾನು ಆಲೋಚಿಸಿಯೇ ಇರಲಿಲ್ಲವಲ್ಲ!’

‘‘ನಿನಗೆ ಹೇಗೆ ಗೊತ್ತು, ಅದು ಮುಸ್ಲಿಮ್ ಪಾರಿವಾಳ ಅಂತ?’’

‘‘ಆ ಪಾರಿವಾಳ ನಮಾಝ್ ಮಾಡುತ್ತದೆ....ಅದು ನಮಾಝ್ ಮಾಡುವುದನ್ನು ನಾನು ನೋಡಿದ್ದೇನೆ...’’ ಕಬೀರ್ ಹೇಳಿದ.

‘‘ಹೌದಾ...ಇನ್ನೊಮ್ಮೆ ಅದು ನಮಾಝ್ ಮಾಡುವಾಗ ನನಗೆ ತೋರಿಸುತ್ತೀಯಾ?’’ ಪಪ್ಪು ಕೇಳಿದ.

‘‘ತೋರಿಸುತ್ತೇನೆ....’’ ಎಂದ. ಅವನು ಅಷ್ಟಕ್ಕೇ ನಿಲ್ಲಿಸಲಿಲ್ಲ ‘‘ಆ ಪಾರಿವಾಳ ಪ್ರತಿ ಶುಕ್ರವಾರ ನಮ್ಮ ಮಸೀದಿಯ ಗೋಡೆಯ ಮೇಲೆ ಬಂದು ಕುಳಿತುಕೊಳ್ಳುತ್ತದೆ. ನಮಾಝ್‌ನ ಹೊತ್ತಿಗೆ ಸರಿಯಾಗಿ...’’ ಎಂದೂ ಸೇರಿಸಿದ.

ಅಂದು ಪಪ್ಪು ಸಂಧ್ಯಾವಂದನೆಯ ಸಮಯದಲ್ಲಿ ತಾಯಿಯ ಬಳಿ ಕೇಳಿದ ‘‘ಅಮ್ಮ ಪಾರಿವಾಳಗಳು ಸಂಧ್ಯಾವಂದನೆ ಮಾಡುತ್ತವೆಯೇ?’’

ಮಗನ ಪ್ರಶ್ನೆಗೆ ಲಕ್ಷ್ಮಮ್ಮ ನಕ್ಕರು ‘‘ನಿನ್ನ ತಲೆ....ಸುಮ್ಮನಿರು’’

‘‘ನಮಾಝ್ ಮಾಡುವ ಪಾರಿವಾಳಗಳು ಇವೆಯಂತೆ ಗೊತ್ತಾ?’’ ಪಪ್ಪು ರಹಸ್ಯವನ್ನು ತಾಯಿಗೆ ಬಿಚ್ಚಿಟ್ಟ. ‘‘ನಮ್ಮ ಶಾಲೆಯಲ್ಲಿ ಆರು ಪಾರಿವಾಳಗಳಿವೆ. ಅದರಲ್ಲಿ ಒಂದು ಪಾರಿವಾಳ ಮುಸ್ಲಿಮ್ ಅಂತೆ. ಅದು ನಮಾಝ್ ಮಾಡುತ್ತದಂತೆ...’’

ಲಕ್ಷ್ಮಮ್ಮ ಆತಂಕದಿಂದ ಮಗನನ್ನು ನೋಡಿದರು ‘‘ಇದೆಲ್ಲ ಯಾರು ಹೇಳಿಕೊಟ್ಟರೋ...?’’

ಪಪ್ಪು ತನ್ನ ಹೊಸ ಗೆಳೆಯನ ಹೆಸರನ್ನು ಹೇಳಿದ. ಪಾರಿವಾಳದಿಂದಾಗಿ ಕಬೀರ್ ಅವನ ಗೆಳೆಯನಾಗಿ ಬಿಟ್ಟಿದ್ದ. ‘‘ಆ ಪಾರಿವಾಳಕ್ಕೆ ಮುಂಜಿ ಆಗಿದೆಯಂತೆಯೋ?’’ ಲಕ್ಷ್ಮಮ್ಮ ನಗುತ್ತಾ ಕೇಳಿದರು.

ಪಪ್ಪುವಿಗೆ ಅರ್ಥವಾಗಲಿಲ್ಲ. ತಾಯಿಯನ್ನೇ ನೋಡಿದ.

‘‘ಅದೇ ಕಣೋ...ಮುಸ್ಲಿಮರು ಅವರ ಅದರ ತುದಿಯನ್ನು ಕತ್ತರಿಸಿಕೊಳ್ಳುತ್ತಾರೆ...ಪಾರಿವಾಳದ ಅದರ ತುದಿಯನ್ನು ಕತ್ತರಿಸಿದ್ದಾರಂತೆಯೋ....’’

ಆಹಾ! ಇದೊಳ್ಳೆ ಪ್ರಶ್ನೆಯನ್ನು ತಾಯಿ ಕೇಳಿದ್ದಾಳೆ. ಮರುದಿನ ಹೋದವನೇ ಕಬೀರನನ್ನು ಹಿಡಿದುಕೊಂಡ ‘‘ಆ ಮುಸ್ಲಿಮ್ ಪಾರಿವಾಳದ್ದು ಮುಂಜಿ ಮಾಡಿದ್ದು ಯಾರು? ಮುಂಜಿ ಮಾಡದೇ ಮುಸ್ಲಿಮ್ ಆಗುವುದು ಹೇಗೆ?’’

ಕಬೀರ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡ. ಹೌದಲ್ಲ...ಅನ್ನಿಸಿತು. ಆದರೂ ಪಪ್ಪುವಿನ ಮುಂದೆ ಸೋಲಬಾರದಲ್ಲ.

‘‘ಪಕ್ಷಿಗಳಿಗೆ ಅಲ್ಲಾನೇ ಮುಂಜಿ ಮಾಡುತ್ತಾನೆ....ಹುಟ್ಟುವಾಗಲೇ ಅದಕ್ಕೆ ಮುಂಜಿ ಆಗಿರುತ್ತದೆ’’ ಕಬೀರ ಸಲೀಸಾಗಿ ಸಮಸ್ಯೆ ಪರಿಹರಿಸಿ ಬಿಟ್ಟ.

(ರವಿವಾರದ ಸಂಚಿಕೆಗೆ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)