varthabharthi


ಯುದ್ಧ

ಧಾರಾವಾಹಿ-3

ಕಂಚಿಕಲ್ಲಿನ ತಳದ ರಹಸ್ಯ!

ವಾರ್ತಾ ಭಾರತಿ : 29 Jan, 2017

ಕಾದಂಬರಿ

ಪಪ್ಪುವಿಗೆ ಏನು ಉತ್ತರಿಸಬೇಕು ಎಂದು ಗೊತ್ತಾಗ ಲಿಲ್ಲ. ಅಂದಿನಿಂದ ಕಬೀರನು ಪಪ್ಪುವಿಗೆ ಒಂದು ಕೌತುಕದ ಸ್ನೇಹಿತನಾಗಿ ಬಿಟ್ಟ. ಕಬೀರನಿಗೆ ತುಂಬಾ ತುಂಬಾ ವಿಷಯಗಳು ಗೊತ್ತಿದ್ದವು. ಪಾರಿವಾಳಗಳ ಕುರಿತಂತೆ ಅವನಿಗೆ ವಿಶೇಷ ಆಸಕ್ತಿಯಿತ್ತು. ಶಾಲೆಯ ಹಿಂಬದಿಯಲ್ಲಿರುವ ಗುಡ್ಡದಲ್ಲಿ ನೆಲ್ಲಿಕಾಯಿ ಮರವನ್ನು ಪಪ್ಪುವಿಗೆ ತೋರಿಸಿದ್ದೂ ಕಬೀರನೇ. ಪಪ್ಪು ತನ್ನ ಬೆಂಚನ್ನು ಬದಲಿಸಿ, ಕಬೀರ ಕುಳಿತುಕೊಳ್ಳುವ ಹಿಂದಿನ ಬೆಂಚಿಗೆ ಭಡ್ತಿ ಪಡೆದ. ಕಬೀರನ ಜೊತೆಗಿನ ಕೌತುಕಗಳನ್ನೆಲ್ಲ ಪಪ್ಪು ತಾಯಿಯ ಬಳಿ ಹೇಳುವನು.

ಒಂದು ದಿನ ಶನಿವಾರ ಮಧ್ಯಾಹ್ನದ ಗಂಟೆ ಬಾರಿಸಿದ ಬೆನ್ನಿಗೇ ಎಲ್ಲರೂ ದಡಬಡನೆ ಮನೆ ಕಡೆ ಧಾವಿಸುವ ಹೊತ್ತು. ಪಪ್ಪುವಿನ ಹಿಂದೆಯೇ ಬಂದ ಕಬೀರ ಕೇಳಿದ ‘‘ನಿನಗೆ ಈಜು ಬರುತ್ತದೆಯೇ?’’

‘‘ಇಲ್ಲ’’ ಎಂದ ಪಪ್ಪು. ‘‘ನದಿಯಲ್ಲಿ ಸ್ನಾನ ಮಾಡಿಯೇ ಇಲ್ಲವೇ?’’ ಕಬೀರ ಅಚ್ಚರಿಯಿಂದ ಕೇಳಿದ.

‘‘ಇಲ್ಲ, ನಾನು ಮನೆಯಲ್ಲೇ ಬಿಸಿ ನೀರಿನಲ್ಲಿ ಸ್ನಾನ ಮಾಡೋದು..’’ ಪಪ್ಪು ಹೇಳಿದ.

ಶಾಲೆಯ ರಸ್ತೆಯ ಆಚೆಗೆ ಹರಡಿರುವ ದಿನ್ನೆ ದಾಟಿದರೆ ನೇತ್ರಾವತಿ ನದಿಯಿದೆ. ಕಬೀರ ತನ್ನ ಮನೆಯಲ್ಲಿ ಸ್ನಾನ ಮಾಡುವುದೆಂದೇ ಇಲ್ಲ. ಬೆಳ್ಳಂಬೆಳಗ್ಗೆ ಎದ್ದು ನದಿ ಕಡೆ ಸಾಗಿ, ಎಲ್ಲ ಕ್ರಿಯೆಗಳನ್ನು ಮುಗಿಸಿಯೇ ಬರುವುದು.

‘‘ನದಿಗೆ ಹೋಗೋಣ... ನಿನಗೆ ಈಜು ಕಲಿಸುವೆ’’ ಎಂದ ಕಬೀರ.

ಪಪ್ಪು ಬೆಚ್ಚಿ ಬಿದ್ದ. ತಂದೆ ತಾಯಿಗೆ ಹೇಳದೆ ನದಿಯ ಕಡೆಗೆ ಹೋಗುವುದೇ?

‘‘ಬೇಡ ಬೇಡ...ಅಪ್ಪನಿಗೆ ಗೊತ್ತಾದರೆ ಕಷ್ಟ...’’ ಎಂದ. ‘‘ನೀನು ಕಂಚಿಕಲ್ಲು ನೋಡಿಲ್ಲವಾ?’’ ಕಬೀರ ಕೇಳಿದ.

‘‘ಊಹುಂ...ಅದೆಂತದು’’ ‘‘ಅದು ನದಿಯ ಮಧ್ಯದಲ್ಲಿ ಇದೆ. ದೊಡ್ಡ ಬಂಡೆಕಲ್ಲು. ಮಳೆಗಾಲದಲ್ಲಿ ಅದೇನಾದರೂ ಮುಳುಗಿದರೆ ಇಡೀ ಊರು ಮುಳುಗುತ್ತದೆಯಂತೆ...ಗೊತ್ತಾ? ಬಾ...ನೀನು ಸ್ನಾನ ಮಾಡುವುದು ಬೇಡ. ನಿನಗೆ ಕಂಚಿಕಲ್ಲು ತೋರಿಸುತ್ತೇನೆ....’’

ಪಪ್ಪುವಿಗೆ ತನ್ನ ಊರಿನ ನದಿಯ ಮಧ್ಯೆ ಇರುವ ಕಂಚಿಕಲ್ಲನ್ನು ನೋಡಿಯೇಬಿಡುವ ಎಂದು ಆಸೆಯಾಯಿತು. ‘‘ಸರಿ ಹೋಗಿ ನೋಡುವುದು, ವಾಪಸು ಬರುವುದು....’’ ಪಪ್ಪು ವಾಗ್ದಾನ ತೆಗೆದುಕೊಂಡ. ‘‘ಬಾ...ಮಸೀದಿಯ ಅಂಗಳದ ಮೂಲಕ ಒಳದಾರಿ ಇದೆ. ನದಿಗೆ ಹೋಗಲು ಹತ್ತಿರದ ದಾರಿ....’’ ಎಂದ.

ಹೆದ್ದಾರಿಯಾಚೆಗೆ ಮುಸ್ಲಿಮರ ಮಸೀದಿಯೊಂದಿದೆ. ‘‘ಅಯ್ಯೋ...ನಿಮ್ಮ ಮಸೀದಿಯ ಜಾಗದೊಳಗಿಂದ ಹೋಗುವುದಾ...?’’ ಪಪ್ಪು ಹೆದರಿದ.

‘‘ಯಾಕೆ?’’ ಕಬೀರ ಕೇಳಿದ.

‘‘ಅಪ್ಪನಿಗೆ ಗೊತ್ತಾದರೆ ಕೊಂದೇ ಹಾಕಬಹುದು. ಬೇರೆ ಜಾತಿಯವರು ನಿಮ್ಮ ಮಸೀದಿಯ ಒಳಗೆ ಬಂದರೆ ನಿಮ್ಮವರು ಬೈಯುವುದಿಲ್ಲವಾ?’’

‘‘ಹೇ....ನಮ್ಮ ಮಸೀದಿಗೆ ಸುಣ್ಣ ಬಳಿದದ್ದು, ಮೊನ್ನೆ ಮಸೀದಿಯ ಮಾಡು ರಿಪೇರಿ ಮಾಡಿದ್ದು ಬೇರೆ ಜಾತಿಯವರೇ ಅಲ್ಲವಾ? ಹಾಗೇನೂ ಆಗುವುದಿಲ್ಲ. ನಾವು ಮಸೀದಿಯ ಅಂಗಳದ ಮೂಲಕ ಹೋಗುವುದಲ್ಲವಾ? ನದಿಗೆ ಹೋಗುವವರೆಲ್ಲ ಹೀಗೆ ಒಳದಾರಿಯಲ್ಲೇ ಹೋಗುವುದು. ನೀನು ಹೆದರಬೇಡ...ನಾನಿಲ್ಲವಾ?’’ ಕಬೀರ ಅಭಯ ನೀಡಿದ.

ಪಪ್ಪು ಹೆದರುತ್ತಲೇ ಮಸೀದಿಯ ಗೇಟಿನೊಳಗೆ ಕಾಲಿಟ್ಟ. ಮಕ್ಕಳನ್ನು ನೋಡಿ ಮಸೀದಿಯೊಳಗಿಂದ ಗಡ್ಡಧಾರಿ ವ್ಯಕ್ತಿಯೊಬ್ಬರು ಜೋರಾಗಿ ಕೇಳಿದರು ‘‘ಎಲ್ಲಿಗೆ ಮಕ್ಕಳೇ? ಈಜಾಡ್ಲಿಕ್ಕಾ? ಇನ್ನು ನದಿಯ ಮಧ್ಯಕ್ಕೆ ಹೋಗಿ ಅನಾಹುತ ಮಾಡಬೇಡಿ...ಗೊತ್ತಾಯ್ತಲ್ಲ?’’

ಪಪ್ಪು ಕಬೀರನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ. ಕಬೀರ ಗಡ್ಡಧಾರಿಯ ಮಾತನ್ನು ಕೇಳಿಯೂ ಕೇಳದವನಂತೆ ಪಪ್ಪುವನ್ನು ಎಳೆದುಕೊಂಡು ಹೋದ. ಮಸೀದಿಯ ಹಿಂದಿನ ಗೇಟಿನ ಮೂಲಕ ಹೊರಗೆ ಹಾರಿದರೆ, ದೂರದಲ್ಲಿ ನೇತ್ರಾವತಿ ನದಿ ತಣ್ಣಗೆ ಹರಿಯುತ್ತಿತ್ತು.

ಇಬ್ಬರೂ ನದಿಯ ಕಡೆಗೆ ಓಡಿದರು. ‘‘ಓ ಅಲ್ಲಿ ಕಾಣ್ತದಲ್ಲ...ಅದುವೇ ಕಂಚಿಕಲ್ಲು....’’ ಕಬೀರ ತೋರಿಸಿದ.

ದೂರದಲ್ಲಿ ನದಿಯ ಮಧ್ಯೆ ದೊಡ್ಡ, ವಿಶಾಲವಾಗಿ ತಲೆಯೆತ್ತಿ ನಿಂತಿರುವ ಕಲ್ಲು. ಅದರ ಒಂದು ಬದಿ ಚೂಪಾಗಿರುವುದರಿಂದ ‘ಸೂಜಿಕಲ್ಲು’ ಎಂದೂ ಕರೆಯುತ್ತಿದ್ದರು.

‘‘ನಾನು ಈಜಿಕೊಂಡು ಆ ಕಲ್ಲಿನವರೆಗೆ ಹೋಗಿ ಅದರ ತುದಿ ಏರುತ್ತೇನೆ ಗೊತ್ತಾ?’’ ಕಬೀರ ಹೇಳಿದ.

‘‘ಹೌದಾ? ಅಲ್ಲಿ ಆಳ ಇಲ್ಲವಾ?’’

‘‘ಮತ್ತೆ ಇಲ್ಲವೇ? ಕಂಚಿಕಲ್ಲಿನ ಬುಡಕ್ಕೆ ತಳವೇ ಇಲ್ಲವಂತೆ. ಈಜು ಸರಿಯಾಗಿ ಗೊತ್ತಿಲ್ಲದವರು ಅದರ ಬುಡಕ್ಕೆ ಹೋದರೆ ಮುಳುಗುವುದೇಯಾ? ನಿನಗೆ ಗೊತ್ತಾ? ಈ ಕಂಚುಕಲ್ಲನ್ನು ಇಲ್ಲಿಗೆ ಹೊತ್ತು ತಂದದ್ದು ಜಿನ್ನ್‌ಗಳಂತೆ...ನನ್ನ ತಂದೆ ಹೇಳಿದ್ದು....’’

‘‘ಜಿನ್ನುಗಳು ಎಂದರೆ....’’ ಪಪ್ಪು ಹೊಸದಾಗಿ ಅಂತಹದೊಂದು ಶಬ್ದ ಕೇಳಿದ್ದ.

‘‘ಜಿನ್ನುಗಳು ಅಂದರೆ...ದೇವರು ಮನುಷ್ಯರ ಹಾಗೆ ಜಿನ್ನುಗಳನ್ನೂ ಸೃಷ್ಟಿಸಿದ್ದಾನೆ ನಮ್ಮ ಧರ್ಮದಲ್ಲಿ. ಜಿನ್ನುಗಳು ಮನುಷ್ಯರು ಉಳಿದವರಿಗೆ ಕಾಣುವ ಹಾಗೆ ಕಣ್ಣುಗಳಿಗೆ ಕಾಣುವುದಿಲ್ಲ. ಜಿನ್ನುಗಳಲ್ಲಿ ಒಂದೇ ಜಾತಿ. ನಮ್ಮಲ್ಲಿರುವ ಹಾಗೆ ಬೇರೆ ಬೇರೆ ಧರ್ಮ ಇಲ್ಲ. ಆದರೆ ಕೆಟ್ಟ ಜಿನ್ನ್ನುಗಳು, ಒಳ್ಳೆಯ ಜಿನ್ನುಗಳು ಅಂತ ಇವೆ. ಈ ಕಂಚಿಕಲ್ಲನ್ನು ಇಲ್ಲಿಗೆ ಹೊತ್ತುಕೊಂಡು ತಂದದ್ದು ಒಳ್ಳೆಯ ಜಿನ್ನುಗಳಂತೆ....ಮತ್ತು ಈ ಕಂಚಿಕಲ್ಲಿನ ಬುಡದಲ್ಲಿ ಹಲವು ಜಿನ್ನುಗಳು ವಾಸವಾಗಿದ್ದವಂತೆ. ಜೊತೆಗೆ ಬುಡದಲ್ಲಿ ತುಂಬಾ ಚಿನ್ನ ಇದ್ದವಂತೆ...ಮುಸ್ಲಿಮ್ ಹೆಂಗಸರು ತಮಗೆ ಮದುವೆ ಸಮಾರಂಭಗಳಿಗೆಲ್ಲ ಹೋಗಬೇಕಾದರೆ, ಈ ಜಿನ್ನುಗಳು ಚಿನ್ನಾಭರಣಗಳನ್ನು ಸಾಲವಾಗಿ ಕೊಡುತ್ತಿದ್ವಂತೆ....ಆದರೆ ಹಾಗೆಯೇ ವಾಪಸು ತಂದು ಕೊಡಬೇಕು ಎನ್ನುವುದು ಷರತ್ತು...’’

ಪಪ್ಪು ಬೆಕ್ಕಸಬೆರಗಾಗಿ ಕಬೀರ ಹೇಳುವ ಕತೆಯನ್ನು ಕೇಳುತ್ತಿದ್ದ. ಅವನು ಈವರೆಗೆ ಕೇಳಿದ ಯಾವ ಪುರಾಣಕತೆಗಳಲ್ಲೂ ಇಂತಹ ವಿಷಯಗಳಿರಲಿಲ್ಲ. ತನ್ನ ಕಣ್ಣೆದುರೇ ತಲೆಯೆತ್ತಿ ನಿಂತಿರುವ ಕಂಚುಕಲ್ಲಿನ ಬಗ್ಗೆ ಇಷ್ಟೆಲ್ಲವನ್ನು ಕಬೀರ ಹೇಳುತ್ತಿರುವುದು ಅವನಿಗೆ ನಂಬಲು ಅಸಾಧ್ಯವಾಗಿತ್ತು.

‘‘ಈಗಲೂ ಜಿನ್ನುಗಳು ಚಿನ್ನ ಸಾಲ ಕೊಡುತ್ತವಾ...ನೀನು ಕಂಚಿಕಲ್ಲಿನ ಬುಡದಲ್ಲಿ ಜಿನ್ನುಗಳು ಇರುವುದನ್ನು ನೋಡಿದ್ದೀಯ...?’’

‘‘ಅದೊಂದು ದೊಡ್ಡ ಕತೆ. ಮನುಷ್ಯರು ಕೇಳಿದಾಗಲೆಲ್ಲ ಜಿನ್ನುಗಳು ಚಿನ್ನ ಸಾಲಕೊಡುತ್ತಿದ್ದವಂತೆ. ಈ ತೀರದಲ್ಲಿ ನಿಂತು ಜೋರಾಗಿ ಕರೆದರೆ ಜಿನ್ನುಗಳೇ ಬರುತ್ತಿದ್ದವಂತೆ. ಮನುಷ್ಯರು ಮತ್ತು ಜಿನ್ನುಗಳ ಸಂಬಂಧ ಅಷ್ಟು ಚೆನ್ನಾಗಿತ್ತು. ಅದೊಂದು ದಿನ ಪಾಪಮ್ಮ ಎಂಬ ಹೆಂಗಸು ಮದುವೆಗೆ ಹೋಗಲೆಂದು ಚಿನ್ನವನ್ನು ಸಾಲವಾಗಿ ತೆಗೆದುಕೊಂಡು ಹೋದಳಂತೆ. ಹಾಗೆ ತೆಗೆದುಕೊಂಡು ಹೋದವಳಿಗೆ ಚಿನ್ನದ ಮೇಲೆ ದುರಾಸೆ ಹುಟ್ಟಿತು. ಇದನ್ನು ವಾಪಸು ಕೊಡುವುದು ಯಾಕೆ? ನಾನೆ ಇಟ್ಟುಕೊಳ್ಳುವೆ...ಜಿನ್ನುಗಳಿಗೆ ಚಿನ್ನ ಯಾಕೆ? ಅವುಗಳಿಗೆ ಮದುವೆಯೋ, ಮುಂಜಿಯೋ? ಎಂದು ಅವಳು ಕೊಡಲೇ ಇಲ್ಲವಂತೆ. ಜಿನ್ನುಗಳಿಗೆ ಇದರಿಂದ ತುಂಬಾ ಬೇಜಾರಾಯಿತು. ಮನುಷ್ಯರು ತುಂಬಾ ಸ್ವಾರ್ಥಿಗಳು ಎಂದು ಅವುಗಳು ಮಾತನಾಡಿಕೊಂಡವು. ಹಾಗೆಯೇ ಪಾಪಮ್ಮನಿಗೆ ಪಾಠಕಲಿಸಬೇಕು ಎಂದು ಒಂದು ಕೆಟ್ಟ ಜಿನ್ನನ್ನು ಪಾಪಮ್ಮನ ಮೈಮೇಲೆ ಆವಾಹಿಸಲು ಕಳುಹಿಸಿದವಂತೆ. ಜಿನ್ನು ಮೈಮೇಲೆ ಬಂದು ಪಾಪಮ್ಮನಿಗೆ ಹುಚ್ಚು ಹಿಡಿಯಿತು. ಒಂದು ದಿನ ತನ್ನಲ್ಲಿರುವ ಬಂಗಾರದ ಜೊತೆಗೆ ಪಾಪಮ್ಮ ಪೋಪಮ್ಮ....ಪಾಪಮ್ಮ ಪೋಪಮ್ಮ.... ಎಂದು ಚೀರುತ್ತಾ ಕಂಚಿಕಲ್ಲಿನ ಬುಡಕ್ಕೆ ಹಾರಿ ಸತ್ತಳಂತೆ. ಬಳಿಕ ಈ ಮನುಷ್ಯರ ಸಹವಾಸವೇ ಬೇಡ ಎಂದು ತಮ್ಮಲ್ಲಿರುವ ಎಲ್ಲ್ಲ ಚಿನ್ನ, ಆಭರಣಗಳ ಜೊತೆಗೆ ಜಿನ್ನುಗಳು ಕಂಚುಕಲ್ಲಿನಿಂದ ಬೇರೆ ಕಡೆಗೆ ವಲಸೆ ಹೋದವಂತೆ.....’’

ಈಗ ಅಲ್ಲಿ ಜಿನ್ನುಗಳು ಇಲ್ಲ ಎನ್ನುವುದು ಪಪ್ಪುವಿಗೆ ಸಮಾಧಾನ ಕೊಟ್ಟಿತು. ಆದರೂ ಅವನು ಕತೆಯಿಂದ ಹೆದರಿದ್ದ. ‘‘ನನಗೆ ಮನೆಗೆ ಹೋಗಬೇಕು...ತಂದೆಗೆ ಗೊತ್ತಾದರೆ ಕೊಂದೇ ಹಾಕುತ್ತಾರೆ...’’ ಪಪ್ಪು ಮನೆಗೆ ಹೋಗಲು ಅವಸರಿಸಿದ.

‘‘ನೀನು ಈಜು ಕಲಿಯುವುದಿಲ್ಲವಾ?’’ ಕಬೀರ ಕೇಳಿದ.

‘‘ಬೇಡ..ಬೇಡ. ಇನ್ನೊಮ್ಮೆ ತಾಯಿಯ ಬಳಿ ಹೇಳಿ ಬರುವೆ. ಆಗ ಕಲಿಯುವ...’’

‘‘ಹಾಗಾದರೆ ನಾನು ನದಿಗೆ ಇಳಿದು ಕಂಚಿಕಲ್ಲಿನವರೆಗೆ ಈಜಿ ಅದರ ಮೇಲೆ ಹತ್ತಿ ತೋರಿಸಲಾ?’’

‘‘ಬೇಡ...ಬೇಡ...ನನಗೆ ಭಯವಾಗುತ್ತದೆ. ಇನ್ನೊಮ್ಮೆ ಬರುವ’’ ಎಂದ ಪಪ್ಪು. ಕೊನೆಗೂ ಒಲ್ಲದ ಮನಸ್ಸಿನಿಂದ ಕಬೀರ ಅಲ್ಲಿಂದ ಹೊರಟ. ಅಂದು ರಾತ್ರಿ ಪಪ್ಪು ತಾಯಿಯ ಜೊತೆಗೆ ಹೊಸ ಪ್ರಶ್ನೆ ಇಟ್ಟಿದ್ದ ‘‘ಅಮ್ಮಾ, ಜಿನ್ನ್ನುಗಳು ಎಂದರೆ ಏನು?’’

ಮಗನ ಪ್ರಶ್ನೆಯೇ ತಾಯಿಗೆ ಅರ್ಥವಾಗಲಿಲ್ಲ.

‘‘ನನಗೇನು ಗೊತ್ತಿಲ್ಲ ಮಗ. ನಿನ್ನ ತಂದೆಯ ಬಳಿ ಕೇಳು...’’ ಲಕ್ಷ್ಮಮ್ಮ ಉತ್ತರಿಸಿದರು.

‘‘ನೀನು ಕಂಚಿಕಲ್ಲು ನೋಡಿದ್ದೀಯ?’’ ಮಗ ಇನ್ನೊಂದು ಪ್ರಶ್ನೆ ಕೇಳಿದ.

ಈಗ ಲಕ್ಷ್ಮಮ್ಮ ಹೆದರಿ ಬಿಟ್ಟರು. ‘‘ಏನೋ...ನದಿಗೆ ಈಜುವುದಕ್ಕೇನಾದರೂ ಹೋಗಿದ್ದೀಯೇನೋ...?’’

‘‘ಇಲ್ಲಮ್ಮ...ಕಬೀರ ಹೇಳಿದ...ಕಂಚಿಕಲ್ಲು ಮುಳುಗಿದರೆ ಇಡೀ ಊರೇ ಮುಳುಗುತ್ತದೆಯಂತೆ...ಹೌದಾ...?’’

‘‘ಅದೇನೋ ಗೊತ್ತಿಲ್ಲ. ಕಂಚಿಕಲ್ಲು ಮುಳುಗಿದರೆ, ಉಪ್ಪಿನಂಗಡಿಯಲ್ಲಿ ಸಂಗಮ ಆಗುತ್ತದೆ ಎನ್ನುವುದನ್ನು ಕೇಳಿದ್ದೆ....ನಿನಗೆ ಅದೆಲ್ಲ ಯಾಕೆ? ನದಿ ಕಡೆ ಏನಾದರೂ ಹೋದರೆ, ಅಪ್ಪನಿಗೆ ಹೇಳಿ ಚರ್ಮ ಸುಲಿಸ್ತೇನೆ. ಸಂಗೀತ ಮೇಷ್ಟ್ರ ಮನೆಗೆ ಶನಿವಾರ ಹೋಗು ಎಂದರೆ ಅದಕ್ಕೆ ನಿನಗೆ ಪುರುಸೊತ್ತಿಲ್ಲ. ಆ ಬ್ಯಾರಿ ಜೊತೆಗೆ ಅಲೆದಾಡಿ ಅದೇನೇನೋ ತಲೆಯಲ್ಲಿಟ್ಟು ಯೋಚಿಸ್ತೀಯಾ?’’ ಲಕ್ಷ್ಮಮ್ಮ ತರಾಟೆಗೆ ತೆಗೆದುಕೊಂಡರು. ಒಂದು ದಿನ ಮಗನ ಮಾತುಗಳು ಅನಂತ ಭಟ್ಟರ ಕಿವಿಗೆ ಬಿದ್ದವು.

ಅವರು ಮಗನನ್ನು ಬಳಿಗೆ ಕರೆದು ಖಡಕ್ಕಾಗಿ ನುಡಿದರು ‘‘ನೋಡು ಬ್ಯಾರಿಗಳ ಸಹವಾಸ ಒಳ್ಳೆಯದಲ್ಲ. ಅವರು ಕಲಿಯುವುದರಲ್ಲಿ ಬಹಳ ದಡ್ಡರು. ಸ್ವಲ್ಪ ದೊಡ್ಡದಾದಾಕ್ಷಣ ಶಾಲೆ ಬಿಟ್ಟು ಕೊಲ್ಲಿ ರಾಷ್ಟ್ರಕ್ಕೆ ಹೋಗಿ ದುಡ್ಡು ಬಾಚಿಕೊಂಡು ಬರ್ತಾರೆ. ಕಾರು, ಜೀಪು ಅಂತ ಮೆರೀತಾರೆ. ನೀನು ಶಾಲೆ ಕಲಿಯುವುದರ ಕಡೆಗೆ ಗಮನ ಕೊಡು’’

ಆದರೆ ಕಬೀರನ ಸ್ನೇಹವನ್ನು ಕಡಿದುಕೊಳ್ಳುವುದು ಅಷ್ಟು ಸುಲಭವಲ್ಲ ಎನ್ನುವುದು ಅವನಿಗೆ ಗೊತ್ತಿತ್ತು. ಬಳಿಕ ಕಬೀರನ ಮಾತುಗಳನ್ನು ಮನೆಯೊಳಗೆ ತರುವುದನ್ನು ಬಿಟ್ಟ. ಆದರೆ ಯಾವಾಗ ಜಾನಕಿಯ ಭೇಟಿಯಾಯಿತೋ, ಕಬೀರನಿಂದ ದೂರವಾಗುವುದು ಅವನಿಗೆ ಅನಿವಾರ್ಯವಾಯಿತು.

***

ಜಾನಕಿಯನ್ನು ಪಪ್ಪು ಭೇಟಿ ಮಾಡಿದ್ದು ಒಂದು ಆಕಸ್ಮಿಕ ಘಳಿಗೆಯಲ್ಲಿ. ತನ್ನ ತಂದೆಯ ಜೊತೆಗೆ ಪಪ್ಪು ಅದೆಷ್ಟೋ ಬಾರಿ ಗುರೂಜಿಯ ಮನೆಗೆ ಹೋಗಿದ್ದನಾದರೂ ಅಲ್ಲಿ ಜಾನಕಿಯನ್ನು ಆತ ಗಮನಿಸಿರಲೇ ಇಲ್ಲ ಅಥವಾ ಅವನಿಗೆ ಗಮನಿಸಬೇಕು ಎಂದು ಅನ್ನಿಸಿರಲೂ ಇಲ್ಲ. ವಿಶೇಷವೆಂದರೆ ಅವರಿಬ್ಬರೂ ಒಂದೇ ತರಗತಿಯಲ್ಲಿ ಕಲಿಯುತ್ತಿದ್ದರೂ, ಆಕೆ ಆತನಿಗೆ ವಿಶೇಷ ಅನ್ನಿಸಿರಲಿಲ್ಲ. ಆಕೆ ಭಾಷಣ ಪ್ರವೀಣೆಯಾಗಿದ್ದಳು. ಪ್ರತಿಬಾರಿ ತರಗತಿಯಲ್ಲಿ ಭಾಷಣ ಮಾಡಿದಾಗಲೂ ಆಕೆಯೇ ಪ್ರಥಮ ಬಹುಮಾನ ಪಡೆಯುತ್ತಿದ್ದಳು. ಆದರೂ ಆಕೆಯನ್ನು ಪಪ್ಪು ವಿಶೇಷವಾಗಿ ಹಚ್ಚಿಕೊಂಡದ್ದಿಲ್ಲ. ಮುಖ್ಯವಾಗಿ, ಪಪ್ಪುವನ್ನು ಕಂಡು ಜಾನಕಿಯೂ ಮಾತನಾಡುತ್ತಿರಲಿಲ್ಲ. ಅಥವಾ ಅವರ ನಡುವೆ ಮಾತನಾಡುವುದೇನೂ ಇರುತ್ತಿರಲಿಲ್ಲ.

(ಗುರುವಾರದ ಸಂಚಿಕೆಗೆ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)