varthabharthi


ಯುದ್ಧ

ಧಾರಾವಾಹಿ-8

ಹುತಾತ್ಮನಾಗುವ ಕನಸು

ವಾರ್ತಾ ಭಾರತಿ : 15 Feb, 2017

‘‘ಅಪ್ಪ ಹಾಸ್ಟೆಲ್‌ಗೆ ಬಂದಾಗೆಲ್ಲ ನಿನ್ನ ಬಗ್ಗೆಯೇ ಮಾತಾಡ್ತಾ ಇರ್ತಾರೆ. ನೀನು ಎನ್‌ಸಿಸಿಗೆ ಸೇರಿದ್ದು ಅವರೇ ಹೇಳಿದ್ದರು. ಪ್ರತಾಪ ಸಿಂಹ ಏನನ್ನಾದರೂ ಸಾಧಿಸಿಯೇ ಸಾಧಿಸುತ್ತಾನೆ...ಎಂದೂ ಭರವಸೆ ವ್ಯಕ್ತಪಡಿಸಿದ್ದರು’’ ಜಾನಕಿ ಹೇಳಿದಾಗ ಪಪ್ಪುವಿಗೆ ಆಕಾಶಕ್ಕೆ ಮೂರೇ ಗೇಣು.

‘‘ನಿನ್ನನ್ನು ಭೇಟಿ ಮಾಡುವುದಕ್ಕಾಗಿ ನಾನು ಎಷ್ಟು ಕಾದಿದ್ದೆ ಗೊತ್ತಾ?’’ ಪಪ್ಪು ಆಕ್ಷೇಪದ ಧ್ವನಿಯಲ್ಲಿ ಕೇಳಿದ.

‘‘ಸೈನ್ಸ್‌ನಲ್ಲಿ ತುಂಬಾ ಓದೋದಕ್ಕೆ ಇದೆ ಕಣೋ....ಅಲ್ಲಿ ಪುರುಸೊತ್ತೇ ಇರೋದಿಲ್ಲ...ಪ್ರತೀ ದಿನ ತಂದೆ ಫೋನ್‌ನಲ್ಲಿ ಓದು ಓದು ಅಂತಿರ್ತಾರೆ...’’ ಬೇಜಾರಿನಿಂದ ಜಾನಕಿ ಹೇಳಿದಳು.

ದೀಪಾವಳಿಯ ಮೂರೂ ದಿನವನ್ನು ಜಾನಕಿಯ ಜೊತೆಗೇ ಕಳೆದಿದ್ದ ಪಪ್ಪು. ಇಬ್ಬರ ಮನೆಯಲ್ಲೂ ಸಂಭ್ರಮ. ಅನಂತಭಟ್ಟರು, ಸುಬ್ಬಣ್ಣ ಮೇಷ್ಟ್ರು, ಗುರೂಜಿ ಕುಟುಂಬ ಸಮೇತ ಒಟ್ಟಾಗಿ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆದರೆ ದೀಪಾವಳಿ ಮುಗಿದದ್ದೇ ಜಾನಕಿ, ಪಪ್ಪುವಿಗೆ ಹೇಳದೇ ಕೇಳದೇ ಪುತ್ತೂರಿಗೆ ಹೊರಟು ಬಿಟ್ಟಿದ್ದಳು. ಆಮೇಲೆ ಪಪ್ಪು ಮತ್ತು ಜಾನಕಿ ಭೇಟಿ ಮಾಡಿದ್ದು ಅಷ್ಟಕ್ಕಷ್ಟೇ. ಪಪ್ಪು ಆಗಾಗ ತನ್ನ ತಾಯಿಯಲ್ಲಿ ಜಾನಕಿಯ ಕುರಿತಂತೆ ವಿಚಾರಿಸುತ್ತಿದ್ದ.

‘‘ಅಮ್ಮಾ ಗುರೂಜಿಯ ಮನೆಗೆ ಹೋಗಿದ್ದೆಯ?’’

‘‘ಯಾಕೆ ಮಗಾ?’’

‘‘ಜಾನಕಿ ಬಂದಿದ್ದಾಳ?’’

‘‘ಇಲ್ಲ ಮಗಾ. ಅವಳಿಗೆ ತುಂಬಾ ಓದುವುದಕ್ಕೆ ಉಂಟಂತೆ...ಸೈನ್ಸ್ ಅಲ್ಲವಾ?’’

ಸೈನ್ಸ್ ಅಂದರೆ ಏನು? ಪಾಕಿಸ್ತಾನದ ಉಗ್ರನ ಹೆಸರನ್ನು ಹೇಳುವಂತೆ ಇವರೆಲ್ಲ ಸೈನ್ಸ್ ಬಗ್ಗೆ ಮಾತನಾಡುತ್ತಿದ್ದಾರಲ್ಲ? ಆರ್ಟ್ಸ್‌ನಲ್ಲಿ ಏನು ಸುಲಭ ಇದೆಯಾ? ಎಲ್ಲವನ್ನೂ ಇಂಗ್ಲಿಷ್‌ನಲ್ಲೇ ಓದಬೇಕು. ಅದೇನು ಸಣ್ಣ ವಿಷಯವಾ?

ಒಳಗೊಳಗೆ ಅವನು ಸಿಟ್ಟಾಗುತ್ತಿದ್ದ. ಇಡೀ ಊರು ಅವನಿಗೆ ಬಣಬಣ ಅನ್ನುತ್ತಿತ್ತು. ಕಬೀರ ಎಸೆಸೆಲ್ಸಿಯಲ್ಲಿ ಫೇಲಾಗಿದ್ದ. ಆಗೊಮ್ಮೆ ಈಗೊಮ್ಮೆ ಅವನಿಗೆ ಕಾಣ ಸಿಕ್ಕಿದರೂ, ಇವನು ಜಾಣತನದಿಂದ ತಪ್ಪಿಸಿಕೊಳ್ಳುತ್ತಿದ್ದ. ಕಬೀರನೆಂದರೆ ಅವನಿಗೆ ತುಂಬಾ ಸಿಟ್ಟು.ಯಾಕೆ ಎಂದು ಅವನಿಗೇ ಗೊತ್ತಿರಲಿಲ್ಲ.

ಇತ್ತ ಜಾನಕಿಯ ಭೇಟಿ ಕಷ್ಟವಾದಂತೆಲ್ಲ ಅವನೊಳಗೆ ಆಕೆ ಇನ್ನಷ್ಟು ವಿಸ್ತಾರವಾಗುತ್ತಿದ್ದಳು. ಒಂಟಿಯಾಗಿ ಬಯಲು, ಗುಡ್ಡ ಅಲೆಯುತ್ತಿದ್ದಾಗ ಜಾನಕಿ ತನ್ನ ಜೊತೆಗಿದ್ದಾಳೆ ಎಂದು ಕಲ್ಪಿಸಿಕೊಂು ತನಗೆ ತಾನೆ ಮಾತನಾಡುತ್ತಿದ್ದ.

‘‘ನಾನು ಸೇನೆ ಸೇರಿದರೆ ಎರಡು ವರ್ಷ ವಾಪಾಸು ಬರುವುದಿಲ್ಲ. ಆಗ ಏನು ಮಾಡುತ್ತೀಯ?’’ ಪಪ್ಪು ತನ್ನ ಪಕ್ಕದಲ್ಲೇ ನೆರಳಂತೆ ಹಿಂಬಾಲಿಸುತ್ತಿದ್ದ ಜಾನಕಿಯನ್ನು ಕಲ್ಪಿಸಿಕೊಂಡು ಕೇಳುತ್ತಿದ್ದ.

‘‘ನಾನೇ ನಿನ್ನನ್ನು ಹುಡುಕಿಕೊಂಡು ಸೇನೆಗೆ ಬಂದು ಬಿಡುವೆ’’ ಅವನೇ ಜಾನಕಿಯಾಗಿ ಉತ್ತರಿಸುತ್ತಿದ್ದ.

‘‘ಆದರೆ, ಆಗ ನಾನು ಯುದ್ಧಭೂಮಿಯಲ್ಲಿದ್ದರೆ?’’

‘‘ನಿನಗಾಗಿ ಯಾವ ಯುದ್ಧಭೂಮಿಗೂ ಪ್ರವೇಶಿಸಬಲ್ಲೆ....’’

ಪಪ್ಪು ಭಾವುಕನಾಗುತ್ತಿದ್ದ. ತನಗಾಗಿ ಯುದ್ಧಭೂಮಿಗೂ ಪ್ರವೇಶಿಸಲು ಸಿದ್ಧವಿರುವ ಜಾನಕಿಯನ್ನು ಮನದಲ್ಲೂ, ಕಣ್ಣಲ್ಲೂ ತುಂಬಿಕೊಂಡು ಗದ್ಗದನಾಗಿ ಹೇಳುತ್ತಿದ್ದ ‘‘ಬೇಡ...ಆರು ತಿಂಗಳಿಗೊಮ್ಮೆ ಸೇನೆಯಲ್ಲಿ ರಜಾ ಸಿಗುತ್ತದೆಯಂತೆ...ನಾನೇ ಬರುತ್ತೇನೆ. ನನಗಾಗಿ ನೀನು ಯಾವತ್ತೂ ಯುದ್ಧಭೂಮಿಗೆ ಬರಬೇಡ....ಅಲ್ಲೆಲ್ಲ ಶತ್ರುಗಳಿರುತ್ತಾರೆ...ಅವರು ಗುಂಡು ಹಾರಿಸುತ್ತಾರೆ...’’

ಮನೆಯ ಹಿತ್ತಲನ್ನು ಒತ್ತಿಕೊಂಡು ಗುಡ್ಡವಿದೆ. ಅವುಗಳನ್ನು ಅವನು ಹಿಮಾಲಯವೆಂದು ಭಾವಿಸಿಕೊಂಡು ನೋಡುತ್ತಾನೆ. ಅದರಾಚೆಗೆ ಪಾಕಿಸ್ತಾನವಿದೆಯೆಂದೂ ಭಾವಿಸಿಕೊಂಡು ಅವನು ಆ ಗುಡ್ಡವನ್ನು ಏರುತ್ತಾನೆ. ಸುತ್ತಮುತ್ತಲೆಲ್ಲ ಯುದ್ಧಭೂಮಿಯನ್ನು ಕಲ್ಪಿಸಿಕೊಂಡು ತನಗೆ ತಾನೇ ಮಾತನಾಡುತ್ತಿರುತ್ತಾನೆ. ಒಂದು ದಿನ ಲಕ್ಷ್ಮಮ್ಮ ಮಗನನ್ನು ಹುಡುಕುತ್ತಾ ಬಂದವಳು ಮಗ ಯಾರ ಜೊತೆಗೋ ಮಾತನಾಡುತ್ತಿರುವುದು ಕೇಳಿ ಆತಂಕಗೊಂಡರು.

‘‘ಪಪ್ಪು, ಯಾರ ಜೊತೆ ಮಾತನಾಡುತ್ತಿದ್ದಿಯೋ?’’

‘‘ಪಾಕಿಸ್ತಾನದಲ್ಲಿರುವ ಭಾರತದ ಶತ್ರುಗಳ ಜೊತೆಗಮ್ಮ?’’

ತಾುಗೆ ಮಗನ ಮಾತು ಅರ್ಥವಾಗಲಿಲ್ಲ.

‘‘ಏನಾಗಿದೆಯೋ ನಿನಗೆ? ತಲೆಕೆಟ್ಟ ಹಾಗೆ ಮಾತನಾಡುತ್ತಿದ್ದೀಯ?’’ ಎಂದು ಮನನ್ನು ಹತ್ತಿರ ಎಳೆದುಕೊಂಡರು.

‘‘ನಾನು ಸೇನೆಗೆ ಸೇರುತ್ತೇನಮ್ಮ’’ ಪಪ್ಪು ತಾಯಿಯ ಮುಂದೆ ಮೊದಲ ಬಾರಿಗೆ ಬಾಯಿ ಬಿಟ್ಟ.

‘‘ಎಂತ ಸೇನೆ? ಮರ್ಯಾದೆಯಾಗಿ ಶಾಲೆಗೆ ಹೋಗಬೇಕು...ಬರಬೇಕು...ಅಪ್ಪನ ಶಾಲೆಯಲ್ಲಿ ಮೇಷ್ಟ್ರಾಗಿ ಕೆಲಸ ಮಾಡು...ಇಲ್ಲ ನಿನ್ನ ತಾತನ ಹಾಗೆ ದೊಡ್ಡ ಸಂಗೀತ ವಿದ್ವಾಂಸನಾಗು...’’ ತಾಯಿ ಜೋರಿನಲ್ಲಿ ಹೇಳಿದಳು.

‘‘ನಾನು ಸೇನೆಗೆ ಸೇರಿ, ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಹುತಾತ್ಮನಾಗುತ್ತೇನೆ’’ ಪಪ್ಪು ತನ್ನ ಗುರಿಯನ್ನು ಹೇಳಿಯೇ ಬಿಟ್ಟ.

ಆ ಮಾತಿಗೆ ಲಕ್ಷ್ಮಮ್ಮ ವಿಲವಿಲ ಒದ್ದಾಡಿ ಬಿಟ್ಟರು.

ಅಂದು ರಾತ್ರಿ ಗಂಡನ ಜೊತೆಗೆ ಯುದ್ಧಕ್ಕೆ ನಿಂತರು ‘‘ಅವನೆಂತದು, ತಲೆಗೆಟ್ಟ ಹಾಗೆ ಮಾತನಾಡುತ್ತಾನೆ....ಸೇನೆ ಅಂತೆ, ಯುದ್ಧ ಅಂತೆ...’’

ಅನಂತ ಭಟ್ಟರು ಮಾತ್ರ ಮಗನ ನಿರ್ಧಾರ ಕೇಳಿ ಭಾವುಕರಾಗಿ ಬಿಟ್ಟಿದ್ದರು. ಅವನು ಸೇನೆ ಸೇರುತ್ತಾನೋ, ಬಿಡುತ್ತಾನೋ ಆದರೆ ಮಗನ ದೇಶಪ್ರೇಮ ಅವರೊಳಗೆ ಸಂಭ್ರಮವನ್ನು ಹುಟ್ಟು ಹಾಕಿತ್ತು.

‘‘ಪ್ರತಾಪ ಸಿಂಹ ಎಂದು ಹೆಸರಿಟ್ಟ ಮೇಲೆ, ಸೇನೆಗೆ ಸೇರಬಾರದು ಎಂದರೆ ಆಗುತ್ತದೆಯೇ?’’ ಅನಂತಭಟ್ಟರು ತಮಾಷೆಯಾಗಿ ಹೆಂಡತಿಯ ಬಳಿ ಕೇಳಿದರು.

‘‘ಅದಕ್ಕೆ ನಾನು ಹೇಳಿದ್ದು...ಇವನಿಗೆ ಮುಕುಂದ ಅಂತ ಹೆಸರಿಡಬೇಕಾಗಿತ್ತು...’’ ಲಕ್ಷ್ಮಮ್ಮ ಸಿಟ್ಟಿನಿಂದ ಉತ್ತರಿಸಿದರು.

‘‘ಈಗ ಎಂತ ಮಾಡುವುದು? ಈಗ ಇರುವ ಹೆಸರನ್ನು ಉಜ್ಜಿ ಹಾಕಿ, ಹೊಸ ಹೆಸರು ಇಡುವುದಾ?’’ ಅನಂತ ಭಟ್ಟರು ಮತ್ತೆ ನಗುತ್ತಾ ಕೇಳಿದರು.

ಲಕ್ಷ್ಮಮ್ಮನ ಎೆ ಮಾತ್ರ ಹೊಡೆದುಕೊಳ್ಳುತ್ತಿತ್ತು.

ಮರುದಿನ ಮಗನ ಜೊತೆಗೆ ಗುರೂಜಿ ಮನೆಗೆ ಹೋಗಿದ್ದರು ಅನಂತಭಟ್ಟರು.

ಮಗನ ನಿರ್ಧಾರವನ್ನು ಗುರೂಜಿ ಜೊತೆಗೆ ಹಂಚಿಕೊಂಡು ಸಂಭ್ರಮಪಟ್ಟರು. ಗುರೂಜಿಯವರು ಪಪ್ಪುವನ್ನು ಬಳಿಗೆ ಕರೆದು ತಲೆಸವರಿ ಕಣ್ಣೊರೆಸಿಕೊಂಡರು.

‘‘ಈ ಹುಡುಗರಲ್ಲಿ ಇರುವ ದೇಶಪ್ರೇಮ, ಇಂದಿನ ಯುವಕರಲ್ಲಿ, ಹಿರಿಯರಲ್ಲಿ ಇದ್ದಿದ್ದರೆ ಈ ದೇಶಕ್ಕೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಪಾಕಿಸ್ತಾನಿಯರು ಇಷ್ಟು ಸೊಕ್ಕುತ್ತಿರಲಿಲ್ಲ.ಪ್ರತಾಪಸಿಂಹನಂತಹ ಮಕ್ಕಳೇ ನಮ್ಮ ಭರವಸೆ....ಲೇ ಇವಳೇ ಇಲ್ಲಿ ಬಾ...ನಮ್ಮ ಹುಡುಗನನ್ನು ನೋಡು...’’ ಎಂದು ಪತ್ನಿ ಪದ್ಮನನ್ನು ಕೂಗಿ ಕರೆದರು.

ಜಾನಕಿಯ ತಾಯಿಯೂ ಪಪ್ಪುವನ್ನು ಕರೆದು ತಲೆಸವರಿದರು. ಅಡುಗೆ ಮನೆ ಒಳಗೆ ಕರೆದೊಯ್ದು ಅಕ್ಕಿಯ ಉಂಡೆಯೊಂದನ್ನು ಅವನ ಕೈಗಿತ್ತರು. ಅವರು ತನ್ನ ಕೈಗೆ ಕೊಟ್ಟದ್ದು ಅಕ್ಕಿಯ ಉಂಡೆಯಲ್ಲ, ಸ್ವತಃ ಜಾನಕಿಯನ್ನೇ ತನಗೆ ಒಪ್ಪಿಸಿದರು ಎಂದು ಪಪ್ಪು ಸಂಭ್ರಮ ಪಟ್ಟ. ಆ ಉಂಡೆಯನ್ನು ಚಡ್ಡಿಯ ಕಿಸೆಯೊಳಗೆ ಇಟ್ಟುಕೊಂಡ. ಅಂದು ರಾತ್ರಿ ಅನಂತಭಟ್ಟರು ತನ್ನ ಪತ್ನಿಯಲ್ಲಿ ಮಗನ ಹಿರಿಮೆಯನ್ನು ಕೊಂಡಾಡಿದರು. ಗುರೂಜಿ ತನ್ನ ಮಗನ ಕುರಿತಂತೆ ಎಷ್ಟು ಅಭಿಮಾನ ಪಟ್ಟರು ಎನ್ನುವುದನ್ನು ಹೇಳಿದರು.

ಇತ್ತ ಪಪ್ಪು ಕೈಯಲ್ಲಿದ್ದ ಉಂಡೆಯನ್ನು ತಿನ್ನಲು ಮನಸಾಗದೆ ಹಾಗೆ ಉಳಿಸಿಕೊಂಡಿದ್ದ.

ಮರುದಿನ ಬೆಳಗ್ಗೆ ಎದ್ದು ನೋಡಿದರೆ, ಉಂಡೆಯ ತುಂಬಾ ಇರುವೆಗಳು!

ಅಷ್ಟರಲ್ಲಿ ತಾಯಿ ಬಂದರು ‘‘ಎಂತದೋ ಅದು? ಎಲ್ಲಿಂದ ತಂದಿಯೋ?’’ ಕೇಳಿದರು.

‘‘ಜಾನಕಿಯ ತಾಯಿ ಕೊಟ್ಟರು...’’ ಪಪ್ಪು ಹೇಳಿದ.

‘‘ತಿನ್ನದೇ ಅದನ್ನು ಇಟ್ಟುಕೊಂಡದ್ದು ಯಾಕೆ? ಈಗ ನೋಡು ಎಲ್ಲ ಇರುವೆ ತಿಂದು ಬಿಟ್ಟಿದೆ. ಎಸೆದು ಬಿಡು ಅದನ್ನು’’ ಲಕ್ಷ್ಮಮ್ಮ ಹೇಳಿದರು.

ಪಪ್ಪುವಿನ ಕಣ್ಣು ತುಂಬಿತ್ತು. ತಿನ್ನಲು ಆಗದು. ಉಳಿಸಿಕೊಳ್ಳಲೂ ಆಗದು. ಏನು ಮಾಡಲಿ...? ಎಸೆಯುವುದಕ್ಕೆ ಮನಸ್ಸು ಬರಲಿಲ್ಲ.

ಹಿತ್ತಲಿಗೆ ಹೋದವನೆ, ಸಣ್ಣದೊಂದು ಗುಳಿ ತೆಗೆದು ಅದರಲ್ಲಿ ಆ ಉಂಡೆಯನ್ನು ಇಟ್ಟು ಮಣ್ಣು ಮಾಡಿದ.

***

ಕನಸು ವಾಸ್ತವಗಳ ನಡುವೆ ಜೀಕಾಡುತ್ತಾ ಪಪ್ಪು ದ್ವಿತೀಯ ಪಿಯುಸಿಯ ಕೊನೆ ತಲುಪಿದ್ದ. ದ್ವಿತೀಯ ಪಿಯುಸಿ ಓದುವ ಸಂದರ್ಭದಲ್ಲಿ ಒಂದು ಬಾರಿ ಮಾತ್ರ ಜಾನಕಿಯ ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಅದೂ ಗುರೂಜಿಯವರ ಜೊತೆ ಇದ್ದಾಗ. ಆಗ ಸರಿಯಾಗಿ ಮಾತನಾಡುವುದಕ್ಕೂ ಸಾಧ್ಯವಾಗಿರಲಿಲ್ಲ.

‘‘ಮತ್ತೆ ಸಿಗ್ತೀಯಾ?’’ ಎಂದು ಕೇಳಿದಾಗ, ‘‘ಇಲ್ಲ...ಅಪ್ಪಾಜಿ ಜೊತೆಗೆ ಒಂದು ಕಡೆ ಹೋಗುವುದಕ್ಕಿದೆ’’ ಎಂದಿದ್ದಳು ಜಾನಕಿ.

‘‘ನಾಳೆ?’’ ಆಸೆಯಿಂದ ಕೇಳಿದ್ದ.

‘‘ನಾಳೆ ಬೆಳಗ್ಗೆ ಏಳುಗಂಟೆಗೆ ಪುತ್ತೂರು ಬಸ್ ಹತ್ಬೇಕು. ಎಕ್ಸಾಂ ಹತ್ತಿರ ಬರುತ್ತಿದೆ. ಸ್ಪೆಶಲ್ ಅಸೈನ್‌ಮೆಂಟ್ ಇದೆ ಬೇರೆ...’’ ಚಿಂತಾಕ್ರಾಂತಳಾಗಿ ಜಾನಕಿ ಉತ್ತರಿಸಿದ್ದಳು.

ಪಪ್ಪುವಿಗೆ ನಿರಾಸೆಯಾಗಿತ್ತು. ಆ ಬಳಿಕ ಜಾನಕಿ ನೋಡುವುದಕ್ಕೆ ಸಿಕ್ಕಿದ್ದೇ ಇಲ್ಲ. ಸಂಜೆ ಬಂದರೆ, ಮರುದಿನ ಬೆಳಗ್ಗೆ ಎದ್ದು ಹೋಗುತ್ತಿದ್ದುದರಿಂದ ಭೇಟಿ ಸಾಧ್ಯವೇ ಆಗುತ್ತಿರಲಿಲ್ಲ. ಆದರೂ ಆಕೆ ಒಳಗೊಳಗೆ ಹೆಚ್ಚು ಹೆಚ್ಚು ಹತ್ತಿರವಾಗುತ್ತಿದ್ದಳು. ಅವನೊಳಗಿನ ಪುಟ್ಟ ಯೋಧ ದಿನ ದಿನದಿಂದ ಎತ್ತರವಾಗುತ್ತಾ ಹೋಗುತ್ತಿದ್ದ.

ಹೀಗಿರುವಾಗ ಮಂಗಳೂರಿನ ಏರಿಯಾ ರಿಕ್ರೂಟ್‌ಮೆಂಟ್ ಕಚೇರಿಯಿಂದ ಸೇನಾ ರ್ಯಾಲಿ ಹಮ್ಮಿಕೊಂಡಿರುವುದು ಅವನ ಗಮನಕ್ಕೆ ಬಂದು ಬಿಟ್ಟಿತು. ತಾನೇನು ಕನಸುತ್ತಿದ್ದೆನೋ ಅದು ಜೀವ ತಳೆದು ಇಗೋ ಎಂದು ಧುತ್ತನೆ ತನ್ನೆದುರು ಬಂದು ನಿಂತಂತೆ ರೋಮಾಂಚನಗೊಂಡ. ಜಾನಕಿಯಿದ್ದಿದ್ದರೆ ಆಕೆಯ ಜೊತೆಗೆ ಹೇಳಿಯೇ ಆ ರ್ಯಾಲಿಗೆ ಹೊರಡುತ್ತಿದ್ದನೋ ಏನೋ. ಆದರೆ ಮನೆಯಲ್ಲಿ ಯಾರ ಜೊತೆಯೂ ಅದನ್ನು ಹಂಚಿಕೊಳ್ಳುವಂತೆ ಇರಲಿಲ್ಲ. ರ್ಯಾಲಿಯ ದಿನ, ಕಾಲೇಜಿಗೆ ಹೋಗುತ್ತೇನೆ ಎಂದವನು ಮಂಗಳೂರಿನ ಬಸ್ಸು ಹತ್ತಿಯೇ ಬಿಟ್ಟ. ಸುಮಾರು ಒಂದು ಸಾವಿರಕ್ಕೂ ಅಧಿಕ ಹುಡುಗರು ತನ್ನಂತೆಯೇ ಕನಸುಗಳನ್ನು ಹೊತ್ತುಕೊಂಡು ಬಂದವರು ಅಲ್ಲಿದ್ದರು. ಏರಿಯಾ ರಿಕ್ರೂಟ್‌ಮೆಂಟ್ ಅಧಿಕಾರಿಯ ಬಳಿ ತೆರಳಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದ್ದ. ಅವನ ಆಯ್ಕೆ ಅಂತಿಮವಾಗುವವರೆಗೆ ಅವನು ವಿಷಯವನ್ನು ಮುಚ್ಚಿಟ್ಟು ಬಿಟ್ಟ.

ರ್ಯಾಲಿಯಲ್ಲಿ ಅವನಿಗೆ ಹತ್ತಿರವಾದುದು ಕೊಡಗಿನ ಅಪ್ಪಯ್ಯ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕೊಡಗಿನವರೇ ಆಗಿರುವುದರಿಂದ ಆತನಿಗೆ ಕೊಡಗಿನ ಯೋಧರ ಬಗ್ಗೆ ಕುತೂಹಲವಿತ್ತು. ಅಪಾರ ಹೆಮ್ಮೆಯಿತ್ತು. ಅಪ್ಪಯ್ಯ ಅವನಿಗೆ ಹತ್ತಿರವಾಗುವುದಕ್ಕೆ ಅಥವಾ ಅಪ್ಪಯ್ಯನಿಗೆ ಪಪ್ಪು ಹತ್ತಿರವಾಗುವುದಕ್ಕೆ ಅದೇ ಕಾರಣವಿರಬೇಕು.

‘‘ನಾನು ಪುತ್ತೂರು ಸಮೀಪದ ಉಪ್ಪಿನಂಗಡಿಯ ಹತ್ತಿರದ ಹಳ್ಳಿಯವನು. ನಮ್ಮೂರಲ್ಲಿ ವೆಂಕಟ ಎನ್ನುವ ಯೋಧ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮನಾಗಿದ್ದಾನೆ....ಆ ಊರಿನಿಂದ ನಾನು ಬಂದಿದ್ದೇನೆ’’ ಎಂದು ಪಪ್ಪು ತನ್ನನ್ನು ಆತನಿಗೆ ಪರಿಚಯಿಸಿಕೊಂಡ.

ಅಪ್ಪಯ್ಯ ಒಂದಿಷ್ಟು ಪ್ರಬುದ್ಧ ಯುವಕ. ಪಪ್ಪುವಿಗಿಂತ ಎರಡು-ಮೂರು ವರ್ಷ ದೊಡ್ಡವನು

‘‘ವೆಂಕಟನಂತಹ ಹುತಾತ್ಮ ಯೋಧರು ನಮ್ಮ ಪ್ರತೀ ಗ್ರಾಮದಲ್ಲಿ ಇಬ್ಬರಾದರೂ ಇರುತ್ತಾರೆ’’ ಎಂದ.

ಪಪ್ಪುವಿಗೆ ಪೆಚ್ಚೆನ್ನಿಸಿತು. ಆದರೂ ಅಪ್ಪಯ್ಯನ ಬಗ್ಗೆ ಹೆಮ್ಮೆಯೆನಿಸಿತು. ನಾನೂ ಕೊಡಗಿನಲ್ಲಿ ಹುಟ್ಟಬೇಕಾಗಿತ್ತು. ಆದರೆ ಆಗ ಜಾನಕಿ ನನಗೆ ಸಿಗುತ್ತಿರಲಿಲ್ಲವಲ್ಲ? ಮುಂದಿನ ಜನ್ಮದಲ್ಲಿ ನಾನು ಮತ್ತು ಜಾನಕಿ ಜತೆಯಾಗಿ ಕೊಡಗಿನಲ್ಲಿ ಹುಟ್ಟಬೇಕು ಎಂದು ತಿದ್ದಿಕೊಂಡ.

(ರವಿವಾರದ ಸಂಚಿಕೆಗೆ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)