varthabharthi


ತಾರಸಿ ನೋಟ

ಪಂಚೆಯನ್ನೇ ಸೀರೆಯಾಗಿಸಿಕೊಂಡ ಆ ಸಂಭ್ರಮ...

ವಾರ್ತಾ ಭಾರತಿ : 18 Mar, 2017
ವೆಂಕಟಲಕ್ಷ್ಮಿ ವಿ. ಎನ್ .

ಇಷ್ಟೊಂದು ಹೊಸ ಹೊಸ ಸಂಯೋಗಕ್ಕೆ ಅವಕಾಶ ಇರುವಲ್ಲಿ ಶ್ರೇಷ್ಠ-ಕನಿಷ್ಠಗಳ ಮೌಲ್ಯ ನಿರ್ಣಯಕ್ಕೆಲ್ಲಿ ಜಾಗ? ಅದು ನಿಸರ್ಗ ವಿರೋಧಿ. ಆದರೆ, ಪಿತೃಪ್ರಧಾನ ವ್ಯವಸ್ಥೆಯ ತುಂಬ ಇರುವುದು ಇದೇ ಅನಿಷ್ಟ; ‘‘ಹುಡುಗ ಆಗಿ ಅಳ್ತೀಯಾ?’’, ‘‘ಹುಡುಗಿ ಆಗಿ ಮರ ಹತ್ತುತ್ತೀಯಾ?’’ ಬಗೆಯ ಸುಪ್ತ ನಿರ್ದೇಶನಗಳನ್ನು ಹೇರುವ ಆಗ್ರಹ.


ನಟ ಆಮಿರ್‌ಖಾನ್ ಎದುರಿಗೆ ಕುಳಿತಿದ್ದ ವ್ಯಕ್ತಿಯನ್ನು ಹಾಗೆ ಬಣ್ಣಿಸಬಹುದಿತ್ತು: ಲವಂಗಲತಾ! ಸಂಚಲನ ಉಂಟುಮಾಡಿದ ‘ಸತ್ಯಮೇವ ಜಯತೆ’ ಸರಣಿ ಕಾರ್ಯಕ್ರಮದಲ್ಲಿ ತೃತೀಯ ಲಿಂಗಿ-ಟ್ರಾನ್ಸ್‌ಜೆಂಡರ್ ಕುರಿತು ಆ ವಾರದ ಚಿಂತನ-ಮಂಥನ. ಆಕೆಯಷ್ಟೇ ಏಕೆ, ಗಂಡು ದೇಹ ಹೊಂದಿದ್ದರೂ ತನ್ನನ್ನು ತಾನು ಹೆಣ್ಣು ಎಂದು ಭಾವಿಸಿಕೊಳ್ಳುವ, ಬಿಂಬಿಸಬಯಸುವ ಯಾರೇ ‘ಟ್ರಾನ್ಸ್‌ವುಮನ್’ ಸ್ವಲ್ಪಹೆಚ್ಚಾಗಿಯೇ ಅಲಂಕಾರದಲ್ಲಿ ಆಸಕ್ತಿ ವಹಿಸುವುದು ಸಾರ್ವಜನಿಕವಾಗಿ ಎಲ್ಲರ ಗಮನಕ್ಕೆ ಬರುವ ಸಂಗತಿ:

ಅದು ಹೈ ಪ್ರೊಫೈಲ್ ಕಾರ್ಯಕರ್ತೆ ಲಕ್ಷ್ಮೀ ಆಗಿರಬಹುದು, ಸೂಕ್ಷ್ಮಸಂವೇದಿ ಕವಿತೆಗಳನ್ನು ಮನ ಕಲಕುವಂತೆ ವಾಚಿಸುವ ಕನ್ನಡ ಕವಿ ಚಾಂದಿನಿ ಆಗಿರಬಹುದು. ಹೆಣ್ಣಿಗೆ ‘ಆರೋಪಿತ’ವಾಗುವ (ಆರೋಪಿತವೆ, ಅಲ್ಲವೆ, ಆರೋಪಿತವಾಗಿದ್ದರೆ ಎಷ್ಟರಮಟ್ಟಿಗೆ, ಎಲ್ಲಿಯತನಕ ಮುಂತಾಗಿ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಟಿಸಿಲೊಡೆದಿರುವ ಸಂಶೋಧನೆ, ಮೀಮಾಂಸೆಗಳು ಸಾಕಷ್ಟು ಜಟಿಲವಾಗಿವೆ. ಅದನ್ನು ಮುಂದೆ ನೋಡೋಣ) ಕೆಲವು ಗುಣಗಳು ಅವರಿಗೆ ಎಂದೂ ಅನಪೇಕ್ಷಿತ ಎನಿಸಿಲ್ಲ; ಬದಲಾಗಿ ಅವುಗಳಿಗೆ ಅವರು ಮನಸೋತಿದ್ದಾರೆ. ಒಂದು ಕ್ಷಿಪ್ರ ಪರಿಚಯ ನೀಡುವುದಾದರೆ, ಲಕ್ಷ್ಮೀನಾರಾಯಣ ತ್ರಿಪಾಠಿ ಹೆಸರಿನಲ್ಲಿ, ಥಾಣೆಯ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಲಕ್ಷ್ಮೀ ವಿಶ್ವಸಂಸ್ಥೆಯ ಏಶ್ಯಾ-ಪೆಸಿಫಿಕ್ ಸಭೆಯಲ್ಲಿ ಮೊದಲಬಾರಿಗೆ ತೃತೀಯಲಿಂಗಿ ಸಮುದಾಯದ ಸಂಕಷ್ಟಗಳ ಕುರಿತು ಭಾಷಣ ಮಾಡಿದ ಸೆಲೆಬ್ರಿಟಿ. ನಟಿ, ನೃತ್ಯಾಂಗನೆ, ಫ್ಯಾಶನ್‌ಪ್ರಿಯೆ. ಬಾಲ್ಯದ ಅಂಜುಕುಳಿ, ಮೌನಿ ಹುಡುಗನಿಂದ ನೇರಮಾತಿನ, ಮುಕ್ತ, ಸುಖ-ಸಂತೋಷದ ಜೀವನ ನಡೆಸುವ ಮಹಿಳೆಯಾಗಿ ಅರಳಿದವರು. ಎರಡರ ನಡುವೆ ಇದ್ದ ಕಂದರವನ್ನು ತುಂಬಲು ಅವರು ಪಟ್ಟ ಸಾಹಸ ಚೊಚ್ಚಲ ಆತ್ಮಕಥಾನಕ ಕೃತಿಯಲ್ಲಿ ದಾಖಲಾಗಿದ್ದರೆ, ಇತ್ತೀಚಿನ ‘ರೆಡ್ ಲಿಪ್‌ಸ್ಟಿಕ್-ದಿ ಮೆನ್ ಇನ್ ಮೈ ಲೈಫ್’, ಮನುಷ್ಯತ್ವದ ಕನಿಷ್ಠ ಘನತೆ ಸಹ ನೀಡದೆ, ಮೂಲೆಗುಂಪು ಮಾಡಿ ತೃತೀಯ ಲಿಂಗಿಗಳನ್ನು ಶೋಷಿಸುವ ಪುರುಷ ಪ್ರಧಾನ ಸಮಾಜದ ಆಷಾಢಭೂತಿತನ ಬಯಲಿಗೆಳೆಯುತ್ತದೆ. 

‘‘ಟವೆಲನ್ನೇ ದಾವಣಿಯಾಗಿ ಹೊದ್ದುಕೊಂಡೆ, ಪಂಚೆಯನ್ನು ಸೀರೆ ಮಾಡಿಕೊಂಡೆ, ಗೊಂಚಲಾದ ಗೊಂಡೆಹೂವಿನ ಸರ ಪಾದಕ್ಕೆ ಸುತ್ತಿ ಅದನ್ನು ಗಿಲಿಗುಡುವ ಗೆಜ್ಜೆ ಎಂದು ಭ್ರಮಿಸಿದೆ’’ ಎಂಬ ತೀವ್ರ ಹಂಬಲದಲ್ಲಿ ಗಂಡು ದೇಹದಲ್ಲಿ ಹುದುಗಿದ್ದ ಹೆಣ್ಣು ಅಸ್ಮಿತೆಯನ್ನು ಚಾಂದಿನಿ ಕಾವ್ಯಾತ್ಮಕವಾಗಿ ಸ್ಫುಟಗೊಳಿಸುತ್ತಾರೆ. ಟಿ. ನರಸೀಪುರದಿಂದ ಬೆಂಗಳೂರಿನ ‘ಸಂಗಮ’ ಸೇವಾಸಂಸ್ಥೆಯವರೆಗಿನ ಅವರ ಪಯಣವೂ ದಾರುಣ ಮತ್ತು ದೀರ್ಘ. ‘‘ಅಯ್ಯೋ! ಲಿಪ್‌ಸ್ಟಿಕ್ ಲೇಪಿಸದೆ ದಿನ ಶುರು ಮಾಡುವುದಾದರೂ ಹೇಗೆ?’’ ಎಂಬರ್ಥದ ಲಕ್ಷ್ಮೀಯವರ ಪ್ರಾಸಂಗಿಕ ಉದ್ಗಾರ, ಅಲಂಕಾರ ಪ್ರಿಯತೆ ಅವರ ಅಸ್ಮಿತೆಯ ಭಾಗವೇ ಆಗಿದೆ ಎಂಬುದನ್ನು ಸೂಚಿಸುತ್ತಿರಬಹುದು. ಅದನ್ನು ಜತೆಗಿಟ್ಟುಕೊಂಡೇ ತಮ್ಮ ಸ್ವಾತಂತ್ರ್ಯಾಭಿವ್ಯಕ್ತಿ, ಸಮಾನತೆಗಾಗಿ ಹೋರಾಟ, ಮೂಲಭೂತ ಹಕ್ಕುಗಳಿಗಾಗಿ ಸಾಂವಿಧಾನಿಕ ತಿದ್ದುಪಡಿಗಳಿಗೆ ಕೈಚಾಚಿದ್ದಾರೆ.

ಸುಮಾರು 70ರ ದಶಕದಲ್ಲಿ, ಇಂತಹ ಹೋರಾಟದ ಮುಂಚೂಣಿಯಲ್ಲಿರುತ್ತಿದ್ದ ಮಹಿಳೆಯರು ಗಂಡುಡುಗೆ ತೊಡುವುದು, ಚಿಕ್ಕದಾಗಿ ಕೂದಲು ಕತ್ತರಿಸಿಕೊಳ್ಳುವುದು, ಸಿಂಗಾರ-ಬಂಗಾರ ವರ್ಜ್ಯ ಅಂದುಕೊಂಡಿದ್ದು ನೆನಪಾಗುತ್ತದೆ: ಹೆಂಗಸರು ಕೋಮಲ ಜೀವಿಗಳು. ಅಂದವಾಗಿ ಕಾಣಿಸಿಕೊಳ್ಳುವ ಅಪೇಕ್ಷೆಯ ಭಾವುಕರು. ಮನೆ, ಮಕ್ಕಳನ್ನು ಪಾಲಿಸಿ ಪೋಷಿಸುವ ಕಡೆ ಅವರ ತುಡಿತ. ಗಟ್ಟಿ ಯೋಚನೆ, ಖಂಡಿತವಾದ ನಿಲುವು, ಕಷ್ಟದ ದುಡಿಮೆ ಅವರಿಂದ ಅಸಾಧ್ಯ ಮುಂತಾದ ತಥಾಕಥಿತ ಗುಣಗಳನ್ನು ತಾವು ಹೊಂದಿಲ್ಲ ಎಂದು ಘೋಷಿಸಿಕೊಳ್ಳಲು ಬಹುಶಃ ಅವರು ಈ ಉಪಾಯಗಳ ಮೊರೆಹೊಕ್ಕಿರಬೇಕು. ಇದೀಗ, ಚೆನ್ನಾಗಿ ತಿದ್ದಿ ತೀಡಿ ತಮ್ಮ ಹೆಣ್ಣು ಅಸ್ಮಿತೆ ಪ್ರಕಟಪಡಿಸಿಕೊಳ್ಳುವ ಧಾವಂತದಲ್ಲಿರುವ ಟ್ರಾನ್ಸ್‌ವಿಮೆನ್, ಹಳೆಯ ‘ಸ್ಟೀರಿಯೋಟೈಪ್’ ಗಳನ್ನು ಮರಳಿ ಸಮಾಜದೊಳಗೆ ಶ್ರುತಪಡಿಸಿ ಬಿಡುತ್ತಾರೆಯೇ ಎಂಬ ಅನುಮಾನ, ಕಸಿವಿಸಿ, ಮುಜುಗರ ಕೆಲ ಸ್ತ್ರೀವಾದಿಗಳನ್ನು ಕಾಡಿದರೆ ಆಶ್ಚರ್ಯವಿಲ್ಲ. ಹಾಗೆ ‘ತಥಾಕಥಿತ’ ಎಂಬ ಲೇಬಲ್ ಹಚ್ಚಿಕೊಂಡ ಗುಣಗಳು ಸಂಪೂರ್ಣ ತಥಾಕಥಿತವೆ ಅಥವಾ ಒಂದಷ್ಟು ಜೈವಿಕತೆ-ದೈಹಿಕ ಗುಣಲಕ್ಷಣ(ಅನಾಟಮಿ), ಚೋದಕಗಳು(ಹಾರ್ಮೋನ್) ಮತ್ತು ಮಿದುಳು-ಆಧರಿಸಿವೆಯೆ ಎಂಬುದನ್ನು ಮರು ಪ್ರಶ್ನೆ ಮಾಡಿಕೊಳ್ಳುವ ಅಗತ್ಯ ಈಗ ಉಂಟಾಗಿದೆ. ಗಂಡು ಹಾಗೂ ಹೆಣ್ಣು ಶಿಶುಗಳು ಹುಟ್ಟುವಾಗ ಒಂದೇ ಆಗಿರುತ್ತಾರೆ, ಸಾಂಸ್ಕೃತಿಕ ಕಟ್ಟೋಣ-ಕಲ್ಚರಲ್ ಕಾನ್‌ಸ್ಟ್ರಕ್ಟ್ ಕ್ರಮೇಣ ಅವರನ್ನು ಭಿನ್ನರಾಗಿಸುತ್ತದೆ ಎನ್ನುವುದು 70ರ ದಶಕದಲ್ಲಿ ಪ್ರಚಲಿತಗೊಂಡ ಸಿದ್ಧಾಂತ. ಇದನ್ನು ಬುಡಮೇಲು ಮಾಡಲು ಪ್ರಗತಿಪರ ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಬಸ್, ಟ್ರಕ್, ವಿಮಾನ ಆಟಿಗೆಗಳನ್ನು ಹಾಗೂ ಗಂಡುಮಕ್ಕಳಿಗೆ ಬೊಂಬೆಗಳನ್ನೂ ಕೊಡಿಸಿದರು ಎನ್ನುವುದು ಒಂದು ಸ್ವಾರಸ್ಯಕರ ವಿವರ.

ಇದೀಗ, ಹೆಣ್ಣು-ಗಂಡು ಗುಣಗಳು ಜನನ ಸಮಯದಲ್ಲೇ ಅಂತರ್ಗತವಾಗಿರುತ್ತವೆ ಎನ್ನಲು ಜೈವಿಕ ಆಧಾರ ಇದೆ ಎನ್ನುತ್ತಿದ್ದಾರೆ, ಭ್ರೂಣ ಬೆಳವಣಿಗೆ ಮನೋವಿಜ್ಞಾನಿಗಳು-ಡಿವೆಲೆಪ್‌ಮೆಂಟಲ್ ಸೈಕಾಲಜಿಸ್ಟ್ಸ್. ಆ ಪ್ರಕಾರ ಒಬ್ಬ ತರುಣಿ ಒಂದು ನಿರ್ದಿಷ್ಟ ದೇಹಾಕಾರ, ಕೋಮಲ ಕೈಕಾಲು, ತನ್ನನ್ನು ತಾನು ಹೊಳಪುಗೊಳಿಸಿಕೊಳ್ಳುವ ಹುರುಪು, ಪ್ರಪುಲ್ಲತೆ, ಮಕ್ಕಳು ಇನ್ನಿತರ ದುರ್ಬಲರನ್ನು ಪೋಷಿಸುವ ಸಹಜ ಸ್ವಭಾವ ಹೊಂದಿರುವುದು ಸ್ವಾಭಾವಿಕ. ಅಂತೆಯೇ ಒಬ್ಬ ತರುಣ ಸಹ ನಿರ್ದಿಷ್ಟ ದೇಹಾಕಾರ, ರೋಮಯುಕ್ತ ಶಕ್ತ ಕೈಕಾಲು, ಹುಡುಕಿಕೊಂಡು ಹೋಗುವ ಸಾಹಸಗುಣ, ಕಠಿಣ ದುಡಿಮೆಗಳನ್ನು ಹುಟ್ಟಿನಿಂದಲೇ ಪಡೆದಿರುತ್ತಾನೆ. ಆದರೆ ಇದು ಗೆರೆ ಕೊರೆದ ದ್ವಿತ್ವ-ಬೈನರಿ ಅಲ್ಲ. ಗಂಡು-ಹೆಣ್ಣು ಗುಣಗಳು ಹಾರ್ಮೋನು ಸ್ರವಿಕೆ, ದೈಹಿಕ ದೃಢತೆ ಮತ್ತು ಅದನ್ನು ವೃದ್ಧಿಪಡಿಸಿಕೊಳ್ಳುವ ಅಭ್ಯಾಸ-ಪರಿಸರಕ್ಕೆ ಅನುಗುಣವಾಗಿ, ಪ್ರತಿಯೊಬ್ಬರಲ್ಲಿ ಅಸಂಖ್ಯ ಬದಲಾವಣೆ-ವೈವಿಧ್ಯದೊಂದಿಗೆ (ಪರ್ಮ್ಯುಟೇಷನ್ ಕಾಂಬಿನೇಷನ್) ಅವರಿಗಷ್ಟೇ ಪ್ರತ್ಯೇಕವಾಗಿ ಪ್ರಕಟಗೊಳ್ಳುತ್ತವೆ.

ಅದಾಗ, ಒಬ್ಬ ಟೆನಿಸ್ ಆಟಗಾರ್ತಿ ಬಲಿಷ್ಠ ಕೈಕಾಲುಗಳನ್ನು ಹೊಂದಿರುವ ಹೆಣ್ಣಾಗಿರಬಹುದು; ಅದೇ ವರಸೆಯಲ್ಲಿ ಅನಾಥ ಮಕ್ಕಳನ್ನು ಪೋಷಿಸಿ ಸಲಹುವ ವ್ಯಕ್ತಿ ಗಂಡಸಾಗಿರಬಹುದು. ಇಷ್ಟೊಂದು ಹೊಸ ಹೊಸ ಸಂಯೋಗಕ್ಕೆ ಅವಕಾಶ ಇರುವಲ್ಲಿ ಶ್ರೇಷ್ಠ-ಕನಿಷ್ಠಗಳ ಮೌಲ್ಯನಿರ್ಣಯಕ್ಕೆಲ್ಲಿ ಜಾಗ? ಅದು ನಿಸರ್ಗ ವಿರೋಧಿ. ಆದರೆ, ಪಿತೃಪ್ರಧಾನ ವ್ಯವಸ್ಥೆಯ ತುಂಬ ಇರುವುದು ಇದೇ ಅನಿಷ್ಟ; ‘‘ಹುಡುಗ ಆಗಿ ಅಳ್ತೀಯಾ?’’, ‘‘ಹುಡುಗಿ ಆಗಿ ಮರ ಹತ್ತುತ್ತೀಯಾ?’’ ಬಗೆಯ ಸುಪ್ತ ನಿರ್ದೇಶನಗಳನ್ನು ಹೇರುವ ಆಗ್ರಹ. ಹಾಗೆ, 1999ರ ಆರಂಭಿಕ ಟ್ರಾನ್ಸ್‌ಜೆಂಡರ್ ಕ್ಲಾಸಿಕ್ ಸಿನೆಮಾ ‘ಬಾಯ್ಸಾ ಡೋಂಟ್ ಕ್ರೈ’ನ ದುರಂತ ಅಂತ್ಯವನ್ನು ಈ ಹೊಸ ಬೆಳಕಲ್ಲಿ ನೋಡುವುದು ಉಪಯುಕ್ತ: ಅದರಲ್ಲಿ ನಾಯಕಿ, ಒಬ್ಬ ತರುಣಿಯನ್ನೇ ಪ್ರೀತಿಸುವ ಟ್ರಾನ್ಸ್‌ಮ್ಯಾನ್. ಹುಡುಗನಂತೆ ವೇಷ ತೊಟ್ಟು, ವ್ಯವಹರಿಸುತ್ತಿರುತ್ತಾಳೆ. ಯಾವುದೋ ದುರ್ಬಲ ಗಳಿಗೆಯಲ್ಲಿ ಆಕೆ ಕಣ್ಣೀರಿಡುತ್ತಿದ್ದುದನ್ನು ದುಷ್ಕರ್ಮಿಗಳು ನೋಡಿಬಿಡುತ್ತಾರೆ. ಗಂಡು ಹೆಣ್ಣಿನಂತೆ, ಹೆಣ್ಣು ಗಂಡಿನಂತೆ ವರ್ತಿಸುವುದಕ್ಕೆ ಗುಲಗಂಜಿ ಸಹಿಷ್ಣುತೆಯೂ ಇಲ್ಲದ, ಪ್ರಬಲ ಪ್ರತಿರೋಧ ಒಡ್ಡುವ ಸಮಾಜದಲ್ಲಿ ಅಂತಹವರನ್ನು ಕೊಲ್ಲುವುದಕ್ಕೆ ಇರುವ ಹೆಸರು ಹೇಟ್ ಕ್ರೈಮ್! ‘‘ಇಟ್ ಈಸ್ ಒಕೆ ಇಫ್ ಬಾಯ್ಸೆ ಆಲ್ಸೊ ಕ್ರೈ’’ ಸಾಮಾನ್ಯೀಕರಣ ಒಂದೊಮ್ಮೆ ಅಲ್ಲಿ ಬೀಡುಬಿಟ್ಟಿದ್ದಿದ್ದರೆ ಬಹುಶಃ ಆಕೆ ಬಚಾವಾಗಿರುತ್ತಿದ್ದಳು.

ಯಾವುದೇ ಒಬ್ಬ ವ್ಯಕ್ತಿಯ ಜೆಂಡರ್ ಆಗಿರಬಹುದು, ಲೈಂಗಿಕ ಆಯ್ಕೆ ಆಗಿರಬಹುದು...ಸಾಕಷ್ಟು ಚಲನಶೀಲವಾಗಿರುವ ದ್ರವ್ಯ ಸ್ಥಿತಿಯಲ್ಲಿರುತ್ತದೆ. ಜೀವನದ ನಾನಾ ಕಾಲಘಟ್ಟಗಳಲ್ಲಿ ವಿಧ ವಿಧ ಆಯ್ಕೆಯನ್ನು ಅದು ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ಚಿಂತನೆಯಂತೂ ಸಾಂಪ್ರದಾಯಿಕತೆಯನ್ನು ಹೊಡೆದುರುಳಿಸುವಷ್ಟು ನೂತನವಾಗಿದೆ. ಮುಸುಕಿನೊಳಗಿನ ಗುದ್ದು ಸಹಿಸಿ ಸಹಿಸಿ ಸುಸ್ತಾದ ಎಲ್‌ಜಿಬಿಟಿ ಸಮುದಾಯಕ್ಕೆ ಸಮಾಜದ ಧೋರಣೆ ಬದಲಾಯಿಸುವ ಇಂತಹ ಯೋಚನಾ ಭೂಕಂಪಗಳು ಜೀವದಾಯಿನಿ. ಜತೆಗೆ, ಅನೇಕ ಸಿಕ್ಕುಗಳನ್ನು ತುಂಬಿಕೊಂಡಿರುವ ಕಾನೂನು ಹಾಗೂ ರಾಜ್ಯಾಡಳಿತ, ರಾಷ್ಟ್ರಾಡಳಿತಗಳ ಬೆಂಬಲವೂ ಬೇಕು. ಅದನ್ನು ಮನಗಂಡಂತೆ, ಫ್ಯಾಶನ್ ಶೋಗಳಲ್ಲಿ ಭಾಗವಹಿಸಿ, ಕಲಾವಿದರಾಗಿ ಪ್ರಸಿದ್ಧಿ ಗಳಿಸುತ್ತಿರುವಂತೆಯೇ ದೇಶ ಆಳುವ ದಿಕ್ಕಿನಲ್ಲಿಯೂ ಆಸ್ಥೆವಹಿಸಿ, ತೃತೀಯಲಿಂಗಿ ಸಮುದಾಯ ಮುಖ್ಯವಾಹಿನಿ ಸೇರುತ್ತಿದೆ.

ಅದು ಇಲ್ಲವೇ ಇದು, ಅಮೆರಿಕ ನಿಷ್ಠೆ ವರ್ಸಸ್ ವಲಸಿಗರ ಕುರಿತು ಸಹಾನುಭೂತಿ, ದೇಶಪ್ರೇಮಿಗಳು ಇಲ್ಲವೇ ಪಾಕಿಸ್ತಾನ ಹಿತೈಷಿಗಳು, ಪ್ರಶ್ನಿಸುವ ಪ್ರವೃತ್ತಿ ಅಥವಾ ರಾಷ್ಟ್ರೀಯತೆ...ಹೀಗೆ ಮನುಷ್ಯ ನಿರ್ಮಿತ ದ್ವೈತ ನಮ್ಮ ಸುತ್ತ ದಿನೇದಿನೇ ಹೆಚ್ಚಾಗಿ ಹಾಸ್ಯಾಸ್ಪದ ಹಾಗೂ ಆತಂಕಕಾರಿ ವಾತಾವರಣ ಸೃಷ್ಟಿಸುತ್ತಿರುವಾಗ ಪ್ರಕೃತಿಯ ಬಹುತ್ವ-ಔದಾರ್ಯ ಸಾಂತ್ವನದಾಯಕ ಅಷ್ಟೇ ಅಲ್ಲ, ಅನುಸರಿಸಬೇಕಾದ ಮೇಲ್ಪಂಕ್ತಿ. ಇದೇ ನಿಟ್ಟಿನಲ್ಲಿ, ಹೊರ ಅವತಾರ ಮೀರಿ ತಮ್ಮ ಸ್ತ್ರೀ ಅಸ್ಮಿತೆ ವ್ಯಕ್ತಪಡಿಸುವುದರಲ್ಲಿ ಹೆಚ್ಚಿನ ಆಸಕ್ತಿ, ತುಡಿತ ಹೊಂದಿರುವ ತೃತೀಯಲಿಂಗಿ(ಹೆಣ್ಣು)ಗಳೂ ಕಾಣಸಿಗುತ್ತಾರೆ. ಒಟ್ಟಾರೆ ಸ್ತ್ರೀ ಸಮುದಾಯದಲ್ಲಿರುವ ಬೇರೆ ಬೇರೆ ಶೇಕಡಾವಾರು ಹೆಣ್ಣುಗುಣಗಳ ಅಗಲ ಪಟಲ ಟ್ರಾನ್ಸ್‌ವಿಮೆನ್ ಸಮುದಾಯದಲ್ಲಿಯೂ ಇರವಲ್ಲದೇಕೆ? ಹಾಗಾಗಿ ಮಹಿಳೆಯರ ತಥಾಕಥಿತ ಪಾತ್ರನಿರ್ವಹಣೆಯನ್ನು ಅವರು ಬೆಂಬಲಿಸುತ್ತಿದ್ದಾರೆಯೇ ಎಂಬ ಶಂಕೆಯಲ್ಲಿ ಹುರುಳಿಲ್ಲ.

ಅಲ್ಲದೆ, ಮೇಕಪ್ ಮಾಡಿಕೊಳ್ಳುವುದು ಅಪರಾಧ ಅಲ್ಲ, ಮೇಕಪ್‌ನಲ್ಲಿ ಮೈಮರೆತು ತಮ್ಮ ಜವಾಬ್ದಾರಿ ಮರೆತರೆ ಅದು ದೊಡ್ಡ ಪ್ರಮಾದ (ಇತ್ತೀಚೆಗೆ ಉಚ್ಚಾಟಿತರಾದ ದ.ಕೊರಿಯಾ ಅಧ್ಯಕ್ಷೆ ಕಾರ್ಯವೈಖರಿ ಹಾಗಿತ್ತು ಎಂಬುದು ಅಂತರಂಗದ ಸುದ್ದಿ) ಎಂಬ ತೀರ್ಮಾನಕ್ಕೆ ಬರಬಹುದು. ಪುರುಷ ಹಾಗೂ ಸ್ತ್ರೀತ್ವಗಳು ಮನುಷ್ಯ ಮಿದುಳಿನಲ್ಲಿ ಕೂತು ಆಯಾ ವ್ಯಕ್ತಿಯ ಜೆಂಡರ್ ನಿರ್ಧರಿಸುತ್ತವೆ ಎನ್ನುವುದು ಇತ್ತೀಚಿನ ಸಂಶೋಧನೆಗಳು ಹೊರಗೆಡಹುತ್ತಿರುವ ಸತ್ಯ: ಅನಾಟಮಿಯ ಪರಿಗಣನೆ ಇಲ್ಲಿ ಸೊನ್ನೆ. ಹಾಗೆ, ವಿರುದ್ಧ ಲಿಂಗಿಯ ಪರಿಪೂರ್ಣ ದೇಹರಚನೆ ಇರುವುದು, ಹೆಣ್ಣು-ಗಂಡು ನಡುವಿನ ಲಿಂಗತ್ವ ಹೊಂದಿರುವುದು ಹಾಗೂ ಪೌರುಷರಹಿತ ಸ್ಥಿತಿ-ಈ ಮೂರೂ ಕಾರಣಗಳಿಂದ ತೃತೀಯ ಲಿಂಗತ್ವ ಉಂಟಾದರೂ ಗಂಡು ದೇಹದಲ್ಲಿ ಅಡಗಿರುವ ಹೆಣ್ತನದ ಅಭಿವ್ಯಕ್ತಿ ಮತ್ತು ಸಮಾನವಾದ ತದ್ವಿರುದ್ಧ ಹೆಣ್ಣು ದೇಹದಲ್ಲಿ ಅಡಗಿರುವ ಗಂಡ್ತನದ ಅಭಿವ್ಯಕ್ತಿ ಹೆಚ್ಚು ಸಂಕೀರ್ಣ ಎನ್ನಬಹುದು. ಅಥವಾ ಅದು ಹೇಗೆ ಇದೆಯೋ ಹಾಗೆ ಸ್ವೀಕರಿಸಿದರೆ ಅಷ್ಟೇ ಸರಳವೇ?! ಅಂಥದೊಂದು ನಿರಪಾಯ ಹಾಗೂ ನಿರುಪಾಯಕಾರಿ ಒಪ್ಪಿಕೊಳ್ಳುವಿಕೆ, ಒಳಗೊಳ್ಳುವಿಕೆ ತೃತೀಯಲಿಂಗಿ ಮಕ್ಕಳನ್ನು ಪಡೆದ ಕುಟುಂಬಗಳಲ್ಲಿ ಈಗೀಗ ಹೆಚ್ಚು ಕಾಣಿಸುತ್ತಿದೆ, ಇದೊಂದು ಅಪೇಕ್ಷಣೀಯ ಬೆಳವಣಿಗೆ ಎನ್ನುತ್ತಾರೆ ಪರಿಣತರು. ಉದಾಹರಣೆಗೆ, ಒಂದು ಕೌಟುಂಬಿಕ ಸಮಾರಂಭದಲ್ಲಿ ತಾನು ಗಾಘ್ರಾ ಚೋಲಿ ತೊಡಬೇಕು ಎಂಬ ಮೊಮ್ಮಗನ ಹೆಬ್ಬಯಕೆಗೆ ಅಜ್ಜಿ ತಣ್ಣೀರೆರೆದರೂ, ಮೊದಲ ಹೆಜ್ಜೆಯಾಗಿ ತೆಳುವಾಗಿ ಲಿಪ್‌ಸ್ಟಿಕ್ ಲೇಪಿಸಿಕೊಳ್ಳಲು ಅನುಮತಿ ಇತ್ತರಂತೆ.

‘‘ಐ ಥಿಂಕ್, ದೇರ್‌ಫೋರ್ ಐ ಆ್ಯಮ್’-ನಾನು ಯೋಚಿಸುತ್ತೇನೆ, ಆದ್ದರಿಂದ ಇದ್ದೇನೆ-ಇದು ಪಾಶ್ಚಿಮಾತ್ಯ ಅಸ್ತಿತ್ವವಾದದ ಸುಪ್ರಸಿದ್ಧ ಸಾಲು. ‘‘ಐ ಥಿಂಕ್ ಐ ಆ್ಯಮ್ ಎ ವುಮನ್/ಮ್ಯಾನ್, ದೇರ್‌ಫೋರ್ ಐ ಆ್ಯಮ್’’ ಎಂದೀಗ ಅದು ವಿಸ್ತಾರಗೊಂಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)