varthabharthi


ಯುದ್ಧ

ಇದಿನಬ್ಬ-ಹೆಗ್ಡೆಯ ಬಾಲವನದ ನೆನಪುಗಳು

ವಾರ್ತಾ ಭಾರತಿ : 25 Mar, 2017
ಧಾರಾವಾಹಿ-19

ಆದರೆ ಜಾನಕಿಗೆ ಅದನ್ನು ಒಪ್ಪುವುದು ತೀರಾ ಕಷ್ಟವಾಗುತ್ತಿತ್ತು. ತನ್ನೆದುರೇ ‘ಸುಗ್ರೀವನ ಹೆಂಡತಿಯ ಹೆಸರು’ ಹೇಳಿದ್ದನಲ್ಲ! ಅವನಿಗೆ ರಾಮಾಯಣದ ಬಗ್ಗೆ ತುಂಬಾ ಗೊತ್ತಿದೆ ಎಂದು ಆಗಲೇ ಅನ್ನಿಸಿತ್ತು. ಆದರೆ ಈಗ ಮೀನಾಕ್ಷಿ ಹೇಳುವುದು ಕೇಳಿದರೆ? ಅದೂ ಗುಣಕರ್ ಸಾರ್ ಸುಳ್ಳು ಯಾಕೆ ಹೇಳಬೇಕು? ಇಷ್ಟಕ್ಕೂ ಅವನಿಗೆ ರಾಮಾಯಣದ ಮೇಲೆ ಪ್ರೀತಿ ಇದ್ದರೆ, ಅವನು ಯಾಕೆ ರಾಮನ ಬಗ್ಗೆ ಕಮೆಂಟ್ ಮಾಡಬೇಕು...?

‘‘ಇವರ ಜಾತಿಯೇ ಹೀಗೆ...ಒಳಗೊಂದು, ಹೊರಗೊಂದು’’ ಜಾನಕಿಯ ಬಾಯಿಯಿಂದ ಅಯಾಚಿತವಾಗಿ ಮಾತು ಹೊರ ಬಿತ್ತು.

‘‘ಹೂಂ ಮತ್ತೆ. ಪಾಪದವನ ಹಾಗೆ ಇದ್ದ. ಈಗ ನೋಡು, ಅವನ ಬುದ್ಧ್ದಿ ತೋರಿಸಲಿಲ್ಲವಾ? ಅವರು ಬಾಯಿಗೆ ಬಂದ ಹಾಗೆ ನಮ್ಮ ದೇವರ ಬಗ್ಗೆ ಕಮೆಂಟ್ ಮಾಡಬಹುದು. ಆದರೆ ಅದನ್ನು ಎಬಿವಿಪಿಯವರು ಕೇಳಬಾರದು...ಇದೆಂತಹ ನ್ಯಾಯಾ ಅಂತ? ಮುಸ್ತಫಾನ ಪರವಾಗಿ ಸುಧಾಕರ, ನರೇಶ್ ನಿಂತಿದ್ದರಂತೆ...’’ ಮೀನಾಕ್ಷಿ ಹೇಳಿದಳು.

‘‘ಅವರು ಯಾಕೆ ಮುಸ್ತಫಾನ ಪರವಾಗಿ ನಿಲ್ಲಬೇಕು...?’’ ಜಾನಕಿ ಕೇಳಿದಳು.

‘‘ನರೇಶ್‌ನ ಅಪ್ಪ ಗೊತ್ತಲ್ಲ? ಕಾಂಗ್ರೆಸ್‌ನ ಲೀಡರ್ ಅಂತೆ. ಕಾಂಗ್ರೆಸ್ ಲೀಡರ್‌ಗಳು ಯಾವಾಗ ನೋಡಿದರೂ ಆ ಜಾತಿಯರ ಹಿಂದೆ ತಿರುಗುವುದ ಲ್ಲವಾ? ಅವರಿಗೆ ಓಟು ಮುಖ್ಯ. ಹಿಂದೂ ಧರ್ಮ, ಸಂಸ್ಕೃತಿ, ದೇವರನ್ನು ಯಾರು ಏನು ಬೈದರೆ ಅವರಿಗೇನು ಹೋಯಿತು?’’

‘‘ಅದೂ ಹೌದು...’’ ಜಾನಕಿಗೆ ಸರಿ ಅನ್ನಿಸಿತು. ಆದರೂ ಎಲ್ಲೋ ಏನೋ ಸರಿ ಇಲ್ಲ ಅನ್ನಿಸಿತು. ದೂರದಿಂದ ನೋಡಿದರೆ ಪಪ್ಪುವಿನಂತೆಯೇ ಕಾಣುವ, ದಪ್ಪ ಕನ್ನಡಕ ಹಾಕಿಕೊಂಡು, ಯಾವಾಗಲೂ ಮುಜುಗರದಲ್ಲೇ ಓಡಾಡುವ ಮುಸ್ತಫಾ ಎಬಿವಿಪಿಯವರೊಂದಿಗೆ ರಾಂಗ್ ಮಾತನಾಡುವುದು ಸಾಧ್ಯವೇ? ಮೀನಾಕ್ಷಿಯೊಟ್ಟಿಗೆ ಇದೇ ಪ್ರಶ್ನೆಯನ್ನಿಟ್ಟಳು.

‘‘ಬೇರೆಯವರ ಧೈರ್ಯ ಕಣೇ...ಇದ್ದಾರಲ್ಲ ಆ ಸುಧಾಕರ, ನರೇಶ್...ಜೊತೆಗೆ ಏನೇ ನಡೆದರೂ ಅವನನ್ನು ಕೊಂಡಾಟ ಮಾಡಲು ಆ ಕನ್ನಡ ಪಂಡಿತರಿದ್ದಾರೆ. ಆ ಧೈರ್ಯದಲ್ಲಿ ಮಾತನಾಡಿದ್ದಾನೆ ಅಷ್ಟೇ...’’ ಎಂದು ಜಾನಕಿಯ ಮುಖ ನೋಡಿದಳು. ಅಲ್ಲಿ ಇನ್ನೂ ಅನುಮಾನದ ನೆರಳು ಉಳಿದುಕೊಂಡಿದ್ದಂತೆ ಕಂಡಿತು ‘‘ಇಲ್ಲದೇ ಇದ್ದರೆ...ಜನಸಂಖ್ಯೆ ದೇಶಕ್ಕೆ ವರ ಎಂದು ಮಾತನಾಡಿದ ಅವನಿಗೆ ಆ ಪಂಡಿತರು ತನ್ನ ಪೆನ್ನನ್ನು ಬಹುಮಾನ ಕೊಡುವುದು ಎಂದರೆ ಏನು? ಅದಕ್ಕೆ ಅರ್ಥ ಉಂಟಾ?’’ ಮೀನಾಕ್ಷಿ ಮತ್ತೆ ಒತ್ತಿ ಕೇಳಿದಳು.

ಜಾನಕಿಯ ತಲೆ ಗೊಂದಲದ ಗೂಡಾಗಿ ಬಿಟ್ಟಿತ್ತು.

ಇತ್ತ ಮುಸ್ತಫಾನಿಗೆ ಮನೆ ತಲುಪುವುದೇ ದೊಡ್ಡ ಸಮಸ್ಯೆಯಾಗಿತ್ತು. ತಂದೆಗೆ, ತಾಯಿಗೆ ಏನೆಂದು ಉತ್ತರಿಸುವುದು? ಒಂದು ವಾರ ಅಮಾನತಾಗಿದ್ದೇನೆ ಎಂದರೆ ತಂದೆ ಏನು ಹೇಳಬಹುದು? ಜವಳಿ ಅಂಗಡಿ ಯಲ್ಲೇ ಕುಳಿತುಕೋ...ಕಾಲೇಜಿಗೆ ಹೋಗುವುದೇ ಬೇಡ ಎಂದರೆ...ಹೀಗೆ ಸಾವಿರ ಆಲೋಚನೆಗಳು

ಮನೆ ತಲುಪಿದಾಗ ಅಲ್ಲಿ ಜನರ ದಂಡು ಸೇರಿತ್ತು. ಮನೆಯ ಬಾಗಿಲಲ್ಲೇ ಅವನ ತಂದೆ ಇದಿನಬ್ಬ ಅವರು ಮಗನಿಗಾಗಿ ಕಾಯುತ್ತಿದ್ದರು.

‘‘ಎಂತಾಯ್ತು...ಎಂತ ಗಲಾಟೆ’’ ಎಂದು ಮಗನ ಬಳಿಗೆ ಧಾವಿಸಿದರು.

‘‘ಎಂತದು ಇಲ್ಲ ಅಪ್ಪ...’’ ಎನ್ನುತ್ತಾ ಮುಸ್ತಫಾ ಮನೆಯ ಒಳಗೆ ಹೋದ. ತಂದೆ ಹಿಂಬಾಲಿಸಿದರು.

 ‘‘ಎಂತದು ಇಲ್ಲ ಅಂದರೆ ಹೇಗೆ? ಮುಖ ಬಾತಿದೆ, ಶರ್ಟು ಹರಿದಿದೆ...ನೀನೇನಾದರೂ ಅವರ ದೇವರ ಬಗ್ಗೆ ಕಮೆಂಟ್ ಮಾಡಿದೆಯಾ? ನನಗೆ ಸುದ್ದಿ ಸಿಕ್ಕಿತು...’’

‘‘ಇಲ್ಲ ಅಪ್ಪ....’’ ಮುಸ್ತಫಾ ಹೇಳಿದ.

ಇದಿನಬ್ಬರಿಗೆ ಮಗನ ಮೇಲೆ ತುಂಬಾ ಭರವಸೆ ಯಿತ್ತು. ಅವನು ಗಲಾಟೆಗೆ ಹೋಗುವ ಹುಡುಗನೇ ಅಲ್ಲ ಎನ್ನುವುದೂ ಗೊತ್ತಿತ್ತು. ಮೊನ್ನೆ ರಾಮಾಯಣ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಬಳಿಕ ಮಗನ ಬಗ್ಗೆ ಅವರಿಗೆ ಹೆಮ್ಮೆ ಅಧಿಕವಾಗಿತ್ತು. ಅಷ್ಟರಲ್ಲಿ ಇದೆಂತಹದೋ ಅನಾಹುತವಾಗಿದೆ. ಮುಸ್ತಫಾನ ತಾಯಿಯೂ ಕಣ್ಣೀರು ಹಾಕುತ್ತಿದ್ದರು.

‘‘ಏನೂ ಇಲ್ಲ. ಒಂದು ಸಣ್ಣ ವಿಷಯ...ಎಲ್ಲರೂ ಸೇರಿ ದೊಡ್ಡದು ಮಾಡಿದರು...’’ ಎಂದು ವಿವರಿಸುವುದಕ್ಕೆ ತೊಡಗಿದ.

ಅಷ್ಟರಲ್ಲಿ ಅಂಗಳದಲ್ಲಿ ನಿಂತಿದ್ದ ಇಬ್ಬರು ಗಡ್ಡಧಾರಿ ಗಳು ಮನೆಯೊಳಗೆ ಬಂದರು. ಅವರು ಸ್ಥಳೀಯ ಮುಸ್ಲಿಂಸಂಘಟನೆಯ ನಾಯಕರು.

 ‘‘ಇದೆಲ್ಲ ಆರೆಸ್ಸೆಸ್‌ನವರ ಪಿತೂರಿ....ಹೆದರಬೇಡ...ಪೊಲೀಸ್ ಕಂಪ್ಲೇಂಟ್ ಕೊಡುವ. ನಮ್ಮ ಸಂಘಟನೆ ಕಾಲೇಜಿನ ಎದುರು ಪ್ರತಿಭಟನೆ ಮಾಡುತ್ತದೆ. ಮುಸ್ತಫಾ ಏನು ಹೆದರುವುದು ಬೇಡ...’’ ಗಡ್ಡಧಾರಿಯಲ್ಲಿ ಒಬ್ಬ ಭರವಸೆ ನೀಡಿದ.

ಆದರೆ ಇದಿನಬ್ಬರು ಸಾರಾಸಗಟಾಗಿ ಅವರನ್ನು ನಿರಾಕರಿಸಿ ಬಿಟ್ಟರು ‘‘ನೋಡಿ...ಶಾಲೆಯಲ್ಲಿ ನಡೆದ ವಿಷಯ...ನೀವೆಲ್ಲ ಇದಕ್ಕೆ ಕೈ ಹಾಕಬೇಡಿ. ನನ್ನ ಮಗ ಅಲ್ಲಿ ಹೋಗುವುದು ಕಲಿಯುವುದಕ್ಕೆ. ರಾಜಕೀಯ ಮಾಡುವುದಕ್ಕಲ್ಲ...ನಿಮ್ಮನ್ನು ಯಾರು ಕರೆದದ್ದು ಇಲ್ಲಿಗೆ...’’ ಜೋರು ದನಿಯಲ್ಲಿ ಕೇಳಿದರು.

‘‘ಇದಿನಬ್ಬರೇ ನಿಮಗೆ ಗೊತ್ತಿಲ್ಲ. ಹೀಗೆ ಸುಮ್ಮನಿದ್ದರೆ ಅವರ ದಬ್ಬಾಳಿಕೆ ಜಾಸ್ತಿಯಾಗುತ್ತದೆ...’’

‘‘ಅಲ್ಲಾಹನ ಹೆಸರಲ್ಲಿ ಕೇಳಿಕೊಳ್ಳುತ್ತಿದ್ದೇನೆ... ದಯವಿಟ್ಟು ಇಲ್ಲಿಂದ ಒಮ್ಮೆ ಹೋಗಿ...’’ ಇದಿನಬ್ಬರು ಜೋರಾಗಿ ಹೇಳಿದರು.

ಗಡ್ಡಧಾರಿಗಳು ಗೊಣಗುತ್ತಾ ಅಲ್ಲಿಂದ ಹೊರಟರು.

ಇದಿನಬ್ಬರು ಮಗನನ್ನು ಹತ್ತಿರ ಕರೆದು ಸಮಾಧಾನಿಸತೊಡಗಿದರು. ‘‘ನಾಳೆ ನಾನೇ ಶಾಲೆಯಲ್ಲಿ ವಿಚಾರಿಸುತ್ತೇನೆ....’’ ಎಂದು ಅವನ ತಲೆ ಸವರಿದರು.

ಮರುದಿನವೇ ಇದಿನಬ್ಬರು ಕಾಲೇಜಿನ ಪ್ರಾಂಶುಪಾಲರನ್ನು ಭೇಟಿಮಾಡಿ ಕಣ್ಣೀರು ಹಾಕಿದರು. ಕನ್ನಡ ಪಂಡಿತರೂ ಮಧ್ಯಸ್ಥಿಕೆ ವಹಿಸಿದ್ದರಿಂದ ಮುಸ್ತಫಾನ ಅಮಾನತನ್ನು ಹಿಂದೆಗೆಯುವುದು ಎಂಬ ತೀರ್ಮಾನಕ್ಕೆ ಬರಲಾಯಿತು. ಆದರೆ ಆಗ ಎಬಿವಿಪಿಯ ಸಂಘಟನೆ ತಕರಾರು ತೆಗೆಯುವ ಸಾಧ್ಯತೆ ಇರುವುದರಿಂದ ಅಂತಿಮವಾಗಿ ಎಲ್ಲರ ಅಮಾನತನ್ನೂ ಹಿಂದೆಗೆಯಲಾಯಿತು. ಇದಿನಬ್ಬರು ಕಾಲೇಜು ದಾಟುವಾಗ ಅವರ ಹಿಂದೆಯೇ ಕನ್ನಡ ಪಂಡಿತರು ಬಂದಿದ್ದರು. ಅವರ ಕೈಗಳು ಇದಿನಬ್ಬರ ಬೆನ್ನು ಸವರಿದವು.

‘‘ಹೇಗಿದ್ದೀ ಇದ್ದಿನ್?’’

‘‘ಹುಂ...ಇದ್ದೇನೆ...’’

‘‘ಬಾಲವನಕ್ಕೆ ಬರುವುದನ್ನು ಸಂಪೂರ್ಣ ಬಿಟ್ಟೇ ಬಿಟ್ಟೆಯಲ್ಲ...’’ ಹೆಗ್ಡೆ ಕೇಳಿದರು.

‘‘ವ್ಯಾಪಾರ ಬಿಟ್ಟು ಬರ್ಲಿಕ್ಕೆ ಆಗುವುದಿಲ್ಲ ನೋಡು...’’ ಇದಿನಬ್ಬ ಹೇಳಿದರು.

 ಬಾಲವನ ಎನ್ನುವುದು ಇದಿನಬ್ಬ ಮತ್ತು ಹೆಗ್ಡೆಯವರನ್ನು ಹಿಡಿದಿಟ್ಟಿರುವ ಕೊನೆಯ ಕೊಂಡಿಯಾಗಿತ್ತು. ಇದಿನಬ್ಬ ಮತ್ತು ಹೆಗ್ಡೆ ಅವರ ಬಾಲ್ಯದ ಬೇರುಗಳೂ ಈ ಬಾಲವನದಲ್ಲೇ ಹರಡಿಕೊಂಡಿದ್ದವು. ಅವರಿಬ್ಬರು ಶಿವರಾಮ ಕಾರಂತರ ಬಾಲಶಿಬಿರವೊಂದರಲ್ಲಿ ಮುಖಾಮುಖಿ ಯಾಗಿದ್ದರು. ವಿವಿಧ ಶಾಲೆಯ ಆಯ್ದ ಮಕ್ಕಳಿಗಾಗಿ ಶಿವರಾಮಕಾರಂತರು ಪುತ್ತೂರಿನ ಕೇಂದ್ರ ಜಾಗದಲ್ಲಿ ಆ ಶಿಬಿರವನ್ನು ಹಮ್ಮಿಕೊಂಡಿದ್ದರು. ಅಂದು ಶಿಬಿರಕ್ಕೆ ಸ್ವಾತಂತ್ರ ಹೋರಾಟಗಾರ ಮುಕುಂದರಾಯರು ಆಗಮಿಸಿದ್ದರು. ಅವರು ಮಕ್ಕಳ ಬಾಲ ಚಟುವಟಿಕೆಗಳನ್ನು ವೀಕ್ಷಿಸುತ್ತಿದ್ದಾಗಲೇ ಇದಿನಬ್ಬ ಎದ್ದು ನಿಂತು ತನ್ನ ಕವನವನ್ನು ಓದಿದ್ದ.

‘‘ಗುಲಾಮರಾಗಿ ಬೆಂದರು

ಜನರು ದಿನವು ನೊಂದರು

ಗಾಂಧಿ ಜೊತೆ ಮುಕುಂದರು

ಧ್ವಜವ ಹಿಡಿದು ಬಂದರು

ಸ್ವಾತಂತ್ರವ ತಂದರು

ಭಾರತ್ ಮಾತಾಕಿ ಜೈ...’’

 ಎಳೆಬಾಲಕ ಹೀಗೊಂದು ಕವಿತೆಯನ್ನು ತನ್ನ ಕುರಿತಂತೆಯೇ ಓದಿ ‘ಭಾರತಮಾತಾಕಿ ಜೈ’ ಎಂದದ್ದು ಹಿರಿಯರಾದ ಮುಕುಂದರಾಯರನ್ನು ರೋಮಾಂಚನಗೊಳಿಸಿತ್ತು. ಧಾವಿಸಿ ಇದಿನಬ್ಬರನ್ನು ಎತ್ತಿ ಬೆಂಚಿನ ಮೇಲೆ ನಿಲ್ಲಿಸಿದರು. ತನ್ನ ಖಾದಿ ಜುಬ್ಬಾದಿಂದ ಒಂದು ಮುಷ್ಟಿ ಮಿಠಾಯಿಯನ್ನು ತೆಗೆದು ಆತನ ಮೊಗಸೆಯಲ್ಲಿಟ್ಟರು. ಬೆಂಚಿನ ಮೇಲೆ ಎಲ್ಲರಿಗಿಂತ ಎತ್ತರದಲ್ಲಿ ನಿಂತಿದ್ದ ಇದಿನಬ್ಬನನ್ನು ಹೆಗ್ಡೆಯವರು ಅದೇ ಮೊದಲ ಬಾರಿ ಅಸೂಯೆಯಿಂದ ನೋಡಿದ್ದ. ಮುಕುಂದರಾಯರು ‘‘ನಿನ್ನ ಹೆಸರೇನಪ್ಪ?’’ ಎಂದು ಕೇಳಿದರು.
‘‘ಇದಿನಬ್ಬ...’’ ಎಂದು ಜೋರಾಗಿ ಹೇಳಿದ್ದ.

‘‘ಇದಿನಬ್ಬ ಭವಿಷ್ಯದಲ್ಲಿ ನೀನಾಗು ಸಾಹಿತ್ಯದ ದಿಬ್ಬ

 ಕಾವ್ಯಾಸಕ್ತರಿಗೆ ನಿನ್ನ ಮಾತುಗಳೇ ಹಬ್ಬ’’ ಮುಕುಂದರಾಯರು ತಾವೂ ಇದಿನಬ್ಬನ ಹೆಸರಲ್ಲಿ ಒಂದು ಆಶು ಕವನವನ್ನು ವಾಚಿಸಿದಾಗ ಚಪ್ಪಾಳೆಯ ಸುರಿಮಳೆ ಹರಿಯಿತು. ವೇದಿಕೆಯಲ್ಲಿ ಶಿವರಾಮ ಕಾರಂತರು ತನ್ನ ಶಿಬಿರ ಸಾರ್ಥಕವಾದ ಸಂತೋಷದಲ್ಲಿದ್ದರು. ಹಿರಿಯ ಸಹಕಾರಿಯಾದ ಮೊಳಹಳ್ಳಿ ಶಿವರಾಯರೂ ಆ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಲ್ಲರೂ ಇದಿನಬ್ಬನ ಪ್ರತಿಭೆಯನ್ನು ಮೆಚ್ಚಿ ಮಾತನಾಡುವವರೇ ಆಗಿದ್ದರು. ಸಭಾ ಕಾರ್ಯಕ್ರಮ ಮುಗಿದದ್ದೇ ಹೆಗ್ಡೆ ಮೆಲ್ಲಗೆ ತಾನಾಗಿಯೇ ಹೋಗಿ ಇದ್ದಿನಬ್ಬನ ಜೊತೆ ಮಾತನಾಡಿದ್ದ.

‘‘ಅದು ನೀನೆ ಬರೆದ ಕವಿತೆಯಾ?’’ ಹೆಗ್ಡೆ ಕೇಳಿದ್ದ.

‘‘ಅಲ್ಲ, ನನ್ನ ಮೇಷ್ಟ್ರು ಬರೆದು ಕೊಟ್ಟದ್ದು. ಇದನ್ನು ಮುಕುಂದರಾಯರ ಎದುರುಗಡೆ ಹಾಡಬೇಕು ಎಂದೂ ಹೇಳಿದ್ದರು...’’ ಇದ್ದಿನಬ್ಬ ಸತ್ಯವನ್ನು ಬಹಿರಂಗಪಡಿಸಿದ್ದ.

‘‘ತುಂಬಾ ಚೆನ್ನಾಗಿತ್ತು...’’ ಹೆಗ್ಡೆ ಅಭಿನಂದಿಸಿದ್ದ. ಅಲ್ಲಿಂದ ಹೆಗ್ಡೆ ಮತ್ತು ಇದಿನಬ್ಬ ಯಾರೂ ಬೇರ್ಪಡಿಸಲಾಗದ ಸ್ನೇಹಿತರಾಗಿ ಮಾರ್ಪಟ್ಟರು. ಶಿವರಾಮರು ಕಾರಂತರು ಕಿಂದರಿ ಜೋಗಿಯಾದರೆ ಇವರಿಬ್ಬರು ಪುಟಾಣಿ ಇಲಿಗಳು. ಅವರನ್ನು ಹೋದಲ್ಲೆಲ್ಲ ಬಾಲದಂತೆ ಹಿಂಬಾಲಿಸಿದರು. ಮುಂದೆ ಪುತ್ತೂರಿನಲ್ಲಿ ಬಾಲವನ ಮಾಡಿದಾಗ, ಅದರೊಳಗೆ ಇವರು ಆಡಿದ್ದು, ಓಡಿದ್ದು, ಸಂಭ್ರಮಿಸಿದ್ದು ಮರೆಯಲಾಗದ ಅನುಭವ. ವಿದ್ಯಾರ್ಥಿ ಕಾಲ ಮುಗಿದ ಬಳಿಕವೂ ಇಬ್ಬರೂ ಬಾಲವನದ ಜೊತೆಗೆ ಸಂಬಂಧವನ್ನು ಉಳಿಸಿಕೊಂಡರು. ಆದರೆ ನಿಧಾನಕ್ಕೆ ಇದಿನಬ್ಬರು ತಮ್ಮ ವ್ಯಾಪಾರದ ಲೋಕದಲ್ಲಿ ಕಳೆದು ಹೋದಂತೆ ಬಾಲವನದಿಂದ ದೂರವಾಗಿದ್ದರು. ಬಾಲವನವೂ ಕಾಡುಬಳ್ಳಿ, ಧೂಳುಗಳಿಂದ ಮುಚ್ಚಿ ಹೋಗಿ ತನ್ನ ಹಳೆಯ ವೈಭವವನ್ನು ಕಳೆದುಕೊಂಡಿತು.

 ಒಂದಿಷ್ಟು ಹೊತ್ತು ಹಳೆಯದನ್ನೆಲ್ಲ ಅದಾವುದೋ ವಿಷಾದದ ಚೂರುಗಳೋ ಎಂಬಂತೆ ಹೆಕ್ಕಿ ಮಾತನಾಡಿದರು. ಬಳಿಕ ಒಮ್ಮೆಲೆ ಇದಿನಬ್ಬರು ‘‘ಹೆಗ್ಡೆ ಕಾಲ ಎಲ್ಲಿಗೆ ಬಂತು ನೋಡು...?’’ ಎಂದು ಗೆಳೆಯನ ಮುಂದೆ ಬಿಕ್ಕತೊಡಗಿದರು.

‘‘ಬಿಡು ನಾನಿದ್ದೇನಲ್ಲ...ಚಿಂತೆ ಮಾಡಬೇಡ. ನಿನ್ನ ಮಗನಿಗೆ ಒಳ್ಳೆಯ ಭವಿಷ್ಯವಿದೆ...’’ ಹೆಗ್ಡೆ ಸಮಾಧಾನಿಸಿದರು. ಇದಿನಬ್ಬ ತುಸು ನಿರಾಳವಾದರು. ‘‘ಆಯ್ತು ಹೊರಟೆ...’’ ಎಂದು ಇದಿನಬ್ಬರು ನಾಲ್ಕು ಹೆಜ್ಜೆ ಮುಂದೆ ಹಾಕಿದ್ದರು, ಅಷ್ಟರಲ್ಲಿ ಹೆಗ್ಡೆಯವರು ಹೇಳಿದರು ‘‘ಇದಿನಬ್ಬ ಭವಿಷ್ಯದಲ್ಲಿ ನೀನಾಗು ಸಾಹಿತ್ಯದ ದಿಬ್ಬ

ಕಾವ್ಯಾಸಕ್ತರಿಗೆ ನಿನ್ನ ಮಾತುಗಳೇ ಹಬ್ಬ’’

ಇದಿನಬ್ಬರು ನಕ್ಕು ಹಿಂದಿರುಗಿ ನೋಡಿದರು. ಅಲ್ಲಿ ಹೆಗ್ಡೆ ಮುಖ ಅರಳಿಸಿ ತನ್ನನ್ನೇ ನೋಡುತ್ತಿದ್ದರು ‘‘ನೀನು ಸಾಹಿತ್ಯದ ದಿಬ್ಬವಾಗದಿದ್ದರೂ ಪರವಾ ಗಿಲ್ಲ, ನಿನ್ನ ಮಗ ಮುಕುಂದ ರಾಯರ ಆಸೆಯನ್ನು ಈಡೇರಿಸುತ್ತಾನೆ. ನೋಡು ಬೇಕಾದರೆ...’’ ಹೆಗ್ಡೆ ಕೂಗಿ ಹೇಳಿದರು. 

(ಗುರುವಾರದ ಸಂಚಿಕೆಗೆ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)