varthabharthi


ತಾರಸಿ ನೋಟ

ಕಥನಕ್ಕೆ ಆವರಣ ಹೊದಿಸುವ ಹಿನ್ನೆಲೆ ಸಂಗೀತ

ವಾರ್ತಾ ಭಾರತಿ : 1 Apr, 2017

ಬದುಕಿನ ಒಂದು ತುಣುಕನ್ನು ನಮ್ಮ ಮುಂದಿರಿಸುವ ಚಲನಚಿತ್ರಗಳು ಬೆಳಕಿನ ವಿನ್ಯಾಸದೊಂದಿಗೆ, ಹಿನ್ನೆಲೆ ಸಂಗೀತವನ್ನೂ ಜೋಡಿಸಿ ಅವನ್ನು ಕಲಾತ್ಮಕವಾಗಿಸುತ್ತವೆ. ಅದೇ, ನಿಜ ಜೀವನದಲ್ಲಿ, ಅಂಥವೇ ಘಟನೆಗಳಿಗೆ ಬಗೆ ಬಗೆಯ ಬ್ಯಾಕ್‌ಗ್ರೌಂಡ್ ಸ್ಕೋರ್ ಇರುತ್ತವೆಯೆ? ಹಾಗೆ ಹೊಂದಿಸಿ ನೋಡುವುದು ಕುತೂಹಲಕರ ಮತ್ತು ಸೃಜನಾತ್ಮಕ. ಉದಾಹರಣೆಗೆ, ಎಲ್ಲ ನಗರ/ಪಟ್ಟಣ/ಹಳ್ಳಿಗಳಲ್ಲಿ ಒಂದೇ ಬಗೆಯ ರಸ್ತೆ, ತಿರುವು, ವೃತ್ತ, ಕಟ್ಟಡಗಳು ಅತ್ಯಲ್ಪಮಾರ್ಪಾಡಿನೊಂದಿಗೆ ಪುನರಾವರ್ತಿತವಾಗಿರುತ್ತವೆ.

ಅಲ್ಲಲ್ಲಿ ಬಸ್‌ಸ್ಟಾಪ್, ದೇವಸ್ಥಾನ, ಮಸೀದಿ, ಚರ್ಚು...ಹೀಗೆ ಪೂಜಾ/ಪ್ರಾರ್ಥನಾ ಸ್ಥಳ. ಬೇರೆ ಬೇರೆ ಹೆಸರಿನ ಬಡಾವಣೆಗಳಾದರೂ ವಿನ್ಯಾಸ ಅದೇ. ಹೀಗಿರುವಾಗ ನಮ್ಮೆಲ್ಲರ ಮುಂಜಾನೆ, ಮಧ್ಯಾಹ್ನ, ಸಂಜೆ, ರಾತ್ರಿಗಳಿಗೆ ತಾನೇತಾನಾಗಿ ಒದಗುವ ಹಿನ್ನೆಲೆ ಸಂಗೀತ ಕಾಮನ್. ಉದಾಹರಣೆಗೆ, ಬೆಳಗ್ಗೆ, ಸುಮಾರು ಆರರಿಂದ ಎಂಟು ಗಂಟೆಯ ತನಕ, ಸುಪ್ರಭಾತ, ಹೂ-ತರಕಾರಿ ಮಾರುವವರ ಸದ್ದಿಗೆ ನಮ್ಮ ಕಿವಿಗಳು ಒಗ್ಗಿಹೋಗಿರುತ್ತವೆ. ಇವುಗಳ ಮಧ್ಯೆ, ಹತ್ತಿರದ ಹಳ್ಳಿಯ ವ್ಯಾಪಾರಿಗಳು ಯಾರಾದರೂ ‘‘ನಾಟಿ ಮೊಟ್ಟೇ..’’, ‘‘ಅಳ್ಳೆಣ್ಣೇ..’’, ‘‘ಬೆಣ್ಣೇಯ್...’’ ಕೂಗು ತಂದರೆ ಅಷ್ಟೇ ಸಾಕು, ಏನೋ ಹೊಸತನ!

ಒಂಬತ್ತರಿಂದ ಬೀದಿ ತುಂಬ ಸ್ಕೂಲ್‌ವ್ಯಾನ್‌ಗಳ ಭರಾಟೆ, ಪೋಂಯ್ ಪೋಂಯ್ ಹಾರನ್. ಮೂರನೆ ಮಹಡಿಯಿಂದ ಒಂದು ಸಣಕಲು ಕೈಲಿ ಮಣಭಾರದ ಬ್ಯಾಗು, ಇನ್ನೊಂದರಲ್ಲಿ ಊಟದ ಡಬ್ಬಿ, ನೀರಿನ ಬಾಟಲಿ, ಕೈವಸ್ತ್ರ ಇರುವ ಚೀಲ ಹೊರಲಾರದೆ ಹೊತ್ತು, ನಿದ್ದೆಗಣ್ಣಾದರೂ ತಿಕ್ಕಿ ತೊಳೆದ ತನಿಯಾದ ಮುಖದೊಂದಿಗೆ ಇಳಿಯುತ್ತಿರುವ ಸಮರ್ಥನಿಗೆ ಹಂತ ಹಂತವಾಗಿ ‘‘ಸಮಣ್ಣಾ, ಸಮೂ, ಸಮ್ಯಾ, ವ್ಯಾನ್ ಬಂತೂ’’ ಹಿಮ್ಮೇಳ. ಅದು ಚಿರು, ಕಿರು, ಪುರು, ಕರು ಏನಾದರೂ ಆಗಬಹುದು. ಆದರೆ ತಾಯನ್ನಗಲಿ ಹೋಗುವ ಎಳೆಗರುವಿನಂತೆ ವಾಹನ ಏರುವ ಮಕ್ಕಳ ಮನದ ಮೇಳ ಮಾತ್ರ ಹೊರಗೆ ಕೇಳಿಸದ ಮೂಕರಾಗ. ನನ್ನನ್ನೂ ಸೇರಿಸಿ, ಸೂರ್ಯವಂಶಿಗಳನೇಕರಿಗೆ, ಹೀಗೆ ಬೆಳಬೆಳಗ್ಗೆಯೇ ಅಂಗಳದ ಹೂಗಳನ್ನು ಸ್ಕೂಲ್‌ಗೆ ಅಟ್ಟುವುದು ಅಕ್ಷಮ್ಯವೇ ಸರಿ...ಎಂಥಾ ಕಟು ವರ್ತನೆ! ಅವು ಎದ್ದು, ಒಂದೂ-ಎರಡು ಪೂರೈಸಿಕೊಂಡು, ಹಲ್ಲುಜ್ಜಿ, ಹೊಟ್ಟೆಗೆ ಒಂದಷ್ಟು ಸೇರಿಸಿಕೊಂಡ ಮೇಲೆ ಶಾಲೆಗೆ ಹೋದರಾಗದೆ? (ಅಷ್ಟು ಹೊತ್ತಿಗೆ ಅಪರಾಹ್ನ ಹನ್ನೆರಡು ಹೊಡೆದೇಬಿಡುತ್ತದೆ ಎಂದು ಶಿಸ್ತುಪಾಲಕರು ಹ್ಞೂಂಕರಿಸಿಯಾರು).

ಇವೇ ದೃಶ್ಯಗಳು ಒಂದು ಚಲನಚಿತ್ರದಲ್ಲಿ ಬಂದರೆ-ಸಾಮಾನ್ಯವಾಗಿ ಎಲ್ಲರೂ ನೋಡಿರಬಹುದಾದ ‘ತಾರೇ ಜಮೀನ್ ಪರ್’ ನೆನಪಿಸಿ ಕೊಳ್ಳಬಹುದು-ತಾಯಿ, ಮಕ್ಕಳು ಗಡಬಡಿಸಿ ಸಿದ್ಧರಾಗುವ ಏಕತಾನದ ದೈನಿಕ ದೃಶ್ಯಗಳನ್ನು ವೀಕ್ಷಕರ ಮನದಲ್ಲಿ ಸ್ಥಾಪಿಸುವಾಗ ಅದು ಆ ರಭಸಕ್ಕೆ ತಕ್ಕುದಾದ ಹಿನ್ನೆಲೆ ಸಂಗೀತ ಬಳಸುತ್ತದೆ. ಹೀಗೆ ಸನ್ನಿವೇಶಕ್ಕೆ ಪೂರಕವಾಗಿರುವ ಒಂದು ‘ಮೂಡ್ ಅಥವಾ ಮನೋ ವಾತಾವರಣ’ ಸೃಷ್ಟಿಯಾಗುತ್ತದೆ. ಪಾತ್ರಗಳ ಮಾತಿಗೆ, ಮುಖದ ಭಾವನೆಗಳಿಗೆ, ಆಂಗಿಕಾಭಿನಯಕ್ಕೆ ಸಂಗೀತಮಯ ವ್ಯಾಕರಣ ಚಿಹ್ನೆಗಳನ್ನು ಸಮಾನಾಂತರವಾಗಿ ಹಾಕುವುದೂ ಹಿನ್ನೆಲೆ ಸಂಗೀತದ ಕೆಲಸವೇ. ಅಂದರೆ ಕುಗ್ಗಿಹೋಗಿದ್ದಕ್ಕೆ ಒಂದು ವಯೊಲಿನ್ ‘‘ಟೊಂಯ್....’’ ಹಿರಿ ಹಿರಿ ಹಿಗ್ಗಿಗೆ ‘‘ಝಕ್ಕ ಝಕ್ಕ’’ ಇಲ್ಲವೇ ‘‘ಢಂಗ ಢಂಗ’’. ಶಬ್ದದ ನಾದವನ್ನು ಅನುಸರಿಸುವ ಈ ಪದಗಳಿಗೆ ಅರ್ಥಗಿರ್ಥ ಇರುವುದಿಲ್ಲವಾದ್ದರಿಂದ ಬೇಕಾದ್ದು ಬಳಸಬಹುದು.

ನತದೃಷ್ಟದ್ದು, ಪಾಪ ಮಧ್ಯಾಹ್ನದ ಹೊತ್ತು. ಹಿನ್ನೆಲೆ ಸಂಗೀತ ಮುಷ್ಕರ ಹೂಡಿರುವುದು ಗೊತ್ತಾಗುತ್ತದೆ: ಕೊರಿಯರ್ ಹುಡುಗನ ದ್ವಿಚಕ್ರ ವಾಹನ, ಗಡಗಡಾ ಬರುವ ಅಡುಗೆ ಅನಿಲ ರಿಕ್ಷಾಗಳು, ಇವುಗಳ ಮಧ್ಯೆ ಸಣಕಲ ಮಂಜುಳ ಆಗಿರುವ ಅಗೋಚರ ಸೈಕಲ್ ಬೆಲ್, ಬೀದಿಗೊಂದಾದರೂ ಇರುವ ಗುಡಿಗಳಲ್ಲಿ ಮಹಾಮಂಗಳಾರತಿಗೆ ಸ್ಪರ್ಧೆಗೆ ಬಿದ್ದಂತೆ ಐದು ಮಿನಿಟು ಹೊಡೆಯುವ ಜಾಗಟೆ-ಗಂಟೆ ಇಷ್ಟೇ ಅದಕ್ಕೆ ಪ್ರಾಪ್ತಿ. ಧಡಾಲ್ ಎಂದು ಟ್ರಾನ್ಸ್‌ಫಾರ್ಮರ್ ಸುಟ್ಟುಹೋದ ದಿನ, ಸ್ವಲ್ಪಶಬ್ದಮಯ. ಮಳ್ಳಿಯಂತೆ ಬಂದು ಟೊಳ್ಳುಟೊಳ್ಳಾದ ಟಪ್ ಟಪ್, ಗ್ರಿಲ್‌ಗಳ ಮೇಲೆ ಠಣ್‌ಣ್‌ಣ್ ಝೇಂಕಾರ ಹೊರಡಿಸುವ ಅಕಾಲದ ಆಲಿಕಲ್ಲು ಮಳೆ ಬಂದಾಗಲಂತೂ ಶಬ್ದಗ್ರಾಹಿ ಸುಲ್ತಾನರೆಲ್ಲ ಬೇಸ್ತು.

ಸತ್ಯಜಿತ್ ರೇ ನಿರ್ದೇಶಿಸಿರುವ ‘ಅಪೂ’ ತ್ರಿವಳಿ ಸಿನೆಮಾಗಳಲ್ಲಿ ಎರಡನೆಯದು ‘ಅಪೂರ್ ಸಂಸಾರ್’. ಅದರಲ್ಲಿ ನಾಯಕ ಅಪೂರ್ವಚಂದ್ರ ರಾಯ್ ನಿರುದ್ಯೋಗಿ ತರುಣ. ಮುದ್ದಿನ ಮಡದಿ ಹೆರಿಗೆಗೆಂದು ತವರಿಗೆ ಹೋಗಿದ್ದಾಳೆ. ಕೋಲ್ಕತಾ ಷಹರದಲ್ಲಿ ರೈಲ್ವೆ ನಿಲ್ದಾಣದ ಬಳಿ ಇರುವ ಕಿಷ್ಕಿಂಧೆಯಂತಹ ಕೋಣೆಯಲ್ಲಿ ಆ ತೇಜಸ್ವಿ ತರುಣನ ವಾಸ. ಕೈಯಲ್ಲಿ ಕಾಸಿಲ್ಲದ ಹತಾಶೆ. ಮೋಹದ ಹೆಂಡತಿಯ ಅನುಪಸ್ಥಿತಿ ತಂದಿಟ್ಟಿರುವ ವಿರಹದ ಆವೇಗ. ಕೋಣೆಯ ಯಾವುದೇ ವಸ್ತು ಮುಟ್ಟಿದರೂ ಅದು ಅವಳೊಂದಿಗೆ ನಡೆದ ಒಂದು ಸರಸ ಸಂಭಾಷಣೆಯನ್ನು ಮನದಲ್ಲಿ ರೀ ಪ್ಲೇ ಮಾಡಿ ವೇದನೆಗೊಂದು ಮಿಶ್ರ ಮಾಧುರ್ಯ ನೀಡುತ್ತದೆ. ರೈಲುಗಳ ಆರ್ಭಟದಲ್ಲಿ ಮೂಲೆಗಿಟ್ಟಿರುವ ಕೊಳಲನ್ನು ತುಟಿಯ ಬಳಿ ತಂದಾಗಲೆಲ್ಲ ಅಗೋ...ಇನ್ನೊಂದು, ಕ್ಷಣಕ್ಷಣಕ್ಕೆ ಅದರ ರಕ್ಕಸ ಶಬ್ದ ತೀವ್ರವಾಗುತ್ತಾ ಮೈಮೇಲೆ ಬಂದಷ್ಟು ದೊಡ್ಡದಾಗಿ, ಕ್ರಮೇಣ ದೂರವಾಗುತ್ತದೆ;ಅವನ ಬಳಲಿಕೆಯನ್ನು ಇಮ್ಮಡಿಗೊಳಿಸಿ. ನೀರವ ಮಧ್ಯಾಹ್ನಗಳಲ್ಲಿ, ತಪ್ ಎಂದು ನೆಲದ ಮೇಲೆ, ಒಂದಾನೊಂದು ಕಾಲದಲ್ಲಿ ಪೋಸ್ಟ್‌ಮನ್ ಬೀಸಿಹೋಗುತ್ತಿದ್ದ ಲಕೋಟೆ, ಎಷ್ಟೋ ಜನರ ಭವಿಷ್ಯ ಬರೆದದ್ದಿದೆ.

ಅರಿಸಿನ ಹಚ್ಚಿಸಿಕೊಂಡ ಅಪಾಯಿಂಟ್‌ಮೆಂಟ್ ಲೆಟರ್‌ಗಳು ಆನಂತರ ಉಕ್ಕಿಸುತ್ತಿದ್ದ ಹೇಷಾರವ, ಹರ್ಷೋದ್ಗಾರ, ಚೀತ್ಕಾರಗಳು ಬೇರೆಯದೇ ಜಾತಿಯ ಶಬ್ದಗಳಾಗಿದ್ದರೇನಂತೆ? ಕ್ಷಣಾರ್ಧದಲ್ಲಿ, ಎಲ್ಲಿಂದ, ಯಾರಿಂದ ಬಂತೆಂಬುದನ್ನು ಸ್ಕ್ಯಾನ್ ಮಾಡಲಾಗಿ, ಪ್ರೇಮಪತ್ರಗಳು ಅಂಗೈಯಲ್ಲಿ ಖೈದಾಗಿವೆ. ಆಗ ಹೊಮ್ಮಿದ ಉದ್ಗಾರ, ನಿಡಿದುಸಿರುಗಳಿಗೆ ಮ್ಯೂಟ್ ಒತ್ತಲಾಗಿದೆ. ಜಾತಕ-ಜನ್ಮಪತ್ರಗಳು ತಾಳೆಯಾಗಿ ಶುಭ ಮುಹೂರ್ತದ ತನಕ ಸವರಿಸಿವೆ. ಶಾರ್ಟ್ ಆ್ಯಂಡ್ ಸ್ವೀಟ್ ಆದ ಹಿನ್ನೆಲೆ ನಾದ ಅಂದರೆ ಬಹುಶಃ ಇದುವೇ ಇರಬೇಕು. ಆದರೆ ಪಾಪ! ಗೋಡೌನ್ ಸೇರಿದೆ. ಸುಂದರ ತರುಣಿ ಬರುತ್ತಿದ್ದಾಳೆನ್ನುವ ಶಬ್ದಭ್ರಮೆ ಸೃಷ್ಟಿಸುವ ಹೈಹೀಲ್ಡ್ ಚಪ್ಪಲಿಯ ‘‘ಟಕ್ ಟಕ್ ಟಕ್’’ ಮಾತ್ರ ಇನ್ನೂ ಬಳಕೆಯಲ್ಲಿದೆ. ಹಾಗೆ ಭ್ರಮಿತರಾಗಿ, ಕಣ್ಣಗಲಿಸಿ, ಗಮನ ಕೇಂದ್ರೀಕರಿಸಿ ಹುಡುಗರು ಕಾಯುತ್ತಿದ್ದರೆ ಶಬ್ದಮಾಡುತ್ತಾ ಬರುವುದು (ಒಂದು ಜಾಹೀರಾತು ತೋರಿಸುವ ಹಾಗೆ) ಅವರ ಬಾಸ್ ಆಗಿಬಿಡಬಹುದು!

ಹತ್ತಿಪ್ಪತ್ತು ವರ್ಷಗಳ ಹಿಂದೆ ಇಳಿಸಂಜೆಗೆ, ಮೆಲುದನಿಯ ಚಿತ್ರಗೀತೆಗಳು ಅದೆಷ್ಟು ಹೆಣೆದುಕೊಂಡಿದ್ದವೆಂದರೆ, ನಿಜ ಜೀವನದ್ದಾಗಲಿ, ಪರದೆಯ ಮೇಲಿನದ್ದಾಗಲಿ, ರಂಗದ ಮೇಲೆ ತಂದದ್ದಾಗಲಿ ಸಂಜೆ ದೃಶ್ಯಗಳಿಗೆ ಮಧುರ ರಾಗದ ಆದರೆ ಶಬ್ದಗಳು ಸ್ಪಷ್ಟವಿಲ್ಲದ ನಾದಹಿನ್ನೆಲೆ ಕೊಡಲೇಬೇಕಿತ್ತು. ಹಾಗಿದ್ದರೆ ಮಾತ್ರ ಅವು ನೈಜತೆಯ ಬಣ್ಣ ಪಡೆದುಕೊಳ್ಳುತ್ತಿದ್ದವು. ಆ ರೊಮ್ಯಾಂಟಿಕ್ ಗೀತೆಗಳ ನರುಗಂಪು, ಬೆಚ್ಚನೆ ಭಾವ ನಮ್ಮ ಐಂದ್ರಿಕ ಸಂವೇದನೆಗಳೆಲ್ಲ ಒಂದು ಇನ್ನೊಂದನ್ನು ಆವರಿಸಿ ಬೆಳೆಯುತ್ತವೆ ಎಂಬ ವಿಚಿತ್ರವನ್ನೂ ಹೇಳುತ್ತವೆ. ಅವಳ ತೊಡುಗೆ ಇವಳಿಗಿಟ್ಟು, ಇವಳ ಉಡುಗೆ ಅವಳಿಗಿಟ್ಟು ನೋಡಬಯಸಿದ ಕವಿ ವಾಣಿಯಂತೆ ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮಗಳು ತಮ್ಮ ಸಂವೇದನೆಗಳನ್ನು ಮಿಳಿತಗೊಳಿಸಿ ಮಜಾ ನೋಡಬಹುದು. ಇದು ಉತ್ತುಂಗ ತಲುಪುವುದು ಕವಿತೆಯಲ್ಲಿ. ದೃಶ್ಯ-ಶ್ರಾವ್ಯಗಳ ಸಂವೇದನೆ ಸಂತೃಪ್ತಗೊಳಿಸಿ ಒಂದು ಸಂಯುಕ್ತ ಅನುಭವವನ್ನು ಸೃಷ್ಟಿಸುವುದೇ ಸಿನೆಮಾಗಳಿಗೆ ಹಿನ್ನೆಲೆ ಸಂಗೀತ ಸಂಯೋಜಿಸುವುದರ ಹಿಂದಿರುವ ಆಶಯ.

ಕಂಡೂ ಕಾಣದಂತೆ, ಇದ್ದೂ ಇಲ್ಲದಂತೆ ಅದಿರಬೇಕು (ನಿಜ ಜೀವನ ಸಂದರ್ಭಗಳಲ್ಲಿ ಇರುವಂತೆ) ಎಂಬುದು ಅಲಿಖಿತ ನಿಯಮ. ಆದರೆ ಅದನ್ನು ಸಾಧಿಸುವುದು ಸುಲಭವಲ್ಲ. ದೊಡ್ಡ ಗಂಟಲಿನ, ರಾಚುವ ಹಿನ್ನೆಲೆ ಸಂಗೀತ ಪ್ರೇಕ್ಷಕರ ಅಭಿರುಚಿಯನ್ನು ಅಸೂಕ್ಷ್ಮಗೊಳಿಸುತ್ತದೆ. ಉದಾಹರಣೆಗೆ ಒಂದು ಪಾತ್ರದ ಒಳತೋಟಿ ಹೇಳಲು ಬಳಸುವ ಅಲೆ ಅಲೆ ಆಲಾಪ. ಎಷ್ಟು ಹೊತ್ತಿಗೂ ಮುಗಿಯಲೊಲ್ಲದು ಎಂಬುದೇ ಅದರ ಲೋಪ! ಅದೇ ಶ್ಯಾಮ್ ಬೆನಗಲ್‌ರ ‘ವೆಲ್‌ಕಂ ಟು ಸಜ್ಜನ್‌ಪುರ್’ನಲ್ಲಿ ತೃತೀಯ ಲಿಂಗಿ ಪಾತ್ರ, ದುಷ್ಟ ಶಕ್ತಿ ಗಳನ್ನು ಚುನಾವಣೆಯಲ್ಲಿ ಮಣಿಸಿದಾಗ ಹೊರಡುವುದು, ಧನ್ಯತೆ ಧ್ವನಿಸುವ ಒಂದಿಕ್ರ, ಸಣ್ಣ ಕೊಳಲಸ್ವರ! ಇಂಥದೊಂದು ವಿಷಯಕ್ಕೆ ಸಂಯೋಜನೆ ಹೀಗಿರಬೇಕು ಎಂಬ ನಿಯಮ ಹಾಕಿಕೊಡಲಾಗದ ಅಮೂರ್ತ ವಿದ್ಯೆ ಇದಾದ್ದರಿಂದ ಪ್ರಯೋಗಿಸಿ ನೋಡಿಯೇ ಪರಿಣಾಮ ತಿಳಿಯಬೇಕು.

ಪಂಡಿತ್ ರವಿಶಂಕರ್, ಪಥೇರ್ ಪಾಂಚಾಲಿ ಬಂಗಾಳಿ ಸಿನೆಮಾಗೆ ಹಿನ್ನೆಲೆ ಸಂಗೀತ ನೀಡಿದ್ದು ಜನಜನಿತ. ಹೀಗೆ ಕ್ಲಾಸಿಕ್ ಸಿನೆಮಾಗಳಿಗೆ ಸಂಗೀತ ದಿಗ್ಗಜರನ್ನು ಆ ಕಾಲದಲ್ಲಿ ಕರೆತರಲಾಗುತ್ತಿತ್ತು. ಅವರು ನೀಡುತ್ತಿದ್ದುದು ಸಾಮಾನ್ಯವಾಗಿ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಆಧರಿಸಿದ ನಾದಬರಹವನ್ನೇ. ಆದರೆ ‘ಮದ್ರಾಸ್ ಮೊಜಾರ್ಟ್’ ಬಿರುದಾಂಕಿತ ಎ.ಆರ್.ರಹಮಾನ್ ರಂಗಕ್ಕಿಳಿದ ಮೇಲೆ ಪಾಶ್ಚಿಮಾತ್ಯ ಹಾಗೂ ಪೌರ್ವಾತ್ಯ- ಎರಡೂ ಸಂಗೀತ ಪ್ರಕಾರದ ಬಳಕೆಯಾಗಿ ಸಂಚಲನ ಉಂಟುಮಾಡಿತು. ಅವರು ‘ತಿರುಡಾ ತಿರುಡಾ’ ಎಂಬ ತಮಿಳು ಥ್ರಿಲ್ಲರ್‌ಗೆ ನೀಡಿದ ಸಂಗೀತ, ತಮ್ಮನ್ನು ಅಗಾಧವಾಗಿ ಪ್ರಭಾವಿಸಿರುವುದನ್ನು ಹೊಸ ತಲೆಮಾರಿನ ಸಂಗೀತಜ್ಞರು ಸಂದರ್ಶನಗಳಲ್ಲಿ ಹೇಳುತ್ತಿರುತ್ತಾರೆ. ಈಗ ಸ್ವಯಂಭೂ (ಅಂದರೆ ಸ್ವಂತ ಪರಿಶ್ರಮದಿಂದ ಕಲಿತ) ಹಾಗೂ ಡಿಜಿಟಲ್ ತಂತ್ರಜ್ಞಾನ ನೆರವಿನಿಂದ ನವನವೀನ ಶಬ್ದಸೌಂದರ್ಯ ಕೇಳಿಸುವ, ಬೇರೆ ಬೇರೆ ಕ್ಷೇತ್ರಗಳಿಂದ ಬಂದ ಅಸಂಖ್ಯ ಪ್ರತಿಭಾವಂತರಿದ್ದಾರೆ. ಅಸಡ್ಡೆಗೆ ಆಗಾಗ ಒಳಗಾಗಿ, ಬಳಿಕ ಇಮ್ಮಡಿ ಉತ್ಸಾಹದಿಂದ ಮರುಶೋಧನೆಗೊಳ್ಳುವ ಜಾನಪದ-ಮೌಖಿಕ ಹಾಗೂ ವಾದ್ಯ-ಸಂಗೀತಕ್ಕೂ ಇವರ ಕಿವಿ ಸೂಕ್ಷ್ಮ.

ಇನ್ನು ದೆವ್ವ, ಭೂತ, ಪುನರ್ಜನ್ಮ, ಅತಿಮಾನುಷ ಜಗತ್ತುಗಳ ಹೆದರಿಕೆ, ನಿಗೂಢತೆ ಹುಟ್ಟಿಸುವ ಹಿನ್ನೆಲೆ ಸಂಗೀತ ಸೃಷ್ಟಿಸುವುದೂ, ಆಗಿಂದಾಗ್ಗೆ, ಈ ಬಗೆಯ ಸಿನೆಮಾಗಳು ಬೇಡಿಕೆ ಹುಟ್ಟಿಸಿಕೊಂಡಂತೆ, ಅವರಿಗೆ ಸವಾಲು. ಹಿನ್ನೆಲೆ ಧ್ವನಿಯನ್ನೇ ಒಂದು ಪಾತ್ರವಾಗಿಸುವ ಕೌತುಕವನ್ನು ಹಲವಾರು ಪ್ರಶಸ್ತಿ, ಪ್ರಶಂಸೆ ಗಳಿಸಿಕೊಂಡ ‘ಲಂಚ್‌ಬಾಕ್ಸ್’ ಸಿನೆಮಾದಲ್ಲಿ ನೋಡ ಬಹುದು. ಅದರಲ್ಲಿ, ನಾಯಕಿ ಇಳಾಗೆ, ಅಡುಗೆಯ ಜತೆ ಸುಖಸಂಸಾರದ ಸೂತ್ರಗಳನ್ನೂ ಮೇಲ್ಮನೆಯಲ್ಲಿರುವ ಹಿರಿಯಾಕೆ ಕಲಿಸುತ್ತಿರುತ್ತಾಳೆ. ಕೌಟುಂಬಿಕ ಅಸಂತುಷ್ಟಿಯಿಂದ ತಪ್ತಳಾಗಿರುವ ಅ ಗೃಹಿಣಿಗೆ ಈ ಧ್ವನಿಯೊಂದೇ ಸಾಂತ್ವನದ ಸೆಲೆ: ಏರಿಳಿತದ, ವತ್ತಿನ, ರಾಗದ, ಮುಗುಂ ಆಗಿ ಮುಗಿಸುವ, ಕೆಲ ಕ್ಷಣಗಳ ಮೌನದ ನಂತರ ಮತ್ತೆ ಮೀಟುವ ಅದರ ನಾನಾ ಅವತಾರ ತನ್ನ ಕಷ್ಟವನ್ನು ಕಣ್ಣಾರೆ ಕಂಡಂತೆ ಆಕೆಗೆ ಭಾಸವಾಗುತ್ತದೆ.

ಕನ್ನಡದಲ್ಲಿ ಸುನೀಲ್ ಕುಮಾರ್ ದೇಸಾಯಿ ಧ್ವನಿಯೇ ಶರೀರವಾದ ಬೆಳದಿಂಗಳ ಬಾಲೆಯನ್ನು ಸೃಷ್ಟಿಸಿದ್ದರು. ಮೂರ್ಖರ ದಿನವಾದ ಇಂದು ಕಿರುಪರದೆಯಲ್ಲಿ ಹಾಸ್ಯೋತ್ಸವ, ನಗೆಹಬ್ಬ, ಕಾಮಿಡಿ ಶೋಗಳದ್ದೇ ರಾಜ್ಯ. ಅವು ನಿಮಿಷಕ್ಕೊಮ್ಮೆ ಎಬ್ಬಿಸುವ ಹಹ್ಹಹ್ಹಾ, ಹೊಹ್ಹೊಹ್ಹೋ ನಗೆ ಅಲೆಯ ಅಬ್ಬರ. ಕ್ಯಾನ್ಡ್ ಲಾಫ್ಟರ್-ಡಬ್ಬದಲ್ಲಿ ತುಂಬಿ ತಂದ ಹಾಸ ಎನ್ನಬಹುದಾದ ಇದರ ಹಿಂದೆ ಒಂದು ತಮಾಷೆಯ ಕತೆ ಇದೆ: ಚಾರ್ಲ್ಸ್ ಅಥವಾ ಚಾರ್ಲಿ ಡಗ್ಲಾಸ್ ಎಂಬ ಸೌಂಡ್ ಇಂಜಿನಿಯರ್‌ಗೆ ಲೈವ್ ಕಾಮಿಡಿ ಶೋ ಪ್ರೇಕ್ಷಕರು ನಗುತ್ತಿದ್ದ ರೀತಿ ಅಸಮಾಧಾನ ಉಂಟುಮಾಡಿತಂತೆ. ಒಂದೋ ಅತಿ ಗಟ್ಟಿಯಾಗಿ ಇಲ್ಲವೇ ಅತಿ ಹೆಚ್ಚು ಸಮಯ ಅಥವಾ ತಪ್ಪುಸಮಯದಲ್ಲಿ ನಕ್ಕು ಅವರು ಮಾಡುತ್ತಿದ್ದ ಆಭಾಸ ತಪ್ಪಿಸಲು ಆತ ಹೀಗೆ ಅಳತೆ ಇಟ್ಟು ಹೊಲಿದಂತಹ ಧ್ವನಿಮುದ್ರಿತ ನಗೆಯ ಟ್ರಾಕ್ ಬಳಸಲು ಆರಂಭಿಸಿದ. ಬಾನುಲಿ ಪ್ರಸಾರದಲ್ಲಿ ಇದು ಸಾಮಾನ್ಯವೇ ಆಗಿದ್ದು ಅವನಿಗೆ ಪ್ರೇರಣೆ ಒದಗಿಸಿತು. 1950ರ ವೇಳೆಗೆ ಅಮೆರಿಕದಲ್ಲಿ ಟೀವಿ ಶೋಗಳು ಜನಪ್ರಿಯತೆ ಗಳಿಸಿಕೊಳ್ಳುತ್ತಿದ್ದಾಗ ಈ ಡಬ್ಬಿನಗು ವ್ಯಾಪಕವಾಗಿ ಬಳಕೆಗೆ ಬಂತು. ಕನ್ನಡ ಧಾರಾವಾಹಿ ಸಿಲ್ಲಿಲಲ್ಲಿಯ ಮಗುವಿನ (ಧೂರ್ತ) ಗಂಟಲ ನಗುವೇನು ಕಡಿಮೆ ಜನಪ್ರಿಯವಾಗಿತ್ತೆ?!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)