varthabharthi


ಯುದ್ಧ

ಧಾರಾವಾಹಿ-23

ಜಾನಕಿ ಹೇಳಿದ ಸುಳ್ಳು!

ವಾರ್ತಾ ಭಾರತಿ : 13 Apr, 2017

 ಜಾನಕಿಯ ಸಂಭ್ರಮಗಳು, ಮುಸ್ತಫಾನ ಹೆಮ್ಮೆಗಳ ನಡುವೆಯೇ ಮೊದಲ ಹಂತದ ಪರೀಕ್ಷೆ ಅವರಿಗೆ ಎದುರಾಗಿತ್ತು. ಅದಕ್ಕಾಗಿ ತಯಾರಿ ನಡೆಯುತ್ತಿತ್ತು. ಎಲ್ಲರೂ ತಮ್ಮ ತಮ್ಮ ಪುಸ್ತಕದೊಳಗೆ ಸೇರಿಕೊಳ್ಳತೊಡಗಿದರು. ಜಾನಕಿ, ಮುಸ್ತಫಾರೂ ಈ ಬಾರಿ ಪರೀಕ್ಷೆಗೆ ಹೆಚ್ಚು ಆದ್ಯತೆ ನೀಡಿದ್ದರು. ಪರೀಕ್ಷೆ ಇನ್ನೇನು ಮುಗಿಯುತ್ತಿರಬೇಕು ಎನ್ನುವಷ್ಟರಲ್ಲಿ ಒಂದು ದಿನ ಹಾಸ್ಟೆಲ್‌ನ ಮುಂದುಗಡೆ ಗುರೂಜಿಯವರ ಕಾರು ನಿಂತಿತು. ಜಾನಕಿಯ ತಂದೆ ಕಾರಿನಿಂದ ಬಂದಿಳಿದಿದ್ದರು. ಜಾನಕಿಗೆ ಅಚ್ಚರಿ. ಅಪ್ಪನ ಆ ಭೇಟಿಯನ್ನು ನಿರೀಕ್ಷೆ ಮಾಡಿರಲಿಲ್ಲ. ಹಾಸ್ಟೆಲ್‌ಗೆ ಭೇಟಿ ನೀಡುವುದಾದರೆ ಮೊದಲೇ ಮಾಹಿತಿಯನ್ನು ನೀಡುತ್ತಿದ್ದರು. ಜಾನಕಿ ತಂದೆಯ ಬಳಿ ಓಡಿದಳು.

ಮಗಳನ್ನು ಎದೆಗೊತ್ತಿಕೊಂಡ ಶ್ಯಾಮಭಟ್ಟರು ‘‘ಬಾ ಮಗಳೇ...ಒಂದು ವಾರ ರಜಾ ಹಾಕಿ ಬಿಡು. ನಿನ್ನ ತಾಯಿಗೆ ತುಸು ಹುಶಾರಿಲ್ಲ...ನಿನ್ನನ್ನು ನೋಡಬೇಕು ಎಂದು ಒತ್ತಾಯಿಸುತ್ತಿದ್ದಾಳೆ....ನಿನ್ನ ಬಟ್ಟೆ ಬರೆ ತೆಗೆದುಕೋ...’’ ಎಂದರು. ಜಾನಕಿ ಒಮ್ಮೆಲೆ ಗಾಬರಿಗೊಂಡಳು ‘‘ಅಮ್ಮನಿಗೇನಾಗಿದೆ ಅಪ್ಪಾಜಿ...’’ ಎನ್ನುತ್ತಾ ಜೋರಾಗಿ ಅಳತೊಡಗಿದಳು.

‘‘ಅಂತಹದೇನೂ ಇಲ್ಲ. ಮಗಳನ್ನು ನೋಡದೆ ಅವಳ ಮನಸ್ಸು ಜಡ್ಡುಗಟ್ಟಿದೆ. ನಿನ್ನನ್ನು ನೋಡಿದಾಕ್ಷಣ ಹುಶಾರಾಗಿ ಬಿಡುತ್ತಾಳೆ....’’ ಶ್ಯಾಮ ಭಟ್ಟರು ಸಮಾಧಾನಿಸಿದರು. ಜಾನಕಿ ಅವಸರವಸರದಿಂದ ಬಟ್ಟೆ ಬರೆಯನ್ನೆಲ್ಲ ತೆಗೆದುಕೊಂಡು, ಮೀನಾಕ್ಷಿಗೆ ವಿಷಯ ತಿಳಿಸಿ ತಂದೆಯ ಕಾರು ಹತ್ತಿದಳು. ಮನೆಯ ಕಡೆಗೆ ಪ್ರಯಾಣ ಬೆಳೆಸುತ್ತಿರುವಾಗ ತಾಯಿಗೇನಾಗಿದೆ ಎನ್ನುವುದನ್ನು ತಿಳಿದುಕೊಳ್ಳಲು ಜಾನಕಿ ಸಾಕಷ್ಟು ಪ್ರಯತ್ನ ಪಟ್ಟಿದ್ದಳು. ತಂದೆ ಯಾಕೋ ತಿಳಿಸುವ ವ್ಯವಧಾನದಲ್ಲಿದ್ದಂತೆ ಕಾಣುತ್ತಿರಲಿಲ್ಲ. ಅವರು ಗಂಭೀರವಾಗಿದ್ದರು.

‘‘ಅಂತಹದೇನೂ ಇಲ್ಲ ಮಗಳೇ. ತಾಯಿಗೆ ನಿನ್ನನ್ನು ನೋಡಲು ಮನಸ್ಸಾಗಿದೆ ಅಷ್ಟೇ...’’ ಎಂದೇ ಹೇಳುತ್ತಿದ್ದರು.

ಆ ಮುಚ್ಚುಮರೆ ಆಕೆಯ ಗಾಬರಿಯನ್ನು ಹೆಚ್ಚಿಸುತ್ತಿತ್ತು. ಮನೆ ತಲುಪಿದ್ದೇ, ಜಾನಕಿ ತಾಯಿಯ ಕಡೆಗೆ ಓಡಿದಳು. ತಾಯಿ ಕೋಣೆಯಲ್ಲಿ ಮಲಗಿದ್ದಳು. ಮಗಳನ್ನು ನೋಡಿದ್ದೇ ಪೇಲವವಾಗಿ ನಕ್ಕಳು. ‘‘ಏನಾಯಿತಮ್ಮ?’’ ಜಾನಕಿ ಆತಂಕದಿಂದ ಕೇಳಿದಳು.

‘‘ಕಳೆದರಡು ರಾತ್ರಿಗಳಿಂದ ನಿನ್ನ ಬಗ್ಗೆ ವಿಚಿತ್ರ ಕನಸುಗಳು ಬೀಳುತ್ತಿದ್ದವು ಕಣೇ...ನಿನ್ನನ್ನು ನೋಡಬೇಕು ಅನ್ನಿಸಿತು. ಅದಕ್ಕೆ ತಂದೆಯ ಬಳಿ ಹೇಳಿ ನಿನ್ನ ಕರೆಸಲು ಹೇಳಿದೆ...’’ ಜಾನಕಿಯ ತಾಯಿ ಪದ್ಮಮ್ಮ ಹೇಳಿದಳು. ಜಾನಕಿ ತಾಯಿಯನ್ನು ತಬ್ಬಿಕೊಂಡಳು. ಮಗಳು ಬಂದದ್ದೇ ಸರಿ, ಪದ್ಮಮ್ಮ ಎದ್ದು ಕೂತಳು. ‘‘ಒಂದು ವಾರ ಕಾಲೇಜು, ಹಾಸ್ಟೆಲನ್ನೆಲ್ಲ ಮರೆತು ನೀನು ಇಲ್ಲಿರು...ಬೇಕಾದರೆ ಪಪ್ಪುವಿಗೆ ವಿಷಯ ತಿಳಿಸುತ್ತೇನೆ...ಅವನೂ ಬರುತ್ತಾನೆ...ಕಾಲೇಜಿಗೆ ಬೇಕಾದರೆ ರಜೆ ಹಾಕಬಹುದು...’’

‘‘ಬೇಡಮ್ಮ. ಅವನು ತುಂಬಾ ಬೋರು. ನಾನು ನಿನ್ನ ಜೊತೆಗೇ ಇರುತ್ತೇನೆ...ನನಗೇಕೋ ತುಂಬಾ ಗಾಬರಿಯಾಗಿತ್ತು....ನಿನಗೇನು ಆಗಿಲ್ಲ ಎನ್ನುವುದರಿಂದಲೇ ನನಗೆ ತುಂಬಾ ಸಂತೋಷವಾಗಿದೆ...’’

‘‘ಪಪ್ಪು ಪ್ರತಿವಾರ ಬಂದು ನಿನ್ನನ್ನು ಕೇಳಿ ಹೋಗುತ್ತಾನೆ. ಸಮಯವಿದ್ದಾಗ ಒಮ್ಮೆ ಅವರ ಮನೆಯ ಕಡೆಗಾದರೂ ಹೋಗಿ ಬಾ...’’ ಪದ್ಮಮ್ಮ ಹೇಳಿದರು. ಜಾನಕಿ ವೌನವಾದಳು. ತಾಯಿಗೆ ಏನು ಅಸೌಖ್ಯ ಎನ್ನುವುದೇ ಜಾನಕಿಗೆ ಸ್ಪಷ್ಟವಾಗಲಿಲ್ಲ. ಜಾನಕಿ ಬಂದ ಗಳಿಗೆಯಿಂದ ಪದ್ಮಮ್ಮ ಎದ್ದು ಎಂದಿನಂತೆ ಓಡಾಡತೊಡಗಿದ್ದರು. ಅವರಿಗೆ ಏನೂ ಆಗಿಲ್ಲವಲ್ಲ ಎನ್ನುವ ಸಂತೋಷದಲ್ಲಿ ಆ ಬಗ್ಗೆ ಹೆಚ್ಚು ವಿಚಾರಿಸುವುದಕ್ಕೂ ಹೋಗಲಿಲ್ಲ. ಇರುವಷ್ಟು ದಿನ ಜಾನಕಿ ತಮ್ಮ ಅಡಿಕೆ ತೋಟದಲ್ಲಿ ಓಡಾಡಿದಳು. ತಾಯಿಗೆ ಅಡುಗೆ ಅದು ಇದು ಎಂದು ಸಹಕರಿಸಿದಳು. ಉಳಿದಂತೆ ಎರಡನೆ ವರ್ಷದ ಪರೀಕ್ಷೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಓದತೊಡಗಿದಳು. ಈ ಒಂದು ವಾರದ ರಜೆಯನ್ನು ಹೇಗೆ ಸರಿದೂಗಿಸುವುದು ಎನ್ನುವುದೇ ಅವಳಿಗೆ ತಲೆಬಿಸಿಯಾಗಿತ್ತು. ಮುಸ್ತಫಾನ ನೋಟ್ಸ್ ಬುಕ್‌ನ್ನು ಪಡೆದುಕೊಂಡು ಎಲ್ಲವನ್ನೂ ಮತ್ತೆ ಬರೆಯಬೇಕಾಗುತ್ತದೆ. ಆದರೆ ಅದಕ್ಕಾಗಿ ನಿದ್ದೆಗಳೆಯಬೇಕಾಗುತ್ತದೆ. ಜೊತೆಗೆ ಅಂದಂದಿನ ಪಾಠದ ಬಗ್ಗೆಯೂ ಗಮನ ಹರಿಸಬೇಕು. ಮತ್ತೆ ಕಾಲೇಜಿಗೆ ತೆರಳಲು ತಾಯಿಯ ಅಪ್ಪಣೆ ಸಿಕ್ಕಿದರೆ ಸಾಕು ಎಂಬಂತಾಯಿತು ಜಾನಕಿಯ ಸ್ಥಿತಿ. ಹೀಗಿರುವಾಗ ಒಂದು ದಿನ ಅಂಗಳದಲ್ಲಿದ್ದ ತಾಯಿ ‘‘ಜಾನಕೀ ಯಾರು ಬಂದಿದ್ದಾರೆ ನೋಡು?’’ ಎಂದು ಕೂಗಿದ್ದು ಕೇಳಿಸಿತು.

ಜಾನಕಿ ಹೊರಗೋಡಿದಳು. ನೋಡಿದರೆ ಪಪ್ಪು ತನ್ನ ವಿಸ್ಮಯದ ಕಣ್ಣುಗಳ ಜೊತೆಗೆ ನಿಂತಿದ್ದ. ಜಾನಕಿಗೂ ಅವನನ್ನು ಕಂಡು ಹಿತ ಎನ್ನಿಸಿತು.

‘‘ಯಾವಾಗ ಬಂದದ್ದು? ನೀನು ರಜೆಯಲ್ಲಿ ಬಂದಿರುವುದು ನನಗೆ ಗೊತ್ತೇ ಇರಲಿಲ್ಲ...’’ ಪಪ್ಪು ತಟ್ಟನೆ ಕೇಳಿದ.

ಪಪ್ಪುವಿನ ಎದೆಯೊಳಗೆ ಒಂದು ಸಣ್ಣ ಗುಟ್ಟು ಇತ್ತು. ಅವನು ಅದಾಗಲೇ ಮಿಲಿಟರಿ ಸೇರುವುದಕ್ಕೆ ಬೇಕಾಗಿರುವ ಎಲ್ಲ ತಯಾರಿಯನ್ನು ಮಾಡಿಕೊಂಡಿದ್ದ. ಸಮಯ ಸಂದರ್ಭ ನೋಡಿ ಜಾನಕಿಗೆ ಹೇಳಬೇಕು ಎಂದು ಅವನು ನಿರ್ಧರಿಸಿದ್ದ. ಇಬ್ಬರು ಒಟ್ಟಾಗಿ ಮಾತಿಗೆ ತೊಡಗಿದರು. ‘‘ಹೇಗಿದೆ ಸರಕಾರಿ ಶಾಲೆ?’’ ಜಾನಕಿ ಕೇಳಿದಳು.

ಯಾಕೋ ಪಪ್ಪುವಿನ ಒಳಗಡೆ ಸಣ್ಣದೊಂದು ಮುಳ್ಳು ಕದಲಿದಂತಾಯಿತು. ತನ್ನ ಸರಕಾರಿ ಶಾಲೆಯ ಕುರಿತಂತೆ ಏನೋ ಒಂದು ಕೀಳರಿಮೆ.

‘‘ಅದರಷ್ಟಕ್ಕೇ ಅದು ಉಂಟು....ನಾನು ಎನ್‌ಸಿಸಿ ಸೇರಿದ್ದೇನೆ ಗೊತ್ತಾ ನಿನಗೆ?’’ ಪಪ್ಪು ಆಸಕ್ತಿಯಿಂದ ಹಂಚಿಕೊಂಡ. ‘‘ಹೌದಾ...ನನಗೆ ಅದಕ್ಕೆಲ್ಲ ಸೇರಲು ಪುರುಸೊತ್ತೇ ಇಲ್ಲ. ಈ ಬಾರಿ ಎರಡನೆ ವರ್ಷ. ಬಹಳ ಮುಖ್ಯ ವರ್ಷ. ಮುಂದೆ ಡಾಕ್ಟರ್ ಅಥವಾ ಇಂಜಿನಿಯರ್ ಆಗುವುದಕ್ಕೆ ಬೇಕಾದ ತಯಾರಿ ನಡೆಸಬೇಕು...’’ ಜಾನಕಿ ಚಿಂತಾಕ್ರಾಂತಳಾದಳು. ಪಪ್ಪು ಸಂಕೋಚದಿಂದ ವೌನವಾದ. ಪಿಯುಸಿಯಲ್ಲಿ ತನಗೇ ಇಷ್ಟೆಲ್ಲ ಓದಲಿರುವಾಗ, ಇನ್ನು ಜಾನಕಿಯ ಸ್ಥಿತಿ ಏನಾಗಬೇಕು?

ತುಸು ಹೊತ್ತು ಸಣ್ಣ ಪುಟ್ಟ ವಿಷಯಗಳನ್ನೆಲ್ಲ ಹಂಚಿಕೊಂಡರು. ಇದ್ದಕ್ಕಿದ್ದಂತೆಯೇ ಜಾನಕಿ ‘‘ನಿನಗೊಂದು ವಿಶೇಷ ತೋರಿಸುವೆ...’’ ಎಂದು ಎದ್ದು ಒಳ ಹೋದಳು. ಪಪ್ಪು ಕುತೂಹಲಿಗನಾದ. ಅದೇನಿರಬಹುದು ವಿಶೇಷ?

ತುಸು ಹೊತಲ್ಲೇ ಜಾನಕಿ ಕೋಣೆಯಿಂದ ಹೊರ ಬಂದಳು. ಅವಳ ಕೈ ಬೆನ್ನಿನ ಹಿಂದಿತ್ತು. ಅಲ್ಲೇನೋ ಬಚ್ಚಿಟ್ಟಿದ್ದಳು. ‘‘ಏನದು? ತೋರಿಸು...’’ ಪಪ್ಪು ಅವಸರಿಸಿದ.

ನಿಧಾನಕ್ಕೆ ವಿಶೇಷವನ್ನು ಪಪ್ಪುವಿನ ಮುಂದೆ ತಂದಳು. ಅದೊಂದು ಪೆನ್ನು. ಬಂಗಾರದ ಬಣ್ಣದ ಪೆನ್ನು. !

ನಿಧಾನಕ್ಕೆ ಅದರ ಮುಚ್ಚಳವನ್ನು ತೆರೆದು ಪಪ್ಪುವಿನ ಮುಂದಿಟ್ಟಳು. ಪಪ್ಪು ನೋಡಿದ. ‘‘ಇದು ಬಂಗಾರದ್ದ?’’ ಪಪ್ಪು ಕಣ್ಣರಳಿಸಿ ಕೇಳಿದ. ‘‘ಬಂಗಾರದ್ದೇನೂ ಅಲ್ಲ...ಆದರೆ ಬಂಗಾರಕ್ಕಿಂತ ಬೆಲೆ ಬಾಳುವ ಪೆನ್ನು...’’ ಜಾನಕಿ ಹೇಳಿದಳು.

ಬಂಗಾರದ್ದಲ್ಲ ಎಂದಾಗ ಪಪ್ಪುವಿಗೆ ಅದರ ಕುರಿತ ಕುತೂಹಲ ತುಸು ತಗ್ಗಿತು. ಸಣ್ಣ ಕಾಗದದ ಚೂರಿನಲ್ಲಿ ಬರೆಯಲು ಪ್ರಯತ್ನಿಸಿದ. ತನ್ನ ಪೆನ್ನಿನಲ್ಲಿ ಬರೆಯುವಷ್ಟು ಸರಾಗವಾಗಿ ಬರೆಯುವುದಕ್ಕೆ ಆಗುತ್ತಿಲ್ಲ ಅನ್ನಿಸಿತು. ಆದರೂ ವಿಶೇಷ ಪೆನ್ನೇ ಆಗಿದೆ. ‘‘ಈ ಪೆನ್ನು ಯಾರು ಕೊಟ್ಟರು? ಗುರೂಜಿಯವರು ಕೊಟ್ಟರೆ?’’ ಪಪ್ಪು ಕೇಳಿದ.

ಜಾನಕಿ ಇಕ್ಕಟ್ಟಿಗೆ ಸಿಕ್ಕಿಕೊಂಡಳು. ಏನೆಂದು ಹೇಳುವುದು? ಹೇಳಿದರೆ ಎಲ್ಲವನ್ನೂ ಬಿಡಿಸಿ ಹೇಳಬೇಕು. ಆಗ ತಾನು ಭಾಷಣ ಸ್ಪರ್ಧೆಯಲ್ಲಿ ಸೋತಿರುವುದನ್ನೂ ಹೇಳಬೇಕಾಗುತ್ತದೆ. ಮುಸ್ತಫಾನ ಕತೆಯನ್ನೂ ವಿವರಿಸಬೇಕಾಗುತ್ತದೆ. ‘‘ಇದು ನಮ್ಮ ಕಾಲೇಜಿನ ಕನ್ನಡ ಪಂಡಿತರ ಪೆನ್ನು...ನನಗೆ ಬಹುಮಾನವಾಗಿ ಕೊಟ್ಟರು...’’ ಜಾನಕಿ ಹೇಳಿಯೇ ಬಿಟ್ಟಳು.

‘‘ಹೌದೇ...ಬಹುಮಾನವಾಗಿ ಕೊಟ್ಟರೇ?’’ ಪಪ್ಪು ಅಚ್ಚರಿಗೊಂಡ. ಹಾಗಾದರೆ ಇದು ನಿಜಕ್ಕೂ ವಿಶೇಷ ಪೆನ್ನೇ ಸರಿ. ‘‘ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಬಂದುದಕ್ಕೆ ಕೊಟ್ಟರೇ?’’

‘‘ಅಲ್ಲ, ರಾಮಯಾಣ ಪರೀಕ್ಷೆಯಲ್ಲಿ ನಾನು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದೆ. ಅದಕ್ಕೆ ಕೊಟ್ಟರು...’’ ಜಾನಕಿ ಉತ್ತರಿಸಿದಳು. ಓಹ್! ಅಷ್ಟು ದೊಡ್ಡ ಸಾಧನೆ ಮಾಡಿರುವಾಗ ಕೊಡದೇ ಇರುತ್ತಾರೆಯೇ? ಪೆನ್ನನ್ನು ಜಾಗ್ರತೆಯಾಗಿ ಜಾನಕಿಗೆ ಮರಳಿಸಿದ. ತಾನು ಸೇನೆಗೆ ಸೇರಲಿರುವುದನ್ನು ಜಾನಕಿಗೆ ಹೇಳಿಯೇ ಬಿಡಲೇ ಎಂದು ಪಪ್ಪು ಯೋಚಿಸಿದ. ಆದರೆ ಬಳಿಕ ಸೇನೆಗೆ ಆಯ್ಕೆಯಾಗದೇ ಇದ್ದರೆ ಅವಮಾನ. ಆಯ್ಕೆಯಾದ ಬಳಿಕವೇ ಹೇಳಿದರೆ ಒಳ್ಳೆಯದು ಅನ್ನಿಸಿತು. ಮುಸ್ತಫಾನ ಬಗ್ಗೆ ಪಪ್ಪುವಿಗೆ ಏನಾದರೂ ಹೇಳಬೇಕು ಅನ್ನಿಸಿತು ಜಾನಕಿಗೆ. ಆದರೆ ಕೊನೆಯ ಕ್ಷಣದಲ್ಲಿ ಬೇಡ ಎಂದು ತೀರ್ಮಾನಿಸಿದಳು. ಯಾಕೋ ಅವಳು ಅನ್ಯಮನಸ್ಕ್ಕಳಾದಳು. ಜಾನಕಿ ವೌನವಾಗಿರುವುದು ನೋಡಿ, ಪಪ್ಪುವಿಗೂ ಹೆಚ್ಚು ಮಾತನಾಡುವ ಧೈರ್ಯ ಬರಲಿಲ್ಲ. ಬೇರೇನೇನೋ ಮಾತನಾಡಿದ ಬಳಿಕ ಪಪ್ಪು ಮನೆಗೆ ಹೊರಟ. ಹೊರಡುವ ಸಮಯಕ್ಕೆ ಜಾನಕಿ ಮೆಲ್ಲಗೆ ಪಪ್ಪುವಿನ ಬೆನ್ನನ್ನು ತಟ್ಟಿ ಕೇಳಿದಳು ‘‘ಏ...ನಿನ್ನ ದೋಸ್ತ್ ಆ ಕಬೀರ್ ಅಂತ ಒಬ್ಬ ಇದ್ದನಲ್ಲ? ಅವನು ಹೇಗಿದ್ದಾನೆ?’’

ಪಪ್ಪು ಮುಖ ಕಿವುಚಿ ಹೇಳಿದ ‘‘ನನಗೆ ಗೊತ್ತಿಲ್ಲ. ನಾನು ಆ ಜಾತಿಯವರಲ್ಲೀಗ ಮಾತೇ ಆಡುವುದಿಲ್ಲ’’

ಆ ಉತ್ತರ ಜಾನಕಿಗೆ ಯಾಕೋ ಖುಷಿ ಕೊಡಲಿಲ್ಲ. ಅವಳ ಮುಖ ಅರಳಲಿಲ್ಲ.

ಮೆಲ್ಲಗೆ ‘‘ನಿನಗೆ ಗೊತ್ತಾ...ಆ ಜಾತಿಯವರಿದ್ದಾರಲ್ಲ...ಅವರಲ್ಲೂ ಒಳ್ಳೆಯವರಿದ್ದಾರೆ...’’ ಎಂದಳು.

‘‘ಏನು?’’ ಏನೇನೂ ಅರ್ಥವಾಗದೆ ಪಪ್ಪು ಮರು ಪ್ರಶ್ನಿಸಿದ.

‘‘ಏನೂ ಇಲ್ಲ ಬಿಡು. ಇನ್ನೊಮ್ಮೆ ಹೇಳುತ್ತೇನೆ...’’ ಎಂದಳು ಜಾನಕಿ.

***

 ಒಂದು ವಾರ ಮನೆಯಲ್ಲಿ ತಾಯಿಯ ಜೊತೆಗೇ ಕಳೆದು ಜಾನಕಿ ತಂದೆಯ ಕಾರಿನಲ್ಲೇ ಪುತ್ತೂರಿಗೆ ಹೊರಟಳು. ಅವಳ ತಂದೆ ಯಾಕೋ ಗಂಭೀರವಾಗಿದ್ದರು. ಯಾವಾಗಲೂ ಮಾತಿನಲ್ಲಿ ಜೇನು ಸುರಿಸುತ್ತಿದ್ದ ತಂದೆಯಲ್ಲ ಅವರು. ಅಮ್ಮನಿಗೆ ನಿಜಕ್ಕೂ ಬೇರೇನಾದರೂ ಗಂಭೀರ ಕಾಯಿಲೆಯಿದೆಯೋ? ತನ್ನಿಂದ ಏನಾದರೂ ಮುಚ್ಚಿಟ್ಟಿದ್ದಾರೋ? ತಂದೆಯ ಬಳಿ ಕೇಳುವುದಕ್ಕೇ ಭಯವಾಯಿತು. ಏನಾದರೂ ಇದ್ದಿದ್ದರೆ ತಂದೆಯೇ ಬಾಯಿ ಬಿಟ್ಟು ಹೇಳುತ್ತಿದ್ದರು. ಇರುವಷ್ಟು ದಿನ ತಾಯಿ ಯಾವುದೇ ಕಾಯಿಲೆ ಇರುವಂತೆ ವರ್ತಿಸಿರಲಿಲ್ಲ. ಆದರೂ ಆಕೆಯ ಮನಸ್ಸಿಗೆ ಸಮಾಧಾನವಿಲ್ಲ.

(ರವಿವಾರದ ಸಂಚಿಕೆಗೆ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)