varthabharthi


ಕರಾವಳಿ

"ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟ ಪ್ರಶಸ್ತಿ" ಪ್ರದಾನ

ವಾರ್ತಾ ಭಾರತಿ : 13 Apr, 2017

ಬಂಟ್ವಾಳ ಎ. 13: ಸಾಹಿತ್ಯ ಮತ್ತು ಆಧ್ಯಾತ್ಮಿಕ ಚಿಂತನೆಗಳು ಜೊತೆಯಾಗಿ ಸಾಗಬೇಕು. ಸಾಹಿತ್ಯಕ್ಕೆ ಭೀಮ ಭಟ್ಟರ ಸಾಹಿತ್ಯಿಕ ಕೊಡುಗೆ ಅಪಾರವಾಗಿದೆ. ಅವರು ಇಂದಿನ ಕಾಲಘಟ್ಟದಲ್ಲಿ ಇನ್ನಷ್ಟು ಕಾಲ ಬದುಕಿ ಇರಬೇಕಾಗಿತ್ತು ಎಂದು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕಚೈತನ್ಯಾನಂದ ಸ್ವಾಮಿಜಿ ಹೇಳಿದರು.

ಬಿ.ಸಿ.ರೋಡ್ ಕ್ಷೇತ್ರ ಶಿಕ್ಷಣಾಧಿಕಾರಿ ಸಭಾಂಗಣದಲ್ಲಿ ನಡೆದ "ಕನ್ನಡದ ಕಲ್ಹಣ ನಿರ್ಪಾಜೆ ಭೀಮ ಭಟ್ಟ ಟ್ರಸ್ಟ್", ನೀರ್ಪಾಜೆ ಭೀಮ ಭಟ್ ಅಭಿಮಾನಿ ಬಳಗ ಬಂಟ್ವಾಳ ತಾಲೂಕು ಆಶ್ರಯದಲ್ಲಿ ನಡೆದ "ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟ ಪ್ರಶಸ್ತಿ" ಪ್ರದಾನ ಮತ್ತು ಸಂಸ್ಮರಣೆ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು

ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ. ಪುಂಡಿಕಾ ಗಣಪಯ್ಯ ಭಟ್ ಮಾತನಾಡಿ, ದಿ. ನಿರ್ಪಾಜೆ ಭೀಮ ಭಟ್ಟರು ಸಂಸ್ಕೃತದ ಮಹಾಕಾವ್ಯ ಕಲ್ಹಣನ "ರಾಜತರಂಗಿಣಿ"ಯನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಇತಿಹಾಸ ಮತ್ತು ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದರು.

ಕನ್ನಡದ ಕಲ್ಹಣ ಪ್ರಶಸ್ತಿ ಸ್ವೀಕರಿಸಿದ ಗ್ರಂಥಕರ್ತ, ಯಕ್ಷಗಾನ ಅರ್ಥಧಾರಿ, ಪ್ರವಚನಕಾರ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಸಿ. ಮಾತನಾಡಿ, ನನ್ನ ಬರವಣಿಗೆಗೆ ನೀರ್ಪಾಜೆ ಪ್ರೇರಕರಾಗಿದ್ದರು. ಸಂಸ್ಕೃತ ವಿದ್ವಾಂಸ ಸಾಹಿತಿಯಾಗಿದ್ದು ಯಕ್ಷಗಾನ ಅರ್ಥಗಾರಿಕೆಗೆ ಸ್ಪೂರ್ತಿಯಾಗಿದ್ದರು. ಅವರ ಹೆಸರಲ್ಲಿ ನೀಡುತ್ತಿರುವ ಪ್ರಶಸ್ತಿ ಸ್ವೀಕರಿಸಲು ಸಂತಸವಾಗುತ್ತಿದೆ ಎಂದು ಹೇಳಿದರು

ವೇದವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ ಮಾತನಾಡಿ, ಪ್ರಶಸ್ತಿ ಪುರಸ್ಕೃತ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಒಬ್ಬ ಶ್ರೇಷ್ಟ ಯಕ್ಷಗಾನ ಅರ್ಥಧಾರಿ, ಪ್ರವಚನಕಾರ, ಯಕ್ಷಗಾನ ಕ್ಷೇತ್ರದಲ್ಲಿ ಅವರದ್ದೇ ವಿಶೇಷ ಶೈಲಿ ರೂಢಿಸಿಕೊಂಡಿದ್ದಾರೆ. ಭಾಗವತಕೋಶ ರಚಿಸುವ ಮೂಲಕ ವಿಶೇಷ ಕೊಡುಗೆ ನೀಡಿದ್ದಾರೆ ಎಂದರು.

ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ. ರಾಜಮಣಿ ರಾಮಕುಂಜ ಭೀಮ ಭಟ್ಟ ಸಂಸ್ಮರಣೆ ನೆರವೇರಿಸಿದರು. ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯ ಪ್ರಭಾಕರ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ದಿ. ಭೀಮ ಭಟ್ಟರ ಪತ್ನಿ ಶಂಕರಿ ಭೀಮ ಭಟ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು

ಟ್ರಸ್ಟ್ ಅಧ್ಯಕ್ಷ ಬಿ. ತಮ್ಮಯ್ಯ ಸ್ವಾಗತಿಸಿ, ಕೋಶಾಧಿಕಾರಿ ಎಸ್. ಗಂಗಾಧರ ಭಟ್ ಕೊಳಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಕೆ. ಮೋಹನ ರಾವ್ ವಂದಿಸಿದರು. ಕಸಾಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ಕಾರ್ಯಕ್ರಮ ನಿರ್ವಹಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)