varthabharthi


ಯುದ್ಧ

ಧಾರಾವಾಹಿ-29

ಅಪರಿಚಿತ ಜಾನಕಿ!

ವಾರ್ತಾ ಭಾರತಿ : 4 May, 2017

ಸುಮಾರು ಒಂದು ತಿಂಗಳ ರಜೆ. ಅಪ್ಪನಿಗೆ ಫೋನ್‌ನಲ್ಲೇ ತಾನು ಬರುತ್ತಿರುವ ಸುದ್ದಿ ತಿಳಿಸಿದಾಗ ಅವರು ಗದ್ಗದಿತರಾಗಿದ್ದರು. ‘‘ಬಾ ಮಗಾ...ಬೇಗ ಬಾ... ತಾಯಿ ಕಾಯ್ತಿ ಇದ್ದಾಳೆ ಇಲ್ಲಿ’’

ಹೌದು ತಾಯಿ ಕಾಯುತ್ತಿದ್ದಾಳೆ. ಜೊತೆಗೆ ಅಪ್ಪಾಜಿ, ಗುರೂಜಿ, ಜಾನಕಿ ಕೂಡ. ಅವನೂ ಭಾವುಕನಾಗಿದ್ದ. ಆ ಬಳಿಕ ಗುರೂಜಿ ಮನೆಗೆ ೆನ್ ಮಾಡಿದ. ೆನ್ ರಿಂಗಾಗುತ್ತಿತ್ತು. ಯಾರೂ ಎತ್ತುತ್ತಿರಲಿಲ್ಲ.

***

ತಾನು ಆಗಮಿಸಿರುವುದು ಊರಲ್ಲೆಲ್ಲ ಸುದ್ದಿಯಾಗುತ್ತದೆ ಎಂದು ಪಪ್ಪು ನಂಬಿದ್ದ. ಉಪ್ಪಿನಂಗಡಿ ಬಸ್‌ನಿಲ್ದಾಣದಲ್ಲಿ ಅವನಿಗಾಗಿ ಅನಂತಭಟ್ಟರು ಕಾಯುತ್ತಿದ್ದರು. ಗುರೂಜಿಯೂ ಒಟ್ಟಿಗೆ ಇರಬಹುದು ಎಂದು ಭಾವಿಸಿದ್ದ. ಅಪ್ಪಾಜಿಯ ಕಾಲಿಗೆರಗಿದವ ಕೇಳಿದ ಮೊದಲ ಪ್ರಶ್ನೆಯೇ ‘‘ಗುರೂಜಿ ಬರಲಿಲ್ಲವೇನಪ್ಪ?’’ ಎಂದು.

‘‘ಅವರು ಸದಾ ಸಭೆ ಸಮಾರಂಭಗಳು ಎಂದು ಓಡಾಡುತ್ತಿರುವವರು. ಅವರಿಗೆಲ್ಲಿ ಪುರುಸೊತ್ತು ಇರತ್ತೆ ಮಗ ಬರುವುದಕ್ಕೆ?’’ ಅನಂತ ಭಟ್ಟರು ಹೇಳಿದರು. ‘ಅದೂ ಹೌದು’ ಅನ್ನಿಸಿತು ಪಪ್ಪುವಿಗೆ. ದಾರಿಯಲ್ಲಿ ಸಿಕ್ಕಿದವರಾರೋ ‘‘ನಮಸ್ಕಾರ ಮೇಷ್ಟ್ರೇ...ಯಾರು ಮಗನಾ?’’ ಎಂದು ಕೇಳಿ ಮುಂದೆ ಹೋದರು.

ಊರು ಏಕೋ ಬಣಬಣ ಅನ್ನುತ್ತಿದೆ ಅನ್ನಿಸಿತು ಪಪ್ಪುವಿಗೆ. ಮನೆ ತಲುಪಿದರೆ ಅಂಗಳದಲ್ಲಿ ಮಗನ ನಿರೀಕ್ಷೆಯಲ್ಲಿರುವ ಅಮ್ಮ! ಪಪ್ಪು ತಾಯಿಯೆಡೆಗೆ ಧಾವಿಸಿದ. ಲಕ್ಷ್ಮಮ್ಮ ಮಾತಿಲ್ಲದೆ ಗಳಗಳನೆ ಅಳುತ್ತಿದ್ದರು. ‘‘ಎಷ್ಟು ಸೊರಗಿ ಹೋಗಿದ್ದೀಯ?’’ ತಾಯಿ ಬೆನ್ನು ಸವರಿ ಹೇಳಿದರು.

‘‘ಇನ್ನು ಬಂದನಲ್ಲ. ನೀನೇ ಅವನಿಗೆ ಬೇಕಾದದ್ದು ಬಡಿಸಿ ಹಾಕಿ ಉಬ್ಬಿಸು’’ ಎಂದು ಹೇಳಿ ಅನಂತಭಟ್ಟರು ನಕ್ಕರು.

ಲಕ್ಷ್ಮಮ್ಮ ನಗಲಿಲ್ಲ. ಮೊದಲು ಮೊದ್ದು ಮೊದ್ದಾಗಿದ್ದ ಪಪ್ಪು ಈಗ ತುಸು ಎತ್ತರ, ಅಗಲವಾಗಿದ್ದ. ಸೊರಗಿದಂತಿದ್ದರೂ, ಶಿಬಿರದ ತರಬೇತಿಯಿಂದ ಬಲಿಷ್ಠನಾಗಿದ್ದ. ತಾಯಿಗೆ ತನ್ನ ಮೊದಲಿನ ಮೊದ್ದು ಮೊದ್ದಾಗಿದ್ದ ಪಪ್ಪು ಅಲ್ಲಿ ಕಾಣಿಸದೇ ಇರುವುದು ಆತಂಕ ತಂದಿತ್ತು. ಪಪ್ಪು ನೇರವಾಗಿ ತನ್ನ ಕೋಣೆಯ ಕಡೆಗೆ ಸಾಗಿದ. ಸೇನೆ ಸೇರಿದಂದಿನಿಂದ ಮುಚ್ಚಲ್ಪಟ್ಟಿದ್ದ ಪಪ್ಪುವಿನ ಕೋಣೆಯನ್ನು ಗುಡಿಸಿ ಶುಚಿಗೊಳಿಸಿದ್ದರು ಲಕ್ಷ್ಮಮ್ಮ. ಕೋಣೆ ತುಂಬಾ ಕಮಟು ವಾಸನೆ. ಸ್ನಾನ ತಿಂಡಿ ಎಲ್ಲ ಆದ ಬಳಿಕ ಒಂದಿಷ್ಟು ನಿದ್ದೆ ಮಾಡಬೇಕು ಎಂದು ಪಪ್ಪುವಿಗೆ ಅನ್ನಿಸಿತು. ಆಗಲೇ ಅವನಿಗೆ ತಟ್ಟನೆ ಜಾನಕಿಯ ನೆನಪಾದುದು.

 ‘‘ಜಾನಕಿಯೇನಾದರೂ ಬಂದಿದ್ದಳೇನಮ್ಮ ಮನೆಗೆ?’’ ಕೇಳಿದ.

‘‘ಯಾವ ಜಾನಕಿಯೋ?’’ ಒಳಗಿಂದ ಲಕ್ಷ್ಮಮ್ಮ ಕೇಳಿದರು. ತಾಯಿಯ ಪ್ರಶ್ನೆ ಏಕಾಏಕಿ ಪಪ್ಪುವಿನ ಬಾಯಿಯನ್ನು ಕಟ್ಟಿ ಹಾಕಿತು. ಆ ಪ್ರಶ್ನೆಯೇ ಅವನಿಗೆ ಇಷ್ಟವಾಗಿರಲಿಲ್ಲ.

‘‘ಇನ್ನಾವ ಜಾನಕಿ? ಗುರೂಜಿ ಮಗಳು ಜಾನಕಿ’’

 ಮಗನ ಧ್ವನಿಯಲ್ಲಿದ್ದ ಅಸಹನೆಯ ವಾಸನೆ ಒಮ್ಮೆಲೆ ತಾಯಿಗೆ ಬಡಿಯಿತು. ‘‘ಓ...ನಮ್ಮ ಜಾನಕಿಯಾ? ತಲೆಯಲ್ಲೇ ಇರಲಿಲ್ಲ ಬಿಡು. ಎಷ್ಟು ಸಮಯವಾಯಿತು ಅವಳನ್ನು ನೋಡಿ. ಅವಳಾಯಿತು, ಅವಳ ಕಾಲೇಜಾಯಿತು...ಹಾಂ...ಅವಳು ಇನ್ನಷ್ಟು ಕಲಿಯುವುದಕ್ಕೆ ಅಮೆರಿಕಕ್ಕೆ ಹೋಗುತ್ತಾಳಂತೆ..ನಿನ್ನ ಅಪ್ಪ ಹೇಳಿದ ಹಾಗಿತ್ತು....ಶಾಲೆಯಲ್ಲೇನೋ ಅವಳಿಗೆ ಸನ್ಮಾನವಾಯಿತಂತೆ....’’ ಲಕ್ಷ್ಮಮ್ಮ ಕಕ್ಕುಲತೆಯಿಂದ ನುಡಿದರು.

 ಅಷ್ಟರಲ್ಲಿ ಹೊರ ಚಾವಡಿಯಲ್ಲಿ ಕುಳಿತಿದ್ದ ಅನಂತ ಭಟ್ಟರು ಅಲ್ಲಿಂದಲೇ ಉತ್ತರಿಸಿದರು ‘‘ಹೌದಪ್ಪ...ಇನ್ನಷ್ಟು ಕಲಿಯುವುದಕ್ಕಾಗಿ ಜಾನಕಿ ಅಮೆರಿಕಕ್ಕೆ ಹೋಗುತ್ತಿದ್ದಾಳೆ. ಅಮೆರಿಕದ ವಿಶ್ವವಿದ್ಯಾನಿಲಯದಲ್ಲಿ ಅದೇನೋ ಒಂದು ಥೀಸಿಸ್ ಮಾಡುತ್ತಿದ್ದಾಳಂತೆ...ಅಂದ ಹಾಗೆ ಎರಡು ದಿನಗಳ ಹಿಂದೆ ಅವಳಿಗೆ ಶಾಲೆಯಲ್ಲಿ ಸನ್ಮಾನ ಮಾಡಿದರು....’’

‘‘ಸನ್ಮಾನ ಯಾಕೆ ಅಪ್ಪಾಜಿ?’’

‘‘ಅದೇ ಮಗಾ...ನಮ್ಮ ಊರಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಹೋಗುತ್ತಿರುವ ಮೊದಲ ಹುಡುಗಿ ಅಲ್ವಾ? ಅದಕ್ಕೆ...ಪುತ್ತೂರಿನ ಅವಳ ಹಳೆ ಮೇಷ್ಟ್ರುಗಳೆಲ್ಲ ಬಜತ್ತೂರು ಶಾಲೆಗೆ ಬಂದಿದ್ದರು....’’

ಪಪ್ಪು ತುಸು ಹೊತ್ತು ವೌನವಾಗಿದ್ದವನು ಒಮ್ಮೆಲೆ ಕೇಳಿದ.

‘‘ಜಾನಕಿ ಅಮೆರಿಕಕ್ಕೆ ಹೋಗುವುದು ಗುರೂಜಿಯವರಿಗೆ ಇಷ್ಟವಾ ಅಪ್ಪಾಜಿ?’’ ‘‘ಯಾಕೆ ಇಷ್ಟ ಇಲ್ಲ? ಅವರ ಹತ್ತಿರದ ಸಂಬಂಕರು ಅಮೆರಿಕದಲ್ಲೇ ಇದ್ದಾರೆ. ಮಗಳನ್ನು ಅಮೆರಿಕದಲ್ಲಿ ಓದಿಸುವುದು ಅವರ ತುಂಬಾ ಹಿಂದಿನ ಕನಸಾಗಿತ್ತು....ಗುರೂಜಿ ತನ್ನ ಮಗಳನ್ನು ಅಮೆರಿಕಕ್ಕೆ ಕಳುಹಿಸುವ ಸಂಭ್ರಮದಲ್ಲಿದ್ದಾರೆ. ಅವರ ಇಂಗಿತದ ಮೇರೆಗೇ ಶಾಲೆಯಲ್ಲಿ ಸನ್ಮಾನ ಕಾರ್ಯಕ್ರಮ ಇಡಲಾಯಿತು.’’

ಪ್ರಯಾಣದ ಸುಸ್ತೆಲ್ಲ ಪಪ್ಪುವನ್ನು ಒಮ್ಮೆಲೆ ಮುತ್ತಿಕೊಂಡಿತು ‘‘ಅಮ್ಮಾ ಒಂದಿಷ್ಟು ನಿದ್ದೆ ಮಾಡಬೇಕು ನನಗೆ’’ ಅಂದ. ‘‘ನಿದ್ದೆ ಮಾಡು...ಚೆನ್ನಾಗಿ ನಿದ್ದೆ ಮಾಡು. ಮಾತಾಡುವುದೆಲ್ಲ ಇದ್ದೇ ಇದೆ’’ ತಾಯಿಯೂ ಅವಸರ ಪಡಿಸಿದರು. ಹಾಸಿಗೆಯಲ್ಲಿ ಪಪ್ಪು ಒರಗಿದ್ದೇ ನಿದ್ದೆಗೆ ಶರಣಾಗಿ ಬಿಟ್ಟ.

ಅದೆಷ್ಟು ಹೊತ್ತು ನಿದ್ದೆ ಮಾಡಿದನೋ... ಯಾವುದೋ ದುಃಸ್ವಪ್ನವೊಂದನ್ನು ಕಂಡವನಂತೆ ಧಕ್ಕನೆ ಎದ್ದು ಕೂತ.

ತಾನು ತಂದಿದ್ದ ಬ್ಯಾಗನ್ನು ಜಾಲಾಡಿದ. ತಳದಲ್ಲಿ ತಣ್ಣಗೆ ಮಲಗಿತ್ತು ಅನಕೃ ಅವರ ‘ರಣವಿಕ್ರಮ’ ಕಾದಂಬರಿ. ಎತ್ತಿಕೊಂಡು ಪುಟಗಳ ನಡುವೆ ಬಾಡಿ ಹೋದ ಎಲೆಯಂತಿದ್ದ ಪತ್ರವನ್ನು ಬಿಡಿಸಿದ. ಹಾಸಿಗೆಯ ಮೇಲೆ ಕುಳಿತೇ ಅದರ ಮೇಲೆ ಮತ್ತೆ ಕಣ್ಣಾಡಿಸಿದ. ಜಾನಕಿ ಊರಲ್ಲೇ ಇದ್ದಾಳೆ. ಅಮೆರಿಕಕ್ಕೆ ಹೋದ ಬಳಿಕ ಅವಳಿಗೆ ಈ ಪತ್ರವನ್ನು ಎಂದೆಂದೂ ತಲುಪಿಸಲು ಸಾಧ್ಯವಿಲ್ಲ. ತಲುಪಿಸುವುದಾದರೆ ಈಗಲೇ. ಇಲ್ಲವಾದರೆ ಇನ್ನೆಂದಿಗೂ ಇಲ್ಲ.

ಅಪ್ಪಯ್ಯನ ಮಾತು ನೆನಪಾಯಿತು. ‘ಜಾನಕಿಯೊಂದಿಗೆ ನೇರವಾಗಿ ವಿಷಯ ಪ್ರಸ್ತಾಪ ಮಾಡಲೇ ಬೇಕು...’

‘‘ಅಮ್ಮಾ ನಾನೊಮ್ಮೆ ಗುರೂಜಿ ಮನೆಗೆ ಹೋಗಿ ಬರುವೆ’’ ಎಂದು ಕೂಗಿ ಹೇಳಿದ.

‘‘ಸ್ನಾನ ಮಾಡದೆ ಹೇಗೆ ಹೋಗ್ತೀಯಾ? ಹಂಡೆಯಲ್ಲಿ ಬಿಸಿ ನೀರಿದೆ. ಸ್ನಾನ ಮಾಡ್ಕೋ. ಅಷ್ಟರಲ್ಲಿ ಕಾಫಿ ರೆಡಿ ಮಾಡಿಟ್ಟಿರ್ತೀನಿ’’ ತಾಯಿ ಹೇಳಿದರು.

ಅದಕ್ಕೆ ಸಮ್ಮತಿಸಿದವನೇ ಸ್ನಾನಕ್ಕೆ ಸಿದ್ಧನಾದ. ಎಲ್ಲವನ್ನೂ ಅವಸರವಸರವಾಗಿ ಮುಗಿಸಿದ. ಅವನ ಅವಸರ ಲಕ್ಷ್ಮಮ್ಮನ ಗಮನಕ್ಕೆ ಬಂತು. ‘‘ಈ ಅವಸರದಲ್ಲಿ ಗುರೂಜಿ ಮನೆಗೆ ಹೋಗುವಂತಹದೇನಿದೆ? ನಾಳೆ ಹೋದರಾಗು ವುದಿಲ್ಲವೇ?’’ ಕೇಳಿಯೇ ಬಿಟ್ಟರು.

‘‘ಜಾನಕಿಯನ್ನೊಮ್ಮೆ ನೋಡಬೇಕಮ್ಮ. ಅವಳೊಂದಿಗೆ ಮಾತನಾಡಬೇಕು. ಇನ್ನೊಮ್ಮೆ ಸಿಗುತ್ತಾಳೆ ಎಂದು ಭಾವಿಸೋದು ಹೇಗೆ.? ಅವಳ ಜೊತೆಗೆ ತುಂಬಾ ಮಾತನಾಡುವುದಕ್ಕಿದೆ’’ ಹಾಗೆಂದು ಕನ್ನಡಿಯಲ್ಲಿ ಮುಖನೋಡಿ ಕೂದಲನ್ನು ಒಪ್ಪ ಮಾಡಿಕೊಳ್ಳತೊಡಗಿದ. ಸಣ್ಣಗೆ ಪಾಂಡ್ಸ್ ಪೌಡರನ್ನು ಮುಖಕ್ಕೆ ಹಚ್ಚಿಕೊಂಡ. ಮಗನ ಅಲಂಕಾರವನ್ನು ತಾಯಿ ತದೇಕ ಚಿತ್ತದಿಂದ ನೋಡತೊಡಗಿದರು. ‘‘ಬರ್ತೇನಮ್ಮ’’ ಎಂದು ಹೊರಗೆ ಕಾಲಿಟ್ಟ. ಗುರೂಜಿಯ ಮನೆಗೆ ತೆರಳುವಾಗ ಸಮಯ ಸಂಜೆ 5 ಗಂಟೆ. ಹಳೆಯ ಸಾಂಪ್ರದಾಯಿಕ ಹೆಂಚಿನ ಮನೆ. ಇತ್ತೀಚೆಗೆ ಬಣ್ಣ ಆದಂತಿಲ್ಲ. ಅಂಗಳ, ಗೋಡೆ ಪಾಚಿಗಟ್ಟಿದೆ. ವಿಶಾಲ ಅಂಗಳದ ತುಂಬಾ ಒಣಗುವುದಕ್ಕೆಂದು ಹರಡಿರುವ ಅಡಿಕೆ. ಹೊರಗಿನ ಜಗಲಿಯಲ್ಲಿ ಯಾರೂ ಕಾಣುತ್ತಿಲ್ಲ. ಅವನ ಕೈಯಲ್ಲಿ ರಣವಿಕ್ರಮ ಪುಸ್ತಕ ಭದ್ರವಾಗಿತ್ತು.

ಅಷ್ಟರಲ್ಲಿ ಜೀನ್ಸ್ ಧರಿಸಿದ, ಅತ್ಯಾಧುನಿಕ ಹುಡುಗಿಯೊಂದು ಚಿಟ್ಟೆಯಂತೆ ಹಾರುತ್ತಾ ಹೊರಗೆ ಬಂತು. ಕಣ್ಣಗಲಿಸಿ ತನ್ನ ಕಡೆಯೇ ಬರುತ್ತಿದ್ದ ಹುಡುಗಿ ಇದ್ದಕ್ಕಿಂತೆಯೇ ಕೇಳಿದಳು ‘‘ಏಯ್, ನೀನು ಪಪ್ಪು ಅಲ್ವನಾ?’’

ಪಪ್ಪು ಬೆಕ್ಕಸಬೆರಗಾಗಿದ್ದ. ತನ್ನ ಮುಂದೆ ನಿಂತಿರುವುದು ಜಾನಕಿ! ಯಾವ ರೀತಿಯಲ್ಲೂ ತನ್ನ ಭಾವಪ್ರಪಂಚಕ್ಕೆ ತಾಳೆಯಾಗದ ಜಾನಕಿ.

‘‘ಹೌದು ಜಾನು...ನಾನು ಪಪ್ಪು’’ ತನಗೆ ತಾನೆ ಗುನುಗಿದಂತೆ ಹೇಳಿದ.

‘‘ಅಯ್ಯೋ ಏನೋ ಇದು. ತುಂಬಾ ಬದಲಾಗಿದ್ದೀಯ ನೀನು?’’

‘‘ನೀನೂ ಬದಲಾಗಿದ್ದೀಯ ಜಾನು. ನನಗೆ ಗುರುತು ಹಿಡಿಯುವುದಕ್ಕೆ ತುಂಬಾ ಕಷ್ಟವಾಯಿತು...’’ ಪಪ್ಪು ಮುಜುಗರದಿಂದ ಹೇಳಿದ.

‘‘ನೀನು ಮತ್ತೆ? ಮೊದಲು ಮೊದ್ದು ಮೊದ್ದಾಗಿ, ಬಿಳಿ ಬಿಳಿಯಾಗಿ ಅಮುಲ್ ಬೇಬಿ ಥರ ಇದ್ದೆ. ಈಗ ನೋಡಿದರೆ ನಿನ್ನನ್ನು ಯಾರೂ ಬ್ರಾಹ್ಮಣ ಹುಡುಗ ಎಂದು ಹೇಳಲಿಕ್ಕಿಲ್ಲ. ಕಪ್ಪಾಗಿದ್ದೀಯ ನೀನು...ಬಾ ... ಒಳಗೆ...ನೀನು ಬಂದದ್ದು ಒಳ್ಳೆಯದೇ ಆಯಿತು. ಎರಡು ದಿನ ಕಳೆದರೆ ನಾನು ನಿನಗೆ ನೋಡುವುದಕ್ಕೆ ಸಿಗುತ್ತಲೇ ಇರಲಿಲ್ಲ...’’

ಪಪ್ಪು ಸಂಕೋಚದಿಂದ ಜಾನಕಿಯ ಹಿಂದೆ ಹೆಜ್ಜೆಯಿಟ್ಟ. ಒಳಗಿನಿಂದ ಗುರೂಜಿಯ ಪತ್ನಿ ಪದ್ಮಮ್ಮನ ದನಿ ಕೇಳಿತು ‘‘ಯಾರೇ ಅದು ಪಪ್ಪುವಾ? ನಾನಿಲ್ಲಿ ನಿನ್ನ ಉಪ್ಪಿನಕಾಯಿ, ಸಂಡಿಗೆ ಕಟ್ಟುವ ತಯಾರಿಯಲ್ಲಿದ್ದೇನೆ...ನೀನೇ ಚಹಾ ಮಾಡಿಕೊಡು...’’

ಪಪ್ಪುವಿಗೆ ಪಿಚ್ಚೆನಿಸಿತು. ಹೊರಗೆ ಬಂದು ಏನಾದರೂ ವಿಚಾರಿಸಬಹುದಿತ್ತು ಅವರಿಗೆ.

‘‘ಗುರೂಜಿ ಎಲ್ಲಿ?’’ ಪಪ್ಪು ಕೇಳಿದ.

ಅವರೀಗ ಇದ್ದಿದ್ದರೆ ಇಲ್ಲಿಯ ಸನ್ನಿವೇಶವೇ ಬೇರೆ ಇತ್ತು. ‘‘ನಾಳೆ ಬೆಳಗ್ಗೆ ಹೊರಡುವುದಲ್ಲವಾ...ಆ ಹಿನ್ನೆಲೆಯಲ್ಲಿ ಮಂಗಳೂರಿಗೆ ಹೋಗಿದ್ದಾರೆ. ಹಾಂ...ನಿನಗೆ ಗೊತ್ತಲ್ಲ ನಾನು ಅಮೆರಿಕಕ್ಕೆ ಹೋಗೋದು...?’’

‘‘ಇಲ್ಲ ಗೊತ್ತಿಲ್ಲ’’ ಎಂದು ಬಿಟ್ಟ ಪಪ್ಪು.

(ರವಿವಾರದ ಸಂಚಿಕೆಗೆ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)