varthabharthi


ಕಲೆ - ಸಾಹಿತ್ಯ

ಹೈನುಗಾರಿಕೆಗೆ ಸ್ಫೂರ್ತಿ ತುಂಬುವ ಪುಣ್ಯಕೋಟಿ

ವಾರ್ತಾ ಭಾರತಿ : 12 May, 2017
ಸಂಪತ್ ಬೆಟ್ಟಗೆರೆ, ಮೂಡಿಗೆರೆ

ಕೃತಿಯ ವಿವರ:
ಪುಸ್ತಕ: ಪುಣ್ಯಕೋಟಿ

ಪ್ರಕಾಶನ: ಚಿನ್ಮಯಿ ಪ್ರಕಾಶನ
c/o ಮಣಿಕಂಠ ಬಿಳ್ಳೂರು
ಮೂಡಿಗೆರೆ-577132
ದೂ.: 8762267491

ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಜಾನುವಾರುಗಳ ಸಂತತಿಯು ಅಧಿಕವಾಗಿ ಲಭ್ಯ ಇರಬೇಕಿತ್ತು. ಹಿಂದೆಲ್ಲ ಬಹುತೇಕ ರೈತರು ಕೃಷಿ ಹಾಗೂ ತೋಟಗಾರಿಕೆಯೊಂದಿಗೆ ಉಪಕಸುಬಾಗಿ ಹೈನುಗಾರಿಕೆಯನ್ನು ಪರಿಗಣಿಸಿ ಹಾಲು ಹಾಗೂ ಕೊಟ್ಟಿಗೆ ಗೊಬ್ಬರವನ್ನು ತಾವೇ ಉತ್ಪಾದಿಸಿಕೊಳ್ಳುತ್ತಿದ್ದರು. ಆದರೆ ಇಂದು ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದ ಹೊಲ-ಗದ್ದೆಗಳೆಲ್ಲವೂ ವಾಣಿಜ್ಯ ಉದ್ಧೇಶಗಳಿಗಾಗಿ ಬಳಕೆಯಾಗುತ್ತಿರುವುದರಿಂದ ರೈತನು ಕೂಡ ಕೃಷಿ ಉತ್ಪನ್ನಗಳನ್ನು ಕೊಂಡುಕೊಳ್ಳುವ ಪ್ರವೃತ್ತಿಗೆ ಸಿಲುಕಿದ್ದಾನೆ. ಹೀಗಾಗಿ ಗ್ರಾಮೀಣ ಭಾಗಗಳಲ್ಲೂ ದನಕರುಗಳ ಸಾಕಣೆ ಪ್ರಮಾಣ ಪ್ರತಿದಿನವೂ ಕ್ಷೀಣಿಸುತ್ತಿದೆ. ಇನ್ನು, ನಗರ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಸೇರಿದಂತೆ ಇತರ ವಿಷಕಾರಿ ವಸ್ತುಗಳನ್ನು ಸೇವಿಸಿ ಜೀರ್ಣಿಸಿಕೊಳ್ಳಲಾಗದ ಪರಿಸ್ಥಿತಿಯನ್ನು ಜಾನುವಾರು ಎದುರಿಸಬೇಕಾಗಿ ಬಂದಿದೆ.

ಆದ್ದರಿಂದ ಗೋವುಗಳ ಬಗ್ಗೆ ಪರ-ವಿರೋಧ ವಾಗ್ವಾದವನ್ನು ಕೇವಲ ಧಾರ್ಮಿಕ ಮನೋಭಾವನೆ ಯಿಂದ ಚಿಂತನೆ ಮಾಡದೆ ಹೈನುಗಾರಿಕೆಯ ಹಿನ್ನೆಲೆಯೊಂದಿಗೆ ಚರ್ಚಿಸುವ ಅಗತ್ಯ ಇಂದು ಬಹಳಷ್ಟಿದೆ. ಈ ದಿಸೆಯಲ್ಲಿ ಸೆಗಣಿ, ಗಂಜಲ, ಹಾಲನ್ನು ಒದಗಿಸುವುದರೊಂದಿಗೆ ರೈತರ ಹೊಲದಲ್ಲಿ ಹೆಗಲು ಕೊಟ್ಟು ದುಡಿಯುವ ದನವನ್ನು ಕುರಿತು ಯುವ ಬರಹಗಾರ ಮಣಿಕಂಠ ಬಿಳ್ಳೂರು ಅವರು ಪುಣ್ಯಕೋಟಿ ಹೆಸರಿನಲ್ಲಿ ಕೃತಿಯನ್ನು ಪ್ರಕಟಿಸಿದ್ದಾರೆ. ಇದು ವಿಷಯ ವಿವರದ ಜತೆಗೆ ಪುಟ ವಿನ್ಯಾಸದ ಕಾರಣಕ್ಕೂ ಆಕರ್ಷಕವಾಗಿ ಮೂಡಿಬಂದಿದೆ. ಮುಖ್ಯವಾಗಿ ಹೈನುಗಾರಿಕೆಗೆ ಸಂಬಂಧಿಸಿದಂತೆ ಸಮಗ್ರ ವಿವರಗಳನ್ನು ಒಳಗೊಂಡಿದ್ದು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಹಲವರಿಗೆ ಸ್ಫೂರ್ತಿದಾಯಕವಾಗಿದೆ.

ಮೂಡಿಗೆರೆ ತೋಟಗಾರಿಕೆ ಕಾಲೇಜಿನಲ್ಲಿ ಹಿರಿಯ ಸಹಾಯಕ ಅಧಿಕಾರಿಯಾಗಿರುವ ಮಣಿಕಂಠ ನಿರಂತರ ಶ್ರಮಪಟ್ಟು ರೂಪಿಸಿರುವ ಕೃತಿ ಇದು. ಇದರಲ್ಲಿ ಪ್ರಾಚೀನ ಕಾಲಘಟ್ಟದ ಗೋಸಂಸ್ಕೃತಿ, ದೇಶದ ಅಭಿವೃದ್ಧಿ ಯಲ್ಲಿ ಗೋವಿನ ಪ್ರಾಮುಖ್ಯತೆ, ಗೋವುಗಳಿಗೆ ಬರುವ ಕೀಟಬಾಧೆಗಳು ಮತ್ತು ರೋಗಗಳ ನಿವಾರಣೋಪಾಯ ಕ್ರಮಗಳು, ಗರ್ಭದ ಹಸುಗಳ ಪೋಷಣೆ ಹಾಗೂ ಪಾಲನೆ, ಕೃಷಿಗೆ ಗೋವುಗಳ ಕೊಡುಗೆ, ಗೋತಳಿ ಅಭಿವೃದ್ಧಿಗೆ ಇರುವ ಸಂಶೋಧನಾ ಕೇಂದ್ರಗಳ ಬಗ್ಗೆ ಇಲ್ಲಿ ಪರಿಚಯ ಮಾಡಿಕೊಡಲಾಗಿದೆ. ಇದರ ಜತೆಗೆ ಪ್ರಸ್ತುತ ಪಶುವೈದಕೀಯ ಶಿಕ್ಷಣ ಕ್ರಮದ ಸ್ವರೂಪ, ಲಕ್ಷಣಗಳನ್ನು ಹೈನುಗಾರಿಕೆಗೆ ಪೂರಕವಾಗಿ ಚರ್ಚೆಗೊಳ ಪಡಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಪಶುವೈದ್ಯಕೀಯ ಪರೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕ.ದಾ.ಕೃಷ್ಣರಾಜು ಅವರ ಮಾದರಿ ಸೇವೆಯನ್ನು ಗುರುತಿಸಿರುವ ಪುಣ್ಯಕೋಟಿ ಕೃತಿಯು ನಿಜಕ್ಕೂ ಒಂದು ಪ್ರಯತ್ನಶೀಲ ಕೃತಿ ಎಂದರೆ ತಪ್ಪಾಗಲಾರದು.

ಹೈನೋದ್ಯಮದಲ್ಲಿ ತೊಡಗಿಸಿಕೊಳ್ಳುವವರಿಗೆ, ಕೃಷಿ, ತೋಟಗಾರಿಕೆ, ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಹಾಗೂ ಸಾಹಿತ್ಯಾಸ್ತಕರೆಲ್ಲರಿಗೂ ಇಷ್ಟವಾಗುವಂತೆ ಉತ್ತಮ ಶೈಲಿಯ ಬರಹದಿಂದ ಪುಸ್ತಕವು ಮನಮುಟ್ಟುವಂತಿದೆ. ಹಾಸನ ಆಕಾಶವಾಣಿ ಕೇಂದ್ರದ ಕೃಷಿ ಕಾರ್ಯಕ್ರಮ ನಿರ್ದೇಶಕರಾದ ಡಾ.ವಿಜಯ್ ಅಂಗಡಿ ಅವರ ಆಪ್ತ ಮುನ್ನುಡಿ, ಬೆಂಗಳೂರು ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ.ಬಿಲ್.ಶಂಕರ್ ಅವರ ಬೆನ್ನುಡಿಯು ಕೃತಿಯ ಮೆರಗನ್ನು ಮತ್ತಷ್ಟೂ ಹೆಚ್ಚಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)