varthabharthi


ಯುದ್ಧ

ಧಾರಾವಾಹಿ-32

ದೇಶಪ್ರೇಮಿ ರಿಕ್ಷಾ

ವಾರ್ತಾ ಭಾರತಿ : 14 May, 2017

ದಿನಕಳೆದಂತೆ ಅವನಿಗೆ ಊರು ಅಪರಿಚಿತ ಅನ್ನಿಸ ತೊಡಗಿತು. ತನ್ನ ಸ್ಥಳ ಇದಲ್ಲ. ಎಲ್ಲೋ ದೂರದಲ್ಲಿರುವ ಸೇನಾ ಶಿಬಿರವೇ ತನ್ನ ಸ್ಥಳ. ಇಲ್ಲಿ ಯಾರೂ ತನ್ನವರಿಲ್ಲ ಎನ್ನುವ ಏಕಾಂತತೆ. ಒಮ್ಮೋಮ್ಮೆ, ಈ ತಾಯಿಯೂ ಅಪರಿಚಿತರಂತೆ ಮಾತನಾಡುತ್ತಿದ್ದಾರೆ ಅನ್ನಿಸುತ್ತಿತ್ತು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ ಆಗಾಗ ಭೇಟಿ ನೀಡುತ್ತಿದ್ದ. ಹಾಗೆಯೇ ಅದರ ಪಕ್ಕದಲ್ಲೇ ಇರುವ ಪ್ರೀತಂ ಟಾಕೀಸ್‌ನಲ್ಲಿ ಸಿನೆಮಾ ನೋಡುತ್ತಿದ್ದ. ಹೀಗೆ ಒಂದು ದಿನ ಸಿನೆಮಾ ಮುಗಿಸಿ, ಚಿತ್ರಮಂದಿರದಿಂದ ಹೊರಬಂದಾಗ ಅವನಿಗೆ ವಿಚಿತ್ರವಾದ ಒಂದು ಅನುಭವವಾಯಿತು. ಆಗಷ್ಟೇ ನಿದ್ದೆಯಿಂದ ಎದ್ದು ಕೂತವನಂತೆ, ಎಲ್ಲಿ ಹೋಗಬೇಕು, ಎತ್ತ ಹೋಗಬೇಕು ಎನ್ನುವುದು ಅವನಿಗೆ ತೋಚುತ್ತಿರಲಿಲ್ಲ. ತಾನು ಎಲ್ಲಿದ್ದೇನೆ ಎನ್ನುವುದರಿಂದ ಹಿಡಿದು ತಾನು ಯಾರು ಎನ್ನುವವರೆಗೆ ಒಂದು ರೀತಿಯ ವಿಸ್ಮತಿಯಲ್ಲಿ ಅವನು ಕೆತ್ತಿಟ್ಟ ಕಲ್ಲಿನ ಕಂಬದಂತೆ ಚಿತ್ರಮಂದಿರದ ಎದುರಿನ ರಸ್ತೆಯಲ್ಲಿ ಕೆಲ ನಿಮಿಷ ಹಾಗೆ ನಿಂತೇ ಇದ್ದ. ಅಷ್ಟರಲ್ಲಿ ಅವನ ಮುಂದೆ ಒಂದು ರಿಕ್ಷಾ ಬಂದು ನಿಂತಿತು. ರಿಕ್ಷಾ ಚಾಲಕ ಅವನನ್ನೇ ಒಂದು ಕ್ಷಣ ನೋಡಿ ‘‘ಅರೇ...ನೀನು ನಮ್ಮ ಪಪ್ಪು ಅಲ್ವಾನಾ?’’ ಎಂದು ಕೂಗಿದ.

ಯಾರೋ ತನ್ನ ಹೆಸರನ್ನು ಜ್ಞಾಪಿಸಿ ತಟ್ಟಿ ಎಚ್ಚರಿಸಿದವನಂತೆ ಪಪ್ಪು ಎಚ್ಚರಾದ. ಎದುರುಗಡೆ ಒಂದು ರಿಕ್ಷಾ. ಆ ರಿಕ್ಷಾದ ಹೆಸರು ‘‘ದೇಶಪ್ರೇಮಿ!’’

ಅರೆ! ಈ ರಿಕ್ಷಾ ಚಾಲಕನನ್ನು ಎಲ್ಲೋ ನೋಡಿದಂತಿದೆ ಯಲ್ಲ...ಎನ್ನುವಷ್ಟರಲ್ಲಿ ಅವನಿಗೆ ಹೊಳೆದು ಬಿಟ್ಟಿತು. ಕಬೀರ್!

‘‘ಕಬೀರ್....ನನಗೆ ಗೊತ್ತೇ ಆಗಲಿಲ್ಲ..’’

ಕಬೀರನಿಗೆ ಪಪ್ಪುವನ್ನು ನೋಡಿ ತುಂಬಾ ಸಂತೋಷವಾಗಿತ್ತು. ಪಪ್ಪು ರಿಕ್ಷಾ ಹತ್ತಿ ಕೂತ.

‘‘ನೀನು ಮೊದಲ ಪಪ್ಪು ಅಲ್ಲವೇ ಅಲ್ಲ. ತುಂಬಾ ಬದಲಾಗಿದ್ದಿ. ನೀವು ದೇಶಕ್ಕಾಗಿ ದುಡಿಯುವವರಲ್ಲವ? ನೀನು ಸೇನೆಗೆ ಸೇರಿದ್ದು ನನಗೆ ಮತ್ತೆ ಗೊತ್ತಾಯಿತು. ನಿನ್ನ ಬಗ್ಗೆ ನನಗೆ ತುಂಬಾ ಹೆಮ್ಮೆ...’’

ಪಪ್ಪು ಒಳಗೊಳಗೆ ಯಾಕೋ ಭಾವುಕನಾಗಿದ್ದ. ಕಬೀರನ ಮಾತು ಅವನಿಗೆ ತುಂಬಾ ಹಿತವಾಗಿ ಕೇಳಿಸುತ್ತಿತ್ತು. ‘‘ಗಡಿಯಲ್ಲಿ ಹಗಲು ರಾತ್ರಿ ಗಡಿ ಕಾಯುವುದು ಎಂದರೆ ಸುಮ್ಮನೇನಾ? ಅದೂ ಅಲ್ಲದೆ ಅಲ್ಲಿ ಪಾಕಿಸ್ತಾನದ ಶತ್ರುಗಳು ಉಪದ್ರವ ಕೊಡ್ತಾನೆ ಇರ್ತಾರಲ್ಲ...ಅವರು ದುಷ್ಟರಲ್ಲಿ ದುಷ್ಟರು. ಈ ಪಾಕಿಸ್ತಾನಿಯರಿಗೆ ಉಂಟಲ್ಲ ಇಸ್ಲಾಂ ಎಂದರೆ ಏನೆಂದೇ ಗೊತ್ತಿಲ್ಲ. ನಿನಗೆ ಗೊತ್ತಾ...ಈ ದೇಶದ ಮುಸ್ಲಿಮರೆಲ್ಲ ಒಟ್ಟಾಗಿ ಮೂತ್ರ ಮಾಡಿದರೆ ಪಾಕಿಸ್ತಾನ ಕೊಚ್ಚಿ ಹೋಗುತ್ತದಂತೆ. ಅಲ್ಲಿ ಉಗ್ರರು ಗಲಾಟೆ ಮಾಡಿದಾಗ ನನಗೆ ನಿನ್ನದೇ ನೆನಪು ಗೊತ್ತುಂಟಾ? ...ನನ್ನ ರಿಕ್ಷಾಕ್ಕೆ ನಾನು ‘ದೇಶಪ್ರೇಮಿ’ ಎಂದೇ ಹೆಸರಿಟ್ಟಿದ್ದೇನೆ. ಯಾರಾದರೂ ದೇಶದ ವಿರುದ್ಧ ಮಾತನಾಡಿದರೆ ನನಗೆ ಎಷ್ಟು ಸಿಟ್ಟು ಬರುತ್ತದೆ ಗೊತ್ತುಂಟಾ....’’

ಕಬೀರ್ ಉದ್ದಕ್ಕೂ ದೇಶದ ಬಗ್ಗೆಯೇ ಮಾತನಾಡುತ್ತಿ ದ್ದರೆ ಪಪ್ಪುವಿನ ಒಳಗೊಳಗೆ ಏನೇನೋ ಸಂಕಟಗಳು. ಆದರೂ ಅವನು ಕೇಳುತ್ತಲೇ ಇದ್ದ. ರಿಕ್ಷಾಕ್ಕೆ ‘ದೇಶಪ್ರೇಮಿ’ ಎಂದು ಹೆಸರು ಇಟ್ಟಿರುವುದೇ ಅವನಿಗೆ ಅಚ್ಚರಿ. ಸಾಧಾರಣವಾಗಿ ಊರಲ್ಲಿ ಬ್ಯಾರಿಗಳದೇ ರಿಕ್ಷಾಗಳಿರುವುದು. ಅದಕ್ಕೆ ಅವರು ಸೈಯದ್ ಮದನಿ, ಬಿಸ್ಮಿಲ್ಲಾ ಹೀಗೆಲ್ಲಾ ಹೆಸರಿಡುತ್ತಿದ್ದರು. ಆದರೆ ಕಬೀರ್ ಮಾತ್ರ ಭಿನ್ನವಾಗಿ ಹೆಸರಿಟ್ಟಿದ್ದ. ‘‘ನೀನು ಊರಿಗೆ ಬಂದದ್ದೇ ನನಗೆ ಗೊತ್ತಿರಲಿಲ್ಲ. ನಿನಗೆ ಗೊತ್ತಾ? ಜಾನಕಿ ಅಮೆರಿಕಕ್ಕೆ ಹೋದರಂತಲ್ಲ...? ನಮ್ಮ ಶಾಲೆಯಲ್ಲೇ ಕಾರ್ಯಕ್ರಮ ಇಟ್ಟುಕೊಂಡಿದ್ದರು. ನಾನೂ ಸ್ವಲ್ಪ ಹೊತ್ತು ಇದ್ದು ಬಂದಿದ್ದೆ...’’

ಈಗ ಪಪ್ಪು ಬಾಯಿ ತೆರೆದ ‘‘ಸಭೆಯಲ್ಲಿ ತುಂಬಾ ಜನರಿದ್ದರಾ?’’

‘‘ಮತ್ತೆ ಜನರಿರದೆ? ಶ್ಯಾಂಭಟ್ಟರು ವೇದಿಕೆಯಲ್ಲಿದ್ದಾರೆ ಎಂದ ಮೇಲೆ ಜನರು ಸೇರದೆ ಇರುತ್ತಾರ?’’

ಪಪ್ಪು ಪ್ರತಿಕ್ರಿಯಿಸಲಿಲ್ಲ. ‘‘ಹಾಂ...ಜಾನಕಿಯ ಭಾಷಣ ಇತ್ತು. ಅವರ ಭಾಷಣ ಮುಗಿಯುವವರೆಗೆ ನಾನು ಸಭೆಯಲ್ಲಿದ್ದೆ. ಹಾಗೆ ಇಡೀ ಕಾರ್ಯಕ್ರಮ ಮುಗಿಯುವವರೆಗೆ ಕುಳಿತುಕೊಂಡರೆ ನನ್ನ ರಿಕ್ಷಾ ಬಿಡುವವರು ಯಾರು? ಪ್ರಯಾಣಿಕರು ಶಾಪ ಹಾಕುವುದಿಲ್ವಾ?’’

‘‘ಏನೂಂತ ಮಾತನಾಡಿದಳು..’’

‘‘ಅಯ್ಯೋ ಅವರು ಇಂಗ್ಲಿಷ್‌ನಲ್ಲಿ ಮಾತನಾಡಿದರು. ನನಗೆ ಅರ್ಥ ಆಗಲಿಲ್ಲ...ನಾನು ಗೊತ್ತುಂಟಲ್ಲ...ಕನ್ನಡವೇ ಕಷ್ಟ...’’ ಕಬೀರ್ ಜೋರಾಗಿ ನಕ್ಕು ಹೇಳಿದ.

ಪಪ್ಪು ಏನೂ ಮಾತನಾಡದೆ ಇರುವುದು ನೋಡಿ ಕಬೀರನೇ ಹೇಳಿದ ‘‘ಹಾಗೆ ನೋಡಿದರೆ ಅಲ್ಲಿ ಸೇರಿದ ಯಾರಿಗೂ ಅದು ಅರ್ಥ ಆಗಿರಲಿಕ್ಕಿಲ್ಲ. ಶ್ಯಾಂ ಭಟ್ಟರಿಗೆ, ಕೆಲವು ಮೇಷ್ಟ್ರುಗಳಿಗೆ ಅರ್ಥ ಆಗಿರಬಹುದು. ಈ ಊರಿನ ಜನರ ವಿಷಯ ನನಗೆ ನಿನಗೆ ಗೊತ್ತಿರುವುದೇ ಅಲ್ಲವಾ? ಆದರೆ ಎಲ್ಲರೂ ಅರ್ಥ ಆದವರ ಹಾಗೆ ತಲೆಯಾಡಿಸುತ್ತಿದ್ದರು...’’ ಎನ್ನುತ್ತಾ ಕಬೀರ್ ಮತ್ತೊಮ್ಮೆ ಜೋರಾಗಿ ನಕ್ಕ.

ಊರು ಮುಟ್ಟುವವರೆಗೆ ಪಪ್ಪು ಬಾಯಿ ತೆರೆಯಲಿಲ್ಲ. ಕಬೀರ್ ಅದೇನೇನೋ ಮಾತನಾಡುತ್ತಲೇ ಇದ್ದ.

ರಿಕ್ಷಾದಿಂದ ಇಳಿದ ಪಪ್ಪು ಹಣ ಕೊಡಲು ಹೋದಾಗ ಕಬೀರ್ ಸಾರಾಸಗಟಾಗಿ ನಿರಾಕರಿಸಿದ.

‘‘ದುಡ್ಡುಕೊಟ್ಟು ನಮ್ಮನ್ನು ಇನ್‌ಸಲ್ಟ್ ಮಾಡುವುದಾ? ಸ್ನೇಹದ ಬೆಲೆ ಇಷ್ಟೇಯಾ?’’ ಕೇಳಿ ಬಿಟ್ಟ ಕಬೀರ್.

ಪಪ್ಪು ಒಲ್ಲದ ಮನಸ್ಸಿನಿಂದಲೇ ದುಡ್ಡನ್ನು ಮತ್ತೆ ಜೇಬಿಗೆ ಹಾಕಿಕೊಂಡ. ಪಪ್ಪು ಕಬೀರನ ಹೆಗಲು ಮುಟ್ಟಿ ಅಲ್ಲಿಂದ ಮನೆಯ ಕಡೆಗೆ ಹೊರಟ. ಅವನಿಗೇನೋ ಕಬೀರನಲ್ಲಿ ಕೇಳುವುದಕ್ಕಿತ್ತು. ಏನು ಎನ್ನುವುದು ಹೊಳೆಯುತ್ತಿರಲಿಲ್ಲ. ಕಬೀರ ಸಿಕ್ಕಿದ್ದು ಅವನ ಮನಸ್ಸಿಗೆ ತಂಪು ಗಾಳಿ ಬೀಸಿದಂತಾಗಿತ್ತು. ಮನೆ ತಲುಪಿದವನ ತಲೆಯ ತುಂಬಾ ಕಬೀರನೇ ಆವರಿಸಿಕೊಂಡಿದ್ದ.

ಆ ಜಾತಿಯವರ ಕುರಿತಂತೆ ಜಾನಕಿ ಹೇಳಿದ್ದೆಲ್ಲ ಸುಳ್ಳಾಗಿರಬಹುದೇ? ಆದರೆ ತನ್ನ ಸೇನೆಯೊಳಗಿರುವ ಹಲವರು ಜಾನಕಿಯ ಮಾತುಗಳನ್ನು ಸಮರ್ಥಿಸಿ ದ್ದರು. ಆದರೆ ಕಬೀರನ ಮಾತುಗಳು ಅವುಗಳಿಗೆ ತಾಳೆಯಾಗುತ್ತಿರಲಿಲ್ಲ. ಆ ಜಾತಿಯವರು ಹಿಂದಿನಿಂದ ಇರಿಯುತ್ತಾರೆ...! ಹೀಗೆಂದು ಹೇಳಿದವಳೇ ಜಾನಕಿ.

ಅದು ನಿಜವೇ ಆಗಿದ್ದರೆ ‘ಮುಸ್ತಫಾ’ ಎಂಬ ಗೆಳೆಯನ ಬಗ್ಗೆ ಜಾನಕಿ ಆಡಿದ ಮಾತಿನ ಅರ್ಥ ವೇನು? ಎರಡನ್ನೂ ಹೇಳಿದವಳು ಜಾನಕಿ. ತಾನೀಗ ಯಾವುದನ್ನು ನಂಬಬೇಕು.

ತಡ ರಾತ್ರಿಯವರೆಗೆ ಯೋಚಿಸುತ್ತಿದ್ದಾಗ ಒಮ್ಮೆಲೆ ತಾನು ಕಬೀರನ ಜೊತೆಗೆ ಕೇಳಬೇಕಾದುದು ನೆನಪಾಗಿ ಬಿಟ್ಟಿತು.

ಬಜತ್ತೂರು ಶಾಲೆಯ ಮಾಡಿನ ಅಂಚಿನಲ್ಲಿದ್ದ ಪಾರಿವಾಳಗಳ ಕುರಿತಂತೆ ಕೇಳಬೇಕಾಗಿತ್ತು. ಅವನಿಗೆ ಖುಷಿಯಾಗುತ್ತಿತ್ತೋ ಏನೋ?

ಅಂದು ನಿದ್ದೆ ಹಿಡಿಯಲು ಆತನಿಗೆ ಬಹಳ ಸಮಯ ತಗಲಿತು.

ಪಪ್ಪು ರಜೆ ಮುಗಿಯಲು ಇನ್ನೂ ಹತ್ತು ದಿನ ಇರುವಾಗಲೇ ಹೊರಡಲು ಸಿದ್ಧನಾದಾಗ ತಂದೆತಾಯಿ ಕಂಗಾಲಾದರು.

‘‘ಇಲ್ಲಮ್ಮ, ರಜೆ ಮುಗಿಯುತ್ತಾ ಬಂತು. ಸ್ವಲ್ಪ ಬೇಗ ಹೋಗಬೇಕಾಗಿದೆ...’’

ಲಕ್ಷ್ಮಮ್ಮ ಮಗನ ತೋಳನ್ನು ಬಿಗಿಯಾಗಿ ಸುತ್ತಿಕೊಂಡಿದ್ದರು. ಬರುವಾಗ ಮಗನ ಮುಖದಲ್ಲಿದ್ದ ಪ್ರಪುಲ್ಲತೆ ಈಗ ಇಲ್ಲದಿರುವುದನ್ನು ಅವರು ಗಮನಿಸಿದ್ದರು.

‘‘ನನ್ನ ಕಂದನಿಗೆ ಮನೆ ಇಷ್ಟವಾಗಲಿಲ್ಲ ಅಲ್ಲವೇ?’’ ಲಕ್ಷ್ಮಮ್ಮ ಗದ್ಗದವಾಗಿ ಕೇಳಿದರು.

‘‘ಇಲ್ಲಮ್ಮ. ನನಗೆ ನೀವು ಬಿಟ್ಟರೆ ಇನ್ನಾರಿದ್ದಾರೆ? ಯೋಧನಿಗೆ ಇಡೀ ದೇಶವೇ ಮನೆ. ನಾನು ಎಷ್ಟು ಬೇಗ ಹೋದರೆ ಅಷ್ಟು ದೇಶಕ್ಕೆ ಒಳ್ಳೆಯದು’’ ಪಪ್ಪು ಸಮಾಧಾನಿಸಿದ.

ಆದರೂ ತಾಯಿಯ ಮನಸ್ಸು ಕೆಡುಕನ್ನು ಸಂಶಯಿಸು ತ್ತಿತ್ತು. ಅನಂತ ಭಟ್ಟರೇ ಪತ್ನಿಯ ಬಳಿಗೆ ಬಂದು ಸಮಾಧಾನಿಸಿದರು.

‘‘ದೇಶದ ಕೆಲಸ ಕಣೇ...ಹೋಗಲಿ ಬಿಡು’’

ಪಪ್ಪು ಹೊರಟೇ ಬಿಟ್ಟ.

***

ರಜೆ ಮುಗಿಯುವ ಮೊದಲೇ ಯುನಿಟ್ ಸೇರಿಕೊಂಡ ಪಪ್ಪುವನ್ನು ಕಂಡು ಎಲ್ಲರಿಗೂ ಅಚ್ಚರಿ. ರಜೆಯಲ್ಲಿ ಊರಿಗೆ ಹೋಗೋದು, ಯಾವುದೋ ಅಸಮಾಧಾನದೊಂದಿಗೆ ವಾಪಸಾಗೋದು ಎಲ್ಲ ಮಾಮೂಲಿ. ಆದರೆ ರಜೆ ಪೂರ್ತಿ ಮುಗಿಸದೆ ಅರ್ಧದಲ್ಲೇ ಬರುವವರ ಕುರಿತು ಸಹೋದ್ಯೋಗಿಗಳು ತುಸು ಮೆದುವಾಗುತ್ತಾರೆ. ಅದೂ ಊರು, ಮನೆಯೆಂದರೆ ಜೀವ ಬಿಡುತ್ತಿದ್ದ ಪಪ್ಪು ಹತ್ತು ದಿನವಿರುವಾಗಲೇ ಹೊರಟು ಬಂದಿದ್ದಾನೆ ಎನ್ನುವುದು ಅಪ್ಪಯ್ಯನಿಗೆ ನಂಬುವುದಕ್ಕೆ ಸಾಧ್ಯವಾಗಲಿಲ್ಲ. ಮನೆ, ಊರು ಈ ಯುನಿಟ್, ಶಿಬಿರಕ್ಕಿಂತ ಕೆಟ್ಟದಾಗಿದ್ದರೆ ಮಾತ್ರ ಅಲ್ಲಿಂದ ಬೇಗ ಮರಳುತ್ತಾರೆ. ಬಂದ ಕೆಲವು ದಿನ ಪಪ್ಪು ಯಾರ ಜೊತೆಗೂ ವಿಶೇಷ ಮಾತನಾಡುತ್ತಿರಲಿಲ್ಲ. ಅಪ್ಪಯ್ಯ ಬಗೆ ಬಗೆಯಲ್ಲಿ ಅವನನ್ನು ಉಲ್ಲಸಿತಗೊಳಿಸಲು ಯತ್ನಿಸುತ್ತಿದ್ದ. ಆದರೂ ಪಪ್ಪು ಮಾತ್ರ ಗಂಭೀರವಾಗಿದ್ದ.

ಅಂದು ರಾತ್ರಿ ಮಲಗುವ ಸಮಯ ಅಪ್ಪಯ್ಯನಿಗೆ ತಟ್ಟನೆ ಮೃತ್ಯು ಫೋನ್ ಮಾಡಿರೋದು ನೆನಪಾಯಿತು. ‘‘ಹೇ ಪಪ್ಪು, ಮೃತ್ಯು ಫೋನ್ ಮಾಡಿದ್ದ. ಅವನನ್ನು ಕಾಶ್ಮೀರದ ಕಡೆ ಹಾಕಿದ್ದಾರಂತೆ. ನಿನ್ನನ್ನು ತುಂಬಾ ತುಂಬಾ ಕೇಳಿದ...’’

ಮೃತ್ಯುವಿನ ಹೆಸರು ಕೇಳಿ ಪಪ್ಪು ತುಸು ಆಸಕ್ತನಾದ ‘‘ಓಹ್...ಅವನಿಗೆ ಬೇಕಾದ ಜಾಗವೇ ಸಿಕ್ಕಿದಂತಾಗಿದೆ...’’

‘‘ಅವನಿರುವ ಜಾಗ ತುಂಬಾ ಅಪಾಯದಿಂದ ಕೂಡಿದೆಯಂತೆ...ಡಿಸೆಂಬರ್ ಹೊತ್ತಿನಲ್ಲಿ ಸಿಕ್ಕಾಪಟ್ಟೆ ಮಂಜು ಸುರಿಯುತ್ತಂತೆ...ಈ ಮಂಜಿನಿಂದ ಬಚಾವಾಗಿ ಬಂದರೆ ನಮ್ಮನ್ನೆಲ್ಲ ಒಮ್ಮೆ ಕಾಣುವ ಆಸೆ ಇದೆಯಂತೆ...’’

ಪಪ್ಪು ವೌನವಾದ.

‘‘ಜಾನಕಿಯನ್ನು ಭೇಟಿಯಾದೆಯಾ?’’ ಅಪ್ಪಯ್ಯ ಮೆಲ್ಲಗೆ ಕೇಳಿದ. ಪಪ್ಪು ಉತ್ತರಿಸಲಿಲ್ಲ.

‘‘ಅಂದರೆ ಈ ಬಾರಿಯೂ ಜಾನಕಿಗೆ ನೀವು ಪ್ರೇಮವನ್ನು ಹೇಳಲಿಲ್ಲ...’’ ನಕ್ಕು ಪಪ್ಪುವಿನ ಬೆನ್ನು ಮುಟ್ಟಿದ. ‘‘ನಿನ್ನ ಮುಖ ನೋಡಿ ನಾನೇನೋ ಜಾನಕಿ ನಿನ್ನ ಪ್ರೇಮವನ್ನು ತಿರಸ್ಕರಿಸಿ ಬಿಟ್ಟಳೋ ಎಂದು ಭಯಭೀತನಾಗಿದ್ದೆ...’’

‘‘ಜಾನಕಿ ಸಿಕ್ಕಿದಳು...’’ ಪಪ್ಪು ಬಾಯಿ ಬಿಟ್ಟ. ‘‘ಭೇಟಿಯಾಗಿದ್ದೆಯಾ?’’

‘‘ಹೂಂ...’’

‘‘ಅರೆ! ಮಾತನಾಡಿದೆಯಾ?’’

‘‘ಹೂಂ, ಮಾತನಾಡಿದೆ’’

‘‘ಏನೆಂದಳು...?’’

‘‘ಅಲ್ವೋ..ಹೋಗಿ ಹೋಗಿ ನೀನು ಸೇನೆ ಸೇರಿದ್ದು ಯಾಕೆ? ಎಂದು ಕೇಳಿದಳು...’’

‘‘ಏನು?’’

‘‘ಸೇನೆ ಸೇರಿದ್ದು ಯಾಕೆ ಎಂದು ಕೇಳಿದಳು...’’

ಅಪ್ಪಯ್ಯ ವೌನವಾದ. ಅವನಿಗೆ ಎಲ್ಲವೂ ಅರ್ಥವಾಯಿತು.

(ಗುರುವಾರದ ಸಂಚಿಕೆಗೆ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)