varthabharthi


ಯುದ್ಧ

ಧಾರಾವಾಹಿ-33

ಹೊಂಚು ಹಾಕಿದ ಚಿರತೆ

ವಾರ್ತಾ ಭಾರತಿ : 17 May, 2017

‘‘ಅವಳು ಅಮೆರಿಕಕ್ಕೆ ಹೋಗಿದ್ದಾಳೆ...ಅದೇನೋ ಥೀಸಿಸ್ ಬರೆಯುತ್ತಾಳಂತೆ...’’ ಪಪ್ಪು ಮುಂದುವರಿಸಿದ.

‘‘ನೀನು ಆ ಪತ್ರವನ್ನಾದರೂ ಆಕೆಗೆ ಕೊಡಬಹು ದಿತ್ತಲ್ಲ?’’

ಪಪ್ಪು ಉತ್ತರಿಸಲಿಲ್ಲ. ಅವನು ಸೀದಾ ಎದ್ದು ಮಲಗುವುದಕ್ಕೆ ಹೊರಟ. ಒಂದು ಸಿಗರೇಟು ಎಳೆದು ಮುಗಿಸಿ ಅಪ್ಪಯ್ಯ ಮಲಗುವ ಕಡೆ ಹೋದರೆ ಅಲ್ಲಿ ಪಪ್ಪು ಇರಲಿಲ್ಲ. ಒಳಗೆ ಬಚ್ಚಲು ಮನೆಯಲ್ಲಿ ಪಪ್ಪು ಕಾಲನ್ನು ಉಜ್ಜಿ ಉಜ್ಜಿ ತೊಳೆಯುತ್ತಿದ್ದ.

‘‘ಏ ಪಪ್ಪು, ಏನು ತುಳಿದೆ...ಹಾಗೆ ಉಜ್ಜುವುದಕ್ಕೆ...’’ ಅಪ್ಪಯ್ಯ ಕೇಳಿದ

‘‘ಅಸಹ್ಯ....ಗಲೀಜು...’’ ಎಂದು ಕಾಲನ್ನು ಉಜ್ಜುತ್ತಲೇ ಪಪ್ಪು ಉತ್ತರಿಸಿದ.

‘‘ಎಲ್ಲಿ?’’

‘‘ಊರಲ್ಲಿ....’’

‘‘ಊರಲ್ಲಿ? ಅದಕ್ಕೆ ಈಗ ಯಾಕೋ ತೊಳೆಯುತ್ತಿದ್ದೀಯಾ?’’

‘‘ವಾಸನೆ ಹೋಗಿಲ್ಲ ಕಣೋ. ಎಷ್ಟು ತೊಳೆದರೂ ಇನ್ನೂ ವಾಸನೆ ಮೂಗಿಗೆ ಬಡಿದ ಹಾಗೆ ಅನ್ನಿಸುತ್ತದೆ...’’

‘‘ಎಲ್ಲ ನಿನ್ನ ಭ್ರಮೆ. ಹೋಗು ಮಲಕ್ಕೋ’’ ಎಂದ ಅಪ್ಪಯ್ಯ ತನ್ನ ಮಂಚದ ಮೇಲೆ ಬಿದ್ದುಕೊಂಡ.

ಪಪ್ಪುವಿನ ಮನಸ್ಸನ್ನು ಸರಿಪಡಿಸಬೇಕು ಎಂದೇ ಗೆಳೆಯರೆಲ್ಲ ಸೇರಿ ಒಂದು ದಿನ ರಾತ್ರಿ ಗುಂಡು ಪಾರ್ಟಿಯನ್ನು ಹಮ್ಮಿಕೊಂಡರು. ತಮಾಷೆ, ಪೋಲಿಜೋಕು ಮುಗಿಲು ಮುಟ್ಟಿತು. ಯಾರೋ ಒಂದು ಗ್ಲಾಸಲ್ಲಿದ್ದ ಗುಂಡನ್ನು ಪಪ್ಪುವಿನ ಬಾಯಿಗೆ ಸುರಿದರು. ಪಪ್ಪು ಬೇಡ ಅನ್ನಲಿಲ್ಲ. ಅದಾಗಲೇ ಎರಡು ಮೂರು ಬಾರಿ ಅಪ್ಪಯ್ಯನ ಜೊತೆಗೆ ಗುಂಡಿನ ರುಚಿ ನೋಡಿದಾತ, ಇದೀಗ ಬಾಯಾರಿದವನಂತೆ ಎಲ್ಲವನ್ನೂ ಗಂಟಲಿಗೆ ಇಳಿಸಿಕೊಂಡ.

ಅಪ್ಪಯ್ಯ ಅದನ್ನು ನೋಡಿ ನಸು ನಕ್ಕ. ನಿಧಾನಕ್ಕೆ ಕೂಟ ಕಳೆಗಟ್ಟುತ್ತಿತ್ತು.

‘‘ಯುದ್ಧ ಯಾವಾಗ ಶುರುವಾಗತ್ತೆ?’’ ಇದೀಗ ಪಪ್ಪು ಜೋರಾಗಿ ಕೇಳಿದ.

ಆ ಪ್ರಶ್ನೆಗೆ ಎಲ್ಲರೂ ಗಹಗಹಿಸಿದರು.

‘‘ತಕ್ಷಣ ಯುದ್ಧ ಶುರುವಾಗಬೇಕು....ಯಾಕೆ ಯುದ್ಧ ಶುರುವಾಗುತ್ತಿಲ್ಲ?’’ ಪಪ್ಪು ಮತ್ತೆ ಜೋರಾಗಿ ಕೇಳಿದ.

‘‘ಯುದ್ಧ ಶುರುವಾಗಬೇಕಾದರೆ ನಮ್ಮ ಪ್ರಧಾನಿಯ ಕುಂಡೆಗೆ ವಿರೋಧ ಪಕ್ಷದೋರು ಬೆಂಕಿ ಹಚ್ಚಬೇಕು...’’ ಯಾರೋ ಒಬ್ಬ ಹೇಳಿದ.

ಮತ್ತೆ ಎಲ್ಲರೂ ಗಹಗಹಿಸಿದರು.

‘‘ಅದೆಲ್ಲ ನನಗೆ ಗೊತ್ತಿಲ್ಲ. ನನಗೆ ತಕ್ಷಣ ಯುದ್ಧ ಶುರುವಾಗಬೇಕು...’’ ಪಪ್ಪು ಮತ್ತೆ ಅಬ್ಬರಿಸಿದ.

‘‘ಅಷ್ಟು ಆತುರ ಯಾಕೋ?’’ ಮಗದೊಬ್ಬ ಕೇಳಿದ.

‘‘ಯುದ್ಧ ಶುರುವಾಗಬೇಕು...ನಾನು ಯುದ್ಧದಲ್ಲಿ ಸಾಯ್ಬೇಕು...ಹುತಾತ್ಮ ಆಗ್ಬೇಕು...’’

‘‘ಇಲ್ಲಿ ಸಾಯೋಕೆ ಯುದ್ಧಾನೇ ಆಗಬೇಕಾಗಿಲ್ಲ....’’ ಇನ್ಯಾವನೋ ನಗುತ್ತಾ ಉತ್ತರಿಸಿದ.

‘‘ಒಬ್ಬ ಯೋಧನ ಸಾವು ಹೇಗಿರುತ್ತೆ ಎನ್ನುವುದನ್ನು ಆ ಬೋಸುಡಿಗೆ ತೋರಿಸ್ಬೇಕು....ಅದಕ್ಕೆ ಯುದ್ಧ ಆಗ್ಬೇಕು...ನಾನು ಸಾಯ್ಬೇಕು...ಆ ಬೋಸುಡಿ ನನ್ನ ಬಗ್ಗೆ ಥೀಸಿಸ್ ಬರೀಬೇಕು...’’ ಪಪ್ಪು ವಿಕಾರವಾಗಿ ನಗುತ್ತಿದ್ದ.

‘‘ಏ ಪಪ್ಪು....’’ ಅಪ್ಪಯ್ಯ ಪಪ್ಪುವಿನ ಬಳಿ ಸಾಗಿದ ‘‘ಕುಡಿದದ್ದು ಜಾಸ್ತಿಯಾಗಿದೆ...’’

ಪಪ್ಪು ಅಪ್ಪಯ್ಯನ ಕೈ ಹಿಡಿದುಕೊಂಡ. ನೋಡಿದರೆ ಈಗ ಪಪ್ಪು ಅಳುತ್ತಿದ್ದ ‘‘ಯುದ್ಧವನ್ನು ಕಾಯುತ್ತಾ ದಿನದಿನವೂ ಸಾಯುವುದಕ್ಕಿಂತ ಒಮ್ಮೆಲೆ ಯುದ್ಧದಲ್ಲಿ ಸಾಯೋದು ಎಷ್ಟೋ ವಾಸಿ...ನಮ್ಮ ಸಾವಿಗೆ ಊರಿನಲ್ಲಿ ತುಂಬಾ ಗಿರಾಕಿಗಳಿದ್ದಾರೆ ಕಣೋ....ಅಪ್ಪಯ್ಯ...’’

‘‘ಪಪ್ಪು, ಏನೇನೆಲ್ಲ ನೆನೆಸ್ಕೊಂಡು ಮಾತನಾಡ್ಬೇಡ...’’ ಅಪ್ಪಯ್ಯ ಸಮಾಧಾನಿಸಿದ.

‘‘ಸೈನಿಕರು ಜೀವಂತ ಊರಿಗೆ ಹೋದರೆ ಯಾರೂ ಗುರುತು ಹಿಡಿಯಲ್ಲ ಕಣೋ...ಹೆಣವಾಗಿ ಹೋದರೇನೇ ಮರ್ಯಾದೆ...ಯುದ್ಧ ಘೋಷಣೆಯಾಗಬೇಕು. ಇಡೀ ಊರು ಗಡಿಯಲ್ಲಿ ಶತ್ರುವಿನ ಜೊತೆಗೆ ಹೋರಾಡುತ್ತಿರುವ ಪ್ರತಾಪಸಿಂಹನ ಕಡೆಗೆ ನೋಡಬೇಕು...ಎಲ್ಲರೂ ನನ್ನ ಹೆಣಕ್ಕಾಗಿ ಕಾಯಬೇಕು ಸಾಲಾಗಿ...ಆ ಸಾಲಲ್ಲಿ ಜಾನಕಿಯೂ ಇರಬೇಕು...’’

ಪಪ್ಪು ಆ ರಾತ್ರಿ ಅಮಲಲ್ಲಿದ್ದನೋ, ನಿದ್ದೆಯ ಮಂಪರಲ್ಲಿದ್ದನೋ...ಅಥವಾ ಭಾವೋದ್ವೇಗದಿಂದ ಅಳುತ್ತಿದ್ದನೋ ಯಾರಿಗೂ ಗೊತ್ತಿಲ್ಲ. ಯಾಕೆಂದರೆ ಎಲ್ಲರ ಸ್ಥಿತಿಯೂ ಒಂದೇ ಆಗಿತ್ತು. ಶತ್ರುವಿನ ಕಡೆಯಿಂದ ಬಿದ್ದ ಬಾಂಬ್ ಶೆಲ್‌ಗೆ ಛಿದ್ರಗೊಂಡವರಂತೆ ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರು. ಅಲ್ಲೇ ಎಲ್ಲೋ ಒಂದೆಡೆ ಪಪ್ಪು ಕೂಡ ಹೆಣದಂತೆ ಬಿದ್ದಿದ್ದ. ಅಲ್ಲಿ ಒಂದಿಷ್ಟು ಎಚ್ಚರವಾಗಿದ್ದವನು ಅಪ್ಪಯ್ಯ ಮಾತ್ರ. ಮಲಗಿದಲ್ಲೇ ಅದೇನೋ ತೊದಲುತ್ತಿದ್ದ ಪಪ್ಪುವನ್ನೇ ಅವನು ನೋಡುತ್ತಿದ್ದ.
ನಿಧಾನಕ್ಕೆ ಪಪ್ಪು ಬದಲಾಗುತ್ತಿದ್ದ. ಊರಿನ ನೆನಪು ಆಗಾಗ ಅವನ ಮನಸ್ಸನ್ನು ಕಹಿ ಮಾಡುತ್ತಿತ್ತು. ಆದುದರಿಂದಲೇ ಅವನು ಯುನಿಟ್‌ನ ತರಬೇತಿಯಲ್ಲಿ, ಕೆಲಸದಲ್ಲಿ ಹೆಚ್ಚು ಹೆಚ್ಚು ತೊಡಗುತ್ತಿದ್ದ. ಹೆಚ್ಚು ಹೆಚ್ಚು ಪ್ರೌಢನಾಗಲು ಯತ್ನಿಸುತ್ತಿದ್ದ. ಉಳಿದವರ ಜೊತೆಗೆ ಗುಂಡು ಹಂಚಿಕೊಳ್ಳುವುದನ್ನು ಕಲಿತ. ಪೋಲಿಜೋಕುಗಳ ಅಭಿರುಚಿಗೆ ಒಗ್ಗಿಕೊಂಡ. ಗಾಂಜ, ಚರಸ್ ಮೊದಲಾದ ಉಪದಂಧೆಗಳನ್ನು ಮಾಡುತ್ತಿದ್ದ ಹಿರಿಯ ಸುಬೇದಾರ್, ಹವಾಲ್ದಾರ್‌ಗಳನ್ನು ಸಹಿಸಲು ಕಲಿತ. ಒಂದು ದಿನ, ಹವಾಲ್ದಾರ್ ಒಬ್ಬ ಹಿಂದುಗಡೆಯಿಂದ ಬಂದು ತನ್ನ ಕೆನ್ನೆಯನ್ನು ಮೃದುವಾಗಿ ಸವರಿದಾಗಲೂ ಸಹನೆಕಳೆದುಕೊಳ್ಳಲಿಲ್ಲ. ಅವನು ಸವರುತ್ತಿದ್ದ ಅಷ್ಟೂ ಹೊತ್ತು ಉಸಿರು ಬಿಗಿ ಹಿಡಿದು ನಿಂತ.

ಪಪ್ಪು ಬೇಟೆಗೆ ಹೊಂಚು ಹಾಕಿ ಕುಳಿತ ಚಿರತೆಯಂತೆ ಈಗ ಕಾಯುತ್ತಿದ್ದ. ಯುದ್ಧಕ್ಕಾಗಿ. ಒಂದಲ್ಲ ಒಂದು ದಿನ ಅದನ್ನು ಮುಖಾಮುಖಿಯಾಗುತ್ತೇನೆ ಎನ್ನುವ ಆತ್ಮವಿಶ್ವಾಸದಲ್ಲೇ ದಿನಗಳನ್ನು ಕಳೆಯ ತೊಡಗಿದ. ತಾನು ಕಳೆದುಕೊಂಡದ್ದನ್ನೆಲ್ಲ ಆ ಯುದ್ಧದಲ್ಲಿ ಮರಳಿ ಪಡೆಯಲಿದ್ದೇನೆ ಎನ್ನುವ ಆತ್ಮವಿಶ್ವಾಸ ಅವನದು.
ಅದೇ ಸಂದರ್ಭದಲ್ಲಿ ಅವನನ್ನು ಮೇಲಧಿಕಾರಿಯೊಬ್ಬನ ಮನೆಗೆಲಸಕ್ಕೆ ವರ್ಗಾವಣೆ ಮಾಡಲಾಯಿತು. ವಿಶೇಷವೆಂದರೆ ಅವನ ಕೆಲವು ಸಹೋದ್ಯೋಗಿಗಳೆಲ್ಲ ಅವನನ್ನು ಭಡ್ತಿ ಸಿಕ್ಕಿತೇನೋ ಎಂಬಂತೆ ನೋಡಿದರು. ‘‘ಅಭಿನಂದನೆಗಳು ಕಣೋ...ಸಂದರ್ಭವನ್ನು ಬಳಸಿಕೋ. ಮೇಲೆ ಬರುವುದಕ್ಕೆ ಇದು ಒಳ್ಳೆಯ ಅವಕಾಶ’ ಎಂದ ಒಬ್ಬ.

ಅಪ್ಪಯ್ಯ ಮಾತ್ರ ಅವನ ತೋಳನ್ನು ಬಿಗಿಯಾಗಿ ಹಿಡಿದು ಹೇಳಿದ್ದ ‘‘ಯೋಧನ ಕೈಯಲ್ಲಿರುವ ಅತೀ ಪ್ರಬಲವಾದ ಶಸ್ತ್ರ ಯಾವುದು ಗೊತ್ತಾ?’’

ಪಪ್ಪು ಪ್ರಶ್ನಾರ್ಥಕವಾಗಿ ಗೆಳೆಯನನ್ನು ನೋಡಿದ.

‘‘ತಾಳ್ಮೆ. ಆ ಆಯುಧವನ್ನು ಯೋಧ ಯಾವತ್ತೂ ಕಳೆದುಕೊಳ್ಳಬಾರದು...ಇದು ನನಗೆ ನನ್ನ ಮಾವಂದಿರು ಪದೇ ಪದೇ ಹೇಳಿದ ಮಾತು. ನೀನು ಕೂಡ ಅಷ್ಟೇ. ಆ ಆಯುಧವನ್ನು ಯಾವತ್ತೂ ಭದ್ರವಾಗಿಟ್ಟುಕೋ...ಅದನ್ನು ಕಳೆದುಕೊಂಡರೆ ನಿನ್ನನ್ನು ನೀನೇ ಕಳೆದುಕೊಳ್ಳುತ್ತೀಯ...’’

ಅದೊಂದು ಎಚ್ಚರಿಕೆಯ ಮಾತಿನಂತೆ ಪಪ್ಪುವಿಗೆ ಕೇಳಿಸಿತು. ಅಪ್ಪಯ್ಯ ತುಂಬಾ ಗಂಭೀರನಾಗಿ ಈ ಮಾತನ್ನು ಹೇಳಿದ್ದ. ಪಪ್ಪುವಿನ ಮನಸ್ಸಲ್ಲಿರುವ ತಾಕಲಾಟಗಳನ್ನು ಅರಿತುಕೊಂಡು ಆಡಿದ ಮಾತಾಗಿತ್ತು ಅದು.

ಮೇಲಧಿಕಾರಿಯ ಮನೆಯಲ್ಲಿ ಅವನಿಗೆ ಯುದ್ಧರಂಗದ ಹೊಸ ಜಗತ್ತೊಂದು ತೆರೆದುಕೊಂಡಿತು. ಮೇಲಧಿಕಾರಿಯ ಮನೆ ಗುಡಿಸುವುದು, ಅವರ ಮಕ್ಕಳನ್ನು ವಿಹಾರಕ್ಕೆ ಭದ್ರವಾಗಿ ಕರೆದೊಯ್ಯುವುದು, ತರಕಾರಿ ತರುವುದು ಎಲ್ಲ ಹೊಣೆಗಾರಿಕೆಗಳೂ ಪಪ್ಪುವಿನ ತಲೆಗೆ ಬಿದ್ದವು. ಮೊದ ಮೊದಲು ಅವನಿಗೆ ತೀರಾ ಅವಮಾನವಾಗುತ್ತಿತ್ತು. ತನ್ನ ತಂದೆ, ತಾಯಿಯ ಘನತೆಗೆ ಏನೋ ಧಕ್ಕೆ ತಂದಂತೆ ಅವನಿಗೆ ಅನ್ನಿಸುತ್ತಿತ್ತು. ಆದರೆ ವಯಸ್ಸಲ್ಲಿ ತುಂಬಾ ಹಿರಿಯನಾಗಿದ್ದ ಸಹೋದ್ಯೋಗಿಯೊಬ್ಬ ವಿವರಿಸಿ ಹೇಳಿದ ‘‘ನೋಡು...ಯೋಧನಾಗಿ ನೀವು ಮಾಡುವ ಪ್ರತೀ ಕೆಲಸವೂ ದೇಶದ ಕೆಲಸವೇ ಆಗಿದೆ. ನಮ್ಮ ಮೇಲಧಿಕಾರಿಗಳು ದೇಶಕ್ಕಾಗಿಯೇ ದುಡಿಯುತ್ತಿದ್ದಾರೆ. ಅವರ ಮನೆ ದೇಶಕ್ಕೆ ಸಂಬಂಧಿಸಿದ್ದು. ಯಾವುದೋ ರಾಜಕಾರಣಿಯ ಮನೆಯನ್ನು ಗುಡಿಸುವುದಕ್ಕಿಂತ ಇದುವೇ ಉತ್ತಮ...’’
ಮೇಲಧಿಕಾರಿಯ ಪತ್ನಿ ಪ್ರತಿಬಾರಿ ತಡರಾತ್ರಿ ಕುಡಿದು ಮನೆ ಸೇರುತ್ತಿದ್ದಳು. ಮೈ ತುಂಬಾ ಬೊಜ್ಜು ಬೆಳೆಸಿಕೊಂಡ, ಆದರೆ ಆ ಬೊಜ್ಜನ್ನು ಮರೆ ಮಾಚಲು ಇನ್ನಿತರ ಪ್ರಯತ್ನಗಳನ್ನು ಮಾಡುತ್ತಾ ಇನ್ನಷ್ಟು ಅಸಹ್ಯವಾಗಿ ಕಾಣುತ್ತಿದ್ದಾಳೆ ಈಕೆ ಅನ್ನಿಸಿತ್ತು ಪಪ್ಪುವಿಗೆ. ಜೊತೆಗೆ ಹರೆಯದ ಮಗಳು. ಎಲ್ಲರೂ ಆ ಮನೆಯಲ್ಲಿ ಒಟ್ಟಾಗಿ ಕೂಡಿದ್ದನ್ನು ಪಪ್ಪು ನೋಡಿಯೇ ಇಲ್ಲ. ಒಬ್ಬೊಬ್ಬರು ಒಂದೊಂದು ಸಮಯಕ್ಕೆ ಬಾಗಿಲು ತಟ್ಟುತ್ತಿದ್ದರು. ಮೇಲಧಿಕಾರಿಯೂ ತಡರಾತ್ರಿ ತೂರಾಡುತ್ತಲೇ ಮನೆ ಬಾಗಿಲು ತಟ್ಟುತ್ತಿದ್ದ. ಅವನಿಗೆ ಹೆಗಲು ಕೊಟ್ಟು ಕೋಣೆ ಸೇರಿಸುವ ಕೆಲಸವೂ ಈತನದೇ.

ಮೇಲಧಿಕಾರಿಯ ಪತ್ನಿ ಮತ್ತು ಪುತ್ರಿ ತನ್ನನ್ನು ಏಕವಚನದಲ್ಲೇ ಕರೆಯುತ್ತಿರುವುದನ್ನೂ ಪಪ್ಪು ಸಹಿಸಿಕೊಳ್ಳತೊಡಗಿದ. ಪುತ್ರಿ ಪ್ರತೀ ಮಾತನ್ನು ತನ್ನ ಜೊತೆ ಅಸಹನೆಯಿಂದಲೇ ಆಡುವುದನ್ನು ಅವನು ಗಮನಿಸಿದ್ದ. ಆಕೆಯ ನೋಟದಲ್ಲೇ ತನ್ನ ಬಗ್ಗೆ ತಿರಸ್ಕಾರವಿತ್ತು. ಕೆಲವೊಮ್ಮೆ ಅಡುಗೆಯ ಆಳು ರಜೆ ಹಾಕಿದಾಗ ಪಪ್ಪುವೇ ಅಡುಗೆಯನ್ನೂ ಮಾಡಬೇಕಾಗಿತ್ತು. ಮೇಲಧಿಕಾರಿಯ ಪತ್ನಿಗೆ ಮೂಗಿನಲ್ಲೇ ಕೋಪ. ಆಗಾಗ ಹಿಂದಿಯಲ್ಲಿ ಅದೇನೇನೋ ಒದರುತ್ತಲೇ ಇರುತ್ತಿದ್ದಳು. ಅಪ್ಪಯ್ಯನ ಎಚ್ಚರಿಕೆಯ ಮಾತು ನೆನಪಾಯಿತು. ತಾನಿಲ್ಲಿ ಯೋಧನಲ್ಲ, ಒಬ್ಬ ಕೆಲಸದ ಆಳು ಅಷ್ಟೇ. ಪಪ್ಪುವಿನ ಒಳಗೆ ನೋವು, ಸಂಕಟ ಹೊರಳಾಡುತ್ತಲೇ ಇದ್ದವು.

ಒಂದೆರಡು ತಿಂಗಳು ಕಳೆದಿರಬಹುದು. ಅದೊಂದು ಸಂಜೆ, ಮನೆಯೊಳಗೆ ಮೇಲಧಿಕಾರಿಯ ಪತ್ನಿಯೊಬ್ಬರೇ ಇದ್ದಂತಿತ್ತು. ಒಳಗಿನಿಂದ ಆಕೆ ಕರೆದ ಸದ್ದು. ಪಪ್ಪು ತಕ್ಷಣ ಒಳಗೋಡಿದ.

‘‘ಇಲ್ಲಿ, ಒಳಗೆ ಬಾ...’’

ಪಪ್ಪು ಒಳ ಕೋಣೆಗೆ ಹೋದ. ಬಾಗಿಲು ತೆರೆದಿತ್ತು.

‘‘ನೋಡು...ಈ ಹುಕ್ಸ್ ಎಟಕುತ್ತಿಲ್ಲ, ಇದನ್ನು ಹಾಕು...’’ ಎಂದಳು.

ಪಪ್ಪು ಆವಕ್ಕಾದ. ಮೇಲಧಿಕಾರಿಯ ಪತ್ನಿಯ ಬೆತ್ತಲೆ ಬೆನ್ನು ಕಾಣುತ್ತಿತ್ತು. ಆಕೆಯ ಸೀರೆ ನೆಲ ಮುಟ್ಟಿತ್ತು. ಆಕೆ ಅಮಲಿನಲ್ಲಿದ್ದಂತಿತ್ತು. ಮೈಮೇಲಿನ ಪರಿವೆ ಇದ್ದಂತಿರಲಿಲ್ಲ.

ತನ್ನ ರವಿಕೆಯ ಹಿಂಬದಿಯ ಹುಕ್ಸ್ ಹಾಕುವುದಕ್ಕೆಂದು ಆಕೆ ಕರೆಯುತ್ತಿದ್ದಾಳೆ. ಆಕೆ ಪಪ್ಪುವಿನ ಕಡೆಗೆ ತಿರುಗಿ ಜೋರಾಗಿ ಆದೇಶ ನೀಡಿದಳು ‘‘ಏನು ಹಾಗೆ ನೋಡುತ್ತಿದ್ದೀಯ? ಇಲ್ಲಿ ಬಾ...’’

ಪಪ್ಪು ನಿಂತಲ್ಲೇ ಕಂಪಿಸಿದ.

‘‘ಏ...ಏನು ನೋಡುತ್ತಾ ಇದ್ದೀಯ... ಬಾ...’’ ಆಕೆ ಮತ್ತೆ ಜೋರಾಗಿ ಕರೆದಳು.

ಪಪ್ಪು ಆಕೆಯ ಕಡೆಗೆ ಒಂದೊಂದೇ ಹೆಜ್ಜೆಗಳನ್ನು ಇಡುತ್ತಾ ಸಾಗುತ್ತಿದ್ದ.

‘‘ಅದನ್ನು ಕೊಡು...’’ ಎಂದು ನೆಲದಲ್ಲಿ ಬಿದ್ದ ಸೀರೆಯ ಸೆರಗನ್ನು ತೋರಿಸಿ ಹೇಳಿದಳು.

ಪಪ್ಪು ಬಾಗಿದ. ಆಕೆ ಆತನ ಮುಖವನ್ನು ಕೈಯಲ್ಲಿ ತೆಗೆದುಕೊಂಡು ತನ್ನೆಡೆಗೆ ಸೆಳೆದುಕೊಂಡಳು.

ಪಪ್ಪುವಿಗೆ ಯಾಕೋ ಹೊಟ್ಟೆ ತೊಳೆಸಿದಂತಾಯಿತು. ಆಕೆಯನ್ನು ಒಮ್ಮೆಲೆ ತಳ್ಳಿದ ಪಪ್ಪು ಹೊರಗೋಡಿದವನೇ ಅಂಗಳದಲ್ಲಿ ಬಸಬಸನೆ ಕಾರತೊಡಗಿದ. ಒಳಗಿನಿಂದ ಆಕೆ ಹಿಂದಿಯಲ್ಲಿ ಚೀರಾಡುತ್ತಿದ್ದಳು. ಅತ್ಯಂತ ಕೆಟ್ಟ ಭಾಷೆಯಲ್ಲಿ ನಿಂದಿಸುತ್ತಿದ್ದಳು. ಅಲ್ಲಿಂದ ಎರಡು ದಿನ ಆಕೆ ಯಾವ ಕೆಲಸಕ್ಕೂ ಅವನನ್ನು ಕರೆಯಲಿಲ್ಲ.

(ರವಿವಾರದ ಸಂಚಿಕೆಗೆ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)