varthabharthi


ತಾರಸಿ ನೋಟ

ಇಂದ್ರ ಧನುಷ್ ಚಿಮ್ಮಿಸಲಿರುವ ಏಳು ಬೇನೆಬಾಣ

ವಾರ್ತಾ ಭಾರತಿ : 12 Aug, 2017
ವೆಂಕಟಲಕ್ಷ್ಮೀ ವಿ.ಎನ್.

ಎಪ್ಪತ್ತೊಂದನೆ ಸ್ವಾತಂತ್ರ್ಯೋತ್ಸವ ತಿರುವಿನಲ್ಲಿರುವಾಗ ದೇಶದ ಗೆಲುವಿನ ಗಾಥೆಗಳಲ್ಲಿ ಒಂದಾದ ವ್ಯಾಕ್ಸೀನ್ ಸೆಕ್ಟರ್-ಲಸಿಕೆ ಉತ್ಪಾದನೆ ಹಾಗೂ ರಫ್ತು ವಲಯ ‘‘ನಡೆದು ಬಂದ ದಾರಿಯ ಕಡೆ/ ಹೊರಳಿಸಬೇಕು ಕಣ್ಣು’’ ಎನಿಸುತ್ತಿದೆ. ಅದಕ್ಕೂ ಹತ್ತಿರ ಹತ್ತಿರ ಅಷ್ಟೇ ವರ್ಷಗಳ ಇತಿಹಾಸ. ಕೇವಲ ‘‘ಒಂದು ರಾಜ್ಯಸಭೆ ಸೀಟ್‌ಗೆ ಇಷ್ಟೊಂದು ದೊಂಬರಾಟವೇ’’ ಎಂಬ ಪಲ್ಲವಿ ಹಾಡುತ್ತಲೇ ಅದಕ್ಕಾಗಿ ನಡೆದ ರೋಚಕ ಹೋರಾಟವನ್ನು ಪ್ರಸರಿಸಲು ಸರಿ ರಾತ್ರಿಯ ತನಕ, ಶಕ್ತ್ಯಾನುಸಾರ ‘ವಿವಿಧ ವಿನೋದಾವಳಿ’ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸುದ್ದಿವಾಹಿನಿಗಳ ಯುಗದಲ್ಲಿ ಲಸಿಕೆ ಪಸಿಕೆಗಳಿಗೆ ಪಾಪ ಆದ್ಯತೆಯ ಸ್ಥಾನ ಎಲ್ಲಿ ಸಿಗಬೇಕು? ಮಾಧ್ಯಮದ ಇಂತಹ ಜಾಣ ಕುರುಡು ಕುರಿತು ಸಂಬಂಧಪಟ್ಟ ವರಿಷ್ಠ ಅಧಿಕಾರಿಯೊಬ್ಬರು ಬೇಸರ-ವಿಷಾದ ಪಟ್ಟುಕೊಂಡಿದ್ದು ನೆನಪಾಗುತ್ತದೆ.

ಇಡೀ ವಿಶ್ವದಲ್ಲೇ ಅತ್ಯಂತ ವ್ಯಾಪಕ ಲಸಿಕೆ ನೀಡಿಕೆ ಕಾರ್ಯಕ್ರಮ ನಡೆಸಿ ಸೈ ಎನಿಸಿಕೊಂಡಿರುವ ರಾಷ್ಟ್ರದ ಯಶಸ್ಸಿನ ಉದ್ದ-ಅಗಲ, ಸವಾಲು-ಸಂಕಷ್ಟಗಳನ್ನು ಕವರ್ ಮಾಡುವುದೂ ಮುಖ್ಯವಲ್ಲವೇ ಎಂದವರು ಪ್ರಶ್ನಿಸಿದ್ದರು. ಸಂಶೋಧನೆ ಹಾಗೂ ಅಭಿವೃದ್ಧಿ ಸೌಕರ್ಯ, ಜ್ಞಾನ-ಕೌಶಲ ಹಾಗೂ ಕಡಿಮೆ ಉತ್ಪಾದನೆ ವೆಚ್ಚಗಳ ದೃಷ್ಟಿಯಿಂದ ತುಲನಾತ್ಮಕವಾಗಿ ಬಹಳ ಮುಂದಿರುವ ಭಾರತೀಯ ವ್ಯಾಕ್ಸೀನ್ ಕೈಗಾರಿಕೆ ಈ ವಿಷಯದಲ್ಲಿ ಜಾಗತಿಕ ನಾಯಕತ್ವ ವಹಿಸುವ ದಿನ ದೂರವಿಲ್ಲ ಎನ್ನುವುದು ಪರಿಣತರ ನುಡಿ. ಇಂದು ಭೂಗೋಳದಲ್ಲಿ ಬಳಕೆಯಾಗುತ್ತಿರುವ ಪ್ರತಿ ಮೂರು ವ್ಯಾಕ್ಸೀನ್‌ಗಳಲ್ಲಿ ಒಂದು ಭಾರತದಲ್ಲಿ ಉತ್ಪಾದನೆಯಾದುದಾಗಿರುತ್ತದೆ ಎನ್ನುವುದು ಅದಕ್ಕೆ ಸಾಕ್ಷಿ.

ವಾರ್ಷಿಕ ಶೇ.15 ಸಂಯುಕ್ತ ಅಭಿವೃದ್ಧಿ ದರದತ್ತ ಈ ಉದ್ದಿಮೆ ಸಾಗಿದೆ. ಸಾರ್ವಜನಿಕ ವಲಯ ಘಟಕಗಳೇ ಹೆಚ್ಚು ಸಂಖ್ಯೆಯಲ್ಲಿದ್ದೂ ಯಶಸ್ಸು ಸಾಧಿಸಿರುವ ಅಪರೂಪದ ಕೇಸ್ ಇದು. ಆದರೆ ಲಸಿಕೆ ನೀಡಿಕೆ ಕಾರ್ಯಕ್ರಮದಲ್ಲಿ ತನ್ನ ಅಭಿವೃದ್ಧಿಶೀಲ ನೆರೆ ರಾಷ್ಟ್ರಗಳಿಗಿಂತಲೂ ಭಾರತ ಹಿಂದುಳಿದಿರುವುದು ಒಂದು ವಿಪರ್ಯಾಸ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಪ್ರಸಕ್ತ ಶಿಶು ಮರಣ ದರ 39. ಅಂದರೆ ವಾರ್ಷಿಕ 9.9 ಲಕ್ಷ ಮಕ್ಕಳು ಹುಟ್ಟಿದ ಒಂದು ವರ್ಷದೊಳಗಾಗಿಯೇ ಸಾಯುತ್ತಿದ್ದಾರೆ ಮತ್ತು ಇದನ್ನು ಲಸಿಕೆ ನೀಡಿಕೆಯಿಂದ ತಡೆಯಬಹುದಾಗಿತ್ತು. ಕೇಂದ್ರದ ನೂತನ ಯೋಜನೆಯಾದ ‘ಮಿಷನ್ ಇಂದ್ರಧನುಷ್’ ಮೂಲಕ ಸದ್ಯ ಇರುವ ಶೇ.65 ವ್ಯಾಪ್ತಿಯ ಲಸಿಕೆ ನೀಡಿಕೆಯನ್ನು ಇನ್ನು ಮೂರು ವರ್ಷದಲ್ಲಿ ಶೇ.90ಕ್ಕೆ ಏರಿಸುವುದು ಸರಕಾರದ ಮುಂದಿರುವ ಹೆಗ್ಗುರಿ.

ವ್ಯಾಕ್ಸೀನ್‌ನಿಂದ ತಡೆಗಟ್ಟಬಹುದಾದ ಕಾಯಿಲೆಗಳಿಗೆ (ವ್ಯಾಕ್ಸಿನ್ ಪ್ರಿವೆಂಟಬಲ್ ಡಿಸೀಸಸ್-ವಿಪಿಡಿಯ ಹಳೆ ಪಟ್ಟಿಯಲ್ಲಿರುವವು, ಕ್ಷಯ, ಡಿಫ್ತೀರಿಯ, ನಾಯಿಕೆಮ್ಮು, ಪೋಲಿಯೊ, ದಡಾರ ಹಾಗೂ ಟೆಟನಸ್) ಬಾಲ್ಯದ ಐದು ವರ್ಷಗಳಲ್ಲಿ ನಿಯಮಿತ ಲಸಿಕೆ ನೀಡಿ ಪ್ರಜೆಗಳ ಆರೋಗ್ಯ ಕಾಪಾಡುವುದು ಪ್ರತಿ ದೇಶದ ಮುತುವರ್ಜಿಯುತ ಜಬಾಬ್ದಾರಿ. ಸಣ್ಣ ಮೊತ್ತದಲ್ಲಿ ಮುಗಿಯುವ ಈ ಕೆಲಸದಿಂದ, ಆಯುಷ್ಯಪೂರ್ತಿ ಈ ಕಾಯಿಲೆಗಳು ನಾಗರಿಕರ ಹತ್ತಿರ ಸುಳಿಯುವುದಿಲ್ಲ ಎಂಬ ಗ್ಯಾರಂಟಿ ಈ ಬೃಹತ್ ಆರೋಗ್ಯ ಕಾರ್ಯಕ್ರಮಕ್ಕೆ ಅಗಾಧ ಪ್ರೇರಣೆ ಒದಗಿಸುತ್ತದೆ. ಹದಿನಾರನೆ ಶತಮಾನಕ್ಕೂ ಮೊದಲೇ ಇಂಡಿಯಾ ಮತ್ತು ಚೀನಾದಲ್ಲಿ ಯಾವುದೋ ಒಂದು ರೂಪದಲ್ಲಿ ಇನಾಕ್ಯುಲೇಷನ್ ಜಾರಿಯಲ್ಲಿತ್ತು ಎನ್ನುವುದು ಆಸಕ್ತಿದಾಯಕ ಚಾರಿತ್ರಿಕ ವಿವರ. (ಪ್ರಾಸಂಗಿಕವಾಗಿ ಹೇಳಬೇಕೆಂದರೆ ನಮ್ಮ ಶಾಲಾದಿನಗಳಲ್ಲಿ ಲಸಿಕೆ ನೀಡಿಕೆಗೆ ಅದೇ ಹೆಸರಿತ್ತು.

‘‘ಇಂದು ನಮ್ಮ ಶಾಲೆಗೆ ಬಂದಿದ್ದರು, ನಾಳೆ ನಿಮ್ಮಲ್ಲಿ’’ ಎಂದು ಕೈತೋರಿಸುತ್ತ ಹೇಳುವಾಗ ಗೆಳೆಯರ ಗುಂಪಿನಲ್ಲಿ ಸಮ್ಮಿಶ್ರ ಪ್ರತಿಕ್ರಿಯೆ. ಕೆಲ ಫಟಿಂಗರು ನಾಳೆ ಮಧ್ಯಾಹ್ನ ಹೇಗಾದರೂ ಮಾಡಿ ಮನೆಗೆ ಓಡಿಬಂದು ಬಿಡಬೇಕು ಎಂದು ಪ್ಲಾನ್ ಮಾಡುತ್ತಿದ್ದರು. ಕ್ಲಾಸ್‌ರೂಮಿನಲ್ಲಿಯೇ ಸರತಿ ಸಾಲಿನಲ್ಲಿದ್ದ ಮಕ್ಕಳನ್ನು ಒಬ್ಬೊಬ್ಬರನ್ನಾಗಿ ಸ್ಟೂಲ್ ಮೇಲೆ ಕೂರಿಸಿ, ತೋಳೇರಿಸಿ ಚುಚ್ಚುವಾಗ ಶಿಕ್ಷಕರ ಮೇಲುಸ್ತುವಾರಿ ಇರುತ್ತಿತ್ತು. ಮಾರನೆ ದಿನ ಏನಾದರೂ ಭುಜ ಬಾತುಕೊಂಡರೆ ಉಪ್ಪಿನ ಶಾಖಕ್ಕೆ ಅಮ್ಮನಲ್ಲಿ ಡಿಮ್ಯಾಂಡ್. ಹೆಚ್ಚು ಆವುಟ ಮಾಡದ ಜಾಣ ಮಕ್ಕಳು ಇನಾಕ್ಯುಲೇಷನ್ ಮಹತ್ವ ತಿಳಿದಂತೆ ವರ್ತಿಸುತ್ತಿದ್ದರು. ಬೇಸಿಗೆ ರಜೆ, ಮದುವೆ ಮತ್ತಿತರ ಸಮಾರಂಭ ಇತ್ಯಾದಿ ಸಂದರ್ಭದಲ್ಲಿ ಬಾಲಕ-ಬಾಲಿಕೆಯರ ಗುಂಪಿನ ಹರಟೆ ಒಮ್ಮೆಲೇ ಚುಚ್ಚುಮದ್ದು ವಿಷಯಕ್ಕೆ ತಿರುಗಿ ಎಲ್ಲರೂ ಅಂಗಿ-ಜಂಪರ್ ತೋಳು ಸರಿಸುತ್ತ ಅದರ ಗುರುತುಗಳನ್ನು ಹೆಮ್ಮೆಯಿಂದ ಪರಸ್ಪರರಿಗೆ ಪ್ರದರ್ಶಿಸುತ್ತಿದ್ದರು.) ಆದರೆ ರೋಗ ನಿರೋಧಕ ಲಸಿಕೆ ನೀಡಿಕೆ ಪಾಶ್ಚಿಮಾತ್ಯ ದೇಶಗಳಲ್ಲಿ ಆಧುನಿಕವಾಗಿ ಪ್ರಾರಂಭವಾದದ್ದು 19ನೆ ಶತಮಾನದಲ್ಲಿ.

ಸಮಸಮವಾಗಿ ಆಗ್ನೇಯ ಏಷ್ಯಾದಲ್ಲಿಯೂ ಅದು ಬೆಳವಣಿಗೆ ಕಂಡಿತು. ಸ್ವಾತಂತ್ರ್ಯಪೂರ್ವದಲ್ಲಿಯೇ (1890) ಸಾಕಷ್ಟು ಸಂಪನ್ಮೂಲವನ್ನು ಲಸಿಕೆಗಳ ಆವಿಷ್ಕಾರ, ಸಂಶೋಧನೆಗೆ ಭಾರತದಲ್ಲಿದ್ದ ಬ್ರಿಟಿಷ್ ಸರಕಾರ ಮೀಸಲಿಟ್ಟಿತ್ತು. ಈ ಸಂಬಂಧ ದೇಶಾದ್ಯಂತ 15 ಸಂಸ್ಥೆಗಳು ಸ್ಥಾಪನೆಯಾದವು. ವಿಶ್ವದಲ್ಲಿಯೇ ಪ್ರಪ್ರಥಮವಾಗಿ ಪ್ಲೇಗ್ ಕಾಯಿಲೆಗೆ ಲಸಿಕೆ ಕಂಡುಹಿಡಿದದ್ದು ಈ ಸಂಸ್ಥೆಗಳ ಹೆಗ್ಗಳಿಕೆ. ಇದಾಗಿ ಸುಮಾರು ಶತಮಾನ ನಂತರ, ಅಂದರೆ 1970ರ ವೇಳೆಗೆ ಪ್ರಗತಿ ಹೊಂದಿದ ರಾಷ್ಟ್ರಗಳಲ್ಲೆಲ್ಲ ಶೈಶವದ ಬೇನೆಗಳು ಬಹುತೇಕ ನಿರ್ನಾಮವಾದವು. ಆದರೆ ಬಡ ರಾಷ್ಟ್ರಗಳಲ್ಲಿ ಪರಿಸ್ಥಿತಿ ಏನೇನೂ ಸುಧಾರಿಸಿರದ ಕಾರಣ ವಿಶ್ವ ಆರೋಗ್ಯ ಸಂಸ್ಥೆ ‘ಎಕ್ಸ್‌ಪ್ಯಾಂಡೆಂಡ್ ಇಮ್ಯುನೈಝೇಷನ್ ಪ್ರೊಗ್ರಾಂ (1974)’ ಮೂಲಕ ಅವುಗಳ ನೆರವಿಗೆ ನಿಂತಿತು.

ಡಬ್ಲ್ಯೂಎಚ್‌ಒ ಮಾರ್ಗದರ್ಶನದಲ್ಲಿ ಭಯಾನಕ ಸಿಡುಬು ರೋಗವನ್ನು ಭಾರತ ಓಡಿಸಿದ್ದು ಇದರ ಆಸುಪಾಸಿನಲ್ಲಿ. ಅದಾಗಿ ನಾಲ್ಕು ವರ್ಷ ಕಳೆಯುವಷ್ಟರಲ್ಲಿ ರೋಗನಿರೋಧಕ ಚುಚ್ಚುಮದ್ದು ನೀಡಿಕೆ ಹಂತ ಹಂತವಾಗಿ ಹಬ್ಬಿಸುತ್ತ, ಅದಕ್ಕೆ ಬೇಕಾದ ಲಸಿಕೆ ತಯಾರಿಕೆಯಲ್ಲೂ ಭಾರತ ಸ್ವಾಯತ್ತತೆ ಗಳಿಸಿಕೊಳ್ಳುವ ಪ್ರಯತ್ನ ಮಾಡಿತು. ಲಸಿಕೆ ಹಾಕಿಸಿಕೊಳ್ಳದ ಮತ್ತು ಭಾಗಶಃ ಅವನ್ನು ಹಾಕಿಸಿಕೊಂಡ ದೇಶದ ಎಲ್ಲ ಮಕ್ಕಳನ್ನೂ ಅದಕ್ಕೆ ಗುರಿಪಡಿಸುವ ಅಮೋಘ ಆಶಯದೊಂದಿಗೆ ಇಪಿಐ ಅನ್ನು ಸಾರ್ವತ್ರಿಕ-‘ಯೂನಿವರ್ಸಲ್ ಇಮ್ಯುನೈಝೇಷನ್ ಪ್ರೋಗ್ರಾಂ’ ಆಗಿ 1985ರಲ್ಲಿ ವಿಸ್ತರಿಸಿತು ಮತ್ತು ಪ್ರತಿಬಂಧಿಸಿ ತಡೆಯಬಹುದಾದ ಕಾಯಿಲೆಗಳಿಂದ ಉಂಟಾಗುತ್ತಿದ್ದ ಶಿಶು ಮರಣ ಸಂಖ್ಯೆ ಇಳಿಮುಖವಾಗಿಸಲು ನಿಸ್ಪಹ ಪ್ರಯತ್ನ ನಡೆಸಿತು. ಕ್ರಮೇಣ ಈ ರಾಷ್ಟ್ರೀಯ ಕಾರ್ಯಕ್ರಮಗಳು ಗರ್ಭಿಣಿಯರನ್ನೂ ಒಳಗೊಂಡಿದ್ದು, ವಿಪಿಡಿ ಪಟ್ಟಿಗೆ ಇನ್ನೂ ಕೆಲ ಮಾರಣಾಂತಿಕ ಬೇನೆಗಳನ್ನು ಸೇರಿಸಿದ್ದು ಅದರ ಸ್ಥಿರಗತಿಯ ಬೆಳವಣಿಗೆಯನ್ನು, ಇನ್ನೂ ಮತ್ತೂ ಎತ್ತರಿಸಿದ ಆಶಯಗಳ ಕುರಿತು ಹೇಳುತ್ತವೆ.

ನಾಡಿನ ಗಣ್ಯರು, ಸಿನಿತಾರೆಯರು, ಮಂತ್ರಿ ಮಹೋದಯರುಗಳೆಲ್ಲ ಹಸನ್ಮುಖರಾಗಿ ಹಾಲು ಹಸುಳೆಗಳಿಗೆೆ ಜೀವರಕ್ಷಕ ಪೋಲಿಯೊ ಹನಿ ಹಾಕುತ್ತ ಸಂಚಲನ ಉಂಟುಮಾಡಿದ್ದು, 1994-95ರ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ. ಇದರ ಅಂತಿಮ ಫಲಶ್ರುತಿಯೆಂದರೆ, 2011ರ ವೇಳೆಗೆ ನಾವು ಪೋಲಿಯೊ ಮುಕ್ತ ದೇಶವಾಗಿದ್ದು. ತುಂಬಿ ಬಿರಿಯುವ ಜನಸಂಖ್ಯೆ ಇರುವಲ್ಲಿ ಈ ಬಗೆಯ ತಲುಪುವಿಕೆ ಅನೇಕ ಅಡೆತಡೆಗಳನ್ನು ನಿವಾರಿಸಿಕೊಂಡು ಮುಂದುವರಿಯಬೇಕಾಗುತ್ತದೆ. ಸಾವಿರಾರು ಆರೋಗ್ಯ ಕಾರ್ಯಕರ್ತರ ಮಿಲಿಟರಿ ಶಿಸ್ತಿನ ಮೇಲುಸ್ತುವಾರಿಯ ನಡುವೆಯೂ ಅನೇಕ ಜನಸಮುದಾಯಗಳು ಕೈಗೆ ಸಿಗದೆ ನುಸುಳಿ ಹೋಗುತ್ತವೆ: ಇಟ್ಟಿಗೆ ಗೂಡು, ನದಿ ತೀರ, ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತ ಮುಖ್ಯವಾಹಿನಿಯಿಂದ ಪ್ರತ್ಯೇಕಗೊಂಡಿರುವ ಸಂಸಾರಗಳು ಇಂತಹವು.

ನಗರ ಪ್ರದೇಶಗಳ ಸ್ಲಮ್‌ಗಳು, ಕಟ್ಟಡ ಕೆಲಸಗಾರರ ತಾತ್ಕಾಲಿಕ ಬಿಡಾರಗಳಲ್ಲಿ ಜನಿಸುವ ಮಕ್ಕಳನ್ನು ಲಸಿಕೆ ನೀಡಿಕೆ ಕಾರ್ಯಕ್ರಮದಡಿ ಕರೆತರುವುದೂ ಒಂದು ಸಾಹಸವೇ. ಇದು ಸಾಲದೆಂಬಂತೆ, ಅಜ್ಞಾನ, ನಿರಕ್ಷರತೆ, ದುರ್ಗಮ ಸಂಚಾರ ವ್ಯವಸ್ಥೆಗಳೂ ತಮ್ಮ ಕಾಣಿಕೆ ಸಲ್ಲಿಸುತ್ತವೆ. ಪ್ರತಿರೋಧಕ ಚುಚ್ಚುಮದ್ದು ನೀಡಿಕೆ ಯಾವ ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಯಶಸ್ವಿಯಾಗಿದೆ ಎಂದು ತಿಳಿಸುವ 2009ರ ‘ಕವರೇಜ್ ಇವಾಲ್ಯುಯೇಷನ್ ಸರ್ವೇ-ಸಿಇಎಸ್’ ಪ್ರಕಾರ ಗೋವಾ, ಸಿಕ್ಕಿಂ, ಪಂಜಾಬ್ ಹಾಗೂ ಕೇರಳ ರಾಜ್ಯಗಳಲ್ಲಿ ಶೇ.80ಕ್ಕಿಂತ ಅಧಿಕ ಪೂರ್ಣ ಲಸಿಕೆ ನೀಡಿಕೆ ನಡೆದಿದ್ದರೆ, ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಅದು ಶೇ.50ಕ್ಕಿಂತ ಕಡಿಮೆ! ಚುಚ್ಚುಮದ್ದು ಪಡೆದುಕೊಳ್ಳದ ದೇಶದ ಶೇ.52 ಮಕ್ಕಳು ಯುಪಿ ಹಾಗೂ ಬಿಹಾರಗಳಲ್ಲಿರುವುದೂ ಸರ್ವೇ ಬಯಲಾಗಿಸಿದ ಮುಖ್ಯ ಅಂಶ. (ಶೇ.65 ಪ್ರತಿರೋಧಕ ಲಸಿಕೆ ನೀಡಿಕೆ ಸದ್ಯ ಅಧಿಕೃತವಾಗಿ ಘೋಷಣೆಯಾಗಿರುವುದರಿಂದ ಈ ಅಂಕಿ ಅಂಶಗಳು ಕ್ರಮೇಣ ಸುಧಾರಿಸಿದವು ಎಂದುಕೊಳ್ಳಬೇಕು).

ಆದರೆ, ಇದೇ ವರ್ಷ, ಹಂದಿ ಜ್ವರ (ಎಚ್‌ಒನ್‌ಎನ್‌ಒನ್) ಸಾರ್ವತ್ರಿಕ ಪಿಡುಗಾದಾಗ, ಅತಿ ಶೀಘ್ರವಾಗಿ ಅಗತ್ಯ ಪ್ರಮಾಣದ ಲಸಿಕೆ ತಯಾರಿಸಿ, ಒದಗಿಸಿ ಭಾರತದ ವ್ಯಾಕ್ಸೀನ್ ಕೈಗಾರಿಕೆ ತನ್ನ ಸಾಮರ್ಥ್ಯವನ್ನು ವಿಶ್ವಕ್ಕೆ ಸಾಬೀತುಪಡಿಸಿದ್ದು ಖುಷಿಯ ವಿಚಾರ. ಪ್ರಸಕ್ತ ಝೀಕಾ, ರೋಟಾ ವೈರಸ್ ಮುಂತಾದವುಗಳಿಗೆ ನವೀನ ಬಗೆಯ ವ್ಯಾಕ್ಸೀನ್ ಅಭಿವೃದ್ಧಿಪಡಿಸುವತ್ತ ಕೈಗಾರಿಕೆ ಗಮನ ಹರಿಸಿರುವುದನ್ನು ಗ್ರಹಿಸಿರುವ ಭಾರತೀಯ ಕಂಪೆನಿಗಳು ಚುರುಕಾಗಿ ಆ ದಿಕ್ಕಿನಲ್ಲಿ ಕಾರ್ಯೋನ್ಮುಖವಾಗಿವೆ. ಇದರ ಜತೆಗೆ, ಚುಚ್ಚುಮದ್ದಿನ ಮೂಲಕ ನೀಡಬಹುದಾದ ಪೋಲಿಯೊ ಲಸಿಕೆ, ನ್ಯೂಮೋನಿಯ ಹಾಗೂ ಹ್ಯೂಮನ್ ಪ್ಯಾಪಿಲೋಮ ವೈರಸ್-ಎಚ್‌ಪಿವಿ (ಲೈಂಗಿಕ ರೋಗಕಾರಕ) ನಿರೋಧಕ ಲಸಿಕೆಗಳ ಉತ್ಪಾದನೆಗೆ ಸರಕಾರ ಆದೇಶಿಸಿದೆ.

ಹಸುಳೆಗಳಲ್ಲಿ ನಿರ್ಜಲೀಕರಣ (ಡಯೇರಿಯಾ) ಉಂಟುಮಾಡುವ ರೋಟಾ ವೈರಸ್ ನಿರೋಧಕ ಲಸಿಕೆ ಆವಿಷ್ಕಾರ 2017 ವರ್ಷದ ಸಾಧನೆ. ಡಿಫ್ತೀರಿಯಾ, ನಾಯಿಕೆಮ್ಮು, ಡೆಂಘೀ, ಎಚ್‌ಪಿವಿ ಹಾಗೂ ವಯಸ್ಕರಿಗೆ ನೀಡಬಹುದಾದ ಟೆಟನಸ್ (ಧನುರ್ವಾಯು) ವ್ಯಾಕ್ಸೀನ್‌ಗಳ ಉತ್ಪಾದನೆ ಸಾಲಿನಲ್ಲಿ ಇರುವ ಗುರಿಗಳು. ‘ಮೇಕ್ ಇನ್ ಇಂಡಿಯಾ’ ಅನ್ನು ಸದ್ದುಗದ್ದಲ ಇಲ್ಲದೆ ಪ್ರಚುರ ಪಡಿಸುವುದೆಂದರೆ ಇದಲ್ಲವೆ ಎನ್ನುತ್ತಾರೆ, ಒಳಗಿನ ಮಂದಿ. ಸದ್ಯ, ಸಾಂಪ್ರದಾಯಿಕ ಆರು ವಿಪಿಡಿ ಬೇನೆಗಳ ಜತೆ ಹೆಪಟೈಟಿಸ್-ಬಿ ಅನ್ನು ಸೇರಿಸಿಕೊಂಡಿದೆ, ನೂತನ ಯೋಜನೆ ‘ಇಂದ್ರಧನುಷ್’. ಮೂರ್ನಾಲ್ಕು ತಿಂಗಳ ಹಿಂದೆ ಹೆಪಾಟೈಟಿಸ್ ನಿವಾರಣೆ ಕಾರ್ಯಕ್ರಮದ ಆಗ್ನೇಯ ಏಷ್ಯಾ ರಾಯಭಾರಿಯಾಗಿ ವಿಶ್ವ ಆರೋಗ್ಯ ಸಂಸ್ಥೆ ಮೇರು ನಟ ಅಮಿತಾಬ್ ಬಚ್ಚನ್‌ರನ್ನು ಹೆಸರಿಸಿತು.

ಎಪ್ಪತ್ತು ದಾಟಿರುವಾಗಲೂ ನಾನಾ ಅವತಾರಗಳಲ್ಲಿ ಜನರನ್ನು ರಂಜಿಸುವ ಅಮಿತಾಬ್‌ರ ಪೋಲಿಯೋ ಪ್ರಚಾರದ ‘‘ದೋ ಬೂಂದ್ ಝಿಂದಗೀ ಕೀ’’ ಘಂಟಾರವ ಮಿಂಚಿನ ವೇಗದಲ್ಲಿ ಜನಪ್ರಿಯತೆ ಗಳಿಸಿಕೊಂಡಿತು. (ಅವರ ಅಣಕು ಮಾಡಿ ಹೊಟ್ಟೆ ಹೊರೆಯುವ ಸಾವಿರಾರು ಕಲಾವಿದರು, ‘‘ಪೊಲೀಸ್ ಸ್ಟೇಷನ್ ಹೈ, ಬಾಪ್ ಕಾ ಘರ್ ನಹೀ’’ ಮುಂತಾದ ಖಡಕ್ ಡೈಲಾಗ್‌ಗಳೊಂದಿಗೆ ದೋ ಬೂಂದ್ ಅನ್ನು ಸೇರಿಸಿಕೊಂಡಿರುವುದು ಸ್ವಾರಸ್ಯಕರ). ಇದು ಹೆಪಟೈಟಿಸ್ ವಿರುದ್ಧದ ಅವರ ಪ್ರಚಾರವನ್ನು ಪ್ರಭಾವಿಸಲಿದೆ. ಸ್ವತಃ ಬಚ್ಚನ್ ಸಾಬ್ ಆ ಜಡ್ಡಿನೊಂದಿಗೆ ಜೀವಿಸುತ್ತಿರುವುದು ರಾಯಭಾರತ್ವಕ್ಕೆ ಇನ್ನಷ್ಟು ಪುಷ್ಟಿ ನೀಡುವ ವಿಷಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)