varthabharthi


ಕರಾವಳಿ

ಮ್ಯಾಗ್ಸಸ್ಸೇ ಪ್ರಶಸ್ತಿ ವಿಜೇತ, ಸೆಲ್ಕೋ ಕಂಪನಿ ಸ್ಥಾಪಕ ಹರೀಶ್ ಹಂದೆ ಅಭಿಮತ

ಭಾರತಕ್ಕೆ ಬೇಕಿರುವುದು ಉದ್ಯಮಶೀಲತೆಗೆ ಪೂರಕವಾದ ಕೌಶಲ್ಯ ಅಭಿವೃದ್ಧಿ ನೀತಿ

ವಾರ್ತಾ ಭಾರತಿ : 22 Sep, 2017

ಮಂಗಳೂಸು, ಸೆ.22: ಭಾರತಕ್ಕೆ ಬೇಕಿರುವುದು ಉದ್ಯಮಶೀಲತೆ ಮತ್ತು ನಾಯಕತ್ವ ಸೃಷ್ಟಿಗೆ ಪೂರಕವಾದ ಕೌಶಲ್ಯಾಭಿವೃದ್ದಿ ನೀತಿಯೇ ಹೊರತು ಕಾರ್ಮಿಕರನ್ನು ಸೃಷ್ಟಿಸುವುದಲ್ಲ ಎಂದು ರಾಮನ್ ಮ್ಯಾಗ್ಸಸ್ಸೇ ಪ್ರಶಸ್ತಿ ವಿಜೇತ ಹಾಗೂ ಸೆಲ್ಕೋ ಸೋಲಾರ್ ಕಂಪನಿ ಸ್ಥಾಪಕ ಹರೀಶ್ ಹಂದೆ ಅಭಿಪ್ರಾಯಿಸಿದ್ದಾರೆ.

ಮಂಗಳೂರು ಪ್ರೆಸ್‌ಕ್ಲಬ್ ವತಿಯಿಂದ ಇಂದು ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಪ್ರಸ್ತುತ ಭಾರತದಲ್ಲಿರುವ ಕೌಶಲ್ಯ ಅಭಿವೃದ್ದಿ ನೀತಿ ಕೈಗಾರಿಕೆಗಳಿಗೆ ಕಾರ್ಮಿಕರನ್ನು ಸೃಷ್ಟಿಸುವುದಕ್ಕೆ ಮಾತ್ರ ಸೀಮಿತಗೊಂಡಿದೆ. ನಮಗೆ ಬೇಕಿರುವುದು ನಾಯಕತ್ವ ಸೃಷ್ಟಿಸುವ ಉದ್ಯಮಶೀಲತೆಯ ಮೂಲಕ ಬಡತನವನ್ನು ನಿರ್ಮೂಲನೆಗೆ ಪೂರಕವಾಗುವ ಕೌಶಲ್ಯ ಅಭಿವೃದ್ಧಿ. ಅದಕ್ಕೆ ಸಕಾರ ಒತ್ತು ನೀಡಬೇಕು ಎಂದರು.

ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ಆ ಪ್ರತಿಭೆಗಳನ್ನು ಇಂತಹ ಕೌಶಲ್ಯ ಅಭಿವೃದ್ದಿ ತರಬೇತಿಗಳ ಮೂಲಕ ವೆಲ್ಡರ್, ಪ್ಲಂಬರ್, ವೈಂಡರ್, ಫಿಟ್ಟರ್ ಕೆಲಸಗಳಿಗೆ ಸೀಮಿತಗೊಳಿಸಲಾಗುತ್ತಿದೆ. ದೇಶದಲ್ಲಿ ಬಡತನ ನಿರ್ಮೂಲನವಾಗಬೇಕಾದರೆ, ತಳ ಹೊಸ ಅನ್ವೇಷಣೆಗಳಿಗೆ ಒತ್ತು ನೀಡುವ ಉದ್ಯಮಶೀಲರನ್ನು ನಾವು ಹೆಚ್ಚಿನ ಸಂಖ್ಯೆಯಲ್ಲಿ ಸೃಷ್ಟಿಸುವ ಅಗತ್ಯವಿದೆ. ಈ ಸಂಶೋಧನಾತ್ಮಕ ಉದ್ಯಮಶೀಲತೆಯು ತಳ ಮಟ್ಟದಲ್ಲಿರುವ ಜನರ ಜೀವನ ಮಟ್ಟ ಸುಧಾರಣೆಗೆ ಪೂರಕವಾಗಿರಬೇಕು. ಕೃಷಿ, ಕೋಳಿಸಾಕಾಣೆ, ಹೈನುಗಾರಿಕೆ, ಹೊಲಿಗೆ ವೃತ್ತಿಗೆ ಸಂಬಂಧಿಸಿದ ಸುಧಾರಿತ ಉಪಕರಣಗಳ ಅವಿಷ್ಕಾರಗಳು ಹಾಗೂ ಸಂಶೋಧನೆಗಳು ಐಟಿಐಗಳ ಮೂಲಕ ದೊರೆಯಬೇಕು. ಆದರೆ ಪ್ರಸ್ತುತ ನಮ್ಮ ಐಐಟಿ, ಐಐಎಂ ಮೊದಲಾದ ಉನ್ನತ ಶಿಕ್ಷಣ ಸಂಸ್ಥೆಗಳ ಸಂಶೋಧನೆಗಳು, ಅವಿಷ್ಕಾರಗಳು ಕೇವಲ ಐಟಿ ಬಿಟಿಗಳನ್ನು ಬಲಪಡಿಸುವುದಕ್ಕೆ ಸೀಮಿತಗೊಳ್ಳುತ್ತಿದೆ ಎಂದು ಅವರು ಬೇಸರಿಸಿದರು.

ಕೃಷಿ, ಶಿಕ್ಷಣ ಕ್ಷೇತ್ರದಲ್ಲಿ ವಿನೂತನ ಅವಿಷ್ಕಾರಗಳಾಗಲಿ

ದೇಶದಲ್ಲಿ ಪ್ರತಿ ವರ್ಷ ಹೊಸ 50,000 ದಷ್ಟು ಇಂಜಿನಿಯರಿಂಗ್ ಪದವೀಧರರು ಹೊರಬರುತ್ತಾರೆ. ಆದರೆ ಅವರಲ್ಲಿ ಬಹುತೇಕರು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗಕ್ಕೆ ಸೀಮಿತಗೊಳ್ಳುತ್ತಾರೆಯೇ ಹೊರತು ಉದ್ಯಮಶೀಲರಾಗಿ ರೂಪುಪಡೆಯುವುದು, ಅದರಲ್ಲೂ ತಳ ಸಮುದಾಯಕ್ಕೆ ಒತ್ತು ನೀಡುವ ಉದ್ಯಮಶೀಲರಾಗಿ ಹೊರಹೊಮ್ಮುವುದನ್ನು ನಾವು ಕಾಣುತ್ತಿಲ್ಲ.

ಅದರಿಂದಾಗಿಯೇ ನಮ್ಮಲ್ಲಿನ ಹೈನುಗಾರಿಕೆಗೆ ಪೂರಕವಾದ ಮಜ್ಜಿಗೆ ಕಡೆಯುವ ಯಂತ್ರ, ಕೃಷಿ ಕ್ಷೇತ್ರಕ್ಕೆ ಪೂರಕವಾದ ಸಾಧನಗಳ ಅವಿಷ್ಕಾರದಲ್ಲಿ ಕಳೆದ 100 ವರ್ಷಗಳಿಂದ ಯಾವುದೇ ರೀತಿಯ ಗಣನೀಯ ಬೆಳವಣಿಗೆ ಕಂಡುಬಂದಿಲ್ಲ. ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ನಾವು ಸಾಕಷ್ಟು ಮುಂದುವರಿದಿದ್ದೇವೆ. ಆದರೆ ದೇಶದ ಶೇ. 60ರಷ್ಟು ಜನರ ಬದುಕಿಗೆ ಪೂರಕವಾದ ಕ್ಷೇತ್ರಗಳಲ್ಲಿ ವಿನೂತನ ಅವಿಷ್ಕಾರಗಳನ್ನು ನಾವು ಕಂಡಿಲ್ಲ. ಆ ದಿಸೆಯಲ್ಲಿ ನಮ್ಮ ಅಭಿವೃದ್ದಿ ಸಾಗಬೇಕಾಗಿದೆ.

ದೇಶದಲ್ಲಿ 30 ಕೋಟಿ ಜನರಿಗೆ ಇಂದಿಗೂ ವಿದ್ಯುತ್ ಸಂಪರ್ಕವೇ ಇಲ್ಲ. ಇನ್ನೂ 30 ಕೋಟಿ ಜನರಿಗೆ ಅಗತ್ಯಕ್ಕೆ ತಕ್ಕಷ್ಟು ವಿದ್ಯುತ್ ದೊರಕುತ್ತಿಲ್ಲ ಎಂಬುದು ವಾಸ್ತವ. ಅವರೆಲ್ಲರ ಆದಾಯದ ಮಟ್ಟ ತೀರಾ ಕೆಳಗೆ ಇದೆ. ಈ ಜನರ ಜೀವನದಲ್ಲಿ ಬದಲಾವಣೆಗಳನ್ನು ತರಬಲ್ಲ ಸಂಶೋಧನೆಗಳು ನಡೆಯಬೇಕಿದೆ ಎಂದು ಅವರು ಅಭಿಪ್ರಾಯಿಸಿದರು.

ಸಮಸ್ಯೆ ಪತ್ತೆ ಹಚ್ಚುವ ಜತೆಗೆ ಪರಿಹಾರ ಮಾರ್ಗೋಪಾಯಗಳೂ ಅಗತ್ಯ
ಬಡತನ ನಿರ್ಮೂಲನೆ ವಿಚಾರದಲ್ಲಿ ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಗುರುತರವಾದ ಹೊಣೆಗಾರಿಕೆ ಭಾರತದ ಮೇಲಿದೆ. ಜಗತ್ತೇ ಈ ವಿಚಾರದಲ್ಲಿ ಭಾರತದತ್ತ ದೃಷ್ಟಿ ನೆಟ್ಟಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಮುಂದಾಗಬೇಕು. ಯುವ ಪತ್ರಕರ್ತರು ಜನಸಾಮಾನ್ಯರ ಸಮಸ್ಯೆಗಳನ್ನು ಪತ್ತೆಹಚ್ಚಿ ಸಂಶೋಧನೆ ನಡೆಸಿ ಅವುಗಳನ್ನು ಯಾವ ರೀತಿಯಲ್ಲಿ ಬಗೆಹರಿಸಲು ಸಾಧ್ಯ ಎಂಬ ಸಂಶೋಧನಾತ್ಮಕ ಲೇಖನಗಳ ಮೂಲಕ ಉದ್ಯಮಶೀಲ ರನ್ನು ಸೆಳೆಯುವಂತಾಗಬೇಕು ಎಂದು ಅವರು ಯುವ ಪತ್ರಕರ್ತರಿಗೂ ಸಲಹೆ ನೀಡಿದರು.

ಬಡವರ- ರೈತರಿಗೆ ಸಬ್ಸಿಡಿ ಅಪರಾಧವೆಂಬ ಮನೋಭಾವ ತೊಲಗಲಿ

ಬಡವರು ಮತ್ತು ರೈತರಿಗೆ ಸಹಾಯಧನ ನೀಡುವುದನ್ನು ಅಪರಾಧ ಎಂಬಂತೆ ಬಿಂಬಿಸಲಾಗುತ್ತದೆ. ಆದರೆ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರದ ಬೃಹತ್ ಉದ್ದಿಮೆಗಳಿಗೆ ನೀಡುವ ಲಕ್ಷಾಂತರ ಕೋಟಿ ಮೊತ್ತದ ಸಹಾಯಧನ ಅಥವಾ ತೆರಿಗೆಯಲ್ಲಿನ ರಿಯಾಯಿತಿ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ಅವರು ಬೇಸರಿಸಿದರು.

ಸೆಲ್ಕೋ ಈಗ ಈಶಾನ್ಯ ರಾಜ್ಯಗಳು, ಜಾರ್ಖಂಡ್ ಮತ್ತು ಒಡಿಶಾ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ. ತಾಂಜೇನಿಯಾ ಮತ್ತು ಫಿಲಿಪ್ಪೀನ್ಸ್ ರಾಷ್ಟ್ರಗಳು ಕರ್ನಾಟಕದ ಮಾದರಿಯ ಸೌರಶಕ್ತಿ ಬಳಕೆ ಕಾರ್ಯಕ್ರಮ ಅನುಷ್ಠಾನಕ್ಕೆ ಆಹ್ವಾನ ನೀಡಿವೆ. ಸ್ಥಳೀಯರ ಮೂಲಕ ಈ ಕಾರ್ಯಕ್ರಮ ನಿರ್ವಹಿಸಲಾಗುವುದು. ಸೌರ ಚಾಲಿತ ಭತ್ತದಿಂದ ಅಕ್ಕಿ ಬೇರ್ಪಡಿಸುವ ಯಂತ್ರ, ಶೈತ್ಯಾಗಾರ ರಹಾಗೂ ಕೋಳಿ ಸಾಕಣೆ ಕೇಂದ್ರಗಳಿಗೆ ಬೇಕಾದ ಸಾಧನಗಳ ಆವಿಷ್ಕಾರ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

ಸೆಲ್ಕೋ ಸೋಲಾರ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೋಹನ್ ಹೆಗ್ಡೆ, ಉಪ ಪ್ರಧಾನ ವ್ಯವಸ್ಥಾಪಕ ಜಗದೀಶ್ ಪೈ ಉಪಸ್ಥಿತರಿದ್ದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಡಾ. ರೊನಾಲ್ಡ್ ಫೆರ್ನಾಂಡಿಸ್ ಸ್ವಾಗತಿಸಿದರು.  ಪ್ರಧಾನ ಕಾರ್ಯದರ್ಶಿ ಆತ್ಮಭೂಷಣ್ ವಂದಿಸಿದರು.

ಮನಸ್ಥಿತಿಯಲ್ಲಿ ಬದಲಾವಣೆಯಾಗಬೇಕಿದೆ
ಜಾತಿ ವ್ಯವಸ್ಥೆಯಿಂದ ನಲುಗಿರುವ ದೇಶದಲ್ಲಿ ಇಂಗ್ಲಿಷ್ ಮತ್ತು ಪದವಿಗಳ ಆಧಾರದಲ್ಲಿ ಹೊಸ ಜಾತಿಯೊಂದು ಸೃಷ್ಟಿಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇಂಗ್ಲಿಷ್ ಬಾರದವರು ಮತ್ತ್ತು ಶಿಕ್ಷಣ ಪಡೆಯದ ಜನರಿಗೆ ಯಾವ ಸೌಲಭ್ಯವೂ ಸಿಗುತ್ತಿಲ್ಲ. ಸಾವಿರಾರು ಕೋಟಿ ರೂಪಾಯಿ ವಂಚಿಸುವ ವಿಜಯ್ ಮಲ್ಯರಂತಹ ಉದ್ಯಮಿಗಳಿಗೆ ಸಾಲ ನೀಡಲು ಪೈಪೋಟಿ ನಡೆಸುವ ಬ್ಯಾಂಕ್‌ಗಳು, ರೈತರು, ಸಣ್ಣ ಕೈಗಾರಿಕೋದ್ಯಮಿಗಳು ಹೋದಾಗ ಅನುಮಾನದಿಂದ ನೋಡುವ ಮನಸ್ಥಿತಿಯಲ್ಲಿ ಬದಲಾವಣೆ ಆಗಬೇಕು ಎಂದು ಹರೀಶ್ ಹಂದೆ ಸ್ಪಷ್ಟಪಡಿಸಿದರು.

ಸೌರಶಕ್ತಿ ಉತ್ಪನ್ನಗಳಿಗೆ ಮೌಲ್ಯವರ್ಧಿತ ತೆರಿಗೆಯಿಂದ ವಿನಾಯಿತಿ ನೀಡಲಾಗಿತ್ತು. ಈಗ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರಲಾಗಿದೆ. ಇದರಿಂದ ಬಡವರಿಗೆ ತೊಂದರೆ ಆಗುತ್ತಿರುವುದರಿಂದ ಸೌರಶಕ್ತಿ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಹರೀಶ್ ಹಂದೆ ಈ ಸಂದರ್ಭ ಮನವಿ ಮಾಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)