varthabharthi


ಚಿತ್ರ ವಿಮರ್ಶೆ

ಚಿಂತನೆಗೆ ಹಚ್ಚುವ ನ್ಯೂಟನ್ ‘ಸಿದ್ಧಾಂತ’

ವಾರ್ತಾ ಭಾರತಿ : 24 Sep, 2017

ಛತ್ತೀಸ್‌ಗಡದ ನಕ್ಸಲ್‌ಪೀಡಿತ ದುರ್ಗಮ ಹಳ್ಳಿಯಲ್ಲಿ ಲೋಕಸಭಾ ಚುನಾವಣೆಗೆ ನಿರ್ವಹಣಾಧಿಕಾರಿಯಾಗಿ ನಿಯೋಜಿತನಾಗಿರುವ ನ್ಯೂಟನ್ ಕುಮಾರ್ (ರಾಜ್‌ಕುಮಾರ್) ಮತಗಟ್ಟೆಗೆ ಮತದಾರರ ಆಗಮನವನ್ನೇ ಚಾತಕಪಕ್ಷಿಯಂತೆ ಕಾಯುತ್ತಿರುತ್ತಾನೆ. ಮತಗಟ್ಟೆ ಏಜೆಂಟ್ ಲೋಕನಾಥ್ (ರಘುವೀರ್‌ಯಾದವ್) ಹಾಗೂ ಆದಿವಾಸಿ ಶಾಲಾ ಶಿಕ್ಷಕಿ ಮಾಲ್ಕೊ (ಅಂಜಲಿ ಪಾಟೀಲ್) ಸೇರಿದಂತೆ ಆತನ ಉಳಿದ ಸಹದ್ಯೋಗಿಗಳಿಗೆ ಮತದಾನಕ್ಕಿಂತ, ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆಂಬುದರ ಬಗ್ಗೆಯೇ ಬಗ್ಗೆ ಹೆಚ್ಚು ಚಿಂತಿಸುತ್ತಿರುತ್ತಾರೆ.

ಆದರೆ ಪ್ರಾಮಾಣಿಕ ಅಧಿಕಾರಿಯಾದ ನ್ಯೂಟನ್‌ನ ಕಣ್ಣುಗಳು ಮಾತ್ರ ಮತದಾರರ ಆಗಮನಕ್ಕಾಗಿ ಮತಗಟ್ಟೆಯ ಬಾಗಿಲಿನತ್ತ ದೃಷ್ಟಿ ನೆಟ್ಟಿರುತ್ತದೆ. ಮಸೂರ್‌ಕರ್ ಇಡೀ ಚಿತ್ರವನ್ನು ಯಾವುದೇ ಅವಸರವಿಲ್ಲದೆ ಸನ್ನಿವೇಶಗಳು ಹದವಾಗಿ ಸಾಗುವಂತೆ ಮಾಡುತ್ತಾರೆ. ಆ ಮೂಲಕ ಪ್ರೇಕ್ಷಕನನ್ನೂ ಚಿಂತನೆಗೆ ಹಚ್ಚಲು ಪ್ರಯತ್ನಿಸಿದ್ದಾರೆ. ನಕ್ಸಲರ ಬೆದರಿಕೆಯಿಂದ ಮತದಾನಕ್ಕೆ ಬರಲು ಹಿಂದೇಟು ಹಾಕುವ ಅಸಹಾಯಕ ಮತದಾರರು. ಇತ್ತ ನಕಲಿ ಮತದಾನ ಮಾಡಿಯಾದರೂ ಚುನಾವಣೆ ಯಶಸ್ವಿಯಾಯಿತೆಂದು ನಂಬಿಸಲು ಯತ್ನಿಸುವ ಆಡಳಿತ ವ್ಯವಸ್ಥೆ. ಇವುಗಳ ನಡುವೆ ಅಸಹಾಯಕನಾಗಿರುವ ಆದರ್ಶವಾದಿ ನ್ಯೂಟನ್....

ಸಂಕ್ಷಿಪ್ತವಾಗಿ ಹೇಳುವುದಾದರೆ ನ್ಯೂಟನ್ ಒಂದು ನೇರ ಹಾಗೂ ಸರಳವಾದ ಕಥಾವಸ್ತುವುಳ್ಳ ಚಿತ್ರ. ನಿರ್ದೇಶಕ ಅಮಿತ್ ಮಸೂರ್‌ಕರ್ ಅವರು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಹದವಾದ ಹಾಸ್ಯದ ಮಿಶ್ರಣದೊಂದಿಗೆ ಪರಿಣಾಮಕಾರಿಯಾಗಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಉದಾಹ ರಣೆಗೆ ಹೇಳಬೇಕೆಂದರೆ, ಒಂದು ಹೊತ್ತಿನ ಊಟಕ್ಕೂ ತತ್ವಾರವಿ ರುವ ದೇಶದ ಅತ್ಯಂತ ಹಿಂದುಳಿದ ಪ್ರದೇಶದ ಅಭಿವೃದ್ಧಿಗಾಗಿ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಹಂಚಬೇಕೆಂಬ ರಾಜಕಾರಣಿಯ ಸಲಹೆ ನೀಡುವ ಸನ್ನಿವೇಶ ರಾಜಕಾರಣಿಗಳ ಅಷಾಡಭೂತಿತನದತ್ತ ಬೆಟ್ಟು ಮಾಡಿತೋರಿಸುತ್ತದೆ.

ಹೌದು ನ್ಯೂಟನ್‌ನ ಕಥೆ ಬರೆದಿರುವ ಮಾಯಾಂಕ್ ತಿವಾರಿ ಹಾಗೂ ಮಾಸೂರ್‌ಕರ್ ಅವರು ಹೀಗೆ ರಾಜಕಾರಣಿಗಳನ್ನು ಮಾತ್ರವಲ್ಲ, ನಮ್ಮ ಆಡಳಿತ ಯಂತ್ರ, ರಾಜಕೀಯದ ಡೊಂಬರಾಟ ಹೀಗೆ ಎಲ್ಲವನ್ನೂ ತರಾಟೆಗೆ ತೆಗೆದುಕ್ಳೊುತ್ತಾರೆ. ಬಾಲ್ಯವಿವಾಹ, ವರದಕ್ಷಿಣೆ, ಲಂಚ, ಭ್ರಷ್ಟಾಚಾರ, ವರ್ಗೀಯ ವಿಭಜನೆಗಳು, ಜನಸಾಮಾನ್ಯರ ಇಂಗ್ಲಿಷ್ ವ್ಯಾಮೋಹ, ಹಿಂದಿ ಭಾಷೆಯ ಪಾರುಪತ್ಯ, ಏಕರೂಪದ ಸಂಸ್ಕೃತಿಯನ್ನು ಹೇರುವ ಪ್ರಯತ್ನ ಹೀಗೆ ಎಲ್ಲಾ ರಾಜಕೀಯ, ಸಾಮಾಜಿಕ ಜಾಢ್ಯಗಳನ್ನು ಅವರು ಪ್ರಶ್ನಿಸುತ್ತಾರೆ.

ಆದರೆ ಆಡಳಿತಯಂತ್ರ ಹಾಗೂ ಬಂಡುಕೋರರ ನಡುವಿನ ಸಂಘರ್ಷದಲ್ಲಿ ಸಿಕ್ಕಿಹಾಕಿಕೊಳ್ಳುವ ಬಡಪಾಯಿ ಬುಡಕಟ್ಟು ಜನರಿಗೆ ಅವರ ಮುಗ್ಧತೆಯೇ ಮುಳುವಾಗುತ್ತದೆ. ಬೀಡಿ ತಯಾರಿಕೆಗೆ ಬಳಸುವ ತೆಂಡು ಎಲೆಗಳಿಗೆ ಯೋಗ್ಯ ಬೆಲೆ ದೊರೆಯಬೇಕೆಂದು ಆಗ್ರಹಿಸುವ ಬುಡಕಟ್ಟು ಜನರು ರಾಜಕಾರಣಿಗಳ ಆಮಿಷ ಕ್ಕೊಳಗಾಗಿ ವೋಟ್ ಬ್ಯಾಂಕ್ ಆಗಿ ಪರಿವರ್ತನೆಗೊಳ್ಳುತ್ತಾರೆ. ಚಿತ್ರದುದ್ದಕ್ಕೂ ಮಸೂರ್‌ಕರ್ ಪ್ರಜಾಪ್ರಭುತ್ವದ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಜೊತೆಗೆ, ಅದರಲ್ಲಿರುವ ಲೋಪದೋಷಗಳಿಗೂ ಕನ್ನಡಿ ಹಿಡಿಯುತ್ತಾರೆ.

ನ್ಯೂಟನ್ ಚಿತ್ರ ಪ್ರೇಕ್ಷಕರನ್ನು ಛತ್ತೀಸ್‌ಗಡದ ದಟ್ಟ ಕಾಡುಗಳಿಗೆ ಕೊಂಡೊ ಯ್ಯುತ್ತದೆ. ಚಿತ್ರದ ನಾಯಕ ನ್ಯೂಟನ್ (ರಾಜ್‌ಕುಮಾರ್ ರಾವ್) ಓರ್ವ ಆದರ್ಶವಾದಿ ಯುವಕ. ಆದರೆ ಅಸಲಿ ಹೆಸರು ನೂತನ್ ಆಗಿದ್ದರೂ, ಆತ ತನ್ನನ್ನು ನ್ಯೂಟನ್ ಎಂದೇ ಹೆಮ್ಮೆಯಿಂದ ಕರೆಸಿಕೊಳ್ಳುತ್ತಿದ್ದ. ವಿಜ್ಞಾನಿ ನ್ಯೂಟನ್ ಗುರುತ್ವಾಕರ್ಷಣ ತತ್ವವನ್ನು ಪ್ರತಿಪಾದಿಸಿದರೆ, ಈ ನ್ಯೂಟನ್ ತನ್ನ ಜೀವನದ ಸಿದ್ಧಾಂತಗಳ ಬಗ್ಗೆ ಅಚಲ ನಂಬಿಕೆಯಿಟ್ಟವ.

ಜೀವನಪೂರ್ತಿ ಪ್ರಾಮಾಣಿಕ ಹಾಗೂ ನಿಸ್ವಾರ್ಥವಾಗಿ ಬದುಕಬೇಕೆಂಬ ಆಶಯ ಆತನದು. ಛತ್ತೀಸ್‌ಗಡದ ಆದಿವಾಸಿ ಹಳ್ಳಿಯೊಂದರಲ್ಲಿ ಆತನನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸ ಲಾಗಿರುತ್ತದೆ. ಅಲ್ಲಿನ ಮುಗ್ಧ ಮತದಾರರು ಒಂದೆಡೆ ರಾಜಕಾರಣಿಗಳ ದಾಳಕ್ಕೆ ಸಿಲುಕಿದರೆ, ಇನ್ನೊಂದೆಡೆ ನಕ್ಸಲೀಯರ ಬೆದರಿಕೆಯಿಂದ ತತ್ತರಿಸುತ್ತಿರುತ್ತಾರೆ.

ಭದ್ರತಾ ವ್ಯವಸ್ಥೆಗೆ ನಿಯೋಜಿತನಾಗಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಅಧಿಕಾರಿ ಆತ್ಮಾ ಸಿಂಗ್ (ಪಂಕಜ್ ತ್ರಿಪಾಠಿ), ಮತದಾರರಿಂದ ಮತದಾನ ಮಾಡಿಸಿ, ಬಂಡುಕೋರರಿಂದ ತೊಂದರೆಗೀಡಾಗುವ ಬದಲು ಸುಮ್ಮನೆ ನಕಲಿ ಮತದಾನ ಮಾಡಿ, ಚುನಾವಣಾ ಪ್ರಕ್ರಿಯೆಯನ್ನು ‘ಯಶಸ್ವಿ’ಗೊಳಿಸುವಂತೆ ನ್ಯೂಟನ್‌ಗೆ ಸಲಹೆ ನೀಡುತ್ತಾನೆ. ಮಣಿಪುರ ಹಾಗೂ ಕಾಶ್ಮೀರದಲ್ಲಿ ತೀವ್ರವಾದಿಗಳ ಜೊತೆ ಹಲವು ಕಾಳಗಗಳನ್ನು ಕಂಡಿದ್ದ ಆತ್ಮಾಸಿಂಗ್ ಪರಿಸ್ಥಿತಿಯ ಬಗ್ಗೆ ವ್ಯಾವಹಾರಿಕ ದೃಷ್ಟಿಕೋನವನ್ನು ಹೊಂದಿರುತ್ತಾನೆ. ಆತನಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ರಕ್ಷಣೆಗಿಂತ ತನ್ನ ಸಿಬ್ಬಂದಿಯ ಸುರಕ್ಷತೆಯೇ ಹೆಚ್ಚು ಮುಖ್ಯವಾಗಿರುತ್ತದೆ.

ನಕ್ಸಲರ ಭೀತಿಯಿಂದ ಮತದಾ ರರ್ಯಾರೂ ಮತಗಟ್ಟೆಯ ಬಳಿ ಸುಳಿಯದೆ ಇದ್ದರೂ ನ್ಯೂಟನ್ ಮತಗಟ್ಟೆಯನ್ನು ಮುಚ್ಚಲು ಒಪ್ಪುವುದಿಲ್ಲ. ಮತಗಟ್ಟೆಗೆ ಬರಲು ಒಪ್ಪದ ಮತದಾರರಿಗೆ ಅವರ ಹಕ್ಕು ಚಲಾಯಿಸುವಂತೆ ಕಳಕಳಿಯ ಉಪನ್ಯಾಸ ನೀಡುತ್ತಾನೆ. ಅತ್ತದರಿ, ಇತ್ತ ಪುಲಿ ಎಂಬಂತೆ ಇಂತಹ ತ್ರಿಶಂಕು ಪರಿಸ್ಥಿತಿಯಲ್ಲಿ ನ್ಯೂಟನ್ ಹೇಗೆ ತಾನೇ ನಿಷ್ಪಕ್ಷಪಾತ ಮತದಾನ ನಡೆಯುವಂತೆ ಮಾಡಲು ಸಾಧ್ಯ?. ಆತ ತನ್ನ ಪ್ರಯತ್ನದಲ್ಲಿ ಸಫಲನಾಗುವನೇ ಎಂಬುದನ್ನು ತಿಳಿಯಬೇಕಾದರೆ ತಪ್ಪದೆ ಚಿತ್ರವನ್ನು ಬೆಳ್ಳಿಪರದೆಯಲ್ಲಿ ನೋಡಿ. ಬುಲೆಟ್‌ಟ್ರೈನ್, ಸ್ಕೈವಾಕ್ ಹಾಗೂ ಮಾಲ್‌ಗಳ ಕಲ್ಪಿಸಲೂ ಆಗದಂತಹ ದುರ್ಗಮವಾದ ಕಾಡುಗಳ ಮಧ್ಯದಲ್ಲಿರುವ ಮೂಲಭೂತಸೌಕರ್ಯಗಳಿಂದ ವಂಚಿತವಾಗಿರುವ ಹಳ್ಳಿಗಳಲ್ಲಿ ನಮ್ಮ ಪ್ರಜಾಪ್ರಭುತ್ವದ ದಯನೀಯ ಸ್ಥಿತಿಯನ್ನು ಕಂಡಾಗ ಮನಸ್ಸು ಮಮ್ಮಲ ಮರುಗುತ್ತದೆ . ಪ್ರಜಾಪ್ರಭುತ್ವದ ಹೆಸರಿನಲ್ಲಿ ಆದಿವಾಸಿಗಳು ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕೈಯಲ್ಲಿ ಆಟದ ಗೊಂಬೆಗಳಾಗಿಬಿಡುತ್ತಾರೆ. ನಮ್ಮ ಆಡಳಿತ ವ್ಯವಸ್ಥೆಯು ಇಂತಹ ಹಿಂದುಳಿದ ಪ್ರದೇಶಗಳನ್ನು ಯಾವ ರೀತಿಯಾಗಿ ನಡೆಸಿಕೊಳ್ಳುತ್ತದೆಯೆಂಬುದರ ಬಗ್ಗೆ ವಾಸ್ತವ ಸ್ಥಿತಿಯನ್ನು ಅರಿಯಬೇಕಾದರೆ ನ್ಯೂಟನ್ ಚಿತ್ರವನ್ನು ನೋಡಲೇಬೇಕು.

ಚಿತ್ರದ ಪ್ರತಿಯೊಂದು ಫ್ರೇಮ್‌ನಲ್ಲಿಯೂ ನಿರ್ದೇಶಕರ ಶ್ರಮ ಎದ್ದುಕಾಣುತ್ತದೆ. ನ್ಯೂಟನ್ ಪಾತ್ರದಲ್ಲಿ ರಾಜ್‌ಕುಮಾರ್ ರಾವ್ ಸಂಪೂರ್ಣವಾಗಿ ಪರಕಾಯ ಪ್ರವೇಶ ಮಾಡಿದ್ದಾರೆ.ಅವರ ಅಭಿನಯದಲ್ಲಿ ಪರಿಪಕ್ವತೆ ಎದ್ದುಕಾಣುತ್ತದೆ. ಬರೇಲಿ ಕಿ ಬರ್ಫಿ ಚಿತ್ರದ ಬಳಿಕ ರಾಜ್‌ಕುಮಾರ್ ರಾವ್ ಅದ್ಭುತವಾದ ಅಭಿನಯ ನೀಡಿದ್ದಾರೆ. ಅವರಿಗೆ ಸವ್ವಾಸೇರೆಂಬಂತೆ ಪಂಕಜ್ ತ್ರಿಪಾಠಿ ಕೂಡಾ ಆತ್ಮಾಸಿಂಗ್ ಪಾತ್ರದಲ್ಲಿ ಸಮರ್ಥ ಅಭಿನಯ ನೀಡಿದ್ದಾರೆ. ಈ ಇಬ್ಬರು ಪ್ರತಿಭಾವಂತ ನಟರ ಅಭಿನಯ ಜುಗಲ್‌ಬಂದಿ, ನಿಜಕ್ಕೂ ಪ್ರೇಕ್ಷಕರ ಕಣ್ಣಿಗೆ ಹಬ್ಬ. ರಘುವೀರ್ ಯಾದವ್ ಹಾಸ್ಯ ಮುಖದಲ್ಲಿ ನಗು ಮೂಡಿಸಿದರೂ, ಅದರಲ್ಲಿನ ಕಹಿಸತ್ಯವು ಮನಸ್ಸಿಗೆ ನಾಟುತ್ತದೆ. ಸ್ಥಳೀಯ ಪ್ರತಿನಿಧಿಯಾಗಿ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಆದಿವಾಸಿ ಶಿಕ್ಷಕಿ ಮಾಲ್ಕೊ ಪಾತ್ರದಲ್ಲಿ ಅಂಜಲಿ ಪಾಟೀಲ್ ಲವಲವಿಕೆಯ ಅಭಿನಯ ನೀಡಿದ್ದಾರೆ.

ಚುನಾವಣಾಧಿಕಾರಿಯಾಗಿ ಮುಕೇಶ್ ಪ್ರಜಾಪತಿಗೆ ಅಭಿನಯಕ್ಕೆ ಹೆಚ್ಚು ಅವಕಾಶಗಳಿಲ್ಲದಿದ್ದರೂ, ಇದ್ದುದರಲ್ಲಿ ಚೊಕ್ಕವಾಗಿ ನಟಿಸಿದ್ದಾರೆ. ಒಟ್ಟಾರೆ ಇಡೀ ಚಿತ್ರದಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಎಲ್ಲರೂ ಪ್ರಜಾಪ್ರಭುತ್ವವನ್ನು ತನಗಿಷ್ಟ ಬಂದಂತೆ ಆಡಿಸುತ್ತಾರೆ. ಪ್ರಾಮಾಣಿಕ ಅಧಿಕಾರಿ ನ್ಯೂಟನ್ ಅದನ್ನು ಅಸಹಾಯಕನಾಗಿ ವೀಕ್ಷಿಸುತ್ತಾನೆ. ಸ್ವಪ್ನಿಲ್ ಸೋನಾವನೆ, ಬೆನೆಡಿಕ್ಟ್ ಟೇಲರ್ ಅವರ ಸಂಗೀತ ಹಿತವಾಗಿದ್ದು, ಚಿತ್ರದ ಓಟಕ್ಕೆ ಬೆನ್ನೆಲುಬಾಗಿದೆ. ಛಾಯಾಗ್ರಹಕ ಸ್ವಪ್ನಿಲ್ ಸೋನಾವನೆ ಆದಿವಾಸಿ ಪ್ರದೇಶಗಳನ್ನು ಕಣ್ಣಿಗೆ ಕಟ್ಟುವಂತೆ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

ಭಾರತೀಯ ಚಿತ್ರಗಳಲ್ಲಿ ವಿಡಂಬನಾತ್ಮಕ ಕಾಮಿಡಿಗಳು ಪರಿಣಾಮಕಾರಿ ಯಾಗಿ ಮೂಡಿಬರುವುದು ತೀರಾ ಅಪರೂಪ. ಆದರೆ ನ್ಯೂಟನ್ ಈ ಪ್ರಯತ್ನದಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾನೆ.

ಖಂಡಿತವಾಗಿಯೂ, ಆಸ್ಕರ್ ಪ್ರಶಸ್ತಿಗೆ ಭಾರತದ ಚಿತ್ರವಾಗಿ ಸ್ಪರ್ಧಿಸಲಿರುವ ನ್ಯೂಟನ್‌ಗೆ ಈ ಪ್ರತಿಷ್ಠಿತ ಪ್ರಶಸ್ತಿ ಒಲಿದು ಬಂದರೂ ಅಚ್ಚರಿಯಿಲ್ಲವೆಂಬುದನ್ನು ಚಿತ್ರ ನೋಡಿದ ಯಾರೂ ಕೂಡಾ ಒಪ್ಪಿಕೊಳ್ಳುತ್ತಾರೆ.

ಒಟ್ಟಿನಲ್ಲಿ ಈ ವರ್ಷ ತೆರೆಕಂಡ ಅತ್ಯುತ್ತಮ ಭಾರತೀಯ ಚಿತ್ರಗಳ ಸಾಲಿಗೆ ನ್ಯೂಟನ್ ಕೂಡಾ ಒಂದೆಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)