varthabharthi


ಭೀಮ ಚಿಂತನೆ

ಡಾ. ಬಿ.ಆರ್.ಅಂಬೇಡ್ಕರ್ ಅವರ ಆಯ್ದ ಭಾಷಣ-ಬರಹಗಳು

ದೇಶದ ಕಾರ್ಯಭಾರ ಒಂದೇ ಜಾತಿಯ ಕೈಯಲ್ಲೇಕೆ?

ವಾರ್ತಾ ಭಾರತಿ : 3 Nov, 2017

ಕಂದಾಯ ಖಾತೆಯಲ್ಲಿ ಡೆಪ್ಯುಟಿ ಕಲೆಕ್ಟರ್‌ಗಳ ಜಾಗಗಳನ್ನು ಭರ್ತಿ ಮಾಡಲು ನಿರ್ಧರಿಸಿ ಉಮೇದುವಾರರು ಅರ್ಜಿ ಕಳಿಸಬೇಕೆ ನ್ನುವ ಒಂದು ಜಾಹೀರಾತು ಸರಕಾರಿ ಗೆಝೆಟ್‌ನಲ್ಲಿ ಕೊಡಲಾಗಿತ್ತು. ವಯಸ್ಸು ಹಾಗೂ ಇತರ ವಿಷಯಗಳ ಜೊತೆಗೆ ಉಮೇದುವಾರನು ಮುಂಬೈ ಯುನಿವರ್ಸಿಟಿಯಿಂದ ಬಿ.ಎ.ಪರೀಕ್ಷೆ ಉತ್ತೀರ್ಣನಾಗಿರಬೇಕು ಅನ್ನುವ ಒಳ್ಳೆಯ ನಿಯಮ. ಈ ಮೂರೂ ಜಾಗಗಳನ್ನು ಯಾವ ಜಾತಿಯ ಅರ್ಜಿದಾರರಿಗಾಗಿ ಕಾಯ್ದಿಡಲಾಗುವುದು ಅನ್ನುವ ಬಗ್ಗೆ ಎಲ್ಲರಿಗೂ ಕುತೂಹಲವಿತ್ತು. ಒಂದೋ ಇಂತಹ ದೊಡ್ಡ ಹುದ್ದೆಯ ಜಾಗಗಳನ್ನು ಹಂಚುವಾಗ ದಲಿತರಿಗೆ ಇದರ ಬಗ್ಗೆ ಯಾವುದೇ ಮಾಹಿತಿಯಿರುವುದಿಲ್ಲ ಹಾಗೂ ಅವರಲ್ಲಿ ಇಂತಹ ದೊಡ್ಡ ಹುದ್ದೆಗಾಗಿ ಸಮರ್ಥ ಮನುಷ್ಯನೇ ಇರಲಿಲ್ಲ.

ಆದ್ದರಿಂದ ಅವರಾದರೂ ಈ ಜಾಗದ ಹಂಚಿಕೆಯ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬೇಕು? ಆದರೆ ಈ ಪ್ರಸಂಗದಲ್ಲಿ ವಸ್ತುಸ್ಥಿತಿ ಸ್ವಲ್ಪ ಬೇರೆಯಿದೆ. ಹಾಗಾಗಿ ದಲಿತರಿಗೆ ಮೂರರಲ್ಲಿ ಒಂದು ಜಾಗವಾದರೂ ತಮ್ಮ ಪಾಲಿಗೆ ಬರಬಹುದು ಅನ್ನುವ ಆಸೆಯಿತ್ತು. ಏಕೆಂದರೆ ಈ ಜಾಗಕ್ಕೆ ಎಂ.ಕೆ.ಜಾಧವ್ ಅನ್ನುವವರು ಅರ್ಜಿ ಹಾಕಿದ್ದಾರೆ. ಈತ ದಲಿತ ಜಾತಿಯ ತರುಣನಾಗಿದ್ದು ಮುಂಬೈ ವಿಶ್ವವಿದ್ಯಾನಿಲಯದಿಂದ ಬಿ.ಎ. ಆನರ್ಸ್ ಕೋರ್ಸನ್ನು ಮುಗಿಸಿದ್ದಾನೆ. ವಯಸ್ಸು ಹಾಗೂ ಇತರ ನಿಯಮಗಳಲ್ಲಿ ಆತನಲ್ಲಿ ಯಾವುದೇ ಕೊರತೆಯಿಲ್ಲ ಹಾಗಾಗಿ ಇವನಿಗೂ ಒಂದು ಜಾಗ ಸಿಗಬಹುದು ಅನ್ನುವ ಆಸೆ ಸರಿಯಾದದ್ದೆ. ಆದರೆ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಮೂರು ಜಾಗಗಳ ಪೈಕಿ ಎರಡನ್ನು ಮರಾಠರಿಗೆ, ಒಂದನ್ನು ಮುಸಲ್ಮಾನರಿಗೆ ಕೊಡಲಾಗಿದೆ ಎಂದು ಸರಕಾರಿ ಗೆಝೆಟ್‌ನಲ್ಲಿ ಪ್ರಕಟಿಸಲಾಯಿತು.

 ಈ ನಿರಾಶಾಜನಕ ವಾರ್ತೆಯನ್ನು ಓದಿ ಯಾವುದೇ ದಲಿತನಿಗೆ ದುಃಖ ಆಶ್ಚರ್ಯಗಳೆರಡೂ ಆಗದಿದ್ದೀತೆ? ಕೆಳವರ್ಗದ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಹಳ್ಳಿಗಾಡಿನ ದಲಿತರನ್ನು ಹೇಗೆ ಗೋಳಾಡಿಸು ತ್ತಾರೆ ಅನ್ನುವ ಕಲ್ಪನೆ ವರಿಷ್ಠ ಅಧಿಕಾರಿಗಳಿಗೆ ಹಾಗೂ ಮೇಲ್ಜಾತಿಯ ಜನರಿಗಿಲ್ಲ. ಆದರೆ ನಾವು ಈ ಗೋಳಾಟವನ್ನು ಕಾಲಕಾಲಕ್ಕೆ ವರಿಷ್ಠ ಅಧಿಕಾರಿಗಳಿಗೆ ತಿಳಿಸಿದ್ದೇವಲ್ಲದೆ ಈ ಗೋಳಾಟದಿಂದ ದಲಿತರನ್ನು ಕಾಪಾಡಲು ಅಧಿಕಾರ ವರ್ಗದಲ್ಲಿ ಅವರು ಪ್ರವೇಶಿಸುವುದು ಎಷ್ಟು ಅಗತ್ಯವಾಗಿದೆ ಅನ್ನುವುದರ ಬಗ್ಗೆ ಅವರಿಗೆ ಅರಿವು ಮಾಡಿಕೊಟ್ಟಿದ್ದೇವೆ.

ಸರಕಾರಿ ಅಧಿಕಾರಿಗಳು ಎಲ್ಲ ರೀತಿಯಲ್ಲೂ ಸಮರ್ಥರಾಗಿರಬೇಕು ಅನ್ನುವುದನ್ನು ನಾವು ಒಪ್ಪುತ್ತೇವೆ, ಆದರೆ ಅವರು ಕೇವಲ ಸಮರ್ಥರಾಗಿದ್ದರೆ ಸಾಲದು. ನಿಷ್ಪಕ್ಷಪಾತಿಗಳಾಗಿಯೂ ಇರಬೇಕು ಅನ್ನುವುದು ನಮ್ಮ ಅನಿಸಿಕೆ. ಒಬ್ಬ ಅಧಿಕಾರಿ ಕೇವಲ ಸಮರ್ಥನಾಗಿದ್ದು ಪಕ್ಷಪಾತಿಯಾಗಿದ್ದರೆ ಆತನಿಂದ ಜನಕಲ್ಯಾಣದ ಕಾರ್ಯ ಹೇಗೆ ಸಾಧ್ಯ? ಜಾತಿಭೇದದಿಂದಾಗಿ ತಮ್ಮ ಜಾತಿಗೆ ಬೆಲೆ ಕೊಡುವ ಆಯಾ ಜಾತಿಯ ಅಧಿಕಾರಿಗಳು ಒಂದೇ ಜಾತಿಯವರಾಗಿದ್ದರೆ ಧೈರ್ಯವಾಗಿ ಬೇರೊಬ್ಬ ಜಾತಿಯವರನ್ನು ಕೀಳಾಗಿ ಕಂಡು ತಮ್ಮ ಜಾತಿಯ ಒಳ್ಳೆಯದನ್ನೇ ಬಯಸುತ್ತಾರೆ. ಹಿಗಾಗುವುದು ಎಷ್ಟು ಸ್ವಾಭಾವಿಕವೆಂದರೆ ಇದಕ್ಕೆ ಯಾವುದೇ ಸಾಕ್ಷಿಯ ಆಧಾರ ಬೇಕಿಲ್ಲ. ಆದರೆ ಸರಕಾರಿ ಕೆಲಸ ಜವಾಬ್ದಾರಿಯ ಕೆಲಸ ಅನ್ನುವುದನ್ನು ಕೆಲವು ಸ್ವಾರ್ಥಿ ಜನ ಮರೆತುಹೋಗುತ್ತಾರೆ.

ರಾಷ್ಟ್ರದ ದೃಷ್ಟಿಯಿಂದ ದೇಶದ ಕಾರ್ಯಭಾರ ಒಂದೇ ಜಾತಿಯ ಕೈಯಲ್ಲಿರುವುದು ಒಳ್ಳೆಯದಲ್ಲ ಅನ್ನುವುದು ನಮ್ಮ ಅನಿಸಿಕೆ. ಅದು ಬ್ರಾಹ್ಮಣರೇ ಆಗಿರಲಿ, ಮರಾಠಾಗಳೇ ಆಗಿರಲಿ ಅಥವಾ ಮುಸಲ್ಮಾನರೇ ಆಗಿರಲಿ ಸರಕಾರ ನಿಷ್ಪಕ್ಷಪಾತದ್ದಾಗಿರಬೇಕು ಅನ್ನುವುದಿದ್ದರೆ ಸರಕಾರಿ ಕೆಲಸದಲ್ಲಿ ಎಲ್ಲ ಜಾತಿಯ ಜನರಿರಬೇಕು ಅನ್ನುವುದೊಂದೇ ಉಪಾಯ. ಹಾಗಾದರೆ ಮಾತ್ರ ಒಬ್ಬರಿಗೊಬ್ಬರ ಸಹಾಯ ಸಿಕ್ಕಿ ಯಾವ ಅಧಿಕಾರಿಯೂ ಪಕ್ಷಪಾತ ಮಾಡುವ ಧೈರ್ಯ ತೋರಲಾರ. ಇದೇ ದೃಷ್ಟಿಯಿಂದ ರಾ.ಜಾಧವ್ ಅವರ ಆಯ್ಕೆ ಸರಕಾರಿ ಕಚೇರಿಯಲ್ಲಾಗಬೇಕಾದ್ದು ಅಗತ್ಯವಾಗಿದ್ದಾಗ್ಯೂ ಹಾಗಾಗದಿದ್ದುದು ಸಾರ್ವಜನಿಕ ಹಿತದೃಷ್ಟಿಯಿಂದ ಒಳ್ಳೆಯದಾಗಲಿಲ್ಲ ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು. ಕೇವಲ ದಲಿತರ ದೃಷ್ಟಿಯಿಂದ ನೋಡಿದರೆ ಆದದ್ದು ಬಹಳ ಕೆಟ್ಟದ್ದೇ ಆಯಿತು ಅನ್ನಬಹುದು.

ಹಿಂದುಳಿದ ಜನಾಂಗಕ್ಕೆ ವಿದ್ಯೆ ಸಿಗುವುದಿಲ್ಲ ಎಂದು ಯಾರಾದರೂ ಗೋಳಾಡಿದರೆ ಏನೇನೋ ಕಾರಣಗಳನ್ನು ಹೇಳಿ ತಮ್ಮ ಮೈಮೇಲೆ ಬರುವ ಆರೋಪವನ್ನು ಝಾಡಿಸುವ ಅಭ್ಯಾಸವಿರುವ ಸರಕಾರ ದೊಡ್ಡದೊಡ್ಡ ಜನ ವಿದ್ಯೆ ಪಡೆಯುವಂತೆ ಹಿಂದುಳಿದ ಜನರೂ ಪಡೆಯಲಿ ಅನ್ನುವ ಒಣ ಉಪದೇಶ ಕೊಡುತ್ತದೆ. ಹಿಂದುಳಿದ ಜನರಿಗೆ ಸವಲತ್ತುಗಳನ್ನು ಕೊಡಿ ಎಂದೇನಾದರೂ ವಾದವಿವಾದವಾದರೆ ಶಿಕ್ಷಣದ ಬಾಗಿಲು ಎಲ್ಲರಿಗೂ ತೆರೆದಿದೆ. ಕಲಿಯಲು ಯಾವುದೇ ಅಡೆತಡೆಗಳಿಲ್ಲ ಎಲ್ಲರೂ ಕಲಿಯುವ ಹಾಗೆ ನೀವೂ ಕಲಿಯಿರಿ ಅನ್ನುತ್ತಾರೆ. ಆದರೆ ಇಂತಹ ಯುಕ್ತಿವಾದ ಮಾಡುವ ಸರಕಾರ ಉಚ್ಚಶಿಕ್ಷಣ ಪಡೆಯುವ ಜನ ಜ್ಞಾನಾರ್ಜನೆಗಾಗಿ ಕಲಿಯುತ್ತಿಲ್ಲ ಅನ್ನುವುದು ಮರೆಯುತ್ತಿದೆ.

ಹಾಗಿದ್ದಿದ್ದರೆ ಬ್ರಾಹ್ಮಣರ ಮನೆಯ ಹೆಂಗಸರ ಕತ್ತಲ್ಲಿ ಚಿನ್ನದ ಸರದ ಜಾಗದಲ್ಲಿ ದೊಡ್ಡ ದೊಡ್ಡ ಪುಸ್ತಕಗಳ ಸರಮಾಲೆಯೇ ಇರುತ್ತಿತ್ತು. ಆದರೆ ಬ್ರಾಹ್ಮಣರ ಮನೆಯಲ್ಲಿ ಇಲ್ಲದಿರುವ ವಸ್ತು ಯಾವುದು ಎಂದೇನಾದರೂ ನಮ್ಮನ್ನು ಕೇಳಿದರೆ ಅದು ಪುಸ್ತಕ ಎಂದು ನಾನು ಧೈರ್ಯವಾಗಿ ಹೇಳಬಲ್ಲೆ. ಇದರಿಂದ ಕಲಿಯುವವರು ವಿದ್ಯೆಯೆಂದರೆ ವ್ಯವಸಾಯ, ವ್ಯಾಪಾರ ಅಂದುಕೊಂಡೇ ಕಲಿಯುತ್ತಿದ್ದಾರೆ ಅನ್ನುವುದು ತಿಳಿಯುತ್ತದೆ. ವಿದ್ಯೆಯಿಂದ ಪಡೆಯಬಹುದಾದ ವ್ಯಾಪಾರ ಅನ್ನುವುದೇ ಅವರು ಕಲಿಯುವ ಮುಖ್ಯ ಉದ್ದೇಶ. ವಿದ್ಯೆಯಿಂದ ವ್ಯಾಪಾರ ಸಿಗದೇ ಹೋದಲ್ಲಿ ಕೆಲವೇ ಕೆಲವು ಜನ ಮಾತ್ರ ಉಚ್ಚಶಿಕ್ಷಣದಂತಹ ಮಾರ್ಗ ಅವಲಂಬಿಸಬಹುದು ಅನ್ನುವುದರಲ್ಲಿ ಅನುಮಾನವಿಲ್ಲ.

 ದಲಿತರಲ್ಲಿ ಶಿಕ್ಷಣದ ಮಹತ್ವವನ್ನು ಸಾರುವುದಿದ್ದರೆ ಅವರಲ್ಲಿರುವ ಪದವೀಧರರಿಗೆ ದೊಡ್ಡ ಹುದ್ದೆಯ ಕೆಲಸಗಳನ್ನು ಕೊಡಮಾಡಬೇಕು. ಈ ದಾರಿ ಏನಾದರೂ ಮೊದಲಿನಂತೆ ಮುಚ್ಚಿದ್ದೇ ಇದ್ದರೆ ಕಲಿತು ಮಾಡುವುದಾದರೂ ಏನು ಅನ್ನುವ ಯೋಚನೆ ಕಾಡಿ ಉಚ್ಚಶಿಕ್ಷಣ ಪಡೆಯಲು ಯಾರೂ ಮುಂದೆ ಬರಲಾರರು. ಇಂದು ತಮ್ಮ ದಾರುಣ ಪರಿಸ್ಥಿತಿಯಲ್ಲೂ ಕಾಲೇಜು ಶಿಕ್ಷಣ ಪಡೆಯುತ್ತಿರುವ ದಲಿತ ತರುಣರಿಗೆ ವಿದ್ಯೆಯಿಂದ ಕೆಲಸವೊಂದು ಸಿಕ್ಕಿ ತಮ್ಮ ಬದುಕಿಗೊಂದು ದಾರಿ ಕಂಡೀತು ಅನ್ನುವ ಆಸೆ ಬಿಟ್ಟರೆ ಬೇರೆ ಯಾವುದೇ ಒಳ್ಳೆಯ ಕಾರಣ ಸಿಗಲಾರದು. ಜಾಧವ್ ಅವರಿಗೆ ಈ ಘಟನೆಯಿಂದ ಸಾಕಷ್ಟು ವೈಯಕ್ತಿಕ ನಷ್ಟವಾಗಿದೆ. ಇದೆಲ್ಲ ಇಷ್ಟಕ್ಕೇ ಮುಗಿದರೂ ಸಾಕು. ಆದರೆ ಜಾಧವ್ ಅವರ ಮಾರ್ಗದಲ್ಲೇ ನಡೆಯುತ್ತಿರುವ ದಲಿತ ವಿದ್ಯಾರ್ಥಿಗಳು ನಿರಾಶರಾಗಿ ಮುಂದಿನ ಮಾರ್ಗಕ್ರಮಣವನ್ನು ನಿಲ್ಲಿಸಿಯಾರು ಅನ್ನುವ ಭಯ ನಮ್ಮನ್ನು ಕಾಡುತ್ತದೆ. ಹೀಗೇನಾದರೂ ಆದರೆ ಇವರ ಜವಾಬ್ದಾರಿಯನ್ನು ಸರಕಾರವೇ ಹೊರಬೇಕಾಗುತ್ತದೆ. ದಲಿತರ ಪ್ರಗತಿಯ ಬಗ್ಗೆ ಸರಕಾರದ ನಿಲುವೇನು ಅನ್ನುವುದು ನಮಗೆ ಅರ್ಥವೇ ಆಗುತ್ತಿಲ್ಲ.

ದಲಿತರಿಗೆ ಕೆಲಸ ಸಿಗುತ್ತಿಲ್ಲ ಎಂದೇನಾದರೂ ಕೂಗಾಡಿದರೆ ಸರಕಾರದಿಂದ ‘ನಿಮ್ಮೆಲ್ಲಾರು ಸಮರ್ಥರಿಲ್ಲ’ ಅನ್ನುವ ಉತ್ತರ ಸಿಗುತ್ತದೆ. ಸಮರ್ಥರಿರುವವರನ್ನು ನಾವು ಮುಂದೆ ಮಾಡಿದಾಗಲೂ ಯಾಕೆ ಕೆಲಸ ಕೊಡಲಿಲ್ಲ ಎಂದು ಕೌನ್ಸಿಲನ್ನು ಕೇಳಿದರೆ ‘ಕಾರಣಗಳನ್ನು ಕೊಡಲಾಗುವುದಿಲ್ಲ’ ಅನ್ನುವ ಉತ್ತರ ಬರುತ್ತದೆ. ಇದೊಂದು ವಿಚಿತ್ರ ರೀತಿಯಲ್ಲದೆ ಮತ್ತೇನು? ನಿಜ ಹೇಳಬೇಕೆಂದರೆ ದಲಿತರಂತಹ ದೀನ ಬಡವರಿಗೆ ಸಮಾಜದಲ್ಲಿ ಸಮರ್ಥತೆಯ ನಿಯಮವಿಲ್ಲದೆಯೆ ಮೇಲಿನ ಹುದ್ದೆಗೆ ಸೇರಿಸಿಕೊಳ್ಳುವುದರಲ್ಲಿ ನನ್ನ ದೃಷ್ಟಿಯಲ್ಲಂತೂ ಯಾವುದೇ ತಪ್ಪಿಲ್ಲ. ಆದರೆ ಸಮರ್ಥತೆ ಇದ್ದರೂ ಅವರಿಗೆ ವರಿಷ್ಠ ಹುದ್ದೆ ಸರಕಾರ ಕೊಡುತ್ತಿಲ್ಲ ಅಂದ ಮೇಲೆ ದಲಿತರ ಪ್ರಗತಿ ಸರಕಾರದ ಉದ್ದೇಶವಲ್ಲ ಅನ್ನಬೇಕಾಗುತ್ತದೆ. ಜಾಧವರಿಗೆ ಕೆಲಸ ಕೊಡದಿರುವ ಕಾರಣವನ್ನು ಸರಕಾರ ಕೊಟ್ಟಿದ್ದರೆ ದಲಿತರಿಗೆ ಸಂಬಂಧಿಸಿದಂತೆ ಸರಕಾರದ ನಿಲುವೇನು? ಅನ್ನುವುದಾದರೂ ತಿಳಿಯುತ್ತಿತ್ತು. ಸರಕಾರಿ ಕಚೇರಿಗಳಲ್ಲಿ ಅಸ್ಪಶ್ಯತೆಯನ್ನು ತೊಡೆದುಹಾಕಲಾಗುವುದು ಎಂದು ಹೇಳುವ ಸರಕಾರದ ಮಾತಿನ ಮೇಲೆ ನಮಗೆ ನಂಬಿಕೆಯಿತ್ತು. ಆದರೆ ಅದು ಹೇಳಿದಂತೆ ಮಾಡುತ್ತಿಲ್ಲ ಎಂದು ಈಗ ಅನಿಸುತ್ತಿದೆ.

ಜಾಧವರು ದಲಿತರಾದ್ದರಿಂದಲೇ ಅವರಿಗೆ ಕೆಲಸ ಕೊಟ್ಟಿಲ್ಲ ಅನ್ನುವುದೇ ನಮ್ಮ ಅನಿಸಿಕೆ. ಏಕೆಂದರೆ ಅಸ್ಪಶ್ಯತೆಯೊಂದನ್ನು ಬಿಟ್ಟರೆ ಜಾಧವ್ ಅವರಲ್ಲಿ ಯಾವುದೇ ಕೊರತೆಯಿಲ್ಲ. ಸರಕಾರದ ಇಂತಹ ವರ್ತನೆಯಿಂದ ಸರಕಾರ ಹೇಳುವುದೊಂದು ಮಾಡುವುದೊಂದು ಅನ್ನುವುದು ಸಿದ್ಧವಾಗಿದೆ. ಸರಕಾರಕ್ಕೆ ಅಸ್ಪಶ್ಯರ ಬಗ್ಗೆಯಿರುವ ಸಹಾನುಭೂತಿ ವರಿಷ್ಠ ಹಿಂದೂಗಳಂತೆ ಕೇವಲ ಒಣ ಮಾತಾಗಿದೆ. ಆದರೆ ಈ ವಂಚನೆಯ ಪರಿಣಾಮವಾಗಿ ದಲಿತರ ಮನಸ್ಸಿನಲ್ಲಿ ಸರಕಾರದ ಬಗ್ಗೆಯಿರುವ ಅಲ್ಪಸ್ವಲ್ಪ ರಾಜನಿಷ್ಠೆಯೂ ಮಾಯವಾಗಬಹುದು. ಅಲ್ಪಸ್ವಲ್ಪ ಯಾಕಂದರೆೆ ಕಳೆದ ಯುದ್ಧದಲ್ಲಿ ಎದುರಾದ ಅತೀ ಕಠಿಣ ಪ್ರಸಂಗದಲ್ಲಿ ಸಿದ್ಧಪಡಿಸಿದ್ದ ದಲಿತರ 111ನೆಯ ಸೈನ್ಯದಳವನ್ನು ಯುದ್ಧ ಮುಗಿದ ಕೂಡಲೇ ತೆಗೆದುಹಾಕಿದರು. ಹಾಗಾಗಿ ಬ್ರಿಟಿಷ್ ಸರಕಾರದ ಬಗ್ಗೆ ದಲಿತರ ಮನಸ್ಸಿನಲ್ಲಿದ್ದ ರಾಜನಿಷ್ಠೆ ಸಾಕಷ್ಟು ಕಡಿಮೆಯಾಯಿತು. ಜಾಧವ್ ಅವರಿಗಾದ ಅನ್ಯಾಯದಿಂದ ಆ ನಿಷ್ಠೆ ಇನ್ನಷ್ಟು ಕಡಿಮೆಯಾಗಲಿದೆ. ದಲಿತರ ಬಗ್ಗೆ ಸರಕಾರದ ಅಸಡ್ಡೆ ತೋರಿಸುವುದರಿಂದ ತಮಗೆ ನಷ್ಟವಾಗುತ್ತಿದೆ ಎಂದು ಅವರು ಬೇಸರಪಡದಿದ್ದರೂ ದಲಿತರ ಹೆಚ್ಚುತ್ತಿರುವ ಅಸಂತೋಷದ ದುಷ್ಪರಿಣಾಮ ಬ್ರಿಟಿಷ್ ಸರಕಾರ ಅನುಭವಿಸಲೇಬೇಕಾಗುತ್ತದೆ ಅನ್ನುವ ಎಚ್ಚರಿಕೆಯನ್ನು ಈಗಲೇ ಕೊಡುತ್ತಿದ್ದೇನೆ. ಇದೇನು ಬ್ರಿಟಿಷ್ ಸರಕಾರದ ಏಳಿಗೆಯ ಕಾಲವಲ್ಲ, ಕೊನೆಗಾಲದಲ್ಲಿ ಯಾರದ್ದೇ ಆಧಾರ ಇಲ್ಲದಿರುವಂತಹ ಪರಿಸ್ಥಿತಿಯಲ್ಲಿ ದಲಿತರ ಅಧಾರವನ್ನಾದರೂ ಪಡೆದು ಇನ್ನಷ್ಟು ಕಾಲ ರಾಜ್ಯವನ್ನಾಳಬಹುದು ಅನ್ನುವುದನ್ನು ಮರೆಯಬಾರದು.

 ಸರಕಾರಿ ಕಚೇರಿಗಳ ಕೆಲಸಗಳಲ್ಲಿ ದಲಿತರಿಗೆ ಕೆಲಸ ಸಿಗುವುದು ಎಷ್ಟು ಕಠಿಣವಾಗಿದೆ ಅನ್ನುವುದು ಜಾಧವರ ಉದಾಹರಣೆಯಿಂದ ತಿಳಿಯುತ್ತದೆ. ಒಂದು ಪಕ್ಷ ಅವರಿಗೆ ಪ್ರವೇಶ ಸಿಕ್ಕಿದ್ದೇ ಆದರೆ ಅವರೊಡನೆ ಯಾವ ರೀತಿ ನಡೆದುಕೊಳ್ಳಲಾಗುತ್ತದೆ ಅವರನ್ನು ಯಾವ ರೀತಿ ಅವಮಾನಿಸಲಾಗುತ್ತಿದೆ ಅನ್ನುವ ಘಟನೆ ಇತ್ತೀಚೆಗೆ ಬೆಳಗಾಂವ್‌ನಲ್ಲಿ ಘಟಿಸಿತು. ಘಾಟಕಾಂಬಳೆಯವರು ಮೆಟ್ರಿಕ್ ಪರೀಕ್ಷೆ ಪಾಸುಮಾಡಿಕೊಂಡ ಮೊದಲ ದಲಿತರು. ಪರೀಕ್ಷೆ ಉತ್ತೀರ್ಣರಾದ ನಂತರ ಅವರು ಕಂದಾಯ ಇಲಾಖೆಯಲ್ಲಿ ಕೆಲಸ ಪಡೆದರು. ಹದಿನೈದು ವರ್ಷ ಕೆಲಸ ಮಾಡಿದ ನಂತರ ಮಿ.ವೌಡನ್ಡಫರ್ಡ ಕಮಿಶನರ್ ದಕ್ಷಿಣ ವಿಭಾಗ ಇವರು ಘಾಟಕಾಂಬ್ಳೆೆ ಅವರ ಜಾಣ್ಮೆ ಹಾಗೂ ಬುದ್ಧ್ಧಿಶಕ್ತಿಯನ್ನು ನೋಡಿ ಶೆಡ್ಯೂಲ್ಡ ಪೋಸ್ಟ್ (ಉಚ್ಚ ಅಧಿಕಾರ)ಗೆ ಅವರನ್ನು ನೇಮಿಸಿ ಅನ್ನುವ ಆದೇಶ ಕೊಟ್ಟರು. ಅದರಂತೆ 1926ರ ಅಕ್ಟೋಬರ್‌ನಲ್ಲಿ ಘಾಟಕಾಂಬಳೆ ಅವರಿಗೆ ಮೂರನೆಯ ವರ್ಗದ ಮ್ಯಾಜಿಸ್ಟ್ರೇಟ್‌ನ ಜಾಗಕ್ಕೆ ನೇಮಿಸಲಾಯಿತು.

ಈ ಹೊಸ ಜಾಗದಲ್ಲಿ ಶಾಶ್ವತವಾಗಿರಲು ‘ಕ್ವಾಲಿಫಾಯಿಂಗ್ ಟೆಸ್ಟ್’ ಅನ್ನುವ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕಾಗುತ್ತದೆ ಹಾಗೂ ಉತ್ತೀರ್ಣರಾಗಲು ಆ ಅಧಿಕಾರಿಗೆ ಎರಡು ವರ್ಷದ ಕಾಲಾವಧಿಯನ್ನು ಕೊಡಲಾಗುತ್ತದೆ. ಆದರೆ ರಾ.ಘಾಟಕಾಂಬಳೆಯವರು ಕೆಲಸಕ್ಕೆ ಹಾಜರಾದ ಆರು ತಿಂಗಳಲ್ಲೇ ಹಳೆಯ ಪೋಸ್ಟಿಗೆ ಮರಳಿ ಹೋಗುವಂತಹ ಆದೇಶವನ್ನು ಕಲೆಕ್ಟರ್‌ರಿಂದ ಕೊಡಲಾಯಿತು. ಈಗ ರಾ.ಘಾಟಕಾಂಬಳೆಯವರು ತಮ್ಮ ಕೆಲಸವನ್ನು ಯೋಗ್ಯವಾದ ರೀತಿಯಲ್ಲಿ ನಿಭಾಯಿಸದ ಕಾರಣ ಅಧಿಕಾರದಿಂದ ಅವರನ್ನು ಕೆಳದರ್ಜೆಗೆ ಇಳಿಸಲಾಗಿದೆ ಎಂದು ಹೇಳುವುದು ಕೂಡ ಸಾಧ್ಯವಿರಲಿಲ್ಲ. ಏಕೆಂದರೆ ಮೇಜಿಸ್ಟ್ರೇಟ್ ಆಗಿ ಅವರು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದರು. ನಮ್ಮೆದುರೇ ರಾ.ಘಾಟಕಾಂಬಳೆ ಅವರ ಕೋರ್ಟಿನಲ್ಲಿ ಕೇಸ್‌ಗಳನ್ನು ಚಲಾಯಿಸಿ ಅನುಭವವಿರುವ, ಎಲ್.ಎಲ್.ಬಿ. ಯಾದ ಉಚ್ಚ ಜಾತಿಯ ವಕೀಲನೇ ಘಾಟಕಾಂಬಳೆಯವರಿಗೆ ಪ್ರಶಸ್ತಿವೊಂದನ್ನು ಕೊಟ್ಟಿದ್ದಾನೆ. ರಾ.ಘಾಟಕಾಂಬಳೆಯವರು ಮೇಜಿಸ್ಟ್ರೇಟ್ ಆಗಿ ಕೊಟ್ಟ ಯಾವುದೇ ತೀರ್ಪುಗಳಲ್ಲಿ ಯಾವುದೇ ಅಪೀಲನ್ನು ಕೋರ್ಟು ವಜಾ ಮಾಡಿಲ್ಲ ಅನ್ನುವುದು ಕೂಡ ನಮಗೆ ಗೊತ್ತು.

ಈ ಎರಡೂ ಘಟನೆಗಳು ಘಾಟಕಾಂಬಳೆಯವರು ಎಷ್ಟು ಸಮರ್ಥರು ಅನ್ನುವುದಕ್ಕೆ ಸಾಕ್ಷಿಯಾಗಿವೆ. ಹೀಗಿರುವಾಗ ಘಾಟಕಾಂಬಳೆಯವರಿಗೆ ಮತ್ತದೆ ಹಳೆಯ ಅಧಿಕಾರಕ್ಕೆ ಮರಳಲು ಆದೇಶ ಕೊಡುವುದು ತಪ್ಪಲ್ಲವೇ? ಇವರಿಗೂ ಇವರ ಜಾಗಕ್ಕೆ ಬಂದಿರುವ ಹೊಸ ಅಧಿಕಾರಿಗಳಿಗೂ ಇರುವ ವ್ಯತ್ಯಾಸ ಒಂದೇ, ಹೊಸ ಅಧಿಕಾರಿ ಕ್ವಾಲಿಫಾಯಿಂಗ್ ಟೆಸ್ಟ್ ಉತ್ತೀರ್ಣರಾಗಿದ್ದರೆ ಇವರಿನ್ನೂ ಉತ್ತೀರ್ಣರಾಗಬೇಕಿದೆ. ಆದರೆ ಈ ವ್ಯತ್ಯಾಸ ಘಾಟಕಾಂಬಳೆಯವರಿಗೆ ಯಾವುದೇ ರೀತಿಯಿಂದ ಭಾರಿ ಸಂಕಟದ್ದಲ್ಲ, ಒಂದು ಪಕ್ಷ ಅಧಿಕಾರ ವಹಿಸಿ ಎರಡು ವರ್ಷಗಳಾದರೂ ಘಾಟಕಾಂಬಳೆಯವರು ಪರೀಕ್ಷೆ ಉತ್ತೀರ್ಣರಾಗದಿದ್ದರೆ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕೇ ಬೇಡವೇ? ಅನ್ನುವ ಪ್ರಶ್ನೆ ಕಾಡಬಹುದಿತ್ತು. ಆದರೆ ಅಧಿಕಾರ ಕೊಟ್ಟ ಎರಡು ವರ್ಷದೊಳಗೆ ಕೇವಲ ಪರೀಕ್ಷೆಯ ನೆಪವೊಡ್ಡಿ ಕೊಟ್ಟ ಅಧಿಕಾರದಿಂದ ಅವರನ್ನು ಕೆಳಗಿಳಿಸಲು ಸಾಧ್ಯವಿಲ್ಲ.

ನಿಯಮದ ಪ್ರಕಾರ ಶೆಡ್ಯೂಲ್ ಪೋಸ್ಟಿನ ಮೇಲೆ ನೇಮಕಗೊಂಡ ಅಧಿಕಾರಿಗೆ ಪರೀಕ್ಷೆ ಬರೆಯಲು ಎರಡು ವರ್ಷದ ಕಾಲಾವಕಾಶ ಕೊಡಲಾಗುತ್ತದೆ ಅನ್ನುವುದನ್ನು ಮೊದಲೇ ಹೇಳಿದ್ದೇನೆ. ಹಾಗಾಗಿ ರಾ. ಘಾಟಕಾಂಬಳೆಯವರನ್ನು ಇನ್ನೂ ಒಂದೂವರೆ ವರ್ಷವಾದರೂ ಆ ಅಧಿಕಾರದಲ್ಲಿಡಬೇಕಿತ್ತು. ಈ ಎಲ್ಲ ನಿಯಮಗಳು ಸ್ಪಷ್ಟವಾಗಿರುವಾಗ ಹೀಗೇಕೆ ಅನ್ಯಾಯವಾಗುತ್ತದೆ? ಇದರಲ್ಲಿ ಕೆಳದರ್ಜೆಯ ಗುಮಾಸ್ತನ ಕೈವಾಡವಿದೆ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಅದೇನೇ ಇರಲಿ ಜಿಲ್ಲೆಯ ಕಲೆಕ್ಟರ್ ಅಧಿಕಾರಿಗಳು ಇದನ್ನೆಲ್ಲ ಹೇಗೆ ನಡೆಯಗೊಟ್ಟರು ಅನ್ನುವುದು ನಮಗೆ ತಿಳಿಯದಾಗಿದೆ. ಸ್ಥಳೀಯ ಕಾರ್ಮಿಕರು ಇಂತಹ ಕೆಲಸಗಳನ್ನು ಮಾಡಲು ಯಾವತ್ತೂ ಮುಂದು ಹಾಗಾಗಿಯೇ ಇವರ ಮೇಲೊಂದು ಕಣ್ಣಿಡಲು ಇವರಿಗೊಬ್ಬ ಬ್ರಿಟಿಷ್ ಅಧಿಕಾರಿ ಇರಬೇಕು ಅನ್ನುವ ಪ್ರತಿಪಾದನೆಯಿದೆ. ಈ ಬ್ರಿಟಿಷ್ ಅಧಿಕಾರಿಗಳನ್ನು ನೇಮಿಸುವುದೊಂದು ದೊಡ್ಡ ಖರ್ಚಿನ ಬಾಬ್ತು . ಅವರ ಬೇಕಾಬಿಟ್ಟಿ ಸಂಬಳದ ಭಾರದಡಿ ಈ ದೇಶ ಹಾಗೂ ಈ ವಿಭಾಗ ನರಳುತ್ತಿದೆ. ಆದರೂ ಇಲ್ಲಿಯ ಕುಟಿಲ ಜನರಿಂದಾಗುತ್ತಿರುವ ಅನ್ಯಾಯದಿಂದ ನಮ್ಮನ್ನು ಪಾರು ಮಾಡಲೆಂದೇ ನಾವು ಈ ಒತ್ತಡವನ್ನು ಸಹಿಸುತ್ತಿದ್ದೇವೆ.

ಆದರೆ ಒಬ್ಬ ಗುಮಾಸ್ತನ ಮಾತನ್ನು ನಂಬಿ ಕಣ್ಣು ಮುಚ್ಚಿ ಕಾಗದಗಳ ಮೇಲೆ ಹಸ್ತಾಕ್ಷರ ಮಾಡುವ ಈ ಬ್ರಿಟಿಷರಿಂದ ನಮಗ್ಯಾವ ಲಾಭವೂ ಇಲ್ಲ. ಇಂತಹ ಅನುಭವಗಳೇ ನಮ್ಮ ಪಾಲಿಗೆ ಬರುತ್ತಿದ್ದರೆ ಬ್ರಿಟಿಷರನ್ನು ಎತ್ತಿಹಾಕಿ ಹಿಂದೂಗಳಿಗೆ ದೇಶವನ್ನು ಬಿಟ್ಟುಕೊಡಿ ಎಂದು ಹೋರಾಡುತ್ತಿರುವವರ ಜೊತೆ ನಾವೂ ಹೋಗಿ ನಿಲ್ಲುತ್ತೇವೆ. ಇದರಿಂದ ನಮ್ಮ ತೊಂದರೆಗಳು ಕಡಿಮೆಯಾಗದಿದ್ದರೂ ನಮ್ಮ ಖರ್ಚಾದರೂ ಕಡಿಮೆಯಾದೀತು. ನಾವು ಸ್ವಾತಂತ್ರದ ವಿರೋಧಿಗಳಲ್ಲ. ಆದರೂ ಎಲ್ಲಾ ಯುರೋಪಿಯನ್ ಅಧಿಕಾರಿಗಳ ಜಾಗದಲ್ಲಿ ಎಲ್ಲಾ ಹಿಂದೂ ಅಧಿಕಾರಿಗಳನ್ನು ನೇಮಿಸಲು ಸಾಕಷ್ಟು ಕಾಲ ಕಳೆಯಬೇಕು ಅನ್ನುವುದು ನನ್ನ ಅನಿಸಿಕೆ. ಆದರೆ ಈ ಬ್ರಿಟಿಷ್ ಅಧಿಕಾರಿಗಳು ಕಣ್ಣುಮುಚ್ಚಿ ಕೈಕೆಳಗಿನ ಜನರಿಂದಾಗುತ್ತಿರುವ ಅನ್ಯಾಯವನ್ನು ತಡೆಯದಿದ್ದರೆ ಸ್ವಾತಂತ್ರ ಮುಂದೂಡುವುದಲ್ಲೇನರ್ಥವಿದೆ ಅನ್ನುವ ಪ್ರಶ್ನೆಯೂ ಕಾಡುತ್ತದೆ. ಸ್ವಾತಂತ್ರ ಮುಂದೂಡಲ್ಪಡಬೇಕು ಎಂದೇನಾದರೂ ಬ್ರಿಟಿಷ್ ಸರಕಾರಕ್ಕೆ ಅನಿಸುತ್ತಿದ್ದರೆ ಬ್ರಿಟಿಷ್ ಅಧಿಕಾರಿಗಳು ಕಣ್ಣುಮುಚ್ಚಿ ಯಾವುದೇ ಕಾಗದದ ಮೇಲೆ ಹಸ್ತಾಕ್ಷರ ಮಾಡುವುದನ್ನು ನಿಲ್ಲಿಸಿ ತಮ್ಮ ಕೆಲಸದತ್ತ ಗಮನಕೊಡಬೇಕೆನ್ನುವುದೊಂದೇ ಇದಕ್ಕಿರುವ ಉಪಾಯ. ಹಾಗಾಗಿ ಬೆಳಗಾವಿ ಜಿಲ್ಲೆಯ ಕಲೆಕ್ಟರ್‌ನ ಉಚ್ಚ ಅಧಿಕಾರಿಗಳಿಗೆ ನಾವೊಂದು ಎಚ್ಚರಿಕೆ ಕೊಡಲಿಚ್ಛಿಸುತ್ತೇವೆ. ‘‘ಸಾಹೇಬರೆ, ಕಲೆಕ್ಟರ್ ಸಾಹೇಬರು ಕಣ್ಣು ಮುಚ್ವಿ ಕುಳಿತಿದ್ದರೂ ತಾವು ಕಣ್ತೆರೆದು ಘಾಟಕಾಂಬಳೆಯವರಿಗೆ ನ್ಯಾಯ ಒದಗಿಸಿಕೊಡಿ, ಇದರಲ್ಲೇ ಅವರ ಏಳಿಗೆಯಿದೆ’’

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)