varthabharthi


ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ

ಯಾರೋ ಹೇಳಿದ್ದು?

ವಾರ್ತಾ ಭಾರತಿ : 3 Nov, 2017
ಸಂಗ್ರಹ : ಎ. ಹಾಜಿರಾ, ಪುತ್ತಿಗೆ

 ಇನ್ನೊಬ್ಬರ ಮನನೋಯಿಸಿ ಆ ಬಳಿಕ ಅವರೊಡನೆ ಕ್ಷಮೆ ಕೇಳುವುದು ಸುಲಭದ ಕೆಲಸ. ಇನ್ನೊಬ್ಬರು ನಮ್ಮ ಮನಸ್ಸನ್ನು ನೋಯಿಸಿದಾಗ ಅವರು ನಮ್ಮೊಡನೆ ಕ್ಷಮೆ ಕೇಳಬೇಕೆಂದು ಕಾಯದೆ ಅವರನ್ನು ಕ್ಷಮಿಸಿಬಿಡುವುದು ಕಷ್ಟದ ಕೆಲಸ.

 ಜಗತ್ತಿನಲ್ಲಿಂದು ವಿದ್ಯಾವಂತರೇ ತುಂಬಿದ್ದಾರೆ. ಆದರೆ ಮಾನವೀಯತೆ ಎಲ್ಲೂ ಕಾಣಲು ಸಿಗುತ್ತಿಲ್ಲ. ಹಿಂದೆ ಇಬ್ಬರು ಪರಸ್ಪರ ಜಗಳಾಡಿದರೆ ಮೂರನೆಯವನು ಸಂಧಾನ ಮಾಡಿಸುತ್ತಿದ್ದ. ಈಗ ಇಬ್ಬರು ಹೊಡೆದಾಡಿಕೊಂಡರೆ ಮೂರನೆಯವನು ಅದರ ವೀಡಿಯೊ ರೆಕಾರ್ಡಿಂಗ್ ಮಾಡುವುದರಲ್ಲಿ ತಲ್ಲೀನನಾಗಿ ಬಿಡುತ್ತಾನೆ.

  ಒಬ್ಬ ಸೂಫಿ ಸಂತರೊಡನೆ ಯಾರೋ ಪ್ರಶ್ನಿಸಿದರು ‘‘ಜಗತ್ತಿನಲ್ಲಿ ಎಲ್ಲರೂ ದುಃಖತಪ್ತರಾಗಿ ಸಂಕಟದಲ್ಲಿರುವಂತೆ ಕಾಣಿಸುತ್ತಿದ್ದಾರೆ. ಕಾರಣವೇನು?’’

ಸೂಫಿ ಸಾಹೇಬರು ನಗುತ್ತಾ ಹೇಳಿದರು:

‘‘ದೇವರು ಸಂತೋಷವನ್ನು ಪ್ರತಿಯೊಬ್ಬರಿಗೂ ಕೊಟ್ಟಿರುತ್ತಾನೆ. ಆದರೆ ಪ್ರತಿಯೊಬ್ಬರೂ ಇನ್ನೊಬ್ಬರ ಸುಖ ಸಂತೋಷವನ್ನು ತಮ್ಮ ದುಃಖ ಹಾಗೂ ಸಂಕಟವಾಗಿ ಮಾರ್ಪಡಿಸಿಕೊಳ್ಳುತ್ತಾರೆ’’

 ನಿಮ್ಮ ವಿಚಾರಗಳ ಬಗ್ಗೆ ಎಚ್ಚರವಿರಲಿ - ಏಕೆಂದರೆ ನಿಮ್ಮ ವಿಚಾರಗಳೇ ಕ್ರಮೇಣ ನಿಮ್ಮ ಪದಗಳಾಗಿ ಬಿಡುತ್ತವೆ. ನಿಮ್ಮ ಪದಗಳ ಬಗ್ಗೆ ಎಚ್ಚರವಿರಲಿ - ಏಕೆಂದರೆ ನಿಮ್ಮ ಪದಗಳೇ ಕ್ರಮೇಣ ನಿಮ್ಮ ಕರ್ಮಗಳಾಗಿ ಬಿಡುತ್ತವೆ. ನಿಮ್ಮ ಕರ್ಮಗಳ ಬಗ್ಗೆ ಎಚ್ಚರವಿರಲಿ - ಏಕೆಂದರೆ ಕ್ರಮೇಣ ನಿಮ್ಮ ಕರ್ಮಗಳೇ ನಿಮ್ಮ ಚಾರಿತ್ರವಾಗಿ ಬಿಡುತ್ತವೆ. ನಿಮ್ಮ ಚಾರಿತ್ರದ ಬಗ್ಗೆ ಎಚ್ಚರವಿರಲಿ - ಏಕೆಂದರೆ ಕ್ರಮೇಣ ನಿಮ್ಮ ಚಾರಿತ್ರವೇ ನಿಮ್ಮ ಗುರುತಾಗಿ ಬಿಡುತ್ತವೆ.

ಪ್ರತಿಯೊಬ್ಬ ಮನುಷ್ಯನೂ ತನ್ನ ನಾಲಿಗೆಯ ಹಿಂದೆ ಅಡಗಿರುತ್ತಾನೆ. ನಿಮಗೆ ಅವನ ನಿಜವಾದ ಮುಖ ನೋಡಬೇಕಿದ್ದರೆ ಅವನನ್ನು ಮಾತನಾಡಿಸಿ.

ಜನರು ನೋಡುವ ನಿಮ್ಮ ಮುಖವನ್ನು ನೀವು ಸದಾ ಶುಚಿಯಾಗಿಡುತ್ತೀರಿ - ದೇವರು ನೋಡುವ ನಿಮ್ಮ ಮನಸ್ಸನ್ನೂ ನೀವು ಶುಚಿಯಾಗಿಡುತ್ತೀರಾ?

 ಕಾಲ, ಒಬ್ಬ ದಕ್ಷ ಗುರು. ನಮಗೆ ಕಲಿಸುವುದಕ್ಕೆ ಕಾಲವು ಬಳಸುವ ವಿಧಾನವು ತುಂಬಾ ಕಠಿಣ ಹಾಗೂ ತ್ರಾಸದಾಯಕ ವಾಗಿರುತ್ತದೆ. ಆದರೆ ಕಾಲವು ಕಲಿಸಿದ್ದೆಲ್ಲವೂ ತುಂಬಾ ಪರಿಣಾಮಕಾರಿಯಾಗಿರುತ್ತದೆ. ಕಾಲ ಕಲಿಸಿದ್ದೆಲ್ಲಾ ಮನಿಷ್ಯನಿಗೆ ಸದಾ ನೆನಪಿರುತ್ತದೆ. ಕಾಲ ಕಲಿಸಿದ ಪಾಠಗಳು ಮನುಷ್ಯನು ಬದುಕಿನಲ್ಲಿ ಸೋಲದಂತೆ ನೋಡಿಕೊಳ್ಳುತ್ತವೆ. 

 ಯಾವುದಾದರೂ ಕಾರ್ಯವು ನಿಮ್ಮ ಇಚ್ಛೆಯಂತೆ ನಡೆದು ಬಿಟ್ಟರೆ, ದೇವರು ನಿಮ್ಮ ಇಚ್ಛೆಗೆ ಅಷ್ಟೊಂದು ಗೌರವ ನೀಡಿದನಲ್ಲಾ ಎಂದು ಅವನಿಗೆ ನೂರಾರು ಬಾರಿ ಕೃತಜ್ಞತೆ ಸಲ್ಲಿಸಿರಿ. ಒಂದು ವೇಳೆ ಯಾವುದಾದರೂ ಕಾರ್ಯವು ನಿಮ್ಮ ಇಚ್ಛೆಗೆ ವಿರುದ್ಧವಾಗಿ ನಡೆದು ಬಿಟ್ಟರೆ ದೇವರಿಗೆ ಸಾವಿರಾರು ಬಾರಿ ಕೃತಜ್ಞತೆ ಸಲ್ಲಿಸಿರಿ. ಏಕೆಂದರೆ ಅದು ದೇವರ ಇಚ್ಛೆಯ ಪ್ರಕಾರ ನಡೆದಿದೆ. ಅವನ ಇಚ್ಛೆ ಯಾವಾಗಲೂ ನಿಮ್ಮ ಇಚ್ಛೆಗಿಂತ ತುಂಬಾ ಶ್ರೇಷ್ಠ ಹಾಗೂ ನಿಮ್ಮ ಪಾಲಿಗೆ ತುಂಬಾ ಹೆಚ್ಚು ಉಪಯುಕ್ತವಾಗಿರುತ್ತದೆ.

ನಾನು ಯಾವುದೇ ಆಸೆಯನ್ನು ನನ್ನ ಹತ್ತಿರ ಸುಳಿಯಲು ಬಿಡುವುದಿಲ್ಲ. ಆದ್ದರಿಂದ ನಾನೇ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ನನಗೆ ಅನಿಸುತ್ತಿದೆ!

 ಜನಬಲ, ಧನ ಬಲವೆಲ್ಲಾ ನಮ್ಮ ಪಕ್ಷದಲ್ಲಿದ್ದಾಗ ನಮ್ಮ ಸಹನೆ ಔದಾರ್ಯಗಳ ಪರೀಕ್ಷೆ ನಡೆಯುತ್ತಿರುತ್ತದೆ. ಜನ ಬಲ, ಧನ ಬಲ ಇತ್ಯಾದಿ ನಮ್ಮ ಬಳಿ ಇಲ್ಲದಿದ್ದಾಗ ನಮ್ಮ ಧೈರ್ಯ ಸ್ಥೈರ್ಯಗಳ ಪರೀಕ್ಷೆ ನಡೆಯುತ್ತಿರುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)